ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಗಾದಿ ಮತ್ತು ದಲಿತ ದ್ವಂದ್ವ

Last Updated 16 ಜೂನ್ 2018, 9:10 IST
ಅಕ್ಷರ ಗಾತ್ರ

ಅಧಿಕಾರವೇ ಹಾಗೆ. ಒಂದು ಸಾರಿ ಅದರ ಬೆನ್ನು ಹತ್ತಿದರೆ ಅದು ಸಿಗುವವರೆಗೆ ನಮಗೆ ಸಮಾಧಾನ ಇರುವುದಿಲ್ಲ. ಸಮಾಧಾನದಿಂದ ಇರಲು ಅದು ನಮ್ಮನ್ನು ಬಿಡುವುದೂ ಇಲ್ಲ. ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಆಗಬೇಕಿದೆ. ಕನಿಷ್ಠ ಉಪಮುಖ್ಯಮಂತ್ರಿ ಆಗಬೇಕಿದೆ. ಅವರಿಗೆ ಆ ಅರ್ಹತೆ ಇಲ್ಲ ಎಂದು ಅಲ್ಲ. ಆದರೆ, ಅವರಿಗೆ ಅದೃಷ್ಟ ಇಲ್ಲ. ಅದೃಷ್ಟ ಇದ್ದಿದ್ದರೆ ಅವರು ವಿಧಾನಸಭೆ ಚುನಾವಣೆಯಲ್ಲಿ ಗೆದ್ದೇ ಬಿಡುತ್ತಿದ್ದರು. ಗೆದ್ದಿದ್ದರೆ ಮೂಲ ಕಾಂಗ್ರೆಸ್ಸಿಗ ಪರಮೇಶ್ವರ್‌ ಮತ್ತು ವಲಸೆ ಕಾಂಗ್ರೆಸ್ಸಿಗ ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಗದ್ದುಗೆಗೆ ಪೈಪೋಟಿಯೇ ನಡೆಯುತ್ತಿತ್ತು. ಆದರೆ, ವಿಧಿಯಾಟ ಬೇರೆಯೇ ಇತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಮೇಶ್ವರ್ ಸೋತರು ಅಥವಾ ಸೋಲಿಸಲ್ಪಟ್ಟರು. ಅದು ಸಿದ್ದರಾಮಯ್ಯ ಅವರ ಹಾದಿಯನ್ನು ಎರಡು ರೀತಿಯಿಂದ ಸುಲಭ ಮಾಡಿತು: ಒಂದು, ಅವರೇ ಹೆಚ್ಚು ಪೈಪೋಟಿ ಇಲ್ಲದೆ ಮುಖ್ಯಮಂತ್ರಿ ಆಗಿಬಿಟ್ಟರು. ಎರಡು, ಪರಮೇಶ್ವರ್‌ ಅವರನ್ನು ಸಚಿವ ಅಥವಾ ಉಪಮುಖ್ಯಮಂತ್ರಿ ಮಾಡುವ ಕುರಿತು ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಅವರು ಹೇಳಿಬಿಟ್ಟರು. ಈಗಲೂ ಅವರು ಅದನ್ನೇ ಹೇಳುತ್ತಿರುವುದು.

ಹೈಕಮಾಂಡ್‌ ಯಾವ ಕಾರಣಕ್ಕೋ ಪರಮೇಶ್ವರ್‌ ಅವರಿಗೆ ಅಧಿಕಾರ ಕೊಡುವ ಕುರಿತು ಏನನ್ನೂ ಹೇಳುತ್ತಿಲ್ಲ. ಅದಕ್ಕೆ ಹೈಕಮಾಂಡ್‌ ಸ್ವತಃ ಸೋತು ಸುಣ್ಣವಾಗಿ ಯಾರಿಗೂ ಏನೂ ಹೇಳದಷ್ಟು ದುರ್ಬಲ ಆಗಿರುವುದು ಕಾರಣ ಆಗಿರಬಹುದು, ಇಡೀ ದೇಶದಲ್ಲಿ ಇರುವ ಪಕ್ಷದ ಏಕೈಕ ದೊಡ್ಡ ಸರ್ಕಾರವನ್ನು ಅಸ್ಥಿರಗೊಳಿಸಬಾರದು ಎಂದು ಅದಕ್ಕೆ ಅನಿಸಿರಬಹುದು ಅಥವಾ ಸಿದ್ದರಾಮಯ್ಯನವರು ಹೈಕಮಾಂಡ್‌ ಅನ್ನು ಅಥವಾ ಅದರ ಪ್ರತಿನಿಧಿಯನ್ನು ಸಮಾಧಾನದಿಂದ ಇರುವಂತೆ ನೋಡಿಕೊಂಡಿರಬಹುದು. ಇದೆಲ್ಲವೂ ನಿಜ ಇರಬಹುದು ಅಥವಾ ಇದರಲ್ಲಿ ಯಾವುದಾದರೂ ನಿಜ ಇರಬಹುದು.

ಆದರೆ, ತಮಗೆ ಕನಿಷ್ಠ ಉಪಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆ ಇದೆ ಎಂದು ನಿಜವಾಗಿಯೇ ನಂಬಿಕೊಂಡಿರುವ ಪರಮೇಶ್ವರ್‌ ಅವರಿಗೆ ದಿನಗಳು ಕಳೆದಂತೆ ಚಡಪಡಿಕೆ ಹೆಚ್ಚುತ್ತಿದೆ. ಅವರಿಗಿಂತ ಅವರ ಹಿಂದೆ ಇರುವವರಿಗೆ ಚಡಪಡಿಕೆ ಹೆಚ್ಚುತ್ತಿದೆ. ಈ ಸರ್ಕಾರಕ್ಕೆ ಇನ್ನೂ ಎರಡು ವರ್ಷ ತುಂಬಿಲ್ಲ. ಈಗಾಗಲೇ ಪರಮೇಶ್ವರ್‌ ಪರವಾಗಿ ಮೂರು ಸಭೆಗಳು ನಡೆದಿವೆ. ಅಲ್ಲಿ ದಲಿತ ಮುಖಂಡರು ಭಾಗವಹಿಸಿದ್ದಾರೆ, ಪ್ರಗತಿಪರ ಚಿಂತಕರು ಭಾಗವಹಿಸಿದ್ದಾರೆ. ಶನಿವಾರ ಕೂಡ ಸಮಾನಮನಸ್ಕರು ಭಾಗವಹಿಸಿ ಇದನ್ನೇ ಚರ್ಚಿಸಿದ್ದಾರೆ. ‘ಪರಮೇಶ್ವರ್‌ ಅವರಿಗೆ ಅಧಿಕಾರ ಸಿಗದೇ ಅನ್ಯಾಯವಾಗಿದೆ’ ಎಂಬ ಸಂಗತಿಯನ್ನು ಸತತವಾಗಿ ಚರ್ಚೆಯಲ್ಲಿ ಇಡುವಲ್ಲಿ ಅವರ ಹಿಂಬಾಲಕರು ಯಶಸ್ವಿಯಾಗಿದ್ದಾರೆ. ಇಂಥ ಸಭೆಗಳಲ್ಲಿ ಭಾಗವಹಿಸದೇ ಇದ್ದಾಗಲೂ ಪರಮೇಶ್ವರ್‌ ಅವರು ಪರೋಕ್ಷವಾಗಿ ತಮ್ಮ ಸುತ್ತಲೇ ಚರ್ಚೆ ನಡೆಯುವಂತೆ ನೋಡಿಕೊಂಡಿದ್ದಾರೆ.

ಕರ್ನಾಟಕದ ರಾಜಕಾರಣದ ಮಟ್ಟಿಗೆ ಇದು ಬಹಳ ಮಹತ್ವದ ಚರ್ಚೆ: ಇಲ್ಲಿ ಪರಮೇಶ್ವರ್‌ ಅವರಿಗೆ ಅನ್ಯಾಯವಾಗಿದೆ ಎನ್ನುವುದಕ್ಕಿಂತ ಒಬ್ಬ ದಲಿತ ವ್ಯಕ್ತಿ ಮುಖ್ಯಮಂತ್ರಿ ಆಗುವುದು ಯಾವಾಗ ಎಂಬ ಪ್ರಶ್ನೆ ಎದ್ದು ನಿಂತಿದೆ. ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಪ್ರಗತಿಪರವಾಗಿ ಯೋಚಿಸುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ದಲಿತರೊಬ್ಬರು ಮುಖ್ಯಮಂತ್ರಿ ಆಗುವುದು ಸಾಧ್ಯವಿರುವ ದಕ್ಷಿಣದ ಯಾವುದಾದರೂ ರಾಜ್ಯವಿದ್ದರೆ ಅದು ಮುಖ್ಯವಾಗಿ ಕರ್ನಾಟಕ. ಅದು ಕೂಡ ಸಾಧ್ಯವಾಗುವುದು ಕಾಂಗ್ರೆಸ್‌ ಪಕ್ಷದ ಸರ್ಕಾರ ಅಧಿಕಾರದಲ್ಲಿ ಇರುವಾಗಲೇ.

ಪರಮೇಶ್ವರ್‌ ಅವರಿಗೆ ಈಗ ಮುಖ್ಯಮಂತ್ರಿ ಹುದ್ದೆಯ ಕನಸು ಬೀಳುತ್ತಿದ್ದರೆ ಅದು ಸಹಜವಾಗಿದೆ ಮತ್ತು ಹಿನ್ನೆಲೆಯಲ್ಲಿ ಇದೆಲ್ಲ ಇದೆ. ಕಾಂಗ್ರೆಸ್ಸಿಗರಿಗೂ ಮತ್ತು ಆ ಪಕ್ಷದಲ್ಲಿ ಇರುವ ದಲಿತ ಹಿತಾಕಾಂಕ್ಷಿಗಳಿಗೂ ಈ ಸಂಗತಿ ಗೊತ್ತಿದೆ. ಆದರೆ, ದಲಿತರಲ್ಲಿ ಮುಖ್ಯಮಂತ್ರಿ ಆಗುವುದಾದರೆ ಮುಂಚೂಣಿಯಲ್ಲಿ ಇರುವವರು ಹಿರಿಯರಾದ ಮಲ್ಲಿಕಾರ್ಜುನ ಖರ್ಗೆಯವರು. ಅವರೇ ನಿರ್ಲಿಪ್ತರಾಗಿರುವಂತೆ ಇದೆ. ಹಾಗೆ ಇಲ್ಲದೇ ಇದ್ದರೆ ಅವರು ಈಗ ‘ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲವಲ್ಲ’ ಎಂದು ಹೇಳುತ್ತಿರಲಿಲ್ಲ. ಪರಮೇಶ್ವರ್‌ ಅವರ ಬಗ್ಗೆ ದಲಿತರಲ್ಲಿ ಎಷ್ಟೇ ಸಹಾನುಭೂತಿ ಇರಲಿ, ‘ದಲಿತ ಸಮುದಾಯದಿಂದ ಮುಖ್ಯಮಂತ್ರಿ ಆಗುವುದಾದರೆ ಮೊದಲು ಅದು ಖರ್ಗೆ ಅವರೇ ಆಗಿರಬೇಕು; ಏಕೆಂದರೆ ಅವರಿಗೆ ಹಿರಿತನ ಇದೆ ಮತ್ತು ಹೆಚ್ಚಿನ ಅರ್ಹತೆ ಇದೆ’ ಎಂದು ಅವರು ಅಂದುಕೊಳ್ಳುತ್ತಿದ್ದಾರೆ.

ಆದರೆ, ಪರಮೇಶ್ವರ್‌ ಬೆಂಬಲಿಗರು, ‘ಖರ್ಗೆಯವರು ದೆಹಲಿಯಲ್ಲಿ ಒಳ್ಳೆಯ ಅಧಿಕಾರದಲ್ಲಿ ಇದ್ದಾರೆ, ಈಗ ಅವರು ಕೇಂದ್ರ ರಾಜಕಾರಣಕ್ಕೆ ಮೀಸಲು, ಅವರು ಇನ್ನು ರಾಜ್ಯಕ್ಕೆ ಬರಬೇಕಿಲ್ಲ’ ಎಂದು ತಾವೇ ಕಾರಣಗಳನ್ನು ಕಂಡುಕೊಂಡಿದ್ದಾರೆ. ಹಾಗೆಂದು ಖರ್ಗೆಯವರಿಗೆ ಕೇಂದ್ರದಲ್ಲಿ ಯಾವ ಅಧಿಕಾರ ಇದೆ? ಕನಿಷ್ಠ ಅವರಿಗೆ ವಿರೋಧ ಪಕ್ಷದ ನಾಯಕ ಎಂದಾದರೂ ಲೋಕಸಭಾಧ್ಯಕ್ಷರು ಮಾನ್ಯತೆ ನೀಡಿದ್ದರೆ ಒಂದು ಕಚೇರಿ, ಒಂದಿಷ್ಟು ಸಿಬ್ಬಂದಿ, ಕಾರು ಎಂದೆಲ್ಲ ಸೌಲಭ್ಯವಾದರೂ ಸಿಗುತ್ತಿತ್ತು. ಈಗ ಅದು ಯಾವುದೂ ಇಲ್ಲ. ಮತ್ತೆ, ಅದು ಎಂಥ ಅಧಿಕಾರ? ಆದರೂ ಖರ್ಗೆ ಚಕಾರ ಎತ್ತುವುದಿಲ್ಲ. ಪಕ್ಷ ನಿಷ್ಠೆ ಮತ್ತು ಶಿಸ್ತು ಎಂದರೆ ಏನು ಎಂದು ಅವರಿಂದ ಕಲಿಯಬೇಕು. ಅವರಿಗೆ ಮುಖ್ಯಮಂತ್ರಿ ಆಗಬೇಕು ಎಂಬ ಆಸೆಯಿಲ್ಲ ಎಂದೇನೂ ಅಲ್ಲ. ಆದರೆ, ಅದು ಬರುವ ರೀತಿಯಲ್ಲಿ ಬರಬೇಕು ಎಂದು ಅಂದುಕೊಂಡವರು ಅವರು.

ಪಕ್ಷದ ಶಿಸ್ತಿನ ಪಾಲನೆ ವಿಚಾರದಲ್ಲಿ ಪರಮೇಶ್ವರ್‌ ಅವರೂ ಒಂದು ಕೈ ಮಿಗಿಲೇ. ಹಾಗೆ ಇಲ್ಲದೇ ಇದ್ದರೆ ಅವರು ಭಿನ್ನಮತೀಯ ನಾಯಕನಾಗಿ ಕೆಲಸ ಮಾಡಬಹುದಿತ್ತು. ಅವರಿಗೆ ಈ ಸರ್ಕಾರದ ಜತೆಗೆ ಹಾಲು ಜೇನಿನ ಸಂಬಂಧ ಇಲ್ಲದೇ ಇದ್ದರೂ ಅವರು ಅಪಸ್ವರದ ಮಾತುಗಳನ್ನು ಎಲ್ಲರಿಗೂ ಕೇಳುವಂತೆ ಆಡಿಲ್ಲ. ಅವರು ಭಿನ್ನಮತೀಯ ನಾಯಕನಾಗಿ ಬಹಿರಂಗವಾಗಿ ಗುರುತಿಸಿಕೊಂಡಿದ್ದರೆ ಮುಖ್ಯಮಂತ್ರಿಗಳ ಜತೆಗೆ ಮತ್ತು ಸಚಿವರ ಜತೆಗೆ ಮುನಿಸು ಇರುವವರೂ ಪರಮೇಶ್ವರ್‌ ಶಿಬಿರದಲ್ಲಿ ಬಂದು ಸೇರಿಕೊಳ್ಳುತ್ತಿದ್ದರೋ ಏನೋ? ಆದರೆ, ಕನಿಷ್ಠ ದಲಿತ ಶಾಸಕರಾದರೂ ಪಕ್ಷದ ಹಾಲಿ ಅಧ್ಯಕ್ಷರಾದ ಪರಮೇಶ್ವರ್‌ ಪರವಾಗಿ ಧ್ವನಿ ಎತ್ತದೇ ಇರುವುದು ಸೋಜಿಗವಾಗಿ ಕಾಣುತ್ತಿದೆ. ಅಂದರೆ ಕಾಂಗ್ರೆಸ್‌ ಪಕ್ಷದಲ್ಲಿ ಈಗ ಆರಿಸಿ ಬಂದಿರುವ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕನಿಷ್ಠ ಇಪ್ಪತ್ತೆಂಟು ಶಾಸಕರಿಗೆ ತಮ್ಮ ಸಮುದಾಯದ ಒಬ್ಬರು ಮುಖ್ಯಮಂತ್ರಿ ಆಗಬೇಕು ಎಂದು ಅನಿಸುತ್ತಿಲ್ಲವೇ? ಅನಿಸದೇ ಇದ್ದರೆ ಏನೋ ಸಮಸ್ಯೆ ಇದೆ ಎಂದು ಅರ್ಥ. ಈ ಸಮಸ್ಯೆ ಪರಮೇಶ್ವರ್‌ ಅವರಲ್ಲಿ ಇದೆಯೋ ಅಥವಾ ದಲಿತ ಶಾಸಕರಲ್ಲಿಯೇ ಇದೆಯೋ ತಿಳಿಯದು. ಪರಮೇಶ್ವರ್‌ ಅವರ ಬೆಂಬಲಿಗರು ನಡೆಸುತ್ತಿರುವ ಸಭೆಗಳಲ್ಲಿ ಈ ಶಾಸಕರು ಯಾರೂ ಭಾಗವಹಿಸುತ್ತಿಲ್ಲ. ಇನ್ನೂ ವಿಶೇಷ ಎಂದರೆ ಕಾಂಗ್ರೆಸ್ಸಿನ ಬಗೆಗೆ ಸಹಾನುಭೂತಿ ಇರುವ ದಲಿತ ಸಂಘಟನೆಗಳ ಮುಖಂಡರೂ ಇಂಥ ಸಭೆಗಳಲ್ಲಿ ಹಾಜರಾಗುತ್ತಿಲ್ಲ. 

ಮುಖ್ಯಮಂತ್ರಿಗಳಿಗೆ ಮತ್ತು ಅವರ ಹಿಂದೆ ಗಟ್ಟಿಯಾಗಿ ನಿಂತಿರುವ ಸಂಪುಟದ ದಲಿತ ಮಂತ್ರಿಗಳಿಗೆ ಈ ಎಲ್ಲ ‘ದೌರ್ಬಲ್ಯ’ ಗೊತ್ತಾಗಿದೆ. ತಾತ್ವಿಕವಾಗಿ ತುಂಬ ಇಕ್ಕಟ್ಟಿನ ಈ ಪ್ರಶ್ನೆಯನ್ನು ಅವರು ರಾಜಕೀಯವಾಗಿ ಬಹಳ ಜಾಣ್ಮೆಯಿಂದ ನಿಭಾಯಿಸುತ್ತಿದ್ದಾರೆ. ತಮಗೆ ಸಿಕ್ಕ ಅಧಿಕಾರವನ್ನು ಯಾರೂ ಸುಮ್ಮ ಸುಮ್ಮನೇ ಬಿಟ್ಟುಕೊಡುವುದಿಲ್ಲ. ಸಿದ್ದರಾಮಯ್ಯನವರು ಅಹಿಂದ ಚಳವಳಿಯಿಂದಲೇ ಹೊಮ್ಮಿ ಬಂದ ನಾಯಕನಾಗಿರಬಹುದು. ಹಾಗೆಂದು ಈಗ ದಲಿತರಿಗೆ ಅಧಿಕಾರ ಬಿಟ್ಟುಕೊಡಬೇಕು ಎಂದರೆ ಅವರು ಕುಳಿತ ಕುರ್ಚಿಯನ್ನು ಬಿಟ್ಟು ಬುದ್ಧನ ಹಾಗೆ ಎದ್ದು ಹೋಗಲು ಸಾಧ್ಯವೇ? ತನಗೆ ಸಿಕ್ಕ ರಾಜಕೀಯ ಅಧಿಕಾರವನ್ನು ತಾನು ನಂಬಿದ ಸಿದ್ಧಾಂತವನ್ನು ಅನುಷ್ಠಾನಕ್ಕೆ ತರಲು, ಸಮಾಜದಲ್ಲಿ ಬದಲಾವಣೆಯನ್ನು ತರಲು ಬಳಸಿಕೊಳ್ಳುತ್ತೇನೆ ಎಂದು ಅವರು ಹೇಳಿದರೆ ಯಾರೂ ಅದನ್ನು ಆಕ್ಷೇಪಿಸಲು ಆಗದು. ಈಗ ತಾವೂ ಒಬ್ಬ ‘ದಲಿತ’ ಎಂದು ಅವರು ಹೇಳಿಕೊಂಡಿದ್ದಾರೆ. ಅವರು ಪ್ರತಿನಿಧಿಸುವ ಸಮುದಾಯಕ್ಕೂ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಧಿಕಾರ ಸಿಕ್ಕಿದೆ. ಅವರ ಭಾಗ್ಯದಲ್ಲಿ ಎಷ್ಟು ದಿನ ಅಧಿಕಾರ ಇದೆಯೋ ಅಷ್ಟು ದಿನ ಅವರು ಅಧಿಕಾರದಲ್ಲಿ ಇರಲು ಅರ್ಹರು. ಹಾಗೆ ನೋಡಿದರೆ ಅವರೇನು ಬೇಗ ಅಧಿಕಾರ ಬಿಟ್ಟುಕೊಡುವಂತೆ ಕಾಣುವುದಿಲ್ಲ. ಎಲ್ಲಿ ಹೋದಲ್ಲೆಲ್ಲ ಐದು ವರ್ಷ ತಾವೇ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ! ಇದೀಗ ಮನಸ್ಸು ಬದಲಿಸಿ ಮುಂದಿನ ಚುನಾವಣೆಯಲ್ಲಿ ತಾವು ಸ್ಪರ್ಧೆ ಮಾಡುವುದಾಗಿಯೂ ಹೇಳಿದ್ದಾರೆ. ರಾಜಕೀಯದಲ್ಲಿ ‘ಆಸೆ’ ಇರುವವರು ಇರಬೇಕು ಎನ್ನುವ ಅರ್ಥದಲ್ಲಿ ಅವರ ಹೊಸ ಮಾತು ಬಹಳ ಸಕಾರಾತ್ಮಕವಾದುದು. ಅದು ಕಾಂಗ್ರೆಸ್‌ ಪಕ್ಷಕ್ಕೂ ಸೂಕ್ತ ಸಂದೇಶವನ್ನು ಕೊಡುತ್ತದೆ. ಸಿದ್ದರಾಮಯ್ಯನವರ ಈ ಮುಂಚಿನ ವೈರಾಗ್ಯದಿಂದ ಮುಂದಿನ ಸಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ಪಕ್ಷದ ಒಳಗೂ ಹೊರಗೂ ಅಂದುಕೊಂಡವರು ಬಹಳ ಮಂದಿ ಇದ್ದರು.

ಈಗ ಮತ್ತೆ ಅವರಿಗೆಲ್ಲ ಒಂದು ಹೊಸ ಭರವಸೆ. ಹಿಂದುಳಿದ ವರ್ಗದಿಂದ ಬಂದಿರುವ ಸಿದ್ದರಾಮಯ್ಯ ಮತ್ತೊಬ್ಬ ದೇವರಾಜ ಅರಸು ಆಗಬೇಕು ಎಂದು ಅಂದುಕೊಂಡವರು ಅನೇಕ ಮಂದಿ. ಸಿದ್ದರಾಮಯ್ಯ ಅಂಥದೇ ಅಚ್ಚರಿ ಮಾಡಬಹುದು ಎಂಬ ಒಂದು ಸಣ್ಣ ಆಸೆ ದಲಿತ ನಾಯಕರಲ್ಲಿಯೂ ಇದ್ದಂತೆ ಇದೆ. ಸಿದ್ದರಾಮಯ್ಯ ಈ ಅವಧಿಯ ಅಧಿಕಾರ ಬಿಟ್ಟುಕೊಡುವಾಗ ಒಬ್ಬ ದಲಿತನನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂಡ್ರಿಸಬಹುದು ಎಂಬ ಆಸೆ ಅದು! ಆ ದಲಿತ ಖರ್ಗೆಯವರೇ ಆಗಿರಬಹುದು, ಪರಮೇಶ್ವರ್‌ ಅವರೇ ಆಗಿರಬಹುದು ಅಥವಾ ತಮ್ಮ ನೆಚ್ಚಿನ ಆಂಜನೇಯ ಅಥವಾ ಮಹದೇವಪ್ಪ ಆಗಿರಬಹುದು. ಇವರಲ್ಲಿ ಯಾರನ್ನಾದರೂ ಒಬ್ಬರನ್ನು ಕೂಡ್ರಿಸಿ ಸಿದ್ದರಾಮಯ್ಯ ಮುಂದಿನ ವಿಧಾನಸಭೆ ಚುನಾವಣೆಯನ್ನು ಎದುರಿಸಬಹುದು ಎಂಬುದೂ ಈ ಆಸೆಯ ಮುಂದುವರಿದ ಅನಿಸಿಕೆ. ದೇವರಾಜ ಅರಸು ಹಿಂದುಳಿದ ವರ್ಗಗಳಲ್ಲಿ ಪ್ರಾತಃಸ್ಮರಣೀಯರಾಗಿ ಉಳಿದ ಹಾಗೆಯೇ ಈ ಮೂಲಕ ಸಿದ್ದರಾಮಯ್ಯ ದಲಿತರಲ್ಲಿ ಉಳಿಯಬಹುದು, ಅದು ರಾಜಕೀಯವಾಗಿ ಅವರು ತಮ್ಮ ಎದುರಾಳಿಗಳಿಗೆ ಕೊಡುವ ‘ಮಾಸ್ಟರ್‌ ಸ್ಟ್ರೋಕ್‌’ ಆಗಿರುತ್ತದೆ ಎಂಬುದು ಆ ಆಸೆಯ ಮತ್ತೊಂದು ಕವಲು!

ರಾಜಕೀಯ ಎಂಬುದು ಅಸೀಮ ಸಾಧ್ಯತೆಗಳ ಒಂದು ಪ್ರಯೋಗ ಶಾಲೆ. ಇಲ್ಲಿ ಅಧಿಕಾರ ಇರುತ್ತದೆ, ಕನಸು ಇರುತ್ತದೆ, ಹಣ ಇರುತ್ತದೆ, ಕಾಲು ಕಟ್ಟುವ ನಿಷ್ಠೆ ಇರುತ್ತದೆ, ಕಾಲು ಎಳೆಯುವ ಭಿನ್ನಮತ ಇರುತ್ತದೆ, ಅದರ ನಡುವೆ ಒಂದಿಷ್ಟು ಸಾಮಾಜಿಕ ಒಳಿತು ಮಾಡುವ ಇರಾದೆ ಇರುತ್ತದೆ. ಅದೇ ಕಾರಣಕ್ಕಾಗಿ ರಾಜಕೀಯ ಎಂಬುದು ಒಂದು ಕಾಯುವ ಆಟವೂ ಆಗಿರುತ್ತದೆ. ತನ್ನ ಪದತಲದ ಬಳಿಗೆ ಅಧಿಕಾರ ಬರುವವರೆಗೆ ಕಾಯುವ ತಾಳ್ಮೆ ಕೂಡ ಅಸೀಮವಾದುದು. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆ ತಾಳ್ಮೆ ಇದೆ. ಡಾ.ಪರಮೇಶ್ವರ್‌ ಅವರು ಖರ್ಗೆ ಅವರ ಆಟದಿಂದಲೇ ಎಲೆಗಳನ್ನು ಆಯ್ದುಕೊಳ್ಳಬೇಕು. ಬೇರೆ ದಾರಿ ಇರುವಂತೆ ಕಾಣುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT