ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Russia Ukraine Conflict| ರಷ್ಯಾ ಕ್ಷಿಪಣಿ, ಡ್ರೋನ್ ದಾಳಿ: 16 ಉಕ್ರೇನಿಗರ ಸಾವು

Published 29 ಡಿಸೆಂಬರ್ 2023, 11:01 IST
Last Updated 29 ಡಿಸೆಂಬರ್ 2023, 11:01 IST
ಅಕ್ಷರ ಗಾತ್ರ

ಕೀವ್‌ (ಉಕ್ರೇನ್‌): ರಷ್ಯಾ ಸೇನೆಯು ಉಕ್ರೇನ್‌ನ ಪ್ರಮುಖ ನಗರಗಳನ್ನು ಗುರಿಯಾಗಿಸಿ ಗುರುವಾರ ರಾತ್ರಿಯಿಂದ ನಡೆಸಿದ ನೂರಾರು ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಭಾರಿ ದಾಳಿಗೆ 16 ಜನರು ಮೃತಪಟ್ಟಿದ್ದಾರೆ. ನೂರಾರು ನಾಗರಿಕರು ಗಾಯಗೊಂಡಿದ್ದಾರೆ.

22 ತಿಂಗಳಿನಿಂದ ನಡೆಯುತ್ತಿರುವ ಈ ಯುದ್ಧದಲ್ಲಿ ಒಂದೇ ದಿನದಲ್ಲಿ 122 ಕ್ಷಿಪಣಿಗಳು ಮತ್ತು 36 ಡ್ರೋನ್‌ಗಳನ್ನು ರಷ್ಯಾ ಉಡಾಯಿಸಿದೆ. ಇದರಲ್ಲಿ 87 ಕ್ಷಿಪಣಿಗಳು ಮತ್ತು 27 ಶಾಹಿದ್‌ ಮಾದರಿಯ ಡ್ರೋನ್‌ಗಳನ್ನು ವಾಯುಪಡೆಯು ಗುರುವಾರ ರಾತ್ರಿ ಹೊಡೆದುರುಳಿಸಿದೆ ಎಂದು ಉಕ್ರೇನ್‌ ಸೇನಾ ಮುಖ್ಯಸ್ಥ ವೆಲೇರಿ ಝಲುಝ್ನಿ ಶುಕ್ರವಾರ ಹೇಳಿದ್ದಾರೆ.

ಮೃತರಲ್ಲಿ ಆರು ಮತ್ತು ಎಂಟು ವರ್ಷದ ಇಬ್ಬರು ಮಕ್ಕಳು ಸೇರಿದ್ದಾರೆ. ನಿಪ್ರೊಪೆಟ್ರೊವ್‌ಸ್ಕ್‌ ಪ್ರಾಂತ್ಯದಲ್ಲಿ ಐವರು, ಒಡೆಸಾ ಮತ್ತು ಕೀವ್‌ನಲ್ಲಿ ತಲಾ ಇಬ್ಬರು, ಲುವಿವ್‌, ಝಪೊರಿಝಿಯಾ ಹಾಗೂ ಹಾರ್ಕಿವ್‌ನಲ್ಲಿ ತಲಾ ಒಬ್ಬರು ಹತರಾಗಿದ್ದಾರೆ ಎಂದು ಗೃಹ ಸಚಿವ ಐಗೋರ್‌ ಕ್ಲಿಮೆಂಕೊ ತಿಳಿಸಿದ್ದಾರೆ. 

ಉಕ್ರೇನಾದ್ಯಂತ ಹಲವು ಕಟ್ಟಡಗಳು, ಹೆಸರಿ ಆಸ್ಪತ್ರೆ, ಶಾಲೆಗಳು ಹಾಗೂ ಅಪಾರ್ಟ್‌ಮೆಂಟ್‌ ಸಮುಚ್ಛಯಗಳಿಗೆ ಹಾನಿಯಾಗಿದೆ. ನೂರಾರು ಜನರು ಗಾಯಗೊಂಡಿದ್ದಾರೆ. ಹಲವು ಜನರು ಅವಶೇಷಗಳಡಿ ಸಮಾಧಿಯಾಗಿದ್ದಾರೆ ಎಂದು ಉಕ್ರೇನ್‌ ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ರಾಜಧಾನಿ ಕೀವ್‌ ಸೇರಿ, ಪೂರ್ವದಿಂದ ಪಶ್ಚಿಮ ಮತ್ತು ಉತ್ತರದಿಂದ ದಕ್ಷಿಣದವರೆಗೂ ಹಲವು ಪ್ರದೇಶಗಳಿಗೂ ವ್ಯಾಪಿಸುವಂತೆ ಆರು ನಗರಗಳ ಮೇಲೆ ರಷ್ಯಾ ದಾಳಿ ಮಾಡಿದೆ. ಜಲಾಂತರ್ಗಾಮಿ ನೌಕೆಯಿಂದ ಉಡಾಯಿಸುವ ಕಲಿಬ್‌ ಕ್ಷಿಪಣಿ ಹೊರತುಪಡಿಸಿ, ತನ್ನ ಬಳಿ ಇರುವ ಎಲ್ಲ ಅಸ್ತ್ರಗಳನ್ನು ರಷ್ಯಾ ಸೇನೆ ಉಡಾಯಿಸಿದೆ. ಗುರುವಾರ ರಾತ್ರಿ ಆರಂಭವಾದ ದಾಳಿ ಶುಕ್ರವಾರವೂ ಮುಂದುವರಿಯಿತು ಎಂದು ಉಕ್ರೇನ್‌ ವಾಯುಪಡೆ ವಕ್ತಾರ ಯುರಿ ಇನ್ಹಾಟ್‌ ಮಾಹಿತಿ ನೀಡಿದ್ದಾರೆ.

‘2022ರ ಫೆಬ್ರವರಿಯಲ್ಲಿ ರಷ್ಯಾ ಆರಂಭಿಸಿದ ಪೂರ್ಣ ಪ್ರಮಾಣದ ಆಕ್ರಮಣದ ನಂತರ ನಡೆದಿರುವ ಅತ್ಯಂತ ಬೃಹತ್ ವೈಮಾನಿಕ ದಾಳಿ ಇದಾಗಿದೆ. 2022ರ ನವೆಂಬರ್‌ನಲ್ಲಿ 96 ಕ್ಷಿಪಣಿಗಳು ಮತ್ತು ಈ ವರ್ಷದ ಮಾರ್ಚ್‌ 9ರಂದು 81 ಕ್ಷಿಪಣಿಗಳನ್ನು ರಷ್ಯಾ ಉಡಾಯಿಸಿತ್ತು’ ಎಂದು ಉಕ್ರೇನ್ ವಾಯುಪಡೆ ಕಮಾಂಡರ್‌ ಮೈಕೊಲಾ ಒಲೆಶ್‌ಚುಕ್‌ ಟೆಲಿಗ್ರಾಮ್‌ ಚಾಲೆನ್‌ನಲ್ಲಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಯುದ್ಧ ಟೀಕಿಸಿದ ಕವಿಗೆ 7 ವರ್ಷ ಜೈಲು ಶಿಕ್ಷೆ

ಮಾಸ್ಕೊ: ಉಕ್ರೇನ್‌ ಮೇಲಿನ ಯುದ್ಧ ವಿರೋಧಿಸಿ ಪದ್ಯ ಓದಿದ ಕವಿಗೆ 7 ವರ್ಷಗಳ ಜೈಲು ಶಿಕ್ಷೆಯನ್ನು ರಷ್ಯಾ ನ್ಯಾಯಾಲಯ ಗುರುವಾರ ವಿಧಿಸಿದೆ. 

ಮಾಸ್ಕೊದ ಟ್ವೆರ್ಸ್ಕೊಯಿ ಜಿಲ್ಲಾ ನ್ಯಾಯಾಲಯವು, 2022ರ ಸೆಪ್ಟೆಂಬರ್‌ನಲ್ಲಿ ಮಾಸ್ಕೊದ ಬೀದಿಯಲ್ಲಿ ಯುದ್ಧ ವಿರೋಧಿ ಕವಿತೆ ವಾಚಿಸಿ, ರಾಷ್ಟ್ರೀಯ ಭದ್ರತೆ ದುರ್ಬಲಗೊಳಿಸುವ ಮತ್ತು ದ್ವೇಷ ಪ್ರಚೋದನೆಯ ಕರೆ ನೀಡಿದ ಆಪಾದನೆಯಲ್ಲಿ ಕವಿ ಆರ್ಟಿಯೊಮ್‌ ಕಮರ್ದಿನ್‌ ತಪ್ಪಿತಸ್ಥನೆಂದು ತೀರ್ಮಾನಿಸಿ, ಶಿಕ್ಷೆ ವಿಧಿಸಿತು.

ಅಲ್ಲದೆ, ಕವನ ವಾಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಮರ್ದಿನ್‌ ಅವರ ಕವಿತೆಗಳನ್ನು ವಾಚಿಸಿದ ಯೆಗೊರ್ ಶ್ಟೋವ್‌ಬಾ ಅವರಿಗೂ ಇದೇ ಅಪರಾಧಕ್ಕೆ ಐದೂವರೆ ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT