ಭಾನುವಾರ, ಜನವರಿ 17, 2021
17 °C
ಅನುಭವ ಮಂಟಪ

ಗುತ್ತಿಗೆ ಕೃಷಿ ಕಾಯ್ದೆ: ಕಾರ್ಯಾಂಗದ ಅತಿ ಆಸಕ್ತಿಯ ದ್ಯೋತಕ

ರಾಜಾರಾಂ ತಲ್ಲೂರು Updated:

ಅಕ್ಷರ ಗಾತ್ರ : | |

ಒಂದು ಕುತೂಹಲಕರ ಸಂಗತಿಯನ್ನು ನೀವು ಗಮನಿಸಿದ್ದೀರಾ?

ಕಳೆದ 2-3 ತಿಂಗಳುಗಳಿಂದ ನಡೆದಿರುವ ಕೃಷಿ ಕಾಯ್ದೆಗಳ ಕುರಿತ ಚರ್ಚೆಯಲ್ಲಿ ಒಂದು ಮಹತ್ವದ ಸಂಗತಿ ಕಾಣೆಯಾಗಿದೆ. ಸರ್ಕಾರದ ಕಡೆಯಿಂದ, ತನ್ನ ಸಾಧನೆಗಳನ್ನು ಬಿಂಬಿಸುವಲ್ಲಿ ಮುಂಚೂಣಿಯಲ್ಲಿ ಇರಬೇಕಾಗಿದ್ದ ಸಂಗತಿ ಇದು. ಆದರೆ ಯಾರೊಬ್ಬರೂ ಅದರ ಕುರಿತು ಮಾತನಾಡುತ್ತಿಲ್ಲ. ಅದು ಯಾವುದೆಂದರೆ, ಕೃಷಿ ಉತ್ಪಾದಕ ಕಂಪನಿಗಳು (ಎಫ್‌ಪಿಸಿ). ಕೃಷಿ ಆದಾಯವನ್ನು ದುಪ್ಪಟ್ಟು ಮಾಡುವ ಹಾದಿಯಲ್ಲಿ ಮಹತ್ವದ ಹೆಜ್ಜೆ ಎಂದು ಸ್ವತಃ ಸರ್ಕಾರ ಪರಿಗಣಿಸಿರುವ ಈ ಎಫ್‌ಪಿಸಿಗಳು, ಸರ್ಕಾರದ ಕೃಷಿ ನೀತಿಯ ವಿರುದ್ಧ ದೇಶದಾದ್ಯಂತ ಚಳವಳಿಗಳು ನಡೆದಿರುವಾಗ ಸರ್ಕಾರಕ್ಕೆ ತನ್ನನ್ನು ಸಮರ್ಥಿಸಿಕೊಳ್ಳಲು ಪ್ರಬಲವಾದ ಗುರಾಣಿ ಆಗಿ ಒದಗಿ ಬರಬೇಕಿತ್ತು. ಆದರೆ, ಹಾಗಾಗುತ್ತಿಲ್ಲ ಏಕೆ?

ಏಕೆಂದರೆ, ಹೊಸ ಕೃಷಿ ನೀತಿಯು ಆ ಅಂತಿಮ ತಂಗುದಾಣವನ್ನಿನ್ನೂ ತಲುಪಿಲ್ಲ. ಹಾಗಾಗಿ ಚರ್ಚೆಗಳೆಲ್ಲ ಈಗ ಕಾನೂನಿನ ರೂಪ ಪಡೆದಿರುವ ಗುತ್ತಿಗೆ ಕೃಷಿ ಕಾಯ್ದೆಯತ್ತಲೇ ಕೇಂದ್ರೀಕೃತವಾಗಿವೆ. ಇಲ್ಲಿಯ ತನಕ ಗುತ್ತಿಗೆ ಕೃಷಿ ಅನಧಿಕೃತವಾಗಿ ನಡೆಯುತ್ತಿತ್ತು ಮತ್ತು ಅದರಿಂದಾಗಿ ರೈತರು ನಷ್ಟ ಅನುಭವಿಸುತ್ತಿದ್ದರು. ಈಗ ಅದಕ್ಕೊಂದು ಕಾನೂನಿನ ಚೌಕಟ್ಟು ಬಂದಿರುವುದರಿಂದಾಗಿ ರೈತರ ಹಿತಾಸಕ್ತಿಗಳು ರಕ್ಷಿತವಾಗುವ ಜೊತೆಗೇ, ಕೃಷಿ ಗುತ್ತಿಗೆ ಕಂಪನಿಗಳ ಹಿತಾಸಕ್ತಿಗಳೂ ರಕ್ಷಿತವಾಗಲಿವೆ ಎಂಬುದು ಸರ್ಕಾರದ ವಾದ.

ಹೊರನೋಟಕ್ಕೆ ‘ಹೌದಲ್ಲವೇ’ ಅನ್ನಿಸುವ ಈ ಕಾಯ್ದೆ, ಆಳಕ್ಕಿಳಿದಾಗ ಅಷ್ಟು ಸರಳವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅಂತಹ ಕೆಲವು ಅಂಶಗಳನ್ನು ಕೆಳಗೆ ಚರ್ಚಿಸಿದೆ.

ವಿವಾದ ಪರಿಹಾರ ಹೇಗೆ?

ಗುತ್ತಿಗೆ ಕೃಷಿ ಒಪ್ಪಂದದಲ್ಲಿ ಏಳುವ ಯಾವುದೇ ವಿವಾದಗಳ ಪರಿಹಾರಕ್ಕೆ ಮೊದಲು, ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿಗಳ ಎದುರು ಹೋಗಬೇಕಾಗುತ್ತದೆ. ಅವರು ಸಂಧಾನ ಮಂಡಳಿಯೊಂದನ್ನು ರಚಿಸಿ, ಆ ಮೂಲಕ ವಿವಾದವನ್ನು ಪರಿಹರಿಸುತ್ತಾರೆ. ಅಲ್ಲಿ ಸಮಾಧಾನ ಆಗದವರು ಜಿಲ್ಲಾಧಿಕಾರಿಗಳ ಬಳಿ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ. ಈ ಅಧಿಕಾರಿಗಳ ತೀರ್ಮಾನಕ್ಕೆ ಸಿವಿಲ್ ಪ್ರೊಸೀಜರ್ ಕೋಡ್,1908ರ ಅನ್ವಯ ಸಿವಿಲ್ ನ್ಯಾಯಾಲಯ ನೀಡುವ ತೀರ್ಪಿಗೆ ಸಮನಾದ ಮಾನ್ಯತೆಯನ್ನು ಹೊಸ ಕಾನೂನು ನೀಡಿದೆ.

ಇಲ್ಲಿ ಎರಡು ಸಂಗತಿಗಳನ್ನು ಗಮನಿಸಬೇಕು.

ಪಕ್ಷಪಾತ, ಭ್ರಷ್ಟಾಚಾರಗಳ ಗಂಗೋತ್ರಿಯೇ ಆಗಿರುವ ನಮ್ಮ ಕಂದಾಯ ಇಲಾಖೆ ಮತ್ತದರ ಅಧಿಕಾರಿಗಳು ಯಾವ ರೀತಿಯಲ್ಲಿ ಕಾರ್ಯಾಚರಿಸುತ್ತಾರೆ ಎಂಬುದು ಅರಿವಿದ್ದವರಿಗೆ, ಈ ರೀತಿಯ ವಿವಾದ ಪರಿಹಾರ ವ್ಯವಸ್ಥೆ ಎಲ್ಲಿಗೆ ತಲುಪಲಿದೆ ಎಂಬುದನ್ನು ಹೇಳಬೇಕಾಗಿಲ್ಲ.

ಎರಡನೆಯದಾಗಿ, ದೇಶದ ಸಂವಿಧಾನವು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಿಗೆ ಅವುಗಳ ಕಾರ್ಯವ್ಯಾಪ್ತಿಯನ್ನು ಖಚಿತವಾಗಿ ನಿರ್ಧರಿಸಿದೆ. ಆದರೆ, ಕೃಷಿ ಗುತ್ತಿಗೆ ಕಾಯಿದೆಯಲ್ಲಿ ಕಾರ್ಯಾಂಗವು ತನ್ನ ಎಂದಿನ ಕರ್ತವ್ಯದ ಜೊತೆಗೆ, ಹೆಚ್ಚುವರಿಯಾಗಿ ತೀರ್ಪು ನೀಡುವ ಮತ್ತು ಕಾನೂನಿಗೆ ವ್ಯಾಖ್ಯೆ ಕೊಡುವ ಕೆಲಸಗಳಿಗೂ ಕೈ ಹಚ್ಚಿಕೊಂಡಿದೆ. ಸಂಕೀರ್ಣ ಸ್ವರೂಪದ ಈ ವಿವಾದಗಳನ್ನು ಇಲ್ಲಿಯ ತನಕ ನ್ಯಾಯಾಂಗ ತೀರ್ಮಾನಿಸುತ್ತಿತ್ತು. ಈಗ ಕಾರ್ಯಾಂಗದ ಅಧಿಕಾರಿಗಳಿಗೆ ಆ ಅಧಿಕಾರವನ್ನು ನೀಡಿರುವುದು, ಕಾರ್ಯಾಂಗದ ‘ಅತಿ ಆಸಕ್ತಿ’ ಆಗುವುದರ ಜೊತೆಗೇ, ರೈತರಿಗೆ ಸಹಜ ನ್ಯಾಯವನ್ನು ನಿರಾಕರಿಸಿದಂತಾಗುತ್ತದೆ. ವಕೀಲರ ಸಂಘಗಳು ಈ ಬಗ್ಗೆ ಈಗಾಗಲೇ ಆಕ್ಷೇಪ ಎತ್ತಿವೆ.

ಕನಿಷ್ಠ ಬೆಂಬಲ ಬೆಲೆ

ಒಂದು ಗುತ್ತಿಗೆ ಒಪ್ಪಂದ ಎಂದರೆ, ಅದರಲ್ಲಿ ಈಗಾಗಲೇ ಹೇಳಲಾಗಿರುವಂತೆ ಸರಬರಾಜು ಮಾಡುವ ಸಮಯ, ಉತ್ಪನ್ನದ ಗುಣಮಟ್ಟ, ದರ್ಜೆ, ಮಾನದಂಡ, ಬೆಲೆ ಎಲ್ಲವೂ ಪೂರ್ವನಿಗದಿ ಆಗಿರುತ್ತದೆ. ಇಂತಹದೊಂದು ಸನ್ನಿವೇಶದಲ್ಲಿ ಸರ್ಕಾರದ ಬೆಂಬಲ ಬೆಲೆ (ಎಂಎಸ್‌ಪಿ) ಹೇಗೆ ಕೆಲಸ ಮಾಡಲಿದೆ? ಕೃಷಿ ಗುತ್ತಿಗೆ ಕಂಪನಿ ಸರ್ಕಾರದ ಬೆಂಬಲ ಬೆಲೆ ತೀರ್ಮಾನವಾಗುವ ಮೊದಲೇ ತನ್ನ ಮಾರುಕಟ್ಟೆ ಬಲವನ್ನಾಧರಿಸಿ ಬೆಲೆ ನಿಗದಿ ಮಾಡಿ ದ್ವಿಪಕ್ಷೀಯ/ತ್ರಿಪಕ್ಷೀಯ ಒಪ್ಪಂದ ಮಾಡಿಕೊಂಡಿದ್ದರೆ, ಅಂತಹ ಸನ್ನಿವೇಶದಲ್ಲಿ ರೈತ ಎಲ್ಲಿ ನಿಲ್ಲುತ್ತಾನೆ? ಈ ಎಲ್ಲ ವಿವರಗಳು ಇನ್ನೂ ಅಸ್ಪಷ್ಟ.

‘ಶೇರ್ ಕ್ರಾಪರ್‌’ಗಳಿಗೆ ಅವಕಾಶ ಇಲ್ಲ

ಗುತ್ತಿಗೆ ಕಾಯಿದೆಯು ಸ್ವಂತ ಭೂಮಿ ಹೊಂದಿಲ್ಲದವರಿಗೆ ಗುತ್ತಿಗೆ ಕೃಷಿ ಅವಕಾಶವನ್ನು ನಿರಾಕರಿಸಿದೆ. ಇದು ಹೊರನೋಟಕ್ಕೆ ರೈತರ ಹಿತಾಸಕ್ತಿ ಕಾಯುವ ತೀರ್ಮಾನ ಅನ್ನಿಸಿದರೂ, ಆಳದಲ್ಲಿ ಬಹಳ ಅಪಾಯಕಾರಿ ತೀರ್ಮಾನ. ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿರುವ ಭೂರಹಿತ ಕೃಷಿ ಕಾರ್ಮಿಕರು, ಅತಿಸಣ್ಣ ಭೂಹಿಡುವಳಿದಾರರು ಈ ತೀರ್ಮಾನದ ವ್ಯಾಪ್ತಿಯೊಳಗೆ ಬರುತ್ತಾರೆ. ಅವರಿಗೆ ಇನ್ನು ದೊಡ್ಡ ಎಫ್‌ಪಿಸಿಗಳ ಭಾಗವಾಗದೇ ಬೇರೆ ನಿರ್ವಾಹ ಉಳಿಯುವುದಿಲ್ಲ. ಭೂರಹಿತ ಕೃಷಿ ಕಾರ್ಮಿಕರಂತೂ ತಮ್ಮ ‘ಕೌಶಲ’ವನ್ನು ಮರುರೂಪಿಸಿಕೊಂಡು, ಸರ್ಕಾರದ ಉದ್ದೇಶದಂತೆ ಕೃಷಿ ಬಿಟ್ಟು ಬೇರೆ ಅವಕಾಶಗಳತ್ತ ಮುಖ ಮಾಡಬೇಕಾಗುತ್ತದೆ.

ದಲ್ಲಾಳಿಗಳ ಹೊಸ ಪಾತ್ರ

ಕೃಷಿ ಕಾಯಿದೆಗಳನ್ನು ತರುವಾಗ ಸರ್ಕಾರದ ಪರವಾಗಿ ಮಂಡಿಸಲಾಗುತ್ತಿರುವ ಬಲವಾದ ಒಂದು ವಾದ ಎಂದರೆ, ಅನಗತ್ಯ ಮಧ್ಯವರ್ತಿ ಹಸ್ತಕ್ಷೇಪಗಳನ್ನು ಹಿಮ್ಮೆಟ್ಟಿಸುವುದು ಹಾಗೂ ರೈತನಿಗೆ ಅನುಕೂಲಕರ ವಾತಾವರಣ ರೂಪಿಸುವುದು. ರೈತ ತನಗೆ ಒಳ್ಳೆಯ ದರ ಸಿಗುವಲ್ಲಿ ದೇಶದ ಯಾವ ಭಾಗದಲ್ಲೂ ತಾನು ಬೆಳೆದ ಬೆಳೆಯನ್ನು ಮಾರಬಹುದು ಎಂದು ಹೇಳಲಾಗುತ್ತಿದೆ. ಅಲ್ಲದೇ ಆವಶ್ಯಕ ವಸ್ತುಗಳ ಕಾಯ್ದೆಗೆ ತಿದ್ದುಪಡಿ ಮಾಡಿ, ಕೃಷಿ ಉತ್ಪನ್ನಗಳ ದಾಸ್ತಾನಿಗೆ ಇದ್ದ ಅಡ್ಡಿಗಳನ್ನು ನಿವಾರಿಸಲಾಗಿದೆ.

ಗುತ್ತಿಗೆ ಕೃಷಿ ಕಾಯಿದೆಯನ್ವಯ ಗುತ್ತಿಗೆ ಒಪ್ಪಂದವು ಬರಿಯ ರೈತ ಮತ್ತು ಗುತ್ತಿಗೆ ಕಂಪನಿಯ ನಡುವಿನ ದ್ವಿಪಕ್ಷೀಯ ಒಪ್ಪಂದ ಆಗಬೇಕಾಗಿಲ್ಲ. ಅದರಲ್ಲಿ ಒಬ್ಬರು ಮಧ್ಯವರ್ತಿ (ಅಗ್ರಗೇಟರ್) ಅಥವಾ ಕೃಷಿ ಸೇವಾದಾತರು (ಫಾರ್ಮ್ ಸರ್ವೀಸ್ ಪ್ರೊವೈಡರ್) ಕೂಡ ಪಾಲ್ಗೊಳ್ಳಬಹುದು. ಹಾಗಾಗಿ ಇದು ತ್ರಿಪಕ್ಷೀಯ ಒಪ್ಪಂದವೂ ಆಗಬಹುದು ಎಂದು ಕಾನೂನು ಹೇಳುತ್ತದೆ.

ಇಂತಹದೊಂದು ಸನ್ನಿವೇಶದಲ್ಲಿ, ದೊಡ್ಡ ಕೃಷಿ ಗುತ್ತಿಗೆ ಕಾರ್ಪೊರೇಟ್‌ಗಳ ಪ್ರತಿನಿಧಿಗಳಾಗಿ ಅಥವಾ ಸೇವಾದಾತರಾಗಿ ಕೆಲಸ ಮಾಡುವ ಮಧ್ಯವರ್ತಿಗಳು ಸಹಜವಾಗಿಯೇ ಅಧಿಕೃತವಾಗಿ ಗುತ್ತಿಗೆ ಕೃಷಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗಾಗಿ, ಒಟ್ಟು ಸನ್ನಿವೇಶದಲ್ಲಿ ಆಗಿರುವ ಏಕೈಕ ಬದಲಾವಣೆ ಎಂದರೆ, ಮಧ್ಯವರ್ತಿಗಳಿಗೆ ಅಧಿಕೃತ ಮುದ್ರೆ ದೊರೆತಿರುವುದು!

– ಲೇಖಕ: ಕೃಷಿಪರ ಚಿಂತಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು