ಮಂಗಳವಾರ, ಮಾರ್ಚ್ 21, 2023
23 °C
ಐಪಿಎಲ್‌ನಿಂದ ದೇಶಕ್ಕೆ ಸಿಕ್ಕ ಲಾಭಗಳೇನು? ಕ್ರಿಕೆಟ್ ತಂಡದ ಬಲವರ್ಧನೆ ಹೇಗೆ?

ವಿಶ್ಲೇಷಣೆ | ಭಾರತದ ಕ್ರಿಕೆಟಿಗರಿಗೆ ಬೇಕೇ ವಿದೇಶಿ ಲೀಗ್?

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಿ20 ವಿಶ್ವಕಪ್‌ ಎದೆಗವಚಿಕೊಂಡು ಮುಖದಗಲ ನಗು ತುಂಬಿಕೊಂಡು ನಿಂತಿದ್ದ ಇಂಗ್ಲೆಂಡ್ ತಂಡದ ಜಾಸ್ ಬಟ್ಲರ್ ನೀಡಿದ ಹೇಳಿಕೆ ಗಮನ ಸೆಳೆಯಿತು.

‘ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಆಡಿದ ಅನುಭವ ನಮಗೆ ನೆರವಾಯಿತು’ ಎಂದು ಬಟ್ಲರ್ ಹೇಳಿದ್ದರು. ಅದಕ್ಕೂ ಮೂರು ದಿನಗಳ ಹಿಂದೆ ಇದೇ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಭಾರತ ತಂಡವು ಸೋತಾಗ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದ ಮಾತಿಗೆ ಬಟ್ಲರ್ ಹೇಳಿಕೆಯು ತಿರುಗೇಟಿನಂತೆ ಇತ್ತು. 

‘ಆಸ್ಟ್ರೇಲಿಯಾದಲ್ಲಿ ನಡೆಯುವ ಬಿಗ್ ಬ್ಯಾಷ್ ಲೀಗ್ ಟಿ20 ಟೂರ್ನಿಯಲ್ಲಿ ಇಂಗ್ಲೆಂಡ್ ಆಟಗಾರರು ಆಡಿದ್ದರು. ಅದರಿಂದ ಅವರಿಗೆ ಅನುಕೂಲವಾಯಿತು’ ಎಂದು ದ್ರಾವಿಡ್ ಹೇಳಿದ್ದರು. ಆಸ್ಟ್ರೇಲಿಯಾದ ವಾತಾವರಣ, ಪಿಚ್‌ಗಳಲ್ಲಿ ಆಡಿದ್ದರಿಂದ ಇಂಗ್ಲೆಂಡ್‌ಗೆ ಲಾಭವಾಯಿತು ಎಂಬುದು ಅವರ ಮಾತಿನ ಮರ್ಮವಾಗಿತ್ತು.

ಇದೇ ಹೇಳಿಕೆಯನ್ನು ಮುಂದಿಟ್ಟುಕೊಂಡು ಕೆಲವು ಮಾಜಿ ಕ್ರಿಕೆಟಿಗರು, ಭಾರತದ ಆಟಗಾರರಿಗೆ ವಿದೇಶಿ ಫ್ರ್ಯಾಂಚೈಸಿ ಲೀಗ್‌ಗಳಲ್ಲಿ ಆಡುವ ಅವಕಾಶ ನೀಡಬೇಕು ಎಂದು ಹೇಳುತ್ತಿದ್ದಾರೆ. ಆದರೆ ಈಗ ಇರುವ ನಿಯಮದಂತೆ, ಭಾರತದ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡಬೇಕೆಂದರೆ ಸ್ವದೇಶದಲ್ಲಿ ತಾವು ಆಡುವ ಎಲ್ಲ ಮಾದರಿಗಳ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ, ಬಿಸಿಸಿಐನಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು. ಆದರೀಗ ವಿಶ್ವಕಪ್ ಸೋಲಿನ ನೆಪದಲ್ಲಿ ಈ ನಿಯಮವನ್ನೇ ಬದಲಾಯಿಸಿ ‘ಆಟಗಾರರು ಎಲ್ಲಿ ಬೇಕಾದರೂ ಆಡಲಿ’ ಎಂದುಬಿಟ್ಟರೆ ಏನಾಗಬಹುದು?‌ ಅದರಿಂದ ಭಾರತದ ಕ್ರಿಕೆಟ್‌ಗೆ ಏನು ಉಪಯೋಗ?

ಇದಕ್ಕೆ ಉತ್ತರ ಸುಲಭ. ವಾಣಿಜ್ಯ ಚಟುವಟಿಕೆಯಾಗಿ ಬೆಳೆದಿರುವ ಕ್ರಿಕೆಟ್‌ಗೆ ಭಾರತ ಬಹುದೊಡ್ಡ ಮಾರುಕಟ್ಟೆ. ಅದಕ್ಕಾಗಿಯೇ ಐಪಿಎಲ್ ದೊಡ್ಡ ಯಶಸ್ಸು ಸಾಧಿಸಿದೆ. ಆದರೆ ಬೇರೆ ದೇಶಗಳಲ್ಲಿ ನಡೆಯುತ್ತಿರುವ ಬಿಗ್‌ ಬ್ಯಾಷ್ ಸೇರಿದಂತೆ ಕೆಲವು ಫ್ರ್ಯಾಂಚೈಸಿ ಲೀಗ್‌ಗಳಲ್ಲಿ ಆಟಗಾರರಿಗೆ ಸಿಗುತ್ತಿರುವ ದುಡ್ಡು, ಫ್ರ್ಯಾಂಚೈಸಿಗಳಿಗೆ ಆಗುತ್ತಿರುವ ಲಾಭ ಅಷ್ಟಕ್ಕಷ್ಟೇ. ಅದಕ್ಕೆ ಕಾರಣ ಭಾರತದ ಆಟಗಾರರು ಆ ಲೀಗ್‌ಗಳಲ್ಲಿ ಆಡುವುದಿಲ್ಲ ಎಂಬುದು. ಭಾರತ ತಂಡ ಹಾಗೂ ತಾರಾಮೌಲ್ಯದ ಆಟಗಾರರು ಇದ್ದರೆ ಟೂರ್ನಿಗಳ ಖದರ್ ಬೇರೆಯೇ ಆಗಿರುತ್ತದೆ.

ಭಾರತ ಸೋತರೂ ಗೆದ್ದರೂ ಟೀಕೆ ಹಾಗೂ ಮೆಚ್ಚುಗೆಗಳ ಮಹಾಪೂರ ಹರಿಯುತ್ತದೆ. ಹೀನಾಯ ಸೋಲುಗಳನ್ನು ಬಹುಬೇಗನೆ ಮರೆಯುವ ವಿಶಾಲ ‘ಹೃದಯ’ ಇಲ್ಲಿಯ ಅಭಿಮಾನಿಗಳಿಗೆ ಇದೆ. ಈ ಕಾರಣಕ್ಕಾಗಿ ಎಲ್ಲ ದೇಶಗಳಿಗೂ ಭಾರತ ಹಾಗೂ ಇಲ್ಲಿಯ ಆಟಗಾರರು ‘ಚಿನ್ನದ ನಾಣ್ಯ’ ಸುರಿಸುವ ಯಂತ್ರಗಳಿದ್ದಂತೆ. ಅದಕ್ಕಾಗಿಯೇ ಪ್ರತಿಯೊಂದು ಕ್ರಿಕೆಟ್ ರಾಷ್ಟ್ರವೂ ಭಾರತ ತಂಡದೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಬೆಳೆಸಲು ತುದಿಗಾಲಿನಲ್ಲಿ ನಿಂತಿರುತ್ತದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಭಾರತ ಆಡಿದರೂ ಕೋಟ್ಯಂತರ ಜನ ಟಿ.ವಿ, ಡಿಜಿಟಲ್ ತಾಣಗಳ ಮೂಲಕ ವೀಕ್ಷಿಸುವುದು ಖಚಿತ. ಕ್ರೀಡಾಂಗಣಗಳೂ ಭರ್ತಿಯಾಗುತ್ತವೆ. ಇದರಿಂದ ಪ್ರಾಯೋಜಕರಿಗೆ ಮತ್ತು ಆಯೋಜಕರಿಗೂ ಲಾಭ. ಈಚೆಗೆ ನಡೆದ ವಿಶ್ವಕಪ್ ಟೂರ್ನಿಯ ಬಹುತೇಕ ಎಲ್ಲ ಪಂದ್ಯಗಳಲ್ಲಿ ಕ್ರೀಡಾಂಗಣದಲ್ಲಿ ಸೇರಿದ ಪ್ರೇಕ್ಷಕರ ಸಂಖ್ಯೆಯಲ್ಲಿ ಭಾರತೀಯ ಮೂಲದವರು ಶೇ 80ರಷ್ಟು ಇದ್ದರು. 

ದಕ್ಷಿಣ ಆಫ್ರಿಕಾದಲ್ಲಿ ಶುರುವಾಗಲಿರುವ ಟಿ20 ಲೀಗ್ ಟೂರ್ನಿಯ ಎಲ್ಲ ತಂಡಗಳನ್ನೂ ಐಪಿಎಲ್ ಫ್ರ್ಯಾಂಚೈಸಿಗಳ ಮಾಲೀಕರೇ ಖರೀದಿಸಿದ್ದಾರೆ. ಆದರೆ ಭಾರತದ ಆಟಗಾರರಿಲ್ಲದೆ ಆ ಟೂರ್ನಿ ಯಶಸ್ವಿ ಯಾಗುವುದೇ ಎನ್ನುವ ಲೆಕ್ಕಾಚಾರ ಜೋರಾಗಿಯೇ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಕೆಲವು ಕ್ರಿಕೆಟಿಗರು ಎಲ್ಲ ಮಾದರಿಗಳಿಂದ ನಿವೃತ್ತಿ ಘೋಷಿಸುತ್ತಿರುವ ಹಿಂದೆ ವಿದೇಶಿ ಲೀಗ್‌ನಲ್ಲಿ ಆಡುವ ಉದ್ದೇಶವಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ ಹಾಲಿ ತಾರೆಗಳು ಎನಿಸಿಕೊಂಡಿರುವ ಆಟಗಾರರು ಇದ್ದರೆ ಮಾತ್ರ ಆ ಲೀಗ್‌ಗಳ ವರ್ಚಸ್ಸು ಹೆಚ್ಚುತ್ತದೆ ಎನ್ನುವುದು ಸುಳ್ಳಲ್ಲ. ಈ ಹಿನ್ನೆಲೆಯಲ್ಲಿ ದ್ರಾವಿಡ್ ಹೇಳಿಕೆಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಕಾಣದ ಕೈಗಳು ಯತ್ನಿಸುವ ಅನುಮಾನ ಕಾಡುತ್ತಿದೆ.

2008ರಲ್ಲಿ ಐಪಿಎಲ್ ಆರಂಭವಾದಾಗ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಜಹೀರ್ ಖಾನ್, ಮಹೇಂದ್ರಸಿಂಗ್ ಧೋನಿ, ವಿವಿಎಸ್ ಲಕ್ಷ್ಮಣ್‌ರಂಥ ದಿಗ್ಗಜರು ಬೇರೆ ಬೇರೆ ತಂಡಗಳಲ್ಲಿ ಐಕಾನ್ ಆಟಗಾರರಾಗಿದ್ದರು. ಆ ಕಾಲಘಟ್ಟದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇವರು ಸೂಪರ್‌ಸ್ಟಾರ್‌ಗಳಾಗಿದ್ದರು. ಅಷ್ಟೇ ಅಲ್ಲ, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್‌ನ ತಾರೆಯರೂ ಇದ್ದ ಕಾರಣ ಐಪಿಎಲ್ ಸೂಪರ್ ಹಿಟ್ ಆಯಿತು. ಕಳೆದ 15 ವರ್ಷಗಳಲ್ಲಿ ಐಪಿಎಲ್ ಅಗಾಧವಾಗಿ ಬೆಳೆದಿದೆ. ಮಾಧ್ಯಮ ಪ್ರಸಾರ ಹಕ್ಕುಗಳೇ 48 ಸಾವಿರ ಕೋಟಿ ರೂಪಾಯಿಗಳಿಗೆ ಹರಾಜಾಗುವಷ್ಟು ಜನಪ್ರಿಯವಾಗಿದೆ. 

ಈ ಅವಧಿಯಲ್ಲಿ ವಿಂಡೀಸ್ ಹಾಗೂ ಇಂಗ್ಲೆಂಡ್ ತಲಾ ಎರಡು ಬಾರಿ, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ತಲಾ ಒಂದು ಸಲ ಟಿ20 ವಿಶ್ವಕಪ್ ಜಯಿಸಿವೆ. ಆದರೆ, ಭಾರತ ತಂಡ 2014ರಲ್ಲಿ ಫೈನಲ್ ತಲುಪಿದ್ದು ಬಿಟ್ಟರೆ ಪ್ರಶಸ್ತಿ ಜಯಿಸಿಲ್ಲ. 2007ರಲ್ಲಿ ಮಹೇಂದ್ರಸಿಂಗ್ ಧೋನಿ ಬಳಗವು ಮೊದಲ ವಿಶ್ವಕಪ್ ಗೆದ್ದಾಗ ಇನ್ನೂ ಐಪಿಎಲ್ ಆರಂಭವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನೋಡಿದರೆ ಭಾರತ ತಂಡವು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಲಾಢ್ಯವಾಗಲು ಭಾರತದವರು ಐಪಿಎಲ್‌ ಅನುಭವವನ್ನು ಬಳಸಿಕೊಳ್ಳುವಲ್ಲಿ ಸಫಲವಾಗಿಲ್ಲ ಎಂದೂ ಹೇಳಬಹುದು. ಐಸಿಸಿ ವೇಳಾಪಟ್ಟಿಯ ದಟ್ಟಣೆಯಿಂದಾಗಿ ಒತ್ತಡವಾಗುತ್ತಿದೆ ಎಂದು ಹೇಳಿ ವಿಶ್ರಾಂತಿ ಪಡೆಯುವ ಆಟಗಾರರು, ಐಪಿಎಲ್ ಜೊತೆಗೆ ವಿದೇಶಿ ಲೀಗ್‌ಗಳಲ್ಲಿಯೂ ಆಡಲು ಹೋದರೆ ದೇಶದ ತಂಡದಿಂದ ಮತ್ತಷ್ಟು ದೂರ ಉಳಿಯಬಹುದಲ್ಲವೇ?

ಆದ್ದರಿಂದ ನಿಯಮ ಬದಲಾವಣೆಯ ಯೋಚನೆ ಸಾಧುವಲ್ಲ ಎನಿಸುತ್ತದೆ. ಐಪಿಎಲ್‌ನಿಂದ ರಾಷ್ಟ್ರೀಯ ತಂಡದ ಬಲ ಹೆಚ್ಚಿಸುವ ಚರ್ಚೆಗಳು ನಡೆದರೆ ಸೂಕ್ತವಾಗಬಹುದು. ಬೇರೆ ದೇಶಗಳ ಆಟಗಾರರು ಐಪಿಎಲ್‌ನಲ್ಲಿ ಆಡುವಾಗಲೂ ದುಡ್ಡಿನ ಮೇಲೆ ಕಣ್ಣಿಟ್ಟಿರುತ್ತಾರೆ ನಿಜ. ಆದರೆ ಇಲ್ಲಿ ಕಲಿತ ಕೌಶಲಗಳನ್ನು ತಮ್ಮ ದೇಶಕ್ಕೆ ಲಾಭವಾಗುವಂತೆ ವಿನಿಯೋಗಿಸುತ್ತಾರೆ. ದೇಶದ ತಂಡವನ್ನು ಪ್ರತಿನಿಧಿಸುವ ಅವಕಾಶವನ್ನು ಬಿಟ್ಟು ಕೊಡುವುದಿಲ್ಲ. ಅದಕ್ಕಾಗಿ ಐಪಿಎಲ್ ಪಂದ್ಯಗಳನ್ನೇ ತ್ಯಜಿಸುತ್ತಾರೆ. ಅಲ್ಲದೆ ಸದಾ ಪ್ರಯೋಗಶೀಲ ಹಾಗೂ ಚಲನಶೀಲವಾಗಿರುವ ಟಿ20 ಮಾದರಿಗೆ ಬೇಕಾದ ನಾಯಕತ್ವದ ಗುಣವನ್ನು ಐಪಿಎಲ್‌ನಲ್ಲಿ ಕಲಿತು ಹೋಗುತ್ತಾರೆ.

ಚುಟುಕು ಮಾದರಿಯ ಪಂದ್ಯದ ಪ್ರತಿಯೊಂದು ಓವರ್‌ ಕೂಡ ಮಹತ್ವದ್ದು. ವಿಕೆಟ್‌ ಗಳಿಕೆಯಷ್ಟೇ ಡಾಟ್‌ಬಾಲ್‌ಗೂ ಇಲ್ಲಿ ಕಿಮ್ಮತ್ತಿದೆ. ಆದ್ದರಿಂದ ಡ್ರೆಸ್ಸಿಂಗ್ ರೂಮ್‌ನಲ್ಲಿ ನಡೆದ ಸಭೆಯಲ್ಲಿ ಸಿದ್ಧಪಡಿಸಿಕೊಂಡು ಬಂದ ಯೋಜನೆಯನ್ನು ಪಂದ್ಯ ನಡೆಯುವ ಹಂತದಲ್ಲಿ ಪರಿಸ್ಥಿತಿಗೆ ತಕ್ಕಂತೆ ಪರಿಷ್ಕರಿಸುವ ಚಾಕಚಕ್ಯತೆ ನಾಯಕನಿಗೆ ಇರಬೇಕು. ಜಾಸ್ ಬಟ್ಲರ್ ಪ್ರಯೋಗಗಳಿಗೆ ಹಿಂಜರಿಯಲಿಲ್ಲ. ಅದಕ್ಕೇ ಗೆದ್ದರು. ಆದರೆ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದ ನಾಯಕನೆಂಬ ಹೆಗ್ಗಳಿಕೆ ಇರುವ ರೋಹಿತ್ ಶರ್ಮಾ ಇಲ್ಲಿ ಬ್ಯಾಟಿಂಗ್ ಹಾಗೂ ನಾಯಕತ್ವ ಎರಡರಲ್ಲೂ ಹಿಂದುಳಿದರು. ತಾವು ಮತ್ತು ಕೆ.ಎಲ್‌.ರಾಹುಲ್ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ಸತತ ವೈಫಲ್ಯ ಅನುಭವಿಸಿದರೂ ಬದಲಾವಣೆ ಮಾಡಲು ಮುಂದಾಗಲಿಲ್ಲ. ಹಾಗಿದ್ದರೆ ಐಪಿಎಲ್‌ನಲ್ಲಿ ಆಡಿ ಅವರು ಗಳಿಸಿದ ಅನುಭವದ ಲಾಭವೇನು?

ಇದೇ 20ರಿಂದ ಫಿಫಾ ವಿಶ್ವಕಪ್ ಟೂರ್ನಿ ಕತಾರ್‌ನ ದೋಹಾದಲ್ಲಿ ಆರಂಭವಾಗಲಿದೆ. ಫುಟ್‌ಬಾಲ್ ಪ್ರೀಮಿಯರ್ ಲೀಗ್‌ಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಗಳಿಸಿದ ತಾರಾಮಣಿಗಳು ತಮ್ಮ ದೇಶದ ತಂಡಗಳಿಗಾಗಿ ಆಡುವ ಪರಿಯನ್ನು ಕಣ್ತುಂಬಿಕೊಳ್ಳುವ ಅವಕಾಶ ಇದು. ಭಾರತದ  ಕ್ರಿಕೆಟಿಗರಿಗೆ ಇದು ಪ್ರೇರಣೆ ಯಾಗಬಹುದು ಅಲ್ಲವೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು