ಗುರುವಾರ , ಅಕ್ಟೋಬರ್ 29, 2020
26 °C

PV Web Exclusive: ಕೊರೊನಾ ಅಂತರ ತಂದ ಜಾತಿ ಮತ್ತು ವರ್ಗ ಸಂಘರ್ಷ

ಸುಕೃತ ಎಸ್‌. Updated:

ಅಕ್ಷರ ಗಾತ್ರ : | |

Prajavani

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಒಂದು ಗ್ರಾಮ. ಗ್ರಾಮದಲ್ಲಿ ಒಂದು ಕಾಲೊನಿ. ಕಾಲೊನಿಯ ಒಬ್ಬ ಮಹಿಳೆಗೆ ಕೊರೊನಾ ಸೋಂಕು ತಗುಲುತ್ತದೆ. ಕ್ವಾರಂಟೈನ್‌ ಆಗುತ್ತಾರೆ. ಸ್ವಲ್ಪ ದಿನಗಳಲ್ಲಿ ಮಕ್ಕಳಿಗೆ ಪಾಠ ಮಾಡಲು ಒಬ್ಬ ಶಿಕ್ಷಕಿ ಆ ಗ್ರಾಮಕ್ಕೆ ಬರುತ್ತಾರೆ. ಗ್ರಾಮದ ಮಕ್ಕಳ ಜೊತೆ ಈ ಕಾಲೊನಿಯ ಮಕ್ಕಳು ಸಹ ಪಾಠಕ್ಕೆ ಹೋಗುತ್ತಾರೆ. ಆ ದಿನ ಕಾಲೊನಿ ಮಕ್ಕಳಲ್ಲಿ ಒಬ್ಬ ಹುಡುಗನ ಜನ್ಮದಿನವಾಗಿತ್ತು. ಸ್ನೇಹಿತರಿಗೆಲ್ಲಾ ಚಾಕಲೇಟ್‌ ಹಂಚುವ ಸಲುವಾಗಿ, ಚಾಕಲೇಟ್‌ ತೆಗೆದುಕೊಂಡು ಹೋಗಿದ್ದ.

ಆಕೆ, ಗಣಿತ, ವಿಜ್ಞಾನ ಹೇಳಿಕೊಡುವ ಶಿಕ್ಷಕಿ. ಆಕೆಗೂ ಚಾಕಲೇಟ್‌ ಕೊಡಲು ಅವರ ಬಳಿ ತೆರಳಿದ. ಆತ ಹತ್ತಿರ ಬರುತ್ತಿದ್ದದ್ದನ್ನು ಕಂಡ ಶಿಕ್ಷಕಿ, ಆತನನ್ನು ಅಲ್ಲೇ ನಿಲ್ಲಿಸಿ, ‘ನಿಮ್ಮ ಕಾಲೊನಿಯಲ್ಲಿ ಒಬ್ಬರಿಗೆ ಕೊರೊನಾ ಬಂದಿದೆ ಅಲ್ವೆನೊ’ ಎಂದು ಪ್ರಶ್ನಿಸಿದರು. ಆತ, ‘ಹೌದು’ ಎಂದು ಉತ್ತರವಿತ್ತ. ಮಕ್ಕಳನ್ನು ಮನೆಗೆ ಕಳುಹಿಸಿ, ತಕ್ಷಣದಲ್ಲಿಯೇ ಹೆಡ್‌ಮಾಸ್ಟರ್‌ಗೆ ಕರೆ ಮಾಡಿ, ತಾನು ಪಾಠ ಮಾಡುವುದಿಲ್ಲ ಎಂದು ಹೋಗಿಬಿಟ್ಟರು.

ಇದು ಇಷ್ಟಕ್ಕೇ ಮುಗಿಯಲಿಲ್ಲ. ಇದೇ ಕಾಲೊನಿಯ ಮತ್ತೊಬ್ಬ ಹುಡುಗ, ಊರಿನ ಕೆರೆಕಟ್ಟೆ ಬಳಿ, ನೀರಾಟವಾಡುತ್ತಿದ್ದ. ಇದನ್ನು ನೋಡಿದ ಕಾಲೊನಿ ಜನರೇ, ಆ ನೀರನ್ನು ಬಳಸಬಾರದು ಎಂದು ನಿರ್ಮಾನಿಸಿಬಿಟ್ಟರು.

ಗ್ರಾಮದ ಬೇರೆ ಹುಡುಗರೊಂದಿಗೆ ಆಡಿಕೊಂಡಿದ್ದ ಹಾಗೂ ಇಲ್ಲಿಗೆ ಶಾಲೆಗೆ ಬರುತ್ತಿದ್ದ ಈ ಕಾಲೊನಿ ಮಕ್ಕಳಿಗೆ, ಗ್ರಾಮದಲ್ಲಿ ಹೆಚ್ಚಿಗೆ ಸಂಖ್ಯೆಯಲ್ಲಿರುವ ಸಮುದಾಯದ ವ್ಯಕ್ತಿಯೊಬ್ಬ, ‘ಲೇ, ನೀವು ಇನ್ನು ಮೇಲೆ ಸ್ಕೂಲಿಗೆ ಬರಬೇಡಿ’ ಎಂದು ಕಳುಹಿಸಿಬಿಟ್ಟನಂತೆ.

ಈ ಕೆಲವು ಘಟನೆಗಳು ತನ್ನಲ್ಲಿಯೇ ಸಮಾಜದ ಕೊಳಕು ಮನಃಸ್ಥಿತಿಯನ್ನು ಹೊರಡಿಸಿಬಿಡುತ್ತವೆ. ಸೋಂಕು ಹರಡುವುದನ್ನು ತಡೆಗಟ್ಟಲು ಮಾಡಿಕೊಂಡ ‘ಪರಸ್ಪರ ಅಂತರ’ ಎನ್ನುವ ಅನುಕೂಲವು, ‘ಸಾಮಾಜಿಕ ಅಂತರ’ವಾಗಿ ಬದಲಾಗಿದೆ. ಈ ವಿಷಯವನ್ನೇ ವಿಧಾನಸಭೆಯಲ್ಲಿ ಮೊನ್ನೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಸ್ತಾಪಿಸಿದರು ಕೂಡ.

ಇನ್ನೂ ಕೆಲವು ಉದಾಹರಣೆಗಳಿವೆ. ಮಂಗಳೂರಿನ ಒಬ್ಬ ಡಾಕ್ಟರ್‌ ಈ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಡಾ. ಮೇಖಲ ಅವರು ಪ್ರಸೂತಿ ತಜ್ಞೆಯಾಗಿದ್ದು, ಮಂಗಳೂರಿನ ಕೈಕಂಬದಲ್ಲಿ ನರ್ಸಿಂಗ್‌ಹೋಮ್‌ ಒಂದನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಈಗ ಗುಣಮುಖರಾಗಿ, ಮತ್ತೆ ಕೆಲಸಕ್ಕೆ ಮರಳಿದ್ದಾರೆ.

‘ನನಗೆ ಸೋಂಕು ತಗುಲಿದ ಕಾರಣ, ನನ್ನ ಮನೆ ಕೆಲಸಕ್ಕೆ ಬರುತ್ತಿದ್ದಾಕೆಯ ಕುಟುಂಬ ‘ಸಾಮಾಜಿಕ’ ಅಂತರಕ್ಕೆ ಒಳಗಾಗಬೇಕಾಯಿತು. ನಾನು ನರ್ಸಿಂಗ್‌ಹೋಮ್‌ಗೆ ಹೋದಮೇಲೆ ಆಕೆ ಕೆಲಸಕ್ಕೆ ಬರುತ್ತಿದ್ದಳು. ನಾನು ವಾಪಾಸು ಬರುವುದರೊಳಗಾಗಿ ಆಕೆ ಹೊರಟು ಹೋಗುತ್ತಿದ್ದಳು. ನಮಗಿಬ್ಬರಿಗೂ ಸಂಪರ್ಕವೇ ಇರಲಿಲ್ಲ. ಆದರೂ ಆಕೆಯ ಕುಟುಂಬ ಮುಜುಗರದಿಂದ ದಿನ ದೂಡುವಂತಾಯಿತು’ ಎಂದು ಬೇಸರಿಸಿದರು.

‘ಆಕೆಯ ಗಂಡ ಕೂಲಿ ಕೆಲಸ ಮಾಡುವಾತ. 15 ದಿನ ಕೆಲಸಕ್ಕೆ ಬಾರದಂತೆ ಆತನಿಗೆ ಕಟ್ಟುನಿಟ್ಟಾಗಿ ಹೇಳಿದರಂತೆ. ಆಕೆಯ ಮಗ ತರಕಾರಿ ತರಲು ಹೋದರೆ, ಅಂಗಡಿಯಾತ ಇಲ್ಲಿಗೆ ಮತ್ತೆ ಬರಬೇಡ ಎಂದರಂತೆ. ಇವರ ಮನೆಯಿಂದ ಕುಡಿಯುವ ನೀರು ತೆಗೆದುಕೊಂಡು ಹೋಗುತ್ತಿದ್ದವರು, ನಿಮ್ಮ ಮನೆ ನೀರು ಬೇಡ ಎಂದು ಹೇಳಿದರಂತೆ. ಆಕೆ ಪಾಪ ನನ್ನ ಬಳಿ ಎಲ್ಲವನ್ನು ಹೇಳಿ ಅತ್ತುಕೊಂಡಳು’ ಎಂದು ವಾಸ್ತವಿಕ ಸಂಗತಿಗಳನ್ನು ತೆರೆದಿಟ್ಟರು.

ಕೆಲಸದಾಕೆಗೆ ಸೋಂಕು ತಗುಲಿಲ್ಲ. ಆಕೆ ಕೆಲಸ ಮಾಡುತ್ತಿದ್ದ ಮನೆಯವರಿಗೆ ಸೋಂಕು ತಗುಲಿದೆ. ಆದರೂ, ಇವರನ್ನು ಸಮಾಜ ದೂರ ಇಡುತ್ತದೆ. ಎಂಥ ವಿಪರ್ಯಾಸ.

‘ನನ್ನ ನರ್ಸಿಂಗ್‌ಹೋಮ್‌ ಕೆಲಸಕ್ಕೆ ಬರುವ ಸಿಬ್ಬಂದಿಯ ಕಥೆಯೂ ಇದಕ್ಕೆ ವ್ಯತಿರಿಕ್ತವಾಗಿಲ್ಲ. ಅವರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ ಎಂಬ ಕಾರಣಕ್ಕೆ ಅವರ ಊರುಗಳಲ್ಲಿ ಅವರನ್ನು ದೂರ ಇಡಲಾಗುತ್ತಿದೆ. ದಾರಿಯಲ್ಲಿ ನಡೆದುಕೊಂಡು ಬರುವಾಗ, ‘ಏ ಸರಿರೋ ಕೊರೊನಾ ಬರುತ್ತೆ’ ಎಂಬ ಹಾಸ್ಯದ ಮಾತಾಡುತ್ತಿದ್ದರಂತೆ’ ಎಂದು ವಿವರಿಸಿದರು.

ಕೊರೊನಾ ವಾರಿಯರ್ಸ್‌ಗೆ ಜಾಗಟೆ, ತಟ್ಟೆ ಬಡಿದಿದ್ದೇ ಬಂತು, ದೀಪ ಬೆಳಗಿದ್ದೇ ಬಂತು. ಅವೆಲ್ಲವೂ ಸಮೂಹ ಸನ್ನಿ ಆದವು ಬಿಟ್ಟರೆ, ಜನರ ಮನಸ್ಸಿನಿಂದ ಬಂದ ಭಾವನೆಗಳಲ್ಲ ಅವು. ಗೌರವವನ್ನು ತಟ್ಟೆ ಬಡಿದು, ಚಪ್ಪಾಳೆ ತಟ್ಟಿ ತೋರಿ ಎನ್ನುವುದೇ ಹಾಸ್ಯಾಸ್ಪದ.

ಬೆಂಗಳೂರಿನ ಪದ್ಮನಾಭನಗರದಲ್ಲೂ ಈ ರೀತಿಯ ಒಂದು ಘಟನೆ ನಡೆದಿದೆ. ಅಪ್ಪ, ಅಮ್ಮ, ಮಗ– ಸೊಸೆ ಇರುವ ಸಂಸಾರ. ಸೊಸೆ ಬಸುರಿ. ಅಮ್ಮ, ಮಗನಿಗೆ ಸೋಂಕು ತಗುಲಿತು. ಮಾವ, ಸೊಸೆ ಮಾತ್ರ ಮನೆಯಲ್ಲಿ ಇರುವುದು. ಮನೆಯನ್ನು ಸೀಲ್‌ಡೌನ್‌ ಮಾಡಲಾಗಿತ್ತು. ಮಾವನಿಗೆ ತುಂಬಾ ವಯಸ್ಸಾಗಿದೆ. ಸೊಸೆಗೆ ಮಾತ್ರೆ ಬೇಕಾಗಿದೆ. ಯಾರೊಬ್ಬರೂ ಆಕೆಯ ಸಹಾಯಕ್ಕೆ ಬರಲಿಲ್ಲ. ಅಕ್ಕ ಪಕ್ಕದ ಮನೆಯವರು ಆ ಕಡೆ ಸುಳಿಯಲಿಲ್ಲ. ಆಡಳಿತವು ಸೀಲ್‌ಡೌನ್‌ ಆದ ಮನೆಗೆ ಅಗತ್ಯ ವಸ್ತು ಪೂರೈಸಬೇಕು; ಅದನ್ನೂ ಮಾಡಲಿಲ್ಲ. ನಂತರ, ಪಕ್ಕದ ಬೀದಿಯಲಿದ್ದ ಒಂದು ಕುಟುಂಬದವರು ಇವರ ಸಹಾಯಕ್ಕೆ ಬಂದರು. ಸೀಲ್‌ಡೌನ್‌ ಅವಧಿ ಮುಗಿದು, ಮಗ ಬರುವವರೆಗೂ ಆ ಕುಟುಂಬದವರೇ ಇವರ ಯೋಗಕ್ಷೇಮ ವಿಚಾರಿಸಿಕೊಂಡರು.

‘ನಾನು ವೈದ್ಯೆ. ನನ್ನ ಕುರಿತು ಇಂಥ ಹಾಸ್ಯ ಯಾರೂ ಮಾಡಲಾರರು. ಮಾಡಿಲ್ಲ ಕೂಡ. ಆದರೆ, ಸಮಾಜದ ಬೇರೆ ಬೇರೆ ವರ್ಗದವರ ಪಾಡೇನು? ಅವರು ಮುಜುಗರ ಎದುರಿಸಬೇಕಾಗುತ್ತದೆಯಲ್ಲ’ ಎಂದು ಬಹಳ ಮುಖ್ಯವಾದ ಪ್ರಶ್ನೆಯನ್ನು ಡಾ.ಮೇಖಲ ಅವರು ಕೇಳುತ್ತಾರೆ. ಅಸ್ಪೃಶ್ಯತೆ ಎಂದರೆ ಏನು ಎನ್ನುವುದು ಸೋಂಕು ತಗುಲಿದಾಗ ನನಗೆ ಅನುಭವಕ್ಕೆ ಬಂತು ಎಂದು ಸೋಂಕಿನಿಂದ ಗುಣಮುಖರಾದ ಹಲವರು ಹೇಳುತ್ತಿದ್ದಾರೆ.

ಇದು ಕೇವಲ ಪ್ರಾತಿನಿಧಿಕ ಉದಾಹರಣೆಗಳಷ್ಟೆ. ದೇಶದಾದ್ಯಂತ ಇಂಥ ನೂರಾರು ಉದಾಹರಣೆಗಳು ಸಿಗುತ್ತವೆ. ಈ ಎಲ್ಲ ಘಟನೆಗಳನ್ನು ಅವಲೋಕಿಸಿದಾಗ, ಒಂದಂತು ಸತ್ಯ, ಹೀಗೆ ‘ಸಾಮಾಜಿಕ ಅಂತರ’ ಪಾಲಿಸುವುದು ವಿಧಿವತ್ತಾಗಿದೆ. ದೂರ ಇಡುವವರು, ‘ನಮಗೆ ಸೋಂಕು ತಗುಲಿದರೆ’ ಎನ್ನುವ ‘ನಿರೀಕ್ಷಣಾ ಜಾಮೀನ‘ನ್ನು ಬಾಯಲ್ಲಿಯೇ ಇಟ್ಟುಕೊಂಡಿರುತ್ತಾರೆ. ರಾಜ್ಯದ ಮುಖ್ಯಮಂತ್ರಿಯೇ ಹೀಗೆ ಮಾಡಬಾರದು ಎಂದಿದ್ದಾರೆ, ಹಲವು ಡಾಕ್ಟರ್‌ಗಳು ಹೇಳಿದ್ದಾರೆ, ಆದ್ದರಿಂದ ಸಮಾಜದಲ್ಲಿ ಇಂಥ ಘಟನೆಗಳು ನಡೆಯುತ್ತಿಲ್ಲ ಎನ್ನುವುದು ಪಲಾಯನವಾದ ಆಗುತ್ತದೆ.

ಜತೆಗೆ, ಇನ್ನೂ ಹಲವು ಪ್ರಶ್ನೆಗಳನ್ನು ಈ ಘಟನೆಗಳು ಹುಟ್ಟುಹಾಕಿವೆ. ಮತ್ತು ಇವು ಭಯ ಹುಟ್ಟಿಸುತ್ತವೆ. ತಾರತಮ್ಯ ಇರಬಾರದು, ಎಲ್ಲರನ್ನು ಸಮಾನವಾಗಿ ನೋಡಬೇಕು ಎಂದು ಇಷ್ಟು ವರ್ಷದಿಂದ ನಡೆಸಿಕೊಂಡು ಬರುತ್ತಿರುವ ಹೋರಾಟ ವ್ಯರ್ಥವಾದಂತೆ ತೋರುತ್ತಿದೆ. ಜಾತಿ ಮತ್ತು ವರ್ಗ ಸಂಘರ್ಷವು ಹೊಸ ಸ್ವರೂಪದಲ್ಲಿ ನಿರಾಯಾಸವಾಗಿ ತಲೆ ಎತ್ತಿದೆ.

ನೀವು, ತಳ ಸಮುದಾಯಕ್ಕೆ ಸೇರಿದವರು. ನಿಮಗೆ ಸೋಂಕು ತಗುಲುತ್ತದೆ. ಆಗ ನಿಮ್ಮನ್ನು ನೋಡುವ ರೀತಿಯೇ ಬೇರೆ. ನೀವು ಯಾವ ಜಾತಿ ಆದರೂ ಸರಿ, ಸ್ವಲ್ಪ ದುಡ್ಡು ಇದೆ, ತಕ್ಕ ಮಟ್ಟಿಗೆ ಸ್ಥಿತಿವಂತರು ಎಂದಿಟ್ಟುಕೊಳ್ಳಿ, ನಿಮ್ಮನ್ನು ನೋಡುವ ರೀತಿಯೇ ಬೇರೆ. ಅಷ್ಟು ಸ್ಥಿತಿವಂತರಲ್ಲ, ಆದರೆ, ಉತ್ತಮ ಜಾತಿ. ಆಗಲೂ ನಿಮ್ಮನ್ನು ನೋಡುವ ರೀತಿಯೇ ಬೇರೆ. ಇನ್ನು ನೀವು ಯಾವ ಜಾತಿ, ಧರ್ಮವಾದರೂ ಸರಿ, ಸೆಲೆಬ್ರಿಟಿ ಆಗಿದ್ದರೆ, ರಾಜಕಾರಣಿ ಆಗಿದ್ದರೆ, ಸರ್ಕಾರಿ ಕೆಲಸದಲ್ಲಿ ಇದ್ದರೆ ಆಗ ನಿಮ್ಮನ್ನು ನೋಡುವ ರೀತಿಯೇ ಬೇರೆ!

‘ಸಾಮಾಜಿಕ ಅಂತರ’ ಅಲ್ಲ, ಅದು ‘ಪರಸ್ಪರ ಅಂತರ’ ಎಂದು ಹೆಸರು ಬದಲಾಯಿಸಿದರೆ ಪರಿಸ್ಥಿತಿ ಬದಲಾಗುವುದಿಲ್ಲ. ಜನರಲ್ಲಿ ಬೇರೂರಿರುವ ಸೋಂಕಿನ ಕುರಿತ ಭಯ ಮತ್ತು ಇಂಥ ಆಚರಣೆ ಮಾಡಲು ಪ್ರೇರೇಪಿಸುವ ಮೂಢನಂಬಿಕೆಯನ್ನು ಹೋಗಲಾಡಿಸುವ ಜವಾಬ್ದಾರಿ ಸರ್ಕಾರದ್ದು ಮತ್ತು ನಮ್ಮೆಲ್ಲರದ್ದು. ಜಾತಿ, ವರ್ಗ ಅಥವಾ ಕಾಯಿಲೆ ಎನ್ನುವ ಕಾರಣಕ್ಕೆ ಒಬ್ಬರನ್ನು ದೂರ ಇಡುವುದು ಎನ್ನುವುದು ಅವಮಾನಕರ. ವ್ಯಕ್ತಿ ಘನತೆಗೆ ಪೆಟ್ಟು ಕೊಡುವ ಕ್ರಿಯೆ ಅದು. ಮುಂದೆ ಇದೇ ನಮ್ಮಗಳ ನಡುವಿನ ಹೊಸ ಸ್ವರೂಪದ ‘ಅಂತರ’ಕ್ಕೆ ನಾಂದಿ ಆಗುವ ಅಪಾಯದಿಂದ ನಾವು ಪಾರಾಗಬೇಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು