ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಮತಾಂಧತೆ ಮತ್ತು ಸೆಕ್ಯುಲರಿಸ್ಟರ ಮೌನ

‘ಸರ್ವಧರ್ಮ ಸಮಭಾವ’ ತತ್ವದ ಪಾಲನೆಯಲ್ಲಿ ಪಕ್ಷಪಾತ ಬೇಡ
Last Updated 27 ಮೇ 2022, 19:30 IST
ಅಕ್ಷರ ಗಾತ್ರ

ಇಂದು ಕರ್ನಾಟಕ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ವಿಷವನ್ನು ಪಸರಿಸಲಾಗುತ್ತಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಿಯಂತ್ರಿಸದೇ ಇರುವುದು ವಿಷಾದಕರ ಹಾಗೂ ನಿಂದನೀಯ. ಆದರೆ ಮುಖ್ಯ ಪ್ರಶ್ನೆಯೆಂದರೆ, ಹಿಂದೂ ಸಮಾಜದ ಒಂದು ದೊಡ್ಡ ವರ್ಗವು ಮುಸ್ಲಿಂ ವಿರೋಧಿ ಪ್ರಚಾರದಿಂದ ಪ್ರಭಾವಿತಗೊಂಡಿದ್ದೇಕೆ? ಇದು ಒಮ್ಮೆಲೇ ನಡೆದ ಬದಲಾವಣೆಯಲ್ಲ. ಇದಕ್ಕೆ ಹಲವು ಕಾರಣಗಳಿವೆ. ಇವುಗಳಲ್ಲಿ ಮುಸ್ಲಿಂ ಧರ್ಮಾಂಧತೆಯ ಬಗ್ಗೆ ಸೆಕ್ಯುಲರಿಸ್ಟರಮೌನವೂ ಒಂದು ಕಾರಣವಿದ್ದೀತೆ? ಇತ್ತೀಚಿನ ಒಂದು ಘಟನೆ ಇಂತಹ ಪ್ರಶ್ನೆಗೆ ಇಂಬು ನೀಡುತ್ತದೆ.

ಸಿಖ್ ಪಂಥದ ಒಂಬತ್ತನೇ ಗುರುಗಳಾದ ತೇಗ್ ಬಹದ್ದೂರ್‌ ಅವರ 400ನೇ ಜನ್ಮೋತ್ಸವವನ್ನು ನವದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿಏ. 21ರಂದು ಪ್ರಧಾನಿ ಮೋದಿ ಅವರ ಸಾನ್ನಿಧ್ಯದಲ್ಲಿ ಆಚರಿಸಲಾಯಿತು. 1675ರಲ್ಲಿ ಮೊಘಲ್ ಸಾಮ್ರಾಟ ಔರಂಗಜೇಬ್‌ನ ಆಜ್ಞೆಯ ಮೇರೆಗೆ ತೇಗ್ ಬಹದ್ದೂರ್‌ ಅವರ ಶಿರಚ್ಛೇದ ಮಾಡಲಾಯಿತು. ‘ಇಸ್ಲಾಂ ಧರ್ಮವನ್ನು ಸ್ವೀಕರಿಸು ಇಲ್ಲವೇ ಮೃತ್ಯುವನ್ನು ಎದುರಿಸು’ ಎಂದು ಹೇಳಿದಾಗ, ಅವರು ತಮ್ಮ ಪಂಥಕ್ಕಾಗಿ ಹುತಾತ್ಮರಾಗುವುದನ್ನು ಆಯ್ದುಕೊಂಡರು. ಈ ಆಧುನಿಕ ಯುಗದಲ್ಲಿ ಇರಾಕ್ ಮತ್ತಿತರ ರಾಷ್ಟ್ರಗಳಲ್ಲಿ ಇಸ್ಲಾಮಿಕ್ ಸ್ಟೇಟ್ (ಐ.ಎಸ್‌) ಭಯೋತ್ಪಾದಕ ಸಂಘಟನೆಯು ಈ ರೀತಿ ತಮ್ಮ ವಿರೋಧಿಗಳ ಶಿರಚ್ಛೇದ ನಡೆಸಿದ ಸುದ್ದಿಗಳನ್ನು ನಾವು ಓದಿದ್ದೇವೆ. ಆದರೆ ಮೊಘಲ್ ಇತಿಹಾಸದಲ್ಲಿ ಕೂಡ ಇಂತಹ ದೃಷ್ಟಾಂತಗಳಿವೆ.

1659ರಲ್ಲಿ ಔರಂಗಜೇಬ್‌ ತನ್ನ ಸಹೋದರ ದಾರಾ ಶಿಕೋನನ್ನು ಅವನ ಭಯಭೀತನಾದ ಮಗನ ಕಣ್ಣೆದುರಿಗೇ ಶಿರಚ್ಛೇದಗೊಳಿಸಿದ. ಇದಕ್ಕೆ ದಾರಾ ತನ್ನ ಸಿಂಹಾಸನಕ್ಕೆ ಪ್ರತಿಸ್ಪರ್ಧಿ ಎಂದು ಔರಂಗಜೇಬ್‌ ತಿಳಿದಿದ್ದುದೊಂದೇ ಕಾರಣವಾಗಿರಲಿಲ್ಲ. ಧಾರ್ಮಿಕ ಅಸಹಿಷ್ಣುತೆಯೂ ಒಂದು ಪ್ರಮುಖ ಕಾರಣವಾಗಿತ್ತು. ದಾರಾ ಹಿಂದೂ- ಮುಸ್ಲಿಂ ಸೌಹಾರ್ದಕ್ಕಾಗಿ ಪ್ರಯತ್ನಿಸುತ್ತಿದ್ದ ಒಬ್ಬ ಚಿಂತಕನಾಗಿದ್ದ. ‘ಮಜಮಾ- ಉಲ್- ಬಹರೈನ್’ (ಎರಡು ಸಮುದ್ರಗಳ ಸಂಗಮ) ಎಂಬ ಶೀರ್ಷಿಕೆಯ ತನ್ನ ಪುಸ್ತಕದಲ್ಲಿ ಅವನು ಸೂಫಿಸಂ ಮತ್ತು ಉಪನಿಷತ್‌ಗಳಲ್ಲಿಯ ಸಾಮ್ಯತೆಯನ್ನು ಎತ್ತಿ ತೋರಿಸಿದ್ದ. ಮೂಲಭೂತವಾದಿ ಇಸ್ಲಾಂನಲ್ಲಿ ನಂಬಿಕೆ ಹೊಂದಿದ್ದ ಔರಂಗಜೇಬ್‌ ಇದರಿಂದ ಕ್ರೋಧಗೊಂಡು ದಾರಾ ಶಿಕೋನಿಗೆ ಮರಣದಂಡನೆ ವಿಧಿಸಿದ. ಔರಂಗಜೇಬ್‌ನ ಅಜ್ಜನಾದ ಸಾಮ್ರಾಟ ಜಹಾಂಗೀರ್‌ ಸಹ, ಮತೀಯ ಭಾವೈಕ್ಯದ ಪ್ರೋತ್ಸಾಹಕರಾಗಿದ್ದ ಸಿಖ್ ಪಂಥದ ಐದನೇ ಗುರು ಅರ್ಜನದೇವ ಅವರನ್ನು 1606ರಲ್ಲಿ ಚಿತ್ರಹಿಂಸೆ ನೀಡಿ ಕೊಂದುಹಾಕಿದ್ದ.

ಮೋದಿ ಅವರು ತಮ್ಮ ಭಾಷಣದಲ್ಲಿ ‘ಔರಂಗಜೇಬ್‌ನಂಥ ಕ್ರೂರ ರಾಜರು ಅನೇಕರ ತಲೆ ಕಡಿದುಹಾಕಿದರೂ ನಮ್ಮ ಜನರ ಧಾರ್ಮಿಕ ವಿಶ್ವಾಸವನ್ನು ಕಡಿದುಹಾಕಲು ಅವರಿಗೆ ಸಾಧ್ಯವಾಗಲಿಲ್ಲ’ ಎಂದು ಹೇಳಿದರು. ಈ ಕಾರ್ಯಕ್ರಮದ ನಂತರ, ಬಹುಸಂಖ್ಯೆಯ ಸೆಕ್ಯುಲರ್‌ವಾದಿಗಳು ‘400 ವರ್ಷಗಳ ಹಿಂದಿನ ಘಟನೆಗಳನ್ನು ಮೋದಿ ಈಗೇಕೆ ಕೆದಕಿ ನೆನಪಿಸುತ್ತಿದ್ದಾರೆ?’ ಎಂದು ಟ್ವಿಟರ್‌ ಮೂಲಕ ಟೀಕಿಸಿದರು. ಗುರು ತೇಗ್ ಬಹದ್ದೂರ್‌ ಅವರ ಜಯಂತಿ ಉತ್ಸವವನ್ನು ಕೆಂಪುಕೋಟೆಯಲ್ಲಿ ಏರ್ಪಡಿಸಿದುದರ ಹಿಂದೆ ರಾಜಕೀಯ ಉದ್ದೇಶ ಇತ್ತು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಸೆಕ್ಯುಲರ್‌ವಾದಿಗಳ ಪ್ರತಿಕ್ರಿಯೆ ನೋಡಿದರೆ, ಇತಿಹಾಸದಲ್ಲಿ ನಡೆದ ಮುಸ್ಲಿಂ ಧರ್ಮಾಂಧತೆಯ ಅನ್ಯಾಯ- ಕ್ರೌರ್ಯಗಳನ್ನು ಅವರು ಬಹುತೇಕ ಅಲ್ಲಗಳೆಯುತ್ತಾರೆ ಅಥವಾ ಈ ಸಂಬಂಧವಾಗಿ ಮೌನ ವಹಿಸುವ ನಿಲುವು ತಳೆಯುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ಹಲವು ಉದಾಹರಣೆಗಳಿವೆ.

ಮಧ್ಯಯುಗದಲ್ಲಿ ಮುಸ್ಲಿಂ ಧರ್ಮಾಂಧ ರಾಜರು ಹಿಂದೂ ಮಂದಿರ-ವಿಗ್ರಹಗಳನ್ನು ಧ್ವಂಸಗೊಳಿಸಿದ ಘಟನೆಗಳ ಅರಿವು ಸಾಮಾನ್ಯವಾಗಿ ಎಲ್ಲ ಜಾತಿಗಳ ಹಿಂದೂಗಳಲ್ಲಿದೆ. ಆದರೆ ಬಹುತೇಕ ಸೆಕ್ಯುಲರ್‌ವಾದಿಗಳು ಇಂಥ ಪ್ರಸಂಗಗಳನ್ನು ಮುಚ್ಚುಮರೆ ಮಾಡುತ್ತಾರೆ ಇಲ್ಲವೇ ಇವುಗಳ ಹಿಂದೆ ಧಾರ್ಮಿಕ ಉದ್ದೇಶ ಇರಲಿಲ್ಲ ಎಂದು ಹೇಳುತ್ತಾರೆ. ಇದು ಮೋಸದ ಮಾತು. 2001ರಲ್ಲಿ, ಅಂದರೆ ಸೆಟಲೈಟ್‌ ಟೆಲಿವಿಷನ್ ಯುಗದಲ್ಲಿ, ಅಫ್ಗಾನಿಸ್ತಾನದ ತಾಲಿಬಾನೀಯರು ಜಗತ್ತಿನಲ್ಲೇ ಅತಿ ದೊಡ್ಡದಾದ ಬಾಮಿಯಾನ್‌ ಬುದ್ಧನ ಮೂರ್ತಿಯನ್ನು ಅದೊಂದು ‘ಕಾಫೀರರ ದೇವರು’ ಎಂದು ಹೇಳಿ ಧ್ವಂಸಗೊಳಿಸಿದ್ದು ಎಲ್ಲರಿಗೂ ತಿಳಿದಿದೆ. ವಸ್ತುಸ್ಥಿತಿ ಹೀಗಿರುವಾಗ, ಹಲವು ಶತಮಾನಗಳ ಹಿಂದೆ ಮತಾಂಧ ಮುಸ್ಲಿಂ ರಾಜರು ಭಾರತದಲ್ಲಿ ಹೀಗೆ ಮಾಡಲಿಲ್ಲ ಎಂದರೆ ನಂಬಲು ಸಾಧ್ಯವೇ? ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಇಂದಿಗೂ ಮುಸ್ಲಿಮೇತರರ ಬಲವಂತದ ಮತಾಂತರ ನಡೆಯುತ್ತಿದೆ. ಹೀಗಿರುವಾಗ, ಮಧ್ಯಯುಗದಲ್ಲಿ ಇಂತಹ ಕಾರ್ಯ ನಡೆಯಲಿಲ್ಲ ಎಂಬ ನಿಲುವು ತರ್ಕಹೀನ.

ಇಸ್ಲಾಂ ಹೆಸರಿನಲ್ಲಿ ಹಿಂದೆ ನಡೆದ ಇಂಥ ಹಿಂಸಾತ್ಮಕ ಘಟನೆಗಳಿಗಾಗಿ ಇಂದಿನ ಮುಸ್ಲಿಂ ಬಾಂಧವರನ್ನು ದೂಷಿಸುವುದು, ದ್ವೇಷಿಸುವುದು ನಿಸ್ಸಂಶಯವಾಗಿಯೂ ತಪ್ಪು. ಅದು ಅಪರಾಧ. ಆದರೆ ಇಂಥ ಘಟನೆಗಳನ್ನು ನಿರಾಕರಿಸುವುದೂ ತಪ್ಪಲ್ಲವೇ? ಇತಿಹಾಸದಲ್ಲಿ ನಡೆದ ದೌರ್ಜನ್ಯಗಳು ಜನರ ಸಾಮೂಹಿಕ ಸ್ಮರಣೆಯಲ್ಲಿ ಮನೆಮಾಡಿಕೊಂಡು ಇದ್ದೇ ಇರುತ್ತವೆ. ಅವುಗಳನ್ನು ಹತ್ತಿಕ್ಕಲು ಪ್ರಯತ್ನಿಸಿದರೆ ಪರಿಣಾಮ ಕೆಟ್ಟದ್ದಾಗುತ್ತದೆ. ಪ್ರಾಮಾಣಿಕ ಆತ್ಮವಿಮರ್ಶೆ, ಮುಕ್ತ ಸಂವಾದ ಹಾಗೂ ಸಹಬಾಳ್ವೆಯಿಂದ ಮಾತ್ರ ಸಾಮಾಜಿಕ ಸಾಮರಸ್ಯ ಸಾಧ್ಯ.

ಹಿಂದೂ ಸಮಾಜದಲ್ಲಿನ ಅಸ್ಪೃಶ್ಯತೆ, ಜಾತೀಯತೆಯಂತಹ ಅನ್ಯಾಯಗಳ ವಿರುದ್ಧ ಸೆಕ್ಯುಲರ್‌ವಾದಿಗಳ ಹೋರಾಟ ಉಚಿತವೂ ಹೌದು, ಅವಶ್ಯಕವೂ ಹೌದು. ಆದರೆ ಮುಸ್ಲಿಮರಲ್ಲಿ ಅವಶ್ಯಕವೆನಿಸುವ ಸಾಮಾಜಿಕ ಸುಧಾರಣೆಗಳ ಬಗ್ಗೆ ಅವರು ಹೆಚ್ಚು ಮಾತನಾಡುವುದಿಲ್ಲ. ಈ ಬಗ್ಗೆ ಮುಸ್ಲಿಂ ಚಿಂತಕರು, ನಾಯಕರು ಕೂಡ ಹೆಚ್ಚಾಗಿ ಕಾರ್ಯಪ್ರವೃತ್ತರಾಗುವುದಿಲ್ಲ. ತ್ರಿವಳಿ ತಲಾಕ್ ವಿರುದ್ಧ ಕಾನೂನು ಬೇಕು ಎಂದು ಕೆಲವು ಮುಸ್ಲಿಂ ಮಹಿಳಾ ಸಂಘಟನೆಗಳು ಹೋರಾಡುತ್ತಿದ್ದವು. ಈ ಬೇಡಿಕೆಗೆ ಹಾಗೂ 2019ರಲ್ಲಿ ಮೋದಿ ನೇತೃತ್ವದ ಸರ್ಕಾರವು ಈ ಸಂಬಂಧ ತಂದ ಕಾನೂನಿಗೆ ಸೆಕ್ಯುಲರ್‌ ಎಂದು ಬಿಂಬಿಸಿಕೊಳ್ಳುತ್ತಿರುವ ಪಕ್ಷಗಳು ಮತ್ತು ಮುಸ್ಲಿಂ ಮುಖಂಡರು ಹೆಚ್ಚು ಬೆಂಬಲ ನೀಡಲಿಲ್ಲ. 1985ರ ಶಾಬಾನು ಪ್ರಕರಣದಲ್ಲಿ ರಾಜೀವ್‌ ಗಾಂಧಿ ನೇತೃತ್ವದ ಸರ್ಕಾರವು ಮುಸ್ಲಿಂ ಸಂಘಟನೆಗಳ ಪ್ರತಿಭಟನೆಯ ಎದುರು ಶರಣಾದದ್ದನ್ನು (ಲೋಕಸಭೆಯಲ್ಲಿ 415 ಸದಸ್ಯರ ಬೆಂಬಲವಿದ್ದರೂ) ಮರೆಯಲಾಗದು. ಇದರಿಂದಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿಯು ‘ಮುಸ್ಲಿಂ ತುಷ್ಟೀಕರಣ’ದ ಆಪಾದನೆ ಮಾಡಿ, ಹಿಂದೂ ಸಮಾಜದ ಮಾನಸಿಕತೆಯನ್ನು ತನ್ನ ಪರವಾಗಿ ಬದಲಾಯಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಇಂದು ಬಿಜೆಪಿಯೇ ಹಿಂದೂ ತುಷ್ಟೀಕರಣದ ನೀತಿಯನ್ನು ಯಾವುದೇ ಹಿಂಜರಿಕೆಯಿಲ್ಲದೆ ಅನುಸರಿಸುತ್ತಿದ್ದರೂ ಅದನ್ನು ಹಿಂದೂ ಸಮಾಜ ಪ್ರಖರವಾಗಿ ವಿರೋಧಿಸುತ್ತಿಲ್ಲ ಎಂಬುದು ಶೋಚನೀಯ.

ಇದಕ್ಕೊಂದು ಕಾರಣವೂ ಇದೆ. ಭಾರತದ ಸೆಕ್ಯುಲರ್‌ ಸಂವಿಧಾನ ಎಲ್ಲ ಧರ್ಮಗಳಿಗೆ ಸಮಾನ ಹಕ್ಕು- ಅಧಿಕಾರಗಳನ್ನು ನೀಡಿದೆ. ಆದರೆ ಮುಸ್ಲಿಂ ಬಹುಸಂಖ್ಯಾತರಾಗಿರುವ ಅನೇಕ ದೇಶಗಳಲ್ಲಿ ಅಲ್ಪಸಂಖ್ಯಾತರಿಗೆ ಇಂಥ ಸಮಾನ ಸಾಂವಿಧಾನಿಕ ರಕ್ಷಣೆಯಿಲ್ಲ. ಇಷ್ಟೇ ಅಲ್ಲ, ‘ಸೆಕ್ಯುಲರಿಸಂ ಎಂಬುದು ಇಸ್ಲಾಂ ವಿರೋಧಿ’ ಎಂಬ ನಂಬಿಕೆಯೂ ಅಲ್ಲಿ ಗಟ್ಟಿಯಾಗಿ ಬೇರೂರಿದೆ. ತತ್ಪರಿಣಾಮವಾಗಿ ‘ಸೆಕ್ಯುಲರಿಸಂ ಎಂಬುದು ಹಿಂದೂ ವಿರೋಧಿ’ ಎಂಬ ಅಪಪ್ರಚಾರವನ್ನೂ ಹಿಂದುತ್ವ ಸಂಘಟನೆಗಳು ಈಗ ಮಾಡುತ್ತಿವೆ.

ಸರ್ವಧರ್ಮ ಸಮಭಾವವು ನಮ್ಮ ಸಂಸ್ಕೃತಿಯ ಉಸಿರು ಮತ್ತು ನಮ್ಮ ಸಂವಿಧಾನದ ಪ್ರಾಣತತ್ವ. ಅದನ್ನು ತ್ಯಜಿಸಿದರೆ ಭಾರತದ ರಾಷ್ಟ್ರೀಯ ಏಕತೆ ಹಾಗೂ ಸಾಮಾಜಿಕ ಶಾಂತಿಗೆ ಗಂಡಾಂತರ ಉಂಟಾಗುತ್ತದೆ. ಇಂದು ನಮ್ಮ ದೇಶದ ಮುಸ್ಲಿಂ ಸಮುದಾಯ ಹಿಂದೆಂದೂ ಅನುಭವಿಸದ ಭೇದಭಾವ, ದ್ವೇಷ ಮತ್ತು ಅಸುರಕ್ಷತೆಗೆ ಗುರಿಯಾಗಿದೆ. ದೇಶದ ಆಡಳಿತಾರೂಢ ಪಕ್ಷದಲ್ಲಿ ಸಂವಿಧಾನದ ಕುರಿತು ಬದ್ಧತೆಯ ಅಭಾವ ಇರುವುದು ಮತ್ತು ಬಹುಸಂಖ್ಯಾತ ಹಿಂದೂಗಳಲ್ಲಿ ಸೆಕ್ಯುಲರಿಸಂ ಬಗ್ಗೆ ಅವಿಶ್ವಾಸ ಮೂಡತೊಡಗಿರುವುದು ಇದಕ್ಕೆಪ್ರಮುಖ ಕಾರಣಗಳು. ಈ ಅವಿಶ್ವಾಸವನ್ನು ಮೋದಿ ನೇತೃತ್ವದ ಸರ್ಕಾರ ತನ್ನ ರಾಜಕೀಯ ಲಾಭಕ್ಕಾಗಿ ಬೆಳೆಸುತ್ತಿದೆ. ಇದನ್ನು ಸರಿಪಡಿಸಬೇಕಾದರೆ ಸೆಕ್ಯುಲರ್‌ವಾದಿಗಳು ಸತ್ಯನಿಷ್ಠರಾಗಬೇಕು ಹಾಗೂ ತಮ್ಮ ಪಕ್ಷಪಾತತನದ ನಿಲುವನ್ನು ಬಿಟ್ಟುಕೊಟ್ಟು, ಹಿಂದೂ ಮತ್ತು ಮುಸ್ಲಿಂ ಧರ್ಮಾಂಧತೆಗಳ ವಿರುದ್ಧ ಸಮನಾಗಿ ದನಿ ಎತ್ತಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT