ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
2023 ಮರೆಯುವ ಮುನ್ನ: ಜಗದಗಲದ ಹಾಡುಪಾಡು
2023 ಮರೆಯುವ ಮುನ್ನ: ಜಗದಗಲದ ಹಾಡುಪಾಡು
Published 29 ಡಿಸೆಂಬರ್ 2023, 22:21 IST
Last Updated 29 ಡಿಸೆಂಬರ್ 2023, 22:21 IST
ಅಕ್ಷರ ಗಾತ್ರ

‘ನೀವು ಎಂದಾದರೂ ಗಾಜಾಗೆ ಬರುವಿರಾದರೆ,

ನಿಮ್ಮ ಬೂಟುಗಳನ್ನು ಆಚೆಯೇ ಕಳಚಿಟ್ಟು

ಕಾಲುಗಳನ್ನು ತೊಳೆದು ಒಳಗೆ ಬನ್ನಿ.

ಈ ನೆಲಕ್ಕೆ ನಮ್ಮ ರಕ್ತದ ನೀರೆರೆಯಲಾಗಿದೆ

ಇಲ್ಲಿ ಗುಲಾಬಿ ಅರಳುತ್ತಿದೆ.

ನೀವು ಹೆಜ್ಜೆಯಿಟ್ಟ ನೆಲವೆಲ್ಲಾ

ಮಕ್ಕಳ ರಕ್ತದಿಂದ ತೋಯ್ದುಹೋಗಿದೆ

ಅಲ್ಲೂ ಗುಲಾಬಿ ಅರಳುತ್ತಿದೆ.

ಅದರ ಘಾಟು–ಘಮಲು ನಮಗಷ್ಟೇ ಬಡಿಯುತ್ತಿದೆ...’

ಮಗುವೊಂದನ್ನು ಹೊತ್ತು ಸಾಗುತ್ತಿರುವ ವ್ಯಕ್ತಿ

ಮಗುವೊಂದನ್ನು ಹೊತ್ತು ಸಾಗುತ್ತಿರುವ ವ್ಯಕ್ತಿ

ಗಾಜಾ ಪಟ್ಟಿಯ ಖಾನ್‌ ಯೂನಿಸ್‌ನ ವಸತಿ ಪ್ರದೇಶದ ಮೇಲೆ ಇದೇ ನವೆಂಬರ್‌ನಲ್ಲಿ ಇಸ್ರೇಲ್‌ ಪಡೆಗಳು ನಡೆಸಿದ ಬಾಂಬ್‌ ದಾಳಿಯಲ್ಲಿ ಹಲವು ಮಕ್ಕಳು ಮೃತಪಟ್ಟಿದ್ದವು. ಆ ದಾಳಿಯ ಮರುದಿನ ಗಾಜಾದ ಯುವಕವಿ ಮೊಸಬ್‌ ಅಬು ತೋಹಾ ಬರೆದ ಕವಿತೆಯಿದು. ಮೊಸಬ್‌ ತನ್ನ ಇನ್‌ಸ್ಟಾಗ್ರಾಂನಲ್ಲಿ, ನೆಲಕಚ್ಚಿ ನುಚ್ಚುನೂರಾದ ಮನೆಗಳ ಅವಶೇಷಗಳ ಬಳಿ ರಕ್ತಸಿಕ್ತವಾಗಿದ್ದ ಗೊಂಬೆಯೊಂದು ಬಿದ್ದಿತ್ತು. ಅದನ್ನು ನೋಡಿದ ನನ್ನ ಎಂಟು ವರ್ಷದ ಮಗ ‘ಅಪ್ಪಾ, ನನ್ನ ಗೊಂಬೆಗಳು ಇನ್ನೂ ಜೀವಂತವಾಗಿವೆಯಾ’ ಎಂದು ಪ್ರಶ್ನಿಸಿದ ಎಂದು ಬರೆದುಕೊಂಡಿದ್ದಾರೆ.

2023ರ ಕ್ಯಾಲೆಂಡರ್‌ ಅನ್ನು ಯಾವ ಕಡೆಯಿಂದ ತಿರುವಿ ಹಾಕಿದರೂ ಪ್ರತಿ ಪುಟವೂ ರಕ್ತಸಿಕ್ತವಾಗಿಯೇ ಕಾಣುತ್ತದೆ. ಜಗತ್ತಿನ ಯಾವುದೇ ನೆಲದಲ್ಲಿ ನಿಂತರೂ ಆ ರಕ್ತಸಿಕ್ತ ಅಧ್ಯಾಯಗಳೇನೂ ಬದಲಾಗುವುದಿಲ್ಲ. ಅದು ಮಾನವ ಎಸಗಿದ ಕೃತ್ಯಗಳಾಗಿರಬಹುದು ಅಥವಾ ಭೂಮಿ ತಾಯಿ ಮುನಿಸಿಕೊಂಡಿದ್ದರಿಂದ ಎರಗಿದ ವಿಕೋಪಗಳಾಗಿರಬಹುದು, 2023 ಜನರ ಪಾಲಿಗೆ ಸಂಕಷ್ಟ ಕಾಲವೇ ಆಗಿತ್ತು. 

ವರ್ಷದಿಂದ ನಡೆಯುತ್ತಿದ್ದ ರಷ್ಯಾ–ಉಕ್ರೇನ್‌ ಕದನ 2023ರಲ್ಲೂ ಮುಂದುವರಿಯಿತು. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ–ಅಮೆರಿಕದ ಸೇನಾಶಕ್ತಿ ಪ್ರದರ್ಶನ, ದಕ್ಷಿಣ ಕೊರಿಯಾದ ಅಣ್ವಸ್ತ್ರ ಪೈಪೋಟಿಗೆ ಆಗ್ನೇಯ ಏಷ್ಯಾ ಸಾಕ್ಷಿಯಾಗಿದೆ. ಪಶ್ಚಿಮ ಆಫ್ರಿಕಾದ ದೇಶಗಳು ಕ್ರೈಸ್ತ ಮತ್ತು ಇಸ್ಲಾಂ ಮೂಲಭೂತವಾದಿಗಳ ಸಶಸ್ತ್ರ ಸಂಘರ್ಷಕ್ಕೆ ಗುರಿಯಾಗಿದ್ದವು.

ಇನ್ನೇನು ವರ್ಷ ಮುಗಿಯಿತು ಎನ್ನುವ ಹೊತ್ತಿಗೆ ಪ್ಯಾಲೆಸ್ಟೀನ್‌ನ ಹಮಾಸ್‌ ಬಂಡುಕೋರರು ಇಸ್ರೇಲ್‌ನ ಮೇಲೆ ದಾಳಿ ನಡೆಸಿದ್ದರು. ಪ್ರತೀಕಾರವಾಗಿ ಇಸ್ರೇಲ್‌ ನಡೆಸಿದ ದಾಳಿಯು 2023 ಅನ್ನು ಇನ್ನಷ್ಟು ರಕ್ತಸಿಕ್ತವಾಗಿಸಿತು. ಭಾರತ, ಐರೋಪ್ಯ ದೇಶಗಳು ಮತ್ತು ಅಮೆರಿಕವು ಇಸ್ರೇಲ್‌ನ ಪ್ರತೀಕಾರವನ್ನು ಬೆಂಬಲಿಸಿದವು. ಆದರೆ ಇಸ್ರೇಲ್‌ನ ಯುದ್ಧದಾಹ ದಿನೇದಿನೇ ತೀವ್ರಗೊಂಡಿದ್ದನ್ನು ವಿಶ್ವ ಸಂಸ್ಥೆ ಖಂಡಿಸಿತು. ಇಸ್ರೇಲ್‌ ಅನ್ನು ಬೆಂಬಲಿಸಿದ ದೇಶಗಳೂ, ಅದರ ನಡೆಯನ್ನು ಖಂಡಿಸಿದವು. ಭಾರತವೂ ಇಸ್ರೇಲ್‌ ಅನ್ನು ಬೆಂಬಲಿಸುವ ನಿಲುವಿನಿಂದ ಹಿಂದೆ ಸರಿದು, ಪ್ಯಾಲೆಸ್ಟೀನ್‌–ಇಸ್ರೇಲ್‌ ಎಂಬ ಎರಡು ದೇಶಗಳ ಸೂತ್ರವನ್ನು ಮತ್ತೆ ಬೆಂಬಲಿಸಿತು. ಆದರೆ ಯುದ್ಧ ಮುಗಿದಿಲ್ಲ. ಗಾಜಾ ಪಟ್ಟಿಯಲ್ಲಿ ಪ್ರತಿದಿನ ನೆಲಕಚ್ಚುತ್ತಿರುವ ಕಟ್ಟಡಗಳ ಸಂಖ್ಯೆಯೇನೂ ಇಳಿದಿಲ್ಲ; ಅವುಗಳೊಂದಿಗೆ ಮಣ್ಣಾಗುತ್ತಿರುವ ಜೀವಗಳ ಸಂಖ್ಯೆಯೂ ಏರುಗತಿಯಲ್ಲೇಯೇ ಇದೆ. 

ಯುದ್ಧಗಳು ಜಗತ್ತಿನ ಪ್ರಮುಖ ದೇಶಗಳನ್ನು ಎರಡು ಬಣಗಳಾಗಿಸಿದವು. ಉಕ್ರೇನ್‌–ರಷ್ಯಾ ಕದನದಲ್ಲಿ ಐರೋಪ್ಯ ದೇಶಗಳು ಮತ್ತು ಅಮೆರಿಕವು ಉಕ್ರೇನ್‌ ಪರವಾಗಿ ನಿಂತಿವೆ. ರಷ್ಯಾ ಜೊತೆಗೆ ನಿಕಟ ಬಂಧ ಹೊಂದಿರುವ ದೇಶಗಳು ರಷ್ಯಾವನ್ನು ಬೆಂಬಲಿಸುತ್ತಿವೆ. ಪ್ಯಾಲೆಸ್ಟೀನ್‌–ಇಸ್ರೇಲ್‌ ಯುದ್ಧದಲ್ಲೂ ಹೀಗೇ ಆಗಿದೆ. ಯಹೂದ್ಯರ ಬಗ್ಗೆ ಒಲವು ಇರಿಸಿಕೊಂಡಿರುವ ಅಮೆರಿಕ ಮತ್ತು ಐರೋಪ್ಯ ದೇಶಗಳು ಇಸ್ರೇಲ್‌ ಪರ ಸಹಾನುಭೂತಿ ಹೊಂದಿದ್ದರೆ, ಮುಸ್ಲಿಂ ರಾಷ್ಟ್ರಗಳು ಪ್ಯಾಲೆಸ್ಟೀನ್‌ ಪರವಾಗಿ ನಿಂತಿವೆ. ಗಾಜಾದಲ್ಲಿ ಇಸ್ರೇಲ್‌ ಎಸಗಿದ ಯುದ್ಧಾಪರಾಧಗಳ ವಿರುದ್ಧ ಮಾತನಾಡದೇ ಇದ್ದುದಕ್ಕೆ ಬ್ರಿಟನ್‌ ಮತ್ತು ಅಮೆರಿಕದ ಪ್ರಜೆಗಳು ಅಲ್ಲಿನ ಸರ್ಕಾರಗಳನ್ನು ಖಂಡಿಸಿದ್ದರು. ಇನ್ನೂ ಕೆಲವು ದೇಶಗಳು ಮುಸ್ಲಿಮರ ದೇಶ ಎನ್ನುವ ಕಾರಣಕ್ಕೆ ಪ್ಯಾಲೆಸ್ಟೀನ್‌ನ ವಿರುದ್ಧವಾಗಿ ನಿಂತಿವೆ. 

ಯುದ್ಧಗಳದ್ದು ಒಂದು ಕತೆಯಾದರೆ ಜನಾಂಗೀಯ ಸಂಘರ್ಷಗಳದ್ದು ಇನ್ನೊಂದು ಕತೆ. ಮ್ಯಾನ್ಮಾರ್‌ನಲ್ಲಿ ಜನಾಂಗೀಯ ಅಲ್ಪಸಂಖ್ಯಾತ ರೊಹಿಂಗ್ಯಾ ಮುಸ್ಲಿಮರು ಮತ್ತು ಚಿನ್‌ ಜನರ ಮೇಲೆ ಅಲ್ಲಿನ ಸೇನೆಯು ಇದೇ ಏಪ್ರಿಲ್‌ನಲ್ಲಿ ದಾಳಿ ನಡೆಸಿತ್ತು. ಮಧ್ಯಪ್ರಾಚ್ಯದ ಸಿರಿಯಾ ಮತ್ತು ಸುಡಾನ್‌ನಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಮತ್ತು ಸರ್ಕಾರಗಳ ಮಧ್ಯೆ ಸಶಸ್ತ್ರ ಸಂಘರ್ಷ ನಡೆಯುತ್ತಲೇ ಇದೆ. ವರ್ಷದ ಕೊನೆಯಲ್ಲಿ ಅಮೆರಿಕದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿಯೂ ರಕ್ತ ಹರಿಯಿತು. 

ಇಸ್ರೇಲ್‌ ದಾಳಿಯಲ್ಲಿ ಗಾಯಗೊಂಡ ಪ್ಯಾಲೆಸ್ಟೀನ್‌ ತಾಯಿ–ಮಗಳು.
1500 ಹಮಾಸ್‌ನ ದಾಳಿಯಲ್ಲಿ ಮೃತಪಟ್ಟ ಇಸ್ರೇಲಿಗರ ಸಂಖ್ಯೆ
20000+ ಇಸ್ರೇಲ್‌ನ ದಾಳಿಯಲ್ಲಿ ಮೃತಪಟ್ಟ ಪ್ಯಾಲೆಸ್ಟೀನಿಯನ್ನರ ಸಂಖ್ಯೆ
ಇಸ್ರೇಲ್‌ ದಾಳಿಯಲ್ಲಿ ಗಾಯಗೊಂಡ ಪ್ಯಾಲೆಸ್ಟೀನ್‌ ತಾಯಿ–ಮಗಳು. 1500 ಹಮಾಸ್‌ನ ದಾಳಿಯಲ್ಲಿ ಮೃತಪಟ್ಟ ಇಸ್ರೇಲಿಗರ ಸಂಖ್ಯೆ 20000+ ಇಸ್ರೇಲ್‌ನ ದಾಳಿಯಲ್ಲಿ ಮೃತಪಟ್ಟ ಪ್ಯಾಲೆಸ್ಟೀನಿಯನ್ನರ ಸಂಖ್ಯೆ
ಮ್ಯಾನ್ಮಾರ್‌ನ ಆಗ್ನೇಯ ಪ್ರಾಂತದ ಹಳ್ಳಿಯೊಂದರ ಮೇಲೆ ಮ್ಯಾನ್ಮಾರ್‌ ಸೇನೆ ಇದೇ ಏಪ್ರಿಲ್‌ 11ರಂದು ನಡೆಸಿದ ವಾಯುದಾಳಿಯಲ್ಲಿ ಧ್ವಂಸವಾದ ವಸತಿ ಪ್ರದೇಶ. ಕಾರೆನ್‌ ಸಮುದಾಯದ ಜನರ ಮೇಲೆ ಬಹುಸಂಖ್ಯಾತ ಬಾಮರ್‌ ಜನರ ಸರ್ಕಾರ ದೌರ್ಜನ್ಯ ನಡೆಸುತ್ತಲೇ ಇದೆ. ಏಪ್ರಿಲ್‌ 11ರ ದಾಳಿಯಲ್ಲಿ 130 ಮಂದಿ ನಾಗರಿಕರು ಮೃತಪಟ್ಟಿದ್ದರು. ಆನಂತರ 10000ಕ್ಕೂ ಹೆಚ್ಚು ಕಾರೆನ್‌ ಜನರು ಥಾಯ್ಲೆಂಡ್‌ಗೆ ವಲಸೆ ಹೋಗಿದ್ದಾರೆ
ಮ್ಯಾನ್ಮಾರ್‌ನ ಆಗ್ನೇಯ ಪ್ರಾಂತದ ಹಳ್ಳಿಯೊಂದರ ಮೇಲೆ ಮ್ಯಾನ್ಮಾರ್‌ ಸೇನೆ ಇದೇ ಏಪ್ರಿಲ್‌ 11ರಂದು ನಡೆಸಿದ ವಾಯುದಾಳಿಯಲ್ಲಿ ಧ್ವಂಸವಾದ ವಸತಿ ಪ್ರದೇಶ. ಕಾರೆನ್‌ ಸಮುದಾಯದ ಜನರ ಮೇಲೆ ಬಹುಸಂಖ್ಯಾತ ಬಾಮರ್‌ ಜನರ ಸರ್ಕಾರ ದೌರ್ಜನ್ಯ ನಡೆಸುತ್ತಲೇ ಇದೆ. ಏಪ್ರಿಲ್‌ 11ರ ದಾಳಿಯಲ್ಲಿ 130 ಮಂದಿ ನಾಗರಿಕರು ಮೃತಪಟ್ಟಿದ್ದರು. ಆನಂತರ 10000ಕ್ಕೂ ಹೆಚ್ಚು ಕಾರೆನ್‌ ಜನರು ಥಾಯ್ಲೆಂಡ್‌ಗೆ ವಲಸೆ ಹೋಗಿದ್ದಾರೆ
ಉಕ್ರೇನ್‌ನಿಂದ ರಷ್ಯಾ ಹಿಮ್ಮೆಟ್ಟುತ್ತಿದೆಯಾದರೂ ಎಲ್ಲೆಡೆ ನೆಲಬಾಂಬ್‌ಗಳನ್ನು ಹುದುಗಿಸಿಟ್ಟಿದೆ. ರಷ್ಯಾ ದಾಳಿಯಿಂದ ಧ್ವಂಸವಾಗಿರುವ ಊರು/ಮನೆಗಳನ್ನು ಕಟ್ಟುವ ಕೆಲಸಕ್ಕೆ ಉಕ್ರೇನ್‌ ಮುಂದಾಗಿದೆ. ಹೀಗೆ ಧ್ವಂಸವಾದ ಪೂರ್ವ ಉಕ್ರೇನ್‌ನಲ್ಲಿನ ಶಾಲೆಯೊಂದರಲ್ಲಿ ಉಕ್ರೇನ್‌ ಸೈನಿಕ ಪಿಯಾನೊ ನುಡಿಸಿದ ಬಗೆ
ಉಕ್ರೇನ್‌ನಿಂದ ರಷ್ಯಾ ಹಿಮ್ಮೆಟ್ಟುತ್ತಿದೆಯಾದರೂ ಎಲ್ಲೆಡೆ ನೆಲಬಾಂಬ್‌ಗಳನ್ನು ಹುದುಗಿಸಿಟ್ಟಿದೆ. ರಷ್ಯಾ ದಾಳಿಯಿಂದ ಧ್ವಂಸವಾಗಿರುವ ಊರು/ಮನೆಗಳನ್ನು ಕಟ್ಟುವ ಕೆಲಸಕ್ಕೆ ಉಕ್ರೇನ್‌ ಮುಂದಾಗಿದೆ. ಹೀಗೆ ಧ್ವಂಸವಾದ ಪೂರ್ವ ಉಕ್ರೇನ್‌ನಲ್ಲಿನ ಶಾಲೆಯೊಂದರಲ್ಲಿ ಉಕ್ರೇನ್‌ ಸೈನಿಕ ಪಿಯಾನೊ ನುಡಿಸಿದ ಬಗೆ
ಅಫ್ಗಾನಿಸ್ತಾನದ 40 ಲಕ್ಷಕ್ಕೂ ಹೆಚ್ಚು ನಿರಾಶ್ರಿತರನ್ನು ಪಾಕಿಸ್ತಾನವು ಇದೇ ನವೆಂಬರ್‌ನಲ್ಲಿ ಹೊರಗಟ್ಟಿತ್ತು. ನಾಲ್ಕೈದು ದಶಕಗಳಿಂದ ಪಾಕಿಸ್ತಾನದಲ್ಲೇ ನೆಲೆಸಿದ್ದ ಈ ಜನರು ಈಗ ನಿರಾಶ್ರಿತರಾಗಿದ್ದಾರೆ. ಗಡಿ ದಾಟಿ ಬಂದ ಅವರನ್ನು ಅಫ್ಗಾನಿಸ್ತಾನದ ತಾಲಿಬಾನ್‌ ಸರ್ಕಾರವು ಗಡಿಯಲ್ಲೇ ಶಿಬಿರ ತೆರೆದು ನಿಲ್ಲಿಸಿದೆ
ಅಫ್ಗಾನಿಸ್ತಾನದ 40 ಲಕ್ಷಕ್ಕೂ ಹೆಚ್ಚು ನಿರಾಶ್ರಿತರನ್ನು ಪಾಕಿಸ್ತಾನವು ಇದೇ ನವೆಂಬರ್‌ನಲ್ಲಿ ಹೊರಗಟ್ಟಿತ್ತು. ನಾಲ್ಕೈದು ದಶಕಗಳಿಂದ ಪಾಕಿಸ್ತಾನದಲ್ಲೇ ನೆಲೆಸಿದ್ದ ಈ ಜನರು ಈಗ ನಿರಾಶ್ರಿತರಾಗಿದ್ದಾರೆ. ಗಡಿ ದಾಟಿ ಬಂದ ಅವರನ್ನು ಅಫ್ಗಾನಿಸ್ತಾನದ ತಾಲಿಬಾನ್‌ ಸರ್ಕಾರವು ಗಡಿಯಲ್ಲೇ ಶಿಬಿರ ತೆರೆದು ನಿಲ್ಲಿಸಿದೆ
ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಹಕ್ಕು ಪ್ರತಿಪಾದನೆಯನ್ನು ಬೇರೆಲ್ಲಾ ದೇಶಗಳು ವಿರೋಧಿಸುತ್ತಿವೆ. ಫಿಲಿಪ್ಪೀನ್ಸ್‌ ತೈವಾನ್‌ನ ಜಲಗಡಿಗಳಲ್ಲಿ ಚೀನಾ ಅಧಿಪತ್ಯ ಸ್ಥಾಪಿಸಿದೆ. ಇದೇ ನವೆಂಬರ್ ಡಿಸೆಂಬರ್‌ನಲ್ಲಿ ನೂರಾರು ಹಡಗುಗಳನ್ನು ಚೀನಾ ಇಲ್ಲಿ ತಂದು ಲಂಗರು ಹಾಕಿದೆ. ಡಿಸೆಂಬರ್ 10ರಂದು ತನ್ನೆದುರು ಬಂದ ಫಿಲಿಪ್ಪೀನ್ಸ್‌ನ ಸಣ್ಣ ಹಡಗೊಂದರ ಮೇಲೆ ಚೀನಾದ ಯುದ್ಧನೌಕೆಯು ಜಲಫಿರಂಗಿ ಪ್ರಯೋಗಿಸಿತ್ತು
ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಹಕ್ಕು ಪ್ರತಿಪಾದನೆಯನ್ನು ಬೇರೆಲ್ಲಾ ದೇಶಗಳು ವಿರೋಧಿಸುತ್ತಿವೆ. ಫಿಲಿಪ್ಪೀನ್ಸ್‌ ತೈವಾನ್‌ನ ಜಲಗಡಿಗಳಲ್ಲಿ ಚೀನಾ ಅಧಿಪತ್ಯ ಸ್ಥಾಪಿಸಿದೆ. ಇದೇ ನವೆಂಬರ್ ಡಿಸೆಂಬರ್‌ನಲ್ಲಿ ನೂರಾರು ಹಡಗುಗಳನ್ನು ಚೀನಾ ಇಲ್ಲಿ ತಂದು ಲಂಗರು ಹಾಕಿದೆ. ಡಿಸೆಂಬರ್ 10ರಂದು ತನ್ನೆದುರು ಬಂದ ಫಿಲಿಪ್ಪೀನ್ಸ್‌ನ ಸಣ್ಣ ಹಡಗೊಂದರ ಮೇಲೆ ಚೀನಾದ ಯುದ್ಧನೌಕೆಯು ಜಲಫಿರಂಗಿ ಪ್ರಯೋಗಿಸಿತ್ತು
ಅಮೆರಿಕದ ಕೊಲಂಬಿಯದಲ್ಲಿ ಡಿಸೆಂಬರ್ 11ರಂದು ನಡೆದಿದ್ದ ಗುಂಡಿನ ದಾಳಿಯಲ್ಲಿ ಮೃತಪಟ್ಟ 14ರ ಬಾಲಕಿಯ ತಾಯಿಯ ಆಕ್ರಂದನ. 2023ರಲ್ಲಿ ಅಮೆರಿಕದಾದ್ಯಂತ ಒಟ್ಟು 632 ‘ಮಾಸ್‌ ಶೂಟಿಂಗ್‌ಗಳು’ (ದಾಳಿಯಲ್ಲಿ ನಾಲ್ಕಕ್ಕಿಂತ ಹೆಚ್ಚು ಜನರು ಮೃತಪಟ್ಟರೆ ಅದನ್ನು ಹೀಗೆ ವರ್ಗೀಕರಿಸಲಾಗುತ್ತದೆ) ನಡೆದಿವೆ. ಈ ದಾಳಿಗಳಲ್ಲಿ 3000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ
ಅಮೆರಿಕದ ಕೊಲಂಬಿಯದಲ್ಲಿ ಡಿಸೆಂಬರ್ 11ರಂದು ನಡೆದಿದ್ದ ಗುಂಡಿನ ದಾಳಿಯಲ್ಲಿ ಮೃತಪಟ್ಟ 14ರ ಬಾಲಕಿಯ ತಾಯಿಯ ಆಕ್ರಂದನ. 2023ರಲ್ಲಿ ಅಮೆರಿಕದಾದ್ಯಂತ ಒಟ್ಟು 632 ‘ಮಾಸ್‌ ಶೂಟಿಂಗ್‌ಗಳು’ (ದಾಳಿಯಲ್ಲಿ ನಾಲ್ಕಕ್ಕಿಂತ ಹೆಚ್ಚು ಜನರು ಮೃತಪಟ್ಟರೆ ಅದನ್ನು ಹೀಗೆ ವರ್ಗೀಕರಿಸಲಾಗುತ್ತದೆ) ನಡೆದಿವೆ. ಈ ದಾಳಿಗಳಲ್ಲಿ 3000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ
ಅಮೆಜಾನ್‌ನ ಭೀಕರ ಬರದಲ್ಲಿ ಬತ್ತಿದ ಬ್ರೆಜಿಲ್‌ನ ಪುರಾಕ್ಯುಕ್ವಾರಾ ಸರೋವರದಲ್ಲಿ ನೆಲಕಚ್ಚಿ ನಿಂತ ದೋಣಿಗಳು
ಅಮೆಜಾನ್‌ನ ಭೀಕರ ಬರದಲ್ಲಿ ಬತ್ತಿದ ಬ್ರೆಜಿಲ್‌ನ ಪುರಾಕ್ಯುಕ್ವಾರಾ ಸರೋವರದಲ್ಲಿ ನೆಲಕಚ್ಚಿ ನಿಂತ ದೋಣಿಗಳು
ಟರ್ಕಿ: ರಿಕ್ಟರ್‌ ಮಾಪಕದಲ್ಲಿ 7.8ರಷ್ಟು ತೀವ್ರತೆ ದಾಖಲಾಗಿದ್ದ ಭೂಕಂಪದಲ್ಲಿ ಧ್ವಂಸವಾದ ಕಟ್ಟಡಗಳ ಮಧ್ಯೆ ನಡೆದು ಹೋದ ಸೈನಿಕ
ಟರ್ಕಿ: ರಿಕ್ಟರ್‌ ಮಾಪಕದಲ್ಲಿ 7.8ರಷ್ಟು ತೀವ್ರತೆ ದಾಖಲಾಗಿದ್ದ ಭೂಕಂಪದಲ್ಲಿ ಧ್ವಂಸವಾದ ಕಟ್ಟಡಗಳ ಮಧ್ಯೆ ನಡೆದು ಹೋದ ಸೈನಿಕ
ನೈರುತ್ಯ ಚೀನಾದ ಗ್ಯೂಜೋ ಪ್ರಾಂತದಲ್ಲಿ ಆಗಸ್ಟ್‌ 28ರಂದು ಸಂಭವಿಸಿದ್ದ ಭೂಕುಸಿತದ ಅವಶೇಷಗಳ ಅಡಿಯಲ್ಇ ಸಿಲುಕಿದ್ದವರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ಜುಲೈ ಮತ್ತು ಆಗಸ್ಟ್‌ನಲ್ಲಿ ಇಂತಹ 115 ಭೂಕುಸಿತಗಳಿಗೆ ಚೀನಾ ಸಾಕ್ಷಿಯಾಗಿತ್ತು
ನೈರುತ್ಯ ಚೀನಾದ ಗ್ಯೂಜೋ ಪ್ರಾಂತದಲ್ಲಿ ಆಗಸ್ಟ್‌ 28ರಂದು ಸಂಭವಿಸಿದ್ದ ಭೂಕುಸಿತದ ಅವಶೇಷಗಳ ಅಡಿಯಲ್ಇ ಸಿಲುಕಿದ್ದವರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ಜುಲೈ ಮತ್ತು ಆಗಸ್ಟ್‌ನಲ್ಲಿ ಇಂತಹ 115 ಭೂಕುಸಿತಗಳಿಗೆ ಚೀನಾ ಸಾಕ್ಷಿಯಾಗಿತ್ತು

ಪ್ರಕೃತಿ ವಿಕೋಪಗಳ ಬಿಸಿ

ಪ್ರಕೃತಿಯೂ ಈ ವರ್ಷ ಸ್ವಲ್ಪ ಹೆಚ್ಚೇ ಮುನಿಸಿಕೊಂಡಿದೆ. ಮಳೆ–ಪ್ರವಾಹ ತೀವ್ರ ಬರ ಕಾಳ್ಗಿಚ್ಚು ಭೂಕಂಪಗಳಿಗೆ ಜಗತ್ತಿನ ಬೇರೆ–ಬೇರೆ ಭಾಗಗಳು ಗುರಿಯಾಗಿವೆ. ಈ ಎಲ್ಲವೂ ಜನರ ಊಟ ಮನೆ ಮತ್ತು ನೆಮ್ಮದಿಯನ್ನು ಕಸಿದುಕೊಂಡಿದೆ. ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನವನ್ನು ನಿಯಂತ್ರಿಸುವ ಸಂಬಂಧ ಗುರಿ ನಿಗದಿಪಡಿಸಬೇಕಿದ್ದ ಹವಾಮಾನ ಶೃಂಗಸಭೆಯೂ ನಿರೀಕ್ಷಿತ ಫಲ ನೀಡಿಲ್ಲ. ದುಬೈನಲ್ಲಿ ಇದೇ ಡಿಸೆಂಬರ್‌ 1–2ರಂದು ನಡೆದ ಶೃಂಗಸಭೆಯಲ್ಲಿ ತಾಪಮಾನವನ್ನು ನಿಯಂತ್ರಿಸುವ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಸಂಬಂಧ ಎಲ್ಲಾ ದೇಶಗಳು ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ

  • ಉತ್ತರ ಮತ್ತು ದಕ್ಷಿಣ ಅಮೆರಿಕಗಳು ಒಂದೇ ವರ್ಷದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಸಾಕ್ಷಿಯಾಗಿವೆ. ಅಮೆರಿಕ ಮತ್ತು ಕೆನಡಕ್ಕೆ ಜೂನ್‌ನಿಂದ ನವೆಂಬರ್‌ ನಡುವೆ ಒಟ್ಟು 22 ಚಂಡಮಾರುತಗಳು ಅಪ್ಪಳಿಸಿವೆ. ಈ ಚಂಡಮಾರುತಗಳಿಗೆ ಸಿಲುಕಿ ಒಟ್ಟು 700ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರೆ 15 ಲಕ್ಷಕ್ಕೂ ಹೆಚ್ಚು ಜನರು ನೆಲೆ ಕಳೆದುಕೊಂಡಿದ್ದರು

  • ಅಮೆರಿಕದ ಹವಾಯಿ ದ್ವೀಪದಲ್ಲಿ ಪ್ರಕೃತಿ ಬೇರೊಂದು ರೀತಿಯ ಕೋಪ–ತಾಪ ತೋರಿತ್ತು. ಹವಾಯಿ ದ್ವೀಪದಲ್ಲಿ ಇದೇ ಆಗಸ್ಟ್‌ನಲ್ಲಿ ತಲೆದೋರಿದ ಕಾಳ್ಗಿಚ್ಚಿಗೆ ಹಲವು ನಗರಗಳು ಸಂಪೂರ್ಣ ಸುಟ್ಟುಹೋಗಿದ್ದವು. ದ್ವೀಪ ಸಮೂಹದ ಬೇರೆ ಬೇರೆ ಭಾಗಗಳಲ್ಲಿ ಕಾಳ್ಗಿಚ್ಚು ನವೆಂಬರ್ ಅಂತ್ಯದವರೆಗೂ ತಲೆದೋರುತ್ತಲೇ ಇದ್ದವು. ಹವಾಯಿಯ ಸುಂದರ ಕಡಲ ತೀರಗಳು ಸುಟ್ಟು ಕರಕಲಾದರೆ 2700ಕ್ಕೂ ಹೆಚ್ಚು ಮನೆಗಳು ಬೂದಿಯಾಗಿದ್ದವು. ಈ ದುರಂತಗಳಲ್ಲಿ 103 ಜನರು ಪ್ರಾಣ ಕಳೆದುಕೊಂಡಿದ್ದರು

  • ದಕ್ಷಿಣ ಅಮೆರಿಕದ ಖಂಡದ ಅಮೆಜಾನ್‌ ಜಲಾನಯನ ಪ್ರದೇಶದಲ್ಲಿ ತಲೆದೋರಿದ ಭೀಕರ ಬರದ ಕಾರಣದಿಂದ ಅಮೆಜಾನ್‌ ನದಿಯ ಪ್ರಮುಖ ಉಪನದಿಗಳು ಬತ್ತಿಹೋಗಿವೆ. ಅಲ್ಲಿನ ಮೀನುಗಾರಿಕೆ ಜಲಸಾರಿಗೆ ಸಂಪೂರ್ಣ ನೆಲಕಚ್ಚಿದೆ. ಲಕ್ಷಾಂತರ ಜನರು ಆಹಾರ ಅರಸಿ ಕಾಡುಪಾಲಾಗಿದ್ದಾರೆ. ಪೆರು ಚಿಲಿ ಬ್ರೆಜಿಲ್‌ ಕೊಲಂಬಿಯಾಗಳಲ್ಲಿ ಆಹಾರದ ಕೊರತೆ ಎದುರಾಗಿದೆ

  • * ಇದೇ ಫೆಬ್ರುವರಿ 6ರ ಬೆಳಿಗ್ಗೆ ಸುಖನಿದ್ರೆಯಲ್ಲಿದ್ದ ಟರ್ಕಿಯ ಸಾವಿರಾರು ಮಂದಿ ಮತ್ತೆ ಬೆಳಗನ್ನು ನೋಡಲೇ ಇಲ್ಲ. ಟರ್ಕಿ ಮತ್ತು ಸುಡಾನ್‌ನಲ್ಲಿ ಸಂಭವಿಸಿದ್ದ ತೀವ್ರ ಭೂಕಂಪದಲ್ಲಿ ಹಲವು ನಗರಗಳು ಗುಡ್ಡಗಾಡಿನ ಹಳ್ಳಿಗಳು ಸಂಪೂರ್ಣ ನೆಲಸಮವಾಗಿದ್ದವು. ಒಂದರ ಹಿಂದೆ ಒಂದರಂತೆ ಸಂಭವಿಸಿದ ಮರುಕಂಪನಗಳು ಸಾವು ನೋವನ್ನು ಹೆಚ್ಚಿಸಿದವು 50783 ಈ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 1.02 ಲಕ್ಷ ಗಾಯಾಳುಗಳ ಸಂಖ್ಯೆ 3.45 ಲಕ್ಷ ನೆಲಸಮವಾದ ಕಟ್ಟಡಗಳ ಸಂಖ್ಯೆ 1.57 ಕೋಟಿ ನಿರಾಶ್ರಿತರಾದವರ ಸಂಖ್ಯೆ

  • ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ತಲೆದೋರಿದ ಭೀಕರ ಬರವು 3 ಕೋಟಿಗೂ ಹೆಚ್ಚು ಜನರನ್ನು ಬಾಧಿಸಿದೆ. ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು ನೆಲಕಚ್ಚಿವೆ. ಆರ್ಥಿಕ ಹಿಂಜರಿತನ್ನು ನಿಭಾಯಿಸಲು ಒದ್ದಾಡುತ್ತಿರುವ ಹಂಗಾಮಿ ಸರ್ಕಾರವು ಬರದ ಪರಿಣಾಮಗಳನ್ನು ಎದುರಿಸಲು ವಿಶ್ವ ಸಂಸ್ಥೆಯತ್ತ ಕೈಚಾಚಿದೆ

  • ಈ ಹಿಂದಿನ 140 ವರ್ಷಗಳಲ್ಲೇ ಕಂಡಿರದಷ್ಟು ಮಳೆಗೆ ಬೀಜಿಂಗ್‌ 2023ರಲ್ಲಿ ಸಾಕ್ಷಿಯಾಗಿತ್ತು. ಬೀಜಿಂಗ್‌ ಮಾತ್ರವಲ್ಲ ಚೀನಾದ 16 ಪ್ರಮುಖ ಪ್ರಾಂತಗಳು ಈ ವರ್ಷ ಅತಿವೃಷ್ಟಿಗೆ ಗುರಿಯಾಗಿದ್ದವು. ಜುಲೈ–ಆಗಸ್ಟ್‌ ಮಧ್ಯೆ ಸುರಿದ ಭಾರಿ ಮಳೆಯು ಭಾರಿ ಪ್ರವಾಹಕ್ಕೆ ಕಾರಣವಾಗಿದ್ದವು. ದಕ್ಷಿಣ ಚೀನಾದ ಪ್ರಾಂತಗಳಲ್ಲಿ ಸಂಭವಿಸಿದ 115 ಭೂಕುಸಿತದ ಅವಘಡಗಳು ಸಾವಿರಾರು ಮಂದಿಯನ್ನು ನಿರಾಶ್ರಿತರನ್ನಾಗಿಸಿದ್ದವು

  • 2022ರಲ್ಲಿ ತೀವ್ರ ಕಾಳ್ಗಿಚ್ಚಿಗೆ ಗುರಿಯಾಗಿದ್ದ ಆಸ್ಟ್ರೇಲಿಯಾವು ಈ ವರ್ಷ ತೀವ್ರ ಮಳೆಯಲ್ಲಿ ತೋಯುತ್ತಿದೆ. ಪೂರ್ವ ಆಸ್ಟ್ರೇಲಿಯಾದಲ್ಲಿ ಡಿಸೆಂಬರ್ ಮೂರನೇ ವಾರದಲ್ಲಿ ಆರಂಭವಾದ ಮಳೆಯು ಹಲವು ರಾಜ್ಯಗಳಲ್ಲಿ ಪ್ರವಾಹವನ್ನು ತಂದೊಡ್ಡಿದೆ. ಈಶಾನ್ಯ ಮತ್ತು ಪೂರ್ವ ಭಾಗದ ನದಿಗಳು ಉಕ್ಕಿ ಹರಿಯುತ್ತಿವೆ. ಕೃಷಿ ಚಟುವಟಿಕೆಗಳಿಗೆ ಅಡಚಣೆಯಾಗಿದೆ. ಮಳೆ ಸಂಬಂಧಿ ಅವಘಡಗಳಲ್ಲಿ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ

ಈಶಾನ್ಯ ಆಸ್ಟ್ರೇಲಿಯಾದಲ್ಲಿನ ಅತಿವೃಷ್ಟಿಯು ಪ್ರವಾಹದ ಸ್ಥಿತಿ ತಂದಿದೆ. ಕೈರ್ನ್ಸ್‌ ವಿಮಾನ ನಿಲ್ದಾಣವು ಡಿಸೆಂಬರ್ 18ರಂದು ಜಲಾವೃತವಾಗಿತ್ತು. ಪ್ರವಾಹ ಸ್ಥಿತಿ ಈಗ ಇನ್ನೂ ಬಿಗಡಾಯಿಸಿದೆ
ಈಶಾನ್ಯ ಆಸ್ಟ್ರೇಲಿಯಾದಲ್ಲಿನ ಅತಿವೃಷ್ಟಿಯು ಪ್ರವಾಹದ ಸ್ಥಿತಿ ತಂದಿದೆ. ಕೈರ್ನ್ಸ್‌ ವಿಮಾನ ನಿಲ್ದಾಣವು ಡಿಸೆಂಬರ್ 18ರಂದು ಜಲಾವೃತವಾಗಿತ್ತು. ಪ್ರವಾಹ ಸ್ಥಿತಿ ಈಗ ಇನ್ನೂ ಬಿಗಡಾಯಿಸಿದೆ

ತಡಬಡಾಯಿಸಿದ ಆರ್ಥಿಕತೆ

ವಿಶ್ವದ ಆರ್ಥಿಕತೆಯೂ ವರ್ಷಾರಂಭದಿಂದ ನಿಧಾನಗತಿಯಲ್ಲೇ ಇತ್ತು. ಕೋವಿಡ್‌ನಿಂದ ಚೇತರಿಸಿಕೊಂಡಂತೆ ಕಂಡರೂ ಬದಲಾದ ಜಾಗತಿಕ ಸನ್ನಿವೇಶದಲ್ಲಿ ಬಹುದೊಡ್ಡ ಆರ್ಥಿಕತೆಗಳೂ ಹಿಂಜರಿತಕ್ಕೆ ಗುರಿಯಾದವು. ಮೊದಲಿಗೆ ಬ್ರಿಟನ್‌ನಲ್ಲಿ ತಲೆದೋರಿದ ಆರ್ಥಿಕ ಬಿಕ್ಕಟ್ಟು ನಂತರ ಯೂರೋಪ್‌ನಾದ್ಯಂತ ವ್ಯಾಪಿಸಿತು. ಇಂಧನದ ಬಿಕ್ಕಟ್ಟು ಮತ್ತು ದುಬಾರಿ ಇಂಧನದ ಕಾರಣಕ್ಕೆ ಅಲ್ಲಿನ ಕೈಗಾರಿಕೆಗಳ ಲಾಭಾಂಶ ಕುಸಿಯಿತು. ಇದರೊಂದಿಗೆ ವಿಶ್ವದ ಬೇರೆಡೆ ತಲೆದೋರಿದ್ದ ಹಣಕಾಸು ಬಿಕ್ಕಟ್ಟು ಜಾಗತಿಕ ಮಟ್ಟದಲ್ಲಿ ಎಲ್ಲಾ ಸ್ವರೂಪದ ಬೇಡಿಕೆ ಕುಸಿಯಲು ಕಾರಣವಾಯಿತು. ಚೀನಾ ಮತ್ತು ಭಾರತವೂ ಸೇರಿ ಬಹುತೇಕ ದೇಶಗಳ ರಫ್ತು ಮತ್ತು ಆಮದು ಭಾರಿ ಪ್ರಮಾಣದಲ್ಲಿ ಕುಸಿಯಿತು. 2022ರ ಹೋಲಿಕೆಯಲ್ಲಿ 2023ರ ಒಟ್ಟು ಜಾಗತಿಕ ರಫ್ತು ಗಾತ್ರ ಶೇ 20ಕ್ಕಿಂತಲೂ ಹೆಚ್ಚು ಕುಸಿಯಿತು. ಕುಂಠಿತ ಆರ್ಥಿಕತೆಯ ಕಾರಣದಿಂದ ಜಾಗತಿಕ ಟೆಕ್‌ ದೈತ್ಯ ಕಂಪನಿಗಳು ಸಾವಿರಾರು ನೌಕರರನ್ನು ಈ ವರ್ಷವೂ ಕೆಲಸದಿಂದ ತೆಗೆದುಹಾಕಿದವು. ಮೇಲ್ನೋಟಕ್ಕೆ ಸ್ಥಿರವಾಗಿದ್ದಂತೆ ಕಾಣುತ್ತಿದ್ದ ಅಮೆರಿಕವು ತೀವ್ರ ಹಣದುಬ್ಬರಕ್ಕೆ ಗುರಿಯಾಯಿತು. ಅದರ ತೀವ್ರತೆ ಗೊತ್ತಾಗಿದ್ದೇ ಮಾರ್ಚ್‌ ಎರಡನೇ ವಾರದಲ್ಲಿ ‘ಸಿಲಿಕಾನ್‌ ವ್ಯಾಲಿ ಬ್ಯಾಂಕ್‌–ಎಸ್‌ವಿಬಿ’ ದಿವಾಳಿ ಎಂದು ಘೋಷಿಸಿಕೊಂಡಾಗ.  ಕುಸಿಯುತ್ತಿದ್ದ ತನ್ನ ಆರ್ಥಿಕತೆಯನ್ನು ಉಳಿಸಿಕೊಳ್ಳಲು ಅಮೆರಿಕವು ಬಡ್ಡಿದರ ಬಾಂಡ್‌ಗಳ ಮೇಲಿನ ಬಡ್ಡಿಯನ್ನು ಏರಿಕೆ ಮಾಡಿತು. ವಿಶ್ವದ ಬೇರೆ ಬೇರೆ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಿದ್ದ ಅಮೆರಿಕನ್ನರು ಮತ್ತು ಸಾಂಸ್ಥಿಕ ಹೂಡಿಕೆದಾರು ಬಾಂಡ್‌ ಮಾರುಕಟ್ಟೆಯಲ್ಲಿ ಬಂಡವಾಳ ತೊಡಗಿಸಿದರು. ಇದರಿಂದ ಅಮೆರಿಕದ ಆರ್ಥಿಕತೆ ಸ್ಥಿರತೆಗೆ ಬಂದರೆ ವಿಶ್ವದ ಬಹುತೇಕ ಷೇರುಮಾರುಕಟ್ಟೆಗಳಲ್ಲಿ ವಿದೇಶಿ ಹೂಡಿಕೆ ನೆಲಕಚ್ಚಿತು. ಭಾರತದ ಷೇರುಮಾರುಕಟ್ಟೆಗಳೂ ಇದಕ್ಕೆ ಹೊರತಲ್ಲ. ಈ ಪರಿಸ್ಥಿತಿ ಈಗಲೂ ಬದಲಾಗಿಲ್ಲ.

ಹಳಸಿದ ಕೆನಡ– ಭಾರತ ಸಂಬಂಧ

ಭಾರತ ಮತ್ತು ಕೆನಡ ನಡುವಣ ಬಿಕ್ಕಟ್ಟು ಈ ವರ್ಷದ ಜಾಗತಿಕ ರಾಜಕೀಯ ಬೆಳವಣಿಗೆಗಳಲ್ಲಿ ಪ್ರಮುಖವಾದುದು. ಖಾಲಿಸ್ತಾನ ಪ್ರತ್ಯೇಕತಾವಾದಿ ಉಗ್ರ ಹರದೀಪ್‌ ಸಿಂಗ್‌ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಇದೇ ಸೆಪ್ಟೆಂಬರ್‌ನಲ್ಲಿ ಕೆನಡ ಆರೋಪಿಸಿತ್ತು. ಇದನ್ನು ನಿರಾಕರಿಸಿದ್ದ ಭಾರತವು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಭಾರತದಲ್ಲಿ ಇದೇ ಸೆಪ್ಟೆಂಬರ್‌ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲೂ ಇದು ಪ್ರತಿಬಿಂಬಿತವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಬೇರೆಲ್ಲಾ ಜಿ20 ನಾಯಕರ ಜತೆ ಮಾತುಕತೆ ನಡೆಸಿದ್ದರೂ ಕೆನಡ ಪ್ರಧಾನಿ ಜಸ್ಟಿನ್‌ ಟ್ರುಡೊ ಜತೆಗೆ ಸಭೆ ನಡೆಸಲಿಲ್ಲ. ಶೃಂಗಸಭೆಯ ನಂತರ ಟ್ರುಡೊ ಅವರದ್ದೇ ವಿಮಾನ ಕೆಟ್ಟುನಿಂತಿತ್ತು. ಬೇರೆ ವಿಮಾನ ಒದಗಿಸುತ್ತೇವೆ ಎಂದು ಭಾರತ ನೀಡಿದ್ದ ಆಹ್ವಾನವನ್ನು ಅವರು ತಿರಸ್ಕರಿಸಿದ್ದರು. ಆನಂತರ ಎರಡೂ ದೇಶಗಳ ಸಂಬಂಧ ತೀವ್ರ ಬಿಗಡಾಯಿಸಿತ್ತು. ಎರಡೂ ದೇಶಗಳು ರಾಜತಾಂತ್ರಿಕ ಅಧಿಕಾರಿಗಳನ್ನು ಕರೆದು ಛೀಮಾರಿ ಹಾಕುವ ಮತ್ತು ಅಧಿಕಾರಿಗಳನ್ನು ವಾಪಸ್‌ ಕರೆಸಿಕೊಳ್ಳುವಷ್ಟು ಸಂಬಂಧ ಹದಗೆಟ್ಟಿತು. ಈ ಬಿಕ್ಕಟ್ಟಿನಲ್ಲಿ ಅಮೆರಿಕ ಮತ್ತು ಬ್ರಿಟನ್‌ ಕೆನಡ ಪರವಾಗಿ ನಿಂತವು. ಈಗ ಗುರುಪತ್ವಂತ್ ಸಿಂಗ್‌ ಪನ್ನೂ ಹತ್ಯೆಗೆ ಭಾರತ ಸಂಚು ನಡೆಸಿತ್ತು ಎಂದೂ ಕೆನಡ ಆರೋಪಿಸಿದೆ. ಎರಡೂ ದೇಶಗಳ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಹಳಸಿದೆ.

ಅಗಲಿದ ಗಣ್ಯರು

ಹೆನ್ರಿ ಕಿಸಿಂಜರ್ ನಿಧನ: 29ನೇ ನವೆಂಬರ್ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಇವರು 2ನೇ ವಿಶ್ವ ಯುದ್ಧೋತರ ಕಾಲದಲ್ಲಿ ಅಮೆರಿಕದ ವಿದೇಶಾಂಗ ನೀತಿಯನ್ನು ರೂಪಿಸಿದ ರಾಜತಾಂತ್ರಿಕ

ಶೇಖ್ ನವಾಫ್‌ ನಿಧನ: 16ನೇ ಡಿಸೆಂಬರ್ ಕುವೈತ್ ದೊರೆ

ಪರ್ವೇಜ್‌ ಮುಷರಫ್‌ ನಿಧನ: 5ನೇ ಫೆಬ್ರುವರಿ ಪಾಕಿಸ್ತಾನದ ಮಾಜಿ ಅಧ್ಯಕ್ಷ

ನೊಬೆಲ್‌ ಶಾಂತಿ ಪುರಸ್ಕಾರ

ಈ ಬಾರಿಯ ನೊಬೆಲ್ ಶಾಂತಿ ಪುರಸ್ಕಾರ ದೊರೆತಿದ್ದು ಇರಾನಿನ ಮಾನವ ಹಕ್ಕುಗಳ ಹೋರಾಟಗಾರ್ತಿ ನರ್ಗೀಸ್ ಮೊಹಮ್ಮದಿ (51) ಅವರಿಗೆ. ಹಿಜಾಬ್‌ ಹೇರಿಕೆ ಮತ್ತು ಮಹಿಳೆಯರು ಕೂದಲು ಬಿಡುವುದಕ್ಕೆ ವಿಧಿಸಿದ್ದ ನಿಷೇಧದ ವಿರುದ್ಧ ನಡೆದ ಹೋರಾಟದಲ್ಲಿ ಹಲವು ಯುವತಿಯರನ್ನು ಸರ್ಕಾರ ಪರವಾದ ಸಂಪ್ರದಾಯವಾದಿಗಳು ಹತ್ಯೆ ಮಾಡಿದ್ದರು. ಪೊಲೀಸರ ದೌರ್ಜನ್ಯಕ್ಕೂ ಕೆಲವು ಯುವತಿಯರು ಬಲಿಯಾಗಿದ್ದರು. ಈ ಎಲ್ಲಾ ದೌರ್ಜನ್ಯಗಳ ವಿರುದ್ಧ ದನಿ ಎತ್ತಿದ್ದ ನರ್ಗೀಸ್ ಅವರನ್ನು ಇರಾನ್‌ ಸರ್ಕಾರ ಜೈಲಿಗಟ್ಟಿದೆ. ಕಾಲೇಜು ದಿನಗಳಿಂದ ಇಂತಹ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು 31 ವರ್ಷಗಳಲ್ಲಿ ಒಟ್ಟು 13 ಬಾರಿ ಜೈಲಿಗೆ ಹೋಗಿದ್ದಾರೆ. ಇದೇ ಡಿಸೆಂಬರ್ 10ರಂದು ನಾರ್ವೆಯ ಓಸ್ಲೊ ನಗರದಲ್ಲಿ ನಡೆದ ಸಮಾರಂಭದಲ್ಲಿ ನೊಬೆಲ್‌ ಪುರಸ್ಕಾರಗಳನ್ನು ಪ್ರಧಾನ ಮಾಡಲಾಗಿತ್ತು. ಸೆರೆಯಲ್ಲಿದ್ದ ಕಾರಣಕ್ಕೆ ನರ್ಗೀಸ್‌ ಅವರು ಪುರಸ್ಕಾರವನ್ನು ಸ್ವೀಕರಿಸಲಾಗಲಿಲ್ಲ. ಬದಲಿಗೆ ಅವರ ಮಕ್ಕಳು ಪುರಸ್ಕಾರವನ್ನು ಸ್ವೀಕರಿಸಿದರು. ನೊಬೆಲ್‌ ಪುರಸ್ಕೃತರ ಸಾಲಿನಲ್ಲಿದ್ದ ಕುರ್ಚಿಯಲ್ಲೇ ನೊಬೆಲ್‌ ಪದಕ ಪ್ರಶಂಸನಾ ಪತ್ರವನ್ನು ಇರಿಸಿ ನರ್ಗೀಸ್ ಅವರ ಹೋರಾಟವನ್ನು ಬೆಂಬಲಿಸಲಾಯಿತು.

ಆಧಾರ: ರಾಯಿಟರ್ಸ್‌, ಎಎಫ್‌ಪಿ, ಪಿಟಿಐ, ಬಿಬಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT