ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ಶಿವಮೂರ್ತಿ ಮುರುಘಾ ಶರಣರ ಲೇಖನ: ಕ್ರಾಂತಿಪಥ ಮತ್ತು ಪ್ರಗತಿಪಥ

ಧರ್ಮವನ್ನು ಒಂದು ಪದ್ಧತಿಯಂತೆ ಆಚರಿಸಿದರೆ ಬದುಕಿಗೆ ಬೇಕಾದ ಸ್ಫೂರ್ತಿ ಎಲ್ಲಿಂದ ಬರಬೇಕು?
ಅಕ್ಷರ ಗಾತ್ರ

ಭೂಮಿಯೊಳಗೆ ಬೀಜ ಬಿದ್ದಲ್ಲಿ ಕೆಟ್ಟಿತ್ತೆಂದೆನಬೇಡ,
ಮುಂದಣ ಫಲದೊಳಗರಸಿಕೋ!
ಕಾಸಿ ಕರಗಿಸಿದ ಬಂಗಾರ ಕೆಟ್ಟಿತ್ತೆಂದೆನಬೇಡ,
ಮುಂದಣ ಬಣ್ಣದೊಳಗರಸಿಕೋ!
ಹೊತ್ತಿಸಿದ ದೀಪ್ತಿ ಕೆಟ್ಟಿತ್ತೆಂದೆನಬೇಡ,
ಮುಂದಣ ಅಗ್ನಿಯೊಳಗರಸಿಕೋ!
ಲಿಂಗದೊಳಗೆ ಪ್ರಾಣ, ಪ್ರಾಣದೊಳಗೆ ಲಿಂಗ.
ಇದು ಕಾರಣ, ಕೂಡಲ ಚೆನ್ನಸಂಗನ ಶರಣರ
ಪಾದ ಪ್ರತಿಬಿಂಬದೊಳಗರಸಿಕೋ!
ಸಂಗನ ಬಸವಣ್ಣಾ!

ಜಾಗತಿಕ ಮಟ್ಟವನ್ನು ತಲುಪುವಂತಹ ಸಿದ್ಧಾಂತಕ್ಕೆ ಸೇರಿದವರು ನಾವು. ಈ ಬಗ್ಗೆ ಒಂದು ಒಳನೋಟ- ಸಮುದ್ರ ಮತ್ತು ನದಿಯೊಂದರ ಪಾತ್ರ. ಸಮುದ್ರವು ಈ ಭೂಮಿಯ ಮುಕ್ಕಾಲು ಭಾಗವನ್ನು ವ್ಯಾಪಿಸಿದೆ. ಎಲ್ಲ ನದಿಗಳು ಹುಟ್ಟಿ ಸಮುದ್ರವನ್ನು ಸೇರುತ್ತವೆ. ಸಮುದ್ರಕ್ಕೆ ಎಷ್ಟು ನದಿಗಳ ನೀರಾದರೂ ಸಾಲದು. ಏಕೆಂದರೆ, ಅದರದು ಅಷ್ಟು ಆಳ, ವಿಶಾಲ. ಸಮುದ್ರವು ಎಲ್ಲ ನದಿಗಳ ನೀರನ್ನು ತನ್ನೊಳಗೆ
ಅಡಗಿಸಿಕೊಳ್ಳುತ್ತ ಉಬ್ಬಿ ಅಲೆಯುತ್ತದೆ.

ಸಮುದ್ರಕ್ಕೆ ಕೇಳಿದೆ- ‘ನೀನು ಇಷ್ಟೊಂದು ವಿಶಾಲವಾಗಿರುವೆ. ನಿನ್ನ ಆಳ ಅದೆಷ್ಟು ಗಹನವಾದುದು. ಎಲ್ಲ ನದಿಗಳ ನೀರನ್ನು ನಿನ್ನೊಳಗೆ ಗರ್ಭೀಕರಿಸಿಕೊಳ್ಳುವ ನೀನು, ಶ್ರೀಸಾಮಾನ್ಯನಿಗೆ ಅದೆಷ್ಟು ಉಪಕಾರಿ? ಹಲವು ದೇಶಗಳ, ಕೆಲವು ದೊರೆಗಳ ಮತ್ತು ಧಣಿಗಳ ಹಡಗುಗಳು ಹೋಗಲು ಬರಲು ಮಾತ್ರ ಅವಕಾಶ ಮಾಡಿಕೊಟ್ಟಿರುವೆ. ಮೀನುಗಾರರಿಗೆ ಒಂದಷ್ಟು ಆಧಾರವಾಗಿರುವೆ. ನಿನ್ನೊಳಗೆ ಲೆಕ್ಕವಿಲ್ಲದಷ್ಟು ಜಲಚರಗಳು. ಇಷ್ಟು ಹೊರತುಪಡಿಸಿದರೆ ನೀನೆಷ್ಟು ಪ್ರಯೋಜನಕಾರಿ?’ ಹೀಗೆ ಸಮುದ್ರದ ಸ್ವಾಭಿಮಾನವನ್ನು ಕೆಣಕುತ್ತ ನದಿ ಅಥವಾ ಹೊಳೆಯೊಂದರ ಉದಾಹರಣೆಯನ್ನು ಕೊಡುತ್ತ ಹೋದೆ.

‘ನೋಡು, ಆ ಹೊಳೆಯು ತನ್ನ ಉಗಮದಿಂದ ಹಿಡಿದು ನಿನ್ನನ್ನು ಸೇರುವವರೆಗೂ ಜುಳುಜುಳು ಹರಿಯುತ್ತ ಪ್ರಾಣಿ-ಪಕ್ಷಿಗಳಿಗೆ ಆಶ್ರಯವನ್ನು ಕೊಡುತ್ತ, ಅವುಗಳಿಗೆ ನೀರನ್ನು ಉಣಿಸುತ್ತ ಸಾಗುತ್ತದೆ. ಮಾತ್ರವಲ್ಲದೆ, ಅದೆಷ್ಟೋ ಹೊಲಗದ್ದೆಗಳನ್ನು ತೋಯಿಸುತ್ತ ಮಾನವನ ಹೊಟ್ಟೆಯನ್ನು ತುಂಬಿಸುತ್ತದೆ. ಹೊಳೆಯ ನೀರು ಎಲ್ಲ ದೃಷ್ಟಿಯಿಂದಲೂ ಸರ್ವೋಪಯೋಗಿ. ನಿನ್ನ ನೀರನ್ನು ಗುಬ್ಬಿಯು ಸಹ ಕುಡಿಯುವುದಿಲ್ಲ’. ನನ್ನ ಸಮರ್ಥನೆಗೆ ಇಷ್ಟು ಸಾಕು.

ಒಂದು ದಿನ ಜೋರಾಗಿ ಹರಿದು ನಿಧಾನವಾಗಿ ಸಮುದ್ರವನ್ನು ಸೇರುವಂತೆ, ಚಿಕ್ಕದಾಗಿ ಆರಂಭವಾಗುವ ಸಿದ್ಧಾಂತಗಳು ಆಯಾ ಧರ್ಮಗಳ ದಾರ್ಶನಿಕರ ಪ್ರಯತ್ನದಿಂದಾಗಿ ಜಾಗತಿಕ ಧರ್ಮಗಳಾಗಿ ಮಾರ್ಪಟ್ಟಿವೆ. ನಾನು ಪ್ರತಿನಿಧಿಸುವಂತಹ ಸಿದ್ಧಾಂತವು ಒಂದು ಹೊಳೆಯಂತೆ ಜೀವಸಂಕುಲವನ್ನು ತಣಿಸುತ್ತ ಹೋಗುತ್ತದೆ. ಒಂದು ಕ್ರಾಂತಿ ಆಧಾರಿತ ಸಿದ್ಧಾಂತವು ಜಾಗತಿಕ ಮಟ್ಟದಲ್ಲಿ ಗುರುತಿಸಲಾಗದಿದ್ದರೂ ಜಾಗತಿಕ ಧರ್ಮ ಅನಿಸಿಕೊಳ್ಳುವ ಎಲ್ಲ ಅರ್ಹತೆಗಳು ಅದಕ್ಕಿವೆ. ಹೀಗಿರುವಾಗ ಕೀಳರಿಮೆಗೆ ಯಾಕೆ ಒಳಗಾಗಬೇಕು?

ದೊಡ್ಡ ನದಿಗಳು ಸಮುದ್ರವನ್ನು ಸೇರುತ್ತ ತೃಪ್ತಿಪಟ್ಟುಕೊಂಡರೆ, ಒಂದು ಹೊಳೆಯು ನಿತ್ಯೋಪಯೋಗಿ ಆಗುತ್ತ ಧನ್ಯತೆಯನ್ನು ಅನುಭವಿಸುತ್ತದೆ. ಶರಣ ಅಥವಾ ಬಸವ ಸಿದ್ಧಾಂತವು ಹೊಳೆಯಂತೆ ಅಥವಾ ನದಿಯಂತೆ. ನಾವುಗಳು ಅಂಥ ಕ್ರಾಂತಿ ಗಂಗೋತ್ರಿಗೆ ಸೇರಿದವರು. ಬಸವಾದಿ ಶರಣರು ನಡೆಸಿದಂತಹ ಕ್ರಾಂತಿ. ನದಿಯೊಂದು ಸಮುದ್ರವನ್ನು ಸೇರುತ್ತಲೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಹೊಳೆಯು ಸಮುದ್ರವನ್ನು ಸೇರದೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ.

ಜಾಗತಿಕ ಧರ್ಮದ ಜೊತೆಯಲ್ಲಿ ಗುರುತಿಸಿಕೊಳ್ಳಲು ಬಹುತೇಕರು ಹಾತೊರೆಯುತ್ತಾರೆ. ಅಸ್ತಿತ್ವವನ್ನು ತೋರಿಸಲು ಜಾಗತಿಕ ಮಟ್ಟದ ಧರ್ಮವೇ ಆಗಬೇಕೆಂದು ಅನಿಸುವುದಿಲ್ಲ. ಕ್ರಾಂತಿಯ ಹಿನ್ನೆಲೆ ಸಾಕು. ಅಷ್ಟರಿಂದಲೇ ಅಸ್ತಿತ್ವವನ್ನು ಉಳಿಸಿಕೊಳ್ಳಬಹುದು; ಬೇರೆಯವರನ್ನು ಉಳಿಸಬಹುದು.

ಜಾಗತಿಕ ಧರ್ಮಗಳು ಜಗತ್ತಿನಾದ್ಯಂತ ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿವೆ. ಹೋರಾಡಲಿ. ವಿರಳಾತಿವಿರಳವಾದ ಬಸವತತ್ವವು ರಾಜ್ಯ ಮತ್ತು ರಾಷ್ಟ್ರವನ್ನು ದಾಟಿ ಹೊರರಾಷ್ಟ್ರಗಳಿಗೆ ತಲುಪಬೇಕು. ಬಸವಣ್ಣ ಮತ್ತವರ ಸಮಕಾಲೀನ ಶರಣರ ಮಾನವೀಯತೆ ಹಾಗೂ ಸಮಾನತೆಗಾಗಿ ನಡೆಸಿದ ಹೋರಾಟವನ್ನು ಜನ ಅರಿಯುವಂತಾಗಬೇಕು. ಅಸಂಖ್ಯಾತ ಹೃದಯಗಳನ್ನು ಬಡಿದೆಬ್ಬಿಸುವ ಶಕ್ತಿಯು ಶರಣರ ಕ್ರಾಂತಿಗಿದೆ. ಜಗತ್ತಿನಲ್ಲಿ ಶೋಷಣೆ, ಅಸಮಾನತೆ ಮತ್ತು ಅಸ್ಪ‍ೃಶ್ಯತೆ ಎನ್ನುವ ಶಬ್ದಗಳು ಕೇಳಿಬರುವವರೆಗೂ ಕ್ರಾಂತಿಗಳು ಪ್ರಸ್ತುತ. ಹೌದು, ನಾವೊಂದು ಕ್ರಾಂತಿಯಾಗಬೇಕು, ನಾವೊಂದು ಪಥವಾಗಬೇಕು, ನಾವು ಚಲನಶೀಲ ಆಗಬೇಕು, ನಾವು ಕ್ರಿಯಾಶೀಲ ಆಗಬೇಕು.

ಹೊಟ್ಟೆ ತುಂಬಿದವರು ಶಾಂತಿ ಶಾಂತಿಯೆಂದು ಜಪಿಸುತ್ತಾರೆ. ಅಂಥವರು ಮಾತೆತ್ತಿದರೆ ಟೆನ್ಶನ್ ಎನ್ನುತ್ತಾರೆ. ಎಮೋಷನ್‍ಗೆ ಒಳಗಾಗುತ್ತಾರೆ. ಪ್ರೆಶರ್... ಪ್ರೆಶರ್... ಎಂದು ಪರಿತಪಿಸುತ್ತಾರೆ. ಬಹಿರಂಗದ ಬದುಕನ್ನು ರಣರಂಗವಾಗಿಸಿಕೊಂಡು ಅಂತರಂಗದಲ್ಲಿ ಶಾಂತಿಗೆ ಭಂಗ ತಂದುಕೊಳ್ಳುತ್ತಾರೆ. ತಮ್ಮ ಬದುಕಿನ ಸಮಸ್ಯೆಗಳೇ ತಮಗೆ ಭಾರವಾಗಿರುವಾಗ ಸಮಾಜವನ್ನು, ನೆರೆಹೊರೆಯವರನ್ನು, ಅನಾಥರನ್ನು, ದುಃಖಿತರನ್ನು, ಶೋಷಿತರನ್ನು ಎಲ್ಲಿ ನೋಡುತ್ತಾರೆ?

ಜಗತ್ತಿನಲ್ಲಿ ಅದೆಷ್ಟೋ ಹೋರಾಟಗಳು ನಡೆದಿವೆ. ಪರಿವರ್ತನಾಮುಖಿ ಕ್ರಾಂತಿಗಳು ನಡೆಯುತ್ತಲೇ ಇವೆ. ಅವು ನಿರಂತರ. ಜಾಗತಿಕ ಧರ್ಮದ ಪಟ್ಟಿಯಲ್ಲಿ ಇವುಗಳಿಗೆ ಸ್ಥಾನ ಇಲ್ಲದಿರಬಹುದು. ಆದರೆ ಹೋರಾಟಗಳೇ ಇಲ್ಲವೆಂದು ಹೇಳಲು ಬರುವುದಿಲ್ಲ. ಹೋರಾಟಗಳು ಮಾನವ ಬದುಕಿನಲ್ಲಿ ಸ್ವಂತಿಕೆಯನ್ನು ಮೂಡಿಸುತ್ತವೆ. ಸ್ವತಂತ್ರ ವಿವೇಚನೆಯನ್ನು ಜಾಗೃತಗೊಳಿಸುತ್ತವೆ. ತನ್ಮೂಲಕ ಸ್ವಾಭಿಮಾನಪೂರ್ಣವಾದ ಬದುಕನ್ನು ಕಟ್ಟಿಕೊಡುತ್ತವೆ.

ಬಸವಧರ್ಮವು ಕ್ರಾಂತಿಯೂ ಹೌದು; ಒಂದು ಸಿದ್ಧಾಂತವೂ ಹೌದು. ಧರ್ಮವು ಅನೇಕ ಸಲ ಕ್ರಾಂತಿಯಾಗದಿರಬಹುದು; ಇಲ್ಲಿ ಕ್ರಾಂತಿಯು ಧರ್ಮವಾಗಿದೆ; ಸಿದ್ಧಾಂತವಾಗಿದೆ. ಧರ್ಮವನ್ನು ಒಂದು ಪದ್ಧತಿಯಂತೆ ಆಚರಿಸಿದರೆ ಬದುಕಿಗೆ ಬೇಕಾದ ಸ್ಫೂರ್ತಿ ಎಲ್ಲಿಂದ ಬರಬೇಕು? ಬದುಕನ್ನು ನಿರಂತರ ಕ್ರಿಯೆಗೆ ಒಡ್ಡಿಕೊಂಡಾಗ ಸ್ಫೂರ್ತಿಯ ಸೆಲೆ ಸದಾ ಚಿಮ್ಮುತ್ತ ಹೋಗುತ್ತದೆ. ಕ್ರಾಂತಿಯು ಮತ್ತೆಮತ್ತೆ ಹೊಸಹೊಸ ವಿಚಾರಗಳಿಗೆ, ಹೊಸ ಅನ್ವೇಷಣೆಗೆ ನಮ್ಮನ್ನು ತೊಡಗಿಸುತ್ತದೆ.

–ಡಾ. ಶಿವಮೂರ್ತಿ ಮುರುಘಾ ಶರಣರು
–ಡಾ. ಶಿವಮೂರ್ತಿ ಮುರುಘಾ ಶರಣರು

ಧರ್ಮವು ಮತಾಂಧತೆಗೆ ಒಳಗಾಗಬಾರದು. ಜಾಗತಿಕ ಧರ್ಮಗಳು ಜಗತ್ತಿನಾದ್ಯಂತ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತವೆ. ಎಲ್ಲೆಡೆ ಅವುಗಳ ಪ್ರಭಾವ. ಧರ್ಮಗಳ ಹಿಡಿತದಿಂದಾಗಿ, ಸಣ್ಣಪುಟ್ಟ ಕ್ರಾಂತಿಗಳು ಗೌಣ ಆಗುತ್ತವೆ. ಧರ್ಮವು ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಾಗುತ್ತದೆ. ಕ್ರಾಂತಿಯು ಇತಿಹಾಸವನ್ನು ಸೇರುತ್ತದೆ. ಏಕೆಂದರೆ, ಕ್ರಾಂತಿಯು ಇತಿಹಾಸವನ್ನು ನಿರ್ಮಿಸುತ್ತದೆ. ಧರ್ಮಗಳು ಸಂಪ್ರದಾಯಗಳಾಗಿ ಮಾರ್ಪಡುವುದರಿಂದ ಕ್ರಾಂತಿಯನ್ನು ಹುಟ್ಟುಹಾಕುವ ಗೋಜಿಗೆ ಹೋಗಲಾರವು. ಆಯಾ ದಾರ್ಶನಿಕರು ಪ್ರತಿಪಾದಿಸಿದ ವಿಚಾರಗಳು ಬಳಿಕ ಧರ್ಮದ ಸ್ವರೂಪವನ್ನು ಪಡೆದುಕೊಳ್ಳುತ್ತವೆ.

ಹೆಮ್ಮೆಯಿಂದ ನಾವು ಹೇಳೋಣ- ಸಂಪ್ರದಾಯವಾದಕ್ಕೆ ಸೇರಿದವರು ನಾವಲ್ಲ; ಪರಿವರ್ತನಾಪರವಾದ ಕ್ರಾಂತಿಗೆ ಸೇರಿದವರು ನಾವು ಎಂದು. ಬಸವಾದಿ ಶರಣರ ತತ್ವಗಳೇ ಇಲ್ಲಿ ಸಂವಿಧಾನ. ಇದಕ್ಕೆ ಪೂರಕವಾಗಿವೆ ಬಾಬಾಸಾಹೇಬ್ ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನದ ಆಶಯಗಳು.

ನಾವೆಂದಿಗೂ ಕೀಳರಿಮೆಯಿಂದ ಬಳಲಬಾರದು. ಏಕೆಂದರೆ, ಕ್ರಾಂತಿಯೊಂದಕ್ಕೆ ಕೀಳರಿಮೆ-ಮೇಲರಿಮೆಯನ್ನು ಕಿತ್ತುಹಾಕುವ ಶಕ್ತಿಯಿದೆ. ಶೋಷಣೆಯನ್ನು ವಿಮೋಚಿಸಲೆಂದೇ ಶರಣರು ಬಸವತತ್ವವೆಂಬ ಹರಿತವಾದ ಖಡ್ಗವನ್ನು ಕೊಟ್ಟಿದ್ದಾರೆ.

110 ವರ್ಷಗಳ ಹಿಂದೆ ದಾವಣಗೆರೆ ವಿರಕ್ತಮಠದ ಪೂಜ್ಯ ಮೃತ್ಯುಂಜಯಪ್ಪಗಳು ಮತ್ತು ಹರ್ಡೇಕರ್ ಮಂಜಪ್ಪನವರು ಕೂಡಿಕೊಂಡು ಜಯದೇವ ಶ್ರೀಗಳ ಆಶಯದಂತೆ ಬಸವ ಜಯಂತಿ ಆಚರಣೆಗೆ ಚಾಲನೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT