ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ರೈತರೇ ದಾರಿಬಿಡಿ... ಗದ್ದೆಗಿಳಿದಿದೆ ರೋವರ್!

Last Updated 28 ಅಕ್ಟೋಬರ್ 2020, 6:16 IST
ಅಕ್ಷರ ಗಾತ್ರ

ಅತಿವೇಗವಾಗಿ ಬೆಳೆಯುತ್ತಿರುವ ಜಗತ್ತಿನ ಜನಸಂಖ್ಯೆಯ ಆಹಾರದ ಅಗತ್ಯವನ್ನು ಪೂರೈಸುವುದು ಸದ್ಯದ ತುರ್ತು. ಕೃಷಿ ಭೂಮಿ ಕಡಿಮೆಯಾಗಿ, ಕೃಷಿಯತ್ತ ಯುವಜನರ ಒಲವು ಅಷ್ಟಾಗಿ ಕಾಣಿಸುತ್ತಿಲ್ಲ. ಜೊತೆಗೆ ಹವಾಮಾನ ಏರಿಳಿತದಿಂದ ಈ ಕ್ಷೇತ್ರ ಕಂಗೆಟ್ಟಿದೆ. ಈ ನಿಟ್ಟಿನಲ್ಲಿ ಸಮಗ್ರ ತಂತ್ರಾಜ್ಞಾಧಾರಿತ ಕೃಷಿ ಪದ್ಧತಿ ಈಗಿನ ಅಗತ್ಯ. ಇದನ್ನು ಮನಗಂಡಿರುವಗೂಗಲ್‌ನ ಮಾತೃಸಂಸ್ಥೆ ಆಲ್ಫಬೆಟ್ ಕಂಪನಿಯು ಸುಸ್ಥಿರ ಕೃಷಿ ಯೋಜನೆಯೊಂದನ್ನು ರೂಪಿಸಿದೆ.

ಸುಸ್ಥಿರ ಕೃಷಿ ಉತ್ಪಾದನೆ ಹಾಗೂ ಬೃಹತ್ ಪ್ರಮಾಣದಲ್ಲಿ ಕೃಷಿ ನಡೆಸುವುದು ಯೋಜನೆಯ ಮುಖ್ಯ ಉದ್ದೇಶ. ಇದಕ್ಕಾಗಿ ಕೃತಕ ಬುದ್ಧಿಮತ್ತೆ (ಎಐ), ರೊಬೊಟಿಕ್ಸ್, ಸಿಮ್ಯುಲೇಷನ್, ಸೆನ್ಸರ್ ಮೊದಲಾದ ತಂತ್ರಜ್ಞಾನಗಳ ಪ್ರಯೋಜನ ಪಡೆಯಲಾಗುತ್ತಿದೆ. ಬದಲಾಗುತ್ತಿರುವ ಹವಾಮಾನ ಹಾಗೂ ಸಸ್ಯಗಳ ಬೆಳವಣಿಗೆಯನ್ನು ಇನ್ನಷ್ಟು ಕರಾರುವಕ್ಕಾಗಿ ಅರ್ಥಮಾಡಿಕೊಂಡು ಪರಿಣಾಮಕಾರಿಯಾಗಿ ಧಾನ್ಯ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ. ‘ಮಿನರಲ್’ ಹೆಸರಿನ ಯೋಜನೆಯನ್ನು ಕಂಪನಿಯ ಎಕ್ಸ್ ಲ್ಯಾಬ್ ನಿರ್ವಹಿಸುತ್ತಿದೆ.

ಸುಸ್ಥಿರ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಸಜ್ಜುಗೊಳಿಸುವುದು ಯೋಜನೆಯ ಉದ್ದೇಶ. ಆಹಾರದ ಬೇಡಿಕೆ, ಹವಾಮಾನ, ಮಳೆಯ ವಿನ್ಯಾಸ, ಸಸ್ಯಗಳ ಬೆಳವಣಿಗೆಯ ಚಕ್ರಗಳನ್ನು ಅಧ್ಯಯನಕ್ಕೆ ಒಳಪಡಿಸಿ ಹೆಚ್ಚಿನ ದಕ್ಷತೆಯೊಂದಿಗೆ ಬೆಳೆಗಳನ್ನು ಉತ್ಪಾದಿಸುವ ಗುರಿಯನ್ನು ಯೋಜನೆ ಹೊಂದಿದೆ.ವಿವಿಧ ಹವಾಮಾನಗಳಿಗೆ ಸಸ್ಯಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂದು ರೈತರಿಗೆ ಅರ್ಥ ಮಾಡಿಸಲಾಗುತ್ತದೆ. ಆಗ ಅನಗತ್ಯವಾಗಿ ಬೃಹತ್ ಪ್ರಮಾಣದ ಫಸಲು ಬೆಳೆಯಲು ಹೋಗಿ ವಿಫಲರಾಗುವ ಸನ್ನಿವೇಶ ತಪ್ಪಿ, ಎಲ್ಲಿ ಒತ್ತು ನೀಡಬೇಕು ಎಂಬ ಮಾಹಿತಿ ನೀಡಲಾಗುತ್ತದೆ.

ಈ ಉದ್ದೇಶ ಸಾಧನೆಗಾಗಿ ಮಿನರಲ್ ಯೋಜನೆಯುನಾಲ್ಕು ಚಕ್ರಗಳ ರೋವರ್ ವಾಹನವನ್ನು ಸಿದ್ಧಪಡಿಸಿದೆ. ಇದು ಜಮೀನಿನಲ್ಲಿ ಸುತ್ತಾಡಿ, ಬೆಳೆಯನ್ನು ತುಂಬಾ ಹತ್ತಿರದಿಂದ ಪರಿಶೀಲನೆಗೆ ಒಳಪಡಿಸುತ್ತದೆ. ಈ ವಾಹನವು ಈಗಾಗಲೇ ಕ್ಯಾಲಿಫೋರ್ನಿಯಾದ ಸ್ಟ್ರಾಬೆರಿ ಹಾಗೂ ಇಲಿನಾಯ್ಸ್‌ನ ಸೋಯಾಬೀನ್ ತೋಟಗಳಲ್ಲಿ ತಿರುಗಾಡಿದೆ. ಉತ್ಕೃಷ್ಟ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿದು, ಪ್ರತಿಯೊಂದು ಸಸ್ಯಗಳನ್ನೂ ವರ್ಗೀಕರಿಸಿದೆ. ಹೆಚ್ಚು ಪೋಷಕಾಂಶ ಅಗತ್ಯವಿರುವ, ನೀರು ಅಗತ್ಯವಿರುವ, ರೋಗಕ್ಕೆ ತುತ್ತಾಗಿರುವ ಸಸ್ಯಗಳನ್ನು ಗುರುತಿಸಿ, ವರ್ಗೀಕರಿಸಿದೆ. ಕಲ್ಲಂಗಡಿ, ಬೆರ್ರಿ, ಎಣ್ಣೆಕಾಳು, ಓಟ್ಸ್, ಬಾರ್ಲಿ ಮೊದಲಾದ ಸಸ್ಯಗಳನ್ನು ಮೊಳಕೆಯಿಂದ ಕೊಯ್ಲಿನವರೆಗೆ ವಿಶ್ಲೇಷಣೆಗೆ ಒಳಪಡಿಸಲಾಗಿದೆ.

ಮಿನರಲ್ ರೂಪಿಸಿರುವ ತಂತ್ರಜ್ಞಾನ ಹಾಗೂ ಹೊಲದಲ್ಲಿ ಸುತ್ತಾಡುವರೋವರ್ ಪರಿಸರ ಸ್ನೇಹಿಯಾಗಿದ್ದು, ಅಳವಡಿಸಿಕೊಳ್ಳಲು ಸರಳವಾಗಿದೆ ಎಂದು ತಂಡ ಹೇಳಿದೆ. ನೀರು, ರಸಗೊಬ್ಬರಗಳ ಮಿತವ್ಯಯಕ್ಕೆ ಆದ್ಯತೆ ನೀಡಲಾಗಿದೆ. ಅಂತರ ಬೆಳೆಯಂತಹ ವಿವಿಧ ಪದ್ಧತಿಗಳ ಮೂಲಕ ಮಣ್ಣಿನ ಫಲವತ್ತತೆ ಕಾಯ್ದುಕೊಂಡು, ಹೆಚ್ಚು ಫಲಸು ತೆಗೆಯುವತ್ತ ಯೋಜನೆ ಕಾರ್ಯೋನ್ಮುಖವಾಗಿದೆ. ಹವಾಮಾನ ಬದಲಾವಣೆಯ ಈ ಸಮಯದಲ್ಲಿ ಸಸ್ಯ, ಮಣ್ಣು ಹಾಗೂ ಬೆಳೆ ಸಂರಕ್ಷಣೆ ಅತೀ ಮಹತ್ವದ ವಿಷಯ ಎನಿಸಿವೆ.

ಮುಂದಿನ 50 ವರ್ಷಗಳಲ್ಲಿ ಹೆಚ್ಚು ಹೆಚ್ಚು ಆಹಾರ ಉತ್ಪಾದಿಸಬೇಕಾದ ತುರ್ತಿನ ಜತೆಗೆಹವಾಮಾನ ಬದಲಾವಣೆಯಿಂದ ಉತ್ಪಾದಕತೆ ಕುಂಠಿತವಾಗುವ ಕಂಟಕವನ್ನೂ ಎದುರಿಸಬೇಕಿದೆ.ಇಂತಹ ಹೊತ್ತಿನಲ್ಲಿ ತಂತ್ರಜ್ಞಾನಾಧಾರಿತ ಉತ್ಪಾದನೆಗೆ ತಯಾರಿ ಅಗತ್ಯವಾಗಿತ್ತು ಎಂದು ಮಿನರಲ್ ಕಂಪನಿಯು ತನ್ನ ಬ್ಲಾಗ್‌ನಲ್ಲಿ ವಿವರಣೆ ನೀಡಿದೆ.

ಕೆಲವು ವರ್ಷಗಳಿಂದ ಇದಕ್ಕೆ ಅಗತ್ಯವಿರುವ ಉಪಕರಣಗಳ ಅಭಿವೃದ್ಧಿಯಲ್ಲಿ ತಂಡ ಶ್ರಮಿಸಿದೆ. ಉಪಗ್ರಹ ಚಿತ್ರಗಳು, ಹವಾಮಾನ ದತ್ತಾಂಶಗಳನ್ನು ತಂಡ ಸಂಗ್ರಹಿಸಿದೆ. ರೋವರ್ ಕೂಡ ತಂಡದ ವಿನ್ಯಾಸ. ಇದನ್ನು ‘ಪ್ಲಾಂಟ್ ಬಗ್ಗಿ’ ಎಂದು ಕರೆಯಲಾಗುತ್ತದೆ. ಸೆನ್ಸರ್‌ಗಳು, ಕ್ಯಾಮೆರಾಗಳು ಮತ್ತು ವಿವಿಧ ಉಪಕರಣಗಳ ಸಹಾಯದಿಂದ ಇದು ಮಣ್ಣು, ಬೆಳೆ ಅಧ್ಯಯನ ಮಾಡುತ್ತದೆ.ಉಪಗ್ರಹ ಚಿತ್ರ ಮತ್ತು ಹವಾಮಾನ ದತ್ತಾಂಶ ವಿಶ್ಲೇಷಿಸುವ ತಂಡ,ಸಸ್ಯಗಳ ಬೆಳವಣಿಗೆ ತಿಳಿಸುವ ಮಾದರಿಯನ್ನುರಚಿಸುತ್ತದೆ.ಕೃತಕ ಬುದ್ಧಿಮತ್ತೆ ತಂತ್ರಗಳು ಹಾಗೂ ಮಷಿನ್ ಲರ್ನಿಂಗ್‌ನಿಂದ ಇದನ್ನು ಮಾಡಲಾಗುತ್ತದೆ.

ಈಗಾಗಲೇ ಕ್ಯಾಲಿಫೋರ್ನಿಯಾದ ಸ್ಟ್ರಾಬೆರಿ ಮತ್ತು ಇಲಿನಾಯ್ಸ್‌ನ ಸೋಯಾಬೀನ್ ತೋಟಗಳಲ್ಲಿ ಮೂಲ ಮಾದರಿಯೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ತಂಡ ಹೇಳಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಮುಂದೊಂದು ದಿನ ಇಡೀ ಕೃಷಿ ವ್ಯವಸ್ಥೆ ಯಾಂತ್ರೀಕರಣಗೊಳ್ಳಲಿದ್ದು, ಮನುಷ್ಯನ ಅಗತ್ಯವೇ ಬೀಳದಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT