ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಸಂಭಾವ್ಯ ಬರಕ್ಕೆ ಕೆರೆಯೆಂಬ ಮದ್ದು

ಜೀವಜಲದ ಮೂಲಗಳನ್ನು ಸಂರಕ್ಷಿಸಬೇಕಾದ ತುರ್ತುಸ್ಥಿತಿ ಈಗ ಬಂದಿದೆ
Last Updated 6 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಆರೋಗ್ಯವೆಂಬ ಭಾಗ್ಯ ಸಿದ್ಧಿಸಬೇಕಾದರೆ ಶುದ್ಧ ನೀರಿನ ಲಭ್ಯತೆ ಇರಬೇಕು. ಬಹಳಷ್ಟು ಕಾಯಿಲೆಗಳು ಅಶುದ್ಧವಾದ ನೀರಿನಿಂದಲೇ ಪ್ರಾಪ್ತವಾಗುತ್ತವೆ ಎಂಬುದನ್ನು ವೈದ್ಯಲೋಕ ಸಾರಿ ಹೇಳಿದೆ. ನಾಳೆಗಳ ಸಂಭಾವ್ಯ ಯುದ್ಧಗಳು ನೀರಿಗಾಗಿಯೇ ನಡೆಯುತ್ತವೆ ಎಂಬ ಭವಿಷ್ಯವನ್ನು ಜಲತಜ್ಞರು ನುಡಿಯುತ್ತಲೇ ಇದ್ದಾರೆ. ಆದರೆ, ನಮ್ಮ ನೀರಿನ ಸ್ಥಿತಿಗತಿ ಏನಾಗಿದೆ?

ನೀರಿಲ್ಲದೆ ನಾಲ್ಕು ದಿನವೂ ಬದುಕಲಾರದ ಮನುಷ್ಯ, ನೀರಿನ ಕುರಿತಾಗಿ ಇಷ್ಟೇಕೆ ಉಪೇಕ್ಷೆ ಹೊಂದಿದ್ದಾನೆ? ಏಕೆ ನಮ್ಮ ಜಲಮೂಲಗಳು, ನದಿಗಳು, ಕೆರೆ-ಕುಂಟೆಗಳು ಮಾಲಿನ್ಯದ ಮಡುಗಳಾಗಿವೆ? ದಕ್ಷಿಣ ಭಾರತದ ಚಿರಾಪುಂಜಿಯೆಂದೇ ಖ್ಯಾತವಾಗಿರುವ ತೀರ್ಥಹಳ್ಳಿಯ ಆಗುಂಬೆ ಪ್ರದೇಶವನ್ನು ಬರಪೀಡಿತವೆಂದು ಘೋಷಣೆ ಮಾಡುವ ಅನಿವಾರ್ಯ ನಮಗೇಕೆ ಬಂತು? ಮಲೆನಾಡಿನ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ, ಗುಡ್ಡಬೆಟ್ಟಗಳಿಂದ ಕೂಡಿದ ಶಿವಮೊಗ್ಗ ಜಿಲ್ಲೆಯ ತಾಲ್ಲೂಕುಗಳಲ್ಲೂ ನೀರಿನ ಕೊರತೆಯೇಕೆ? ಏಷ್ಯಾ ಖಂಡದಲ್ಲೇ ಅತ್ಯಂತ ಹೆಚ್ಚು ಕೆರೆಗಳನ್ನು ಹೊಂದಿದ ತಾಲ್ಲೂಕು ಎಂದು ಪ್ರಸಿದ್ಧಿ ಪಡೆದ ಸೊರಬ ತಾಲ್ಲೂಕಿನ ಬಹಳಷ್ಟು ಹಳ್ಳಿಗಳೇಕೆ ಬರದಿಂದ ಬಳಲುತ್ತಿವೆ? ಇಂತಹ ಹಲವಾರು ಪ್ರಶ್ನೆಗಳಿವೆ.

ಪಶ್ಚಿಮಘಟ್ಟಗಳ ತಪ್ಪಲುಗಳೆಂದರೆ, ಹದವಾದ ಮಳೆಗಾಲದಲ್ಲಿ ಬೀಳುವ ಹನಿಗಳನ್ನು ಹಿಡಿದಿಟ್ಟು
ಕೊಳ್ಳುವ ಸ್ಪಂಜಿನಂತೆ. ಆ ತಪ್ಪಲುಗಳು ತಮ್ಮ ಒಡಲಲ್ಲಿ ಶೇಖರಿಸಿಟ್ಟುಕೊಂಡ ನೀರನ್ನು ಚಳಿ ಮತ್ತು ಬೇಸಿಗೆ ಕಾಲದಲ್ಲಿ ನಿಧಾನಗತಿಯಲ್ಲಿ ಬಿಟ್ಟುಕೊಡುತ್ತವೆ. ಚಿಕ್ಕ ಚಿಕ್ಕ ಹಲವಾರು ತೊರೆಗಳು ಸೇರಿ ಹಳ್ಳವಾಗುತ್ತದೆ. ಹಲವಾರು ಹಳ್ಳಗಳು ಸೇರಿ ನದಿಯಾಗುತ್ತದೆ ಮತ್ತು ಸಮುದ್ರ ಸೇರುತ್ತದೆ. ಸಮುದ್ರದಿಂದ ಆವಿಯಾದ ನೀರು ಮೋಡವಾಗಿ, ಮತ್ತೆ ಹಸುರು ಗಿರಿಶಿಖರಗಳ ಆಕರ್ಷಣೆಗೆ ಸಿಲುಕಿ ಮತ್ತೆ ಬಂದು ನೀರು ಸುರಿಸುತ್ತದೆ. ಆದರೆ, ಈ ಜಲಚಕ್ರವೀಗ ಏರುಪೇರಾಗಿದೆ.

ಮಧ್ಯ ಪಶ್ಚಿಮಘಟ್ಟಗಳಲ್ಲಿ ಸಾವಿರಾರು ಎಕರೆ ನೈಸರ್ಗಿಕ ಅರಣ್ಯ ನಾಶವಾಗಿ, ಅಲ್ಲಿ ಏಕಜಾತಿ ನೆಡುತೋಪು ಬಂದಿದೆ. ಕಳೆದ 40 ವರ್ಷಗಳಲ್ಲಿ ಸಾವಿರಾರು ಟಿಎಂಸಿ ಅಡಿ ನೀರು ಕುಡಿದು ಬೆಳೆದ ಅಕೇಶಿಯಾ ಮರಗಳು ಕಟಾವಾಗಿ ದೇಶದ ಇತರ ಭಾಗಗಳಿಗೆ ಹೋಗಿವೆ. ಕಾಂಡದ ಭಾಗಗಳು ಅಳಿದುಳಿದ ಗುಡ್ಡಗಳಲ್ಲಿ ನೀರಿಂಗುವಿಕೆಗೆ ತಡೆ ಹಾಕಿವೆ. ಕೇರಳ ಪ್ರಭಾವಿತ ಶುಂಠಿ, ಉತ್ತರ ಭಾರತದ ದಾಹ ತಣಿಸುವ ಅನಾನಸ್, ಬೆಲೆಯೇರಿಕೆ ಕಂಡ ಅಡಕೆ ಜೊತೆಗೆ ಅನಿಯಂತ್ರಿತ ಪ್ರವಾಸೋದ್ಯಮದ ಕಾರಣಕ್ಕೆ ರೆಸಾರ್ಟ್, ಹೋಂ ಸ್ಟೇಗಳು ಗುಡ್ಡಗಳ ನೈಸರ್ಗಿಕ ರಚನೆಯನ್ನೇ ಬದಲಿಸಿವೆ. ಮಳೆಗಾಲದಲ್ಲಿ ಅತಿಹೆಚ್ಚಿನ ಮಣ್ಣಿನ ಸವಕಳಿಯಾಗಿ ಊರಿನ‌ ಕೆರೆಗಳನ್ನು ಮುಚ್ಚಿಹಾಕಿದೆ.

ಸಾಗರ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದ ಬಂಗಾರಮ್ಮ ಮತ್ತು ಆನೆಸೊಂಡಿಲು ಕೆರೆಗಳು
ಪುನಶ್ಚೇತನಗೊಂಡಿದ್ದರಿಂದ, ಏಪ್ರಿಲ್ ತಿಂಗಳಿನಲ್ಲೂ ತಲೆಹೊಳೆಯಲ್ಲಿ ನೀರು ಹರಿಯುತ್ತಿರುವ ನಿತ್ಯ ದೃಷ್ಟಾಂತವಿದೆ. ನೀರಿನ ಸಮೃದ್ಧಿ ಫಲವಾಗಿ ಆ ಭಾಗದಲ್ಲಿ ಒಟ್ಟೂ ವನ್ಯಜೀವಿಗಳ ಸಂಖ್ಯೆ ಹೆಚ್ಚುತ್ತಿದೆ. ಆಕಾಶವಾಸಿಗಳು ಬಿತ್ತುವ ಬೀಜದಿಂದ ಆ ಭಾಗದಲ್ಲಿ ಖರ್ಚಿಲ್ಲದೇ ಕಾಡು ಬೆಳೆಯುತ್ತದೆ. ಇಲ್ಲೊಂದು ಲೆಕ್ಕಾಚಾರವನ್ನು ಹೇಳಬೇಕು; ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮವು ರಾಜ್ಯದ ಪ್ರತೀ ತಾಲ್ಲೂಕಿನಲ್ಲೂ ಅರಣ್ಯ ನರ್ಸರಿಯನ್ನು ಹೊಂದಿದೆ. ಅಲ್ಲಿ ಪ್ರತಿವರ್ಷ ಗಿಡಗಳನ್ನು ಬೆಳೆಸಲಾಗುತ್ತದೆ. ಮೊದಲಿಗೆ ಬೀಜ ಸಂಗ್ರಹಣೆ, ನಂತರದಲ್ಲಿ ಅದನ್ನು ಮಡಿ ಮಾಡಿ, ಮೊಳಕೆ ಬರಿಸುವುದು, ಚಿಕ್ಕ ಗಿಡವನ್ನು ಮರಳು-ಮಣ್ಣು ಮಿಶ್ರಿತ ಪ್ಲಾಸ್ಟಿಕ್ ಕೊಟ್ಟೆಯಲ್ಲಿ ನಾಟಿ ಮಾಡುವುದು, ವರ್ಷದ ನಂತರದಲ್ಲಿ ಚಿಕ್ಕ ಕೊಟ್ಟೆಯಿಂದ ದೊಡ್ಡ ಕೊಟ್ಟೆಗೆ ವರ್ಗಾಯಿಸುವುದು, ಬೇಸಿಗೆಯಲ್ಲಿ ನರ್ಸರಿಯ ಕೊಳವೆಬಾವಿಯಿಂದ ನೀರು ಹಾಯಿಸುವುದು, ಮೂರು ವರ್ಷಗಳಾದ ಮೇಲೆ ಅದನ್ನು ಆಯ್ದ ಪ್ರದೇಶದಲ್ಲಿ ನೆಡುವುದು, ಬಹುತೇಕ ಗಿಡಗಳು ಮುಂದಿನ ಬೇಸಿಗೆಯಲ್ಲಿ ಸಾಯುವುದು. ನರ್ಸರಿಯಲ್ಲಿ ಗಿಡಗಳನ್ನು ಬೆಳೆಸುವಾಗ ಎಷ್ಟೆಲ್ಲ ಹಾನಿಯಾಗುತ್ತದೆ. ನದಿಯಿಂದ ಮರಳು ತರಬೇಕು, ಯಾವುದೋ ಗುಡ್ಡ ಬಗೆದೇ ಮಣ್ಣು ತರಬೇಕು, ನೀರಿಗಾಗಿ ಕೊಳವೆ ಬಾವಿ ಬೇಕು, ನೀರೆತ್ತಲು ಪಂಪ್‍ಸೆಟ್ ಮತ್ತದಕ್ಕೆ ವಿದ್ಯುತ್ ಹಾಗೂ ಮಣ್ಣಿನಲ್ಲಿ ಕರಗದ ಪ್ಲಾಸ್ಟಿಕ್ ತ್ಯಾಜ್ಯದ ಬೋನಸ್ಸು ಬೇರೆ.

ಅದೇ ಒಂದು ಕಬ್ಬೆಕ್ಕಿಗೋ ಮಂಗಟ್ಟೆಗೋ ಸುರಕ್ಷಿತ ಪ್ರದೇಶ ಲಭಿಸಿದರೆ, ಈ ಯಾವ ಆರ್ಥಿಕ ನಷ್ಟವಿಲ್ಲದೇ ನಿಸರ್ಗದ ಹೆಚ್ಚುವರಿ ಸಂಪತ್ತಿನ ಬಳಕೆಯಿಲ್ಲದೇ ಅಲ್ಲೊಂದು ನೈಸರ್ಗಿಕ ಕಾಡು ಸೃಷ್ಟಿಯಾಗುತ್ತದೆ. ಇದೇ ಅರಣ್ಯಗಳು ಮುಖ್ಯವಾಗಿ ನೀರಿನ ಸೆಲೆಗಳಾಗಿ ಪರಿವರ್ತಿತ
ವಾಗಿ ತಗ್ಗಿನ ಪ್ರದೇಶಗಳಿಗೆ ನೀರಿನ ಆಶ್ರಯವಾಗುತ್ತವೆ. ನಿಸರ್ಗದತ್ತ ಜಲಚಕ್ರದ ಕೊಂಡಿ ಕಳಚಿದರೆ, ಮುಂದೆ ನೀರಿಗಾಗಿ ಹಾಹಾಕಾರ, ದೊಂಬಿ, ಜಗಳ ಇತ್ಯಾದಿ.

ಇಂತಹ ದುರಿತ ಕಾಲದಲ್ಲೂ ಕೆಲವು ಆಶಾಕಿರಣಗಳು ಜಲಭದ್ರತೆಯ ತಂಪು ನೀಡುತ್ತಿವೆ. ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕೆಲವು ಸಂಘಟನೆಗಳು ಪುರಾತನ ಜಲಮೂಲಗಳಾದ ಕೆರೆ-ಕುಂಟೆಗಳನ್ನು ಪುನಶ್ಚೇತನ
ಗೊಳಿಸುತ್ತಿವೆ. ಊರ ಜನರ ತನು-ಧನ ಹಾಗೂ ಸಾರ್ವಜನಿಕರ ದೇಣಿಗೆಯ ನೆರವಿನಿಂದ ನೀರ ಸಮೃದ್ಧಿ ಸಾಧ್ಯವಾಗುತ್ತಿದೆ. ಉದಾಹರಣೆಯಾಗಿ, ವರದಾ ನದಿ ಹುಟ್ಟುವ ಸ್ಥಳದಿಂದ ಬರೀ 500 ಮೀಟರ್ ದೂರದಲ್ಲಿ ಅಗಸ್ತ್ಯ ತೀರ್ಥವೆಂಬ ಪುರಾತನ ಕೆರೆಯಿದೆ. ಅದು ಸಂಪೂರ್ಣ ಮುಚ್ಚಿಹೋಗಿ ನೀರು ಕಾಣದ ಹಾಗೆ ಆಗಿತ್ತು. ಕೆರೆಯ ತುಂಬಾ ಮುಳ್ಳು ಮುಂಡಿಗೆ ಮಟ್ಟಿ ಬೆಳೆದು ತನ್ನ ಕೊನೆಯುಸಿರನ್ನು ಎಳೆಯುವ ಹಂತದಲ್ಲಿತ್ತು. ಧಾರ್ಮಿಕವಾಗಿಯೂ ಮಹತ್ವ ಹೊಂದಿದ ಅಗಸ್ತ್ಯ ತೀರ್ಥದ ಪುನಶ್ಚೇತನ ಕೆಲಸ ಇದೀಗ ಪ್ರಾರಂಭವಾಗಿದೆ.

ಪೇಟೆ ಪಟ್ಟಣಗಳಲ್ಲಿರುವ ಸಾಯುತ್ತಿರುವ ಕೆರೆಗಳನ್ನು ಬೇಗ ಬೇಗನೆ ಕೊಲ್ಲಲು ರಿಯಲ್ ಎಸ್ಟೇಟ್ ಮಾಫಿಯಾ ಹೊಂಚು ಹಾಕಿ ಕುಳಿತಿರುತ್ತದೆ. ಪಟ್ಟಣದಲ್ಲಿರುವ ಎಲ್ಲಾ ರೀತಿಯ ತ್ಯಾಜ್ಯಗಳನ್ನು ತಂದು ಕೆರೆಯಲ್ಲಿ ಸುರಿಯಲಾಗುತ್ತದೆ. ನಮ್ಮಲ್ಲಿ ಸಾರ್ವಜನಿಕರು ಇಂತಹ ಕೆರೆ ದುರಂತಗಳ ಕುರಿತಾಗಿ ಪ್ರಶ್ನೆ ಮಾಡುವುದಿಲ್ಲ. ಇದು ಮಾಫಿಯಾಗೆ ವರವಾಗಿ ಪರಿಣಮಿಸುತ್ತದೆ. ಹಿಂದೊಂದು ಕಾಲದಲ್ಲಿ ಸಾಗರ ಪಟ್ಟಣದಲ್ಲಿ ಸುಮಾರು 150ಕ್ಕಿಂತ ಹೆಚ್ಚು ಸಾರ್ವಜನಿಕ ತೆರೆದ ಬಾವಿಗಳಿದ್ದವು. ಬೆಳೆಯುತ್ತಿರುವ ಜನಸಂಖ್ಯೆಗೆ ನೀರು ನೀಡುವ ಭರದಲ್ಲಿ ಆಡಳಿತವು ಜನರಿಗೆ ಯಾವಾಗ ನಲ್ಲಿ ನೀರು ಪರಿಚಯಿಸಿತೋ ನೂರಾರು ವರ್ಷಗಳಿಂದ ಸೇವೆ ನೀಡಿದ ತೆರೆದ ಬಾವಿಗಳು ಕಣ್ಮರೆಯಾದವು. ಈಗ ಸಾಗರ ಪಟ್ಟಣದಲ್ಲಿ ಇರುವ ಒಂದೋ ಅಥವಾ ಎರಡು ಬಾವಿಗಳು ಬಳಕೆಯಿಲ್ಲದೇ ಸೊರಗಿವೆ. ಸಾರ್ವಜನಿಕ ಬಾವಿಗಳು ಹಾಗೂ ಕೆರೆಗಳು ಮಹತ್ವ ಕಳೆದುಕೊಳ್ಳುವಲ್ಲಿ ಕೊಳವೆ ಬಾವಿಗಳ ಪಾತ್ರ ಬಹಳ ಹಿರಿದಾಗಿದೆ. ಗ್ರಾಮ ಪಂಚಾಯಿತಿಗಳು ಕೆರೆ ಪುನಶ್ಚೇತನಕ್ಕೆ ಗಮನ ಕೊಡಲಿಲ್ಲ. ಬೇಸಿಗೆಯಲ್ಲಿ ನೀರಿನ ಅಭಾವವಾದಾಗ, ನೀರಿನ ಆದ್ಯತೆಯ ಮೂಲ ಕೊಳವೆ ಬಾವಿಗಳಾದವು. ಕೊಳವೆ ಬಾವಿಗಳು ಬತ್ತಿ ಹೋಗುತ್ತವೆ. ಆಗ ಮತ್ತೊಂದು, ಮಗದೊಂದು ಹೀಗೆ ಜೀವಜಲಕ್ಕಾಗಿ ಭೂಗರ್ಭ ಕೊರೆಯುವ ಸರ್ಕಾರಿ ಚಳವಳಿ ಮತ್ತಷ್ಟು ತೀವ್ರತರನಾಗುತ್ತದೆ.

ಮಧ್ಯ ಪಶ್ಚಿಮಘಟ್ಟದ ಯಾವುದೇ ಹಳ್ಳಿಯಲ್ಲಿ ನೋಡಿದರೂ ಕನಿಷ್ಠ ಎರಡು ಕೆರೆಗಳು ಕಾಣಸಿಗುತ್ತವೆ. ಇಡೀ ಹಳ್ಳಿಯ ತೆರೆದ ಬಾವಿಗಳಲ್ಲಿ ಸದಾ ನೀರಿನ ಒರತೆಯಿರುತ್ತದೆ. ಮೇ ತಿಂಗಳಲ್ಲೂ ನೀರು ತುಂಬಿರುವ ಕೆರೆಗಳಿರುವ ಹಳ್ಳಿಗಳು ಬರದ ಸುಳಿಗೆ ಸಿಲುಕುವುದಿಲ್ಲ. ಬಹಳ ಸರಳವಾದ ಈ ಸೂತ್ರ ಇದೀಗ ಹಿನ್ನೆಲೆಗೆ ಸರಿದಿದೆ. ಇದಕ್ಕೆ ಮದ್ದರೆಯಬೇಕು, ಅದಕ್ಕೊಂದು ಲೆಕ್ಕಾಚಾರವೂ ಇರಬೇಕು. ಒಂದು ಎಕರೆ ಪ್ರದೇಶದಲ್ಲಿ ಒಂದು ಮಿ.ಮೀ. ಮಳೆಯಾದರೆ, 4,450 ಲೀಟರ್ ನೀರು ಸಂಗ್ರಹವಾಗುತ್ತದೆ ಹಾಗೂ ಅಲ್ಲಿ ಸಸ್ಯವೈವಿಧ್ಯವಿದ್ದರೆ, ನೆಲಕ್ಕೆ ಬಿದ್ದ ಮುಕ್ಕಾಲುಪಾಲು ನೆಲದಾಳಕ್ಕಿಳಿಯುತ್ತದೆ ಮತ್ತದು ಅಂತರ್ಜಲವಾಗಿ ಪರಿವರ್ತನೆಯಾಗುತ್ತದೆ. ಹಾಗೆ ವರ್ಷಕ್ಕೆ 2,500 ಮಿ.ಮೀ. ಮಳೆ ಬೀಳುವ ಒಂದು ಎಕರೆ ಪ್ರದೇಶ ನೀರಿಂಗಿಸಿಕೊಳ್ಳುವ ಮೊತ್ತ ಹತ್ತಿರ ಹತ್ತಿರ ಒಂದು ಕೋಟಿ ಲೀಟರ್ ಎಂದರೆ ಆಶ್ಚರ್ಯವಾಗದೇ?

ಹಾಗಾದರೆ ಸರ್ಕಾರ, ಸಮಾಜ ಚಿಂತಕರು, ಧಾರ್ಮಿಕ ಮುಖಂಡರ ಆದ್ಯತೆ ಏನಿರಬೇಕು? ಕತ್ತರಿಯಂತೆ ಕತ್ತರಿಸುವ ವಿಧ್ವಂಸಕ ಗುಣಗಳನ್ನು ದಮನ ಮಾಡಿ, ಹರಿದು ಹಂಚಿದ ಸಮಾಜವೆಂಬ ವಸ್ತ್ರವನ್ನು ಹೊಲಿಯುವ ಸೂಜಿ- ದಾರದ ಮನಃಸ್ಥಿತಿ ತರುವ ಪ್ರಯತ್ನ ಮಾಡಬೇಕು. ನೀರಿನ ಮೂಲವಾದ ಕೆರೆ-ಕುಂಟೆ, ನದಿಮೂಲ ಹಾಗೂ ವನ್ಯಜೀವಿ ಆವಾಸಸ್ಥಾನಗಳ ರಕ್ಷಣೆಗೆ ಆದ್ಯತೆ ನೀಡಬೇಕು. ಆಗಲೇ ನೀರ ನೆಮ್ಮದಿಯ ನಾಳೆ ದಕ್ಕೀತು!

ಅಖಿಲೇಶ್ ಚಿಪ್ಪಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT