ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಕದ ರಾಜ್ಯದಲ್ಲಿ ಚಂದ್ರಬಾಬು ನಾಯ್ಡು ಅವರಂಥ ಮುಖ್ಯಮಂತ್ರಿ ಇಟ್ಟುಕೊಂಡು...

Last Updated 16 ಜೂನ್ 2018, 9:10 IST
ಅಕ್ಷರ ಗಾತ್ರ

ಅದು 2000ನೇ ಇಸವಿ ಮಾರ್ಚ್‌ ತಿಂಗಳು. ಆಗಿನ ಅಮೆರಿಕ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಭಾರತಕ್ಕೆ ಭೇಟಿ ನೀಡುವವರು ಇದ್ದರು.  ಕರ್ನಾಟಕದಲ್ಲಿ  ಆಗ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿ. ಕರ್ನಾಟಕದ ಐ.ಟಿ–ಬಿ.ಟಿ  ಮತ್ತು ಕೃಷ್ಣ ಅವರ ಸೂಕ್ಷ್ಮಾಭಿರುಚಿಯ ಖ್ಯಾತಿ ಎಷ್ಟು ಇತ್ತು ಎಂದರೆ ಕ್ಲಿಂಟನ್‌ ಬೆಂಗಳೂರಿಗೆ ಬರದೇ ವಾಪಸು ಹೋಗಲು ಹೇಗೆ ಸಾಧ್ಯ ಎಂದುಕೊಂಡವರು ಬಹಳ ಮಂದಿ ಇದ್ದರು. ಕ್ಲಿಂಟನ್‌ ಬೆಂಗಳೂರಿಗೆ ಬರಲಿಲ್ಲ. ಹೈದರಾಬಾದಿಗೆ ಹೋದರು.

ಆಗಿನಿಂದಲೂ ಬೆಂಗಳೂರಿನಲ್ಲಿ ಅಮೆರಿಕದ ಕಾನ್ಸಲೇಟ್‌ ಕಚೇರಿ ತೆರೆಸಬೇಕು ಎಂಬ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ದಕ್ಷಿಣ ಭಾರತದಲ್ಲಿ ಈಗ ಚೆನ್ನೈ ಹೊರತುಪಡಿಸಿದರೆ ಹೈದರಾಬಾದಿನಲ್ಲಿಯೇ ಅಮೆರಿಕದ ಕಾನ್ಸಲೇಟ್‌ ಕಚೇರಿ ಇರುವುದು. ಕ್ಲಿಂಟನ್‌ ಭಾರತಕ್ಕೆ ಭೇಟಿ ನೀಡಿದಾಗ ಆಂಧ್ರದ ಮುಖ್ಯಮಂತ್ರಿಯಾಗಿದ್ದವರು ಎನ್‌. ಚಂದ್ರಬಾಬು ನಾಯ್ಡು. ಕ್ಲಿಂಟನ್‌ ಅವರನ್ನು ತಮ್ಮ ರಾಜ್ಯದ ರಾಜಧಾನಿಗೆ ಕರೆಸಲು ನಾಯ್ಡು ಮಾಡಿದ ಕಸರತ್ತು ಅಷ್ಟಿಷ್ಟಲ್ಲ. ಅಮೆರಿಕದಲ್ಲಿನ ಆಂಧ್ರದ ಲಾಬಿಯನ್ನೆಲ್ಲ ಅವರು ಬಳಸಿಕೊಂಡರು.

ಗೆಲುವೇ ಹಾಗೆ. ಅದು ಸುಮ್ಮಸುಮ್ಮನೆ ಬರುವುದಿಲ್ಲ. ಅವರಿಗೆ ಯಾವಾಗಲೂ ಪೈಪೋಟಿ ಯಲ್ಲಿ ನಂಬಿಕೆ. ಪೈಪೋಟಿ ಮಾಡಿ ಗೆದ್ದುಕೊಳ್ಳಬೇಕು, ಆ ಮೂಲಕ  ಮೇಲುಗೈ ಸಾಧಿಸಬೇಕು ಮತ್ತು ಮುಂದೆ ನಡೆಯಬೇಕು ಎಂದು ಕೊಂಡವರು ನಾಯ್ಡು.

1995ರಿಂದ 2004ರ ನಡುವಿನ ಎರಡು ಅವಧಿಗೆ ಆಂಧ್ರದ ಮುಖ್ಯಮಂತ್ರಿಯಾಗಿದ್ದ ನಾಯ್ಡು ಎರಡು ಅವಧಿಯ ಸೋಲಿನ ರೂಪದ ವಿಶ್ರಾಂತಿಯ ನಂತರ ಈಗ ವಿಭಜಿತ ಆಂಧ್ರದ ಮುಖ್ಯಮಂತ್ರಿಯಾಗಿದ್ದಾರೆ. ನಮ್ಮ ಬೆಂಗಳೂರಿನ ಕಲಾಸಿಪಾಳ್ಯದಂತೆ ಇದ್ದ ಹೈದರಾಬಾದನ್ನು ತಮ್ಮ ಮೊದಲ ಅವಧಿಯಲ್ಲಿ ಹೇಮಾಮಾಲಿನಿಯ ಕೆನ್ನೆಯಂಥ ರಸ್ತೆಗಳಿಂದ ಅಂದಗೊಳಿಸಿದ್ದ ನಾಯ್ಡು ಹೆಗಲ ಮೇಲೆ ಈಗ ಹೊಸ ನಾಡೊಂದನ್ನು ಕಟ್ಟುವ ಹೊಣೆ ಬಿದ್ದಿದೆ.

ತೆಲಂಗಾಣದ ಮಂದಿ ಹಳೆಯ ಶೋಷಣೆಯ ನೆನಪುಗಳನ್ನೆಲ್ಲ ತೀರಿಸಿಕೊಳ್ಳುವ ಹಾಗೆ ಆಂಧ್ರದ ಮಂದಿಯನ್ನು ಉಟ್ಟ ಬಟ್ಟೆಯ ಮೇಲೆ ಹೊರಗೆ ಹಾಕಿದ್ದಾರೆ. ಅವರಿಗೆ ಈಗ ಸ್ವಂತದ ಒಂದು ರಾಜಧಾನಿಯೂ ಇಲ್ಲ. ಚಂದ್ರಬಾಬು ನಾಯ್ಡು ಎಲ್ಲವನ್ನೂ ಈಗ ತಳಮಟ್ಟದಿಂದ ಕಟ್ಟಬೇಕು. ನೆರೆಯ ತೆಲಂಗಾಣದವರು ಬಿಡಿ, ನಿಸರ್ಗವೂ ಅವರಿಗೆ ಕರುಣೆ ತೋರುತ್ತಿಲ್ಲ. ಅಧಿಕಾರಕ್ಕೆ ಬಂದ ನಾಲ್ಕು ತಿಂಗಳು ಗತಿಸುವ ಮೊದಲೇ ಅವರ ರಾಜ್ಯಕ್ಕೆ ಚಂಡಮಾರುತ ಅಪ್ಪಳಿಸಿ ಹತ್ತಾರು ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಜನರು ಕಷ್ಟಕ್ಕೆ ಸಿಲುಕಿದ್ದಾರೆ.

ಚಂದ್ರಬಾಬು ನಾಯ್ಡು ಕಷ್ಟ ಜೀವಿ. ಅವರು ಅಧಿಕಾರಕ್ಕೆ ಬಂದುದು ಕೂಡ ಬಹಳ ಕಷ್ಟದಿಂದಲೇ. 2012ರ ಅಕ್ಟೋಬರ್‌ನಿಂದ 2013ರ ಏಪ್ರಿಲ್‌ ನಡುವಿನ 208 ದಿನಗಳ ಕಾಲ 2,817 ಕಿಲೊ ಮೀಟರ್‌ ದೂರವನ್ನು ಕಾಲು ನಡಿಗೆಯಿಂದ ಕ್ರಮಿಸಿದ ನಾಯ್ಡು ಆಂಧ್ರದ ಮುಖ್ಯಮಂತ್ರಿಯಾಗುವುದು ನಿಶ್ಚಿತವೇ ಆಗಿತ್ತು. ಅವರ ಕಾಲಲ್ಲಿ ಬೊಬ್ಬೆ ಎದ್ದುದನ್ನು ಜನರು ಕಣ್ಣಾರೆ ನೋಡಿದ್ದರು. ‘ವಸ್ತುನ್ನಾನಿ ಮೀಕೋಸು‘  (ನಿಮಗಾಗಿ ನಾನು ಬರುತ್ತಿದ್ದೇನೆ) ಎಂದು ಕಾಲುನಡಿಗೆಯಲ್ಲಿ ಹೊರಟಿದ್ದ ನಾಯ್ಡು ತಮ್ಮ ರಾಜ್ಯದಲ್ಲಿ ಕಾಂಗ್ರೆಸ್‌ ಅನ್ನು ಅಕ್ಷರಶಃ ನಾಮಾವಶೇಷ ಮಾಡಿದ್ದಾರೆ. ಅಲ್ಲಿ ಆ ಪಕ್ಷಕ್ಕೆ ಒಂದು ಸೀಟೂ ಬಂದಿಲ್ಲ.

ಹತ್ತು ವರ್ಷ ಅಧಿಕಾರದಿಂದ ದೂರ ಇದ್ದರೂ ಅವರ ಕಾರ್ಯವೈಖರಿಯಲ್ಲಿ ಕಿಂಚಿತ್ತೂ ಬದಲಾವಣೆ ಆಗಿಲ್ಲ. ಒಂದು ಕ್ಷಣವನ್ನೂ ಕಾಲಹರಣ ಮಾಡಿ ತಿಳಿಯದ ನಾಯ್ಡು, ಹುದ್‌ ಹುದ್‌ ಚಂಡಮಾರುತಕ್ಕೆ ಸಿಲುಕಿ ಬಂದರುನಗರ ವಿಶಾಖಪಟ್ಟಣ ನಲುಗಿ ಹೋದಾಗ ಇಡೀ ನಾಲ್ಕು ದಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿಲ್ಲಿಸಿದ್ದ ಬಸ್‌ನಲ್ಲಿಯೇ ತಂಗಿದ್ದರು. ಅಲ್ಲಿಯೇ ದಿನವಿಡೀ ಸಭೆ ನಡೆಸುತ್ತಿದ್ದ ಅವರು ರಾತ್ರಿ ಸ್ವಲ್ಪ ಹೊತ್ತು ಮಾತ್ರ ಮಲಗುತ್ತಿದ್ದರು.

ಅವರು ಅದೇ ಊರಿನ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದರೆ ಯಾರೂ ಆಕ್ಷೇಪಿಸುತ್ತಿರಲಿಲ್ಲ. ಜನರು ಕಷ್ಟದಲ್ಲಿ ಇರುವಾಗ ನಾಯಕನಾದವನು ಸುಖದಲ್ಲಿ ಇರಬಾರದು ಎಂದು ತೋರಿಸಿದವರು ನಾಯ್ಡು. ತಾನು ಸುಖದಲ್ಲಿ ಇದ್ದರೆ ಅಧಿಕಾರಿಗಳು ಮೈ ಮರೆತು ಬಿಡುತ್ತಾರೆ ಎಂದೂ ಅವರಿಗೆ ಭಯ; ಅದು ನಿಜ ಕೂಡ. (ನಾವು ಸಡಿಲ ಬಿಟ್ಟರೆ ಅವರು ನಮ್ಮ ಮುಂದೆಯೇ ಜಗಳವಾಡುತ್ತಾರೆ!) ಕಳೆದ ಸಾರಿ ನಾಯ್ಡು ಅಧಿಕಾರ ಕಳೆದುಕೊಳ್ಳಲು ಅವರ ವೇಗದ ಜತೆಗೆ ಪೈಪೋಟಿ ಮಾಡಲಾಗದ, ಅವರನ್ನು ಎಂದೂ ಸಮಾಧಾನ ಮಾಡಲಾಗದ ಆಲಸಿ ಅಧಿಕಾರವರ್ಗವೂ ಕಾರಣವಾಗಿತ್ತು. ಈಗ ಮತ್ತೆ ನಾಯ್ಡು ಅಧಿಕಾರಿಗಳ ಬೆನ್ನ ಹಿಂದೆ ಚಾಟಿ ಹಿಡಿದುಕೊಂಡು ನಿಂತಿದ್ದಾರೆ.

ತಾನು ಜನರ ಪರವಾಗಿ ಇದ್ದೇನೆ ಎಂದು ಹೇಳುವ ವಿಧಾನ ಇದು. ಕಳೆದ ಸಾರಿ  ಅವರು ಅಧಿಕಾರ ಕಳೆದುಕೊಳ್ಳಲು ಇವರು ರೈತ ವಿರೋಧಿ ಎಂಬ ಆರೋಪವೂ ಕಾರಣವಾಗಿತ್ತು. ಒಬ್ಬ ವ್ಯಕ್ತಿ ಒಂದಿಷ್ಟು ತಂತ್ರಜ್ಞಾನದ ಪರವಾಗಿ ಇದ್ದಾರೆ ಎಂದ ಕೂಡಲೇ ಅವರು ರೈತ ವಿರೋಧಿ ಎಂಬ ಹಣೆಪಟ್ಟಿ ಹಚ್ಚುವ ಕಾಲ ಇದು. ಆಗ ಅವರು ಜನಪ್ರಿಯ ಯೋಜನೆಗಳ ಕುರಿತು ಒಂದಿಷ್ಟು ನಿಷ್ಠುರವಾಗಿಯೂ ನಡೆದು ಕೊಂಡಿದ್ದರೋ ಏನೋ? ಈಗ ನಾಯ್ಡು ಎರಡನ್ನೂ ನಿಭಾಯಿಸುತ್ತಿದ್ದಾರೆ.

ಬಹುಶಃ ಇಡೀ ಭಾರತದಲ್ಲಿ ಕಾಗದ ಇಲ್ಲದೇ ಕೇವಲ ಲ್ಯಾಪ್‌ಟಾಪ್‌ಗಳನ್ನು ಇಟ್ಟುಕೊಂಡು ಸಂಪುಟ ಸಭೆ ನಡೆಸಿದ ಮೊದಲ ಮುಖ್ಯಮಂತ್ರಿ ಅವರು. ಅವರ ಸಂಪುಟದಲ್ಲಿ ಎಷ್ಟು ಮಂದಿಗೆ ಕಂಪ್ಯೂಟರ್‌ ಆಪರೇಟ್‌ ಮಾಡಲು ಬರುತ್ತಿದೆಯೋ ಗೊತ್ತಿಲ್ಲ. ಆದರೆ, ಅವರೂ ನಾಯ್ಡು ಜೊತೆಗೆ ಏಗಬೇಕು. ನಾಯಕನಾದವನ ಕಷ್ಟಗಳು ಒಂದೆರಡಲ್ಲ.

ಮೊನ್ನೆ ಅವರು ಬೆಂಗಳೂರಿಗೆ ಬಂದಿದ್ದರು. ಕೃಷಿ ಸಚಿವ ಕೃಷ್ಣ ಬೈರೇಗೌಡರಿಗೆ ಕರ್ನಾಟಕವು ಕೃಷಿ ಕ್ಷೇತ್ರದಲ್ಲಿ ಗೈದಿರುವ ಸಾಧನೆಗಳ  ‘ಪವರ್‌  ಪಾಯಿಂಟ್‌  ಪ್ರೆಸೆಂಟೇಷನ್‌’ ಕೊಡಲು ಕೋರಿಕೊಂಡರು. ಕರ್ನಾಟಕದ ‘ಭೂಚೇತನ’ದಂಥ ಯೋಜನೆಗಳನ್ನು ತಕ್ಷಣ ತಮ್ಮ ರಾಜ್ಯದಲ್ಲಿಯೂ ಜಾರಿ ಮಾಡಲು ನಿರ್ಧರಿಸಿದರು. ಮುಖ್ಯಮಂತ್ರಿಗಳನ್ನು ಕಂಡು ತುಂಗಭದ್ರಾ ಕಾಲುವೆಗಳ ದುರಸ್ತಿ ಕುರಿತು ಮಾತನಾಡಿದರು. ಅವರು ಅಧಿಕಾರಕ್ಕೆ ಬಂದ ಹೊಸದರಲ್ಲಿಯೇ ಹೆಸರಾಂತ ನಿವೃತ್ತ ಐ.ಎ.ಎಸ್‌ ಅಧಿಕಾರಿ ಪಿ.ಕೆ.ಅಗರ್ವಾಲ್‌ ಅವರನ್ನು ನೀರಾವರಿ ಮತ್ತು ನೀರು ನಿರ್ವಹಣೆ ಸಲಹೆಗಾರರಾಗಿ ನೇಮಕ ಮಾಡಿಕೊಂಡಿದ್ದರು. ಅದೇ ಸಮಯದಲ್ಲಿ ಮತ್ತೊಬ್ಬ   ಹೆಸರಾಂತ ನಿವೃತ್ತ ಐ.ಎ.ಎಸ್‌ ಅಧಿಕಾರಿ ಡಾ.ಸಿ.ಎಸ್‌.ರಾವ್‌ ಅವರನ್ನು ಹಣಕಾಸು ನಿರ್ವಹಣೆ ಸಲಹೆಗಾರರಾಗಿ ನೇಮಕ ಮಾಡಿಕೊಂಡಿದ್ದರು. ನಾಯ್ಡು ಅವರ ಸಂಪರ್ಕ ಸಲಹೆಗಾರರಾಗಿ ಪ್ರತಿಭಾವಂತ ಪರಕಾಲ ಪ್ರಭಾಕರ್‌ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಮೂವರಿಗೂ ಸಂಪುಟ ದರ್ಜೆಯ ಸಚಿವರ ಸ್ಥಾನಮಾನ.

ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ ಮತ್ತು ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಓದಿದ ಪ್ರಭಾಕರ್‌, ಈಗ ಕೇಂದ್ರದಲ್ಲಿ ವಾಣಿಜ್ಯ ಖಾತೆಯ ರಾಜ್ಯ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್‌ ಅವರ ಗಂಡ. ಸದಾ ಟ್ವಿಟರ್‌ನಲ್ಲಿ ಇರುವ ಪ್ರಭಾಕರ್‌, ನಾಯ್ಡು ಅವರ  ಜತೆಗೆ ಮೊನ್ನೆ ಬಂಡವಾಳ ಆಕರ್ಷಿಸಲು ಸಿಂಗಪುರಕ್ಕೂ  ಹೋಗಿದ್ದರು. ಅವರಿಗೆ ಸದಾಕಾಲ ತಮ್ಮ ಮುಖ್ಯಮಂತ್ರಿಯ ಬಿಂಬವನ್ನು ವೃದ್ಧಿಸುವ  ಚಿಂತೆ. ಅವರ ಟ್ವಿಟರ್‌ ಸಂದೇಶ ಓದಿದರೆ ಅದು ಸ್ಪಷ್ಟವಾಗಿ ಗೊತ್ತಾಗುತ್ತದೆ; ಜತೆಗೆ ಯಾರ ಜತೆಗೆ ತಾನು ಸಂಪರ್ಕದಲ್ಲಿ ಇರಬೇಕು ಎಂದೂ ಅವರಿಗೆ ತಿಳಿದಿದೆ.

ಇದೇ 12ನೇ ತಾರೀಖು ನಾಯ್ಡು ಅವರು ಮತ್ತೊಂದು ಆದೇಶ ಹೊರಡಿಸಿದ್ದಾರೆ. ಅದರಲ್ಲಿ ತೀರಾ ಈಚಿನವರೆಗೆ ಕರ್ನಾಟಕದಲ್ಲಿ ಕೆಲಸ ಮಾಡಿ ನಿವೃತ್ತರಾದ ಐ.ಎ.ಎಸ್‌ ಅಧಿಕಾರಿ ಜಿ.ವಿ.ಕೃಷ್ಣರಾವ್‌ ಅವರನ್ನು ತಮ್ಮ ಸಲಹೆಗಾರರಾಗಿ ನೇಮಕ ಮಾಡಿಕೊಂಡಿದ್ದಾರೆ.

ಹೈಕೋರ್ಟ್‌ ನ್ಯಾಯಮೂರ್ತಿಯೊಬ್ಬರ ವೇತನ ಶ್ರೇಣಿಯಲ್ಲಿ ಕೆಲಸ ಮಾಡುವ ರಾವ್‌, ಕೃಷಿ ಮಾರುಕಟ್ಟೆ ಮತ್ತು ಬುಡಕಟ್ಟು ಅಭಿವೃದ್ಧಿಯಲ್ಲಿ ಸರ್ಕಾರಕ್ಕೆ ಮಾರ್ಗದರ್ಶನ ಮಾಡಲಿದ್ದಾರೆ. ಅವರು ಕರ್ನಾಟಕದಲ್ಲಿ ಕೃಷಿ ಮಾರುಕಟ್ಟೆ ಇಲಾಖೆಯಲ್ಲಿ ಮಾಡಿದ ಕಂಪ್ಯೂಟರೀಕರಣ ಕೆಲಸವನ್ನೇ ಆಂಧ್ರದಲ್ಲಿಯೂ ಮಾಡಬೇಕಾಗಿದೆ. ಆಂಧ್ರದಲ್ಲಿ ವಿಶಾಖಪಟ್ಟಣ ಮತ್ತು ವಿಜಿಟಿಎಂ (ವಿಜಯವಾಡ, ಗುಂಟೂರು, ತೆನಾಲಿ, ಮಂಗಳಗಿರಿ) ಪಟ್ಟಣಗಳಿಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವ ಯೋಜನೆಯ ಸಲಹೆಗಾರರಾಗಿ ದೆಹಲಿ ಮೆಟ್ರೊ ನಿರ್ವಹಿಸಿದ ಇ.ಶ್ರೀಧರನ್‌ ಈಗಾಗಲೇ ನೇಮಕಗೊಂಡಿದ್ದಾರೆ.

ನಾಯ್ಡು ಏಕಕಾಲದಲ್ಲಿಯೇ ಎಷ್ಟು ಮುಖಗಳಲ್ಲಿ ಯೋಚನೆ ಮಾಡುತ್ತಾರೆ ಎಂದು ಅಚ್ಚರಿಯಾಗುತ್ತದೆ. ಅವರು ಸದಾ ಸಕಾರಾತ್ಮಕವಾಗಿ ಮತ್ತು ತನ್ನ ರಾಜ್ಯಕ್ಕೆ ಯಾವುದರಿಂದ ಒಳಿತಾಗುತ್ತದೆ ಅದೆಲ್ಲ ತನಗೆ ಬೇಕು ಎಂದು ಯೋಚಿಸುತ್ತಿರುವಂತೆ ಕಾಣುತ್ತದೆ. ಅವರ ನೇಮಕಗಳನ್ನು ನೋಡಿದರೇ ಅದು ಸ್ಪಷ್ಟವಾಗಿ ಗೊತ್ತಾಗುತ್ತದೆ. ತನಗೆ ಎಲ್ಲವೂ ಗೊತ್ತಿಲ್ಲ ಎಂಬ ವಿನಯವೂ ಅಲ್ಲಿ ಇದೆ. ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗ ಪತ್ರಿಕಾ ಗೋಷ್ಠಿ ಮಾಡುತ್ತಿದ್ದರೆ ಪಕ್ಕದಲ್ಲಿ ಅಧಿಕಾರಿಗಳು ಇರಲೇಬೇಕಿತ್ತು. ಎಲ್ಲವೂ ತನಗೆ ಗೊತ್ತಿರುವುದಿಲ್ಲ ಎಂದು ಹೀಗೆ ತಿಳಿದ ಮುಖ್ಯಮಂತ್ರಿಗಳು ಕಡಿಮೆ.

ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವುದಾದರೆ ನೀವು ಹೆಚ್ಚು ದೂರ ಕ್ರಮಿಸಲು ಸಿದ್ಧರಿರಬೇಕು. ಉತ್ತರ  ಕರ್ನಾಟಕದ ಧಾರವಾಡದಲ್ಲಿ ಸ್ಥಾಪನೆಯಾಗಬೇಕಿದ್ದ ಹೀರೊ ಕಾರ್ಖಾನೆಯನ್ನು ನಾವು ಕಣ್ಣು ಮಿಟುಕಿಸುವ ಒಳಗೆ ನಾಯ್ಡು ಕಿತ್ತುಕೊಂಡರು. ಅವರು ಅದನ್ನು ಹೇಗೆ ಕಿತ್ತುಕೊಂಡು ತಮ್ಮ ರಾಜ್ಯಕ್ಕೆ ತೆಗೆದುಕೊಂಡು ಹೋದರು ಎಂಬುದಕ್ಕೆ ಅನೇಕ ಕಥೆಗಳು ಇವೆ. ಅದೆಲ್ಲ ಇಲ್ಲಿ ಮುಖ್ಯವಲ್ಲ.

ಆದರೆ, ಅವರು ಹೀರೊ ಕಂಪೆನಿಗೆ ಕರ್ನಾಟಕಕ್ಕಿಂತ ಒಂದಿಷ್ಟು ಹೆಚ್ಚು ಆಕರ್ಷಕವಾಗಿ ಕಂಡಿರಲೇಬೇಕು. ನಮ್ಮ ಮುಖ್ಯಮಂತ್ರಿಗಳು ಆ ಕಾರ್ಖಾನೆಯನ್ನು ನಮ್ಮಲ್ಲಿಯೇ ಉಳಿಸಿಕೊಳ್ಳಲು ಏನೆಲ್ಲ ಮಾಡಿರಬಹುದು. ಆದರೆ ಅಂತಿಮವಾಗಿ ಅದು ಇಲ್ಲಿ ಉಳಿಯಲಿಲ್ಲ ಎಂಬುದಷ್ಟೇ ಉಳಿಯುವ ಸತ್ಯ. ಅದೂ ಉತ್ತರ ಕರ್ನಾಟಕಕ್ಕೆ ಬರಬೇಕಾಗಿದ್ದ ಕಾರ್ಖಾನೆ ಎಂಬುದು ಬಹುಶಃ ಮಾಯಲಾಗದ ಗಾಯವಾಗಿ ಅಲ್ಲಿನ ಜನರಿಗೆ ಕಾಡಬಹುದು.

ಇನ್ಫೊಸಿಸ್‌ನ ಒಂದು ಘಟಕ ಕೂಡ ಆಂಧ್ರಕ್ಕೆ ಹೋಗಬಹುದು ಎಂಬ ಸುದ್ದಿ ಬರೀ ಹುಯಿಲು ಆಗಿರುವುದು ನಿಜಕ್ಕೂ ಒಳ್ಳೆಯದು. ನಾವು ಈಗ ಕೃಷಿಯ ಪರವಾಗಿಯೂ ಇರಬೇಕು. ಕೈಗಾರಿಕೆಗಳ ಪರವಾಗಿಯೂ ಇರಬೇಕು. ನಮ್ಮ ಪಕ್ಕದಲ್ಲಿಯೇ ಇರುವ ಒಂದು ರಾಜ್ಯದಲ್ಲಿ ಚಂದ್ರಬಾಬು ನಾಯ್ಡು ಅವರಂಥ ಒಬ್ಬ ಮುಖ್ಯಮಂತ್ರಿ ಇದ್ದರೆ ನಾವು ಮೈಯೆಲ್ಲ ಕಣ್ಣಾಗಿ ಇರಬೇಕು. ಏಕೆಂದರೆ ಅವರು ನಮಗಿಂತ ದೂರ ನಡೆಯಲು ಸಿದ್ಧರಿದ್ದಾರೆ. ಕಾರಣ, ಅವರಿಗೆ ಈಗ ಉತ್ತಮವಾಗಿ ಆಡಳಿತ ಮಾಡಬೇಕು ಎಂಬ ಉದ್ದೇಶದ ಜತೆಗೆ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬ ಕನಸೂ ಇದೆ. ನಮಗೆ ಅದೇ ಇರುವಂತೆ ಕಾಣುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT