ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಟೊಗೆ ಫಿನ್ಲೆಂಡ್‌ | ಸಂಘರ್ಷ ಉಲ್ಬಣಿಸಲಿದೆ ಎಂದು ರಷ್ಯಾ ಕಳವಳ

ಹೆಲ್ಸಿಂಕಿಯಲ್ಲಿ ಹಾರಾಡಿದ ನ್ಯಾಟೊ ಧ್ವಜ
Last Updated 4 ಏಪ್ರಿಲ್ 2023, 15:57 IST
ಅಕ್ಷರ ಗಾತ್ರ

ಹೆಲ್ಸಿಂಕಿ/ಬ್ರಸೆಲ್ಸ್‌ (ಎಪಿ/ಎಎಫ್‌ಪಿ): ರಷ್ಯಾದ ತೀವ್ರ ವಿರೋಧ ಮತ್ತು ಆಕ್ರಮಣ ಭೀತಿಯ ನಡುವೆ ಫಿನ್ಲೆಂಡ್‌ ಮಂಗಳವಾರ ಅಧಿಕೃತವಾಗಿ ನ್ಯಾಟೊ ಸದಸ್ಯತ್ವ ಪಡೆದಿದೆ. ಫಿನ್ಲೆಂಡ್‌ ರಾಜಧಾನಿ ಹೆಲ್ಸಿಂಕಿಯಲ್ಲಿ ನ್ಯಾಟೊದ ನೀಲಿ ಮತ್ತು ಶ್ವೇತ ವರ್ಣದ ಧ್ವಜಗಳು ಮೊದಲ ಬಾರಿಗೆ ಹಾರಾಡಿದವು.

ರಷ್ಯಾದೊಂದಿಗೆ ಸುಮಾರು 1,300 ಕಿ.ಮೀ. ಗಡಿ ಹಂಚಿಕೊಂಡಿರುವ ಫಿನ್ಲೆಂಡ್‌, ಅಮೆರಿಕ ನೇತೃತ್ವದ, ನ್ಯಾಟೊದ 31ನೇ ಸದಸ್ಯ ರಾಷ್ಟ್ರವಾಗಿ ಗುರುತಿಸಿಕೊಂಡಿತು. ಪಶ್ಚಿಮದ ರಾಷ್ಟ್ರಗಳ ಸೇನಾ ಮೈತ್ರಿಕೂಟಕ್ಕೆ ಇದರಿಂದ ಇನ್ನಷ್ಟು ಬಲ ಸಿಕ್ಕಿದೆ.

ನ್ಯಾಟೊ ವಿಸ್ತರಣೆಯನ್ನು ಮೊದಲಿನಿಂದಲೂ ವಿರೋಧಿಸುತ್ತಿದ್ದ ರಷ್ಯಾ, ತನ್ನ ಭದ್ರತೆಗೆ ಅಪಾಯ ಎದುರಾಗಬಹುದೆಂಬ ಉಕ್ರೇನ್‌ ಮೇಲೆ ಸೇನಾ ಕಾರ್ಯಾಚರಣೆ ಕೈಗೊಂಡು ಕೆಲವು ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡಿದೆ. ಎರಡನೇ ವಿಶ್ವ ಸಮರದ ನಂತರ ಸಿಡಿದು ಹೋದ ಸೋವಿಯತ್‌ ಒಕ್ಕೂಟ ಮರುಒಗ್ಗೂಡಿಸುವ ಮಹತ್ವಾಕಾಂಕ್ಷೆಯಿಂದ ಉಕ್ರೇನ್‌ ಮೇಲೆ ಆಕ್ರಮಣ ಆರಂಭಿಸಿದ್ದ ರಷ್ಯಾ ಅಧ್ಯಕ್ಷ ಪುಟಿನ್‌ ಅವರಿಗೆ ಈ ಬೆಳವಣಿಗೆ ದೊಡ್ಡ ಹೊಡೆತ ನೀಡಿದೆ.

ನ್ಯಾಟೊ ಸದಸ್ಯತ್ವ ಘೋಷಣೆಯ ಔಪಚಾರಿಕ ಸಭೆಯಲ್ಲಿ ಭಾಗವಹಿಸಲು ಫಿನ್ಲೆಂಡ್‌ ವಿದೇಶಾಂಗ ಸಚಿವ ಪೆಕ್ಕಾ ಹ್ಯಾವಿಸ್ಟೋ ಸೋಮವಾರ ರಾತ್ರಿಯೇ ಬ್ರಸೆಲ್ಸ್‌ಗೆ ಪ್ರಯಾಣಿಸಿದ್ದರು. ಸದಸ್ಯತ್ವ ಪ್ರಕ್ರಿಯೆ ಕಡತಕ್ಕೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌ ಅವರು ಅಧಿಕೃತ ಮೊಹರು ಹಾಕಿದರು.

ಫಿನ್ಲೆಂಡ್‌ ಸೇರ್ಪಡೆಯಿಂದ ರಷ್ಯಾ ಭದ್ರತೆಗೆ ಯಾವುದೇ ಅಪಾಯವಿಲ್ಲವೆಂದು ನ್ಯಾಟೊ ಸ್ಪಷ್ಟಪಡಿಸಿದೆ. ಆದರೆ, ಈ ನಿರ್ಧಾರವನ್ನು ರಷ್ಯಾ ವಿರುದ್ಧದ ಸೇನಾ ಮೈತ್ರಿ ವಿಸ್ತರಣೆಯ ಪ್ರಮುಖ ಕಾರ್ಯತಂತ್ರದ ಭಾಗವಾಗಿದೆ ಎಂದು ಮೂಲಗಳು ಹೇಳಿವೆ.

‘ಇದುವರೆಗೆ ನಾವು ಏಕಾಂಗಿಯಾಗಿ ನಮ್ಮ ದೇಶ ರಕ್ಷಿಸಿದ್ದೇವೆ. ಇನ್ನು ಮುಂದೆ ಹೊರಗಿನ ಮಿತ್ರರ ನೆರವೂ ಪಡೆಯಲಿದ್ದೇವೆ. ಜತೆಗೆ ಮತ್ತೊಬ್ಬರ ಸಹಾಯಕ್ಕೂ ಸಿದ್ಧರಿದ್ದೇವೆ’ ಎಂದು ಫಿನ್ಲೆಂಡ್‌ ರಕ್ಷಣಾ ಸಚಿವ ಅಂಟಿ ಕೈಕೋನೆನ್ ತಿಳಿಸಿದ್ದಾರೆ.

‘ನ್ಯಾಟೊ ವಿಸ್ತರಣೆಗೆ ಪುಟಿನ್‌ ಕಾರಣ’
ಪ್ಯಾರಿಸ್‌:
‘ರಷ್ಯಾ ಅಧ್ಯಕ್ಷ ಪುಟಿನ್‌ ಅವರು ಉಕ್ರೇನ್‌ ಮೇಲೆ ಆಕ್ರಮಣ ನಡೆಸುವ ಮೂಲಕ ನ್ಯಾಟೊ ವಿಸ್ತರಣೆಗೆ ಕಾರಣರಾಗಿದ್ದಾರೆ. ಸ್ವೀಡನ್‌ ಕೂಡ ಶೀಘ್ರವೇ ನ್ಯಾಟೊ ಸೇರಲಿದೆ’ ಎಂದು ನ್ಯಾಟೊ ಪ್ರಧಾನ ಕಾರ್ಯದರ್ಶಿ ಜೇನ್ಸ್‌ ಸ್ಟೋಲ್ಟೆನ್‌ ಬರ್ಗ್ ಹೇಳಿದ್ದಾರೆ.

ಫಿನ್ಲೆಂಡ್‌ ಸೇರಿಸಿಕೊಂಡಿರುವ ನ್ಯಾಟೊಗೆ ಎಚ್ಚರಿಕೆ ನೀಡಿರುವ ರಷ್ಯಾ ರಕ್ಷಣಾ ಸಚಿವ ಸೆರ್ಗಿ ಶೋಯಿಗೂ, ‘ತನ್ನ ನೆರೆಯ ಬೆಲರೂಸ್‌ನ ಯುದ್ಧ ವಿಮಾನಗಳು ಈಗ ಅಣ್ವಸ್ತ್ರ ಸಿಡಿತಲೆಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿವೆ. ಅಲ್ಲದೆ, ಅಣ್ವಸ್ತ್ರ ಸಿಡಿತಲೆಗಳನ್ನು ಉಡಾಯಿಸುವ ಇಸ್ಕಾಂಡರ್‌ ಖಂಡಾಂತರ ಕ್ಷಿಪಣಿ ವ್ಯವಸ್ಥೆಗಳನ್ನೂ ಈ ಮಿತ್ರರಾಷ್ಟ್ರಕ್ಕೆ ವರ್ಗಾಯಿಸಲಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT