ಮಂಗಳವಾರ, ಡಿಸೆಂಬರ್ 6, 2022
24 °C
ದೇಶದ ಎಲ್ಲ ಸಮಸ್ಯೆಗಳಿಗೂ ವಲಸಿಗರೇ ಕಾರಣ ಎನ್ನುವುದರಲ್ಲಿ ಹುರುಳಿದೆಯೇ?

ವಿಶ್ಲೇಷಣೆ: ವಲಸೆಯ ಅರ್ಥಶಾಸ್ತ್ರ ಬೇರೆಯೇ ಹೇಳುತ್ತದೆ

ವೇಣುಗೋಪಾಲ್‌ ಟಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ಜಗತ್ತಿನಾದ್ಯಂತ ಇಂದು ವಲಸಿಗರ ವಿರುದ್ಧ ಸಿಟ್ಟು ಕಾಣಿಸಿಕೊಳ್ಳುತ್ತಿದೆ. ತಮ್ಮ ಹಲವು ಸಮಸ್ಯೆಗಳಿಗೆ ವಲಸಿಗರೇ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಅವರಿಂದ ತಮಗೆ ಕೆಲಸ ತಪ್ಪುತ್ತಿದೆ, ಮನೆ ಬಾಡಿಗೆ ದರ ಜಾಸ್ತಿಯಾಗುತ್ತಿದೆ, ಕೂಲಿಯ ಮೊತ್ತ ಕಡಿಮೆಯಾಗುತ್ತಿದೆ... ಹೀಗೆ ಆರೋಪಗಳ ಪಟ್ಟಿ ಬೆಳೆಯುತ್ತದೆ.

ವಲಸೆ ಅನ್ನುವುದು ರಾಜಕಾರಣಿಗಳಿಗೆ ಚುನಾವಣೆ ಗೆಲ್ಲುವುದಕ್ಕೆ ಒಂದು ಒಳ್ಳೆಯ ಅಸ್ತ್ರವಾಗಿದೆ. ಇಟಲಿ, ಫ್ರಾನ್ಸ್, ಬ್ರಿಟನ್, ಅಮೆರಿಕ ಎಲ್ಲೆಡೆಯಲ್ಲೂ ವಲಸಿಗರ ಬಗ್ಗೆ ಸಿಟ್ಟು ಇದೆ. ಈ ವಿಷಯವು ಚುನಾವಣೆಯ ಪ್ರಚಾರ ಸಭೆಗಳಲ್ಲೂ ಪ್ರಸ್ತಾಪ ಆಗುತ್ತಿದೆ. ಆದರೆ ನಿಜವಾಗಿ ನಮ್ಮೆಲ್ಲ ಸಮಸ್ಯೆಗಳಿಗೆ ವಲಸೆಯೇ ಕಾರಣವೆ? ಇದಕ್ಕೆ ಸಂಬಂಧಿಸಿದಂತೆ ಅರ್ಥಶಾಸ್ತ್ರದ ಚಿಂತನೆಗಳು ಹಾಗೂ ರಾಜಕೀಯ ಲೆಕ್ಕಾಚಾರಗಳು ತಾಳೆಯಾಗುವುದಿಲ್ಲ. ಅಭಿಜಿತ್ ಬ್ಯಾನರ್ಜಿ ಹಾಗೂ ಎಸ್ತರ್ ಡಫ್ಲೊ ಅವರ ಅಧ್ಯಯನವು ಬೇರೆ ಕಥೆಯನ್ನೇ ಹೇಳುತ್ತದೆ. ಹಲವಾರು ಪ್ರಯೋಗಗಳನ್ನು ಆಧರಿಸಿ ‘ಗುಡ್ ಎಕನಾಮಿಕ್ಸ್ ಫಾರ್ ಹಾರ್ಡ್ ಟೈಮ್ಸ್’ ಪುಸ್ತಕದಲ್ಲಿ ತಮ್ಮ ಅಧ್ಯಯನವನ್ನು ಅವರು ದಾಖಲಿಸಿದ್ದಾರೆ.

ಅವರು ಹೇಳುವಂತೆ ಮೊದಲನೆಯದಾಗಿ, ವಲಸಿಗರ ಸಂಖ್ಯೆ ಅನೇಕರು ಭಾವಿಸಿರುವಷ್ಟು ಹೆಚ್ಚಿಗೆ ಇಲ್ಲ. 1960ಕ್ಕೆ ಹೋಲಿಸಿದರೆ ಇಂದು ವಲಸೆ ಬಂದವರ ಒಟ್ಟು ಸಂಖ್ಯೆಯಲ್ಲಿ ಹೆಚ್ಚಳವೇನೂ ಆಗಿಲ್ಲ. ಅದು ಒಟ್ಟು ಜನಸಂಖ್ಯೆಯ ಸುಮಾರು ಶೇ 3ರಷ್ಟೇ ಇದೆ. ಯುರೋಪಿಗೆ ಹೊರಗಿನಿಂದ ಬಂದವರ ಸಂಖ್ಯೆ ಅಲ್ಲಿಯ ಒಟ್ಟು ಜನಸಂಖ್ಯೆಯ ಶೇ 0.5ಕ್ಕಿಂತ ಕಡಿಮೆ. ಇವರಲ್ಲಿಯೂ ಹೆಚ್ಚಿನವರು ಕೆಲಸಕ್ಕಾಗಿ, ಕುಟುಂಬದವರನ್ನು ಸೇರಿಕೊಳ್ಳುವುದಕ್ಕಾಗಿ, ಒಟ್ಟಿನಲ್ಲಿ ಕಾನೂನುಬದ್ಧವಾಗಿಯೇ ಬಂದವರು. ಆದರೆ ವಲಸೆ ಬಂದವರ ಸಂಖ್ಯೆಯನ್ನು ಹೆಚ್ಚಿನ ಮಂದಿ ಅತಿಯಾಗಿಯೇ ಕಲ್ಪಿಸಿಕೊಂಡಿದ್ದಾರೆ. ಉದಾಹರಣೆಗೆ, ಇಟಲಿಗೆ ವಲಸೆ ಬಂದವರ ಸಂಖ್ಯೆ ಶೇ 10ರಷ್ಟು. ಆದರೆ ಈ ಸಂಖ್ಯೆ ಶೇ 26ರಷ್ಟು ಇರಬಹುದು ಎಂದು ಜನ ಭಾವಿಸಿದ್ದಾರಂತೆ. ಹಾಗೆಯೇ ಮುಸಲ್ಮಾನ ವಲಸಿಗರ ಸಂಖ್ಯೆಯನ್ನು ಸಾಮಾನ್ಯವಾಗಿ ಸ್ವಲ್ಪ ಹೆಚ್ಚಾಗಿಯೇ ಭಾವಿಸಿಕೊಳ್ಳುವ ಪರಿಪಾಟ ಇದೆ. ಜೊತೆಗೆ ವಲಸಿಗರು ಸುಶಿಕ್ಷಿತರಲ್ಲ, ಬಡವರು, ಸರ್ಕಾರದ ಕೃಪೆಯಲ್ಲಿ ಬದುಕುತ್ತಿರುವವರು... ಹೀಗೆ ಹಲವು ಕಲ್ಪನೆಗಳಿವೆ.

ಇಂತಹ ಕಲ್ಪನೆಗಳಿಗೆ ಆಧಾರ ಬೇಕೆಂದೇನೂ ಇಲ್ಲ. ಆದರೆ ಪುರಾವೆಗಳು ಈ ಬಗೆಯ ಕಲ್ಪನೆಗಳಿಗೆ ವ್ಯತಿರಿಕ್ತವಾಗಿವೆ. ಜನ ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ. ಈ ಭಾವನೆಯ ಹಿಂದೆ ಕೆಲಸ ಮಾಡುತ್ತಿರುವ ತರ್ಕವೊಂದು ನಮ್ಮನ್ನು ದಾರಿತಪ್ಪಿಸುತ್ತಿದೆ. ಅದೇನೆಂದರೆ, ಜಗತ್ತಿನ ಎಲ್ಲೆಡೆ ಬಡವರಿದ್ದಾರೆ. ಅವರ ದೇಶಕ್ಕಿಂತ ನಮ್ಮ ದೇಶದ ಸ್ಥಿತಿ ಉತ್ತಮವಾಗಿದೆ. ಇಲ್ಲಿ ಹೆಚ್ಚು ಸಂಪಾದಿಸಬಹುದು ಅನ್ನುವ ಕಾರಣಕ್ಕೆ ಅವರು ಇಲ್ಲಿಗೆ ಬರುತ್ತಾರೆ. ಅದರಿಂದ ನಮ್ಮಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚುತ್ತದೆ.

ಸ್ವಾಭಾವಿಕವಾಗಿಯೇ ಕೂಲಿಯ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ವಲಸಿಗರಿಗೆ ಲಾಭವಾಗಬಹುದು. ಆದರೆ ಸ್ಥಳೀಯರಿಗೆ ತೊಂದರೆಯಾಗುತ್ತದೆ. ಪೂರೈಕೆ ಹೆಚ್ಚಾದರೆ ಬೆಲೆ ಕಡಿಮೆಯಾಗುತ್ತದೆ ಅನ್ನುವುದು ಅರ್ಥಶಾಸ್ತ್ರದ ಪ್ರಖ್ಯಾತ ಬೇಡಿಕೆ- ಪೂರೈಕೆ ನಿಯಮ. ಇದು ನಮ್ಮನ್ನು ಹಾದಿತಪ್ಪಿಸುತ್ತಿದೆ. ಆದರೆ ಕಾರ್ಮಿಕ ಮಾರುಕಟ್ಟೆಯ ವಿಷಯದಲ್ಲಿ ಬೇಡಿಕೆ- ಪೂರೈಕೆಯ ನಿಯಮ ಕೆಲಸ ಮಾಡುವುದಿಲ್ಲ. ಎಷ್ಟೇ ದೊಡ್ಡ ಪ್ರಮಾಣದಲ್ಲಿ ಜನ ವಲಸೆ ಬಂದರೂ ಸ್ಥಳೀಯರ ಕೂಲಿಗಾಗಲೀ ಉದ್ಯೋಗಕ್ಕಾಗಲೀ ಜನ ಭಾವಿಸಿದ ಮಟ್ಟಿಗೆ ತೊಂದರೆ ಆಗುವುದಿಲ್ಲ. ವಾಸ್ತವದಲ್ಲಿ ವಲಸೆಯಿಂದ ವಲಸಿಗರು ಹಾಗೂ ಸ್ಥಳೀಯರು ಇಬ್ಬರ ಸ್ಥಿತಿಯೂ ಉತ್ತಮಗೊಳ್ಳುತ್ತದೆ. ಇದು ಬ್ಯಾನರ್ಜಿ ದಂಪತಿಯ ಅಧ್ಯಯನ ಸಾಬೀತುಪಡಿಸುವ ಸಂಗತಿ. ಹೆಚ್ಚಿನ ಅಧ್ಯಯನಗಳು ಇದನ್ನೇ ಹೇಳುತ್ತವೆ.

ವಲಸಿಗರು ಹಣವನ್ನು ಖರ್ಚು ಮಾಡುತ್ತಾರೆ. ಹೋಟೆಲ್‌ಗಳಿಗೆ ಹೋಗುತ್ತಾರೆ, ಕ್ಷೌರ ಮಾಡಿಸಿಕೊಳ್ಳುತ್ತಾರೆ, ಸಾಮಾನುಗಳನ್ನು ಕೊಳ್ಳುತ್ತಾರೆ. ಇವೆಲ್ಲವೂ ಉದ್ಯೋಗವನ್ನು ಸೃಷ್ಟಿಸುತ್ತವೆ. ಕೂಲಿಯ ಮೊತ್ತವನ್ನೂ ಹೆಚ್ಚಿಸುತ್ತವೆ. ವಲಸಿಗರು ತಾವು ದುಡಿದ ಹಣವನ್ನು ಅಲ್ಲೇ ಖರ್ಚು ಮಾಡದೆ ತಮ್ಮ ತಾಯಿನಾಡಿಗೆ ಕಳುಹಿಸಿ
ದಾಗಷ್ಟೇ ಆತಿಥೇಯ ದೇಶಗಳಲ್ಲಿ ಬೇಡಿಕೆಯ ಸಮಸ್ಯೆ ಉಂಟಾಗುತ್ತದೆ. ವಲಸಿಗರನ್ನು ಹೊರಗೆ ಕಳುಹಿಸಿಬಿಟ್ಟರೆ ಸ್ಥಳೀಯರಿಗೆ ಉದ್ಯೋಗ ಸಿಗುತ್ತದೆ ಅನ್ನುವ ವಾದಕ್ಕೂ ಆಧಾರವಿಲ್ಲ. 1964ರಲ್ಲಿ ಮೆಕ್ಸಿಕೊದ ವಲಸಿಗರನ್ನು ಕ್ಯಾಲಿಫೋರ್ನಿಯಾದಿಂದ ಹೊರಕ್ಕೆ ಅಟ್ಟಲಾಯಿತು. ಆದರೆ ಅದರಿಂದ ಕೂಲಿಯ ಮೊತ್ತದಲ್ಲಾಗಲೀ ಉದ್ಯೋಗದ ಸಂಖ್ಯೆಯಲ್ಲಾಗಲೀ ಹೆಚ್ಚಳವಾಗಲಿಲ್ಲ. ಯಾಕೆಂದರೆ ಅಲ್ಲಿ ಉತ್ಪಾದನೆಯನ್ನು ಯಾಂತ್ರೀಕರಿಸಲಾಯಿತು. ಕಟಾವು ಮಾಡಲು ಯಂತ್ರಗಳನ್ನು ಬಳಸಲಾಯಿತು.

ವಲಸೆ ಕಾರ್ಮಿಕರು ನಿಜವಾಗಿ ಮಾಡುವ ಕೆಲಸ ಗಳಾದರೂ ಎಂತಹವು? ಸ್ಥಳೀಯರು ಮಾಡಬಯಸದ ಕೆಲಸಗಳನ್ನು ಮಾಡುತ್ತಾರೆ. ಉದಾಹರಣೆಗೆ, ಹುಲ್ಲುಹಾಸುಗಳನ್ನು ಕತ್ತರಿಸಿ ಒಪ್ಪ ಮಾಡುವುದು, ಮಕ್ಕಳು ಹಾಗೂ ಕಾಯಿಲೆಯವರನ್ನು ನೋಡಿಕೊಳ್ಳುವಂತಹ ಕೆಲಸಗಳನ್ನು ಮಾಡುತ್ತಾರೆ. ಅದರಿಂದ ಸ್ಥಳೀಯ ಕಾರ್ಮಿಕರಿಗೆ ಅನುಕೂಲವೇ ಆಗುತ್ತದೆ. ಏಕೆಂದರೆ ಅವರು ಬೇರೆ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು. ಅದರಲ್ಲೂ ಹೆಚ್ಚಿನ ಕೌಶಲ ಇರುವ ಮಹಿಳೆಯರು ಶಿಶುಪಾಲನೆ, ಅಡುಗೆ, ಸ್ವಚ್ಛಗೊಳಿಸುವ ಕೆಲಸ ಇವೆಲ್ಲವನ್ನೂ ವಲಸೆ ಕಾರ್ಮಿಕರಿಗೆ ಒಪ್ಪಿಸಿ ಹೊರಗೆ ಕೆಲಸ ಮಾಡಲು ಅನುಕೂಲವಾಗುತ್ತದೆ.

ವಾಸ್ತವದಲ್ಲಿ ಜನ ವಲಸೆ ಹೋಗಲು ಬಯಸುವುದಿಲ್ಲ. ಉದ್ಯೋಗ ಹಾಗೂ ಹಣ ಸಂಪಾದಿಸಲು ವಲಸೆ ಹೋಗುವವರ ಸಂಖ್ಯೆಯೂ ಕಡಿಮೆ. ಇದಕ್ಕೆ ಬ್ಯಾನರ್ಜಿ– ಎಸ್ತರ್‌ ಅವರು ಹಲವು ಪ್ರಯೋಗಗಳನ್ನು ಉಲ್ಲೇಖಿಸುತ್ತಾರೆ. ಜನ ತಮ್ಮದು ಬಡ ದೇಶ ಅನ್ನುವ ಕಾರಣಕ್ಕೆ ವಲಸೆ ಹೋಗುವುದಿಲ್ಲ. ಇರಾಕ್, ಸಿರಿಯಾ, ಗ್ವಾಟೆಮಾಲಾ ಇವೆಲ್ಲಾ ಅಂತಹ ಬಡರಾಷ್ಟ್ರಗಳೇನಲ್ಲ. ಇರಾಕಿನಲ್ಲಿನ ತಲಾ ವರಮಾನ ಲೈಬೀರಿಯಾಗಿಂತ 20 ಪಟ್ಟು ಹೆಚ್ಚು. ಬಡತನ ಸಮಸ್ಯೆಯಲ್ಲ. ಉತ್ತರ ಮೆಕ್ಸಿಕೊದಲ್ಲಿ ಡ್ರಗ್ಸ್‌ ಕಾಳಗದಿಂದಾಗಿ ನಡೆಯುತ್ತಿರುವ ಹಿಂಸೆ, ಗ್ವಾಟೆಮಾಲಾದಲ್ಲಿನ ಮಿಲಿಟರಿ ಒಳಸಂಚು, ಮಧ್ಯಪ್ರಾಚ್ಯದಲ್ಲಿನ ಸಂಘರ್ಷವು ಜನರ ಬದುಕಿನ ನೆಮ್ಮದಿಯನ್ನು ಕೆಡಿಸಿವೆ. ನೇಪಾಳದಲ್ಲಿ ಕೃಷಿ ನೆಲ ಕಚ್ಚಿದಾಗ ಜನ ವಲಸೆ ಹೋಗಲಿಲ್ಲ, ಆದರೆ ಹಿಂಸೆ ತೀವ್ರವಾದಾಗ ವಲಸೆ ಹೊರಟರು. ಬದುಕುವುದಕ್ಕೆ ಸಾಧ್ಯವೇ ಇಲ್ಲ ಅಂತಾದಾಗ ಮಾತ್ರ ಜನ ವಲಸೆ ಹೋಗುತ್ತಾರೆ.

ಜನ ವಲಸೆ ಹೋಗುವುದಕ್ಕೆ ಇಷ್ಟಪಡದಿರಲು ಹಲವು ಕಾರಣಗಳಿವೆ. ಸ್ಥಳೀಯರೊಡನೆ ಸ್ಪರ್ಧಿಸುವುದು ವಲಸಿಗರಿಗೆ ಕಷ್ಟ. ಒಳ್ಳೆಯ ಕೆಲಸ ಸಿಗುವುದೂ ಕಷ್ಟ. ಪರಿಚಿತರಿದ್ದರೆ ಅನುಕೂಲವಾಗಬಹುದು. ಹಾಗಾಗಿಯೇ ಪರಿಚಿತರಿರುವ ಸ್ಥಳಗಳಿಗೇ ಹೆಚ್ಚಿಗೆ ವಲಸೆ ಹೋಗುತ್ತಾರೆ. ಹೆಚ್ಚಿನ ಕಡೆಗಳಲ್ಲಿ ವಸತಿ ತುಂಬಾ ದುಬಾರಿ. ಹಾಗಾಗಿ ಕೊಳೆಗೇರಿಗಳಲ್ಲಿ, ನಗರದ ಹೊರವಲಯಗಳಲ್ಲಿ, ನೀರು, ನೈರ್ಮಲ್ಯ ಯಾವುದೇ ಸೌಲಭ್ಯಗಳಿಲ್ಲದ ಕಡೆ ತಂಗುತ್ತಾರೆ.

ಈಗ ವಲಸೆ ಇನ್ನೂ ಕಷ್ಟ. ಪ್ರಯಾಣದ ವೆಚ್ಚದಂತಹ ಖರ್ಚುಗಳು ಇರುತ್ತವೆ. ವಲಸಿಗರ ವಿರುದ್ಧವಾಗಿಯೇ ರೂಪಿಸಿರುವ ಇಮಿಗ್ರೇಷನ್ ನಿಯಂತ್ರಣ ವ್ಯವಸ್ಥೆಯನ್ನು ಎದುರಿಸುವ ಕೆಚ್ಚು ಬೇಕು. ಹಾಗಾಗಿ ವಲಸಿಗರಲ್ಲಿ ಅಸಾಧಾರಣ ಪ್ರತಿಭೆ, ಕೌಶಲ, ಮಹತ್ವಾಕಾಂಕ್ಷೆ, ತಾಳ್ಮೆ ಧಾರಾಳವಾಗಿ ಇರುತ್ತದೆ. ಅಮೆರಿಕದ ಸುಮಾರು ಅರ್ಧದಷ್ಟು ದೊಡ್ಡ ಉದ್ದಿಮೆಗಳನ್ನು ಹುಟ್ಟುಹಾಕಿದವರು ವಲಸಿಗರು ಮತ್ತವರ ಮಕ್ಕಳು. ಹೆಚ್ಚು ಮೌಲ್ಯದ ಬ್ರ್ಯಾಂಡ್‍ಗಳನ್ನು ಹೊಂದಿರುವ 13 ಅತಿದೊಡ್ಡ ಕಂಪನಿಗಳಲ್ಲಿ ಒಂಬತ್ತು ಕಂಪನಿಗಳ ಸಂಸ್ಥಾಪಕರು ವಲಸಿಗರು. ಹೆನ್ರಿ ಫೋರ್ಡ್ ಐರ್ಲೆಂಡಿನ ವಲಸಿಗರೊಬ್ಬರ ಮಗ. ಸ್ಟೀವ್ ಜಾಬ್ಸ್‌ ಅವರ ತಂದೆ ಸಿರಿಯಾದವರು. ಸೆರ್ಜಿ ಬ್ರಿನ್ ಹುಟ್ಟಿದ್ದು ರಷ್ಯಾದಲ್ಲಿ. ಮೈಕ್ ಕ್ಯೂಬಾದ ವಲಸಿಗ. ಒಂದರ್ಥದಲ್ಲಿ ಅಮೆರಿಕದಂತಹ ನಗರಗಳು ಬೆಳೆದಿರುವುದೇ ವಲಸಿಗರಿಂದ. ವಲಸೆಯು ಆರ್ಥಿಕ ಬೆಳವಣಿಗೆಯ ಒಂದು ಸಹಜ ಪ್ರಕ್ರಿಯೆ.

ಹೆಚ್ಚಿನ ಅಧ್ಯಯನಗಳು ಗಮನಿಸಿರುವಂತೆ, ಇಂದು ಜಗತ್ತನ್ನು ಕಾಡುತ್ತಿರುವ ನಿರುದ್ಯೋಗ, ಅಸಮಾನತೆ, ಬಡತನ ಇವಕ್ಕೆಲ್ಲಾ ಸರ್ಕಾರಗಳು ಅನುಸರಿಸುತ್ತಿರುವ ಆರ್ಥಿಕ ನೀತಿಗಳು ಕಾರಣ. ವಲಸಿಗರನ್ನು ಹೊರಗೆ ಕಳುಹಿಸಿದರೂ ಈ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಈ ಬಗ್ಗೆ ಗಂಭೀರ ಚರ್ಚೆ ಆಗಬೇಕು. ಆದರೆ ಇಂದಿನ ರಾಜಕೀಯ ಸೃಷ್ಟಿಸಿರುವ ವಿಷದ ವಾತಾವರಣದಲ್ಲಿ ವಸ್ತುನಿಷ್ಠ ಚರ್ಚೆ ಅಸಾಧ್ಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು