ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್ ಯುದ್ಧರಂಗದಲ್ಲೇ ರಷ್ಯಾ ಸೇನೆ ವಿರುದ್ಧ ವ್ಯಾಗ್ನರ್ ಗ್ರೂಪ್ ದಂಗೆ: ಕಾರಣವೇನು?

Published 24 ಜೂನ್ 2023, 14:34 IST
Last Updated 24 ಜೂನ್ 2023, 14:34 IST
ಅಕ್ಷರ ಗಾತ್ರ

ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರ ಆಪ್ತರಾಗಿದ್ದ ಯೆವ್ಗೆನಿ ಪ್ರಿಗೋಷಿನ್, ಪುಟಿನ್‌ ಬೆಂಬಲದಿಂದಲೇ 2014ರಲ್ಲಿ ‘ವ್ಯಾಗ್ನರ್’ ಎಂಬ ಖಾಸಗಿ ಮಿಲಿಟರಿ ಪಡೆ ಕಟ್ಟಿದ್ದರು. ಸೇಂಟ್‌ ಪೀಟರ್ಸ್‌ಬರ್ಗ್‌ ಮೇಯರ್‌ ಆಗಿಯೂ ಅಧಿಕಾರ ನಡೆಸಿದ್ದರು.

ಈಗ, ರಷ್ಯಾ ಪಡೆಗಳು ಹಾಗೂ ಪುಟಿನ್‌ ವಿರುದ್ಧವೇ ಪ್ರಿಗೋಷಿನ್ ಬಂಡಾಯವೆದ್ದಿದ್ದಾರೆ. ರಷ್ಯಾ ಸೇನೆಯ ಉನ್ನತ ಅಧಿಕಾರಿಗಳು ಹಾಗೂ ರಕ್ಷಣಾ ಸಚಿವಾಲಯದ ಜೊತೆಗಿನ ಅವರ ಮುಸುಕಿನ ಗುದ್ದಾಟ ಈಗ ದಂಗೆ ರೂಪದಲ್ಲಿ ಸ್ಫೋಟಗೊಂಡಿದೆ ಎನ್ನಲಾಗುತ್ತಿದೆ.

ಉಕ್ರೇನ್‌ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ‘ವ್ಯಾಗ್ನರ್’ ಗುಂಪು ಮಹತ್ವದ ಪಾತ್ರವಹಿಸಿದೆ. ಅದರಲ್ಲೂ, ಬಖ್ಮಟ್ ನಗರವನ್ನು ವಶಪಡಿಸಿಕೊಳ್ಳುವ ಸಲುವಾಗಿ ನಡೆದ ಭೀಕರ ಕದನದಲ್ಲಿ ರಷ್ಯಾ ಪಡೆಗಳು ಯಶಸ್ವಿಯಾಗುವಲ್ಲಿ ‘ವ್ಯಾಗ್ನರ್’ ಗುಂಪಿನ ಪಾತ್ರ ನಿರ್ಣಾಯಕವಾಗಿತ್ತು.

ಉಕ್ರೇನ್‌ ವಿರುದ್ಧ ಹೋರಾಡುತ್ತಿದ್ದ ತನ್ನ ಯೋಧರಿಗೆ ರಷ್ಯಾ ಸೇನೆಯ ಅಧಿಕಾರಿಗಳು ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿಲ್ಲ ಎಂದು ಇತ್ತೀಚೆಗೆ ಆರೋಪಿಸಿದ್ದ ಅವರು, ‘ಮಿಲಿಟರಿಯ ಉನ್ನತ ಅಧಿಕಾರಿಗಳು ಅಸಮರ್ಥರು’ ಎಂದು ಟೀಕಿಸುತ್ತಿದ್ದರು.

‘ಉಕ್ರೇನ್‌ ನೆಲದಲ್ಲಿ ಹೋರಾಡುತ್ತಿರುವ ಯೋಧರ ಶಿಬಿರಗಳ ಮೇಲೆ, ಬೆಂಗಾವಲು ವಾಹನಗಳ ಮೇಲೆ ರಷ್ಯಾ ಪಡೆಗಳು ರಾಕೆಟ್‌, ಹೆಲಿಕಾಪ್ಟರ್‌ಗಳ ಮೂಲಕ ದಾಳಿ ನಡೆಸಿದ್ದವು. ಸೇನೆ ಸಿಬ್ಬಂದಿ ಮುಖ್ಯಸ್ಥ ಜನರಲ್ ವ್ಯಾಲೇರಿ ಗೆರಾಸಿಮೋವ್ ಅವರ ಆದೇಶದಂತೆಯೇ ಈ ದಾಳಿಗಳು ನಡೆದಿವೆ’ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಬೆನ್ನಿಗೆ ಚೂರಿ ಹಾಕಿದ ವ್ಯಾಗ್ನರ್ ಗುಂಪು: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಿಡಿ

‘ರೊಸ್ತೋವ್‌ ನಗರದಲ್ಲಿ ಗೆರಾಸಿಮೋವ್ ಹಾಗೂ ರಕ್ಷಣಾ ಸಚಿವ ಸೆರ್ಗಿ ಶೋಯಿಗು ಸಭೆ ಇತ್ತೀಚೆಗೆ ನಡೆಸಿ, ವ್ಯಾಗ್ನರ್‌ ಪಡೆಯನ್ನು ನಾಶ ಮಾಡಬೇಕು ಬಗ್ಗೆ ನಿರ್ಧಾರ ಕೈಗೊಂಡಿದ್ದರು. ಅದರ ಬೆನ್ನಲ್ಲೇ ಈ ದಾಳಿಗಳು ನಡೆದಿವೆ’ ಎಂದೂ ಆರೋಪಿಸಿದ್ದರು.

‘ಉಕ್ರೇನ್‌ ಮೇಲಿನ ಆಕ್ರಮಣವು ಭ್ರಷ್ಟರಾಗಿರುವ ರಷ್ಯಾದ ಶ್ರೀಮಂತರು ಹೆಣೆದ ಜಾಲ’ ಎಂಬುದಾಗಿ ಪ್ರಿಗೋಷಿನ್ ಹೇಳಿದ್ದರು ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

ಈ ನಡುವೆ, ‘ವ್ಯಾಗ್ನರ್ ನಾಯಕ ಪ್ರಿಗೋಷಿನ್, ಅಧ್ಯಕ್ಷ ಪುಟಿನ್‌ ವಿರುದ್ಧ ದಂಗೆ ಏಳಲು ಹವಣಿಸುತ್ತಿದ್ದಾರೆ’ ಎಂದು ಸೇನೆಯ ಉನ್ನತ ಅಧಿಕಾರಿಗಳು ಶುಕ್ರವಾರವಷ್ಟೆ ಟೀಕಿಸಿದ್ದರು. ಇದು ಪ್ರಿಗೋಷಿನ್ ಮತ್ತು ಸೇನೆ ನಡುವೆ ಬಹಿರಂಗ ಸಂಘರ್ಷದ ಸುಳಿವು ನೀಡಿತ್ತು’ ಎಂದೂ ಪತ್ರಿಕೆ ವರದಿ ಮಾಡಿದೆ.

ಉಕ್ರೇನ್‌ ಗಡಿಗೆ ಹೊಂದಿಕೊಂಡಿರುವ ರೋಸ್ತೋವ್‌–ಆನ್‌–ಡಾನ್‌ ನಗರದಲ್ಲಿ ಶುಕ್ರವಾರ ರಾತ್ರಿ ಸೇನಾಪಡೆಗಳ ಚಟುವಟಿಕೆಗಳು ಕಂಡುಬಂದವು. ಶನಿವಾರ ಬೆಳಿಗ್ಗೆ ಮಾತನಾಡಿದ ಪ್ರಿಗೋಷಿನ್, ‘ನಗರದಲ್ಲಿರುವ ಮಿಲಿಟರಿ ಕೇಂದ್ರ ಕಚೇರಿಯನ್ನು ವಶಕ್ಕೆ ಪಡೆದಿರುವುದಾಗಿ ಘೋಷಿಸಿದರು.

ಎಚ್ಚರಿಕೆ: ಸರ್ಕಾರ, ಸೇನೆ ವಿರುದ್ದ ಬಂಡಾಯವೆದ್ದಿರುವ ಪ್ರಿಗೋಷಿನ್ ವಿರುದ್ಧ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಸಮಿತಿ ಕಿಡಿಕಾರಿದೆ. ಫೆಡರಲ್‌ ಭದ್ರತಾ ಸೇವೆ (ಎಫ್‌ಎಸ್‌ಬಿ)ಯ ಅಂಗಸಂಸ್ಥೆಯಾಗಿರುವ ಸಮಿತಿಯು, ‘ಸಶಸ್ತ್ರ ದಂಗೆ ನಡೆಸುವವರಿಗೆ 20 ವರ್ಷಗಳಷ್ಟು ಜೈಲು ಶಿಕ್ಷೆ ವಿಧಿಸಬಹುದಾಗಿದೆ’ ಎಂದು ಎಚ್ಚರಿಸಿದೆ.

‘ಪ್ರಿಗೋಷಿನ್‌ ನೀಡುವ ಅದೇಶಗಳು ವಿಶ್ವಾಸಘಾತುಕದಿಂದ ಕೂಡಿವೆ. ಹಾಗಾಗಿ, ಅವುಗಳನ್ನು ಪಾಲನೆ ಮಾಡಬೇಡಿ’ ಎಂಬುದಾಗಿ ವ್ಯಾಗ್ನರ್‌ ಗುಂಪಿನ ಯೋಧರನ್ನು ಎಫ್‌ಎಸ್‌ಬಿ ಆಗ್ರಹಿಸಿತ್ತು.

ಇದನ್ನೂ ಓದಿ: ರಷ್ಯಾದಲ್ಲಿ ಖಾಸಗಿ ಸೇನಾ ಪಡೆ ಕಟ್ಟಿ ಪುಟಿನ್ ವಿರುದ್ಧ ತಿರುಗಿ ಬಿದ್ದ ಯೆವ್ಗೆನಿ ಪ್ರಿಗೊಝಿನ್‌ ಯಾರು?

ಮಾಸ್ಕೊದತ್ತ ಮುಖಮಾಡಿದ ‘ವ್ಯಾಗ್ನರ್’ ವಿರುದ್ಧ ಕಾರ್ಯಾಚರಣೆ
ಸೇನೆ ವಿರುದ್ದ ಬಂಡಾಯ ಎದ್ದಿರುವ ಯೆವ್ಗೆನಿ ಪ್ರಿಗೋಷಿನ್‌ ನೇತೃತ್ವದ ‘ವ್ಯಾಗ್ನರ್’ ಗುಂಪು ರಾಜಧಾನಿ ಮಾಸ್ಕೊದತ್ತ ಮುನ್ನಡೆಯುವ ಸಾಧ್ಯತೆ ಇದೆ ಎಂದು ವೊರೊನೆಜ್ ನಗರದ ಗವರ್ನರ್ ಹೇಳಿದ್ದಾರೆ. ‘ನಗರದ ಇಂಧನ ಸಂಗ್ರಹಾಗಾರಕ್ಕೆ ಬೆಂಕಿ ಹಚ್ಚಲಾಗಿದೆ. ದಂಗೆಯನ್ನು ಹತ್ತಿಕ್ಕುವ ಸಲುವಾಗಿ ಭಯೋತ್ಪದನಾ ನಿಗ್ರಹ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ’ ಎಂದೂ ಅವರು ಹೇಳಿದ್ದಾರೆ. ಪುಟಿನ್‌ ಟೀಕೆ–ತಿರುಗೇಟು: ‘ಮಹತ್ವಾಕಾಂಕ್ಷೆ ಹಾಗೂ ವೈಯಕ್ತಿಕ ಹಿತಾಸಕ್ತಿಗಳೇ ಇಂಥ ದೇಶದ್ರೋಹ ನಡೆಗೆ ಕಾರಣ’ ಎಂದು ಪ್ರಿಗೋಷಿನ್‌ ವಿರುದ್ಧ ವಿಡಿಯೊ ಸಂದೇಶದಲ್ಲಿ ಪುಟಿನ್‌ ಟೀಕಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಪ್ರಿಗೋಷಿನ್ ‘ನನ್ನ ಮಾತೃಭೂಮಿಗೆ ದ್ರೋಹ ಬಗೆಯುತ್ತಿದ್ದೇನೆ ಎಂಬ ಅಧ್ಯಕ್ಷರ ಹೇಳಿಕೆ ತಪ್ಪು. ನಾವೂ ದೇಶಪ್ರೇಮಿಗಳೇ’ ಎಂದಿದ್ದಾರೆ. ‘ಅಧ್ಯಕ್ಷ ಪುಟಿನ್ ಎಫ್‌ಎಸ್‌ಬಿ ಅಥವಾ ಇನ್ನಾರೋ ಮನವಿ ಮಾಡಿದರೂ ನಮ್ಮ ಯೋಜನೆಗಳು ಬದಲಾಯಿಸುವುದಿಲ್ಲ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT