ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ವಿರುದ್ಧದ ನಮ್ಮ ಸಂಕಲ್ಪ ದುರ್ಬಲಗೊಳ್ಳದು: ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ

Published 2 ಅಕ್ಟೋಬರ್ 2023, 5:03 IST
Last Updated 2 ಅಕ್ಟೋಬರ್ 2023, 5:03 IST
ಅಕ್ಷರ ಗಾತ್ರ

ಕೀವ್‌ (ಉಕ್ರೇನ್‌): ರಷ್ಯಾ ವಿರುದ್ಧ ಹೋರಾಟ ನಡೆಸುತ್ತಿರುವ ನಮ್ಮ ಸಂಕಲ್ಪವನ್ನು ಯಾರಿಂದಲೂ ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.

ಯುದ್ಧ ಪೀಡಿತ ಉಕ್ರೇನ್‌ಗೆ ಆರ್ಥಿಕ ನೆರವು ನೀಡಬೇಕೆಂಬ ಅಧ್ಯಕ್ಷ ಜೋ ಬೈಡನ್ ನಿಲುವಿಗೆ ಯುಎಸ್‌ ಸಂಸತ್‌ನಲ್ಲಿ ನಿರೀಕ್ಷಿತ ಬೆಂಬಲ ದೊರೆತಿಲ್ಲ. ಆದಾಗ್ಯೂ, ಉಕ್ರೇನ್ ಬೆಂಬಲಿಸುವ ಸಂಸದರು ಈ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಬೈಡನ್ ಹೇಳಿದ್ದಾರೆ. ಇದರ ಬೆನ್ನಲ್ಲೇ ಝೆಲೆನ್‌ಸ್ಕಿ ಹೇಳಿಕೆ ನೀಡಿದ್ದಾರೆ.

ಪ್ರತ್ಯೇಕ ಮಿಲಿಟರಿ ನೆರವು ನೀಡುವುದಾಗಿ ಯುಎಸ್‌ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಅವರು ದೂರವಾಣಿ ಸಂಭಾಷಣೆಯಲ್ಲಿ ಭರವಸೆ ನೀಡಿರುವುದಾಗಿ ಉಕ್ರೇನ್‌ ರಕ್ಷಣಾ ಸಚಿವ ರುಸ್ಟೆಂ ಉಮೆರೊವ್ ತಿಳಿಸಿದ್ದಾರೆ.

'ಕಾರ್ಯದರ್ಶಿ ಆಸ್ಟಿನ್‌ ನನಗೆ ಭರವಸೆ ನೀಡಿದ್ದಾರೆ' ಎಂದು ಉಮೆರೊವ್ ಎಕ್ಸ್‌ನಲ್ಲಿ(ಟ್ವಿಟರ್‌) ಬರೆದುಕೊಂಡಿದ್ದಾರೆ. 'ಯುಎಸ್‌ ನೆರವು ನೀಡುವುದನ್ನು ಮುಂದುರಿಸಲಿದೆ. ಉಕ್ರೇನ್‌ ಯೋಧರಿಗೆ ಯುದ್ಧರಂಗದಲ್ಲಿ ಬಲವಾದ ಬೆಂಬಲ ಸಿಗಲಿದೆ' ಎಂದೂ ಉಲ್ಲೇಖಿಸಿದ್ದಾರೆ.

ಉಕ್ರೇನ್‌ ವಿದೇಶಾಂಗ ಸಚಿವಾಲಯದ ವಕ್ತಾರ, ಯುಸ್‌ನ ಹೊಸ ಬಜೆಟ್‌ನಲ್ಲಿ ದೇಶಕ್ಕೆ ನೆರವಿನ ಮೊತ್ತವನ್ನು ಖಾತ್ರಿಪಡಿಸಿಕೊಳ್ಳಲು ಉಕ್ರೇನ್‌ ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.

ಉಕ್ರೇನ್‌ ರಾಷ್ಟ್ರೀಯ ರಕ್ಷಣಾ ದಿನವನ್ನು (ಅಕ್ಟೋಬರ್‌ 01) ಝೆಲೆನ್‌ಸ್ಕಿ ವಿಡಿಯೊ ಸಂದೇಶ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಯುಎಸ್‌ ಸಂಸತ್‌ ಮತದಾನದ ಕುರಿತು ಮಾತನಾಡಿಲ್ಲ. ಆದರೆ, ಜಯಕ್ಕಾಗಿನ ತಮ್ಮ ತುಡಿತದ ಬಗ್ಗೆ ಒತ್ತಿ ಹೇಳಿದ್ದಾರೆ.

ಉಕ್ರೇನ್‌ನ ಸ್ಥಿರತೆ, ಸಹಿಷ್ಣುತೆ, ಶಕ್ತಿ ಹಾಗೂ ಶೌರ್ಯವನ್ನು ನಿಷ್ಕ್ರಿಯಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಜಯ ಸಾಧಿಸಿದ ನಂತರವಷ್ಟೇ ಉಕ್ರೇನ್‌ ವಿಶ್ರಾಂತಿ ಪಡೆಯುತ್ತದೆ ಎಂದು ಪುನರುಚ್ಚರಿಸಿದ್ದಾರೆ.

ರಷ್ಯಾ–ಉಕ್ರೇನ್ ನಡುವಿನ ಯುದ್ಧ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ ಎಂಬುದನ್ನು ಮನಗಂಡಿರುವ ಯುಎಸ್‌ ಸಂಸದರು, ಉಕ್ರೇನ್ ಸಹಾಯಕ್ಕೆ ಅನುಮೋದನೆ ಪಡೆಯುವುದು ಹೆಚ್ಚು ಕಷ್ಟ ಎಂಬುದನ್ನು ಅರಿತಿದ್ದಾರೆ. ಅದರಂತೆ, ಉಕ್ರೇನ್ ಸೈನಿಕರಿಗೆ ತರಬೇತಿ ನೀಡಲು ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸಲು ರಕ್ಷಣಾ ವೆಚ್ಚ ಮಸೂದೆಯಿಂದ 300 ಮಿಲಿಯನ್ ಡಾಲರ್ ನೀಡದಂತೆ ರಿಪಬ್ಲಿಕನ್‌ ಸದಸ್ಯರು ಮತ ಚಲಾಯಿಸಿದ್ದಾರೆ. ಆದರೆ, ನಂತರ ಪ್ರತ್ಯೇಕವಾಗಿ ನೆರವು ನೀಡಲು ಅನುಮೋದನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT