ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡು ಒತ್ತುವರಿ: ಮಲೆನಾಡು ‘ಬೆಂಗಾಡು’

ನೈಜ ರೈತರಿಗೆ ಭೂಮಿಯ ಒಡೆತನವಿಲ್ಲ, ಕಬಳಿಕೆದಾರರಿಗೆ ಮಾತ್ರ ಭಯವಿಲ್ಲ!
Last Updated 13 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ ನದಿ ತಪ್ಪಲಿನ ಹಳ್ಳಿಗಳಿಗೆ ಕ್ಷೇತ್ರಾಧ್ಯಯನಕ್ಕೆಂದು ಇತ್ತೀಚೆಗೆ ತೆರಳಿದ್ದಾಗ, ಕಾನುಸರ ಹಳ್ಳಿಯ ಹುಲಿಯಾ ಮರಾಠಿ ಗೌಡರ ಜಮೀನಿಗೆ ತೆರಳುವ ಸಂದರ್ಭ ಬಂತು. ಇರುವ ಭೂಮಿ ಕೇವಲ ಎರಡು ಎಕರೆಯಾದರೂ ಅಲ್ಲಿ ಸಮೃದ್ಧವಾಗಿ ಬೆಳೆದಿದ್ದ ಭತ್ತ, ಬಾಳೆ, ತೆಂಗು, ಅಡಿಕೆ, ತರಕಾರಿ ಬೆಳೆವೈವಿಧ್ಯಗಳೆಲ್ಲ, ಅವರ ಕುಟುಂಬದ ಕಾಯಕ ಶ್ರದ್ಧೆಯನ್ನು ಸಾರುವಂತಿದ್ದವು. ಆದರೆ, ಎರಡು ದಿನಗಳ ಹಿಂದಷ್ಟೇ ಕಾಡುಹಂದಿ ಗುಂಪೊಂದು ಗದ್ದೆಗಿಳಿದು, ಫಸಲು ಬರತೊಡಗಿದ್ದ ಭತ್ತದ ಗದ್ದೆಯ ಬಹುಪಾಲನ್ನು ನಾಶ ಮಾಡಿತ್ತು.

ನಿಟ್ಟುಸಿರು ಬಿಡುತ್ತಲೇ ಅವನ್ನೆಲ್ಲ ತೋರಿಸಿದ ಹುಲಿಯಾ ಗೌಡರು ಹೇಳಿದ್ದು, ‘ಅಜ್ಜನ ಕಾಲದಿಂದ ಉಳುಮೆ ಮಾಡ್ತಾ ಇರೋ ಜಮೀನ್ರಾ ಇದು. ಇನ್ನೂ ಪಟ್ಟಾ ಸಿಕ್ಕಿಲ್ಲ. ಈ ಅತಿಕ್ರಮಣದ ಜಮೀನಿನಲ್ಲಿ ಬೆಳೆ ಹಾಳಾದ್ರೆ ಒಂದು ಪೈಸ ಪರಿಹಾರವೂ ಸಿಕ್ಕೋದಿಲ್ಲ!’

ಮಲೆನಾಡು ಹಾಗೂ ಕರಾವಳಿ ಪ್ರದೇಶದ ಕಾಡಿನಂಚಿನಲ್ಲಿ ಒಂದೆರಡು ಎಕರೆ ಜಮೀನಿನಲ್ಲಿ ಕೃಷಿ ಮಾಡಿ ಬದುಕು ಕಟ್ಟಿಕೊಂಡಿರುವ ಈ ಬಗೆಯ ಹತ್ತಾರು ಸಾವಿರ ಕುಟುಂಬಗಳಿವೆ. ಐದು ದಶಕಗಳಿಗೂ ಹೆಚ್ಚಿನ ಕಾಲದಿಂದ ಅಲ್ಲೇ ಬಾಳುತ್ತಿರುವ ಈ ಎಲ್ಲ ನೈಜ ರೈತರಿಗೆ ಈಗಾಗಲೇ ಭೂಒಡೆತನ ದೊರಕಬೇಕಿತ್ತು. ಅಂಥ ಕುಟುಂಬಗಳನ್ನು ಮೂರು ವಿಧದಲ್ಲಿ ವಿಂಗಡಿಸಬಹುದು. ಯಾವುದೇ ಬಗೆಯ ಅರಣ್ಯವಿರಲಿ, 1978ಕ್ಕೂ ಪೂರ್ವದಿಂದಲೇ ಬೇಸಾಯ ಮಾಡಿಕೊಂಡಿದ್ದ ರೈತರಿಗೆ ಕನಿಷ್ಠ ವಿಸ್ತಾರದ ಭೂಒಡೆತನವನ್ನು ನೀಡಬೇಕೆಂದು ‘ಅರಣ್ಯ ಸಂರಕ್ಷಣಾ ಕಾಯ್ದೆ (1980)’ ಜಾರಿಯಾಗುವಾಗಲೇ ಆದೇಶವಾಗಿತ್ತು. ಆದರೆ, ಈ ಹಕ್ಕು ಹುಲಿಯಾ ಗೌಡರಂಥ ಅನೇಕ ಅರ್ಹರಿಗೆ ಈವರೆಗೂ ದೊರಕಿಲ್ಲ.

ಎರಡನೆಯ ಗುಂಪೆಂದರೆ, ‘ಅರಣ್ಯ ಹಕ್ಕು ಕಾಯ್ದೆ (2006)’ ಅನ್ವಯ ನೆಲದ ಮಾಲೀಕತ್ವ ದೊರೆಯಬೇಕಿದ್ದ ವನವಾಸಿಗಳು ಹಾಗೂ ಪಾರಂಪರಿಕ ಅರಣ್ಯವಾಸಿಗಳದು. ಗೌಳಿ, ಕುಣಬಿ, ಗೊಂಡ, ಹಾಲಕ್ಕಿಯಂಥ ಸಮುದಾಯಗಳು ಇನ್ನೂ ಅಧಿಕೃತವಾಗಿ ‘ಅನುಸೂಚಿತ ಬುಡಕಟ್ಟು’ಗಳೆಂದು ಗುರುತಿಸಲ್ಪಡದೆ, ಈ ಅವಕಾಶದಿಂದ ವಂಚಿತ ವಾಗುತ್ತಿವೆ. ಇನ್ನು, ಶತಮಾನಗಳಿಂದ ಅದೇ ಸ್ಥಳದಲ್ಲಿ ದ್ದರೂ ಸೂಕ್ತ ದಾಖಲೆಗಳಿಲ್ಲದೆ ಈ ಹಕ್ಕು ದೊರಕದ ಪಾರಂಪರಿಕ ಅರಣ್ಯವಾಸಿಗಳೂ ಇದ್ದಾರೆ.

ಮೂರನೆಯ ಗುಂಪೆಂದರೆ, ಶರಾವತಿ ನದಿ ಕಣಿವೆಯ ವಿದ್ಯುತ್ ಯೋಜನೆಗಳಂಥ ಬೃಹತ್ ಅಭಿವೃದ್ಧಿ ಯೋಜನೆಗಳಿಗಾಗಿ ನೆಲೆ ಕಳೆದುಕೊಂಡು, ಸರ್ಕಾರ ನೀಡಬೇಕಿದ್ದ ಪರ್ಯಾಯ ಭೂಮಿಯ ಒಡೆತನವು ಇನ್ನೂ ದೊರಕದ ಕೆಲವು ‘ಅಭಿವೃದ್ಧಿ ನಿರಾಶ್ರಿತರ’ ಕುಟುಂಬಗಳು. ರಾಜ್ಯ ಸರ್ಕಾರದ ನಿಷ್ಕ್ರಿಯತೆಗೆ ಕೇಂದ್ರ ಅರಣ್ಯ ಸಚಿವಾಲಯದ ದೂರದೃಷ್ಟಿರಹಿತ ಕಾರ್ಯನೀತಿಯೂ ಜೊತೆಯಾಗಿ, ತಾವು ಹುಟ್ಟಿ ಬೆಳೆದ ನೆಲದಲ್ಲೇ ‘ಪರಕೀಯ’ರಾದ ಮಲೆನಾಡಿನ ಅಪ್ಪಟ ರೈತರ ಕಥೆಯಿದು.

ಜಮೀನು ಹಕ್ಕುಪತ್ರವಿಲ್ಲವೆಂದ ಮೇಲೆ ಸಾಲ, ಸಹಾಯಧನ, ವಿಮೆ, ಬೆಳೆಹಾನಿ ಪರಿಹಾರವೂ ಅವರಿಗೆ ಲಭ್ಯವಾಗುವುದಿಲ್ಲ. ಇಷ್ಟಕ್ಕೂ, ಸರ್ಕಾರಿ ಶಾಲೆ, ಆಸ್ಪತ್ರೆ, ಬಡವರ ವಸತಿಯಂಥ ಸಾರ್ವಜನಿಕ ಅಗತ್ಯಕ್ಕೆ ನಾಲ್ಕಾರು ಗುಂಟೆ ಅರಣ್ಯಭೂಮಿ ನೀಡಲೂ ದಶಕಗಳ ಕಾಲ ಕಾಯಿಸುವ ಅರಣ್ಯ ಸಚಿವಾಲಯದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಅರಣ್ಯದ ಒಡೆಯ ತಾನೆಂಬ ವಸಾಹತುಶಾಹಿ ಮನಃಸ್ಥಿತಿಯಲ್ಲೇ ಇದ್ದಂತಿರುವ ಅರಣ್ಯ ಇಲಾಖೆಯು, ‘ಅರಣ್ಯ ಸಂರಕ್ಷಣಾ ಕಾಯ್ದೆ’ಯೆಂಬ ತನ್ನ ಬಿಗಿಮುಷ್ಟಿಯಲ್ಲಿ ನಾಡಿನ ಕಾಡೆಲ್ಲ ಬಂದಿಯಾಗಿ ಸುರಕ್ಷಿತವಾಗಿದೆ ಎಂದು ಭಾವಿಸಿರಬೇಕು!
ಆದರೆ, ವಾಸ್ತವ ಸ್ಥಿತಿಯೇ ಬೇರೆ.

ಒಮ್ಮೆ ಮಲೆನಾಡು ಹಾಗೂ ಕರಾವಳಿಯಲ್ಲಿ ಸಂಚರಿಸಿ ಪರಿಸ್ಥಿತಿಯನ್ನು ಅವಲೋಕಿಸಿದರೆ, ಕಳೆದ ಎರಡು ದಶಕಗಳಿಂದ ಅದೆಷ್ಟು ವೇಗದಲ್ಲಿ ಅರಣ್ಯ ನಾಶವಾಗುತ್ತಿದೆ ಎಂಬುದು ಅರಿವಾಗಿ ಬೆಚ್ಚಿಬೀಳುವಂತಾ ಗುತ್ತದೆ. ಇದಕ್ಕೆ ಅವೈಜ್ಞಾನಿಕ ಮಾದರಿಯ ಅಭಿವೃದ್ಧಿ ಯೋಜನೆಗಳು ಒಂದು ಕಾರಣವಾದರೆ, ವ್ಯಾಪಕವಾದ ಅರಣ್ಯ ಒತ್ತುವರಿ ಇನ್ನೊಂದು ಕಾರಣ. ಒಂದೆಡೆ, ಪಾರಂಪರಿಕ ರೈತರು ಒಂದೆರಡು ಎಕರೆ ಭೂಮಾಲೀಕತ್ವ ಕ್ಕಾಗಿ ದಶಕಗಳಿಂದ ಒದ್ದಾಡುತ್ತಿದ್ದರೆ, ಇದೇ ಪ್ರದೇಶದಲ್ಲಿ ಕೆಲವರು ರಾತ್ರೋರಾತ್ರಿ ಕಾಡು ಕಡಿದು, ಬೆಂಕಿಹಾಕಿ, ಬೇಲಿ ನಿರ್ಮಿಸಿ, ಒಮ್ಮೆಲೇ ಹತ್ತಿಪ್ಪತ್ತು ಎಕರೆ
ಭೂಮಾಲೀಕರಾಗುತ್ತಿದ್ದಾರೆ!

ಈ ವಿದ್ಯಮಾನವನ್ನು ಉಪಗ್ರಹ ಚಿತ್ರಗಳ ದಾಖಲೆಗಳೂ ದೃಢೀಕರಿಸಿವೆ. ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಂತೂ ಇದರಿಂದಾಗುತ್ತಿರುವ ಅನಾಹುತಗಳನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧನೆಗಳು ದಾಖಲೆ ಸಮೇತ ನಿರೂಪಿಸಿವೆ. ಕೇಂದ್ರ ಅರಣ್ಯ ಸಚಿವಾಲಯದ ‘ಭಾರತ ಅರಣ್ಯ ಪರಿಸ್ಥಿತಿ ವರದಿ (2019)’ಯಂತೂ ಶಿವಮೊಗ್ಗ ಜಿಲ್ಲೆಯು ಪ್ರತೀ ವರ್ಷವೂ ಹೇಗೆ ಕಾನುಅರಣ್ಯವನ್ನು ಕಳೆದುಕೊಳ್ಳುತ್ತಿದೆ ಎಂಬುದನ್ನು ಅಧಿಕೃತವಾಗಿಯೇ ಹೇಳಿದೆ.

ಹಣದ ಶಕ್ತಿ ಹಾಗೂ ರಾಜಕೀಯ ಪ್ರಭಾವ ಬಳಸಿ ಸರ್ಕಾರಿ ಇಲಾಖೆಗಳನ್ನು ಮಣಿಸಿ, ಹೀಗೆ ಅರಣ್ಯಭೂಮಿಯನ್ನು ವ್ಯಾಪಕವಾಗಿ ಒತ್ತುವರಿ ಮಾಡುತ್ತಿರುವವರನ್ನು ಎರಡು ವಿಧದಲ್ಲಿ ವರ್ಗೀಕರಿಸಬಹುದು. ಕಾದಿಟ್ಟ ಅರಣ್ಯ ಹಾಗೂ ಕಂದಾಯಭೂಮಿ ಕಾನುಅರಣ್ಯವನ್ನು ಏಕಾಏಕಿ ಕಡಿದು ವಶಪಡಿಸಿಕೊಳ್ಳುತ್ತಿರುವವರದು ಮೊದಲ ಗುಂಪು. ಹೊಳೆ-ಝರಿ, ಕೆರೆ ಹಾಗೂ ಕೊಳವೆಬಾವಿಗಳಿಂದ ಅಪಾರ ನೀರು ಮೇಲೆತ್ತಿ, ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕಗಳನ್ನು ಸುರಿದು, ಕಾಡಿನ ನಡುವೆ ಶುಂಠಿ, ಅನಾನಸ್, ಜೋಳ, ರಬ್ಬರ್ ಇತ್ಯಾದಿಗಳನ್ನು ವಾಣಿಜ್ಯಿಕವಾಗಿ ಬೆಳೆಸಿ, ಒಮ್ಮೆಲೇ ಕೃಷಿಭೂಮಿ ಸೃಷ್ಟಿಸುವ ‘ನವ ಕೃಷಿಕ’ರಿವರು. ಇವನ್ನೆಲ್ಲ ಹಳೆಯ ಹೊಲವೆಂದು ಸುಳ್ಳು ದಾಖಲೆ ಸೃಷ್ಟಿಸಿ ಮಂಜೂರಾತಿಗೆ ಅರ್ಜಿ ಹಾಕುವುದು ಹಾಗೂ ಅವುಗಳ ಕೊಡು-ಕೊಳ್ಳುವ ವ್ಯವಹಾರಗಳೆಲ್ಲ ಈಗ ಉದ್ಯಮದೋಪಾದಿಯಲ್ಲೇ ಸಾಗಿವೆ.

ಎರಡನೇ ಬಗೆಯ ಒತ್ತುವರಿಯು ಸಾಮೂಹಿಕ ಭೂಮಿಯದ್ದು. ಮೇವು, ಉರುವಲು, ಹಣ್ಣು-ಹಂಪಲು, ಜೇನು, ಗಿಡಮೂಲಿಕೆ, ಒಣಗಿದ ಎಲೆ- ಇತ್ಯಾದಿಗಳನ್ನೆಲ್ಲ ಬಳಸಿಕೊಳ್ಳಲು ಸ್ವಾತಂತ್ರ್ಯಪೂರ್ವದಲ್ಲಿ ರೈತರಿಗೆ ಸವಲತ್ತು ನೀಡಿದ್ದ ಸಮುದಾಯ ಭೂಮಿಗಳವು. ಆದರೆ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಹಲವೆಡೆ ಈ ಬಗೆಯ ಗೋಮಾಳ, ಬಾಣೆ, ಕಾಫಿಕಾನು, ಕುಮ್ಕಿ, ಹಾಡಿಯಂಥ ಸಮುದಾಯ ಭೂಮಿಗಳ ಹಕ್ಕನ್ನು ಕಾನೂನುಬಾಹಿರವಾಗಿ ಖಾಸಗಿ ಹೆಸರಿಗೆ ಪಹಣಿ ಮಾಡಿಸಿಕೊಳ್ಳಲಾಗುತ್ತಿದೆ. ಜೊತೆಗೆ ಅವುಗಳ ಮಾರಾಟವೂ ಸಾಗಿದೆ!

ಜೀವನೋಪಾಯಕ್ಕಾಗಿ ಕೃಷಿಯಲ್ಲೇ ತೊಡಗಿರುವ ನೈಜ ರೈತರಿಗೆ ಜಮೀನು ನೀಡಿ, ಭೂಮಿಯ ಆಸೆಯಿಂದ ಕಾಡನ್ನು ಒತ್ತುವರಿ ಮಾಡುವವರನ್ನು ಸರ್ಕಾರ
ನಿಯಂತ್ರಿಸಬೇಕಿತ್ತು. ಅದರ ಬದಲು, ಬಗರ್‌ಹುಕುಂ ಭೂಮಿ ಪಡೆಯಲು ಅರ್ಜಿ ಸ್ವೀಕರಿಸುವ ಕಾಲಾವಧಿ ಯನ್ನೇ ಸರ್ಕಾರವು ಇತ್ತೀಚೆಗೆ ಮತ್ತೊಮ್ಮೆ ವಿಸ್ತರಿಸಿರುವು ದರಿಂದ, ಹೊಸ ಅತಿಕ್ರಮಣಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ. ಕಾನೂನುಬದ್ಧವಾಗಿ ರಚಿತವಾಗಿರುವ ‘ಭೂಒತ್ತುವರಿ ತಡೆ ನ್ಯಾಯಾಲಯ’ದ ವ್ಯಾಪ್ತಿ ಮತ್ತು ಶಕ್ತಿಯನ್ನೂ ವ್ಯವಸ್ಥಿತವಾಗಿ ಕುಗ್ಗಿಸಲಾಗುತ್ತಿದೆ. ಭವಿಷ್ಯದಲ್ಲಿ ಇವುಗಳ ಪರಿಣಾಮವೇನಾದೀತು?

ಈಗಾಗಲೇ ಸಹಜಕಾಡು ಶೇ 10ಕ್ಕಿಂತಲೂ ಕಡಿಮೆಯಾಗಿ, ಇರುವ ಅರಣ್ಯವೂ ಛಿದ್ರವಾಗಿ, ಕಾಡುಪ್ರಾಣಿಗಳು ಹೊಲ-ತೋಟಗಳಿಗೆ ನುಗ್ಗುತ್ತಿವೆ. ಸಾಧಾರಣ ಮಳೆಗೂ ನೆರೆ ಹಾಗೂ ಭೂಕುಸಿತ ಸಾಮಾನ್ಯ ವಾಗುತ್ತಿವೆ. ಹೊಳೆ-ತೊರೆಗಳು ಬತ್ತಿ, ಕೆರೆಗಳು ಹೂಳು ತುಂಬಿ, ಜಲಮಾಲಿನ್ಯವೂ ಹೆಚ್ಚಿ, ಬೇಸಿಗೆಯಲ್ಲಿ ಕನಿಷ್ಠ ಪ್ರಮಾಣದ ಶುದ್ಧ ನೀರಿಗೂ ತತ್ವಾರವಾಗುತ್ತಿದೆ; ಮಲೆನಾಡು ಬೆಂಗಾಡಾಗುತ್ತಿದೆ!

ಯಾವ ಸರ್ಕಾರವೂ ಇದನ್ನೇಕೆ ನಿಯಂತ್ರಿಸು ತ್ತಿಲ್ಲ? ಅಧಿಕಾರದ ಚುಕ್ಕಾಣಿ ಹಿಡಿದವರು ಚುನಾ ವಣಾ ಕೇಂದ್ರಿತ ಅಧಿಕಾರ ರಾಜಕಾರಣದಲ್ಲಿ ಹಾಗೂ ಆಡಳಿತ ವ್ಯವಸ್ಥೆಯು ಹಣದ ಮೋಹದಲ್ಲಿ ಕರ್ತವ್ಯ ಭ್ರಷ್ಟವಾಗಿರುವ ಸತ್ಯವು, ಮುಗ್ಧ ಹುಲಿಯಾ ಗೌಡರಿಗೂ ತಿಳಿದಂತಿದೆ. ಅವರ ಮನೆಯಿಂದ ಹಿಂತಿರುಗುವಾಗ ಅವರೇ ಹೇಳಿದ್ದು, ‘ಎಲ್ಲಾರೂ ದುಡ್ಡಿನ ಮುಖಕ್ಕೆ ಸೋತರೆ, ಇನ್ನೆಂತಾ ಉಳಿತದರ‍್ರಾ?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT