ಶನಿವಾರ, ಅಕ್ಟೋಬರ್ 24, 2020
27 °C

ಭಾನುವಾರ, 15–10–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಕಾರಣಿ, ಡಕಾಯಿತರು ಒಂದೇ: ಫೂಲನ್

ಬೆಂಗಳೂರು, ಅ. 14– ಉತ್ತರ ಭಾರತದ ಶೋಷಿತ ಬಡ ಹೆಣ್ಣಿನ ಪ್ರತಿರೂಪವಾಗಿ ಕಾಣುವ ಫೂಲನ್ ದೇವಿ, ಈಗ ಜೈಲು ಶಿಕ್ಷೆ ಮುಗಿಸಿ ಹೊರಬಿದ್ದ ಸಾಧಾರಣ ಕೈದಿಯಲ್ಲ. ಆಕೆಯ ಮಾತು ಇಂದು ಸುದ್ದಿಯಾಗುತ್ತದೆ. ಭಾಷಣಕ್ಕೆ ನಿಂತರೆ ಜನ ಮುತ್ತುತ್ತಾರೆ; ಕ್ಯಾಮೆರಾಗಳು ಮಿಂಚುತ್ತವೆ. ರಾಜಕೀಯ ಪಕ್ಷಗಳು ವೋಟಿನ ಲೆಕ್ಕಾಚಾರ ಹಾಕುತ್ತವೆ.

ಜೈಲಿನಿಂದ ಬಿಡುಗಡೆಯಾದ ನಂತರ ಮೊದಲ ಬಾರಿಗೆ ಕರ್ನಾಟಕಕ್ಕೆ ಬಂದಿರುವ ಮಾಜಿ ‘ಡಕಾಯಿತರ ರಾಣಿ’ ಫೂಲನ್ ಇನ್ನೂ ಗುಂಡು ಸಿಡಿಸುತ್ತಿದ್ದಾಳೆ, ಮಾತಿನಲ್ಲಿ. ‘ಈ ದೇಶದಲ್ಲಿ ಯಾರು ಅಪರಾಧಿಯಲ್ಲ? (ಕೌನ್ ಅಪರಾಧೀ ನಹೀ?) ಪ್ರಧಾನಿ ನರಸಿಂಹರಾಯರಿಂದ ಹಿಡಿದು...!’ ಎಂದು ಷೇರು ಹಗರಣ ನೆನಪಿಸುವ ಫೂಲನ್, ಪಕ್ಕದಲ್ಲಿ ಕುಳಿತು ತನ್ನ ಮಾತು ತಿದ್ದುವ ಪತಿ ಉಮೇಧ್ ಸಿಂಗರನ್ನೂ ಲೆಕ್ಕಿಸುವುದಿಲ್ಲ.

ಕರ್ನಾಟಕ ಸಮತಾ ಸೈನಿಕ ದಳ ಇಂದು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫೂಲನ್, ದೇಶದ ರಾಜಕೀಯ ವ್ಯವಸ್ಥೆಯ ವಿರುದ್ಧ ಕಿಡಿಕಾರಿದರು. ‘ಗರೀಬರು, ದಲಿತರು ಈ ದೇಶದಲ್ಲಿ ಕ್ರಿಮಿಕೀಟಗಳಿಗೆ ಸಮ. ದಲಿತರು, ಮಹಿಳೆಯರ ಮೇಲೆ ಪ್ರತಿದಿನ ಅತ್ಯಾಚಾರ ನಡೆಯುತ್ತಿದೆ. ಪೊಲೀಸರು ಮತ್ತು ಶ್ರೀಮಂತರು ನಮ್ಮನ್ನು ಬದುಕಲು ಬಿಡುತ್ತಿಲ್ಲ’ ಆಕೆಯ ಮಾತು ನೇರ.

ವೋರಾ ವರದಿ ಆಧರಿಸಿ ಶೀಘ್ರ ಕ್ರಮ

ರಾಯ್‌ಬರೇಲಿ, ಅ. 14 (ಯುಎನ್‌ಐ)– ಅಪರಾಧಿಗಳು ಮತ್ತು ರಾಜಕಾರಣಿಗಳ ನಡುವಣ ನಂಟಿಗೆ ಸಂಬಂಧಿಸಿದ ವೋರಾ ಸಮಿತಿಯ ವರದಿಯನ್ನು ಆಧರಿಸಿ ಕೇಂದ್ರವು ಶೀಘ್ರವೇ ಮುಂದಿನ ಕ್ರಮಗಳನ್ನು ಕೈಗೊಳ್ಳುವುದು. ಆದರೆ, ಈ ಕ್ರಮ ‘ಒಮ್ಮತ’ದಿಂದ ಕೂಡಿರುತ್ತದೆ ಎಂದು ಗೃಹ ಖಾತೆಯ ರಾಜ್ಯ ಸಚಿವ ಸಯ್ಯದ್ ಸಿಬ್ಬೆ ರಜಿ ಅವರು ಹೇಳಿದ್ದಾರೆ.

ಅಪರಾಧಿ–ರಾಜಕಾರಣಿ ಸಂಬಂಧ ಒಂದು ರಾಷ್ಟ್ರೀಯ ಸಮಸ್ಯೆ. ಇದನ್ನು ಸಹಮತದ ಆಧಾರದಲ್ಲಿ ಪರಿಹರಿಸಬೇಕು ಎಂದು ಇತ್ತೀಚೆಗೆ ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ ಎಂದು ರಜಿ ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು