ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಗುರುವಾರ, 12–1–1995

Last Updated 11 ಜನವರಿ 2020, 20:00 IST
ಅಕ್ಷರ ಗಾತ್ರ

ಕುವೆಂಪು, ಗಂಗೂಬಾಯಿ, ಎಸ್ಸೆನ್‌ರಿಗೆ ‘ನಾಡೋಜ’
ಬೆಂಗಳೂರು, ಜ. 11– ಕನ್ನಡಿಗರ ಹೆಮ್ಮೆಯ ಕೂಸಾದ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ‘ನಾಡೋಜ’ ಗೌರವ ಡಾಕ್ಟರೇಟ್ ಪ್ರಶಸ್ತಿಯು ರಾಷ್ಟ್ರಕವಿ ಕುವೆಂಪು, ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಸಿದ್ದನಹಳ್ಳಿ ನಿಜಲಿಂಗಪ್ಪ ಮತ್ತು ಖ್ಯಾತ ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್‌ ಅವರಿಗೆ ಲಭಿಸಿದೆ.

‘ವಿಶ್ವವಿದ್ಯಾಲಯಕ್ಕೆ ಈಗ ಚೊಚ್ಚಲ ಘಟಿಕೋತ್ಸವದ ಸಂಭ್ರಮ. ‘ನುಡಿ ಹಬ್ಬ’ದ ಹೆಸರಿನಲ್ಲಿ ಫೆಬ್ರುವರಿ 15 ರಂದು ಈ ಸಮಾರಂಭ ನಡೆಯಲಿದೆ. ಆದಿ ಕವಿ ಪಂಪನ ಬಿರುದಾದ ‘ನಾಡೋಜ’ ಹೆಸರಿನ ಈ ಪ್ರಶಸ್ತಿಯನ್ನು ನಾಡು–ನುಡಿ, ಸಂಸ್ಕೃತಿಗೆ ಅಪಾರ ಸೇವೆ ಸಲ್ಲಿಸಿದ ಗಣ್ಯರಿಗೆ ಪ್ರತಿ ವರ್ಷವೂ ನುಡಿಹಬ್ಬದಲ್ಲಿ ನೀಡಲು ನಿರ್ಧರಿಸಿದ್ದೇವೆ’ ಎಂದು ವಿ ವಿ ಕುಲಪತಿ
ಡಾ. ಚಂದ್ರಶೇಖರ ಕಂಬಾರ ಪತ್ರಿಕಾಗೋಷ್ಠಿಯಲ್ಲಿ ಇಂದು ತಿಳಿಸಿದರು.

ದಾರಿ ತಪ್ಪಿದ ಕಾಂಗೈ: ಅರ್ಜುನ್ ಟೀಕೆ
ನವದೆಹಲಿ, ಜ. 11 (ಯುಎನ್‌ಐ)– ಕಾಂಗೈ ಪಕ್ಷವು ರಾಷ್ಟ್ರೀಯ ಮುಖ್ಯಪ್ರವಾಹದಿಂದ ದೂರ ಹೋಗುತ್ತಿರುವುದನ್ನು ತಡೆಯಲು ತಾವು ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಬೇಕಾಯಿತೇ ಹೊರತು ರಾಜಕೀಯ ದುರುದ್ದೇಶದಿಂದ ಅಲ್ಲ ಎಂದು ಮಾಜಿ ಮಾನವ ಸಂಪನ್ಮೂಲ ಸಚಿವ ಅರ್ಜುನ್ ಸಿಂಗ್ ಇಂದು ಹೇಳಿದರು.

ರೇಸ್‌ಕೋರ್ಸ್ ರಸ್ತೆಯಲ್ಲಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ನಿವಾಸದ ಪಕ್ಕದಲ್ಲೇ ಇರುವ ತಮ್ಮ ನಿವಾಸದಲ್ಲಿ ಅವರು ಪಂಜಾಬಿನಿಂದ ಬಂದ ಕಾಂಗೈ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತ ‘ಸರಕಾರದ ಒಳಗೆ ಮಹತ್ವದ ವಿಷಯಗಳನ್ನು ನಾನು ಎತ್ತಿದಾಗ ನನ್ನ ಧ್ವನಿ ಯಾರಿಗೂ ಕೇಳಿಸಲಿಲ್ಲ. ಆದ್ದರಿಂದ ಪಕ್ಷವನ್ನು ಹಾಗೂ ದೇಶವನ್ನು ಬಾಧಿಸುತ್ತಿರುವ ಮಹತ್ವದ ವಿಚಾರಗಳನ್ನು ಕೋಟ್ಯಂತರ ಕಾರ್ಯಕರ್ತರ ಜತೆ ಸೇರಿ ಎತ್ತುವುದಕ್ಕಾಗಿ ರಾಜೀನಾಮೆ ನೀಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT