ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ | ಸಿಗದ ಸ್ಪಷ್ಟ ಬಹುಮತ: ಪ್ರಬುದ್ಧತೆ ಮೆರೆಯಲು ಸೇನಾ ಮುಖ್ಯಸ್ಥರ ಸೂಚನೆ

Published 10 ಫೆಬ್ರುವರಿ 2024, 10:47 IST
Last Updated 10 ಫೆಬ್ರುವರಿ 2024, 10:47 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯದಿದ್ದರಿಂದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ನೀಡುತ್ತಿರುವ ಹೇಳಿಕೆಗಳಿಗೆ ಸಿಡಿಮಿಡಿಗೊಂಡಿರುವ ಸೇನಾ ಮುಖ್ಯಸ್ಥ ಸೈಯದ್ ಅಸೀನ್ ಮುನೀರ್, ‘ಪ್ರಬುದ್ಧತೆ ಹಾಗೂ ಏಕತೆ’ ಪ್ರದರ್ಶಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.

ವಿವಿಧ ಪ್ರಕರಣಗಳಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳ ಅದ್ಭುತ ಗೆಲುವಿನ ನಂತರ ‘ಕುದುರೆ ವ್ಯಾಪಾರ’ದಂತ ಪರಿಸ್ಥಿತಿ ಪ್ರಸಕ್ತ ಚುನಾವಣೆಯಲ್ಲಿ ನಿರ್ಮಾಣವಾಗಿದೆ. ಸೇನಾ ಬೆಂಬಲದ ಪಾಕಿಸ್ತಾನ್ ಮುಸ್ಲಿಂ ಲೀಗ್‌–ನವಾಜ್‌ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ.

ಚುನಾವಣೆ ಪೂರ್ವದಲ್ಲಿನ ಬಹಳಷ್ಟು ಬೆಳವಣಿಗೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷದ ಮಾನ್ಯತೆಯನ್ನೇ ಚುನಾವಣಾ ಆಯೋಗ ರದ್ದುಪಡಿಸಿತ್ತು. ಇದರಿಂದಾಗಿ ಸ್ವತಂತ್ರ್ಯ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಖಾನ್ ಸೂಚಿಸಿದ್ದರು. ಈವರೆಗಿನ ಫಲಿತಾಂಶ ಪ್ರಕಾರ 92 ಸ್ಥಾನಗಳನ್ನು ಗೆದ್ದಿರುವ ಪಿಟಿಐ, ಅಗ್ರ ಸ್ಥಾನದಲ್ಲಿದೆ.

1947ರಲ್ಲಿ ಸ್ವಾತಂತ್ರ್ಯ ಪಡೆದ ಪಾಕಿಸ್ತಾನದ ರಾಜಕೀಯ ಇತಿಹಾಸದಲ್ಲಿ ಸೇನೆ ಆಡಳಿತ ನಡೆಸಿದ್ದೇ ಹೆಚ್ಚು. ಹೀಗಾಗಿ ಸೇನಾ ಮುಖ್ಯಸ್ಥ ಸೈಯದ್ ಅಸೀಂ ಮುನೀರ್ ಅವರು ರಾಜಕಾರಣಿಗಳಿಗೆ ಸ್ಪಷ್ಟ ಸಂದೇಶ ನೀಡಿದ್ದು, ‘ಚುನಾವಣೆ ಎಂಬುದು ಅಂಕಿಸಂಖ್ಯೆಗಳು ಹಾಗೂ ಸೋಲು ಗೆಲುವಿನ ಸ್ಪರ್ಧೆಯಲ್ಲ. ಬದಲಿಗೆ ಜನಾದೇಶ ನಿರ್ಧರಿಸುವ ಕಸರತ್ತು. ದೇಶದ ಸಂಸತ್ತಿನ ಮೇಲೆ ಜನರು ಇಟ್ಟಿರುವ ಗೌರವದಂತೆ ಅವರು ನಡೆದುಕೊಂಡಿದ್ದಾರೆ. ಇದೀಗ ಎಲ್ಲಾ ರಾಜಕೀಯ ಪಕ್ಷಗಳ ಮೇಲೆ ಗುರುತರ ಜವಾಬ್ದಾರಿ ಇದ್ದು, ಅವರು ರಾಜಕೀಯ ಪ್ರಬುದ್ಧತೆ ಮತ್ತು ಏಕತೆಯನ್ನು ಪ್ರದರ್ಶಿಸಬೇಕು’ ಎಂದಿದ್ದಾರೆ.

‘ಸದ್ಯದ ಪರಿಸ್ಥಿತಿಯಲ್ಲಿ ದೇಶಕ್ಕೆ ಸುರಕ್ಷಿತ ಮತ್ತು ಸಮಸ್ಯೆಯನ್ನು ಪರಿಹರಿಸಬಲ್ಲ ಸುಭದ್ರ ಆಡಳಿತದ ಅಗತ್ಯವಿದೆ. ದೇಶ 25 ಕೋಟಿ ಜನರ ಹಿತಕ್ಕಾಗಿ ಅರಾಜಕತೆ ಮತ್ತು ಧೃವೀಕರಣದಿಂದ ಕೂಡಿರುವ ರಾಜಕಾರಣದಿಂದ ಹೊರಬರುವ ಮೂಲಕ ಪ್ರಗತಿಪರ ರಾಷ್ಟ್ರದ ನಿರ್ಮಾಣಕ್ಕೆ ಮುಂದಾಗಬೇಕಿದೆ’ ಎಂದು ಹೇಳಿದ್ದಾರೆ.

ಈ ನಡುವೆ ಕೃತಕ ಬುದ್ಧಿಮತ್ತೆ ಆಧಾರಿತ ವಿಡಿಯೊ ಒಂದರಲ್ಲಿ ಪಿಟಿಐ ಪಕ್ಷದ ಇಮ್ರಾನ್ ಖಾನ್ ಅವರು ಮಾತನಾಡಿ, 150 ಸೀಟುಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT