ಅದು ಒಂದು ಹಳವಂಡ. ಸುಂದರ ಕನಸಿನಂಥ ಒಂದು ಘಟನೆ. 1996ನೇ ಇಸವಿ, ಲೋಕಸಭೆ ಚುನಾವಣೆ ಕಾಲ. ರಾಜ್ಯದಲ್ಲಿ ದಾಖಲೆ ಎನ್ನುವಂತೆ ಜನತಾದಳದ ಹದಿನಾರು ಮಂದಿ ಸಂಸದರು ಆಯ್ಕೆಯಾಗಿಬಿಟ್ಟರು. ಆಗ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದ ಎಚ್.ಡಿ.ದೇವೇಗೌಡರು ದೇಶದ ಪ್ರಧಾನಿ ಆಗಿಬಿಟ್ಟರು. ಇವೆಲ್ಲ ನ ಭೂತೋ ನ ಭವಿಷ್ಯತಿ ಎನ್ನುವಂಥ ವಿದ್ಯಮಾನಗಳು. ಆದರೆ, ಅಂಥ ವಿದ್ಯಮಾನಗಳೇ ಮತ್ತೆ ಮತ್ತೆ ಘಟಿಸಬೇಕು ಎಂದು ಬಯಸುವುದು ಮನುಷ್ಯ ಸಹಜ ಸ್ವಭಾವ.

ಈಗ ಮತ್ತೆ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಬಂದು ನಿಂತಿದೆ. ಜೆ.ಡಿ.(ಎಸ್) ಪಕ್ಷಕ್ಕೆ ಮತ್ತೆ ಅದೇ ಕನಸು. 16 ರಿಂದ 18 ಸೀಟು ಗೆಲ್ಲಬೇಕು; ದೇವೇಗೌಡರು ಪ್ರಧಾನಿ ಆಗಬೇಕು. ಈಗೇಕೆ, ಈಚೆಗಷ್ಟೇ ನಡೆದ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭೆ ಚುನಾವಣೆಯಲ್ಲಿಯೂ ಇದೇ ಮಾತು ಕೇಳಿ ಬಂದಿತ್ತು. ಇತಿಹಾಸ ಮರುಕಳಿಸುತ್ತದೆ. ಆದರೆ, ನಮಗೆ ಬೇಕಾದ ಹಾಗೆ ಮರುಕಳಿಸುವುದಿಲ್ಲ. ಜೆ.ಡಿ (ಎಸ್) ಪಕ್ಷಕ್ಕೆ ಇದು ಸಂಕಟದ ಸಮಯ. ಅದರ ಅಸ್ತಿತ್ವದ ಮುಂದೆ ಒಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಎದ್ದು ನಿಂತಿದೆ. ಎಲ್ಲರೂ ರಾಜಕೀಯ ಮಾಡುವುದು ಅಧಿಕಾರಕ್ಕಾಗಿ. ಆದರೆ, ಜೆ.ಡಿ (ಎಸ್)ನಲ್ಲಿ ಇದ್ದರೆ ಸರ್ಕಾರ ರಚಿಸುವುದು ಸಾಧ್ಯವಿಲ್ಲ ಎಂಬುದು ಈಗ ಗೋಡೆ ಮೇಲಿನ ಬರಹ. ಕಳೆದ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಎಚ್.ಡಿ.ಕುಮಾರಸ್ವಾಮಿ ಅವರು ಮತದಾರರ ವಿರುದ್ಧ ವ್ಯಕ್ತಪಡಿಸಿದ ಉಗ್ರ ಟೀಕೆಯಲ್ಲಿ ಇದ್ದ ಹತಾಶೆಯೇ ಅದಕ್ಕೆ ನಿದರ್ಶನ.

ಆ ಪಕ್ಷದ ಮುಂದೆ ಈಗ ಹೆಚ್ಚು ಆಯ್ಕೆಗಳು ಇಲ್ಲ. ರಾಜ್ಯದ ಎರಡೂ ಪ್ರಮುಖ ಪಕ್ಷಗಳ ಜತೆಗೆ ಅದು ಹೋಗುವಂತೆ ಇಲ್ಲ. ಅಂದರೆ ಮೂರನೇ ಆಟಗಾರನಾಗಿಯೇ ಅದು ಉಳಿಯಬೇಕಾಗುತ್ತದೆ. ಈಗ ಆದ ಹಾಗೆ ಅಧಿಕೃತ ವಿರೋಧ ಪಕ್ಷವಾಗಿ ಉಳಿಯುವುದೂ ಕಷ್ಟ ಎನ್ನುವಂಥ ಸನ್ನಿವೇಶವನ್ನು ಅದು ಎದುರಿಸುತ್ತಿದೆ. ಹೀಗೆ ತುಂಡು ಗುಂಪಿನಂಥ ಪಕ್ಷಗಳನ್ನು ಬಹಳ ಕಾಲ ಉಳಿಸಿಕೊಳ್ಳುವುದು ಅದರ ನಾಯಕರಿಗೆ ಕಷ್ಟ. ಎಐಪಿಜೆಡಿ ಎಂಬ ಒಂದು ಪಕ್ಷವನ್ನು ಕಾಂಗ್ರೆಸ್ ಪಕ್ಷ ಇಡಿಯಾಗಿ ನುಂಗಿ ನೊಣೆದುದು ಕಳೆದ ದಶಕದಲ್ಲಿಯಷ್ಟೇ ಘಟಿಸಿದ ಇತಿಹಾಸ. ಈಗಿನ ಉಗ್ರ ಕಾಂಗ್ರೆಸ್ಸಿಗರಾಗಿರುವ ರಮೇಶ್ಕುಮಾರ್ ಆ ಪಕ್ಷದಿಂದಲೇ ಕಾಂಗ್ರೆಸ್ಸಿಗೆ ಸೇರಿದವರು.

ಈಗಲೂ, ಜೆ.ಡಿ (ಎಸ್)ನಲ್ಲಿ ಇರುವ ಕೆಲವರಾದರೂ ಕಾಂಗ್ರೆಸ್ ಬಾಗಿಲು ತಟ್ಟುತ್ತಿರುವ ಸುದ್ದಿ ಅಧಿವೇಶನದಲ್ಲಿಯೇ ಬಯಲಾಗಿರುವುದರಿಂದ ಮುಂಬರುವ ಲೋಕಸಭೆ ಚುನಾವಣೆ ವೇಳೆಗೆ ಯಾರು ಎಲ್ಲಿ ಇರುತ್ತಾರೆ ಎಂದು ಹೇಳುವುದು ಕಷ್ಟ. ಕುಣಿದಾಡುವ ‘ಕಪ್ಪೆ’ಗಳನ್ನು ಎಚ್.ಡಿ. ಕುಮಾರಸ್ವಾಮಿ ಎಷ್ಟೆಂದು ನಿಯಂತ್ರಿಸಿ ಹಿಡಿದು ಇಟ್ಟುಕೊಳ್ಳಲು ಸಾಧ್ಯ?ನಿಜ, ರಾಷ್ಟ್ರಮಟ್ಟದಲ್ಲಿ ಇದು ಸಮ್ಮಿಶ್ರ ಸರ್ಕಾರದ ಕಾಲ. ನೂರು ಇನ್ನೂರು ಬಿಡಿ, ಹತ್ತಿಪ್ಪತ್ತು ಸಂಸದರನ್ನು ಆರಿಸಿ ಕಳಿಸುವ ಪಕ್ಷಗಳೇ ಪ್ರಧಾನಿ ಹುದ್ದೆ ಮೇಲೆ ಕಣ್ಣು ಇಟ್ಟಿವೆ. ನರೇಂದ್ರ ಮೋದಿ ಅವರ ನಿಕಟವರ್ತಿ ಎಂದೇ ಹೇಳಲಾಗುತ್ತಿದ್ದ ಜಯಲಲಿತಾ, ತಮಿಳು ನಾಡಿನಲ್ಲಿ ಒಂದೂ ಸೀಟು ಗೆಲ್ಲಲಾಗದ ಎಡ ಪಕ್ಷಗಳ ಜತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ! ಬಿಹಾರದಲ್ಲಿ ನಿತಿಶ್ ಅವರಿಗೂ ಅದೇ ದೆಹಲಿ ರಾಣಿಯ ಕನಸು. ಮೇಲೆ ಪಶ್ಚಿಮ ಬಂಗಾಲದಲ್ಲಿ, ಕೆಳಗೆ ಒಡಿಶಾದಲ್ಲಿ... ಪ್ರಧಾನಿ ಹುದ್ದೆಯ ಕನಸು ಕಾಣುವವರು ಈಗ ಎಷ್ಟು ಮಂದಿ?

ದೇವೇಗೌಡರು ಅಥವಾ ಅವರ ಪಕ್ಷದವರೂ ಇದೇ ಮಾತು ಹೇಳುತ್ತಿದ್ದಾರೆ. ನಮ್ಮ ಪಕ್ಷದಿಂದಲೂ ಮತ್ತೆ 16–18 ಮಂದಿ ಗೆಲ್ಲುವುದಾದರೆ ನಾವೂ ದೆಹಲಿ ಕುರ್ಚಿ ಮೇಲೆ ಏಕೆ ಕುಳಿತುಕೊಳ್ಳಬಾರದು? ಕುಳಿತುಕೊಂಡ ನಂತರ ಕರ್ನಾಟಕಕ್ಕೆ ಏನೆಲ್ಲ ಮಾಡಬಹುದು ಎಂಬುದು ಭರವಸೆಗಳ ಜಗತ್ತು. ಆದರೆ, 1996ರಲ್ಲಿ ಇದ್ದ ಜನತಾದಳಕ್ಕೂ ಈಗ ಇರುವ ಜನತಾದಳ (ಎಸ್)ಗೂ ಯಾವ ಸಂಬಂಧವೂ ಇಲ್ಲ. ಆಗ ರಾಮಕೃಷ್ಣ ಹೆಗಡೆ ಪಕ್ಷದಲ್ಲಿ ಇದ್ದರು. ಜೆ.ಎಚ್.ಪಟೇಲರು ಇದ್ದರು. ಎಸ್.ಆರ್.ಬೊಮ್ಮಾಯಿ ಇದ್ದರು. ಸಿದ್ದರಾಮಯ್ಯ ಇದ್ದರು. ಎಂ.ಪಿ.ಪ್ರಕಾಶ್ ಇದ್ದರು. ಈಗ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಇರುವ ಅನೇಕ ನಾಯಕರು ಆಗ ಜನತಾದಳದಲ್ಲಿ ಇದ್ದರು. 1996ರ ನಂತರ ದೆಹಲಿ ತಟದ ಯಮುನಾ ನದಿಯಲ್ಲಿ ಹರಿದು ಹೋದ ನೀರಿಗೆ ಲೆಕ್ಕವಿಲ್ಲ. ಈಗ ಜೆ.ಡಿ (ಎಸ್) ಅಪ್ಪ ಮಕ್ಕಳ ಪಕ್ಷವಲ್ಲ ಎಂದು ದೇವೇಗೌಡರು ತಾವಾಗಿಯೇ ಮತ್ತೆ ಮತ್ತೆ ಹೇಳುತ್ತಿದ್ದಾರೆ! ಆ ಎಲ್ಲ ನಾಯಕರು ಬೇರೆ ಪಕ್ಷಗಳನ್ನು ತಬ್ಬಿಕೊಳ್ಳಲು ಯಾರು ಕಾರಣ? ದೇವೇಗೌಡರಿಗೆ ತಮ್ಮ ಪಕ್ಷದ ದೌರ್ಬಲ್ಯ ಗೊತ್ತಿಲ್ಲ ಎಂದು ಅಲ್ಲ. ಜನತಾದಳ ಎಂಬುದು ಮೂಲತಃ ಒಂದು ಪಾಳೆಗಾರರ ಪಕ್ಷ. ಅಲ್ಲಿ ಲಿಂಗಾಯತ ಪಾಳೆಗಾರರು ಮತ್ತು ಒಕ್ಕಲಿಗ ಪಾಳೆಗಾರರದೇ ದರ್ಬಾರು. ಇದು ಮೂಲತಃ ಸಂಸ್ಥಾ ಕಾಂಗ್ರೆಸ್ ಪಕ್ಷ. ಇಂದಿರಾ ಗಾಂಧಿ ಅವರ ವಿರೋಧಕ್ಕಾಗಿ ಹುಟ್ಟಿಕೊಂಡ ಪಕ್ಷ. ತುರ್ತು ಸ್ಥಿತಿ ಸಮಯದಲ್ಲಿ ಜಯಪ್ರಕಾಶ ನಾರಾಯಣ ಅವರ ಸಮಗ್ರ ಕ್ರಾಂತಿ ಹೋರಾಟದಿಂದಾಗಿ ಈ ಪಾಳೆಗಾರರ ಪಕ್ಷದಲ್ಲಿ ಸಮಾಜವಾದಿಗಳೂ ಸೇರಿಕೊಂಡರು! ಅದು ಇತಿಹಾಸದ ಒಂದು ವ್ಯಂಗ್ಯ.

ಒಂದು ಸಾರಿ ಸಮಾಜವಾದಿಗಳು ಈ ಪಕ್ಷದಲ್ಲಿ ಸೇರಿಕೊಂಡ ಮೇಲೆ ಅದಕ್ಕೆ ಒಂದು ರೀತಿಯ ಅಮಿಬಾ ಗುಣ ಅಂಟಿಕೊಂಡಿತು. ಪಕ್ಷ ಮತ್ತೆ ಮತ್ತೆ ಒಡೆದು ಹೋಳಾಗುವುದು ಅದರ ಗುಣ ಎನ್ನುವಂತೆ ಆಯಿತು. ಕಚ್ಚಾಡುವುದು, ಕೈಯಾರೆ ಸರ್ಕಾರಗಳನ್ನು ಕಳೆದುಕೊಳ್ಳುವುದು ಕೂಡ ಅದರ ಗುಣ ಎನ್ನುವಂತೆ ಆಯಿತು. ದೇವೇಗೌಡರು ಪ್ರಧಾನಿ ಆದ ಕೂಡಲೇ ತಮ್ಮ ಬಹುಕಾಲದ ನಿಕಟವರ್ತಿ ರಾಮಕೃಷ್ಣ ಹೆಗಡೆಯವರನ್ನು ಪಕ್ಷದಿಂದ ಉಚ್ಚಾಟಿಸಿದರು. ಆದರೆ, ಆ ನಿರ್ಧಾರ ತಮ್ಮದಲ್ಲ, ಪಕ್ಷದ ಆಗಿನ ಅಧ್ಯಕ್ಷರಾಗಿದ್ದ ಲಾಲು ಪ್ರಸಾದ್ ಅವರದ್ದು ಎಂದು ಹೊಣೆ ವರ್ಗಾಯಿಸಿದರು. ಜೆ.ಡಿ (ಎಸ್)ನ ಈಗಿನ ಸ್ಥಿತಿಗೆ ಆಗ ದೇವೇಗೌಡರು ಹೆಗಡೆಯವರ ವಿರುದ್ಧ ತೆಗೆದುಕೊಂಡ ಕ್ರಮ ಕಾರಣ. ಮುಂದೆ, ಹೆಗಡೆಯವರ ಅನುಯಾಯಿಗಳಿಗೆ ದೇವೇಗೌಡರ ನೆರಳು ಕಂಡರೆ ಆಗದಂತೆ ಆಯಿತು. ಜನತಾದಳದ ಶಕ್ತಿ ಅರ್ಧದಷ್ಟು ಕುಂದಿ ಹೋಯಿತು. 1999ರ ನಂತರ ಆ ಪಕ್ಷಕ್ಕೆ ಸ್ವತಂತ್ರವಾಗಿ ಅಧಿಕಾರ ಹಿಡಿಯಲು ಆಗಿಲ್ಲ. ಮುಂದೆಯೂ ಅದು ಒಂದು ಕನಸು.

ಜನತಾದಳ (ಎಸ್) ತೃತೀಯ ರಂಗದ ಮಾತು ಏಕೆ ಆಡುತ್ತಿದೆ ಎಂಬುದಕ್ಕೆ ಇದೇ ಕಾರಣ. ದೇವೇಗೌಡರ ಕಷ್ಟಗಳು ಒಂದೆರಡಲ್ಲ. ಅವರು ತಮ್ಮ ಪಕ್ಷವನ್ನು ಇಡಿಯಾಗಿ ಉಳಿಸಿಕೊಳ್ಳಬೇಕು. ಆದರೆ, ಅಧಿಕಾರ ಸಿಗುವುದಿಲ್ಲ ಎಂಬ ಪಕ್ಷದಲ್ಲಿ ಯಾರು ಉಳಿಯುತ್ತಾರೆ? ಲೋಕಸಭೆಗೆ ಒಬ್ಬರು ಇಬ್ಬರನ್ನು ಆರಿಸಿ ಕಳಿಸುವ ಪಕ್ಷವನ್ನು ನುಂಗಿ ನೊಣೆಯಲು ದೊಡ್ಡ ಪಕ್ಷಗಳು ಕಾದು ಕುಳಿತಿರುತ್ತವೆ. ಚಾಮರಾಜನಗರ ಕ್ಷೇತ್ರದಿಂದ ಜೆ.ಡಿ (ಎಸ್) ಅಭ್ಯರ್ಥಿಯಾಗಿ ಹಿಂದಿನ ಲೋಕಸಭೆಗೆ ಆಯ್ಕೆಯಾಗಿದ್ದ ಬಿ.ಶಿವಣ್ಣ ಈಗ ಕೇಂದ್ರ ಸರ್ಕಾರದ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿ ದೇವೇಗೌಡರ ಮುಂದೆಯೇ ಅಡ್ಡಾಡುತ್ತಿಲ್ಲವೇ? ಯುಪಿಎ–1 ಸರ್ಕಾರ ಉಳಿಯಲು ಅವರ ಅಡ್ಡ ಮತವೂ ಕಾರಣವಾಗಿತ್ತು! ಈಗಲೂ ಹಾಗೆಯೇ ಇಬ್ಬರು ಮೂವರು ಆಯ್ಕೆಯಾಗುವ ಲಕ್ಷಣ ಕಾಣುತ್ತಿದೆ.

ದೇವೇಗೌಡರು ಈಗ ಒಂಟಿಯಾಗಿ ಚುನಾವಣೆ ಎದುರಿಸಬೇಕು. ಒಕ್ಕಲಿಗರ ಮತಗಳ ಮೇಲೆಯೇ ಅವರು ಸಂಪೂರ್ಣವಾಗಿ ಅವಲಂಬಿತರಾಗಿರಬೇಕು. ಅವರ ಜತೆಗೆ ಸದಾ ಇರುತ್ತಿದ್ದ ಕುರುಬ ನಾಯಕ ಸಿದ್ದರಾಮಯ್ಯ ಈಗ ಎದುರಾಳಿ ಬಣದ ನಾಯಕ. ಅವರು ಬರೀ ಕುರುಬ ನಾಯಕ ಮಾತ್ರವಲ್ಲ. ಅಹಿಂದ ನಾಯಕ! ದೇವೇಗೌಡರು ತಮ್ಮ ಪಕ್ಷ ಅಹಿಂದ ವರ್ಗಕ್ಕೆ ಏನೆಲ್ಲ ಮಾಡಿದೆ ಎಂದು ಹೇಳುತ್ತಿರುವುದು ಆ ಮತ ಬ್ಯಾಂಕನ್ನು ಭೇದಿಸಬೇಕು ಎಂಬ ಉದ್ದೇಶದಿಂದಲೇ! ಆದರೆ, ಅದು ಆಗುತ್ತದೆಯೇ? ಕುರುಬ ಸಮುದಾಯಕ್ಕೆ ಈಗ ಸಿದ್ದರಾಮಯ್ಯನವರನ್ನು ಅಪ್ಪಿಕೊಂಡು ಮುತ್ತಿಡುವಂಥ ಪ್ರೀತಿಯೇನೂ ಉಳಿದಿಲ್ಲ. ‘ಈ ಮನುಷ್ಯ ತಾನೇನೋ ಮುಖ್ಯಮಂತ್ರಿಯಾಗಿಬಿಟ್ಟ, ತನ್ನ ಸಮುದಾಯಕ್ಕೆ ಏನೂ ಮಾಡಲಿಲ್ಲ. ಒಬ್ಬ ಕುರುಬನನ್ನು ಮಂತ್ರಿಯಾದರೂ ಮಾಡುವುದು ಬೇಡವೇ’ ಎಂದು ಆ ಸಮುದಾಯಕ್ಕೆ ಸೇರಿದ ಮಂದಿ ಒಳಗೊಳಗೇ ಕುದಿಯುತ್ತಿದ್ದಾರೆ. ಹಾಗೆಂದು ಅವರೆಲ್ಲ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರ ಪಕ್ಷಕ್ಕೆ ಮತ ಹಾಕುವುದಿಲ್ಲ. ಅವರು ಈ ಸಾರಿ ಬಹುಪಾಲು ಕಾಂಗ್ರೆಸ್ಸಿಗೇ ಮತ ಹಾಕುವುದು.

ಏಕೆಂದರೆ ಈ ಸಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಕಡಿಮೆ ಸೀಟುಗಳು ಬಂದರೆ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡು ಬಿಡಬಹುದು ಎಂಬ ಭಯ ಆ ಸಮುದಾಯಕ್ಕೂ ಇರುವುದಿಲ್ಲವೇ? ಲೋಕಸಭೆ ಚುನಾವಣೆ ನಂತರವಾದರೂ ಬೀರದೇವರು ಸಿದ್ದರಾಮಯ್ಯನವರಿಗೆ ಒಳ್ಳೆಯ ಬುದ್ಧಿ ಕೊಡಲಿ ಎಂದು ಕುರುಬರು ಹಾರೈಸುತ್ತಿರಬಹುದು! ಜೆ.ಡಿ (ಎಸ್) ನಂಬಿಕೊಂಡಿರುವ ಇನ್ನೊಂದು ಮತ ಬ್ಯಾಂಕ್ ಅಲ್ಪಸಂಖ್ಯಾತ ಮುಸಲ್ಮಾನರದು. ನರೇಂದ್ರ ಮೋದಿಯಂಥ ಮತ ಧ್ರುವೀಕರಣ ಮಾಡುವ ನಾಯಕ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿರುವಾಗ ಮುಸಲ್ಮಾನರು ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ?... ಗೆಲ್ಲುವ ಕುದುರೆಯನ್ನೇ ಅಲ್ಲವೇ? ತೃತೀಯ ರಂಗದ ಎಲ್ಲ ನಾಯಕರನ್ನು ಕರೆಸಿ ಕರ್ನಾಟಕದಲ್ಲಿ ರ್ಯಾಲಿ ನಡೆಸುವುದು ಮತ್ತು ಅದರ ನೇತೃತ್ವ ದೇವೇಗೌಡರಿಗೇ ಸಿಗುತ್ತದೆ ಎಂದು ಅಂದುಕೊಳ್ಳುತ್ತಿರುವುದರ ಗುಟ್ಟು ಇಲ್ಲಿ ಇದೆ. ದೇವೇಗೌಡರಿಗೆ ತಾವು ಗೆಲ್ಲುವ ಕುದುರೆ ಎಂದು ತೋರಿಸಿಕೊಳ್ಳಬೇಕಾಗಿದೆ.

ಹೌದು, ಎಲ್ಲ ಪಕ್ಷಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ಮಾಡುವುದು ಸಹಜ. ಅದರಲ್ಲಿ ತಪ್ಪೇನೂ ಇಲ್ಲ. ಇದು ಪ್ರಾದೇಶಿಕ ಪಕ್ಷಗಳ ಕಾಲ. ಸಮ್ಮಿಶ್ರ ಸರ್ಕಾರದ ಈಗಿನ ಕಾಲದಲ್ಲಿ ರಾಷ್ಟ್ರೀಯ ಪಕ್ಷಗಳನ್ನು ನೆಚ್ಚಿಕೊಂಡಿರುವ ಕರ್ನಾಟಕಕ್ಕೆ ನ್ಯಾಯ ಸಿಕ್ಕಿಲ್ಲ. ನೆಲ–ಜಲ ವಿಚಾರದಲ್ಲಿ ಕರ್ನಾಟಕಕ್ಕೆ ನ್ಯಾಯ ದೊರಕಿಸುವುದು ತಮ್ಮ ಪಕ್ಷದ ಉದ್ದೇಶ ಎಂಬ ದೇವೇಗೌಡರ ಬಹಿರಂಗ ಘೋಷಣೆಯನ್ನು ಸಂಶಯಿಸುವುದೂ ಬೇಡ. ಆದರೆ, ದೇವೇಗೌಡರದು ನಿಜಕ್ಕೂ ಪ್ರಾದೇಶಿಕ ಪಕ್ಷವೇ? ಹಾಗಾದರೆ ಅವರು ತಮ್ಮನ್ನು ಏಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂದು ಕರೆದುಕೊಳ್ಳುತ್ತಾರೆ? ಅವರ ಪಾದಗಳು ಕರ್ನಾಟಕದ ಗ್ರಾಮ ಮಟ್ಟದಲ್ಲಿ ಇವೆ. ಆದರೆ, ಅವರ ತಲೆ ದೆಹಲಿಯಲ್ಲಿಯೇ ಇದೆ. ಇದು ಎರಡು ದೋಣಿಗಳ ಪಯಣದ ಕಷ್ಟ. ದೇವೇಗೌಡರು ಮತ್ತು ಅವರಂಥ ‘ಪ್ರಾದೇಶಿಕ ಪಕ್ಷ’ಗಳ ಇನ್ನೊಂದು ಸಮಸ್ಯೆ ಎಂದರೆ ಅವರೆಲ್ಲ ಕುಟುಂಬ ವತ್ಸಲರಾಗಿರುವುದು! ಕರುಣಾನಿಧಿ ಅವರಿಗೆ ಪಕ್ಷದ ಮುಂದಿನ ನಾಯಕ ಮಗ ಸ್ಟಾಲಿನ್ನೇ ಆಗಬೇಕು. ಲಾಲೂ ಅವರು ಹೆಂಡತಿಯ ಮುದ್ದಿನ ಗಂಡ! ಬಿಜು ಪಟ್ನಾಯಕ್ ಅವರು ಮಗ ನವೀನ್ ಪಟ್ನಾಯಕ್ ಅವರನ್ನೇ ಉತ್ತರಾಧಿಕಾರಿ ಎಂದು ಭಾವಿಸುತ್ತಾರೆ. ಫಾರೂಕ್ ಅಬ್ದುಲ್ಲಾ ಅವರಿಗೆ ಮಗ ಒಮರ್ ಅಬ್ದುಲ್ಲಾ ಅವರೇ ಮುಖ್ಯಮಂತ್ರಿ ಆಗಿರಬೇಕು. ಸದ್ಯ, ನಿತಿಶ್ ಅವರು ಮಾತ್ರ ಇಂಥ ವಾತ್ಸಲ್ಯದ ಮೋಹದಲ್ಲಿ ಸಿಲುಕಿಲ್ಲ. ಆದರೆ, ಅವರ ಉತ್ತರಾಧಿಕಾರಿ ಯಾರು ಎಂದು ನಮಗೆ ಗೊತ್ತಿಲ್ಲ. ದುರಂತ ಎಂದರೆ ವಂಶಾಡಳಿತದ ಪರಂಪರೆ ಹಾಕಿದ ನೆಹರೂ ಕುಟುಂಬಕ್ಕೆ ಇವರೆಲ್ಲ ಬದ್ಧ ವೈರಿಗಳು! ಆದರೆ, ಫಾರೂಕ್, ನಿತಿಶ್, ಕರುಣಾನಿಧಿ, ನವೀನ್ ಅವರೆಲ್ಲ ಸ್ವತಂತ್ರವಾಗಿ ಅಥವಾ ಸಮಾನ ಮನಸ್ಕರ ಜತೆಯಾಗಿ ಅಧಿಕಾರ ಹಿಡಿಯಲು ಸಮರ್ಥರು. ದೇವೇಗೌಡರ ಸಮಸ್ಯೆ ಏನು ಎಂದರೆ ಅವರು ಒಬ್ಬಂಟಿಯಾಗಿದ್ದಾರೆ.

ಅವರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಸಮಾನ ಅಂತರ ಕಾಯ್ದುಕೊಳ್ಳಬೇಕಾದ ಶತ್ರುಗಳು. ಕುಮಾರಸ್ವಾಮಿ ಅವರಿಗೆ ಇದು ಒಪ್ಪಿಗೆಯಿಲ್ಲ. ಆದರೆ, ಅವರು ಇನ್ನೊಂದು ರೀತಿಯಲ್ಲಿ ಅಸಹಾಯಕರು. ಆ ಪಕ್ಷದಲ್ಲಿ ನಾಯಕತ್ವದ ಗುಣ ಇರುವವರು ಎಂದರೆ ಒಬ್ಬರು ದೇವೇಗೌಡರು ಇನ್ನೊಬ್ಬರು ಕುಮಾರಸ್ವಾಮಿ. ಒಂದು ರಾಜ್ಯದಲ್ಲಿ ಅಧಿಕಾರ ಹಿಡಿಯಲು ಇಷ್ಟು ಶಕ್ತಿ ಸಾಲದು. ವಿಧಾನಸಭೆ ಚುನಾವಣೆ ಬಂದಾಗಲೆಲ್ಲ ಜನತಾಪರಿವಾರ ಒಂದುಗೂಡಬೇಕು ಎಂದು ದೇವೇಗೌಡರು ಮತ್ತು ಕುಮಾರಸ್ವಾಮಿಗಳು ಕನವರಿಸುವುದು ತಮಗೆ ಶಕ್ತಿ ಸಾಲುತ್ತಿಲ್ಲ ಎಂಬ ಕಾರಣಕ್ಕಾಗಿಯೇ. ಈಗ ತೃತೀಯ ರಂಗ ಎಂಬ ಮಾಯಾಜಿಂಕೆಯ ಬೆನ್ನು ಹತ್ತಿರುವುದೂ ಅದೇ ಕಾರಣಕ್ಕಾಗಿಯೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.