ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷೀಯ ಚುನಾವಣೆ: ರಷ್ಯಾದಲ್ಲಿ ಮತ್ತೆ 6 ವರ್ಷ ಪುಟಿನ್‌ ಆಡಳಿತ?

ಕೆಲವು ಮತದಾನ ಕೇಂದ್ರಗಳಲ್ಲಿ ನಡೆದ ವಿಧ್ವಂಸಕ ಕೃತ್ಯಗಳು
Published 17 ಮಾರ್ಚ್ 2024, 13:28 IST
Last Updated 17 ಮಾರ್ಚ್ 2024, 13:28 IST
ಅಕ್ಷರ ಗಾತ್ರ

ಮಾಸ್ಕೊ: ರಷ್ಯಾದಲ್ಲಿ ಪರ್ಯಾಯ ನಾಯಕತ್ವಕ್ಕೆ ಯಾವುದೇ ನೈಜ ಆಯ್ಕೆಗಳಿಲ್ಲದ ಅಧ್ಯಕ್ಷೀಯ ಚುನಾವಣೆಯ ನಂತರ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಇನ್ನೂ 6 ವರ್ಷಗಳ ಕಾಲ ದೇಶದಲ್ಲಿ ತಮ್ಮ ಆಳ್ವಿಕೆಯನ್ನು ವಿಸ್ತರಿಸಲು ಭಾನುವಾರ ಸಿದ್ಧರಾದರು.

ಶುಕ್ರವಾರ ಪ್ರಾರಂಭವಾದ ಮೂರು ದಿನಗಳ ಚುನಾವಣೆಯು ಬಿಗಿ ಭದ್ರತೆಯ ನಡುವೆ ನಡೆದಿದೆ. ಈ ಚುನಾವಣೆಯಲ್ಲಿ ರಷ್ಯಾದ ನಾಯಕ, 71 ವರ್ಷದ ಪುಟಿನ್‌ ತಮ್ಮೊಂದಿಗೆ ಸ್ನೇಹ ಹೊಂದಿರುವ ಪಕ್ಷಗಳ ಮೂವರು ಪ್ರತಿಸ್ಪರ್ಧಿಗಳನ್ನು ಎದುರಿಸುತ್ತಿದ್ದಾರೆ. ಈ ಚುನಾವಣೆಯನ್ನು ಪಾಶ್ಚಿಮಾತ್ಯ ದೇಶಗಳ ನಾಯಕರು ‘ಪ್ರಜಾಪ್ರಭುತ್ವದ ಅಣಕ’ ಎಂದು ವ್ಯಂಗ್ಯವಾಡಿದ್ದಾರೆ.

ವಿಶಾಲ ದೇಶದ  11 ವಲಯಗಳಾದ್ಯಂತ ಮತದಾನ ಕೇಂದ್ರಗಳಲ್ಲಿ, ಉಕ್ರೇನ್‌ನಿಂದ ಅಕ್ರಮವಾಗಿ‌ ಸ್ವಾಧೀನಪಡಿಸಿಕೊಂಡ ಪ್ರದೇಶಗಳಲ್ಲಿ ಮತ್ತು ಆನ್‌ಲೈನ್‌ನಲ್ಲಿ ಮತದಾನ ನಡೆಯಿತು. ಅರ್ಹ ಮತದಾರರಲ್ಲಿ 60ಕ್ಕೂ ಹೆಚ್ಚು ಮಂದಿ ಭಾನುವಾರ ಮತ ಚಲಾಯಿಸಿದರು.

ಬಿಗಿ ಭದ್ರತೆಯ ಹೊರತಾಗಿಯೂ, ಹಲವು ಕಡೆ ಮತದಾನ ಕೇಂದ್ರಗಳಲ್ಲಿ ಅನೇಕ ಹಿಂಸಾಚಾರದ ಪ್ರಕರಣಗಳು ವರದಿಯಾಗಿವೆ.

ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಮಹಿಳೆಯೊಬ್ಬರು ಮತದಾನ ಕೇಂದ್ರದ ಪ್ರವೇಶದ್ವಾರದಲ್ಲಿ ಫೈರ್‌ಬಾಂಬ್ ಎಸೆದಿದ್ದು, ನಂತರ ಆಕೆಯನ್ನು ಬಂಧಿಸಲಾಯಿತು. ಮತಪೆಟ್ಟಿಗೆಗಳಿಗೆ ಸ್ಯಾನಿಟೈಸರ್‌, ಶಾಯಿ ಎಸೆದಿದ್ದಕ್ಕಾಗಿ ದೇಶಾದ್ಯಂತ ಹಲವು ಮಂದಿಯನ್ನು ಬಂಧಿಸಲಾಗಿದೆ. 

ಪುಟಿನ್ ಅಥವಾ ಯುದ್ಧದ ಬಗ್ಗೆ ಅಸಮಾಧಾನ ಹೊಂದಿರುವವರು ಭಾನುವಾರ ಮಧ್ಯಾಹ್ನ ಮತದಾನಕ್ಕೆ ಬರುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸುವಂತೆ ರಷ್ಯಾದ ಕೆಲ ವಿರೋಧ ಪಕ್ಷಗಳು ಒತ್ತಾಯಿಸಿದ್ದವು.

ರಷ್ಯಾದಾದ್ಯಂತ ವಿವಿಧ ನಗರಗಳಲ್ಲಿನ ಮತದಾನ ಕೇಂದ್ರಗಳ ಬಳಿ ಜನರು ಮಧ್ಯಾಹ್ನದ ವೇಳೆ ಕಿಕ್ಕಿರಿದು ತುಂಬಿರುವ ಚಿತ್ರಗಳು ಮತ್ತು ವಿಡಿಯೊಗಳನ್ನು ಬಿಡುಗಡೆ ಮಾಡಿರುವ ನವಾಲ್ನಿಯ ಸಹವರ್ತಿಗಳು, ತಮ್ಮ ಕಾರ್ಯತಂತ್ರ ಯಶಸ್ವಿಯಾಗಿದೆ ಎಂದು ಬಣ್ಣಿಸಿದ್ದಾರೆ.

ಮತದಾನ ಕೇಂದ್ರಗಳಲ್ಲಿ ಸಾಲುಗಟ್ಟಿ ನಿಂತಿರುವ ಮತದಾರರು ನವಾಲ್ನಿಯವರನ್ನು ಬೆಂಬಲಿಸುತ್ತಿದ್ದ ಮಿತ್ರಪಕ್ಷಗಳ ಕರೆಗೆ ಓಗೊಟ್ಟಿದ್ದಾರೆಯೇ ಅಥವಾ ಮಧ್ಯಾಹ್ನದ ವೇಳೆಯಾಗಿದ್ದರಿಂದ ಮತದಾರರು ಗರಿಷ್ಠ ಸಂಖ್ಯೆಯಲ್ಲಿ ಸೇರಿದ್ದರೇ ಎನ್ನುವುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

ಚುನಾವಣೆಯ ನಡುವೆಯೇ ರಷ್ಯಾ ಗಡಿಯ ಸಮೀಪದ ಬೆಲ್ಗೊರೊಡ್ ನಗರದ ಮೇಲೆ ಉಕ್ರೇನ್‌ ಪಡೆಗಳು ಭಾನುವಾರ ಶೆಲ್ ದಾಳಿ ನಡೆಸಿವೆ. 16 ವರ್ಷದ ಬಾಲಕಿ ಸತ್ತಿದ್ದು, ಆಕೆಯ ತಂದೆ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಗವರ್ನರ್ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪುಟಿನ್‌, ಇದು ನಿವಾಸಿಗಳನ್ನು ಹೆದರಿಸಲು ಮತ್ತು ರಷ್ಯಾ ಅಧ್ಯಕ್ಷೀಯ ಚುನಾವಣೆಯನ್ನು ಹಳಿತಪ್ಪಿಸಲು ಉಕ್ರೇನ್ ನಡೆಸಿದ ಪ್ರಯತ್ನ. ಇದಕ್ಕೆ ಉಕ್ರೇನ್‌ನನ್ನು ಶಿಕ್ಷಿಸದೇ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT