ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾವಣೆ ಎಂಬುದು ಬರಿ ಭ್ರಮೆಯೇ?

Last Updated 16 ಜೂನ್ 2018, 9:10 IST
ಅಕ್ಷರ ಗಾತ್ರ

ಆ  ಯುವಕನಿಗೆ ತಲೆತುಂಬ ಕನಸು. ವಯಸ್ಸು ಕೇವಲ 32.  ಯಾವುದೋ ಹಳ್ಳಿಯಲ್ಲಿ ಹುಟ್ಟಿ ಕಷ್ಟಪಟ್ಟು ಓದಿ ಮೇಲೆ ಬಂದಿದ್ದ.  ಮೊದಲ ಬಾರಿಗೆ  ಒಂದು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನೇಮಕ ಆಗಿದ್ದ. ಜನರಿಗೆ ಏನೆಲ್ಲ ಒಳ್ಳೆಯದು ಮಾಡಬೇಕು ಎಂದು ಆತ ಅಂದುಕೊಂಡಿದ್ದ. ಸರ್ಕಾರದ ಆಸ್ತಿ ಕಬಳಿಸಿದವರನ್ನು ಬಲಿ ಹಾಕಬೇಕು ಎಂದು ಅಂದುಕೊಂಡಿದ್ದ. ತಬರನಂತೆ ಸರ್ಕಾರಿ ಕಚೇರಿಗಳ ಕಂಬ ಕಂಬ ಸುತ್ತುವ ಬಡವರಿಗೆ ಸಹಾಯ ಮಾಡಬೇಕು ಎಂದುಕೊಂಡಿದ್ದ.  ಆಡಳಿತ ಎಂಬುದು ಜನರೇ ಅದರ ಬಳಿ ಬರುವ ಬದಲು, ಅದೇ ಅವರ ಬಳಿ ಹೋಗಬೇಕು ಎಂದು ಭಾವಿಸಿದ್ದ, ಹಾಗೆ ಮಾಡಲು ಆರಂಭಿಸಿದ್ದ ಕೂಡ. ಯಾರಾದರೂ ಬಡವರು ತಮ್ಮ ಕೆಲಸ ಆಗಲಿಲ್ಲ ಎಂದು ತನ್ನ ಬಳಿ ಬಂದರೆ ತಾನೇ ಸಂಬಂಧಪಟ್ಟ ಕೆಳಗಿನ ಸಿಬ್ಬಂದಿಗೆ ಫೋನು ಮಾಡಿ ಅವರ ಕೆಲಸ ಮಾಡಿಸುತ್ತಿದ್ದ. ಕೆರೆ, ಕುಂಟೆ, ಅರಣ್ಯ ಒತ್ತುವರಿ ಮಾಡಿಕೊಂಡವರನ್ನು ಎತ್ತಂಗಡಿ ಮಾಡಲು ಆರಂಭಿಸಿದ್ದ. ಹಳ್ಳಿ ಹಳ್ಳಿಗೆ ಹೋಗಿ ಕಂದಾಯ ಅದಾಲತ್‌ ಮಾಡಿದ್ದ. ಪೋಡಿ ಅದಾಲತ್‌ ಮಾಡಿದ್ದ. ಯಾರ ಯಾರದೋ ಹೆಸರಿಗೆ ಬದಲಾಗಿದ್ದ ಆಸ್ತಿಯನ್ನು ಮೂಲ ಮಾಲೀಕರಿಗೇ ಕೊಡಿಸಿದ್ದ. ದಲಿತರ ಮನೆಗೆ ಹೋಗಿ ಅವರ ಜತೆಗೆ ಕುಳಿತು ಊಟ ಮಾಡಿದ್ದ. ಊರಮ್ಮನ ಜಾತ್ರೆಯಲ್ಲಿ ಪೂಜಾ ಪಟ ಹೊತ್ತುಕೊಂಡು ಕುಣಿದಿದ್ದ. ಪ್ರತಿ ಭಾನುವಾರ ರಜೆ ಇದ್ದ ದಿನ ಹೆಂಡತಿ ಮಕ್ಕಳ ಜತೆಗೆ ಬೆಂಗಳೂರಿಗೆ ಬಂದು ಯಾವುದೋ ಮಾಲಿಗೋ, ಪಬ್ಬಿಗೋ ಹೋಗಿ ಮಜಾ ಮಾಡದೆ ಊರಿನ ಹುಡುಗ ಹುಡುಗಿಯರಿಗೆ ಐಎಎಸ್‌ ಪಾಸು ಮಾಡುವುದು ಹೇಗೆ ಎಂದು ಮೂರು ಮೂರು ಗಂಟೆ ಪಾಠ ಮಾಡಿದ್ದ.

ನಾಡಿನ ಮುಖ್ಯಮಂತ್ರಿ ಕೂಡ ಇದಕ್ಕೆಲ್ಲ ಮೆಚ್ಚುಗೆ ವ್ಯಕ್ತಪಡಿಸಿದ್ದರು.     ‘ನೋಡಿ ಆ ಜಿಲ್ಲಾಧಿಕಾರಿ ಮಾಡಿದ ಹಾಗೆಯೇ ನೀವೂ ಮಾಡಬೇಕು’ ಎಂದು ಅವರು ಬಹಿರಂಗವಾಗಿ ಬೆನ್ನು ತಟ್ಟಿದಾಗ ಖುಷಿಪಟ್ಟಿದ್ದ. ಇನ್ನಷ್ಟು ಜನಪರ ಕೆಲಸ ಮಾಡಬೇಕು ಎಂದು  ಹುರುಪುಗೊಂಡಿದ್ದ. ಆತ ಅಲ್ಲಿಗೆ ಬಂದು ಬಹಳ ದಿನಗಳೇನೂ ಆಗಿರಲಿಲ್ಲ. ಕೇವಲ ಹದಿನಾಲ್ಕು ತಿಂಗಳಾಗಿತ್ತು ಅಷ್ಟೇ. ಕನಿಷ್ಠ ಇನ್ನೂ ಒಂದು ವರ್ಷವಾದರೂ ತಾನು ಅಲ್ಲಿ ಇರಬಹುದು ಎಂದು ಲೆಕ್ಕ ಹಾಕಿದ್ದ. ಒಂದು ದಿನ ಬೆಳಿಗ್ಗೆ ಆತನಿಗೆ ವರ್ಗವಾದ ಸುದ್ದಿ ಬಂತು. ಅಚ್ಚರಿ ಆಯಿತು. ಒಂದಿಷ್ಟು ದುಃಖವೂ ಆಯಿತು. ತನಗೆ ಏಕೆ ವರ್ಗವಾಯಿತು ಎಂದು ಆತ ಯಾರಿಗೂ ಕೇಳುವಂತೆ ಇರಲಿಲ್ಲ. ತಾನೇನಾದರೂ ತಪ್ಪು ಮಾಡಿದ್ದೆನೆ? ಹಾಗೇನೂ ಕಾಣುತ್ತಿರಲಿಲ್ಲ. ಮುಖ್ಯಮಂತ್ರಿಯೇ  ಮೆಚ್ಚುಗೆ ವ್ಯಕ್ತಪಡಿಸಿದ್ದಿರಲ್ಲ? ಮತ್ತೆ ಎಲ್ಲಿ ತಪ್ಪಾಯಿತು? ಪತ್ರಿಕೆಗಳಲ್ಲಿ ಮರುದಿನ ಯಾರೋ ಪ್ರಭಾವಿ ಶಾಸಕರ, ಸಂಸದರ ಮಸಲತ್ತಿನಿಂದ ತನಗೆ ವರ್ಗವಾಯಿತು ಎಂದು ಸುದ್ದಿ ಬಂತು. ಹಾಗಾದರೆ ತಾನು ಜಿಲ್ಲಾಧಿಕಾರಿಯಾಗಿ ಮಾಡುತ್ತಿದ್ದುದು ಸರಿಯೇ? ತಪ್ಪೇ? ಯಾರು ಹೇಳಬೇಕು? ನೀನು ತಪ್ಪು ಮಾಡಿದ್ದೆ ಎಂದು ಯಾರಾದರೂ ಒಬ್ಬರು ಹೇಳಿಯಾದರೂ ವರ್ಗ ಮಾಡಿದ್ದರೆ ಚೆನ್ನಾಗಿತ್ತಲ್ಲ?...

ಮುಖ್ಯಮಂತ್ರಿಗಳ ಮೆಚ್ಚುಗೆಯ ಯೋಜನೆಯೊಂದರಲ್ಲಿ ಒಬ್ಬ ಅಧಿಕಾರಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಅಲ್ಲಿಗೆ ಬಂದು ಒಂದೂವರೆ ವರ್ಷವೂ ಆಗಿರಲಿಲ್ಲ. ಮುಖ್ಯಮಂತ್ರಿಯೇ ಬಯಸಿ ಅವರನ್ನು ಕರೆತಂದಿದ್ದರು. ಅಲ್ಲಿ ಇದ್ದಾಗ ಅವರು ಎಷ್ಟೊಂದು ಕೆಲಸ ಮಾಡಿದ್ದರು! ಯೋಜನೆಯ ಹುಳುಕುಗಳನ್ನೆಲ್ಲ ಪತ್ತೆ ಮಾಡಿದ್ದರು. ಅರ್ಹರಿಗೆ ಯೋಜನೆಯ ಲಾಭ ಸಿಗಲಿ ಎಂದು ಪ್ರಯತ್ನ ಮಾಡಿದ್ದರು. ಖೊಟ್ಟಿ ಫಲಾನುಭವಿಗಳನ್ನು ತೆಗೆದು ಹಾಕಿದ್ದರು. ಅಂತಿಮವಾಗಿ ಸರ್ಕಾರದ ಮೇಲಿನ ಸಬ್ಸಿಡಿ ಹೊರೆಯನ್ನು ಒಂದೂ ಕಾಲು ಸಾವಿರ ಕೋಟಿಗಳಷ್ಟು ಕಡಿಮೆ ಮಾಡಿದ್ದರು. ಅವರಿಗೂ ಒಂದು ಸಂಜೆ ವರ್ಗವಾಯಿತು. ಆದರೆ ಎಲ್ಲಿಗೆ ವರ್ಗ ಆಗಿದೆ ಎಂದು ಜಾಗ ತೋರಿಸಿರಲಿಲ್ಲ. ಅವರು ತಮ್ಮ ಹುದ್ದೆಗಾಗಿ ಒಂದು ತಿಂಗಳು ಕಾಯಬೇಕಾಯಿತು. ತಾನು ಮಾಡಿದ ತಪ್ಪು ಏನು ಎಂದು ಅವರಿಗೂ ಗೊತ್ತಿರಲಿಲ್ಲ. ಹೇಳಿ ವರ್ಗ ಮಾಡಿದ್ದರೆ ಚೆನ್ನಾಗಿತ್ತಲ್ಲ? ಒಂದು ತಿಂಗಳು  ಸುಮ್ಮನೆ  ಕೂಡ್ರಿಸುವಂಥ ತಪ್ಪನ್ನು ತಾನು ಮಾಡಿದ್ದೆನೇ? ಯಾರನ್ನು ಕೇಳುವುದು?...

ಈ ಇಬ್ಬರು ಅಧಿಕಾರಿಗಳ ಹೆಸರನ್ನು ನಾನು ಬೇಕೆಂದೇ ಬರೆದಿಲ್ಲ. ಅದೇನು ಭಾರಿ ರಹಸ್ಯವೂ ಅಲ್ಲ. ಆದರೆ, ಅವರು ರಾಜ್ಯದಲ್ಲಿ ಅಥವಾ ದೇಶದಲ್ಲಿ ಇಬ್ಬರೇ ಏನೂ ಅಲ್ಲ. ಅಂಥವರು ಬೇಕಾದಷ್ಟು ಮಂದಿ ಇದ್ದಾರೆ. ಹಾಗಾದರೆ ಸರ್ಕಾರ ಅಂದರೆ ಏನು? ಆಡಳಿತ ಎಂದರೆ ಏನು? ಅಧಿಕಾರದಲ್ಲಿ ಇರುವ ಜನಪ್ರತಿನಿಧಿಗಳಿಗೆ ತಾವು ಏನು ಮಾಡಲು  ಅಧಿಕಾರಕ್ಕೆ ಬಂದಿದ್ದೇವೆ ಎಂಬುದು ಗೊತ್ತಿರುವುದಿಲ್ಲವೇ? ಅಥವಾ ಅಧಿಕಾರ ಹಿಡಿಯುವುದಕ್ಕಿಂತ ಮುಂಚೆ ತಾವು ಏನು ಮಾಡಬೇಕು ಎಂದು ಅಂದುಕೊಂಡಿರುತ್ತಾರೋ ಅಧಿಕಾರ ಹಿಡಿದ ನಂತರ ಅದನ್ನು ಮಾಡಲು ಅವರಿಗೆ ಆಗುವುದಿಲ್ಲವೇ?

ಆಡಳಿತಗಾರನಿಗೆ ಮರೆವು ಬರುವಾಗಲೇ ‘ಮಂತ್ರಿ’ಯಾದವನು ಎಚ್ಚರದ ಮಾತು ಹೇಳಬೇಕು. ಇಲ್ಲಿ ‘ಮಂತ್ರಿ’ ಎಂಬುವನು ಮುಖ್ಯ ಕಾರ್ಯದರ್ಶಿ. ಆತ ಒಂದು ಪ್ರದೇಶದ ಮುಖ್ಯ ಕಾರ್ಯ ನಿರ್ವಾಹಕ. ಅವನ ಅಡಿಯಲ್ಲಿಯೇ ಎಲ್ಲ ಅಧಿಕಾರಶಾಹಿ ಕೆಲಸ ಮಾಡುತ್ತ ಇರುತ್ತದೆ. ಒಬ್ಬ ದಕ್ಷ ಅಧಿಕಾರಿಯನ್ನು ವಿನಾಕಾರಣ ವರ್ಗ ಮಾಡಬೇಕು ಎಂದು ಮುಖ್ಯಮಂತ್ರಿ ಅಥವಾ ಸಂಬಂಧಪಟ್ಟ ಸಚಿವ ಆದೇಶ ಕೊಟ್ಟರೆ ಹಾಗೆ ಮಾಡಲು ಆಗದು ಎಂದು ಮುಖ್ಯ ಕಾರ್ಯದರ್ಶಿಯಾದವರು ಹೇಳಬೇಕು. ಸತ್ಯ ಯಾವಾಗಲೂ ಕಹಿ ಆಗಿರುತ್ತದೆ. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ಹೀಗೆಲ್ಲ ಶಿಕ್ಷಿಸಿದರೆ ಉಳಿದವರಿಗೆ ತಪ್ಪು ಸಂದೇಶ ಹೋಗುತ್ತದೆ ಎಂದು ಅವರು ಕಿವಿ ಮಾತು ಹೇಳಬೇಕು. ಆಳುವ ಪ್ರಭುಗಳು ಕೇಳದೇ ಹೋದರೆ ಹಟ ಹಿಡಿಯಬೇಕು. ಆಗಲೂ ಅವರು ಕೇಳದೇ ಇದ್ದರೆ ಮುಖ್ಯ ಕಾರ್ಯದರ್ಶಿಗೆ ತನ್ನ ಅಭಿಪ್ರಾಯವನ್ನು ಕಡತದಲ್ಲಿ ನಮೂದಿಸಲು ಅಧಿಕಾರ ಇರುತ್ತದೆ. ಹಿಂದೆಲ್ಲ ಮುಖ್ಯ ಕಾರ್ಯದರ್ಶಿಗಳಾದವರು ಹೀಗೆ ಮಾಡಿದ್ದಾರೆ.

ಸರ್ಕಾರದ ಆಡಳಿತ ಎಂಬುದು ಒಂದು ‘ನೋವಿನ’ ಸಂಗತಿ.  ಅದರಲ್ಲಿ ಸುಖ ಎಷ್ಟು ಇರುತ್ತದೆಯೋ ಅಷ್ಟೇ ‘ನೋವು’ ಕೂಡ ಇರುತ್ತದೆ. ಅಕ್ರಮ ಒತ್ತುವರಿ ತೆರವು ಮಾಡುತ್ತೇವೆ ಎಂದು ಘೋಷಿಸುವುದು ಬಹಳ ಸುಲಭ. ಒಂದು ಸಾರಿ ಒತ್ತುವರಿ ತೆರವು ಮಾಡಲು ಆರಂಭಿಸಿದ ಕೂಡಲೇ ‘ನೋವು’ ಶುರುವಾಗುತ್ತದೆ. ಹಿತಾಸಕ್ತಿಗಳ ನಡುವೆ ಸಂಘರ್ಷ ಶುರವಾಗುತ್ತದೆ. ಯಾರೋ ಪ್ರಭಾವಿಗಳು, ಚುನಾವಣೆಯಲ್ಲಿ ಹಣ ಕೊಟ್ಟವರು, ಹೈಕಮಾಂಡ್‌ ಬಳಿ ಮಾತು ನಡೆಯುವವರು, ಅಥವಾ ಹೈಕಮಾಂಡ್‌ನ್ನೇ ಬುಟ್ಟಿಗೆ ಹಾಕಿಕೊಳ್ಳಬಲ್ಲವರು ಬಂದು ಎದುರು ನಿಲ್ಲುತ್ತಾರೆ. ಬದಲಾವಣೆಯ ‘ನೋವು’ ಏನು ಎಂಬುದು ಅಧಿಕಾರದಲ್ಲಿ ಇದ್ದವರಿಗೆ ಆಗ ಅರಿವಾಗತೊಡಗುತ್ತದೆ. ಅವರು ರಾಜಿ ಮಾಡಿಕೊಳ್ಳಲು ಆರಂಭಿಸುತ್ತಾರೆ. ಪ್ರಾಮಾಣಿಕತೆ ಎಂಬುದು ಕ್ವಚಿತ್ ಆಗುತ್ತ ಹೋಗುತ್ತದೆ. ಯಾರು ಯಾರಿಗೋ ಏಟು ಬೀಳುತ್ತ ಹೋಗುತ್ತದೆ.

ಸರ್ಕಾರಕ್ಕೆ ಒಂದು ದೊಡ್ಡ ಕನಸು ಎಂಬುದು ಇರಬೇಕು. ಅದು ದೀರ್ಘ ಕನಸು ಕೂಡ ಆಗಿರಬೇಕು. ಅದಕ್ಕೆ ಸಮಯ ಬೇಕು, ಧ್ಯಾನಸ್ಥ ಮನಸ್ಸು ಬೇಕು. ಯಾರಿಗೂ ಜಗ್ಗದ ದೃಢತೆ ಬೇಕು. ಏಕೆಂದರೆ ಅದು ಜನರಿಗೆ ಒಳಿತು ಮಾಡುವ ಕನಸು. ಅದು ಕೊಂಚ ಕಷ್ಟದ ಕೆಲಸ. ಅದರಲ್ಲಿ ಎಲ್ಲರೂ ಪಾಲುಗೊಳ್ಳಬೇಕಾಗುತ್ತದೆ. ಜನಪ್ರತಿನಿಧಿಗಳಿಗೆ ಐದು ವರ್ಷದ ಕನಸು ಮಾತ್ರ ಇರುತ್ತದೆ.  ಅಧಿಕಾರಿಗಳಿಗೆ ಮೂವತ್ತೈದು ವರ್ಷಗಳ ಕನಸು ಇರುತ್ತದೆ. ಹದಿನೈದು ವರ್ಷಗಳ ತನ್ನ ಸೇವಾವಧಿಯಲ್ಲಿ ಒಬ್ಬ ಅಧಿಕಾರಿ ಹತ್ತೊಂಬತ್ತು ಸಾರಿ ವರ್ಗವಾದರೆ ಆತನ ಕನಸು ಹಾಗೆಯೇ ಉಳಿಯುತ್ತದೆಯೇ? ಐದು ವರ್ಷದಲ್ಲಿಯೇ ಅಧಿಕಾರ ಕಳೆದುಕೊಳ್ಳುವ ಜನಪ್ರತಿನಿಧಿಗೇ ಇಲ್ಲದ ಉಸಾಬರಿ ತನಗೇಕೆ ಬೇಕು ಎಂದು ಆತ ಅಥವಾ ಆಕೆ ಅಂದುಕೊಂಡರೆ ಅದರಲ್ಲಿ   ಏನು ತಪ್ಪು? ಒಂದು ಇಲಾಖೆಯನ್ನು ಅರ್ಥ ಮಾಡಿಕೊಳ್ಳಲು ಕನಿಷ್ಠ ಆರು ತಿಂಗಳಾದರೂ ಬೇಕು. ಅರ್ಥ ಮಾಡಿಕೊಂಡು ಅನುಷ್ಠಾನ ಮಾಡಲು ಒಂದು ವರ್ಷ ಬೇಕು. ಅಷ್ಟು ಅವಧಿಗೂ ತಾನು ಅಲ್ಲಿ ಇರುತ್ತೇನೆಯೇ ಇಲ್ಲವೇ ಎಂದು ಅಧಿಕಾರಿಗೆ ಖಚಿತ ಇಲ್ಲದೇ ಇದ್ದರೆ ಅವರು ಏಕೆ ‘ಸಕ್ರಿಯ’ ಆಗುತ್ತಾರೆ? ‘ಸಕ್ರಿಯ’ ಆಗಲು ಹೊರಟವರಿಗೇ ಈಗ ಏಟು  ಬೀಳುತ್ತಿದೆಯಲ್ಲ?

ಇದೇ ಮೊದಲ ಬಾರಿಗೆ ಜಿಲ್ಲಾಧಿಕಾರಿಯಾಗಿದ್ದ ಒಬ್ಬರಿಗೆ ಒಳ್ಳೆಯ ಕೆಲಸ ಮಾಡಿದಾಗಲೂ ದಿಢೀರ್‌ ಎಂದು ವರ್ಗಾವಣೆಯ ಶಿಕ್ಷೆ ಕೊಟ್ಟರೆ ಅವರ ವಾರಿಗೆಯವರಿಗೆ ಎಂಥ ಸಂದೇಶ ಹೋಗುತ್ತದೆ? ಆಡಳಿತ ಎಂಬುದು ಬದಲಾವಣೆಯ ಹಳಿಯ ಬದಲಿಗೆ ಯಥಾಸ್ಥಿತಿಯ ಹಳಿಗೆ ಅಥವಾ ನಕಾರಾತ್ಮಕ ಚಾಳಿಗೆ ಬೀಳುವುದು ಇಂಥ ಕ್ರಮಗಳಿಂದಲೇ. ಒಂದು ಸಾರಿ ಅದು ಜಾಡಿಗೆ ಬಿದ್ದರೆ ಮತ್ತೆ ಅದನ್ನು ಚುರುಕುಗೊಳಿಸುವುದು ಬಹಳ ಕಷ್ಟ. ಸುಮ್ಮನೆ ವಿಧಾನಸೌಧದ  ಸಮ್ಮೇಳನ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ಕರೆದು ಜರಿದರೆ  ಅವರು ಮುಗುಳು ನಗುತ್ತ ಎದ್ದು ಹೋಗುತ್ತಾರೆ. ಹೇಗಿದ್ದರೂ ಸರ್ಕಾರ ಭ್ರಷ್ಟರನ್ನು ಕಾಪಾಡುತ್ತದೆ ಮತ್ತು ಪ್ರಾಮಾಣಿಕರನ್ನು ಹಾಗೂ ದಕ್ಷರನ್ನು ಸಹಿಸುವುದಿಲ್ಲ ಎಂಬ ಸಂದೇಶ ಅವರಿಗೆ  ಸಿಕ್ಕು ಎಷ್ಟೋ ವರ್ಷಗಳಾಗಿದೆಯಲ್ಲ? ಅವರಿಗೆ ಅನಿಸಿದ್ದು ತಪ್ಪು ಎಂದು ನಂತರ ಬಂದ ಸರ್ಕಾರಗಳೂ ತಿಳಿ ಹೇಳಿಲ್ಲವಲ್ಲ? ಧೈರ್ಯ ತುಂಬಿಲ್ಲವಲ್ಲ? ಮತ್ತೆ ಯಾವ  ಪಕ್ಷದ ಸರ್ಕಾರ ಬಂದರೆ ಏನು? ಆಯಕಟ್ಟಿನ ಜಾಗದಲ್ಲಿ ಭ್ರಷ್ಟರೇ ಕುಳಿತಿರುತ್ತಾರೆ ಎಂಬುದು ಅವರ ಕಣ್ಣಿಗೇನು ಕಾಣುವುದಿಲ್ಲವೇ?

ಜಾಡಿಗೆ ಬಿದ್ದ ವ್ಯವಸ್ಥೆಯನ್ನು ಬದಲು ಮಾಡುವುದು ಹೇಗೆ? ಸಾರ್ವಜನಿಕಕ್ಕೆ ಒಳಿತು ಮಾಡುವುದು ಹೇಗೆ? ಆಡಳಿತದಲ್ಲಿ ಒಂದಿಷ್ಟು ಮಾನವೀಯತೆಯನ್ನು ತುಂಬುವುದು ಹೇಗೆ? ಎಲ್ಲವೂ ಮೇಲಿನಿಂದಲೇ ಆರಂಭವಾಗಬೇಕು. ಈಗಿನ ಆಡಳಿತದಲ್ಲಿ ಮಾನವೀಯತೆ ಎಂಬುದು ಇಲ್ಲ. ಅದರ  ಬದಲಿಗೆ ಹಿಂಸೆ ಇದೆ. ಮುಖ್ಯಮಂತ್ರಿ ಪ್ರತಿ ಸಾರಿ ಜನತಾ ದರ್ಶನ ಮಾಡುವಾಗ ಹಿಂಡುಗಟ್ಟಲೆ ಜನರು ಮನವಿ ಪತ್ರ ಹಿಡಿದುಕೊಂಡು ಅವರ ಬಳಿಗೆ ಏಕೆ ಬರುತ್ತಾರೆ? ಕೆಳಗಿನ ಅಧಿಕಾರಿಗಳು ಕೆಲಸ ಮಾಡುವುದಿಲ್ಲ ಎಂದೇ ಅಲ್ಲವೇ? ಕೆಳ ಹಂತದ ಅಧಿಕಾರಿಗಳು ಹಾಗೆ ಏಕೆ ಆದರು? ಅವರಲ್ಲಿ ನಕಾರಾತ್ಮಕ ಭಾವನೆ ತುಂಬಿದ್ದು ಹೇಗೆ? ಒಬ್ಬ ಮುಖ್ಯಮಂತ್ರಿ ಹೀಗೆಯೇ ಎಷ್ಟು ದಿನ ಎಂದು ಜನತಾ ದರ್ಶನ ಮಾಡುತ್ತ ಇರುತ್ತಾರೆ? ಅದು ಅವರು ಮಾಡಬೇಕಾದ ಕೆಲಸವೇ? ಅದನ್ನೇ ಒಬ್ಬ ಜಿಲ್ಲಾಧಿಕಾರಿ, ಕಾರ್ಯದರ್ಶಿ ಏಕೆ ಮಾಡುವುದಿಲ್ಲ? ಜಿಲ್ಲಾ ಮಟ್ಟದಲ್ಲಿ ಸಚಿವರು ಏಕೆ ಮಾಡುವುದಿಲ್ಲ?

ಹಾಗಾದರೆ ಬದಲಾವಣೆ ಎಂಬುದು ಬರೀ ಹುಸಿ ಕನಸೇ? ತೋರಿಕೆಯೇ? ಮುಖವಾಡವೇ? ತನಗೆ ಒಂದು ಸಾರಿ ಅಧಿಕಾರ ಸಿಗಲಿ ಏನೆಲ್ಲ ಮಾಡುವೆ ನೋಡು ಎಂದು ಸವಾಲು ಹಾಕಿದ ವ್ಯಕ್ತಿಯೇ ಅಸಹಾಯಕನಂತೆ ನಮಗೆ ಕಾಣಿಸಲು ತೊಡಗುತ್ತಾನೆ. ಬದಲಾವಣೆ ಅಷ್ಟು ಸುಲಭವಲ್ಲ ಎಂದು ಖಾಸಗಿಯಾಗಿ ಆತ ಹೇಳಲು ಆರಂಭಿಸುತ್ತಾನೆ. ಆದರೆ, ತಾನು ಬಂದ ಉದ್ದೇಶವನ್ನು ಸಾಧಿಸಲು ಆಗುತ್ತಿಲ್ಲ ಎಂದು ತಿಳಿದ ಮೇಲೂ ಅಧಿಕಾರವನ್ನು ಬಿಟ್ಟುಕೊಡುವುದಿಲ್ಲ. ಅಲ್ಲಿಗೆ ಉದ್ದೇಶವಿಲ್ಲದ ಆಡಳಿತದ ಯುಗ ಆರಂಭವಾಗುತ್ತದೆ. ಅದು ಎಷ್ಟು ಬೇಗ ಮುಗಿದರೆ ಅಷ್ಟು ಒಳ್ಳೆಯದು ಎಂದು ಜನರಿಗೆ ಅನಿಸಲು ತೊಡಗುತ್ತದೆ. ಹಿಂದಿನ ಸರ್ಕಾರ ಮನೆಗೆ ಹೋದುದು ಹೀಗೆಯೇ ಉದ್ದೇಶವಿಲ್ಲದ ಆಡಳಿತದಿಂದಾಗಿಯೇ ಅಲ್ಲವೇ? 

ಈಗಿನ ಸರ್ಕಾರಕ್ಕೂ ತನ್ನ ಉದ್ದೇಶ ಮರೆತು ಹೋಗಿದೆಯೇ? ಮರೆತು ಹೋಗಿದೆ ಎನ್ನುವುದಕ್ಕಿಂತ ಮರೆತು ಹೋಗುವ ದಾರಿಯಲ್ಲಿ ಈ ಸರ್ಕಾರ ಇದೆ ಎಂದು ಸುರಕ್ಷಿತವಾಗಿ ಹೇಳಬಹುದೇನೋ!  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT