ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಶಾಲಾ ಪಠ್ಯಪುಸ್ತಕ ರಚನೆ: ಸಲ್ಲಲಿ ನ್ಯಾಯ

ಶಾಲಾ ಪಠ್ಯ ರಚನೆಯ ಹಿಂದೆ ವಿದ್ಯಾರ್ಥಿಗಳ ವಿಕಾಸದ ಹಂತಗಳ ಪ್ರಜ್ಞೆ ಕೆಲಸ ಮಾಡಬೇಕು
Last Updated 28 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ಪಠ್ಯಪುಸ್ತಕ ರಚನೆ– ಪರಿಷ್ಕರಣೆ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದವರು ಯಾರು ಎಂದು ಅವಲೋಕಿಸುತ್ತಿದ್ದಾಗ, ಅವರಲ್ಲಿ ಡಿ.ಇಡಿ., ಬಿ.‌ಇಡಿ., ಎಂ.ಇಡಿ. ಮಾಡಿದ ಮೂರ್ನಾಲ್ಕು ಮಂದಿಯ ಹೆಸರುಗಳು ಕಾಣಸಿಕ್ಕವು. ಇನ್ನೂ ಕೆಲವರು ಇರಲೂಬಹುದು. ಆದರೆ ಪಠ್ಯಪುಸ್ತಕ ರಚನಾ ಸಮಿತಿಯ ಅಧ್ಯಕ್ಷರಾಗಲು ಶಿಕ್ಷಣಶಾಸ್ತ್ರವನ್ನು ಅಭ್ಯಾಸ ಮಾಡಿರಬೇಕು ಎಂಬ ಕಲ್ಪನೆಯಿಂದ ನೇಮಕಗಳು ನಡೆದ ರೀತಿಯಲ್ಲಿ ಇರಲಿಲ್ಲ. ಸಾಮಾನ್ಯವಾಗಿ ಯಾವುದಾದರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿರಬೇಕು, ಹೆಸರಿರುವ ಸಾಹಿತಿಯಾಗಿರಬೇಕು ಎನ್ನುವ ಕಲ್ಪನೆಯಲ್ಲಿ ಅಧ್ಯಕ್ಷರನ್ನು ನೇಮಿಸಿದ ಹಾಗೆ ಭಾಸವಾಗುತ್ತದೆ.

ಬಹುಶಃ ನಮ್ಮ ಪಠ್ಯ‌ಪುಸ್ತಕಗಳ ಕುರಿತ ಚರ್ಚೆಯಲ್ಲಿ ಬೋಧನಾ ಪದ್ಧತಿಯ ಬಗ್ಗೆ ಸಾರ್ವಜನಿಕ ಪರಿಗಣನೆ ಇಲ್ಲದೆ, ಪಠ್ಯವಸ್ತುವಿನ ಬಗ್ಗೆಯೇ ಪರಿಗಣನೆ ಜಾಸ್ತಿ ಇರುವುದಕ್ಕೆ ಇದೂ ಒಂದು ಕಾರಣವಿರಬಹುದು.

ಕರ್ನಾಟಕ ಪಠ್ಯಪುಸ್ತಕ ಸಂಘ ಎಂದು ಇದೆ. ಅದರ ಉದ್ದೇಶ ಪಠ್ಯಪುಸ್ತಕಗಳನ್ನು ಮುದ್ರಿಸುವುದು; ರಚನೆಯಲ್ಲ. ತುಂಬ ಹಳೆಯ ಪದ್ಧತಿಯಲ್ಲಿ ಯಾರು ಬೇಕಾದರೂ ಪಠ್ಯಪುಸ್ತಕವನ್ನು ಬರೆದು ಶಿಕ್ಷಣ ಇಲಾಖೆಗೆ ಕಳುಹಿಸಬಹುದಿತ್ತು. ಇಲಾಖೆ ಅದರಲ್ಲಿ ಸೂಕ್ತವಾದದ್ದನ್ನು ಆಯ್ಕೆ ಮಾಡುತ್ತಿತ್ತು. ನಂತರದ ಕಾಲಘಟ್ಟದ ಪಠ್ಯಪುಸ್ತಕ ರಚನಾ ಸಮಿತಿಯು ಹೆಚ್ಚಿನ ಮಟ್ಟಿಗೆ ಪಠ್ಯವಸ್ತುವಿನ ಕುರಿತಾಗಿ ಸರ್ಕಾರ ಹೊಂದಿರುವ ಧೋರಣೆಯನ್ನು ಪ್ರತಿಪಾದಿಸಲಿಕ್ಕಾಗಿ ಇರುವ ಸಂಸ್ಥೆಯಂತಾಗಿದೆ. ಕನ್ನಡ ಭಾಷಾ ಪಠ್ಯಗಳಲ್ಲಿರುವ ಹೆಚ್ಚಿನ ಕವಿತೆಗಳು ವಿದ್ಯಾರ್ಥಿಗಳಲ್ಲಿ ಆಸಕ್ತಿ ಕುದುರಿಸುವಂತೆ ಇಲ್ಲ ಎಂದು ಬಹಳಷ್ಟು ಅಧ್ಯಾಪಕರು ತಮಗೆ ತಿಳಿಸಿರುವುದಾಗಿ, ಕಳೆದ ನೂರು ವರ್ಷಗಳ ಕನ್ನಡ ಪಠ್ಯಪುಸ್ತಕಗಳ ಬಗ್ಗೆ ಸಂಶೋಧನೆ ನಡೆಸಿ ಪಿಎಚ್.‌ಡಿ ಪದವಿ ಪಡೆದಿರುವ ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಎನ್.‌ಶಿವಪ್ರಕಾಶ್ ಈ ಲೇಖನ ಬರೆಯುವ ವೇಳೆಗೆ ತಿಳಿಸಿದರು.

ಯಾಕೆ ಹೀಗೆ ಆಗುತ್ತದೆ? ಕನ್ನಡ ಭಾಷಾ ಪಠ್ಯಗಳನ್ನು ನೋಡಿದರೆ ಬಹುತೇಕ ಅವು ಸಾಹಿತಿ ಮತ್ತು ಕವಿಗಳಿಗೆ ಸಾಮಾಜಿಕ ನ್ಯಾಯ ಸಲ್ಲಿಸುವಂತೆ ಇರುತ್ತವೆ. ಉತ್ತರ ಕರ್ನಾಟಕದವರ ಇಷ್ಟು ರಚನೆಗಳು, ದಕ್ಷಿಣ ಕರ್ನಾಟಕದ್ದು ಇಷ್ಟು, ಅಭಿಜಾತ ಕಾವ್ಯ ಇಷ್ಟು, ನವೋದಯ ಇಷ್ಟು, ನವ್ಯ ಇಷ್ಟು, ದಲಿತ– ಬಂಡಾಯ ಇಷ್ಟು... ಹೀಗೆ ಈ ಶೈಲಿಯಲ್ಲಿ ಪಠ್ಯಪುಸ್ತಕ ಇರುತ್ತದೆ. ಆದರೆ ಮಕ್ಕಳಿಗೆ ನ್ಯಾಯ ಸಲ್ಲಿಸುವ ಹಾಗೆ ಇರುವುದಿಲ್ಲ. ಮಕ್ಕಳಿಗೆ ನ್ಯಾಯ ಎಂದರೆ ಪ್ರಾಥಮಿಕ ಶಾಲೆಯ ಮಕ್ಕಳಿಗೆ, ‘ರೊಟ್ಟಿ ಅಂಗಡಿ ಕಿಟ್ಟಪ್ಪ, ನಂಗೊಂದು ರೊಟ್ಟಿ ತಟ್ಟಪ್ಪ’ ಎನ್ನುವ ಲಯಬದ್ಧ ಶೈಲಿಯ ಪದ್ಯಗಳು, ‘ಚಂದಿರನೇತಕೆ ಓಡುವನಮ್ಮ ಮೋಡಕೆ ಬೆದರಿಹನೆ’ ಎನ್ನುವ ರೀತಿ ದೃಶ್ಯೀಕರಣಕ್ಕೆ ಒಳಗಾಗುವ ಪದ್ಯಗಳು, ತಾಳ ಹಾಕುತ್ತಾ ಹಾಕುತ್ತಾ ಹಾಡಿಕೊಳ್ಳುವ ರೀತಿಯ ಪದ್ಯಗಳು ಬೇಕಾಗುತ್ತವೆ.‌

ಪ್ರೌಢಶಾಲಾ ಹಂತಕ್ಕೆ ಬಂದಾಗ ‘ಜೋಶ್’ನಲ್ಲಿ ಹಾಡಿಕೊಳ್ಳುವಂತಹ ಪದ್ಯಗಳು ಬೇಕಾಗುತ್ತವೆ. ಆ ವಯೋಮಾನದ ವ್ಯಕ್ತಿತ್ವ ವಿಕಾಸದ ಹಂತಗಳಿಗೆ ಹೊಂದುವ ಹಾಗೆ ಬೋಧನೆ ಇರಬೇಕು. ಬೋಧನೆ ಆ ರೂಪದಲ್ಲಿ ಬರಬೇಕಾದರೆ ಪಠ್ಯ ರಚನೆಯ ಹಿಂದೆ ವಿದ್ಯಾರ್ಥಿಗಳ ವಿಕಾಸದ ಹಂತಗಳ ಪ್ರಜ್ಞೆ ಕೆಲಸ ಮಾಡಿರಬೇಕು. ಶಿಕ್ಷಣಶಾಸ್ತ್ರವನ್ನು ಅಧ್ಯಯನ ಮಾಡಿದವರು ಅಥವಾ ಆಯಾ ವಯಸ್ಸಿನ ಮಕ್ಕಳ ಒಡನಾಟ ಇದ್ದವರು ಪಠ್ಯಪುಸ್ತಕ ರಚನಾ ಸಮಿತಿಯ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದಾಗ ಪಠ್ಯಪುಸ್ತಕ ಈ ಮಾದರಿಯಲ್ಲಿ ಬರುತ್ತದೆ. ಶಿಕ್ಷಣಶಾಸ್ತ್ರವನ್ನು ಅಭ್ಯಾಸ ಮಾಡದವರಿಗೆ ಈ ಪರಿಕಲ್ಪನೆ ಸುಲಭವಾಗಿ ಅರ್ಥವಾಗಲು ಕೊಡಬಹುದಾದ ಉದಾಹರಣೆ ಎಂದರೆ, ಅಂಡಾಣು- ವೀರ್ಯಾಣು ಸಂಯೋಗವಾಗಿ ಭ್ರೂಣದ ರಚನೆಯಾಗಿ ಮಗುವಿನ ಜನನ ಹೇಗಾಗುತ್ತದೆ ಎಂಬುದನ್ನು ಎರಡನೆಯ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯದಲ್ಲಿ ಕೊಟ್ಟರೆ ಉಪಯೋಗವಿಲ್ಲ. ಅದನ್ನು ಅರ್ಥ ಮಾಡಿಕೊಳ್ಳುವಷ್ಟು ಆ ವಿದ್ಯಾರ್ಥಿಗಳು ಬೆಳೆದಿರುವುದಿಲ್ಲ ಎಂದು ಎಲ್ಲರಿಗೂ ಗೊತ್ತಾಗುತ್ತದೆ. ಅದೇ ರೀತಿ ವೈಯಕ್ತಿಕ ನೆಲೆಯಲ್ಲಿ ಬಹುಸೂಕ್ಷ್ಮವಾದ ವಿಮರ್ಶೆಯನ್ನು ಬಯಸುವ ಪಠ್ಯವಸ್ತುವನ್ನೂ ಪ್ರಾಥಮಿಕ ಮತ್ತು ಪ್ರೌಢ ಹಂತದಲ್ಲಿ ಕೊಡಬಾರದು.

ಲಾರೆನ್ಸ್ ಕೊಹಲ್‌ಬರ್ಗ್ ಸಿದ್ಧಾಂತದ ಪ್ರಕಾರ, ಹದಿಹರೆಯವು ನೈತಿಕತೆಯ ಸಾರ್ವತ್ರಿಕ ಅನ್ವಯದ ಹಂತವಾಗಿದೆ. ಅಂದರೆ ಈ ವಯಸ್ಸಿನ ಮಕ್ಕಳು ಯಾವುದನ್ನು ನೈತಿಕತೆ ಎಂದು ಭಾವಿಸುತ್ತಾರೆಯೋ ಅದು ಸಾರ್ವತ್ರಿಕವಾಗಿ ಇರತಕ್ಕದ್ದು ಎಂದು ಭಾವಿಸುತ್ತಾರೆ. ನೈತಿಕತೆಯ ಸಾಪೇಕ್ಷ ತತ್ವವನ್ನು ಅರ್ಥ ಮಾಡಿಕೊಂಡು ನಿರ್ದಿಷ್ಟ ಸನ್ನಿವೇಶದಲ್ಲಿ ಯಾವುದು ಸರಿ ಎಂದು ತೀರ್ಮಾನಿಸಬಲ್ಲ ಸಾಮರ್ಥ್ಯವಿನ್ನೂ ಬಂದಿರುವುದಿಲ್ಲ. ಪದವಿಯ ವಯಸ್ಸಿಗೆ ಬಂದಾಗ ಈ ಸಾಮರ್ಥ್ಯ ಬರುತ್ತದೆ. ಆದ್ದರಿಂದ ತೀರಾ ನಿರ್ದಿಷ್ಟ ಸನ್ನಿವೇಶ ಆಧಾರಿತವಾದ ವಿಮರ್ಶೆಯನ್ನು ಬಯಸುವ ಪಠ್ಯವಸ್ತುವನ್ನು ಪ್ರಾಥಮಿಕ ಮತ್ತು ಪ್ರೌಢ ಹಂತದಲ್ಲಿ ಕೊಡಲು ಹೋಗಬಾರದು.

ಪಠ್ಯದ ಉದ್ದೇಶ ಎಂದು ಇದೆ.‌ ಇದು ಪಠ್ಯವಸ್ತು, ಕಲಿಕಾ ವಿಧಾನ, ಮೌಲ್ಯಮಾಪನ ಈ ಮೂರೂ ಹಂತಗಳಲ್ಲಿ ಸಮರ್ಪಕವಿದ್ದಾಗ ಮಾತ್ರ ಸಾಧಿಸಲ್ಪಡುತ್ತದೆ. ಉದಾಹರಣೆಗೆ, ಭಾಷಾ ಪಠ್ಯಗಳಲ್ಲಿ ಆಲಿಸುವ ಸಾಮರ್ಥ್ಯ, ಮಾತನಾಡುವ ಸಾಮರ್ಥ್ಯ, ಓದುವ ಸಾಮರ್ಥ್ಯ, ಬರೆಯುವ ಸಾಮರ್ಥ್ಯ, ಚಿಂತನಾ ಸಾಮರ್ಥ್ಯ, ಪರಾಮರ್ಶನ ಸಾಮರ್ಥ್ಯ ಬೆಳೆಯಬೇಕು. ಪಠ್ಯಪುಸ್ತಕದಲ್ಲಿ ಯಾವ ವಿಷಯ ಇರಬೇಕು ಎಂಬುದನ್ನೇ ಆಧರಿಸಿ ಮಾಡಿದ ಪಠ್ಯಪುಸ್ತಕ, ವಿಷಯವನ್ನೇ ಪ್ರಶ್ನೆಯಾಗಿ ಹೊಂದಿರುವ ಮೌಲ್ಯಮಾಪನ ಪದ್ಧತಿಗಳು ವಿಷಯವನ್ನೇ ಆಧರಿಸಿ ಬೋಧನೆ ನಡೆಯುವಂತೆ ಮಾಡಿವೆ. ಉದಾಹರಣೆಗೆ, ಭಾಷಾ ಪಠ್ಯದ ಬೋಧನದ್ದೇಶದಲ್ಲಿ ಆಲಿಸುವ ಸಾಮರ್ಥ್ಯ ಇದೆ. ಮಕ್ಕಳು ಸುಮ್ಮನೆ ಕೂತು ಕೇಳಿಸಿಕೊಳ್ಳುವುದನ್ನಷ್ಟೇ ಮಾಡಲು ಬೇಕಾದ ಪಾಠ ಪುಸ್ತಕದಲ್ಲಿಲ್ಲ. ಮಕ್ಕಳ ಕೇಳಿಸಿಕೊಳ್ಳುವ ಸಾಮರ್ಥ್ಯ
ವನ್ನು ಪರೀಕ್ಷಿಸಲೂ ಸಮರ್ಪಕ ವ್ಯವಸ್ಥೆ ಇಲ್ಲ. ಆಗ ಎಲ್ಲ ಭಾಷಾ ಪಾಠಗಳೂ ಸಮಾಜ ವಿಜ್ಞಾನ ಪಾಠದ ಮತ್ತೊಂದು ರೂಪವಾಗಿ ವಿಷಯ ಆಧಾರಿತವಾಗಿರುತ್ತವೆ. ಉದಾಹರಣೆಗೆ, ಹಿಂದೆ ‘ಟಿಪ್ಪು ಸುಲ್ತಾನ್‌ನ ಪತ್ರ’ ಎಂದು ಒಂದು ಪಾಠ ಇತ್ತು. ಮಕ್ಕಳಿಗೆ ಪತ್ರ ಲೇಖನದ ಸಾಮರ್ಥ್ಯ ಬರಬೇಕು ಎನ್ನುವುದು ಪಾಠದ ಉದ್ದೇಶ. ಆದರೆ ಕಲಿಸಿದ್ದು ಮತ್ತು ಪರೀಕ್ಷೆ ಮಾಡಿದ್ದು ಪತ್ರದಲ್ಲಿ ಏನು ಬರೆದಿದ್ದಾನೆ ಎಂಬುದನ್ನೆ!

ಗಣಿತ, ವಿಜ್ಞಾನ, ಸಮಾಜ ವಿಜ್ಞಾನಗಳಿಗೂ ವಿಷಯವನ್ನು ಕಲಿಯುವುದರ ಆಚೆಗೆ ಬೋಧನೋ
ದ್ದೇಶಗಳಿವೆ. ಗಣಿತದಲ್ಲಿ ಬರುವ ‘ಎಕ್ಸ್’, ‘ವೈ’ ಅಥವಾ ಮತ್ತಿತರೆ ಸಂಕೇತಗಳು ಅಮೂರ್ತವಾದದ್ದನ್ನು ತಾರ್ಕಿಕವಾಗಿ ಗ್ರಹಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಬೇಕು. ವಿಜ್ಞಾನವು ಸೃಷ್ಟಿಯ ನಿಗೂಢತೆಯನ್ನು ಗ್ರಹಿಸುವ ಕುತೂಹಲ, ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕು. ಸಮಾಜ ವಿಜ್ಞಾನವು ಐದಾರು ಸಾವಿರ ವರ್ಷಗಳ ಇತಿಹಾಸವನ್ನು ಓದಿದಾಗ ಅಲ್ಲಿ ಕಾಣಿಸುವ ಆಕ್ರಮಣ, ಹತಾಶೆ, ಭರವಸೆ, ಹೋರಾಟ ಇದೆಲ್ಲವನ್ನೂ ಸ್ವೀಕರಿಸಿ ಎಲ್ಲವನ್ನೂ ಒಳಗೊಳ್ಳುವ ವಿಶಾಲ ಮನೋಭಾವವನ್ನು ರೂಪಿಸಬೇಕು.

ಒಬ್ಬ ಕೆಟ್ಟ ರಾಜ. ಎಷ್ಟೋ ಕೊಲೆಗಳನ್ನು ಮಾಡಿರುತ್ತಾನೆ. ಆದರೆ ಅವನೂ ಮನುಷ್ಯ. ಸಾವಿನ ಸನಿಹದಲ್ಲಾದರೂ ಅವನಿಗೆ ತಾನು ಮಾಡಿದ ಕೊಲೆಗಳು ನೆನಪಿಗೆ ಬಂದಿರಲಾರವೇ? ಆಗ ಅವನು ಏನು ಯೋಚಿಸಿರಬಹುದು?- ಹೀಗೆ ಮಾನವ ಪ್ರವೃತ್ತಿಯನ್ನು ಅರ್ಥ ಮಾಡಿಕೊಳ್ಳುವ ಮತ್ತು ಅರ್ಥೈಸುವ ಶಕ್ತಿಯನ್ನು ಸಮಾಜ ವಿಜ್ಞಾನ ಬೆಳೆಸಬೇಕು.

ಈ ರೀತಿಯ ಕಲಿಕಾ ಪರಿಣಾಮಗಳು ಕೇವಲ ಪಠ್ಯಪುಸ್ತಕಗಳನ್ನು ಆಧರಿಸಿಲ್ಲ. ಬೋಧನೆ ಮತ್ತು ಮೌಲ್ಯಮಾಪನವೂ ಗುರಿಯನ್ನು ಸಾಧಿಸಲು ಬೇಕಾದ ಇನ್ನಿತರ ಎರಡು ಸಾಧನಗಳೇ ಆಗಿವೆ. ಆದರೆ ಅವೆರಡಕ್ಕೂ ಮೂಲ ಪಠ್ಯಪುಸ್ತಕವೇ. ಆದ್ದರಿಂದ ಭವಿಷ್ಯದ ಶೈಕ್ಷಣಿಕ ಅವಶ್ಯಕತೆಗಳನ್ನು ಈಡೇರಿಸಲು ಈಗಿರುವ ಪಠ್ಯಪುಸ್ತಕ ರಚನಾ ಸಮಿತಿಗಳು ಸಾಲುವುದಿಲ್ಲ. ಸ್ವತಂತ್ರ ಅಧಿಕಾರವಿರುವ ಪ್ರಾಧಿಕಾರದಂತಹ ಸಂಸ್ಥೆ ಬೇಕಾಗುತ್ತದೆ ಮತ್ತು ಅದರಲ್ಲಿ ವಿಷಯ ತಜ್ಞರು ಸಾಕಾಗುವುದಿಲ್ಲ.‌ ಶಿಕ್ಷಣಶಾಸ್ತ್ರವನ್ನು ಅಭ್ಯಾಸ ಮಾಡಿದ, ಆಯಾ ಹಂತದ ಮಕ್ಕಳಿಗೆ ಬೋಧಿಸಿದ ಅನುಭವ ಇರುವ ತಜ್ಞರೂ ಬೇಕಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT