ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಗಾ ಸಿಂಗ್‌ನ ಕಾಲಿಗೆ ಎರಗಿದ ಕ್ಷಣಗಳು

Last Updated 10 ಏಪ್ರಿಲ್ 2019, 8:54 IST
ಅಕ್ಷರ ಗಾತ್ರ

ವಿಶ್ವ ಪ್ರಸಿದ್ಧ ವಾಟರ್ ಲೂ ಯುದ್ಧದ ನಂತರ ಲಾರ್ಡ್ ವೆಲಿಂಗ್ಟನ್ ಹೇಳಿಕೆಯೊಂದು ಜಗತ್ ಪ್ರಸಿದ್ಧ. ‘ಯುದ್ಧದಲ್ಲಿ ಅತ್ಯಂತ ದುಃಖದ ಸಂಗತಿ ಎಂದರೆ ಯುದ್ಧ ಗೆದ್ದ ನಂತರ ನಿಮ್ಮ ಸ್ವಂತ ಜನರ ಸಾವನ್ನು ನೋಡುವುದು!’ ಇದೇ ಅನುಭವ ನನ್ನದೂ ಆಗಿತ್ತು-ಅದನ್ನು ಮರೆಯಲಾದರೂ ಎಂತು!

11ಡಿಸೆಂಬರ್ 1971. ಈ ಮೊದಲೇ ನಾನೀ ಯುದ್ಧದ ಬಗ್ಗೆ ಬರೆದಿದ್ದೇನೆ. ಅಂದು ರಾತ್ರಿ 11ಗಂಟೆಯಿಂದ ಮರುದಿನ ಮುಂಜಾನೆಯ ತನಕ ನಡೆದ ಯುದ್ಧ ಫತೇಪುರ್ ಕದನ. ಈ ಐತಿಹಾಸಿಕ ಗೆಲುವನ್ನು ಪಡೆಯಲು ಅನೇಕರು ಹುತಾತ್ಮರಾಗಿ ತ್ಯಾಗ ಮಾಡಿದ್ದರು. ಅತ್ತ ಸೂರ್ಯ ಆ ಚುಮು ಚುಮು ಚಳಿಯ ಬೆಳಗಿನಲ್ಲಿ ಉದಯಿಸುತ್ತಿದ್ದಾಗ ನಾವು ಯುದ್ಧ ಗೆದ್ದಿದ್ದೆವು. ಆದರೆ ಮೂರು ಆಫೀಸರ್‍ಗಳು, ಒಬ್ಬ ಜೂನಿಯರ್ ಆಫೀಸರ್ ಹಾಗೂ 42ಜನ ವೀರ ಸೈನಿಕರು ಈ ವಿಜಯ ದುಂದುಭಿ ಮೊಳಗಲು ತಮ್ಮ ಪ್ರಾಣ ತ್ಯಾಗ ಮಾಡಿದ್ದರು-ಹುತಾತ್ಮರಾಗಿದ್ದರು !

ಹೌದು, ಯುದ್ಧ ಒಂದು ತಮಾಷೆಯ ಆಟದಂತೆ ಭಾಸವಾಗುವುದೇ ಇಂತ ಸಂದರ್ಭದಲ್ಲಿ. ಇಲ್ಲಿ ರನ್ನರ್ ಅಪ್ ಎಂಬುದೇ ಇಲ್ಲ. ಒಂದೇ ಗೆಲುವು. ಮತ್ತೊಂದು ಸರ್ವನಾಶ. ಇದು ಎಲ್ಲಾ ಯುದ್ಧಗಳಲ್ಲೂ ಸಾಧಿತವಾಗಿರುವ ಸತ್ಯವೇ. ಹೀಗೆ ಅಂದು ಫತೇಪುರ್ ವಿಜಯ ಮಾಲೆಯನ್ನು ದೇಶಕ್ಕೆ ತೊಡಿಸಿದ ವೀರ ಹುತಾತ್ಮರಲ್ಲಿ, ಯುದ್ಧಕ್ಕೆ ಕೆಲವೇ ಕ್ಷಣಗಳ ಮೊದಲು, ಜೀವಂತವಿದ್ದರೆ ನಾಳೆ ಸಿಗೋಣ ಎಂದು ಕೈ ಬೀಸಿ ನಡೆವ ಮುನ್ನ ಒಂದೇ ತಟ್ಟೆಯಲ್ಲಿ ಊಟ ಮಾಡಿದ್ದ ನನ್ನ ಇಬ್ಬರು ರೂಂ ಮೇಟ್ಸ್ ಇದ್ದರು. ಅವರು ಜೀವಂತ ಮರಳಲೇ ಇಲ್ಲ. ಇನ್ನೂ ಕೇವಲ 18ತಿಂಗಳ ಸೇನಾನುಭವದ ನನಗೆ ಆ ಕ್ಷಣದ ನನ್ನೊಳಗಿನ ಭಾವನೆಯನ್ನು ಹೇಳಲೂ ಅಸಾಧ್ಯ. 46 ಯೋಧರ ಶವಗಳಲ್ಲಿ ಈ ಇಬ್ಬರ ದೇಹಗಳನ್ನೂ ನೋಡಿದಾಗ, ವಿಜಯೋತ್ಸವ ಆಚರಿಸಲೋ, ಪ್ರತೀಕಾರದ ಕ್ರೋಧವನ್ನು ತಡೆಯಲೋ ಅಥವಾ ದುಃಖದಿಂದ ಹತಾಶನಾಗಲೋ-ಒಂದೂ ಅರಿಯದ ಸ್ಥಿತಿ. ಇದೇ ತೊಳಲಾಟದಲ್ಲಿ ಆ ಹುತಾತ್ಮ ಶರೀರಗಳ ಮುಂದೆ ದುಃಖದಿಂದ ನಿಂತಿದ್ದಾಗ, ಹಿಂದಿನಿಂದ ಒಂದು ಧ್ವನಿ ಕೇಳಿತು. “ಸಾಹೇಬ್, ದುಃಖ ಪಡಬೇಡಿ. ಇವರೆಲ್ಲರೂ ನಿಜಕ್ಕೂ ಭಾಗ್ಯವಂತರು. ನೋಡಿ, ಎದೆಯಲ್ಲಿ ಗುಂಡು. ತಿರಂಗದಿಂದ ಸುತ್ತಿದ ದೇಹದೊಂದಿಗೆ ಇವರು ಹೊರಟಿದ್ದಾರೆ. ಎಲ್ಲರಿಗೂ ಈ ಭಾಗ್ಯ ಸಿಗುವುದಿಲ್ಲ. ಇವರೆಲ್ಲರೂ ಸೀದಾ ದೇವರ ಬಳಿಗೇ ಸಾಗುತ್ತಾರೆ ಸಾಹೇಬ್..ದು:ಖಿಸಬೇಡಿ!” .‌

ಹಿಂತಿರುಗಿ ನೋಡಿದೆ..ಅಲ್ಲಿ ಸುಬೇದಾರ್ ಜೋಗಾ ಸಿಂಗ್. ಬಿಳಿಬಣ್ಣಕ್ಕೆ ತಿರುಗಿದ್ದ ಗಡ್ಡಗಳು...ಯಾವುದೇ ಸಂದರ್ಭಗಳಲ್ಲೂ ಅತ್ಯಂತ ಶಾಂತ ಮತ್ತು ಸ್ಥಿರವಾಗಿರುವ ಸೇನಾನಿ. ಆ ಯುವ ಸೈನಿಕರ ಮೃತದೇಹಗಳನ್ನು ಹೊತ್ತೊಯ್ಯುವ ಸನ್ನಾಹದಲ್ಲಿದ್ದ ಆತನ ಕಣ್ಣಲ್ಲೂ ಕಣ್ಣೀರು-ಆದರೆ ಮುಖದಲ್ಲಿ ಅದೇನೋ ತೇಜಸ್ಸು!. ಹೆಚ್ಚಿನ ಸಂದರ್ಭಗಳಲ್ಲಿ ತಮ್ಮ ತಂದೆಯ ಅಥವಾ ಹಿರಿಯರ ಮೃತ ದೇಹಗಳನ್ನು ಮಕ್ಕಳೂ ಸಂಸ್ಕಾರ ಮಾಡಿದರೆ, ಯುದ್ಧದ ಸಂದರ್ಭಗಳಲ್ಲಿ ತಮ್ಮ ಯೋಧ ಮಕ್ಕಳ ಮೃತ ದೇಹಗಳನ್ನು ತಂದೆ ಅಥವಾ ಹಿರಿಯರೇ ಸಂಸ್ಕಾರ ಮಾಡುತ್ತಾರೆ- ಇದೊಂದು ವಿಪರ್ಯಾಸ.

ಇದೊಂದು ವಿಲಕ್ಷಣ ಭಾವನೆಗಳಿಗೆ ಕಾರಣವಾಗುವ ಸನ್ನಿವೇಶ. ಪಾಕಿಸ್ತಾನದ ವಶದಿಂದ ನಮ್ಮ ಪ್ರದೇಶವನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದರೂ ಆ ದಿನ ನಮ್ಮ ಪಾಲಿಗೆ ಅತ್ಯಂತ ಕಠಿಣವಾಗಿದ್ದಾಗಿತ್ತು. ಹೀಗೇ ಎರಡು ತಿಂಗಳೂ ಕಳೆಯಿತು. ಇದೇ ಸುಬೇದಾರ್ ಜೋಗಾ ಸಿಂಗ್‍ಗೆ ನಿವೃತ್ತಿ ಸಮೀಪಿಸಿತು. ಕಣ್ಣು ತುಂಬಾ ನೀರು ತುಂಬಿಕೊಂಡು, ನಮ್ಮೆಲ್ಲರನ್ನೂ ಅಪ್ಪಿ, ಎಲ್ಲರೂ ಜಾಗೃತೆಯಾಗಿರಿ ಎಂದು ತಂದೆ ಮಕ್ಕಳಿಗೆ ಹೇಳುವಂತೆ ಎಚ್ಚರಿಕೆ ಹೇಳಿ, ಯುದ್ಧಭೂಮಿಯಿಂದ ಆತ ನಿರ್ಗಮಿಸಿದ. ಅದು ಫೆಬ್ರುವರಿ 1972.

ಹತ್ತು ವರ್ಷಗಳ ನಂತರ.

1982ರ ಒಂದು ಬೇಸಿಗೆಯ ದಿನ. ಎರಡು ಪ್ರಮೋಶನ್‍ಗಳ ನಂತರ ನಾನು ಮೇಜರ್ ಆಗಿದ್ದೆ. 8 ಸಿಖ್ ಇನ್‍ಫಂಟರಿಯನ್ನು ಬಿಟ್ಟು, 14ಸಿಖ್ ಇನ್‍ಫಂಟರಿಯನ್ನು ಆರಂಭಿಸುವ ಆಫೀಸರ್‍ಗಳ ತಂಡದಲ್ಲಿ ನಾನೂ ಒಬ್ಬನಾಗಿದ್ದೆ. ಆಗ ನಾವೆಲ್ಲರೂ ಗ್ವಾಲಿಯರ್‍ನಲ್ಲಿದ್ದೆವು. ಅದೊಂದು ಅತಿ ಭೀಕರ ಸೆಖೆಗಾಲ. ಆ ಮಧ್ಯಾಹ್ನ, ಸೈನಿಕರಿಗೆ ತರಬೇತಿ ನೀಡುತ್ತಿದ್ದ ನಾನು ಮರವೊಂದರ ಕೆಳಗೆ ನೆರಳಲ್ಲಿ ನಿಂತಿದ್ದೆ.

ಅನತಿ ದೂರದಲ್ಲಿ ಓರ್ವ ವಯಸ್ಸಾದ ಸರದಾರ್ ನಡೆದು ಬರುತ್ತಿದ್ದ. ಆತ ನನ್ನೆಡೆಗೇ ನಡೆದು ಬರುತ್ತಿದ್ದುದನ್ನೂ ನಾನು ಗಮನಿಸಿದೆ. ಸಮೀಪಿಸಿದವನೇ ಅದೊಂದು ಆತ್ಮೀಯ ಪರಿಚಯದ ನಗೆ ಬೀರಿದ. ಓಹ್. ಅದೇ ಹಳೆಯ ಸುಬೇದಾರ್ ಜೋಗಾ ಸಿಂಗ್. 60ರ ವಯೋಮಾನದಲ್ಲಿದ್ದ ಆತ ನನ್ನನ್ನು ಬಳಿ ಬಂದವರೇ ಬಿಗಿದಪ್ಪಿದರು. ನನಗೋ ಆತ್ಮೀಯ ಭಾವದ ಅಚ್ಚರಿ. ಕುಶಲೋಪರಿಯ ನಂತರ ಆತನ ಇಲ್ಲಿಗೆ ಬರುವ ಕಾರಣ ಕೇಳಿದೆ. ’ಸಾಹೇಬ್, ಈಗ ನನ್ನ ಮುಂಡಾ(ಮಗ) ತಮ್ಮ ಮುಂಡಾ ಆಗಿದ್ದಾನೆ’ ಎಂದ.

ನನಗೆ ಮತ್ತೆ ಅಚ್ಚರಿ. ಇದನ್ನೇ ಪ್ರಶ್ನಿಸಿದೆ. ಅಶ್ಚರ್ಯ, ಸೋಜಿಗ ಎಂದರೆ ಆತನ ಒಬ್ಬನೇ ಮಗ ನಾನೀಗ ತರಬೇತಿ ನೀಡುತ್ತಿರುವ ಯೋಧರ ಪಡೆಯಲ್ಲಿದ್ದ! ಅತ್ಯಂತ ಸುಂದರ, ಇನ್ನೂಗಡ್ಡ ಮೀಸೆ ಬೆಳೆದಿಲ್ಲದ ಯುವಕ ಸ್ವರಣ್ ಸಿಂಗ್. ಜೋಗಾ ಸಿಂಗ್‍ಗೆ ನಾನೂ ತುಸು ಗಡಸು ದನಿಯಲ್ಲಿ ಈ ವಿಷಯ ಮೊದಲೇ ತಿಳಿಸಬಾರದಿತ್ತೇ ಎಂದೆ. ಆಗ ಆತ ನೀಡಿದ ಉತ್ತರ ನನಗೆ ಮತ್ತಷ್ಟು ಅಚ್ಚರಿಯೊಂದಿಗೆ ಆತನ ಮೇಲೆ ವಿಶೇಷ ಅಭಿಮಾನಕ್ಕೆ ಕಾರಣವಾಯ್ತು. ಆತನೆಂದ, ‘ಹಾಗೇನಾದರೂ ನಿಮ್ಮಲ್ಲಿ ಆತ ನನ್ನ ಮೊಮ್ಮಗ ಎಂದಿದ್ದರೆ ನೀವು ಅವನಿಗೆ ವಿಶೇಷ ಪ್ರೀತಿ, ವಿನಾಯತಿ ತೋರಿದ್ದರೆ ಅದು ಅವನ ಯೋಧ ಧರ್ಮಕ್ಕೆ ಅಪಚಾರವಾಗುತ್ತಿತ್ತು!. ಅವನ ತರಬೇತಿಯಲ್ಲಿ ಅದೊಂದು ವಿನಾಯಿತಿಗೆ ಕಾರಣವಾಗುವುದು ನನಗೆ ಬೇಡವಾಗಿತ್ತು! ಆತ ಪರಿಪೂರ್ಣ ಸೈನಿಕನಾಗ ಬೇಕಿದ್ದರೆ ಅತ್ಯಂತ ಕಠಿಣ ತರಬೇತಿಯನ್ನು ಯಾವುದೇ ವಿನಾಯಿತಿ ಇಲ್ಲದೇ ಮಾಡಲೇಬೇಕು ಸಾಹೇಬ್. ಅದಕ್ಕೇ ನಾನೇ ಈ ವಿಷಯ ನಿಮ್ಮಲ್ಲಿ ಹೇಳಬೇಡ ಎಂದಿದ್ದೆ’.

ಅವರು ಎಂತಹ ಅದ್ಭುತ ದೇಶ ಪ್ರೇಮಿ, ನಿಷ್ಠಾವಂತ ಸುಬೇದಾರ್ ಜೋಗಾ ಸಿಂಗ್. ಆ ಸಂಜೆಯನ್ನು ನಾವು ಹಳೆಯ ನೆನಪುಗಳೊಂದಿಗೆ, ಅತ್ಯಂತ ಖುಷಿಯಿಂದ ಕಳೆದು ಮರುದಿನ ಬೆಳಿಗ್ಗೆ ಆತ ತನ್ನ ಹಳ್ಳಿಗೆ ಹಿಂತಿರುಗಿದ.

1987-ಶ್ರೀಲಂಕಾ ಆಪರೇಶನ್.

ಮತ್ತೆ ಐದು ವರ್ಷಗಳ ನಂತರ ನಾವು ಶ್ರೀಲಂಕಾದಲ್ಲಿ ಶಾಂತಿ ಸಂರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದ ಕಾಲ. ಅದೊಂದು ರಾತ್ರಿ ನಮ್ಮ ಸೇನಾ ಪೋಸ್ಟ್‌ಮೇಲೆ ಎಲ್‍ಟಿಟಿಇ ಬಂಡುಕೋರರ ತಂಡವೊಂದು ಸುತ್ತುವರಿಯಿತು. ಗುಂಡುಗಳ ಕಾಳಗ ಆರಂಭವಾಯಿತು. ಅನೇಕ ತಮಿಳು ಹುಲಿಗಳು ತಮ್ಮವರನ್ನು ಕಳೆದುಕೊಂಡು ಯುದ್ಧ ನಿಲ್ಲಿಸಿದರು. ಆದರೆ ನಮ್ಮ ಸೈನ್ಯದಲ್ಲಿ, ಸಂಭವಿಸಿದ ಸ್ಫೋಟವೊಂದರಿಂದ ನಮ್ಮೊಂದಿಗಿದ್ದ ಅದೇ ಜೋಗಾ ಸಿಂಗ್ ಪುತ್ರ, ಯೋಧ ಸ್ವರಣ್ ಸಿಂಗ್ ತನ್ನ ಒಂದು ಕಣ್ಣನ್ನೇ ಕಳೆದುಕೊಂಡ. ಆ ಸಮಯದಲ್ಲಿ ಆತನಿಗೆ ಮದುವೆಯಾಗಿ ಒಂದು ಗಂಡು ಮಗುವೂ ಆಗಿತ್ತು. ಅಂಗವಿಕಲನಾದ ಹಿನ್ನೆಲೆಯಲ್ಲಿ ಆತನನ್ನು ಸೈನ್ಯದಿಂದ ಕಳುಹಿಸಲೇ ಬೇಕಾಯ್ತು. ಪರಿಣಾಮವಾಗಿ ಸ್ವರಣ್ ಸಿಂಗ್‍ನನ್ನು ಮರಳಿ ಕಳುಹಿಸಲಾಯ್ತು. ಈ ವೇಳೆಗೆ ನನಗೆ ಸುಬೇದಾರ್ ಜೋಗಾಸಿಂಗ ಜೊತೆ ಸಂಪರ್ಕವೂ ಇಲ್ಲವಾಗಿತ್ತು.

ಜನವರಿ 2003. ನಾನು ಬ್ರಿಗೇಡಿಯರ್ ಆಗಿದ್ದೆ. ಫತೇಗರ್‍ನಲ್ಲಿ ರೆಜಿಮೆಂಟಲ್ ಸೆಂಟರ್ ಕಮಾಂಡೆಂಟ್ ಆಗಿ ನಾನು ಕರ್ತವ್ಯದಲ್ಲಿದ್ದೆ. ಅದು ಜನವರಿ ತಿಂಗಳ ಒಂದು ಚಳಿಗಾಲ. ನನ್ನ ಅನೇಕ ಸಹೋದ್ಯೋಗಿಗಳೊಂದಿಗೆ ಅದೊಂದು ದಿನ ನಾನು ಯಾವುದೋ ವಿಷಯದ ಬಗ್ಗೆ ಸಭೆ ನಡೆಸುತ್ತಾ ಬ್ಯುಸಿಯಾಗಿದ್ದೆ. ಆಗ ಒಳ ಬಂದ ಸೇನಾ ಸಿಬ್ಬಂದಿಯೊಬ್ಬ ಯಾವುದೋ ಒಬ್ಬ ಮುದುಕ ನನ್ನನ್ನು ಕಾಣಲೆಂದು ಬಂದಿದ್ದಾನೆ ಎಂದು ಒಳ ಬಿಡಲು ಅಪ್ಪಣೆ ಕೋರಿದ. ಏನೋ ಅತ್ಯಂತ ಮುಖ್ಯ ವಿಷಯ ವಿರಬಹುದೆಂದು ನಾನು ಆ ಮುದುಕನನ್ನು ಒಳ ಬಿಡಲು ಹೇಳಿದೆ. ನಡುಗುವ ಕೈಗಳು, ನಿಲ್ಲಲೂ ಅಶಕ್ತನಾಗಿದ್ದ ಓರ್ವ ಮುದುಕ, ಒಂದೇ ಕಣ್ಣಿರುವ ಒಬ್ಬನ ಆಶ್ರಯದಲ್ಲಿ ಮತ್ತೂ ಒಬ್ಬ ಯುವಕನೊಡನೆ ಒಳಗೆ ಬಂದ. ನಾನು ತಕ್ಷಣ ಗುರುತು ಹಿಡಿದೆ. ಸುಬೇದಾರ್ ಜೋಗಾ ಸಿಂಗ್ ಮತ್ತು ಆತನ ಮಗ– ಅದೇ ಒಂದು ಕಣ್ಣು ಕಳೆದುಕೊಂಡ ನಾಯಕ್ ಸ್ವರಣ್ ಸಿಂಗ್!. ಜೋಗಾ ಸಿಂಗ್ ಕೆನ್ನೆಯ ಮೇಲೆ ಧಾರಾಕಾರ ಕಣ್ಣೀರು. ತುಸು ಜೋರೆನ್ನುವ ಹಾಗೆಯೇ ಅಳು. ಎದ್ದು ಹೋಗಿ ಆತನನ್ನು ಅಪ್ಪಿಕೊಂಡೆ. ತತ್ ಕ್ಷಣವೇ ನನಗೆ ತಿಳಿಯಿತು. ಅವರೊಂದಿಗೆ ಇದ್ದ ಮತ್ತೊಬ್ಬ ಯುವಕ, ಜೋಗಾ ಸಿಂಗ್ ಮೊಮ್ಮಗ, ಶ್ರೀಲಂಕಾದಲ್ಲಿ ಓರ್ವನೇ ಮಗ ನಾಯಕ್ ಸ್ವರಣ್ ಸಿಂಗ್ ಕಣ್ಣು ಕಳೆದುಕೊಂಡಿದ್ದಾಗ ಹಸುಳೆಯಾಗಿದ್ದ ಅದೇ ಮಗು- ಸ್ವರಣ್ ಸಿಂಗ್‍ನ ಮಗ!

ಟೀ, ಜಿಲೇಬಿ, ಸಮೋಸಾ ತರಿಸಿ ಕೊಡಿಸಿದೆ. ಜೀವನ ಪ್ರಯಾಣದ ಮೆಲುಕನ್ನು ಹಾಕಿಕೊಂಡೆವು. ಅದೊಂದು ಅತೀ ಸುದೀರ್ಘ ಕಾಲದ ನಂತರದ ಅಪರೂಪದ ಕುಟುಂಬ ಮಿಲನದಂತ ಆನಂದ ನೀಡಿತ್ತು. ಮಾತುಕತೆಗಳ ನಂತರ ಸುಬೇದಾರ್ ಜೋಗಾ ಸಿಂಗ್ ಬಂದ ಉದ್ದೇಶ ಹೇಳಿದ, ‘ಸಾಹೇಬ್, ಬಹಳ ಬಹಳ ಖುಷಿಯಾಗುತ್ತಿದೆ. ಈಗ ತಾವು ನಮ್ಮ ರೆಜಿಮೆಂಟ್‍ನ ‘ಬಾಪ್’ ಆಗಿದ್ದೀರಿ. ಗುರುವಿನ ಕೃಪೆ ಇದು. ಭಗವಂತ ತಮ್ಮನ್ನು ಸದಾ ಸುಖಿಯಾಗಿಡಲಿ ಸಾಹೇಬ್. ಈಗ ನನ್ನದೊಂದು ಕಟ್ಟ ಕಡೆಯ ಇಚ್ಛೆ ಇದೆ. ನಾನು ಇದೇ ರೆಜಿಮೆಂಟ್‍ನ ಅನ್ನ ತಿಂದಿದ್ದೇನೆ. ನನ್ನ ಏಕೈಕ ಮಗನೂ ಮರ್ಯಾದೆಯಿಂದ ಇಲ್ಲೇ ಸೇವೆ ಸಲ್ಲಿಸಿದ್ದಾನೆ. ಅವನ ಒಂದು ಕಣ್ಣನ್ನೇ ಕಳೆದುಕೊಂಡಿದ್ದಾನೆ. ನನಗೀಗ ಮರ್ಯಾದೆಯ ಪ್ರಶ್ನೆ ಎದುರಾಗಿದೆ. ಸಾಹೇಬ್, ಈಗ ನನಗಿರುವವ ಒಬ್ಬನೇ ಮೊಮ್ಮಗ. ದಯವಿಟ್ಟು ಇದೊಂದು ಸಹಾಯ ಮಾಡಿ. ಈ ನನ್ನ ಮೊಮ್ಮಗನನ್ನೂ ಇದೇ ರೆಜಿಮೆಂಟ್‍ಗೆ ಸೇರಿಸಿಕೊಂಡು ನನ್ನ ಆಸೆ ನೆರವೇರಿಸಿ-ಕೈ ಮುಗಿದು ಕೇಳಿಕೊಳ್ಳುತ್ತೇನೆ. ಸಹಾಯ ಮಾಡಿ ಸಾಹೇಬ್’

ತನ್ನ ಸೇನಾ ಕರ್ತವ್ಯದ ವೇಳೆಯಲ್ಲಿ 42ಸೈನಿಕರನ್ನು ಸಂಸ್ಕಾರ ಮಾಡಿದ ಓರ್ವ ಯೋಧ, ದೇಶಕ್ಕಾಗಿ ಕಣ್ಣೊಂದನ್ನೇ ಕಳೆದುಕೊಂಡ ಓರ್ವ ಮಗನ ತಂದೆ. ಈಗ ತನ್ನ ಮತ್ತೊಬ್ಬನೇ ಒಬ್ಬ ಮೊಮ್ಮಗನನ್ನೂ ಸೈನ್ಯಕ್ಕೆ ಕಳಿಸುವುದು ತನಗೆ ಗೌರವ, ಮರ್ಯಾದೆ ಮತ್ತು ದೇಶ ಸೇವೆಯ ಸೌಭಾಗ್ಯ ಎಂದು ವಿನೀತನಾಗಿ ನಿಂತಿದ್ದಾನೆ. ಏನೆನ್ನಲಿ ಈ ಪರಿಯ ದೇಶಾಭಿಮಾನಕ್ಕೆ!. ಸೇನೆಯಲ್ಲಿ ಅಸಹಜವಾಗಿದ್ದ ಶಿಷ್ಠಾಚಾರ. ತತ್‍ಕ್ಷಣವೇ ನಾನು ಆತನ ಕಾಲಿಗೆರಗಿದೆ!. ಇದನ್ನು ನೋಡುತ್ತಿದ್ದ ನನ್ನ ಇತರ ಸಿಬ್ಬಂದಿ ಅಚ್ಚರಿ ಎಂಬಂತೆ ನನ್ನ ನಡೆಯನ್ನು ನೋಡುತ್ತಿದ್ದರೆ, ನಾನು ಇದಾವುದೇ ಪರಿವೆ ಇಲ್ಲದೇ ಆತನ ಕಾಲಿಗೆರಗಿದ್ದೆ. ಇಂತಹ ದೇಶ ಭಕ್ತ ಸುಬೇದಾರ್ ಜೋಗಾ ಸಿಂಗ್ ಎದುರು ನಾವು ಏನೇನೂ ಆಲ್ಲವೆಂಬ ಭಾವ ನನ್ನೊಳಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT