ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತಛಂದದ, ಮುಕ್ತ ಲಯದ ಅಮೃತ ಪತಾಕೆಗಳು

Last Updated 16 ಜೂನ್ 2018, 9:11 IST
ಅಕ್ಷರ ಗಾತ್ರ

ಸಾಹಿತ್ಯದಿಂದ ಶುರುವಾದ ‘ನಾರೀಕೇಳಾ’ದ ಈ ಪ್ರಯಾಣ ಸಂಗೀತ, ಚಿತ್ರಕಲೆಯ ಕಡೆಗೂ ಸಾಗುತ್ತಿರುವುದು ಕಲೆಯ ಮೂಲಸ್ವರೂಪ ಮತ್ತು ಏಕತೆಯ ಸಂಕೇತದಂತೆಯೇ ಕಾಣಿಸುತ್ತಿದೆ. ಒಂದು ಇನ್ನೊಂದಕ್ಕೆ ಪೂರಕವಾಗುವ, ಒಂದು ಇನ್ನೊಂದನ್ನು ಬೆಳೆಸುವ ಮತ್ತು ಬೆಳಗುವ ಪರಿ ಕಲೆಯನ್ನು ಕುರಿತ ನಮ್ಮ ಪ್ರೀತಿ ಮತ್ತು ನಂಬಿಕೆಯನ್ನು ಹೆಚ್ಚಿಸುತ್ತದೆ. ಸುಬ್ಬುಲಕ್ಷ್ಮಿಯಾಗಲಿ, ಅಮೃತಾ ಆಗಲಿ, ನಮ್ಮೆದುರಿಗೆ ವ್ಯಕ್ತಿತ್ವಗಳಾಗಿರುವಂತೆಯೇ, ಅಪ್ರತಿಮ ಪಾತ್ರಗಳೂ ಆಗಿವೆ, ನಮ್ಮೆದುರಿಗಿರುವ ಮಾದರಿಗಳೂ ಆಗಿವೆ. ಮಹಿಳಾ ಸಂಕಥನದ ಬೇರು ಮತ್ತು ಹೂವುಗಳೆಂದೇ ಇವರನ್ನು ಇಲ್ಲಿ ಚರ್ಚಿಸುವ ಅಗತ್ಯವಿದೆ.

ಅಮೃತಾ ಶೇರ್ ಗಿಲ್ ಎನ್ನುವ ಅಪೂರ್ವ ಕಲಾವಿದೆಯ ಬಗ್ಗೆ ಹೇಳಲು ನೂರು ವಿಷಯೆಳಿವೆ. ಹಲವು ಪ್ರಥಮಗಳ ಹರಿಕಾರಳು ಅಮೃತಾ. ಬದುಕಿದ್ದು ಕೇವಲ ಇಪ್ಪತ್ತೆಂಟು ವರ್ಷ. (ಜ. 30, 1913 – ಡಿ.5, 1941). ಅಷ್ಟರಲ್ಲಿ ಏನೆಲ್ಲವನ್ನು ಎಷ್ಟೆಲ್ಲವನ್ನು ಈ ಹೆಣ್ಣುಮಗಳು ಸಾಧಿಸಿಬಿಟ್ಟಳು!

ಹಂಗೆರಿಯನ್ ತಾಯಿ ಮತ್ತು ಸಿಖ್ ತಂದೆಯ ಮಗಳಾದ ಅಮೃತಾ ಅವರನ್ನು ಇಪ್ಪತ್ತನೇ ಶತಮಾನದ ಬಹು ಮುಖ್ಯ ಚಿತ್ರ ಕಲಾವಿದೆಯೆಂದು, ಬಂಗಾಳಿ ನವೋದಯ ಸಂದರ್ಭದ ಅಪ್ರತಿಮ ಕಲಾವಿದೆಯೆಂದು, ಭಾರತದ ಅತಿ ದುಬಾರಿ ಕಲಾವಿದೆಯೆಂದು ಸಾಮಾನ್ಯವಾಗಿ ಗುರುತಿಸಲಾಗುತ್ತಿದೆ. ಆದರೆ ಈಕೆಯ ನಿಜವಾದ ಕೊಡುಗೆಗಳು, ಪ್ರಸ್ತುತತೆ ಮತ್ತು ಮಹತ್ವದ ಅಂಶಗಳನ್ನು ಗುರುತಿಸುವ ಇನ್ನಿತರ ನೆಲೆಗಳೂ ಆಗಿವೆ. ಈ ಅಂಶಗಳೇ ಅಮೃತಾರ ಜೊತೆಗೆ ನಮಗೆ ಮಧುರವಾದ ಮತ್ತು ಕರುಳುಬಳ್ಳಿಯ ಸಂಬಂಧವನ್ನು ಕಟ್ಟುತ್ತವೆ.

ಬಾಲ್ಯದಿಂದಲೇ ವಿವಿಧ ಕಲೆಗಳಲ್ಲಿ ಅಭ್ಯಾಸವನ್ನು ಶುರು ಮಾಡಿದ ಅಮೃತಾ ಪಿಯಾನೊ, ವಯಲಿನ್‌ಗಳಲ್ಲಿ ಎಳವೆಯಲ್ಲೇ ಪರಿಣತಿ ಪಡೆದು ಕಛೇರಿಗಳನ್ನೂ ತನ್ನ ತಂಗಿ ಇಂದಿರಾ ಜೊತೆ ಕೊಡುತ್ತಿದ್ದರು. ಐದನೆಯ ವಯಸ್ಸಿನಲ್ಲಿಯೇ ಚಿತ್ರ ರಚಿಸಲು ಆರಂಭಿಸಿದ ಈಕೆ ವಿಧ್ಯುಕ್ತವಾಗಿ ಎಂಟನೆಯ ವಯಸ್ಸಿನಲ್ಲಿ ಚಿತ್ರಕಲೆಯ ತರಗತಿಗೆ ಸೇರಿದರು. ಇಟಲಿ ಮತ್ತು ಪ್ಯಾರಿಸ್‌ಗಳಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದ ಅಮೃತಾ ಯುರೋಪಿಯನ್ ಕಲಾವಿದರಿಂದ ಆಳವಾಗಿ ಪ್ರಭಾವಿತರಾದರು.

ಅಮೃತಾರ ಮೊದಲ ಮುಖ್ಯ ಕೃತಿ ‘ಯಂಗ್ ಗರ್ಲ್ಸ್’ ರಚಿತವಾದದ್ದು 1932ರಲ್ಲಿ. ಈ ಮುಖ್ಯ ಕೃತಿ ಆಕೆಗೆ ಪ್ಯಾರಿಸ್‌ನ ಗ್ರಾಂಡ್ ಸಲೊನ್‌ನಲ್ಲಿ ಅಸೋಸಿಯೆಟ್ ಪದವಿಯನ್ನು ತಂದುಕೊಟ್ಟಿತು. ಈ ಪದವಿಯನ್ನು ಪಡೆದ ಅತ್ಯಂತ ಕಿರಿಯ ಮತ್ತು ಏಕೈಕ ಏಷಿಯನ್ ಎನ್ನುವ ಖ್ಯಾತಿಗೆ ಅಮೃತಾ ಪಾತ್ರರಾದರು.

ಯುರೋಪ್ ಮತ್ತು ಭಾರತದ ನಡುವೆ ಹೊಯ್ದಾಡುತ್ತಿದ್ದ ಅಮೃತಾ ತನ್ನ ಸ್ಪಷ್ಟ ದಾರಿಯನ್ನು ಕಂಡುಕೊಂಡದ್ದು 1934ರ ಸುಮಾರಿಗೆ. ತನ್ನ ಕ್ಷೇತ್ರದ ಬಗ್ಗೆ ಹಲವು ಆಯ್ಕೆಗಳನ್ನು ಅಮೃತಾ ತನ್ನೆದುರಿಗೆ ಇರಿಸಿಕೊಂಡಿದ್ದರು ನಿಜ. ಸಂಗೀತ, ಬರವಣಿಗೆ, ಚಿತ್ರಕಲೆ,... ಇವುಗಳನ್ನು ಒಟ್ಟಿಗೇ ಪರಸ್ಪರ ಪೂರಕವಾಗುವಂತೆ ಬಳಸಿಕೊಳ್ಳುವ, ಹೊಂದಿಸುವುದರ ಬಗ್ಗೆಯೂ ಅವರು ಪ್ರಯೋಗಶೀಲರಾಗಿದ್ದರು.

ಒಂದೇ ಮೂಲಧಾತುವಿನ  ವಿಭಿನ್ನ ಅಭಿವ್ಯಕ್ತಿಗಳಾಗಿ ಇವುಗಳನ್ನು ನೋಡುವುದರ ಬಗ್ಗೆ ಅವರಿಗೆ ಸಂದಿಗ್ಧತೆಗಳಿರಲಿಲ್ಲ ಎನಿಸುತ್ತದೆ, ಆದರೆ  ತನ್ನ ಕಾರ್ಯಕ್ಷೇತ್ರ ಯಾವುದಾಗಿರಬೇಕು ಎನ್ನುವ ಗೊಂದಲವೊಂದು ಈಗ ಪರಿಹಾರವಾಯಿತು. ಯುರೋಪಿನಲ್ಲಿರುವಾಗಲೇ  ಭಾರತಕ್ಕೆ ಹಿಂದಿರುಗಬೇಕು ಎನ್ನುವ ಬಯಕೆ ದಿನದಿಂದ ದಿನಕ್ಕೆ ಉತ್ಕಟವಾಗಿ ಬೆಳೆಯುತ್ತಲೇ ಹೋಯಿತು. ಗೆಳೆಯರಿಗೆ ಬರೆದ ಪತ್ರವೊಂದರಲ್ಲಿ, ‘‘ನನ್ನ ವಿಧಿ, ನನ್ನ ಭವಿಷ್ಯ ಎರಡೂ ಭಾರತದಲ್ಲಿ ಚಿತ್ರಕಲಾವಿದೆಯಾಗಿರುವುದರಲ್ಲಿ ಇದೆ ಎನ್ನುವ ವಿಚಿತ್ರ ಭಾವ ನನ್ನನ್ನು ಆವರಿಸುತ್ತಿದೆ’’ ಎಂದು ಬರೆದರು. ಮುಂದೊಂದು ದಿನ, ‘‘ಯುರೋಪು ಅವರಿಗೇ ಇರಲಿ, ಭಾರತ ನನ್ನದು, ನನ್ನದು ಮಾತ್ರ’’ ಎನ್ನುವ ಷರಾ ಬರೆಯುವ ಘಟ್ಟವನ್ನೂ ತಲುಪಿದರು. ಸಂಬಂಧಿಕ ಡಾ. ವಿಕ್ಟರ್ ಈಗನ್‌ನನ್ನು ಮದುವೆಯಾಗಿ ಉತ್ತರ ಪ್ರದೇಶದ ಗೋರಖ್‌ಪುರ್‌ನ ತನ್ನ ಕುಟುಂಬದ ಹಳೆಯ ಮನೆಯಲ್ಲಿ ಸಂಸಾರ ಆರಂಭಿಸಿದರು.

ಇಲ್ಲಿಂದಾಚೆಗೆ ಅಮೃತಾರ ಚಿತ್ರಜೀವನದ ಎರಡನೆಯ ಘಟ್ಟ ಆರಂಭವಾಯಿತು. ಈ ತನಕ ಅಮೃತಾ ನಡೆಸಿದ್ದೆಲ್ಲವೂ ಈ ಮುಂದಿನದ್ದಕ್ಕೆ ನಡೆಸಿದ ತಯಾರಿಯೋ ಎನಿಸುವ ಹಾಗೆ ಭಾಸವಾಗುತ್ತದೆ. ಅಮೃತಾರನ್ನು ದೇಶದ ಶ್ರೇಷ್ಠ ಚಿತ್ರಕಲಾವಿದೆ ಎಂದು ಮಾತ್ರ ನೋಡುವುದು ಹೆಣ್ಣಾಗಿ ಅಮೃತಾ ನಡೆಸಿದ ಅನೇಕ ಪ್ರಯೋಗಗಳು ಮತ್ತು ಪಡೆದ ಯಶಸ್ಸುಗಳಿಗೆ ಮಾಡುವ ಅನ್ಯಾಯ. ಮಾತ್ರವಲ್ಲ, ತನ್ನ ಪ್ರಖರ ರಾಜಕೀಯ ಪ್ರಜ್ಞೆಯಿಂದಾಗಿ ಚಿತ್ರಕಲೆಯ ಮತ್ತು ಬರವಣಿಗೆಯ ಮೂಲಕ ಈಕೆ ಉದ್ಘಾಟಿಸಿದ ಮಹಿಳಾ ಶಕೆಯನ್ನು ಕಡೆಗಣಿಸಿದಂತೆಯೂ ಆಗುತ್ತದೆ.

ಕಲೆ ಮತ್ತು ಹೆಣ್ಣಿನ ಬಗ್ಗೆ ಮಾತನಾಡುವಾಗಲೆಲ್ಲ ಅನಿವಾರ್ಯವಾಗಿ ಪ್ರತಿರೋಧವನ್ನು ಅದರ ಅಖಂಡ ಮತ್ತು ಅಂತರ್ಗತ ನೆಲೆಯೆನ್ನುವಂತೆ ಗುರುತಿಸುತ್ತೇವೆ. ಇದು ಸಹಜ, ಅನಿವಾರ್ಯ ಮತ್ತು ವಾಸ್ತವ. ಅಪವಾದವೆನ್ನುವಂತೆ, ಮುಕ್ತ ಅವಕಾಶವನ್ನು ಪಡೆದ ಮತ್ತು ಅದನ್ನು ಅದರ ಎಲ್ಲ ಪಾತ್ರಗಳಲ್ಲಿ ಹಿಗ್ಗಿಸುವ ಕೆಲವೇ ಕೆಲವು ಉದಾಹರಣೆಗಳಲ್ಲಿ ಅಮೃತಾ ಒಬ್ಬರು. ಆಧುನಿಕ ಮತ್ತು ಪ್ರಗತಿಪರ ದೃಷ್ಟಿಕೋನದ ತಂದೆ-ತಾಯಿ, ಸಮಾಜದ ಪ್ರತಿಷ್ಠಿತ ವರ್ಗದ ಸವಲತ್ತುಗಳು, ಪ್ರತಿಭೆಯ ಅನಾವರಣಕ್ಕೆ ದೊರೆತ ಪ್ರೋತ್ಸಾಹ ಮತ್ತು ಅವಕಾಶ, ಇವು ಒಂದು ಕಡೆಗೆ. ಇನ್ನೊಂದು ಕಡೆಗೆ, ಅಮೃತಾರ ಹರಿತ ಬೌದ್ಧಿಕ ಶಕ್ತಿ ಮತ್ತು ಹುಟ್ಟು ಪ್ರತಿಭೆಗಳ ಸಂಯೋಗದಲ್ಲಿ ಆಕೆ ರೂಪಿಸಿಕೊಂಡ ಸಾಮಾಜಿಕ ಮತ್ತು ರಾಜಕೀಯ ನಿಲುವುಗಳು, ಅವುಗಳನ್ನು ನಿಸ್ಸಂಕೋಚವಾಗಿ ಆಕೆ ಅಭಿವ್ಯಕ್ತಿಸಿದ ಕ್ರಮ ಈಕೆಯನ್ನು ಕಲಾವಿದೆಯ ಚೌಕಟ್ಟಿನಿಂದ ಆಚೆಗೆ ತಂದು ಆಧುನಿಕ ಭಾರತದ ಮುಖ್ಯ ವ್ಯಕ್ತಿತ್ವವೊಂದರ ಸಾಲಿನಲ್ಲಿ ನಿಲ್ಲಿಸುತ್ತದೆ.

ಅಮೃತಾರ ಚಿತ್ರಗಳನ್ನು ಕಾಲಾನುಕ್ರಮದಲ್ಲಿ ನೋಡುತ್ತಾ ಹೋದರೆ ಇವರ ಬದಲಾಗುತ್ತಾ ಹೋದ ಅಥವಾ ಬೆಳೆಯುತ್ತಾ ಹೋದ ಹೆಣ್ಣಿನ ಚಹರೆಯ ಚಿತ್ರ ನಮಗೆ ಕಾಣಿಸುತ್ತದೆ. ಇವರ ಮೊದಲ ಮುಖ್ಯ ಪೇಂಟಿಂಗ್ ‘ಯಂಗ್ ಗರ್ಲ್ಸ್’ನಲ್ಲಿ ಇರುವುದು ಇಬ್ಬರು ಕುಲೀನ ವರ್ಗದ, ಅದರ ಮೂಲ ಲಕ್ಷಣ ಎಂದೇ ತಿಳಿಯಲಾಗುವ ಬಿಳಿ ಹೆಣ್ಣುಮಕ್ಕಳು. 1937ರಲ್ಲಿ ಅಮೃತಾ ದಕ್ಷಿಣ ಭಾರತದ ಪ್ರವಾಸ ಕೈಗೊಂಡ ಮೇಲೆ ಅವರ ಚಿತ್ರಗಳ ಸ್ವರೂಪವೇ ಬದಲಾಗಿ ಬಿಟ್ಟಿತು. ಈಗ ಅವರ ಚಿತ್ರದಲ್ಲಿ ಕಾಣಿಸಿಕೊಳ್ಳುವ ಗಂಡು ಹೆಣ್ಣುಗಳು, ‘ಪ್ಯಾಸೇಜ್ ಟು ಇಂಡಿಯಾ’ದ ಅಜೀಜ್ ಹೇಳುವ ರಿಚ್ ಇಂಡಿಯನ್ ಬ್ರೌನ್, ದಟ್ಟ ಕಂದು ಬಣ್ಣದ ವ್ಯಕ್ತಿಗಳು. ಜಗತ್ತಿನ ಸವಲತ್ತನ್ನೆಲ್ಲ ಪಡೆದ ಹೆಣ್ಣುಮಕ್ಕಳ ಪ್ರತಿನಿಧಿಗಳಂತಿದ್ದ ‘ಯಂಗ್ ಗರ್ಲ್ಸ್’ ಬದಲು ಬಡತನದ ಸರಳ ಜೀವನದ ಹೆಣ್ಣುಮಕ್ಕಳು ಕಾಣಿಸಿಕೊಳ್ಳುತ್ತಾ ಹೋದರು. ಆಭರಣಗಳ ಹಂಗಿಲ್ಲದ, ಭಾರವಿಲ್ಲದ ನಿರಾಭರಣ ಸುಂದರಿಯರು.

ಆದರೆ ಆ ಯುರೋಪಿಯನ್ ಹೆಣ್ಣುಮಕ್ಕಳಲ್ಲಿ ಮತ್ತು ಈ ಬಡ ಭಾರತದ ಹೆಣ್ಣು ಮಕ್ಕಳಲ್ಲಿ ಒಂದು ಸಾಮಾನ್ಯ ಅಂಶವನ್ನು ಅಮೃತಾ ಸ್ಪಷ್ಟವಾಗಿ ಗುರುತಿಸುತ್ತಾರೆ. ಅದೆಂದರೆ, ಇವರಿಬ್ಬರಲ್ಲೂ ಕಾಣಿಸುವ ಮುಕ್ಕಾಗದ ಆತ್ಮವಿಶ್ವಾಸ. ಯಾರಲ್ಲೂ ಆತ್ಮಮರುಕ, ವಿಷಾದ ಅಥವಾ ಕೀಳರಿಮೆಯ ಭಾವದ ಸುಳಿವೇ ಇಲ್ಲ. ಅವರ ವರ್ಗ. ಉಡುಪು, ಆಭರಣ, ವಿದ್ಯೆ ಈ ಎಲ್ಲವುಗಳ ನಡುವೆ ಇರುವ ಅಗಾಧವಾದ ಕಂದರವು ಅವರ ಆತ್ಮವಿಶ್ವಾಸದಲ್ಲಿ ಯಾವ ಪಾತ್ರವನ್ನೂ ವಹಿಸದಿರುವ ಸಂಗತಿಯನ್ನು ಅಮೃತಾ ಗುರುತಿಸುತ್ತಾರೆ. ಆತ್ಮವಿಶ್ವಾಸ, ವ್ಯಕ್ತಿತ್ವದ ಘನತೆ ಹೆಣ್ಣಿನ ಹುಟ್ಟಾ ಸಂಗತಿಗಳೋ ಎನ್ನುವ ನಂಬಿಕೆಯಲ್ಲಿ ಅಮೃತಾರ ಈ ಚಿತ್ರಗಳಿವೆ.

ಈ ಅಂಶ ಅನೇಕ ಮಹತ್ವದ ವಿಚಾರಗಳ ಕಡೆಗೆ ನಮ್ಮ ಗಮನ ಸೆಳೆಯುತ್ತದೆ. ಸ್ತ್ರೀವಾದವು ಒಂದು ಚಳವಳಿಯಾಗಿ ಬೆಳೆಯದ ಕಾಲಘಟ್ಟದಲ್ಲಿ ಅಮೃತಾ ಗುರುತಿಸುವ ಹೆಣ್ಣಿನ ಈ ಚಹರೆಯು, ಹೆಣ್ಣಿನ ವ್ಯಕ್ತಿತ್ವದ ಮೂಲಾಂಶವನ್ನು ಯಾವಕಾಲದಲ್ಲಿಯೂ ಎಲ್ಲಕಾಲದಲ್ಲಿಯೂ ಗ್ರಹಿಸಬೇಕಾದ ಕ್ರಮವನ್ನು ನಮ್ಮೆದುರಿಗೆ ಮಂಡಿಸುತ್ತದೆ. ಸ್ತ್ರೀವಾದವು ಅನಾದಿ ಎನ್ನುವ ಸ್ತ್ರೀವಾದಿಗಳ ವಾದವನ್ನು, ನಂಬಿಕೆಯನ್ನು ಅಮೃತಾರ ಈ ಚಿತ್ರಗಳು ಸಂಪೂರ್ಣವಾಗಿ ಎತ್ತಿ ಹಿಡಿಯುತ್ತವೆ. ಮೂರನೆಯದಾಗಿ ‘ಸಾರ್ವತ್ರಿಕ ಹೆಣ್ಣಿನ’ ಪರಿಕಲ್ಪನೆ. ದೇಶ ಕಾಲಾತೀತವಾದ ಸ್ತ್ರೀರೂಪವನ್ನು ಪ್ರತಿಪಾದಿಸುವುದರ ಮೂಲಕವೇ ಅಮೃತಾ ತಮ್ಮ ದೃಷ್ಟಿಕೋನವನ್ನು ರಾಜಕೀಯ ಹೋರಾಟವಾಗಿ ಪರಿವರ್ತಿಸುತ್ತಾರೆ ಎನಿಸುತ್ತದೆ.

ಆರಂಭದಲ್ಲಿಯೇ ಹೇಳಿದಂತೆ ಅಮೃತಾ ಹರಿತ ರಾಜಕೀಯ ನಿಲುಮೆಗಳನ್ನು ಹೊಂದಿದ್ದವರು. ರಾಷ್ಟ್ರೀಯತೆಯ ನಿರ್ಣಾಯಕ ಕಾರ್ಯಮಾದರಿಯಾದ ನವೋದಯದ ಬಗ್ಗೆ ತೀವ್ರ ವಿಮರ್ಶಾತ್ಮಕವಾದ ಅಭಿಪ್ರಾಯಗಳನ್ನು ಅವರು ನಿರ್ಭೀತಿಯಿಂದ ವ್ಯಕ್ತಪಡಿಸುತ್ತಿದ್ದರು. ಬಂಗಾಳವೂ ಸೇರಿದಂತೆ ಇಡೀ ಭಾರತದಲ್ಲಿಯೇ ಹೊಸ ಯುಗವನ್ನು ಚಿತ್ರಕಲೆ, ಸಾಹಿತ್ಯ, ಸಂಗೀತ ಎಲ್ಲ ಕ್ಷೇತ್ರಗಳಲ್ಲಿಯೂ ಉದ್ಘಾಟಿಸಿದ ಶಾಂತಿನಿಕೇತನ ಅಥವಾ ಬೆಂಗಾಲ್ ನವೋದಯದ ಕಲಾ ಮಾದರಿಗಳನ್ನು ಅವುಗಳ ಸೀಮಿತ ಚೌಕಟ್ಟಿನ ಮತ್ತು ನಿರ್ಬಂಧಿತ ದೃಷ್ಟಿಕೋನದ ಕಾರಣಕ್ಕಾಗಿ ಅಮೃತಾ ವಿರೋಧಿಸಿದರು. (ಕುತೂಹಲಕರ ಸಂಗತಿಯೆಂದರೆ ಸ್ವತಃ ರವೀಂದ್ರನಾಥ ಟ್ಯಾಗೋರ್ ಕೂಡ ಒಳಗಿನಿಂದಲೇ ಶಾಂತಿನಿಕೇತನದ ಕಟು ಟೀಕಾಕಾರರಾಗಿದ್ದರು ಎನ್ನುವುದು. ಅದರೆಲ್ಲ ಪ್ರಯೋಗಶೀಲತೆಯಲ್ಲೂ ಶಾಂತಿನಿಕೇತನ ಪಡೆಯಬೇಕಾದಷ್ಟು ವಿಸ್ತಾರವನ್ನು, ಮುಕ್ತತೆಯನ್ನು ಪಡೆದುಕೊಳ್ಳುತ್ತಿಲ್ಲ ಎನ್ನುವುದು ರವೀಂದ್ರರ ಕೊರಗೂ ಆಗಿತ್ತು). ಒಳಗಿನಿಂದ ಟ್ಯಾಗೋರ್ ಮತ್ತು ಹೊರಗಿನಿಂದ ಅಮೃತಾ ಈ ಬೆಂಗಾಲ್ ನವೋದಯವನ್ನು ತಮ್ಮ ಟೀಕೆಗಳಿಂದಾಗಿಯೇ ರಚನಾತ್ಮಕವಾಗಿ ಬೆಳೆಸಿದರು.

ಪ್ರಶ್ನಾತೀತ ಸಾಂಸ್ಕೃತಿಕ ನಾಯಕ ಶಿರೋಮಣಿಯಾಗಿದ್ದ, ಭಾರತದ ಪುನರುಜ್ಜೀವನ ಚಳವಳಿಯ ಹರಿಕಾರರಾದ, ಸ್ವಾತಂತ್ರ್ಯ ಚಳವಳಿಯ ಸಾಂಸ್ಕೃತಿಕ ಆವೃತ್ತಿಯಂತೆಯೇ ಕಾಣಿಸುತ್ತಿದ್ದ ಗುರುದೇವರ ಜೊತೆ ಅಮೃತಾಗೆ ಆ ಎಳೆಯ ವಯಸ್ಸಿನಲ್ಲೇ ಸಾಧ್ಯವಾದ ಅನುಸಂಧಾನ ಮತ್ತು ಮಾತುಕತೆಗಳು ಅವರ ಚಿಂತನೆಗಳು ಮತ್ತು ದೃಷ್ಟಿಕೋನದ ಪ್ರಬುದ್ಧತೆಯನ್ನು ಹೇಳುತ್ತವೆ.

ಅಮೃತಾಗೆ ಇದ್ದ ಇನ್ನೊಂದು ತಕರಾರು, ಆಗ ಬಹು ಜನಪ್ರಿಯವಾಗಿದ್ದ ಪ್ರಾಂತೀಯ ಅನನ್ಯತೆಯದ್ದು. ಇದೊಂದು ಬಹು ಮುಖ್ಯವಾದ ಸಂಗತಿ. ಇದನ್ನು ವಸಾಹತುಶಾಹಿ ಸಾಂಸ್ಕೃತಿಕ ರಾಜಕಾರಣಕ್ಕೆ ಅಮೃತಾರ ಪ್ರತಿರೋಧ ಎಂದೂ ಗುರುತಿಸಲು ಸಾಧ್ಯವಿದೆ. ಬಲು ಶಕ್ತವಾದ, ಭಾರತದ ಸಾಂಸ್ಕೃತಿಕ ಅನನ್ಯತೆಯನ್ನೇ ಕೀಳರಿಮೆಯ ಕೂಪಕ್ಕೆ ತಳ್ಳುವ ಸ್ಪಷ್ಟ ಉದ್ದೇಶದ ಬ್ರಿಟೀಷ್ ಸಾಂಸ್ಕೃತಿಕ ರಾಜಕಾರಣವನ್ನು ಎದುರಿಸಲು ಪ್ರಾಂತೀಯತೆಯ ನೆಲೆಯು ಉಪಯುಕ್ತವಲ್ಲ ಎನ್ನುವುದು ಅಮೃತಾರ ಆಲೋಚನೆಯಾಗಿತ್ತೆಂದು ತೋರುತ್ತದೆ. ಇವರ ಆಲೋಚನೆಯ ವ್ಯಾಪ್ತಿ ಕಲಾವಲಯವನ್ನು ದಾಟಿ ಕಲೆಯನ್ನು ಪ್ರಭುತ್ವವನ್ನು ಎದುರಿಸಲು ಬೇಕಾಗುವ ಒಂದು ಶಕ್ತ ಆಯುಧವಾಗಿ ಬಳಸುವುದರ ಕಡೆಗಿತ್ತು ಎನ್ನುವ ಅಂಶ ಇಪ್ಪತ್ತರ ಹರೆಯದಲ್ಲೇ ಅಮೃತಾಗೆ ಸಿದ್ಧಿಸಿದ್ದ ಸಮುದಾಯ ಪ್ರಜ್ಞೆಯನ್ನು ಸಂಕೇತಿಸುತ್ತದೆ.

ಈ ಎಲ್ಲ ಹಿನ್ನೆಲೆಯಲ್ಲಿ ಇವರ ಕಲಾಕೃತಿಗಳು ಹೆಣ್ಣಿನ ಸ್ವಂತಿಕೆಯ ಪತಾಕೆಗಳ ಹಾಗೆ ಕಾಣಿಸುತ್ತವೆ. ಕುಂದದ ಆತ್ಮಸ್ಥೈರ್ಯ ಮತ್ತು ಅಂತರಂಗದ ಚೆಲುವಿನ ಪ್ರತಿಮೆಗಳ ಹಾಗೆ ಇವರ ಹೆಣ್ಣುಗಳಿದ್ದಾರೆ. ‘ಪೋಸ್ಟ್ ಇಂಪ್ರೆಷನಿಷ್ಟ್’ ಮಾದರಿಗೆ ಸೇರುವ ಇವರ ಕಲಾಕೃತಿಗಳು, peಎನ್ನುವ ಧ್ಯೇಯ ವಾಕ್ಯದ ವಕ್ತಾರರಂತೆ ಕಾಣಿಸುತ್ತವೆ. ನಮ್ಮೆದುರಿಗೆ ಕಾಣಿಸುತ್ತಿರುವ ಚಿತ್ರಗಳು ತಮ್ಮ ಆಕಾರಗಳ ಆಚೆಗೂ ಮತ್ತೇನನ್ನೋ ಧ್ವನಿಸುವಂತೆ ಅನಿಸುವುದು ಭ್ರಮೆಯಲ್ಲ, ಕಲೆಯ ನಿಜ ಶಕ್ತಿ.

ತಾವು ಬದುಕಿದ್ದ ಕಾಲದಲ್ಲಿಯೇ ತಮ್ಮ ಕಲೆಗೆ ಮನ್ನಣೆ ಪಡೆಯುವವರ ಸಂಖ್ಯೆ ಸಣ್ಣದು. ಅಮೃತಾ ಆ ಅದೃಷ್ಟವಂತರಲ್ಲೊಬ್ಬರು. ನೆಹರೂ ಇವರ ಕಲೆಗೆ ಮಾರು ಹೋಗಿದ್ದರು. ಅಮೃತಾ ಕಾಂಗ್ರೆಸ್ ಪರವಾಗಿದ್ದರು. ಹಳ್ಳಿಯ ಬದುಕನ್ನು ಕುರಿತ ಇವರ ಚಿತ್ರಗಳನ್ನು ಕಾಂಗ್ರೆಸ್ ತನ್ನ ಪ್ರಚಾರಕ್ಕಾಗಿ ಬಳಸಿಕೊಳ್ಳಬೇಕು ಎನ್ನುವ ಮಾತುಕತೆಗಳೂ ನಡೆದಿದ್ದವು. ಮಹಿಳೆಯೊಬ್ಬಳು ತನ್ನ ಕಲೆಯ ಬಲದಿಂದಲೇ , ಹೆಚ್ಚುಕಡಿಮೆ ಶತಮಾನದಷ್ಟು ಹಿಂದೆ ಪ್ರಭಾವಶಾಲಿಯಾಗಿದ್ದಳು ಎನ್ನುವುದು ಸಕಾರಣವಾಗಿ ನಮ್ಮಲ್ಲಿ ಆಶ್ಚರ್ಯವನ್ನು ಹುಟ್ಟಿಸುತ್ತದೆ. ಆ ಕಾಲದ ಸಾಮಾಜಿಕ ಮತ್ತು ರಾಜಕೀಯ ನಿಲುವುಗಳಲ್ಲಿಯೂ ಈಕೆ ಪ್ರಭಾವಶಾಲಿಯಾದದ್ದು ಈ ಆಶ್ಚರ್ಯವನ್ನು ಇನ್ನೂ ಹೆಚ್ಚಿಸುತ್ತದೆ.

ಘೋಷಿತ ಎನ್ನಬಹುದಾದ ಯಾವ ಸ್ತ್ರೀವಾದಿ ತಾತ್ವಿಕತೆಗಳ ಹಿನ್ನೆಲೆಯೇ ಇಲ್ಲದ ಕಾಲದಲ್ಲಿ ತಮ್ಮ ಕಲಾಕೃತಿಗಳು ಮತ್ತು ಬರವಣಿಗೆಯಲ್ಲಿ ಸ್ತ್ರೀಪರವಾದ ವಿಚಾರಗಳನ್ನು ಅಮೃತಾ ರಚಿಸಿದ ಪರಿ ಇನ್ನೂ ಹೆಚ್ಚಿನ ಅಧ್ಯಯನಕ್ಕಾಗಿ ನಮ್ಮನ್ನು ಒತ್ತಾಯಿಸುತ್ತದೆ.

ತನ್ನ ಘನತೆ, ಗಾಂಭೀರ್ಯ ಮತ್ತು ಮನೋಲ್ಲಾಸದ ಹೆಣ್ಣುಗಳನ್ನು ನಿರಂತರವಾಗಿ ಚಿತ್ರಿಸುತ್ತಲೇ ಹೋದ ಅವರ ಕಲಾಕೃತಿಗಳಲ್ಲಿ ಪ್ರತಿರೋಧದ ಅಂಶ ಇಲ್ಲವೆಂದು ಆರಂಭದಲ್ಲಿ ಹೇಳಿದ್ದನ್ನು ಇಲ್ಲಿ ಸ್ವಲ್ಪ ವಿಸ್ತರಿಸಿಕೊಳ್ಳಬಹುದು. ಒಂದು ಕಾರಣ, ಬಹುಶಃ ಅಮೃತಾರ ಕೌಟುಂಬಿಕ ಹಿನ್ನೆಲೆ ಈ ಮಗ್ಗುಲಿನ ಬಗ್ಗೆ ಅವರು ಹೆಚ್ಚಿನ ಆಸಕ್ತಿ ವಹಿಸದೇ ಇದ್ದುದಕ್ಕೆ ಕಾರಣವಿರಬಹುದು. ಇನ್ನೊಂದು, ಅಮೃತಾ ಹೆಣ್ಣನ್ನು ಪರಿಭಾವಿಸುವ ವಿಶಿಷ್ಟ ಬಗೆ. ಬದುಕನ್ನು ಎಲ್ಲ ಹೊತ್ತಿನಲ್ಲೂ ಹೆಣ್ಣು ಎದುರಿಸುವ ಬಗೆಯಲ್ಲಿ, ಪ್ರತಿರೋಧಕ್ಕಿಂತ ಒಳಗೊಳ್ಳುವಿಕೆಯೇ ಹೆಣ್ಣಿನ ಜೀವಕೇಂದ್ರ ಎಂದು ಅಮೃತಾ ನಂಬಿರುವ ಹಾಗೆ ಕಾಣಿಸುತ್ತದೆ. ಪ್ರತಿರೋಧವನ್ನು ಮೀರಿದ ವಿಸ್ತಾರದ ನೆಲೆಯಲ್ಲಿ ಇವರು ಸ್ತ್ರೀಚೈತನ್ಯವನ್ನು ಗುರುತಿಸುತ್ತಿದ್ದಾರೆ ಎನ್ನುವುದಕ್ಕೆ ಅವರ ಕಲಾಕೃತಿಗಳಲ್ಲಿ ಸಾಕಷ್ಟು ಆಧಾರಗಳಿವೆ.

ಅಮೃತಾರ ಜೊತೆಜೊತೆಯಲ್ಲೇ ಅಕ್ಕ ತಂಗಿಯರೋ ಎನ್ನುವಂತೆ ಪಕ್ಕದಲ್ಲೇ ಇಟ್ಟು ಚರ್ಚಿಸುವ ಇನ್ನೊಬ್ಬ ಕಲಾವಿದೆಯಿದ್ದಾಳೆ. ಫ್ರಿದಾ ಕಾಲೊ ಎನ್ನುವ ಮೆಕ್ಸಿಕನ್ ಕಲಾವಿದೆ ಈಕೆ. ಮೂರನೇ ಜಗತ್ತಿನ ಈ ಇಬ್ಬರು ಕಲಾವಿದೆಯರನ್ನು ಒಟ್ಟಿಗೆ ಇಡುವುದು  ಜಾಗತಿಕ ನೆಲೆಯಲ್ಲಿಯೂ ಮುಖ್ಯ. ಮೂರನೆ ಜಗತ್ತಿನ ಆರ್ಥಿಕತೆಯೂ, ಸಾಂಸ್ಕೃತಿಕ ಸನ್ನಿವೇಶಗಳನ್ನೂ ತನ್ನ ಹಿಡಿತಕ್ಕೆ ತಂದುಕೊಂಡಿರುವ ನವ ಬಂಡವಾಳಶಾಹಿಗಳ ದಾಸ್ಯವನ್ನು ಧಿಕ್ಕರಿಸುವ ಅಸಾಮಾನ್ಯ ವಿಚಾರ ಪ್ರಣಾಳಿಕೆ ಈ ಇಬ್ಬರಲ್ಲೂ ಕಾಣಿಸುತ್ತದೆ. ಯುರೋಪಿನ ಪ್ರಭಾವದಿಂದ ತನ್ನನ್ನು ಬಿಡಿಸಿಕೊಂಡು ಭಾರತಕ್ಕೆ ತನ್ನನ್ನು ಅರ್ಪಿಸಿಕೊಂಡ ಅಮೃತಾ ಮತ್ತು ಫ್ರಿದಾ ಕಾಲೊ ಶತಮಾನದಷ್ಟು ಹಿಂದೆ ಆರಂಭಿಸಿದ ಈ ಸ್ವಂತಿಕೆ ಮತ್ತು ಸ್ವಾವಲಂಬನೆಯ ಹುಡುಕಾಟದ ಪ್ರಸ್ತುತತೆಯನ್ನು ವಿವರಿಸುವ ಅವಶ್ಯಕತೆಯಿಲ್ಲ. ಮೂರನೇ ಜಗತ್ತು ಒಟ್ಟಾಗಬೇಕಾದ ಅಗತ್ಯವನ್ನೂ ಇವರಿಬ್ಬರ ಸಮೀಕರಣದ ಚರ್ಚೆಗಳು ಸಂಕೇತಿಸುತ್ತವೆ.

ಅಮೃತಾರ ಕಲಾಕೃತಿಗಳನ್ನು ರವೀಂದ್ರನಾಥ ಟ್ಯಾಗೋರ್ ಮತ್ತು ಅಬನೀಂದ್ರನಾಥ್ ಟ್ಯಾಗೋರರ ಜೊತೆಯಲ್ಲಿಟ್ಟು ಅಧ್ಯಯನ ಮಾಡಲಾಗುತ್ತದೆ ಎನ್ನುವ ಅಂಶ, ಸೌಂದರ್ಯ ಮೀಮಾಂಸೆಯಲ್ಲಿಯೂ ಅಮೃತಾರ ಕೃತಿಗಳು ಇಪ್ಪತ್ತು-ಮೂವತ್ತರ ವಯೋಮಾನದಲ್ಲೇ ಪಡೆದುಕೊಂಡ ಸಿದ್ಧಿಯ ನೆಲೆಯನ್ನು ಸೂಚಿಸುತ್ತದೆ.

‘‘ಈ ತುಂಬಿ ಬಾಳು ತುಂಬಿರುವ ತನಕ ತುಂತುಂಬಿ ಕುಡಿಯ ಬೇಕು’’ ಎನ್ನುವುದನ್ನು ಅಕ್ಷರಶಃ ಪಾಲಿಸಿದವಳು ಅಮೃತಾ. ಆಕೆಯ ಉತ್ಕಟ ಬದುಕಿನಲ್ಲಿ ಅನೇಕ ಗೆಳೆಯ ಗೆಳತಿಯರಿದ್ದಾರೆ. ಇವಳ ‘ಯಂಗ್ ಗರ್ಲ್ಸ್’ ಕೃತಿ ಸಲಿಂಗ ಕಾಮದ ಸ್ಪಷ್ಟ ಅಭಿವ್ಯಕ್ತಿ ಎನ್ನುವುದರ ಕುರಿತು ಅನೇಕ ವಿಶ್ಲೇಷಣೆಗಳಿವೆ. ಸಲಿಂಗ ಕಾಮವೂ ಸೇರಿದಂತೆ ಲಿಂಗ ರಾಜಕಾರಣದ ಹಲವು ಮಗ್ಗುಲಗಳನ್ನೂ ಇವಳ ಕೃತಿಗಳು ಶೋಧಿಸುತ್ತವೆ. ತನ್ನ ಗೆಳೆಯ-ಗೆಳತಿಯರಿಗೆ ಅಮೃತಾ ಬರೆದ ಪತ್ರಗಳನ್ನು ಓದುವುದೇ ಒಂದು ರೋಮಾಂಚಕಾರಿ ಅನುಭವ. ಖಂಡಿತವಾಗಿ ಬರವಣಿಗೆಯೂ ಇವಳ ಬಹುಮುಖ್ಯ ಮಾಧ್ಯಮ.

2006ರಲ್ಲಿ ಈಕೆಯ ಕಲಾಕೃತಿ ‘ವಿಲೇಜ್ ಸೀನ್’ 6.9ಕೋಟಿ ರೂಪಾಯಿಗೆ ಮಾರಾಟವಾಗಿರುವುದೊಂದು ದಾಖಲೆ. ಕಳೆದ ದಶಕದಲ್ಲಿ, ‘ಇತಿ ನಿನ್ನ ಅಮೃತಾ’ ಎನ್ನುವ ರಂಗಪ್ರಯೋಗವೊಂದು ಭಾರತದ ಉದ್ದಗಲಕ್ಕೂ ಪ್ರದರ್ಶನಗಳನ್ನು ಕಂಡಿತು ಮತ್ತು ಕಾಣುತ್ತಿದೆ. ಪ್ರತಿಭೆಯ ಉಲ್ಕೆಯಂತೆ ಕಾಣುವ ಹೆಣ್ಣುಮಗಳೊಬ್ಬಳ ಒಳ ಜಗತ್ತಿನ ಅನಾವರಣದ ಈ ನಾಟಕವು, ಅಮೃತಾ ಎನ್ನುವ, ಸಾವಿಲ್ಲದ ಜೀವ ಚೈತನ್ಯವನ್ನು ಗಂಡು ನಿಧಾನವಾಗಿ ಒಪ್ಪುತ್ತಾ ಅರ್ಥ ಮಾಡಿಕೊಳ್ಳುತ್ತಾ ಅವಳ ಬಗೆಗಿನ ಪ್ರೀತಿ ಗೌರವವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುವ ಸಾವಯವ ಪ್ರಕ್ರಿಯೆಯ ರೂಪಕ.

ಹೆಣ್ಣಿನ ಮುಕ್ತಛಂದದ, ಮುಕ್ತ ಲಯದ ಅಪೂರ್ವ ಹಾಡು ಹಕ್ಕಿ ಅಮೃತಾ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT