ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

COP28 | 2030ರ ವೇಳೆಗೆ ಇಂಗಾಲ ಹೊರಸೂಸುವಿಕೆ 4 ಗಿಗಾಟನ್‌ನಷ್ಟು ತಗ್ಗಿಸುವ ಗುರಿ

Published 10 ಡಿಸೆಂಬರ್ 2023, 16:39 IST
Last Updated 10 ಡಿಸೆಂಬರ್ 2023, 16:39 IST
ಅಕ್ಷರ ಗಾತ್ರ

ದುಬೈ : ‘ಇಂಗಾಲ ಹೊರಸೂಸುವಿಕೆಯ ಪ್ರಮಾಣ ತಗ್ಗಿಸುವ ವಾಗ್ದಾನವನ್ನು ಈಡೇರಿಸಲು ಪ್ರಮುಖ ದೇಶಗಳು ಮತ್ತು ಕಂಪನಿಗಳು ಬದ್ಧವಾಗಬೇಕು. ಇದರಿಂದ 2030ರ ವೇಳೆಗೆ ಸುಮಾರು 4 ಗಿಗಾಟನ್‌ ಇಂಗಾಲದಿಂದಾಗುವ ಮಾಲಿನ್ಯ ತಗ್ಗಿಸಬಹುದು’ ಎಂದು ‘ಸಿಒಪಿ28’ರಲ್ಲಿ ಪಾಲ್ಗೊಂಡಿರುವ ಜಾಗತಿಕ ಸಮಾಲೋಚಕರು ಭಾನುವಾರ ಹೇಳಿದ್ದಾರೆ.

ದುಬೈನಲ್ಲಿ ನಡೆಯುತ್ತಿರುವ ‘ಸಿಒಪಿ28’ನ ವಾರ್ಷಿಕ ಸಮಾವೇಶದಲ್ಲಿ (ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶ) ಭೂಮಿಯನ್ನು ವಿನಾಶಕಾರಿ ಮಟ್ಟದ ತಾಪಮಾನದಿಂದ ಪಾರುಮಾಡಲು ಎಲ್ಲ ರಾಷ್ಟ್ರಗಳು, ಈ ಗುರಿಸಾಧನೆಯಲ್ಲಿ ಉದ್ಭವಿಸಿರುವ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಬೇಕು ಎಂದೂ ಸಮಾಲೋಚಕರು ಒತ್ತಾಯಿಸಿದ್ದಾರೆ. 

ಇದೇ ವೇಳೆ ಜಾಗತಿಕ ಗುರಿಗಳ ಹೊಸ ಕರಡು ಒಪ್ಪಂದವನ್ನು ಸಮಾಲೋಚಕರು ರೂಪಿಸಿದ್ದು, ಇಂಗಾಲ ಹೊರಸೂಸುವಿಕೆ ತಗ್ಗಿಸಲು ರಾಷ್ಟ್ರಗಳು ವಹಿಸಬೇಕಿರುವ ಪಾತ್ರ ಮತ್ತು ಜವಾಬ್ದಾರಿಯನ್ನು ಈ ಕರಡು ಒಪ್ಪಂದಲ್ಲಿ ವಿವರಿಸಲಾಗಿದೆ. 

ಪಳೆಯುಳಿಕೆ ಇಂಧನಕ್ಕೆ ಕೊನೆಹಾಡುವ ಸಮಯವಂತೂ ಬಂದಿದೆ. ಈ ನಿಟ್ಟಿನಲ್ಲಿ ನಾವು ಸಾಗುತ್ತಿರುವ ವೇಗ ಸಾಲದು. ಆದರೆ, ಈ ನಿಟ್ಟಿನಲ್ಲಿ ಸಮಾಲೋಚಕರು ಉತ್ತಮ ಪ್ರಗತಿ ಸಾಧಿಸುತ್ತಿದ್ದಾರೆ ಎಂದು ಸಿಒಪಿ28 ಅಧ್ಯಕ್ಷ ಸುಲ್ತಾನ್ ಅಲ್-ಜಾಬರ್ ಭಾನುವಾರ ಪತ್ರಕರ್ತರಿಗೆ ತಿಳಿಸಿದರು.

‘ಸಿಒಪಿ 28 ಪ್ರಗತಿಗೆ ಕೆಲವೇ ರಾಷ್ಟ್ರಗಳು ಅಡ್ಡಿ’

ದುಬೈ (ಎಎಫ್‌ಪಿ): ಪಳೆಯುಳಿಕೆ ಇಂಧನಗಳ ಬಳಕೆಯನ್ನು ಹಂತಹಂತವಾಗಿ ಕೈಬಿಡಲು ಹವಾಮಾನ ಮಾತುಕತೆಗಳಲ್ಲಿ ಮೂಡುತ್ತಿರುವ ಒಮ್ಮತಕ್ಕೆ ಕೆಲವೇ ರಾಷ್ಟ್ರಗಳು ತಡೆಯೊಡ್ಡುತ್ತಿವೆ ಎಂದು ವನವಾಟು ದೇಶದ ಹವಾಮಾನ ಬದಲಾವಣೆ ಸಚಿವ ರಾಲ್ಫ್ ರೆಗೆನ್ವಾನು ಭಾನುವಾರ ತಿಳಿಸಿದರು.

ದುಬೈನಲ್ಲಿ ನಡೆಯುತ್ತಿರುವ ನಿರ್ಣಾಯಕ ಹಂತದ ‘ಸಿಒಪಿ 28 ಸಮಾವೇಶ’ದ ವೇಳೆ ‘ಎಎಫ್‌ಪಿ’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು, ತಗ್ಗು ಪ್ರದೇಶದಲ್ಲಿರುವ ಪೆಸಿಫಿಕ್‌ ದೇಶವು ಏರುತ್ತಿರುವ ಸಮುದ್ರ ಮಟ್ಟ ಮತ್ತು ಉಷ್ಣವಲಯದ ಚಂಡಮಾರುತಗಳಿಂದಾಗಿ ತೀವ್ರ ಅಪಾಯ ಎದುರಿಸುತ್ತಿದೆ ಎಂದರು.

‘ಬಹಳ ದೇಶಗಳ ಬಯಕೆ ಏನೆಂದರೆ ಪಳೆಯುಳಿಕೆ ಇಂಧನ ಬಳಕೆಯನ್ನು ಕ್ರಮೇಣ ನಿಲ್ಲಿಸುವುದಾಗಿದೆ. ಆದರೆ, ಕೆಲವೇ ಕೆಲವು ದೇಶಗಳು ಮಾತ್ರ ಇದಕ್ಕೆ ಅಡ್ಡಗಾಲು ಹಾಕುತ್ತಿವೆ. ಪಳೆಯುಳಿಕೆ ಇಂಧನ ಬಳಕೆಯನ್ನು ನಿಲ್ಲಿಸಿದರೆ, ಹವಾಮಾನ ಬದಲಾವಣೆಗೆ ಸಂಬಂಧಿಸಿದ ಪ್ಯಾರಿಸ್‌ ಒಪ್ಪಂದದ ಗುರಿಗಳನ್ನು ಸಾಧಿಸಲು ಮತ್ತು ಜಾಗತಿಕ ತಾಪಮಾನವನ್ನು ಕೈಗಾರೀಕರಣದ ಪೂರ್ವದಲ್ಲಿದ್ದಂತೆ 1.5 ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಸುವ ವಿಶ್ವ ಸಮುದಾಯದ ಸಾಮೂಹಿಕ ಪ್ರಯತ್ನದ ಗುರಿ ಸಾಧಿಸಬಹುದಾಗಿದೆ’ ಎಂದು ಅವರು ಹೇಳಿದರು.   

ಹವಾಮಾನ ತುರ್ತುಸ್ಥಿತಿಗೆ ಕಾರಣವಾಗುತ್ತಿರುವ ತೈಲ, ಕಲ್ಲಿದ್ದಲು ಮತ್ತು ಅನಿಲದ ಹೊರತೆಗೆಯುವಿಕೆ ನಿಲ್ಲಿಸಲು ಪ್ರೇರೇಪಿಸುವ ಘೋಷಣೆಯನ್ನು ನಿರ್ಬಂಧಿಸಲು ಪೆಟ್ರೋಲಿಯಂ ರಫ್ತು ದೇಶಗಳ ಸಂಘಟನೆ ಒಪೆಕ್‌ ತನ್ನ ಸದಸ್ಯ ರಾಷ್ಟ್ರಗಳಿಗೆ ಕರೆ ಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT