ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ವರ್ಷಕ್ಕೆ ಕಾಲಿಟ್ಟ ರಷ್ಯಾ–ಉಕ್ರೇನ್‌ ಸಮರ

ಉಕ್ರೇನ್‌ಗೆ ಇನ್ನಷ್ಟು ಬೆಂಬಲದ ಭರವಸೆ
Published 24 ಫೆಬ್ರುವರಿ 2024, 23:30 IST
Last Updated 24 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಕೀವ್, ಉಕ್ರೇನ್: ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ಶನಿವಾರ ಎರಡು ವರ್ಷ ಪೂರೈಸಿದೆ. 2022ರ ಫೆಬ್ರುವರಿ 24ರ ಮುಂಜಾನೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ‘ವಿಶೇಷ ಸೇನಾ ಕಾರ್ಯಾಚರಣೆ’ ಘೋಷಿಸಿದಾಗ ಬಹುತೇಕರು ರಷ್ಯಾ ಕೆಲವೇ ದಿನಗಳಲ್ಲಿ ಜಯ ಸಾಧಿಸಲಿದೆ ಎಂದು ಭಾವಿಸಿದ್ದರು. ಆದರೆ, ರಷ್ಯಾದ ಸೇನೆಯನ್ನು ಹಿಮ್ಮೆಟ್ಟಿಸುವ ಮೂಲಕ ಉಕ್ರೇನ್ ಸಮರ್ಥವಾಗಿ ತಿರುಗೇಟು ನೀಡಿತು.   

ಕಳೆದ ಒಂದು ವರ್ಷದ ಅವಧಿಯಲ್ಲಿ ಉಕ್ರೇನ್‌ನ ಪ್ರತಿದಾಳಿಯ ಬಲ ಕುಗ್ಗಿದ್ದು, ಹಿನ್ನಡೆ ಅನುಭವಿಸುವಂತಾಗಿದೆ. ಆದರೆ ಈ ಅವಧಿಯಲ್ಲಿ ರಷ್ಯಾ ತನ್ನ ಸೇನೆಯ ಬಲವರ್ಧನೆ ಮಾಡಿಕೊಂಡಿತು. ಇದೇ ವೇಳೆ ಉಕ್ರೇನ್, ಮಾನವ ಸಂಪನ್ಮೂಲದ ಕೊರತೆ ಮತ್ತು ಪಶ್ಚಿಮದ ದೇಶಗಳಿಂದ ಪೂರೈಕೆಯಾಗುವ ಫಿರಂಗಿ ಹಾಗೂ ಇನ್ನಿತರ ಯುದ್ಧ ಸಾಮಗ್ರಿಗಳ ಕೊರತೆ ಎದುರಿಸುತ್ತಿದೆ.

ಇಷ್ಟಾದರೂ ‘ಆಯುಧಗಳ ಪೂರೈಕೆ ಕುರಿತ ನಿರ್ಧಾರವು ನಮ್ಮ ಮುಖ್ಯ ಆದ್ಯತೆಯಾಗಿದೆ‘ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ. ಈ ನಡುವೆ ‘ನಿರಂಕುಶತ್ವವು ಎಂದೂ ಗೆಲ್ಲುವುದಿಲ್ಲ’ ಎಂದಿರುವ ಬ್ರಿಟನ್, ಶನಿವಾರ ಉಕ್ರೇನ್‌ಗೆ ಶಸ್ತ್ರಾಸ್ತ್ರಗಳ ಬಳಕೆಗಾಗಿ ₹ 25 ಸಾವಿರ ಕೋಟಿ ನೆರವು ಘೋಷಿಸಿದೆ.

ಶನಿವಾರದ ವರ್ಷಾಚರಣೆಯಲ್ಲಿ ಭಾಗವಹಿಸಲು ಕೀವ್‌ಗೆ ಬಂದ ಯೂರೋಪಿಯನ್ ಒಕ್ಕೂಟ ಆಯೋಗದ ಮುಖ್ಯಸ್ಥೆ ಉರ್ಸುಲಾ ವೊನ್ ಡರ್ ಲೆಯೆನ್ ಉಕ್ರೇನ್‌ನ ‘ಅಸಾಮಾನ್ಯ ಪ್ರತಿರೋಧ‘ವನ್ನು ಶ್ಲಾಘಿಸಿದರು. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ, ಬೆಲ್ಜಿಯಂ ಪ್ರಧಾನಿ ಅಲೆಕ್ಸಾಂಡರ್‌ ಡಿ ಕ್ರೂ ಮತ್ತು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೊ ಅವರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಉಕ್ರೇನ್‌ಗೆ ಇನ್ನಷ್ಟು ಬೆಂಬಲದ ಭರವಸೆ ನೀಡಿದರು.

ಯುದ್ಧದಿಂದ ಇದುವರೆಗೆ 50,000 ನಾಗರಿಕರು ಸಾವನ್ನಪ್ಪಿರುವುದಾಗಿ ಉಕ್ರೇನ್ ಅಂದಾಜು ಮಾಡಿದೆ. ಉಕ್ರೇನ್‌ನ 70,000 ಸೈನಿಕರು ಮೃತರಾಗಿದ್ದು, 120 ಲಕ್ಷ ಮಂದಿ ಗಾಯಗೊಂಡಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳ ಮೂಲಗಳನ್ನು ಆಧರಿಸಿ 2023ರ ಆಗಸ್ಟ್‌ನಲ್ಲಿ ‘ದಿ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿತ್ತು. ಆದರೆ ಯುದ್ಧದಲ್ಲಿ ಸಾವಿಗೀಡಾದ ಸೈನಿಕರ ಸಂಖ್ಯೆಯನ್ನು ಎರಡೂ ದೇಶಗಳು ಇದುವರೆಗೆ ಬಹಿರಂಗಪಡಿಸಿಲ್ಲ.

ಸಾಮಾನ್ಯ ವ್ಯಕ್ತಿಯೊಬ್ಬ ಯುದ್ಧ ಬೇಗ ಕೊನೆಗೊಳ್ಳಲಿ ಎಂದು ಬಯಸುತ್ತಾನೆ. ಆದರೆ ಯುದ್ಧ ನಿಲ್ಲಿಸಲು ನಾವ್ಯಾರೂ ಬಿಡುವುದಿಲ್ಲ. ನಮ್ಮ ಜೀವನದ ಶ್ರೇಷ್ಠ ದಿನದಂದು ಈ ಯುದ್ಧ ಗೆಲ್ಲುತ್ತೇವೆ.
–ವೊಲೊಡಿಮಿರ್ ಝೆಲೆನ್‌ಸ್ಕಿ ಉಕ್ರೇನ್ ಅಧ್ಯಕ್ಷ

ರಷ್ಯಾ ಉಕ್ಕು ಘಟಕದ ಮೇಲೆ ದಾಳಿ

ಕೀವ್: ರಷ್ಯಾದ ನೊವೊಲಿಪೆಕ್ಸ್ ಉಕ್ಕು ಘಟಕದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂದು ಉಕ್ರೇನ್ ಮೂಲಗಳು ಶನಿವಾರ ತಿಳಿಸಿವೆ. ದಾಳಿಯಿಂದ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ. ಈ ಉಕ್ಕು ಘಟಕವು ರಷ್ಯಾ ಸೇನೆಗೆ ಕ್ಷಿಪಣೆ ಯುದ್ಧ ಸಾಮಗ್ರಿ ಮತ್ತು ಡ್ರೋನ್‌ ಮುಂತಾದವುಗಳನ್ನು ಉತ್ಪಾದನೆ ಮಾಡಲು ಕಚ್ಚಾ ಸಾಮಗ್ರಿ ಸರಬರಾಜು ಮಾಡುತ್ತಿತ್ತು. ಹಾಗಾಗಿ ಅದನ್ನು ಗುರಿ ಮಾಡಿ ಉಕ್ರೇನ್‌ ದಾಳಿ ನಡೆಸಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT