ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಘನತೆಯ ಸಾವು ಮತ್ತು ಆರೈಕೆ

ಉಪಶಮನಕಾರಿ ಆರೈಕೆ ಹಾಗೂ ಬದುಕಿನ ಅಂತಿಮ ದಿನಗಳ ಆರೈಕೆಯ ಮಹತ್ವ ಮನಗಾಣಬೇಕಿದೆ
Last Updated 23 ಮಾರ್ಚ್ 2022, 19:45 IST
ಅಕ್ಷರ ಗಾತ್ರ

ಉಪಶಮನಕಾರಿ ಆರೈಕೆ ಹಾಗೂ ಬದುಕಿನ ಅಂತಿಮ ದಿನಗಳ ಆರೈಕೆ ಎಂದರೇನು? ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಪ್ರಕಾರ, ‘ಉಪಶಮನಕಾರಿ ಆರೈಕೆ’ ಎಂದರೆ ಜೀವಕ್ಕೆ ಅಪಾಯಕಾರಿಯಾದ ಕಾಯಿಲೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ನರಳುತ್ತಿರುವ ರೋಗಿಗಳು ಹಾಗೂ ಅವರ ಕುಟುಂಬದವರ ಬದುಕಿನ ಗುಣಮಟ್ಟ ಸುಧಾರಿಸುವಂತಹ ಆರೈಕೆಯ ವಿಧಾನ. ಇದು ದೈಹಿಕ, ಮಾನಸಿಕ ಅಥವಾ ಆಧ್ಯಾತ್ಮಿಕ ನೆಲೆಯಲ್ಲಿ ಯಾತನೆಯನ್ನು ತಡೆದು ಪರಿಹರಿಸುತ್ತದೆ. ಇದಕ್ಕಾಗಿ ವೈದ್ಯರು, ದಾದಿಯರು, ಸಹಾಯಕ ಸಿಬ್ಬಂದಿ, ಅರೆ ವೈದ್ಯಕೀಯ ಸಿಬ್ಬಂದಿ, ಔಷಧಶಾಸ್ತ್ರಜ್ಞರು, ಫಿಸಿಯೊಥೆರಪಿ ಪರಿಣತರು ಹಾಗೂ ಸ್ವಯಂಸೇವಕರ ತಂಡ ಇರಬೇಕಾಗುತ್ತದೆ. ಯಾತನೆ, ನೋವಿನಿಂದ ಮುಕ್ತವಾಗಿ ಘನತೆಯಿಂದ ಸಾಯಲು ರೋಗಿಗಳಿಗೆ ಅವಕಾಶ ಮಾಡಿಕೊಡುವುದು ಇದರ ಮೂಲ ಉದ್ದೇಶ.

‘ಬದುಕಿನ ಅಂತಿಮ ದಿನಗಳ ಆರೈಕೆ’ಯೂ ಇದೇ ರೀತಿ ಸಾವಿಗೆ ಹತ್ತಿರವಾಗಿರುವ ಸಂದರ್ಭದಲ್ಲಿ ನೀಡಲಾಗುವ ಬೆಂಬಲ ಹಾಗೂ ವೈದ್ಯಕೀಯ ಆರೈಕೆಯ ಕಡೆಗೆ ಗಮನಹರಿಸುತ್ತದೆ. ದೀರ್ಘಕಾಲದ ಕಾಯಿಲೆಯಿಂದ ಬಳಲುವ ವೃದ್ಧರಿಗೂ ಸಾವಿಗೆ ಮುಂಚೆ ಅನೇಕ ದಿನ, ವಾರ ಅಥವಾ ತಿಂಗಳುಗಟ್ಟಲೆ ಆರೈಕೆಯ ಅಗತ್ಯವಿರುತ್ತದೆ. ಇಂತಹ ಪ್ರಕರಣಗಳಲ್ಲಿ ಆಸ್ಪತ್ರೆಗೆ ಸೇರಿಸುವುದು ಸೂಕ್ತವಾಗುವುದಿಲ್ಲ. ಏಕೆಂದರೆ, ದೀರ್ಘಾವಧಿ ಚಿಕಿತ್ಸೆಯ ಪರಿಹಾರಕ್ಕಿಂತ ತೀವ್ರತರ ಲಕ್ಷಣಗಳಿಗೆ ತಕ್ಷಣದ ಪರಿಹಾರದ ನೆಮ್ಮದಿ ಮುಖ್ಯವಾಗಿರುತ್ತದೆ.

ಎರಡು ಮುಖ್ಯ ಪ್ರವೃತ್ತಿಗಳು, ಭಾರತದಲ್ಲಿ ಉಪಶಮನಕಾರಿ ಆರೈಕೆ ಹಾಗೂ ಬದುಕಿನ ಕೊನೆಯ ದಿನಗಳ ಆರೈಕೆಯ ಅಗತ್ಯವನ್ನು ಹೆಚ್ಚಿಸುತ್ತಿವೆ. ಮೊದಲನೆಯದು, ರಾಷ್ಟ್ರದಾದ್ಯಂತ ದೀರ್ಘಾವಧಿಯ ಕಾಯಿಲೆಗಳು ಹೆಚ್ಚಾಗುತ್ತಿರುವುದು. ಅದರಲ್ಲೂ ದೀರ್ಘಾವಧಿ ಆರೈಕೆ, ದೈಹಿಕ-ಮಾನಸಿಕ ನೋವು ನಿರ್ವಹಣೆ ಅಗತ್ಯವಿರುವ ವಿವಿಧ ಬಗೆಯ ಕ್ಯಾನ್ಸರ್‌ಗಳು ವಿಶೇಷವಾಗಿ ಹೆಚ್ಚಾಗುತ್ತಿವೆ. ಭಾರತದಲ್ಲಿ ಪ್ರತೀ ಒಂದು ಗಂಟೆಗೆ 60 ಜನರು ಕ್ಯಾನ್ಸರ್ ಹಾಗೂ ನೋವಿನಿಂದ ಸಾಯುತ್ತಾರೆ ಎಂದು ಅಂದಾಜು ಮಾಡಲಾಗಿದೆ. ಮುಖ್ಯವಾಗಿ ಈ ಗುಂಪಿನಲ್ಲಿ ಎಲ್ಲ ವಯೋಮಾನದ ವಯಸ್ಕರು ಹಾಗೂ ಮಕ್ಕಳು ಒಳಗೊಳ್ಳುತ್ತಾರೆ.

ಎರಡನೆಯದು, ವಿಶ್ವಬ್ಯಾಂಕ್ ಅಂಕಿಅಂಶಗಳ ಪ್ರಕಾರ, ಸರಾಸರಿ ಜೀವಿತಾವಧಿ 1960ರಲ್ಲಿ 41.5 ವರ್ಷಗಳಷ್ಟಿದ್ದದ್ದು 2019ರ ವೇಳೆಗೆ ಸುಮಾರು 70 ವರ್ಷಗಳಿಗೆ ಏರಿಕೆಯಾಗಿದೆ. ಹೀಗಾಗಿ ವೃದ್ಧರ ಜನಸಂಖ್ಯೆ ಹೆಚ್ಚಾಗುತ್ತಿದೆ: 2021ರಲ್ಲಿ 13.8 ಕೋಟಿ ವೃದ್ಧರು ಭಾರತ
ದಲ್ಲಿದ್ದು ಈ ಪೈಕಿ 6.7 ಕೋಟಿ ಪುರುಷರು ಹಾಗೂ 7.1 ಕೋಟಿ ಮಹಿಳೆಯರು ಎಂದು ಭಾರತ ಸರ್ಕಾರ ಅಂದಾಜು ಮಾಡಿದೆ. ಸುಮಾರು 60 ಲಕ್ಷ ಜನರಿಗೆ ಉಪಶಮನಕಾರಿ ಚಿಕಿತ್ಸೆ ಹಾಗೂ ಬದುಕಿನ ಅಂತಿಮ ದಿನಗಳ ಆರೈಕೆ ಅಗತ್ಯ ಪ್ರತಿವರ್ಷ ಉಂಟಾಗಬಹುದು ಎಂದೂ ಅಂದಾಜಿಸಲಾಗಿದೆ. ಹೀಗಿದ್ದೂ ಇಂತಹ ಆರೈಕೆಗಳನ್ನು ಪಡೆದುಕೊಳ್ಳುವ ಅವಕಾಶ ಇರುವವರು ಶೇಕಡ 1- 2ಕ್ಕಿಂತ ಕಡಿಮೆ. ಬಹುತೇಕ ಮಂದಿ ಆಸ್ಪತ್ರೆ ಆಧಾರಿತ ಪರಿಹಾರವನ್ನು ಆಶ್ರಯಿಸುತ್ತಾರೆ. ಇದು ಪರಿಣಾಮಕಾರಿಯಲ್ಲ, ಜೊತೆಗೆ ದುಬಾರಿ.

ಸುಮಾರು 30 ವರ್ಷಗಳ ಹಿಂದೆ ಭಾರತದ ಹಲವು ನಗರ ಪ್ರದೇಶಗಳಲ್ಲಿ ಎನ್‌ಜಿಒ ಹಾಗೂ ದಾನಧರ್ಮ ದತ್ತಿಸಂಸ್ಥೆಗಳು ನಡೆಸುವ ಉಪಶಮನಕಾರಿ ಚಿಕಿತ್ಸಾ ಕೇಂದ್ರಗಳು ಸ್ಥಾಪನೆಗೊಂಡವು. ನಂತರ 2012ರಲ್ಲಿ ಈ ಅಗತ್ಯವನ್ನು ಭಾರತ ಸರ್ಕಾರವೂ ಮನಗಂಡು ರಾಷ್ಟ್ರೀಯ ಆರೋಗ್ಯ ಅಭಿಯಾನದ ಭಾಗವಾಗಿ ಉಪಶಮನಕಾರಿ ಚಿಕಿತ್ಸಾ ಕಾರ್ಯಕ್ರಮವನ್ನು ಆರಂಭಿಸಿತು. ಆರೋಗ್ಯ ವ್ಯವಸ್ಥೆ, ಇತರ ಸಮುದಾಯ ಸಂಪನ್ಮೂಲಗಳು ಹಾಗೂ ರೋಗಿಯದೇ ಕುಟುಂಬದವರನ್ನು ಒಳಗೊಂಡಂತಹ ವಿಸ್ತೃತ ಬಹುಶಿಸ್ತೀಯ ವಿಧಾನವನ್ನು ಈ ಕಾರ್ಯಕ್ರಮವು ಅಳವಡಿಸಿಕೊಂಡಿದೆ. ಆದರೆ, ಈ ಯೋಜನೆಯು ಅನುಷ್ಠಾನದ ಮಾರ್ಗದರ್ಶಿಸೂತ್ರಗಳನ್ನು ಮಾತ್ರ ನೀಡುತ್ತದೆ, ಹೆಚ್ಚುವರಿ ಸಂಪನ್ಮೂಲಗಳನ್ನೇನೂ ನೀಡುವುದಿಲ್ಲ. ಹೀಗಾಗಿ ರಾಜ್ಯ ಮಟ್ಟದಲ್ಲಿ ಈ ಕಾರ್ಯಕ್ರಮದ ಪರಿಣಾಮ ಅಷ್ಟೇನೂ ಕಂಡುಬರುವುದಿಲ್ಲ.

ಉಪಶಮನಕಾರಿ ಹಾಗೂ ಬದುಕಿನ ಅಂತಿಮ ದಿನಗಳ ಆರೈಕೆ ಕಾರ್ಯಕ್ರಮದ ಯಶಸ್ವಿ ಮಾದರಿಯ ಗಮನಾರ್ಹ ಉದಾಹರಣೆ ಎಂದರೆ, ‘ಕೇರಳ ಮಾದರಿ’. ವಿಶಿಷ್ಟವಾದಂತಹ ಸಮುದಾಯ ಆಧಾರಿತ ಮಧ್ಯಪ್ರವೇಶ ಇದು. ಪರಿಪೂರ್ಣವಾದ ಈ ಆರೈಕೆ ಕ್ರಮವು ಮನೆಯಲ್ಲೇ ಆರೈಕೆಯನ್ನು ಉಚಿತವಾಗಿ ಒದಗಿಸಿಕೊಡುತ್ತದೆ. ಇದು, ಕುಟುಂಬದ ಎಲ್ಲಾ ಸದಸ್ಯರು- ರೋಗಿಗಳು ಹಾಗೂ ಆರೈಕೆ ಮಾಡುವವರ ಯೋಗಕ್ಷೇಮ ನೋಡಿಕೊಳ್ಳುತ್ತದೆ. ಮಾನಸಿಕ, ಆಧ್ಯಾತ್ಮಿಕ ಹಾಗೂ ಆರ್ಥಿಕ ಬೆಂಬಲವನ್ನೂ ಒದಗಿಸಿಕೊಡುತ್ತದೆ. ಅಗತ್ಯ ಬಿದ್ದಲ್ಲಿ ಮನೆಗೆ ದಾದಿಯ ಸೇವೆ, ವೈದ್ಯಕೀಯ ಉಪಕರಣ ಒದಗಿಸಿಕೊಡುವುದು, ಆಸ್ಪತ್ರೆಗೆ ಹೋಗಲು ಸಾರಿಗೆ ಬೆಂಬಲ ಮತ್ತು ಆರೈಕೆ ನೀಡುವವರಿಗೆ ಮಾನಸಿಕ, ಸಾಮಾಜಿಕ ಬೆಂಬಲದ ಜೊತೆಗೆ ಆಪ್ತಸಲಹೆಯೂ ಸೇರುತ್ತವೆ. ಉಪಶಮನಕಾರಿ ಆರೈಕೆಗಾಗಿ ಕೇರಳವು2022ರ ಬಜೆಟ್‌ನಲ್ಲಿ ಅನುದಾನ ತೆಗೆದಿರಿಸಿದೆ. ಜನಸಮುದಾಯದ ಕಿರುಕಾಣಿಕೆಗಳ ಮೂಲಕವೂ ಹಣ ಸಹಾಯ ಒದಗಿಸಲಾಗುವುದು. ವಿವಿಧ ಕ್ಷೇತ್ರಗಳ ಅಸಂಖ್ಯ ಸ್ವಯಂಸೇವಕರ ಪ್ರಯತ್ನಗಳ ಮೇಲೆ ಕಟ್ಟಲಾದ ಕೇರಳ ಮಾದರಿಯು, ಬದುಕಿನ ಅಂತಿಮ ಹಂತಗಳಲ್ಲಿ ಸುಸ್ಥಿರ ರೀತಿಯಲ್ಲಿ ಬದುಕಿನ ಗುಣಮಟ್ಟವನ್ನು ಸುಧಾರಿಸುವುದು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದೆ.

ಇಂತಹ ಪ್ರಯತ್ನಗಳು ಹೆಚ್ಚು ವ್ಯಾಪಕವಾಗಿ ಲಭ್ಯವಾಗಬೇಕು. ಎದುರಿಸಬೇಕಾದ ಹಲವು ಸವಾಲುಗಳೂ ಇವೆ. ಮೊದಲಿಗೆ, ಭಾರತದಲ್ಲಿ ಕಾಲಕ್ರಮೇಣ, ರೋಗಿಯ ಆರೈಕೆಯ ತತ್ವ ಎಂದರೆ ಆರೈಕೆ ಒದಗಿಸುವುದಕ್ಕಿಂತ ‘ಕಾಯಿಲೆ ವಾಸಿ ಮಾಡುವುದಕ್ಕೆ’ ಹೆಚ್ಚಿನ ಗಮನ ಕೇಂದ್ರೀಕೃತವಾಗಿದೆ. ಇದರಿಂದಾಗಿ, ಬಹುದೊಡ್ಡ ಸಂಖ್ಯೆಯ ರೋಗಿಗಳು ಅನಗತ್ಯ ಹಾಗೂ ಆಕ್ರಮಣಕಾರಿ ವೈದ್ಯಕೀಯ ಹಸ್ತಕ್ಷೇಪಗಳಿಗೆ ಗುರಿಯಾಗುತ್ತಾರೆ; ಜೊತೆಗೆ ತಮ್ಮ ಪ್ರೀತಿಪಾತ್ರರ ಅಂತಿಮ ದಿನಗಳಲ್ಲಿ ಭರಿಸಲಾಗದ ಚಿಕಿತ್ಸಾ ವೆಚ್ಚದ ಕಾರಣದಿಂದಾಗಿ ವೈದ್ಯಕೀಯ ಸಲಹೆಗೆ ವಿರುದ್ಧವಾಗಿ ಬಹುತೇಕ ಶೇಕಡ 80ರಷ್ಟು ರೋಗಿಗಳನ್ನು ಐಸಿಯುನಿಂದ ರೋಗಿಯ ಕುಟುಂಬಸ್ಥರು ಮನೆಗೆ ಕರೆದೊಯ್ಯುತ್ತಾರೆ.

ಎರಡನೆಯದಾಗಿ, ಉಪಶಮನಕಾರಿ ಚಿಕಿತ್ಸೆ ಒದಗಿಸುವ ಸಾಮರ್ಥ್ಯವಿರುವ ತರಬೇತಾದ ಸಿಬ್ಬಂದಿಯ ತೀವ್ರ ಕೊರತೆ ಇದೆ. ಆರೈಕೆಯ ಈ ಮುಖ್ಯ ವಲಯದ ಬಗ್ಗೆ ವೈದ್ಯಕೀಯ ಪಠ್ಯಗಳು ಹೆಚ್ಚಿನ ಗಮನವನ್ನೇ ನೀಡಿಲ್ಲ. ಸಮುದಾಯ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ಕಾರ್ಯಕ್ರಮಗಳು ಇದ್ದರೂ ಇದನ್ನು ಇನ್ನೂ ಹೆಚ್ಚು ವಿಸ್ತರಿಸುವ ಅಗತ್ಯ ಇದೆ. ಮೂರನೆಯದಾಗಿ, ಉಪಶಮನಕಾರಿ ಆರೈಕೆಗೆ ಹಣಕಾಸು ಸಂಗ್ರಹ ಹಾಗೂ ಸೇವಾಸೌಲಭ್ಯ ನೀಡಿಕೆಯಲ್ಲಿನ ಸ್ವಯಂಸೇವೆಯ ಚೈತನ್ಯವನ್ನು ಕೊಂಡಾಡಬಹುದಾದರೂ ವಿಭಿನ್ನ ಸನ್ನಿವೇಶಗಳಲ್ಲಿ ಇದನ್ನೇ ಪುನರಾವರ್ತಿಸುವುದು ಕಷ್ಟ.

ಉಪಶಮನಕಾರಿ ಆರೈಕೆ ಘಟಕಗಳ ಕಾರ್ಯಚಟುವಟಿಕೆಗಳಿಗೆ ಬಹಳಷ್ಟು ಹಣವನ್ನು ಸರ್ಕಾರ ಹಂಚಿಕೆ ಮಾಡಬೇಕು. ಅಲ್ಲದೆ ಇದನ್ನು ನಿಜಕ್ಕೂ ಸುಸ್ಥಿರವಾಗಿಸಲು ಈ ಸೇವೆಗಳನ್ನು ಒದಗಿಸುತ್ತಿರುವ ಸ್ವಯಂಸೇವಕರಿಗೆ ಒಂದಿಷ್ಟು ಅನುಕೂಲಗಳನ್ನು ಒದಗಿಸಬೇಕು. ಅಂತಿಮವಾಗಿ, ರೋಗಿಗಳಿಗೆ ವಿಷಯ ಸಂವಹನ ಮಾಡಲು ವೈದ್ಯರು ಹಾಗೂ ಇತರ ವೈದ್ಯಕೀಯ ತಜ್ಞರು ಸಮಯ ತೆಗೆದುಕೊಂಡು ಅವರಿಗಿರುವ ಆಯ್ಕೆಗಳ ಬಗ್ಗೆ ಮಾಹಿತಿ ನೀಡಬೇಕು. ಉಪಶಮನಕಾರಿ ಚಿಕಿತ್ಸೆ ಕುರಿತಾದ ಅರಿವು ಈಗಲೂ ಸೀಮಿತವಾಗಿದ್ದು, ಅಂತಹ ಸೇವೆಗಳ ಲಭ್ಯತೆಯ ಕುರಿತಾದ ಜಾಗೃತಿಯಂತೂ ಇನ್ನೂ ಕಡಿಮೆ ಇದೆ.

ಪ್ರೀತಿಪಾತ್ರರನ್ನು ಕಳೆದುಕೊಂಡು ಅಪಾರ ದುಃಖ ಅನುಭವಿಸಿರುವವರಿಗೆ, ಅವರ ಅಂತಿಮ ದಿನಗಳಲ್ಲಿ ಆರೈಕೆ ಮಾಡುವ ಕಷ್ಟ ಹಾಗೂ ಕಡೆಗೆ ಉಳಿದುಕೊಳ್ಳಬಹುದಾದ ಪ್ರಶ್ನೆಗಳೂ ಗೊತ್ತಿರುವಂತಹವು. ‘ನಾವು ಸಾಧ್ಯವಿದ್ದಂತಹ ಅತ್ಯುತ್ತಮ ಆರೈಕೆ ಒದಗಿಸಿದೆವೇ? ಭಿನ್ನ ರೀತಿಯಲ್ಲಿ ಇನ್ನೇನಾದರೂ ಮಾಡಬಹುದಿತ್ತೇ? ನಾವು ಸರಿಯಾಗಿ ನೋಡಿಕೊಂಡೆವೇ?’

ಇಂತಹ ಸಮಯದಲ್ಲಿ ಯಾತನೆ ಅನುಭವಿಸುತ್ತಿರುವ ರೋಗಿ ಹಾಗೂ ನಂತರ ಪ್ರೀತಿಪಾತ್ರರನ್ನು ಕಳೆದುಕೊಳ್ಳುವ ಕುಟುಂಬಕ್ಕೆ ಅಪಾರ ಸಾಂತ್ವನ ಒದಗಿಸಲು ಉಪಶಮನಕಾರಿ ಚಿಕಿತ್ಸೆ ಕಾರ್ಯಕ್ರಮದ ಲಭ್ಯತೆಯ ಅವಕಾಶ ಮುಖ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT