ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ 4 ದಿನ ಯುದ್ಧ ವಿರಾಮ: ಇಸ್ರೇಲ್ ಒಪ್ಪಿಗೆ

Published 22 ನವೆಂಬರ್ 2023, 2:52 IST
Last Updated 22 ನವೆಂಬರ್ 2023, 2:52 IST
ಅಕ್ಷರ ಗಾತ್ರ

ಟೆಲ್ ಅವೀವ್: ಹಮಾಸ್ ವಶದಲ್ಲಿರುವ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 50 ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ಗಾಜಾದಲ್ಲಿ ನಾಲ್ಕು ದಿನಗಳ ಯುದ್ಧ ವಿರಾಮ ಕುರಿತಾದ ಪ್ಯಾಲೇಸ್ಟಿನ್‌ನ ಹಮಾಸ್ ಉಗ್ರಗಾಮಿಗಳ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಲು ಇಸ್ರೇಲ್ ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ತಿಳಿಸಿದೆ.

ಮಾತುಕತೆಯ ಮಧ್ಯಸ್ಥಿಕೆ ವಹಿಸಿರುವ ಕತಾರ್‌ ಮತ್ತು ಅಮೆರಿಕದ ಅಧಿಕಾರಿಗಳು, ಇಸ್ರೇಲ್ ಮತ್ತು ಹಮಾಸ್‌ ಒಪ್ಪಂದವು ಸನ್ನಿಹಿತವಾಗಿದೆ ಎಂದು ಕೆಲ ದಿನಗಳಿಂದ ಹೇಳುತ್ತಿದ್ದರು. ಈಗ ಅದು ನಿಜವಾಗಿದೆ.

ಇಸ್ರೇಲ್ ಲೆಕ್ಕಾಚಾರಗಳ ಪ್ರಕಾರ, ಹಮಾಸ್ 200ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡಿದೆ. ಅಕ್ಟೋಬರ್ 7ರಂದು ಇಸ್ರೇಲ್‌ ಮೇಲೆ ನಡೆಸಿದ ದಾಳಿಯಲ್ಲಿ 1,200 ಜನರನ್ನು ಕೊಂದಿದ್ದರು.

ನಾಲ್ಕು ದಿನಗಳಲ್ಲಿ 50 ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆ ಮಾಡಲಾಗುತ್ತದೆ. ಈ ಸಮಯದಲ್ಲಿ ಯುದ್ಧ ವಿರಾಮ ನೀಡಲಾಗುವುದು ಎಂದು ಪ್ರಧಾನಿ ಕಾರ್ಯಾಲಯದ ಹೇಳಿಕೆ ತಿಳಿಸಿದೆ.

ಬಿಡುಗಡೆಯಾಗುವ ಪ್ರತಿ ಹೆಚ್ಚುವರಿ 10 ಒತ್ತೆಯಾಳುಗಳಿಗೆ ಯುದ್ಧ ವಿರಾಮವನ್ನು ಇನ್ನೊಂದು ದಿನಕ್ಕೆ ವಿಸ್ತರಿಸಲಾಗುವುದು ಎಂದು ಅದು ಹೇಳಿದೆ. ಒತ್ತೆಯಾಳುಗಳಿಗೆ ಪ್ರತಿಯಾಗಿ ಹಮಾಸ್ ಕೈದಿಗಳ ಬಿಡುಗಡೆ ಬಗ್ಗೆ ಇಸ್ರೇಲ್ ಉಲ್ಲೇಖಿಸಿಲ್ಲ.

150 ಕೈದಿಗಳ ವಿನಿಮಯವೂ ಈ ಒಪ್ಪಂದದಲ್ಲಿ ಇರಬಹುದು ಎಂದು ಮಾತುಕತೆಗೂ ಮುನ್ನ ಅಮೆರಿಕ ಅಧಿಕಾರಿಯೊಬ್ಬರು ಹೇಳಿದ್ದರು.

ಆದರೆ, ಒಪ್ಪಂದದ ಭಾಗವಾಗಿ ಇಸ್ರೇಲ್ 150 ಪ್ಯಾಲೆಸ್ಟಿನ್ ಮಹಿಳೆಯರು ಮತ್ತು ಮಕ್ಕಳನ್ನು ಜೈಲಿನಿಂದ ಬಿಡುಗಡೆ ಮಾಡುತ್ತಿದ್ದು, ನಮ್ಮ ವಶದಲ್ಲಿರುವ 50 ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹಮಾಸ್ ತಿಳಿಸಿದೆ.

‘ಎಲ್ಲ ಒತ್ತೆಯಾಳುಗಳನ್ನು ಕರೆತರಲು ಇಸ್ರೇಲ್ ಸರ್ಕಾರ ಬದ್ಧವಾಗಿದೆ. ಇಂದು ರಾತ್ರಿ, ಈ ಗುರಿಯನ್ನು ಸಾಧಿಸಲು ಮೊದಲ ಹಂತದ ಪ್ರಸ್ತಾವಿತ ಒಪ್ಪಂದವನ್ನು ಅನುಮೋದಿಸಲಾಗಿದೆ’ಎಂದು ಹೇಳಿಕೆಯು ತಿಳಿಸಿದೆ.

ಬಲಪಂಥೀಯ ಯಹೂದಿ ಪವರ್ ಪಕ್ಷದ ಮೂವರು ಮಂತ್ರಿಗಳನ್ನು ಹೊರತುಪಡಿಸಿ ಉಳಿದೆಲ್ಲರೂ ಒಪ್ಪಂದದ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಇಸ್ರೇಲ್‌ನ Ynet ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT