ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಗಾಂಧಿಯ ನಡೆ: ಏನು? ಎತ್ತ?

Last Updated 8 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಶಿವನ ಆಶೀರ್ವಾದ ಬೇಡುವುದು ರಾಹುಲ್ ಗಾಂಧಿ ಅವರ ಉದ್ದೇಶವಿದ್ದಿರಬಹುದು. ಆದರೆ, ಈ ಮೂಲಕ ಅವರು ಎದುರಾಳಿ ಪಕ್ಷದ ಕನಸನ್ನು ಸ್ವತಃ ಸಾಕಾರಗೊಳಿಸಿಕೊಟ್ಟಿದ್ದಾರೆ. ಇದರಿಂದಾಗಿ ಕೇಂದ್ರದ ಆಡಳಿತಾರೂಢ ಪಕ್ಷ ಆನಂದತುಂದಿಲವಾಗಿದೆ. ರಾಹುಲ್‌ ಅವರ ಕೈಲಾಸ ಮಾನಸ ಸರೋವರ ಯಾತ್ರೆಗೆ ಸಂವೇದನಾಶೀಲ ಬಿಜೆಪಿಯು ‘ಎಂತಹ ಒಳ್ಳೆಯ ಚಿಂತನೆ ನಿಮ್ಮದು ರಾಹುಲ್ ಸರ್‌ ಜಿ’ ಎಂದು ಪ್ರತಿಕ್ರಿಯಿಸಬಹುದಾಗಿತ್ತು. ಹೀಗೆ ಹೇಳಿದ್ದರೆ ಈ ವಿವಾದವು ಕೊನೆಗೊಂಡು, ಅಚಲವಾಗಿ ಕುಳಿತಿರುವ ಶಿವನು ಕೂಡ ಇದನ್ನು ಮೆಚ್ಚುತ್ತಿದ್ದ.

ಇದಕ್ಕೆ ಬದಲಾಗಿ, ಲೋಕಸಭೆಯಲ್ಲಿ ಕಾಂಗ್ರೆಸ್ಸಿಗಿಂತ ಆರು ಪಟ್ಟು ಹೆಚ್ಚು ಸಂಖ್ಯಾ ಬಾಹುಳ್ಯ ಹೊಂದಿರುವ ಬಿಜೆಪಿಯು, ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್‌ ಅವರು ಹರಿಬಿಡುತ್ತಿರುವ ತಮ್ಮ ತೀರ್ಥಯಾತ್ರೆಯ ಫೋಟೊಗಳ ಅಸಲಿಯತ್ತನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಕೈಹಾಕಿದೆ. ಅಲ್ಲದೆ, ದಿಟವಾಗಿಯೂ ಅವರು ಅಲ್ಲಿಗೆ ಹೋಗಿದ್ದಾರೆಯೇ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದೆ. ವಿಶೇಷವಾಗಿ, ಮಾಡಲು ಹೆಚ್ಚಿನ ಉದ್ಯೋಗವಿಲ್ಲದ, ವಾಚಾಳಿಯಾದ ಹಾಗೂ ಟ್ವಿಟರ್‌ನಲ್ಲೇ ಮುಳುಗಿರುವ ಸಚಿವರೊಬ್ಬರು ಶೆರ್ಲಾಕ್ ಹೋಮ್ಸ್‌ನಂತೆ ಪತ್ತೇದಾರಿಕೆಯನ್ನೂ ಮಾಡುತ್ತಿದ್ದಾರೆ. ರಾಹುಲ್ ಪೋಸ್ಟ್ ಮಾಡಿರುವ ಚಿತ್ರದಲ್ಲಿ ವಾಕಿಂಗ್ ಸ್ಟಿಕ್‍ನ ನೆರಳೇ ಕಾಣುತ್ತಿಲ್ಲ, ಆದ್ದರಿಂದ ಇದು ಫೋಟೊ ಶಾಪ್‍ನಲ್ಲಿ ಸಿದ್ಧಪಡಿಸಿರುವ ಚಿತ್ರವಲ್ಲದೆ ಮತ್ತೇನು ಎಂದು ಅವರು ಚುಚ್ಚಿದ್ದಾರೆ.

ಅದೇನೇ ಇರಲಿ, ಬಿಜೆಪಿಯು ಈ ವಿದ್ಯಮಾನವನ್ನು ಎಷ್ಟು ವ್ಯಗ್ರವಾಗಿ ನೋಡುತ್ತಿದೆಯೋ ಅದೇ ರೀತಿಯಲ್ಲಿ ಇದನ್ನು ರಾಹುಲ್ ಅವರ ಬಲುಜಾಣ್ಮೆಯ ರಾಜಕೀಯ ನಡೆ ಎಂದೂ ಹೇಳಬಹುದು. ಬಿಜೆಪಿಯು ಜವಾಹರಲಾಲ್ ನೆಹರೂ ಅವರನ್ನು ಯಾವ ಪರಿಯಾಗಿ ಗೀಳಿನಂತೆ ಅಂಟಿಸಿಕೊಂಡಿದೆ ಎಂದರೆ, ಅವರ ನಿರೀಶ್ವರವಾದದ ಪ್ರಭಾವವು ಮುಂದಿನ ಪೀಳಿಗೆಗಳಿಗೂ ಮುಂದುವರಿದಿದೆ ಎಂದೇ ಅದು ಗಟ್ಟಿಯಾಗಿ ನಂಬಿಕೊಂಡು ಬಂದಿದೆ. ‘ತಾವು ಹಾಗಲ್ಲ’ ಎಂಬುದನ್ನು ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಬಹಿರಂಗವಾಗಿಯೇ ಪ್ರದರ್ಶಿಸಿದ್ದಾರೆ. ತಾವು, ತಮ್ಮ ರಾಜಕೀಯ ಸಾಮ್ರಾಜ್ಯಕ್ಕೆ ಅಸ್ತಿವಾರ ಹಾಕಿದವರಂತೆ ಅಲ್ಲ; ಧರ್ಮನಿರಪೇಕ್ಷತೆಗೆ ಸಂಬಂಧಿಸಿದ ತಮ್ಮ ಬದ್ಧತೆಯು ತಮ್ಮ ಸಾಮ್ರಾಜ್ಯದ ಸ್ಥಾಪಕರಲ್ಲಿದ್ದಂತೆ ನಿರೀಶ್ವರವಾದ ಅಲ್ಲ ಎಂದು ಸಾರಿ ಹೇಳಿದ್ದಾರೆ.

ಇಂದಿರಾ ಗಾಂಧಿ ರುದ್ರಾಕ್ಷಿ ಧರಿಸಿದ್ದರು. ದೇವಸ್ಥಾನಗಳಿಗೆ ನಿಯಮಿತವಾಗಿ ಭೇಟಿ ಕೊಡುತ್ತಿದ್ದ ಅವರು, ಬಾಬಾಗಳು ಮತ್ತು ತಾಂತ್ರಿಕರ ಆಶ್ರಯದಾತರೂ ಆಗಿದ್ದರು. ಇನ್ನು, ರಾಜೀವ್ ಗಾಂಧಿ ಅಯೋಧ್ಯೆಯಲ್ಲಿ ರಾಮ ದೇಗುಲ ನಿವೇಶನದ ಬೀಗಮುದ್ರೆ ತೆರೆದು, ಅಲ್ಲಿ ಉದ್ದೇಶಿತ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ನೆರವೇರಿಸುವುದಕ್ಕೂ ಅವಕಾಶ ಮಾಡಿಕೊಟ್ಟರು. ಜೊತೆಗೆ, 1989ರಲ್ಲಿ ತಮ್ಮ ಪಕ್ಷದ ಚುನಾವಣಾ ಪ್ರಚಾರವನ್ನು, ಅಯೋಧ್ಯೆಯಲ್ಲಿ ರಾಮರಾಜ್ಯ ನಿರ್ಮಾಣದ ವಾಗ್ದಾನದೊಂದಿಗೆ ಆರಂಭಿಸಿದ್ದರು. ಇದಾದ ಮೇಲೆ 10 ವರ್ಷಗಳ ಯುಪಿಎ ಆಡಳಿತವು ಮೋದಿ-ಶಾ ನೇತೃತ್ವದ ಬಿಜೆಪಿಯನ್ನು ಗೊಂದಲಕ್ಕೆ ಸಿಲುಕಿಸಿತ್ತು. ಎಡಪಕ್ಷಗಳ ಮೈತ್ರಿಯೊಂದಿಗಿನ ಈ ಆಡಳಿತದ ಅವಧಿಯು ಯಾವುದೇ ರೀತಿಯ ಧಾರ್ಮಿಕತೆಯ ಪ್ರದರ್ಶನದಿಂದ ಮುಕ್ತವಾಗಿತ್ತು. ಒಂದೊಮ್ಮೆ ಅದು ವ್ಯಕ್ತವಾಗಿದ್ದರೂ ಅದು ರಾಜಕೀಯವಾಗಿ ಅತ್ಯಂತ ಯುಕ್ತವಾದ ನಡೆಯೇ ಆಗಿದ್ದಿತು. ಮನಮೋಹನ್ ಸಿಂಗ್ ಅವರು ತಮ್ಮ ಸರ್ಕಾರದ ಪರಮಾಣು ಒಪ್ಪಂದವನ್ನು ಸಮರ್ಥಿಸಿಕೊಳ್ಳುವ ಸಂದರ್ಭದಲ್ಲಿ, ‘ಓ ಶಿವ, ಯುಕ್ತ ಕಾರ್ಯಮಾಡುವುದರಿಂದ ಹಿಂಜರಿಯದಂತೆ ನನ್ನನ್ನು ಆಶೀರ್ವದಿಸು. ಶತ್ರುವಿನ ಎದುರು ಯುದ್ಧಕ್ಕೆ ಹೋದಾಗ, ವಿಜಯಿಯಾಗುವ ತನಕ ಹೋರಾಡುವ ಶಕ್ತಿ ಕರುಣಿಸು’ ಎಂದು ಸ್ಫೂರ್ತಿಯುತ ಭಾಷಣವೊಂದರಲ್ಲಿ ಉದ್ಗರಿಸಿದ್ದರು.

ನೆಹರೂ ಅವರ ಕಟ್ಟಾ ಧರ್ಮನಿರಪೇಕ್ಷತೆಯನ್ನೇ ಮುಂದಿಟ್ಟುಕೊಂಡು ಪ್ರಚಾರ ಮಾಡುವ ಮೂಲಕ ಬಿಜೆಪಿ ತಪ್ಪೆಸಗಿತು. ವಾಸ್ತವವಾಗಿ, ಇಂದಿರಾ ಅವರ ನಂತರ ಕಾಂಗ್ರೆಸ್ ಪಕ್ಷವು ನೆಹರೂ ಮಾದರಿಯ ಕಠೋರ ಧರ್ಮನಿರಪೇಕ್ಷತೆಯ ಪ್ರತಿಪಾದನೆಯನ್ನು ಕೈಬಿಟ್ಟಿತು. ಮೇಲ್ನೋಟಕ್ಕೆ ಅಲ್ಪಸಂಖ್ಯಾತತ್ವ ಪರವಾದ ಹಾಗೂ ಆಕ್ರಮಣಕಾರಿ ಎನ್ನಿಸುವಂತಹ, ಆದರೆ ಅಂತರ್ಧಾರೆಯಾಗಿ ಧಾರ್ಮಿಕತೆಯನ್ನೂ ಒಳಗೊಂಡಿದ್ದ, ವಾಸ್ತವಕ್ಕೆ ಹೆಚ್ಚು ಹತ್ತಿರವೆನ್ನಿಸುವಂತಹ ಮೃದು ಧೋರಣೆಯನ್ನು ಅದು ಅಳವಡಿಸಿಕೊಂಡಿತು. ಈ ಮಾದರಿಯನ್ನು ಬಿಜೆಪಿಯು ‘ತುಷ್ಟೀಕರಣ ನೀತಿ’ ಎಂದು ಬಿಂಬಿಸಿತು. ಆದರೆ ಇದೀಗ, ರಾಹುಲ್ ಅವರು ‘ಜನಿವಾರಧಾರಿ’ಯಾಗುವ ಮೂಲಕ, ಶ್ವೇತವಸ್ತ್ರಧಾರಿಯಾಗಿ ದೇಗುಲಗಳಿಗೆ ಭೇಟಿ ನೀಡುವ ಮೂಲಕ ಹಾಗೂ ಚುನಾವಣಾ ಪ್ರಚಾರಾಂದೋಲನ ಶುರುವಾಗುವ ಹೊತ್ತಿಗೆ ಸರಿಯಾಗಿ ಟಿಬೆಟ್‍ನಲ್ಲಿನ ಶಿವನ ಆವಾಸಸ್ಥಾನಕ್ಕೆ ತೀರ್ಥಯಾತ್ರೆ ಕೈಗೊಳ್ಳುವ ಮೂಲಕ ಹಿಂದಿಗಿಂತಲೂ ಸಾಕಷ್ಟು ಹೆಜ್ಜೆಗಳಷ್ಟು ಮುಂದೆ ಹೋಗಿಬಿಟ್ಟಿದ್ದಾರೆ.

ರಾಹುಲ್ ಈಗ ಧಾರ್ಮಿಕತೆಯನ್ನು ಪ್ರದರ್ಶಿಸಿರುವ ಪರಿಯು ತಮ್ಮ ಪೂರ್ವಿಕರಿಗಿಂತ ಹೆಚ್ಚು ಆಕ್ರಮಣಕಾರಿಯಾಗಿದೆ. ಇದರ ಹಿಂದಿನ ಕಾರ್ಯತಂತ್ರದ ತರ್ಕವನ್ನೂ ವಿಶ್ಲೇಷಿಸಲು ಇದು ಅನುವು ಮಾಡಿಕೊಟ್ಟಿದೆ. ಬಿಜೆಪಿಯ ಉಗ್ರ ಹಿಂದುತ್ವಕ್ಕೆ ಪ್ರತ್ಯುತ್ತರವೆಂಬಂತೆ ಅವರು ಈ ಮೃದು ಹಿಂದುತ್ವದ ಮೊರೆ ಹೋಗಿದ್ದಾರೆ. ಅಂದರೆ, ಉಗ್ರ ಹಿಂದುತ್ವದ ವಿರುದ್ಧ ಮೃದು ಹಿಂದುತ್ವದ ಮೂಲಕ ಸೆಣಸಾಡಲು ಸಜ್ಜಾಗುತ್ತಿದ್ದಾರೆ. ರಾಹುಲ್ ಅವರ ಈ ನಡೆಯಿಂದ ಅವರ ಅನೇಕ ಉಗ್ರ ಧರ್ಮ
ನಿರಪೇಕ್ಷ ಎಡಪಂಥೀಯ ಬೆಂಬಲಿಗರು ಇರುಸುಮುರುಸಿಗೆ ಒಳಗಾಗಿದ್ದಾರೆ. ಆದರೆ, ಭಾರತವೆಂದರೆ ‘ಜೆಎನ್‌ಯು ರಿಪಬ್ಲಿಕ್’ನ ಆಚೆಗೂ ಹಬ್ಬಿ ಬೆಳೆದಿರುವ ರಾಷ್ಟ್ರವಾಗಿದ್ದು, ದೇವರು ದಿಂಡಿರನ್ನು ಬದಿಗಿಟ್ಟು ಇಲ್ಲಿ ಯಾರೂ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಅರ್ಥೈಸಿಕೊಳ್ಳುವ ಮೂಲಕ ರಾಹುಲ್ ರಾಜಕೀಯ ಜಾಣ್ಮೆಯನ್ನು ಮೆರೆದಿದ್ದಾರೆ. ಅವರ ಈ ನಡೆಯು ಬಿಜೆಪಿಯು ಹೌಹಾರುವಂತೆ ಮಾಡಿದೆ. ದೇವಸ್ಥಾನದಲ್ಲಿ ರಾಹುಲ್‌ ಹಿಂದೂವಿನಂತೆ ಮಂಡಿಯೂರಿ ನಮಿಸಿದರೇ? (ಇತ್ತೀಚೆಗೆ ಕೇಳಿದಂತೆ), ಕೈಲಾಸ ಮಾನಸ ಸರೋವರದ ಅವರ ಚಿತ್ರಗಳು ನೈಜವೇ ಎಂಬ ಅದರ ಪ್ರಶ್ನೆಗಳೇ ಇದನ್ನು ಸೂಚಿಸುತ್ತವೆ. ತಮ್ಮ ಧರ್ಮದ ಮೇಲೆ ತಾವು ಸಾಧಿಸಿರುವ ಏಕಸ್ವಾಮ್ಯಕ್ಕೆ ರಾಹುಲ್ ಇಂತಹ ಸವಾಲು ಎಸೆಯಲಿದ್ದಾರೆ ಎಂಬುದನ್ನು ಅದು ನಿರೀಕ್ಷಿಸಿರಲಿಲ್ಲ.

ಮತ್ತೊಂದೆಡೆ, ಮಾವೊವಾದಿಗಳೆಡೆಗಿನ ಅನುಕಂಪ ಮತ್ತು ಅವರೊಡನೆಯ ಸಂಪರ್ಕದ ಆರೋಪದ ಮೇಲೆ ಬಂಧಿತರಾಗಿರುವವರನ್ನು ರಾಹುಲ್ ಪ್ರಾಮಾಣಿಕವಾಗಿ ಹಾಗೂ ಅಸಮರ್ಥನೀಯವಾದ ರೀತಿಯಲ್ಲಿ ಬೆಂಬಲಿಸಿರುವುದನ್ನು ನೋಡಿ ಅವರ ಪಕ್ಷದ ಹಲವರು ದಿಕ್ಕೆಟ್ಟು ಹೋಗಿದ್ದಾರೆ. ಬಿಜೆಪಿಯ ಉಗ್ರ ಹಿಂದುತ್ವವನ್ನು ಮೃದು ಹಿಂದುತ್ವದಿಂದ ಮಣಿಸಲು ಹೊರಟಿರುವ ರಾಹುಲ್‌, ಇದೀಗ ಆ ಪಕ್ಷದ ಉಗ್ರರಾಷ್ಟ್ರೀಯವಾದವನ್ನು ಮೃದು ರಾಷ್ಟ್ರೀಯವಾದದೊಂದಿಗೆ ಮಣಿಸಲು ಮುಂದಾಗಿದ್ದಾರೆಯೇ? ಹೀಗಾಗಿದ್ದೇ ಆದರೆ, ಅದು ಕಾಂಗ್ರೆಸ್‌ನ ರೂಢಿಗತ ಧೋರಣೆಗಿಂತ ಎರಡು ಮೂಲಭೂತ ವಿಷಯಗಳಲ್ಲಿ ಬದಲಾವಣೆಯಾದಂತೆ ಆಗುತ್ತದೆ. ಎರಡನೆಯದು ಮೊದಲನೆಯದಕ್ಕಿಂತ ಹೆಚ್ಚು ಮಹತ್ವದ್ದು, ಅಪಾರ ಗಂಡಾಂತರಕಾರಿಯಾದದ್ದೂ ಆಗಿದೆ.

‘ನಗರದ ನಕ್ಸಲರು’ ಎನ್ನಲಾದ ಈ ಬಂಧಿತರಿಗೆ ರಾಹುಲ್ ಬೆಂಬಲ ವ್ಯಕ್ತಪಡಿಸಿದ್ದು ವೈಯಕ್ತಿಕ ಅಂತಃಸ್ಫೂರ್ತಿಯಿಂದಲೇ ಇರಬಹುದು. ಪಕ್ಷದ ಯಾವುದೇ ವೇದಿಕೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿಲ್ಲ. ಕಾಂಗ್ರೆಸ್ ರಾಜಕಾರಣದ ದೃಷ್ಟಿಯಿಂದ ಇದು ಚಿಂತನಾರಹಿತ ನಡೆಯೇ ಸರಿ. ಈಗ ಬಂಧಿತರಾದವರಲ್ಲಿ ಕನಿಷ್ಠ ನಾಲ್ವರನ್ನು ಹಿಂದೆ ರಾಹುಲ್ ಅವರ ಯುಪಿಎ ಸರ್ಕಾರವೇ ಬಂಧಿಸಿತ್ತು ಅಥವಾ ನಿಯಂತ್ರಿಸಿತ್ತು. ಒಬ್ಬರು ಆರು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದರೆ ಮತ್ತೊಬ್ಬರು ಏಳು ವರ್ಷ ಜೈಲಿನಲ್ಲಿದ್ದರು; ಒಬ್ಬರು ವಿಚಾರಣಾಧೀನ ಕೈದಿಯಾಗಿದ್ದರೆ ಇನ್ನೊಬ್ಬರು ಯುಎಪಿಎ ಸೇರಿದಂತೆ ಗಂಭೀರ ಭಯೋತ್ಪಾದನಾ ಆರೋಪಗಳ ಹಿನ್ನೆಲೆಯಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಅವರದ್ದೇ ಪಕ್ಷವು ಶಸ್ತ್ರಸಜ್ಜಿತ ನಕ್ಸಲರು ಹಾಗೂ ಅವರ ಬುದ್ಧಿಜೀವಿ ಸಹ ಚಳವಳಿಗಾರರ ಬೃಹತ್ ಬೇಟೆ ಕಾರ್ಯಾಚರಣೆಗೇ ಚಾಲನೆ ನೀಡಿತ್ತು. ಯುಪಿಎ ಅವಧಿಯಲ್ಲಿ ಬಂಧಿತರಾದ ಕೊಬಾಡ್ ಗಾಂಧಿ ಮತ್ತು ಜಿ.ಎನ್.ಸಾಯಿ ಬಾಬಾ ಈಗಲೂ ಸೆರೆಮನೆಯಲ್ಲಿದ್ದಾರೆ. ಇಬ್ಬರು ಪ್ರಮುಖ ನಕ್ಸಲರಾದ ಆಜಾದ್ ಮತ್ತು ಕಿಶನ್‍ಜಿ ಅವರನ್ನು ಯುಪಿಎ ಸರ್ಕಾರದ ಬೇಹುಗಾರಿಕಾ ಸಂಸ್ಥೆಗಳು ‘ಕರಾಳ ಕಾರ್ಯಾಚರಣೆ’ಗಳಲ್ಲಿ ಹತ್ಯೆ ಮಾಡಿದ್ದವು.

ತಮ್ಮ ಪಕ್ಷದ ಈ ಧೋರಣೆಯನ್ನು ಈಗ ರಾಹುಲ್ ತಿರುವು ಮುರುವು ಮಾಡಲು ಹೊರಟಿದ್ದಾರೆಯೇ? ತಮ್ಮದೇ ಪಕ್ಷದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 2006ರಲ್ಲಿ ಯಾವುದನ್ನು ಆಂತರಿಕ ಭದ್ರತೆಗೆ ತೀವ್ರ ಅಪಾಯಕಾರಿ ಎಂದು ಅಭಿಪ್ರಾಯಪಟ್ಟಿದ್ದರೋ ಅದರ ಬಗ್ಗೆ ಮೃದು ಧೋರಣೆಯನ್ನು ರಾಹುಲ್‌ ಅವರ ಪ್ರತಿಕ್ರಿಯೆಯು ಸೂಚಿಸುತ್ತದೆಯೇ? ಮನಮೋಹನ್ ಅವರು ಯುಪಿಎ-1ರ ಅವಧಿಯಲ್ಲಿ ಎಡಪಕ್ಷಗಳ ಬೆಂಬಲದಿಂದ ಸರ್ಕಾರ ರಚನೆಯಾಗಿದ್ದಾಗ ಈ ಮಾತುಗಳನ್ನು ಆಡಿದ್ದರು ಎಂಬುದು ಇಲ್ಲಿ ಗಮನಾರ್ಹ. ಮನಮೋಹನ್ ಅವರು ರಾಜಕೀಯ ಎಡಪಂಥೀಯತೆ, ಭಯೋತ್ಪಾದನಾ ಎಡಪಂಥೀಯತೆ, ಎಡರಂಗ ಇವುಗಳ ನಡುವಿನ ವ್ಯತ್ಯಾಸವನ್ನು ಅರಿಯುವಷ್ಟು ತೀಕ್ಷ್ಣಮತಿಯಾಗಿದ್ದರು.

ರಾಹುಲ್ ತಮ್ಮ ಪಕ್ಷದ ಈ ಧೋರಣೆಯಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸುತ್ತಿರುವುದನ್ನು ಅರಗಿಸಿಕೊಳ್ಳುವುದು ಕಷ್ಟವಾಗಿದೆ. ಈ ವಿಷಯದಲ್ಲಿ, ಆಗಿನ ಗೃಹ ಸಚಿವ ಪಿ.ಚಿದಂಬರಂ ಅವರ ಕಠಿಣ ಧೋರಣೆಗೆ ತಡೆಯೊಡ್ಡಲು, ನೆಹರೂ ಕುಟುಂಬಕ್ಕೆ ಹತ್ತಿರವಿದ್ದ ಕಾಂಗ್ರೆಸ್ಸಿಗರಿಗೂ ಸಾಧ್ಯವಾಗಿರಲಿಲ್ಲ. ಛತ್ತೀಸಗಡದ ಚಿಂತಲ್‍ನಾರ್‍ನಲ್ಲಿ ಅತ್ಯಂತ ಭೀಕರ ಕಾಳಗ ನಡೆದು, ಭಯೋತ್ಪಾದನಾ ನಿಗ್ರಹ ಪಡೆಯ ಯೋಧರು ಹೆಚ್ಚಿನ ಸಂಖ್ಯೆಯಲ್ಲಿ ಹುತಾತ್ಮರಾದ ನಂತರವೂ (1971ರ ಬಳಿಕ ಅತ್ಯಂತ ಹೆಚ್ಚು ಯೋಧರು ಸಾವಿಗೀಡಾಗಿದ್ದರು) ಚಿದಂಬರಂ ಈ ವಿಷಯದಲ್ಲಿ ಹಿಂದೆಗೆಯಲಿಲ್ಲ. ಅವರ ಆಣತಿಯಂತೆ ಭಯೋತ್ಪಾದನಾ ನಿಗ್ರಹ ದಳವು ನಕ್ಸಲರನ್ನು ಹಿಮ್ಮೆಟ್ಟಿಸುವುದಕ್ಕೆ ಮೊದಲಾಗಿತ್ತು. ಆಗ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಚಿದಂಬರಂ ಅವರ ಧೋರಣೆಯನ್ನು ‘ಒಕ್ಕಣ್ಣಿನ ನೀತಿ’ ಎಂದು ಜರಿದರು. ಅದಾದ ಮೇಲೆ, ಒಡಿಶಾದಲ್ಲಿ ಅಪಹೃತರಾದ ಐಎಎಸ್ ಅಧಿಕಾರಿಯ ಬಿಡುಗಡೆಗೆ ಪ್ರತಿಯಾಗಿ, ಮುಂಚೂಣಿ ನಕ್ಸಲರೊಬ್ಬರ ಪತ್ನಿಯನ್ನು ಬಿಡುಗಡೆ ಮಾಡಲಾಯಿತು. ಹೀಗೆ ಬಿಡುಗಡೆಯಾದಾಕೆ ಎನ್‍ಎಸಿ ಸದಸ್ಯ ಹಾಗೂ ಚಳವಳಿಗಾರ ಹರ್ಷ್ ಮಂದೇರ್ ಅವರು ನಡೆಸುತ್ತಿದ್ದ ಎನ್‍ಜಿಒದ ಮುಖ್ಯಸ್ಥೆಯಾಗಿದ್ದರು ಎಂಬುದು ಬಹಿರಂಗವಾಯಿತು; ಅದೇ ಸಂದರ್ಭದಲ್ಲಿ, ರಾಷ್ಟ್ರದ್ರೋಹದ ಅಪರಾಧಕ್ಕಾಗಿ ಸೆರೆವಾಸ ಅನುಭವಿಸಿದ್ದ ವಿನಾಯಕ ಸೆನ್‍ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಯೋಜನಾ ಆಯೋಗದ ಆರೋಗ್ಯ ಸಮಿತಿ ಯೊಳಕ್ಕೆ ಕರೆತರಲಾಯಿತು. ಅಂತಹುದೇ ಗೊಂದಲ ಈಗ ಮರುಕಳಿಸುತ್ತಿದೆಯೇ?

ಗುಜರಾತ್ ಚುನಾವಣೆಯಲ್ಲಿ ತನಗಾದ ಅನುಭವದ ಹಿನ್ನೆಲೆಯಲ್ಲಿ, ನರೇಂದ್ರ ಮೋದಿ- ಅಮಿತ್ ಶಾ ಮುಂದಾಳತ್ವದ ಬಿಜೆಪಿಯು 2019ರ ಚುನಾವಣೆಗೆ ಆರ್ಥಿಕ ಸಾಧನೆಯೊಂದನ್ನೇ ಮುಂದಿಟ್ಟುಕೊಂಡು ಮತ ಕೇಳಿ ಆಪತ್ತಿಗೆ ಸಿಲುಕಲಿಕ್ಕಿಲ್ಲ ಎಂದು ಈ ಹಿಂದೆಯೇ ಹೇಳಿದ್ದೆವು. ನಿಶ್ಚಿತವಾಗಿಯೂ ಅವರು ಹಿಂದುತ್ವ, ಭ್ರಷ್ಟಾಚಾರ ನಿಗ್ರಹ ಮತ್ತು ಉಗ್ರ ರಾಷ್ಟ್ರೀಯತೆಯ ವಿಷಯಗಳನ್ನು ಪ್ರಸ್ತಾಪಿಸಿಯೇ ತೀರುತ್ತಾರೆ. ಇದೀಗ ರಾಹುಲ್ ಅವರು ಮೊದಲನೆಯದ್ದಾದ ಹಿಂದುತ್ವಕ್ಕೆ ಮುಖಾಮುಖಿಯಾಗಬೇಕಾದ ರೀತಿಯ ಬಗ್ಗೆ ಪ್ರಯೋಗಗಳಿಗೆ ಒಡ್ಡಿಕೊಂಡಿದ್ದಾರೆ. ಎರಡನೆಯ ವಿಷಯಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್‍ನ ಹಿನ್ನೆಲೆ ನೋಡಿದರೆ ಅದನ್ನು ಮುಖಾಮುಖಿಯಾಗುವ ಸ್ಥೈರ್ಯ ಅದಕ್ಕಿಲ್ಲ ಎಂದೇ ಹೇಳಬೇಕಾಗುತ್ತದೆ. ಮೂರನೆಯ ವಿಷಯಕ್ಕೆ ಸಂಬಂಧಪಟ್ಟಂತೆ, ತನ್ನ ಹಿಂದಿನ ನಿದರ್ಶನಗಳಿಗಿಂತ ಹೆಚ್ಚು ರಾಷ್ಟ್ರೀಯತೆಯನ್ನು ಪ್ರದರ್ಶಿಸಲು ಅವಕಾಶ ಇತ್ತು.

ನಮ್ಮಲ್ಲಿ, ಭಾರತದ ರಕ್ಷಣೆಗಿಂತಲೂ ಹೆಚ್ಚಾಗಿ ತಮ್ಮ ಸಂರಕ್ಷಣೆಗಾಗಿ ರಾಜ್ಯಗಳು ತೀವ್ರವಾಗಿ ಹೋರಾಡಿದ ಉದಾಹರಣೆಗಳು ಇಲ್ಲವೆಂದೇ ಹೇಳಬೇಕಾಗುತ್ತದೆ. ಅಂತಹ ಪ್ರತಿಯೊಂದು ದಂಗೆಯೂ ಪರಾಭವಗೊಂಡಿದ್ದು, ಅದರ ನಾಯಕರು ಒಂದೋ ಮೂಲೆಗುಂಪಾಗಿಯೋ ಅಥವಾ ರಾಜಕಾರಣದ ಮುಖ್ಯಧಾರೆಯಲ್ಲೋ ಒಂದಾಗಿ ಹೋಗಿದ್ದಾರೆ. ಚರಿತ್ರೆಯ ವಿವಿಧ ಸನ್ನಿವೇಶಗಳಲ್ಲಿ ವೈಚಾರಿಕ ಎಡಪಂಥೀಯ ಆಂದೋಲನಗಳಿಗೆ ಸಂಬಂಧಪಟ್ಟಂತೆಯೂ ಇದು ನಿಜವಾದ ಮಾತೇ ಆಗಿದೆ. ಈ ವಿಷಯದಲ್ಲಿ ಭಾರತವು ಬಡಪಟ್ಟಿಗೆ ಒಪ್ಪುವ ಹಾಗೂ ಕ್ಷಮಾದಾನ ನೀಡುವ ರಾಷ್ಟ್ರವೇ ಅಲ್ಲ. ರಾಷ್ಟ್ರದ ಯಾವುದೇ ಭೂಭಾಗದ ಮೇಲೆ ಅದು ಸಾರ್ವಭೌಮತ್ವ ಕಳೆದುಕೊಳ್ಳುವ ಅಳುಕು ಕೂಡ ಇಲ್ಲ. ಅಷ್ಟೇ ಏಕೆ, ಸಿಕ್ಕಿಂ ವಿಲೀನದೊಂದಿಗೆ ಅದರ ಸಾರ್ವಭೌಮತ್ವ ಇನ್ನಷ್ಟು ಬಿಗಿಗೊಂಡಿದೆ ಎಂದೇ ಹೇಳಬೇಕಾಗುತ್ತದೆ. 1977ರಲ್ಲಿ ಜನತಾ ಸರ್ಕಾರದ ಅವಧಿಯಲ್ಲಿ ಹಾಗೂ 1989-90ರಲ್ಲಿ ವಿ.ಪಿ.ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಮಾತ್ರ ನಮ್ಮ ಸರ್ಕಾರಗಳು ರಾಷ್ಟ್ರೀಯ ಭದ್ರತೆ ಅಥವಾ ರಾಷ್ಟ್ರೀಯತೆಯ ವಿಷಯದಲ್ಲಿ ಮೃದು ಧೋರಣೆ ಹೊಂದಿದ್ದವು. ಆ ಸರ್ಕಾರಗಳೂ ಅಲ್ಪಾಯುಗಳೇ ಆಗಿದ್ದವು. ಇಂದಿರಾ ಗಾಂಧಿ ಅವರು 1980ರಲ್ಲಿ ‘ಕಿಚಡಿ ಸರ್ಕಾರ’ ಮತ್ತು ‘ಸರ್ಕಾರವು ನೆರೆಯ ಸಣ್ಣಪುಟ್ಟ ರಾಷ್ಟ್ರಗಳ ದಾಳಿಯನ್ನೂ ಎದುರಿಸಲಾಗದಷ್ಟು ದುರ್ಬಲವಾಗಿದೆ’ ಎಂಬ ಪ್ರಚಾರದ ಮೂಲಕವೇ ಮರಳಿ ಅಧಿಕಾರಕ್ಕೆ ಬಂದರು.

ಬಾಹ್ಯವೇ ಇರಲಿ ಅಥವಾ ಆಂತರಿಕವಾಗಿಯೇ ಇರಲಿ, ಭಾರತದ ಜನಮಾನಸವು ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಎಂದಿಗೂ ಆಲಸಿ ಎನ್ನಿಸುವಂತಹ, ಗೊಂದಲಮಯವಾದ, ಅಸ್ಪಷ್ಟವಾದ ನಿಲುವುಗಳನ್ನು ಒಪ್ಪಿಕೊಂಡ ಉದಾಹರಣೆಯೇ ಇಲ್ಲ. ಶಸ್ತ್ರಸಜ್ಜಿತ ನಕ್ಸಲ್ ಚಳವಳಿಗೆ ಕೂಡ, ಎಲ್ಲೋ ಕೆಲವು ವಿರಳ ಜನಸಾಂದ್ರತೆಯ ಕೊಂಪೆ ಕಾಡಿನ ಕೆಲವು ಜಿಲ್ಲೆಗಳು ಹಾಗೂ ನಗರದ ಬೆರಳೆಣಿಕೆಯಷ್ಟು ರಮ್ಯವಾದಿಗಳನ್ನು ಹೊರತುಪಡಿಸಿ ಬೇರೆಡೆ ಯಾವ ಜನಬೆಂಬಲವೂ ಇಲ್ಲ. ಅವರೆಡೆಗೆ ಮೃದು ಧೋರಣೆ ತೋರುವುದು ಯಾರಿಗೂ ಮತಗಳನ್ನು ತಂದುಕೊಡುವುದಿಲ್ಲ. ಭಾರತದ ಮತದಾರರು ಅಂತಹ ಅಸ್ಟಷ್ಟತೆಗಳನ್ನು ಮುಲಾಜಿಲ್ಲದೆ ತಿರಸ್ಕರಿಸಿದ್ದಾರೆ. ಕ್ರಾಂತಿಕಾರಿಯಲ್ಲದವನನ್ನು ಜೆಎನ್‍ಯು ಕೂಡ ಮಣ್ಣುಮುಕ್ಕಿಸುತ್ತದೆ. ಮೃದು ಹಿಂದುತ್ವ- ಮೃದು ರಾಷ್ಟ್ರೀಯತೆಯು ಸ್ವಯಂ ವಿನಾಶಕಾರಿ ‘ರಾಜಕೀಯ ಸ್ಕಿಜೋಫ್ರೇನಿಯಾ’ ಅಲ್ಲದೆ ಮತ್ತೇನೂ ಅಲ್ಲ. ರಾಹುಲ್ ಗಾಂಧಿ ಅವರು ಇದನ್ನು ಮನಗಂಡು ಅದರಿಂದ ಮುಕ್ತರಾಗಿ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಸ್ಪಷ್ಟ ನಿಲುವು ಪ್ರದರ್ಶಿಸದ ಹೊರತು, ಮೋದಿ ಅವರ ‘ವೈಫಲ್ಯ’ಗಳನ್ನು ಎಷ್ಟು ಪಟ್ಟಿ ಮಾಡಿದರೂ ಉಪಯೋಗವಾಗದು. ಹಾಗೇನಾದರೂ ಮಾಡದಿದ್ದರೆ, 2019ರ ಚುನಾವಣೆಯಲ್ಲಿ ಅವರು ಬಿಜೆಪಿಗೆ ಸುಲಭವಾಗಿ ಎರಡನೇ ಅವಧಿಗೆ ಗೆಲುವಿನ ಉಡುಗೊರೆ ನೀಡಲಿದ್ದಾರೆ.

ಲೇಖಕ: ‘ದಿ ಪ್ರಿಂಟ್‌’ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT