ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯ ಎನ್ನುವ ಎಲ್ಲ ಕಾಲದ ಸಖ

Last Updated 16 ಜೂನ್ 2018, 9:11 IST
ಅಕ್ಷರ ಗಾತ್ರ

Poetry becomes her place to break rank
her words, her line lengths and placements, her ‘stuff’
–katherene Fraser

ಕಾವ್ಯವೆನ್ನುವುದು ಹೆಣ್ಣಿಗೆ ಗಂಡಿಗಿಂತಲೂ ಹೆಚ್ಚು ಮುಖ್ಯವೆ, ಭಿನ್ನವೆ ಎನ್ನುವ ಮಾತನ್ನು ಕೇಳಿದರೆ ಇದು ಏನು ಅತಿರೇಕ–ಅಬದ್ಧ ಎಂದು ಕೆರಳಿ ಯುದ್ಧವನ್ನೇ ಕಾದುವ ಕಾವ್ಯದ ವೀರಯೋಧರಿಗೇನೂ ಕಡಿಮೆಯಿಲ್ಲ. ಆದರೆ, ನಿರ್ದೇಶಿತ ಬದುಕು ಮತ್ತು ವ್ಯಕ್ತಿತ್ವವನ್ನು ದಾಟುವಲ್ಲಿ ಹೆಣ್ಣಿಗೆ ಭಾಷೆ ಎನ್ನುವುದು ಎಂಥ ಬಿಡುಗಡೆಯ ದಾರಿಯಾದೀತು ಎನ್ನುವುದನ್ನು ಅರ್ಥಮಾಡಿಕೊಳ್ಳಲು ನಿರಾಕರಿಸುವವರು ಮಾತ್ರ ಹೂಡುವ ಯುದ್ಧ ಇದು.

A wild patience has taken me this far ಎನ್ನುವ ಎ. ರಿಚ್‌ಳ ಮಾತುಗಳಾಗಲೀ, because of the stories we live ಎನ್ನುವ ಮಾತುಗಳಾಗಲೀ ಕಾವ್ಯವೆನ್ನುವುದು ಹೆಣ್ಣಿಗೆ ಗಂಡಿಗಿಂತ ಇನ್ನೂ ಇನ್ನೂ ಆಳವಾದದ್ದು, ತೀವ್ರವಾದದ್ದು, ಸಹಜಾತಿಸಹಜ ನೆಲೆಯಲ್ಲಿ ಅದು ಅವಳ ಜೀವಕೊರಳ ಆಖ್ಯಾನ ಮತ್ತು ವ್ಯಾಖ್ಯಾನ. ಕಾವ್ಯಮಾನಂದಾಯ ಎನ್ನುವ ಆಯಾಮವನ್ನು ಒಳಗೊಂಡೂ ಕಾವ್ಯವೂ ಅದರಾಚೆಗಿನದೂ ಆಗುವುದನ್ನು ಏನೆಂದು ಗುರುತಿಸುವುದು?

womens experience of opression is the authenticating ‘touch stone’ of women's writings ಎನ್ನುವ ಮಾತುಗಳು ಕಾವ್ಯ ಮತ್ತು ಹೆಣ್ಣಿನ ಸಂಬಂಧದ ವಿಶಿಷ್ಟ ನೆಲೆಯೊಂದನ್ನು ಗುರುತಿಸುವ ಪ್ರಯತ್ನವೇ ಆಗಿದೆ. ಬರವಣಿಗೆಯು ಹೆಣ್ಣಿನ ಮಟ್ಟಿಗೆ ಭಿನ್ನವಾದ ಶೋಧವೆಂದಾಗುವುದು ಮೂಲತಃ ಅವಳ ಅಸ್ತಿತ್ವದ ಶೋಧಕ್ಕಾಗಿ. ನಿರ್ದೇಶಿತವೂ ಸ್ಥಾಪಿತವೂ ಆದ ಪಾತ್ರಗಳಾಚೆಗೆ ತನ್ನನ್ನು ತಾನು ಕಂಡುಕೊಳ್ಳುವ ದಾರಿಯಾಗಿ ಹೆಣ್ಣಿಗೆ ಬರವಣಿಗೆಯೂ ಸೇರಿದಂತೆ ಇತರ ಕಲಾಪ್ರಕಾರಗಳು ಒದಗಿ ಬರುತ್ತವೆ. ಹೀಗಾಗಿ ಇಲ್ಲಿ ವ್ಯಕ್ತಿತ್ವದ ಶೋಧವೆನ್ನುವುದು ಅದರೆಲ್ಲ ಮೂಲಭೂತ ಸಂಗತಿಗಳನ್ನೊಳಗೊಂಡ ಅಥವಾ ಅಲ್ಲಿಂದ ಆರಂಭವಾಗುವ ಒಂದು ಮಹಾಪ್ರಯಾಣ.

ಸಂಸ್ಕೃತದ ಕವಯಿತ್ರಿ ವಿಜ್ಜಿಕಾ ‘ಅರಸಿಕರ ಮುಂದೆ ಕವಿತೆಯೊಪ್ಪಿಸುವುದೊಂದ ಬರೆಯದಿರು ಬರೆಯದಿರು ಶಿರದಿ’ ಎನ್ನುವ ಮಾತಿಗೆ ಸೌಂದರ್ಯ ಮೀಮಾಂಸೆಯನ್ನು ಮೀರಿದ ಅರ್ಥಗಳೂ ಇದ್ದಿರಬೇಕು. ಆ ಅರಸಿಕರು ಒಟ್ಟೂ ಕಾವ್ಯದ ಅರಸಿಕರೋ ಅಥವಾ ಹೆಣ್ಣಿನ ಕಾವ್ಯದ ಅರಸಿಕರೋ? ಹೆಣ್ಣಿನ ಕಾವ್ಯವನ್ನು ಅಥವಾ ಹೆಣ್ಣಿನ ಎಲ್ಲ ಬಗೆಯ ಕಲಾಭಿವ್ಯಕ್ತಿಗಳನ್ನೂ ಕಡೆಗಣ್ಣಿನಿಂದಲೋ ಉಡಾಫೆಯಿಂದಲೋ ನೋಡುವ ಎಲ್ಲ ದೃಷ್ಟಿಕೋನಗಳನ್ನೂ ಇಲ್ಲಿ ವಿಜ್ಜಿಕಾ ಧ್ವನಿಸುತ್ತಿದ್ದಾಳೆ.

ಪುರುಷರಿಗೆ ಬರವಣಿಗೆಯೆನ್ನುವುದು ಅವರ ವ್ಯಕ್ತಿತ್ವದ ಅಖಂಡ ಭಾಗವಾದರೆ, ಅವರ ಕೊನೆಯಿಲ್ಲದ ಅಧಿಕಾರ ಕೇಂದ್ರವು ಅವರಿಗೆ ಒದಗಿಸಿರುವ ಪ್ರಶ್ನಾತೀತ ಸವಲತ್ತಾದರೆ, ಹೆಣ್ಣಿಗೆ ಅದು ಅಪಾರ ಕಾಯುವಿಕೆ ಮತ್ತು ಹೋರಾಟಗಳ ಫಲವಾಗಿ ಸಿಕ್ಕಿರುವ ಸಂಕೀರ್ಣವಾದ ಸಂಗತಿ ಮತ್ತು ಅವಕಾಶ. ಸಂಕೀರ್ಣ ಯಾಕೆಂದರೆ, ಕೆಲವು ಬಾರಿ ಅದನ್ನು ಹೆಣ್ಣಿಗೆ ಕೊಡಮಾಡಲಾದ ಒಂದು ಅವಕಾಶವೆನ್ನುವಂತೆ, ಮತ್ತೆ ಕೆಲವು ಬಾರಿ ಅದೊಂದು ಕರಾರುಗಳನ್ನೊಳಗೊಂಡ ಒಪ್ಪಂದದಂತೆ, ಇನ್ನೂ ಕೆಲವು ಬಾರಿ, ಅದು ಎರಡನೆ ದರ್ಜೆಯ ಅಭಿವ್ಯಕ್ತಿ ಎನ್ನುವುದನ್ನು ಪ್ರಶ್ನಾತೀತ ತೀರ್ಮಾನದ ನೆಲೆಯಲ್ಲಿ ನೋಡುವ ಪೂರ್ವಗ್ರಹಪೀಡಿತ ದೃಷ್ಟಿಕೋನವೂ ಆಗಿರುತ್ತದೆ. ಆದ್ದರಿಂದಲೇ ಹೆಣ್ಣಿನ ಬರವಣಿಗೆ ಮತ್ತು ಅದನ್ನು ನೋಡುವ, ಬೆಲೆಗಟ್ಟುವ ಕ್ರಮ ಎರಡರಲ್ಲಿಯೂ ಅದು ಪುರುಷರದ್ದಕ್ಕಿಂತ ಬೇರೆಯಾಗಿರುತ್ತದೆ.

ಈ ಯಾವುದೂ ಅಲ್ಲದೆ ಕಲಾಕೃತಿಯೊಂದರ, ಲಿಂಗಾತೀತವಾದ ನೆಲೆಯಲ್ಲಿ ಹೆಣ್ಣಿನ ಬರವಣಿಗೆಯನ್ನು ಚರ್ಚಿಸುವ ಪ್ರಕ್ರಿಯೆಯೊಂದು ಈಗ ನಿಧಾನವಾಗಿ ಆರಂಭವಾಗಿದೆ ನಿಜ. ಆದರೆ ಅದು ಈ ಘಟ್ಟವನ್ನು ತಲುಪುವಲ್ಲಿ ನಡೆಸಿದ ಹೋರಾಟ ಬಲು ದೀರ್ಘವಾದುದು. ಪ್ರತಿಭಾ ನಂದಕುಮಾರ್ ಅವರ ಕವನಸಂಕಲನವನ್ನು ಕುರಿತು ಘನ ವಿಮರ್ಶಕರೊಬ್ಬರು, ‘ಕಾಫಿ ಕುಡೀತಾ ಓದಲಡ್ಡಿಯಿಲ್ಲ’ ಎಂದದ್ದು ಕಳೆದ ಶತಮಾನದಲ್ಲಲ್ಲ, ಬರೇ ಹದಿನೈದು ಇಪ್ಪತ್ತು ವರ್ಷಗಳ ಹಿಂದೆ.

ಬರವಣಿಗೆಯು ಬಹುತೇಕ ಎಲ್ಲ ಸಂದರ್ಭಗಳಲ್ಲಿಯೂ ಪುರುಷನ ಮಟ್ಟಿಗೆ ಪತಾಕೆಯೇ. ಒಂದು ಅಭಿವ್ಯಕ್ತಿಯಾಗಿ ಅದನ್ನು ನಿರಾಕರಿಸುವ ಸಂದರ್ಭಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಆದರೆ ಹೆಣ್ಣಿನಲ್ಲಿ ಇದು ಅಧೀರತೆಯನ್ನೂ ನಿರಾಕರಣೆಯ ಆತಂಕವನ್ನೂ ಸೃಷ್ಟಿಸುತ್ತಲೇ ಇರುತ್ತದೆ. ಅದೆಷ್ಟು ಬಗೆಯ ಸೆನ್ಸಾರ್‌ಗಳಿಗೆ ಇವಳ ಬರವಣಿಗೆ ಒಳಗಾಗಬೇಕಾಗುತ್ತದೆ. ಸ್ವ ಸೆನ್ಸಾರೂ ಸೇರಿದಂತೆ ಅಮೂರ್ತವಾದ ಸಾಮಾಜಿಕ ಸೆನ್ಸಾರ್‌ಗಳು ಹೆಣ್ಣಿನ ಬರವಣಿಗೆಯನ್ನು ಹಿಡಿದು ನಿಲ್ಲಿಸುವ ಶಕ್ತಿಯನ್ನು ಪಡೆದಿರುತ್ತವೆ.

ಅವಳ ಬರವಣಿಗೆಯ ವಸ್ತು, ಭಾಷೆ, ಶೈಲಿ ಎಲ್ಲದರ ಮೇಲೂ ಪಿತೃಸಂಸ್ಕೃತಿಯ ದಟ್ಟ ನೆರಳು ಇರುತ್ತದೆ, ಇದೆಲ್ಲದರಿಂದ ಪಾರಾಗುವುದೇ ಅವಳ ಎದುರಿಗಿರುವ ಮುಖ್ಯ ಸವಾಲು. ಅಭಿವ್ಯಕ್ತಿಯ ಸ್ವಾತಂತ್ರ್ಯ ಸಿಕ್ಕೂ ಸಿಗದಿರುವ, ಅದರ ಗಡಿಗಳ ಬಗೆಗಿನ ಆತಂಕವೇ ಅಭಿವ್ಯಕ್ತಿಯಲ್ಲಿ ನೂರು ತೊಡಕುಗಳನ್ನು ಸೃಷ್ಟಿಸುವ ತಲ್ಲಣಗಳಲ್ಲಿ ಹೆಣ್ಣಿನ ಅಭಿವ್ಯಕ್ತಿಯ ಮೊದಲ ಹೆಜ್ಜೆಗಳಿವೆ. ಆಜನ್ಮಸಿದ್ಧ ಹಕ್ಕು ಎನ್ನುವ ನೆಲೆಯಿಂದ ಬರವಣಿಗೆ ಹೊರಡುವುದಕ್ಕೂ, ಇದೀಗ ಸಿಕ್ಕಿದೆ, ಅಥವಾ ಪಡೆದುಕೊಳ್ಳಲಾಗಿದೆ ಎನ್ನುವ ನೆಲೆಯಿಂದ ಹೊರಡುವುದಕ್ಕೂ ಅಪಾರ ವ್ಯತ್ಯಾಸವಿದೆ. ಸಂಭ್ರಮ, ಉತ್ಕಟತೆಯ ಪ್ರಮಾಣದಷ್ಟೇ ವಿಪರ್ಯಾಸಗಳ ಜೊತೆಗಿನ ಅನಿವಾರ್ಯ ಸಖ್ಯ ಇದು.
***
ಕನ್ನಡದ ಆದ್ಯ ಲೇಖಕಿಯರಲ್ಲಿ ಒಬ್ಬರಾದ ನಂಜನಗೂಡು ತಿರುಮಲಾಂಬ ಅವರ ಬಗೆಗಿನ ಘಟನೆಯೊಂದು ಲೇಖಕಿಯರನ್ನು ಕುರಿತ ದೃಷ್ಟಿಕೋನಕ್ಕೆ ಪ್ರಮಾಣದಂತಿದೆ. ಕನ್ನಡದ ಲೇಖಕಿಯರನ್ನು ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದ ಹೊತ್ತಿನಲ್ಲಿ ನಂಜನಗೂಡು ತಿರುಮಲಾಂಬ ಅವರು ತೀರಿಕೊಂಡಿದ್ದಾರೆಂದೇ ತಿಳಿಯಲಾಗಿತ್ತು.

ಯಾರೋ ಕೊಟ್ಟ ಸುಳಿವನ್ನು ಹಿಡಿದು ಹೋಗಿ ಚಿ.ನಾ. ಮಂಗಳಾ ಅವರು ತಿರುಮಲಾಂಬ ಅವರನ್ನು ಭೇಟಿ ಮಾಡಿದ ಮೇಲೆಯೇ ಆಧುನಿಕ ಕನ್ನಡದ ಮೊದಲ ಲೇಖಕಿಯರಲ್ಲಿ ಒಬ್ಬರೆಂದು ಹೆಮ್ಮೆ ಪಡಬಹುದಾದವರು ಬದುಕಿದ್ದಾರೆಂದು ಕನ್ನಡ ಜಗತ್ತಿಗೆ ತಿಳಿದದ್ದು. ಮಹಾಮಹಿಮ ಪುರುಷ ಲೇಖಕರಿಗೆ ಐವತ್ತು ತುಂಬಿತೆಂದು, ಅರವತ್ತೆರಡಕ್ಕೆ ಕಾಲಿಟ್ಟರೆಂದು ಅದೇನು ಸಂಭ್ರಮ, ಅದೇನು ಉತ್ಸವಗಳು! ಸರಸ್ವತಿಬಾಯಿ ರಾಜವಾಡೆಯವರದೂ ಇದೇ ಕಥೆ. ಅವರನ್ನು ಕುರಿತ ಆತ್ಮಕಥಾನಕವನ್ನು ವೈದೇಹಿಯವರು ಬರೆಯುತ್ತಿದ್ದ ಹೊತ್ತಿನಲ್ಲಿ ದೊಡ್ಡ (!) ಲೇಖಕರೊಬ್ಬರು, ಆ ಹೆಂಗಸು ಇನ್ನೂ ಬದುಕಿದೆಯೇ ಎಂದು ತಾತ್ಸಾರದ ಉದ್ಗಾರವೆಳೆದದ್ದನ್ನು ವೈದೇಹಿಯವರು ದಾಖಲಿಸಿದ್ದಾರೆ.

ಅನುಪಮಾ ನಿರಂಜನ ಈ ಎಲ್ಲ ಬೆಳವಣಿಗೆಗಳಿಂದ ಪ್ರಭಾವಿತರಾಗಿ ‘ಚಾರುಲತೆಯೊಡನೆ ಒಂದು ದಿನ’ ಕಥೆ ಬರೆದರು. ಒಂದು ರೀತಿಯಲ್ಲಿ ಇದು ಲೇಖಕಿಯೊಬ್ಬಳು ತನ್ನ ಪೂರ್ವಸೂರಿಗಳೊಡನೆ ನಡೆಸಿದ ಮಾತುಕತೆಯೂ ಹೌದು, ಇನ್ನೊಂದು ರೀತಿಯಲ್ಲಿ ಮಹಿಳಾ ಪರಂಪರೆಯನ್ನು ಏಕಕಾಲಕ್ಕೆ ತನಗೂ ಲೋಕಕ್ಕೂ ಕಟ್ಟಿಕೊಳ್ಳುವ ಪ್ರಯತ್ನವಾಗಿಯೂ ಕಾಣಿಸುತ್ತದೆ. ಅನುಪಮಾ ಅವರ ಕೊನೆಯ ಕೃತಿ ‘ಮೂಲಮುಖಿ’ ಕೂಡ ಇದೇ ಆಶಯದ್ದು ಎನ್ನುವುದು ಮಹಿಳಾ ಪರಂಪರೆಯ ಹುಡುಕಾಟ ಮತ್ತು ರಚನೆ ಅನುಪಮಾ ಅವರ ಪ್ರಧಾನ ಕಾಳಜಿಗಳಲ್ಲೊಂದು ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.

(ತಮ್ಮ ಅಭಿವ್ಯಕ್ತಿಯ ನಕಾಶೆಯೊಂದನ್ನು ರಚಿಸಿಕೊಳ್ಳುವುದರ ಅಗತ್ಯವನ್ನು ಮಹಿಳೆಯರು ಗ್ರಹಿಸಿದ ಮತ್ತು ತಮ್ಮ ಪ್ರಯತ್ನಗಳನ್ನು ಈ ನಿಟ್ಟಿನಲ್ಲಿ ಆರಂಭಿಸಿದ ಘಟ್ಟ ಇದು. ಶ್ಯಾಮಲಾದೇವಿ ಬೆಳಗಾಂವಕರ್- ‘ಶ್ಯಾಮಲಾ ಸಂಚಯ’, ಕಲ್ಯಾಣಮ್ಮ- ‘ಕಲ್ಯಾಣ ಸರಸ್ವತಿ’, ತಿರುಮಲಾಂಬ- ‘ಹಿತೈಷಿಣಿಯ ಹೆಜ್ಜೆಗಳು’ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ ಲೇಖಕಿಯರ ಪ್ರಯತ್ನಗಳಿಗೆ ಐತಿಹಾಸಿಕ ಮಹತ್ವವಿದೆ).
ಈ ಸಾಂಘಿಕ ಪ್ರಯತ್ನಗಳೊಂದಿಗೆ ಅನುಪಮಾ ಅವರ ಈ ಕತೆಯೂ ಅನೇಕ ಕಾರಣಗಳಿಗಾಗಿ ಮುಖ್ಯವಾಗುತ್ತದೆ.

ಸರಳವಾದ ಈ ಕಥೆ ತನ್ನ ವಾಸ್ತವಿಕ ವಿವರಗಳ ಕಟುತನಕ್ಕಾಗಿಯೇ ನಮ್ಮನ್ನು ಬೆಚ್ಚಿಬೀಳಿಸುತ್ತಾ, ದಟ್ಟ ವಿಷಾದವನ್ನು ಹುಟ್ಟಿಸುತ್ತಾ ಹೋಗುತ್ತದೆ. ಆದರೆ ಕಥೆಯ ಯಶಸ್ಸಿರುವುದು ಈ ಎಲ್ಲದರ ಕೊನೆಯಲ್ಲಿ ಹೆಣ್ಣಿನ ಅಂತಃಶಕ್ತಿಯ ಬಗೆಗಿನ ನಮ್ಮ ನಂಬಿಕೆಯನ್ನು ಮರುಸ್ಥಾಪಿಸುವುದರಲ್ಲಿ. ಕನ್ನಡದ ಲೇಖಕಿಯೊಬ್ಬಳ ವಿವರಗಳನ್ನು ಸಂಗ್ರಹಿಸುವ ಸಲುವಾಗಿ ಈ ಕಥೆಯ ನಿರೂಪಕಿ ಲೇಖಕಿಯ ಹಳ್ಳಿಗೆ ಭೇಟಿ ಕೊಡುತ್ತಾಳೆ.

ಊರಿನ ಉದ್ದಗಲಕ್ಕೂ ಮನೆಮನೆಗಳಲ್ಲೂ ಈ ಲೇಖಕಿಯನ್ನು ಕುರಿತ ಅನೇಕ ವಿವರಗಳು, ನೆನಪುಗಳು ತನ್ನನ್ನು ಎದುರುಗೊಳ್ಳಬಹುದೆಂದು ನಿರೀಕ್ಷಿಸಿದ್ದ ನಿರೂಪಕಿಗೆ ಮೊದಲ ಆಘಾತವಾಗುವುದು ಲೇಖಕಿಯ ಮನೆಯನ್ನು ಹುಡುಕುವುದೇ ಕಷ್ಟವಾದಾಗ. ಕನ್ನಡದಲ್ಲಿ ಮಹಿಳಾ ಸಾಹಿತ್ಯವನ್ನು ಉದ್ಘಾಟಿಸಿದ ಲೇಖಕಿಯ ಮನೆ ಆ ಊರಿನ ಬಹುಮುಖ್ಯವಾದ ಅಲ್ಲವಾದರೂ ಚಿರಪರಿಚಿತವಾದ ಸ್ಥಳವಾದರೂ ಆಗಿರುತ್ತದೆ ಎಂದು ನಿರೀಕ್ಷಿಸಿದವಳಿಗೆ ಲೇಖಕಿಯ ಹೆಸರು ಹೇಳಿದ ಮೇಲೂ ಯಾರಿಗೂ ಅದು ಯಾವ ಮನೆ ಇರಬಹುದು ಎನ್ನುವುದರ ಸುಳಿವೇ ಸಿಗುವುದಿಲ್ಲ.

ಕೊನೆಗೆ ಸಾಹಿತ್ಯದಲ್ಲಿ ಆಸಕ್ತಿ ಇರುವ ವ್ಯಕ್ತಿಯ ಮನೆಯ ವಿಳಾಸ ಪಡೆದು ಅಲ್ಲಿಗೆ ಹೋದಾಗ ದಾರಿ ತೆರೆಯುತ್ತದೆ. ಆ ವ್ಯಕ್ತಿಯೇ ಲೇಖಕಿಯ ಅಭಿಮಾನಿ, ಬೆಂಬಲಿಗ ಎಲ್ಲವೂ. ಆತನಿಂದಲೇ ನಿರೂಪಕಿಗೆ ಲೇಖಕಿಯ ಬದುಕಿನ ಸಮಸ್ತ ವಿವರಗಳೂ ಸಿಗುತ್ತವೆ.
ಇಲ್ಲಿಂದಾಚೆಗೆ ಲೇಖಕಿಯನ್ನು ಚಾರುಲತೆಯೆಂದೇ ಕರೆಯೋಣ. ಹುಟ್ಟಾಕವಿಯಾಗಿದ್ದ ಆಕೆ ಮದುವೆಯಾದದ್ದು ವಿಜ್ಜಿಕಾ ವರ್ಣಿಸುವ ಅರಸಿಕನನ್ನು. ಮದುವೆಯಲ್ಲಿ ಆಯ್ಕೆಯ ಸ್ವಾತಂತ್ರ್ಯವೇ ಇಲ್ಲದ ಚಾರುಲತ ಆರಂಭದಿಂದಲೂ ಬರವಣಿಗೆಯಲ್ಲಿ, ಓದಿನಲ್ಲಿ ಆಸಕ್ತಳು. ತನ್ನ ಅದೃಷ್ಟ ಪರೀಕ್ಷೆಯೆಂಬಂತೆ ಈ ಮದುವೆಗೆ ತನ್ನನ್ನು ಒಡ್ಡಿಕೊಳ್ಳುತ್ತಾಳೆ.

ಅದು ಯಾಕೋ ನಮ್ಮಲ್ಲಿ ಪ್ರತಿಭಾವಂತ ಹೆಣ್ಣುಮಕ್ಕಳಿಗೆ ಯಾವಾಗಲೂ ದುರದೃಷ್ಟವೇ ವಿಧಿ! ಚಾರುಲತೆ ಅದಕ್ಕೆ ಹೊರತಾದವಳಲ್ಲ. ಹೆಂಡತಿಯಲ್ಲದ, ಮನೆಗೆಲಸವಲ್ಲದ ಇನ್ನೊಂದು ವ್ಯಕ್ತಿತ್ವ ಹೆಣ್ಣಿಗಿದೆ ಎನ್ನುವುದರ ಕಲ್ಪನೆಯೇ ಇಲ್ಲದ, ಇದೆ ಎಂದಾದರೆ ಅದನ್ನು ಗಂಡನಾದ ತಾನು ಒಪ್ಪಬೇಕಾಗಿಯೇ ಇಲ್ಲ ಎನ್ನುವುದನ್ನು ಕಾಯಾ ವಾಚಾ ಮನಸಾ ನಂಬಿದ ಗಂಡ. ತೊತ್ತಿರ ಕೆಲಸದಾಕೆಯಲ್ಲದೆ ಅವಳಿಗೆ ಇನ್ನೇನೂ ಇಲ್ಲ ಎನ್ನುವುದನ್ನು ತನ್ನ ಪ್ರತಿ ನಡವಳಿಕೆಯಲ್ಲೂ ತೋರಿಸುವ ಆತನೊಂದಿಗೆ ಏಗುತ್ತಲೇ ಚಾರುಲತೆ ಆಗಾಗ ಕದ್ದುಮುಚ್ಚಿ ತನ್ನ ಬರವಣಿಗೆಯ ಕಾಯಕವನ್ನು ಆರಂಭಿಸುತ್ತಾಳೆ.

ಗಂಡನ ಸ್ನೇಹಿತನೇ ಆದ, ಇವಳ ಬರವಣಿಗೆ ಮತ್ತು ಪ್ರತಿಭೆಯ ಬಗ್ಗೆ ನಂಬಿಕೆ–ಮೆಚ್ಚುಗೆ ಎರಡೂ ಇದ್ದ ಈತ ಅವಳನ್ನು ಪ್ರೋತ್ಸಾಹಿಸುತ್ತಾನೆ. ಅವಳು ಬರೆದದ್ದನ್ನು ಯಾರಿಗೂ ಗೊತ್ತಾಗದಂತೆ ಪತ್ರಿಕೆಗಳಿಗೆ ಕಳುಹಿಸುತ್ತಾ, ಅದು ಪ್ರಕಟವಾದಾಗ ಇವಳಿಗೆ ತೋರಿಸುತ್ತಾ... ಹೀಗೆ ಅವಳು ಲೇಖಕಿಯಾಗಿ ಅರಳುತ್ತಾ ಹೋಗುತ್ತಾಳೆ.

‘ವನಸುಮದೊಳೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಗುರುವೇ ಹೇ ದೇವಾ’ ಎಂದು ಡಿ.ವಿ.ಜಿ ಮನುಷ್ಯ ಅಹಂಕಾರವನ್ನು ಕಳೆದುಕೊಳ್ಳುವ ಮಾರ್ಗವನ್ನು ಕರುಣಿಸುವಂತೆ ಪ್ರಾರ್ಥಿಸುತ್ತಾರೆ. ಆದರೆ ಹೆಣ್ಣಿನ ಅದೃಷ್ಟ ಈ ವಿಷಯದಲ್ಲಿ ದೊಡ್ಡದು. ಅವಳು ಬಯಸದೆಯೇ ಪಿತೃಸಂಸ್ಕೃತಿ ಅವಳನ್ನು ಸದಾ ವನಸುಮವಾಗಿಯೇ ನೋಡಲು ಬಯಸಿ ಅವಳು ನಿರಹಂಕಾರಿಯಾಗಿ ಉಳಿಯಲು ಸಹಕರಿಸುತ್ತದೆ.

ಹೀಗೆ ಶುರುವಾದ ಚಾರುಲತೆಯ ಬರವಣಿಗೆಯ ಬದುಕು ಅನೇಕ ಏಳುಬೀಳುಗಳಲ್ಲಿ ಮುಂದುವರೆಯುತ್ತದೆ. ತನಗೆ ಸಿಗಬೇಕಾಗಿದ್ದ ಗೌರವ, ಮನ್ನಣೆ, ಸ್ಥಾನ ಮಾನ ಯಾವುದೂ ಸಿಗದೆ ಅನಾಮಿಕಳಾಗಿ ಅವಳು ಸಾಯುತ್ತಾಳೆ. ಅವಳ ಪ್ರಕಟಿತ ಬರಹಗಳನ್ನು ಅವಳ ಗೆಳೆಯ ಒಯ್ದು ಕೊಟ್ಟರೂ ಆ ಮನೆಯ ಯಾರಿಗೂ ಅದರ ಬಗ್ಗೆ ಕಾಳಜಿಯೇ ಇಲ್ಲ. ನಿರೂಪಕಿ ಕೊನೆಗೊಮ್ಮೆ  ಚಾರುಲತೆಯ ಮನೆಗೆ ಹೋಗಿ ಅವಳ ಫೋಟೋ ಆದರೂ ಸಿಗಬಹುದೆ ಎಂದು ಆಸೆಯಿಂದ ಕೇಳಿದರೆ ಅವಳ ಮಗನೂ ಈಗ ಮನೆಯ ಯಜಮಾನನೂ ಆಗಿರುವವನು, ‘ಇದ್ದೀತು ಅಟ್ಟದ ಮೇಲೆಲ್ಲೋ, ತೋಟದಿಂದ ಬಂದ ಮೇಲೆ ಹುಡುಕಿಕೊಡುವೆ’ ಎನ್ನುತ್ತಾನೆ.

ಚಾರುಲತಾ ಎನ್ನುವ ಈ ಕಥೆಯ ಕಲ್ಪಿತ ಲೇಖಕಿ, ಕನ್ನಡದ, ಭಾರತದ, ಜಗತ್ತಿನ ಯಾವುದೇ ಭಾಷೆಯ ಆರಂಭದ ಲೇಖಕಿಯರ ಶಕ್ತ ಪ್ರತಿನಿಧಿ. ಅರಿಸ್ಟಾಟಲ್ ‘ಹೆಣ್ಣಿನ ರಚನೆಯಲ್ಲಿಯೇ ಕೆಲವು ಮೂಲಭೂತವಾದ ಕುಂದು ಕೊರತೆಗಳಿವೆ’ ಆದ್ದರಿಂದಲೇ ಅವಳು ಅಪೂರ್ಣ’ ಎಂದು ಅಪ್ಪಣೆ ಕೊಡಿಸಿ ದ್ದಾನಷ್ಟೆ. ಮನುವಿನ ಮಕ್ಕಳು ಅದನ್ನು ಶಂಕೆಯಿಲ್ಲದೆ ನಂಬಿ, ಅವಳ ವ್ಯಕ್ತಿತ್ವ, ಬದುಕು , ಅಭಿವ್ಯಕ್ತಿ ಎಲ್ಲವನ್ನೂ ಈ ಅಪೂರ್ಣತೆಯ ಪಟ್ಟಿಗೆ ಸೇರಿಸಿ ಅವನ ವ್ಯಾಖ್ಯಾನವನ್ನು ಮುಂದುವರಿಸುವುದರಲ್ಲಿ ಈಗಲೂ ಆಸಕ್ತರಾಗಿದ್ದಾರೆ.

ಈ ಮಾತುಗಳು ಉತ್ಪ್ರೇಕ್ಷೆಯವು ಎಂದು ಯಾರಿಗಾದರೂ ಅನಿಸಲು ಸಾಧ್ಯ. ಆದರೆ ಬಚ್ಚಲು ಮನೆಯಲ್ಲಿ, ಒಲೆಯ ಬೆಳಕಿನಲ್ಲಿ, ಗಂಡನಿಗೆ ಗೊತ್ತಾಗದೆ ಬರೆದ, ಸಿಕ್ಕಿಹಾಕಿಕೊಂಡಾಗ ಅದೇ ಸೌದೆ ಕೊಳ್ಳಿಯ ಏಟು ತಿಂದ ಹೆಣ್ಣಿನ ಮನಸ್ಥಿತಿಯನ್ನು, ಅವಸ್ಥೆಯನ್ನು ಅರ್ಥ ಮಾಡಿಕೊಳ್ಳಲು ಈ ಉತ್ಪ್ರೇಕ್ಷಿತ ನಿಲುವು ಅಗತ್ಯ. ಬರವಣಿಗೆಯೂ ಸೇರಿದಂತೆ ಯಾವುದೇ ಕಲಾಭಿವ್ಯಕ್ತಿ ಗಂಡಿನ ಕೀರ್ತಿಪತಾಕೆಯಾಗುವ ದಾರಿಯಾದರೆ, ಹೆಣ್ಣಿಗೆ ತನ್ನ ನಾಗರಿಕ ಮನುಷ್ಯ ಅಸ್ತಿತ್ವವನ್ನು ತನಗೆ ತಾನೆ ಸಾಬೀತುಪಡಿಸಿಕೊಳ್ಳುವ ಆರಂಭಿಕ ನೆಲೆಯಾದ ಸಂದರ್ಭವೂ ಇತ್ತು ಎನ್ನುವುದರ ಅರಿವು ಇನ್ನೇನಲ್ಲದಿದ್ದರೂ ಹೆಣ್ಣಿನ ಹೋರಾಟದ ಬಗೆಗೆ ಮೂಲಭೂತ ಗೌರವವನ್ನಾದರೂ ಹುಟ್ಟಿಸಬೇಕು.

ಇಂದಿಗಾದರೂ ಲೇಖಕಿಯರು ಈ ಸವಾಲಗಳನ್ನು ಇಡಿಯಾಗಿ ಗೆದ್ದಿದ್ದಾರೆಂದು ಹೇಳಿಕೊಳ್ಳುವ ಸ್ಥಿತಿಯಿದೆ ಎಂದು ಹೇಳಲಾರೆವು ಅಲ್ಲವೆ? ಹೆಣ್ಣು ಈ ಗಡಿಗಳನ್ನು ದಾಟುವ ಪ್ರಯತ್ನಗಳು ಯಾಕೆ ‘ಬೋಲ್ಡ್’ ಎನ್ನುವ ಹಣೆಪಟ್ಟಿ ಕಟ್ಟಿಕೊಳ್ಳುತ್ತವೆ? ಅದೇ ಗಂಡಿನ ಇದೇ ಬಗೆಯ ಪ್ರಯತ್ನಗಳನ್ನು ಮಾತ್ರ ‘ಪ್ರಾಮಾಣಿಕ’ ಎನ್ನುವ ಹೆಗ್ಗಳಿಕೆಯ ವಿಶೇಷಣದಲ್ಲಿ ಕೊಂಡಾಡುವುದನ್ನು ಅರ್ಥ ಮಾಡಿಕೊಳ್ಳಲು ಜೆಂಡರ್ ಅಲ್ಲದ ಇನ್ನಾವ ನೆಲೆಯನ್ನು ನಾವು ನೆಚ್ಚಲು ಸಾಧ್ಯವಿದೆ? ಅಪವಾದವೆನ್ನುವಂತೆ ಕೆಲವರು ಲೇಖಕಿಯರನ್ನು ಚರ್ಚಿಸಿ ಶೇಕಡಾ ಮೂವತ್ಮೂರರ ಮೀಸಲಾತಿಯನ್ನು ಪಾಲಿಸಿದ ವಿಮರ್ಶೆ ಇನ್ನಾದರೂ ಬದಲಾಗಬೇಡವೆ?

ಕಾವ್ಯ ಹೆಣ್ಣಿನ ಮಟ್ಟಿಗೆ ಗಂಡಿಗಿಂತ ಆದಿಮ ಸಂಬಂಧವನ್ನು ಹೊಂದಿದೆ. ತನ್ನ ಬಿಕ್ಕಟ್ಟಿನ ಗಳಿಗೆಗಳಲ್ಲಿ ಲೋಕದ ಜೊತೆ ಸಂಬಂಧ ಕಷ್ಟವಾದ ಗಳಿಗೆಗಳಲ್ಲೆಲ್ಲ ಅವಳು ನೆಚ್ಚಬಹುದಾದದ್ದು ಕಾವ್ಯವನ್ನೇ. ಬರೆದ, ಬರೆಯದ... ಬರೆಯಲಾಗದ ಕಾವ್ಯವನ್ನೇ.
Mimesis, tell us how to re-evolve with the definition of the feminine
–Lucy Irigary

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT