ಸೋಮವಾರ, ಡಿಸೆಂಬರ್ 6, 2021
23 °C
ಈ ಕ್ಷೇತ್ರದಲ್ಲಿ ಸರ್ಕಾರ ತರಲು ಹೊರಟಿರುವ ಬದಲಾವಣೆಗಳಿಗೆ ಹಲವಾರು ಕಾರಣಗಳಿವೆ

ವಿಶ್ಲೇಷಣೆ | ಇಂಧನ ಬಳಕೆ: ಬದಲಾವಣೆಯ ಪರ್ವ

ಡಾ. ಎಚ್.ಆರ್. ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

ನಮ್ಮ ದೇಶದಲ್ಲಿ ಬಳಕೆಯಾಗುತ್ತಿರುವ ಪೆಟ್ರೋಲ್ ಮತ್ತು ವಾಹನಗಳಿಗೆ ಸಂಬಂಧಿಸಿದಂತೆ ಎರಡು ಮಹತ್ವದ ಬದಲಾವಣೆಗಳನ್ನು ಸದ್ಯದಲ್ಲೇ ತರುವ ಸೂಚನೆಯನ್ನು ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ನೀಡಿದ್ದಾರೆ.

ಮೊದಲನೆಯದು, ಪೆಟ್ರೋಲ್‍ನೊಂದಿಗೆ ಹದವಾಗಿ ಬೆರೆಸುತ್ತಿರುವ ಎಥನಾಲ್ ಪ್ರಮಾಣವನ್ನು ಸದ್ಯದ ಶೇ 8.5ರಿಂದ ಹಂತ ಹಂತವಾಗಿ, 2023ರ ಏಪ್ರಿಲ್- 2025ರ ಏಪ್ರಿಲ್ ನಡುವೆ ಶೇ 20ಕ್ಕೆ ಏರಿಸುವುದು. ಎರಡನೆಯದಾಗಿ, ಆ ಅವಧಿಯೊಳಗಾಗಿಯೇ, ಒಂದಕ್ಕಿಂತ ಹೆಚ್ಚಿನ ಇಂಧನವನ್ನು ಬಳಸಬಲ್ಲ ಸಾಮರ್ಥ್ಯವಿರುವ ಎಂಜಿನ್‍ಗಳನ್ನು ಕಡ್ಡಾಯವಾಗಿ ವಾಹನಗಳಲ್ಲಿ ಅಳವಡಿಸುವುದು. ‘ಫ್ಲೆಕ್ಸಿಬಲ್ ಫ್ಯೂಯೆಲ್ ವೆಹಿಕಲ್’ (ಎಫ್‍ಎಫ್‍ವಿ) ಅಥವಾ ವಿವಿಧ ಇಂಧನಗಳನ್ನು ಬಳಸಬಲ್ಲ ವಾಹನಗಳ ಉತ್ಪಾದನೆಗೆ ಸಂಬಂಧಿಸಿದಂತೆ ವಿವರವಾದ ಮಾರ್ಗದರ್ಶಿ ಸೂಚನೆಗಳನ್ನು ಮುಂದಿನ ಆರು ತಿಂಗಳ ಒಳಗಾಗಿ ಪ್ರಕಟಿಸಲಾಗುವುದೆಂದು ಸಚಿವರು ತಿಳಿಸಿದ್ದಾರೆ.

ಎಥನಾಲ್ ಸಸ್ಯಮೂಲದಿಂದ ಪಡೆಯಬಹುದಾದ ಈಥೈಲ್ ಆಲ್ಕೊಹಾಲ್. ಪೆಟ್ರೋಲ್, ಡೀಸೆಲ್ ಮತ್ತು ಇತರ ಹೈಡ್ರೊಕಾರ್ಬನ್‍ಗಳಿಗಿಂತ ಶುದ್ಧವಾದ ಇಂಧನ. ಪೆಟ್ರೋಲ್‍ನೊಂದಿಗೆ ಎಥನಾಲನ್ನು ಸೇರಿಸುವ ಕ್ರಮ ನಮ್ಮ ದೇಶದಲ್ಲಿ ಪ್ರಾರಂಭವಾದದ್ದು 2003ರಲ್ಲಿ. 2007ರಲ್ಲಿ ಶೇ 5ರಷ್ಟು ಎಥನಾಲನ್ನು ಸೇರಿಸುವುದು ಕಡ್ಡಾಯವಾಯಿತು. ಇದೀಗ ಶೇ 8.5ರಷ್ಟು ಎಥನಾಲನ್ನು ಸೇರಿಸಿದ ಪೆಟ್ರೋಲ್ ದೇಶದಾದ್ಯಂತ ಮಾರಾಟವಾಗುತ್ತಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನೇಮಿಸಿದ್ದ ಪರಿಣತರ ಸಮಿತಿ, ಶೇ 20ರಷ್ಟು ಎಥನಾಲನ್ನು ಪೆಟ್ರೋಲಿಗೆ ಸೇರಿಸಿ ಬಳಕೆಗೆ ತರುವುದರ ಜೊತೆಗೆ, ಅದನ್ನು ಸಾಧಿಸಲು ಈ ಮುಂಚೆ ನಿಗದಿಯಾಗಿದ್ದ ಕಾಲಮಿತಿಯನ್ನು 2030ರಿಂದ 2025ಕ್ಕೆ ಇಳಿಸಿದೆ.

ಸರ್ಕಾರ ತರಲು ಹೊರಟಿರುವ ಈ ಎರಡು ಬದಲಾವಣೆಗಳಿಗೆ ಹಲವಾರು ಕಾರಣಗಳಿವೆ. ಕೇಂದ್ರ ಸರ್ಕಾರದ ಮೂಲದಂತೆ ಕಚ್ಚಾ ತೈಲದ ಆಮದಿಗೆ ವಾರ್ಷಿಕ ವೆಚ್ಚ ಸುಮಾರು ₹ 7 ಲಕ್ಷ ಕೋಟಿಯಿಂದ 8 ಲಕ್ಷ ಕೋಟಿ. ಮುಂದಿನ 5 ವರ್ಷಗಳಲ್ಲಿ ಇದು ₹ 15 ಲಕ್ಷ ಕೋಟಿ ಆಗಲಿದೆ. 2025ರ ವೇಳೆಗೆ ದೇಶದಾದ್ಯಂತ ಶೇ 20ರಷ್ಟು ಎಥನಾಲನ್ನು ಸೇರಿಸಿರುವ ಪೆಟ್ರೋಲನ್ನು (ಇ 20 ಇಂಧನ) ಬಳಸುವುದು ಸಾಧ್ಯವಾದರೆ ಪ್ರತಿವರ್ಷ ₹ 30,000 ಕೋಟಿ ಉಳಿತಾಯ ಸಾಧ್ಯವಾಗುತ್ತದೆ.

ಇ-20 ಇಂಧನದ ಬಳಕೆಯಿಂದ ಅಪಾಯಕಾರಿಯಾದ ಹಸಿರುಮನೆ ಅನಿಲಗಳ ಉತ್ಸರ್ಜನೆಯನ್ನು ಶೇ 16ರಷ್ಟು ತಗ್ಗಿಸಬಹುದು. ಸದ್ಯದಲ್ಲಿ ನಮ್ಮ ದೇಶದಲ್ಲಿ ಪೆಟ್ರೋಲ್‍ನೊಂದಿಗೆ ಬೆರೆಸಲು ಲಭ್ಯವಿರುವ ಎಥನಾಲ್ ಪ್ರಮಾಣ ಸುಮಾರು 150 ಕೋಟಿ ಲೀಟರ್‌ಗಳು. 2025ರ ವೇಳೆಗೆ ದೇಶದಾದ್ಯಂತ ಇ-20 ಇಂಧನ ದೊರೆಯಬೇಕಾದರೆ ಎಥನಾಲ್ ಉತ್ಪಾದನೆ 1000 ಕೋಟಿ ಲೀಟರ್‌ಗಳಾಗಬೇಕು. ಇದು ಸಾಧ್ಯವೆಂಬುದೇ ಸರ್ಕಾರದ ಉತ್ಸಾಹಕ್ಕೆ ಕಾರಣ.

2018ರವರಗೆ ನಮ್ಮ ದೇಶದ ಎಥನಾಲ್ ಉತ್ಪಾದನೆಯ ಶೇ 90 ಭಾಗ ಬರುತ್ತಿದ್ದುದು ಸಕ್ಕರೆ ಕಾರ್ಖಾನೆಗಳಿಂದ. 2018ರಲ್ಲಿ ಜಾರಿಗೆ ಬಂದ ರಾಷ್ಟ್ರೀಯ ಜೈವಿಕ ಇಂಧನ ನೀತಿಯ ಅನ್ವಯ ನಗರ, ಗ್ರಾಮೀಣ ಪ್ರದೇಶಗಳ ಜೈವಿಕ ಕಸ ಮತ್ತು ಸೆಲ್ಯುಲೋಸ್‌ಯುಕ್ತ ಸಸ್ಯಮೂಲಗಳ ಆರ್ಗ್ಯಾನಿಕ್ ಪದಾರ್ಥಗಳಿಂದಲೂ ಎಥನಾಲ್ ಉತ್ಪಾದನೆಗೆ ಪ್ರೋತ್ಸಾಹ ದೊರೆಯಿತು. ಹೀಗಾಗಿ ಜೋಳ, ಗೆಣಸು, ಕೊಳೆತ ಆಲೂಗೆಡ್ಡೆ, ಮುಗ್ಗಲಾದ ಮೆಕ್ಕೆಜೋಳ, ಅಕ್ಕಿ, ಗೋಧಿ, ಕಟಾವಿನ ನಂತರ ನೆಲದಲ್ಲಿ ಉಳಿಯುವ ಕೂಳೆ ಮುಂತಾದವುಗಳನ್ನೂ ಎಥನಾಲ್ ಉತ್ಪಾದನೆಯಲ್ಲಿ ಬಳಸುವ ಪ್ರಕ್ರಿಯೆ ನಿಧಾನವಾಗಿ ಪ್ರಾರಂಭವಾಯಿತು. ಇದರ ಜೊತೆಗೆ, ಸಕ್ಕರೆ ಕಾರ್ಖಾನೆಗಳಲ್ಲಿ ಹೆಚ್ಚುವರಿಯಾಗಿ ಗೋದಾಮುಗಳಲ್ಲಿರುವ ಸುಮಾರು 60 ಲಕ್ಷ ಮೆಟ್ರಿಕ್ ಟನ್‍ಗಳಷ್ಟು ಸಕ್ಕರೆಯ ದಾಸ್ತಾನಿನಿಂದ, ಅಗತ್ಯವಾದಷ್ಟನ್ನು ಬಳಸಿ ಎಥನಾಲನ್ನು ಉತ್ಪಾದಿಸಬಹುದೆಂದು ಗಡ್ಕರಿ ಸೂಚಿಸಿದ್ದಾರೆ.

ಈ ಎಲ್ಲ ಕ್ರಮಗಳಿಂದ ದೇಶದಾದ್ಯಂತ ಇ-20 ಇಂಧನ ಬಳಕೆಗೆ ಬಂದಾಗ ರೈತರ ಆರ್ಥಿಕ ಪರಿಸ್ಥಿತಿಯೂ ಸುಧಾರಿಸುವುದೆಂಬ ನಿರೀಕ್ಷೆಯಿದೆ. ಬೆಳೆ ಕೂಳೆಯಿಂದ ಎಥನಾಲನ್ನು ಉತ್ಪಾದಿಸುವ ತಂತ್ರಜ್ಞಾನ ಇಂದು ಲಭ್ಯವಿರುವುದರಿಂದ, ಕೃಷಿ ಉಳಿಕೆಯನ್ನು ದಹಿಸುವುದರಿಂದ ಆಗುತ್ತಿರುವ ಪರಿಸರ ಮಾಲಿನ್ಯವನ್ನೂ ತಡೆಯಬಹುದು.

ಸದ್ಯದಲ್ಲಿ ನಮ್ಮ ರಸ್ತೆಗಳಲ್ಲಿ ಸಂಚರಿಸುತ್ತಿರುವ ಪಟ್ರೋಲ್ ವಾಹನಗಳಲ್ಲಿ, ಶೇ 10ರಷ್ಟು ಎಥನಾಲನ್ನು ಸೇರಿಸಿರುವ ಇ-10 ಇಂಧನವನ್ನು ಯಾವುದೇ ತೊಂದರೆಯಿಲ್ಲದೆ ನೇರವಾಗಿ ಬಳಸಬಹುದೆಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ. ಆದರೆ ಮುಂದಿನ ಹಂತದಲ್ಲಿ ಇ-20 ಇಂಧನವನ್ನು ಬಳಸಿದಾಗ ಇಂಧನ ದಕ್ಷತೆ (ಫ್ಯೂಯೆಲ್ ಎಫಿಶಿಯೆನ್ಸಿ), ನಾಲ್ಕು ಚಕ್ರದ ವಾಹನಗಳಲ್ಲಿ ಶೇ 6ರಿಂದ 7ರಷ್ಟು ಮತ್ತು ದ್ವಿಚಕ್ರ ವಾಹನಗಳಲ್ಲಿ ಶೇ 3ರಿಂದ 4ರಷ್ಟು ಕಡಿಮೆಯಾಗಲಿದೆ ಎಂಬುದು ತಜ್ಞರ ಅಭಿಪ್ರಾಯ. ಆದರೆ ಇಂಧನ ಸರಿಯಾದ ರೀತಿಯಲ್ಲಿ ದಹನಕ್ಕೆ ಒಳಗಾಗುವಂತೆ ಎಂಜಿನನ್ನು ಸರಿಹೊಂದಿಸುವುದರಿಂದ ಈ ನಷ್ಟವನ್ನು ಕಡಿಮೆ ಮಾಡಬಹುದು.

2023ರಿಂದ ಪ್ರಾಯೋಗಿಕವಾಗಿ ಪ್ರಾರಂಭಿಸಿ, 2023- 2025ರ ಅವಧಿಯಲ್ಲಿ ಫ್ಲೆಕ್ಸಿಬಲ್ ಫ್ಯೂಯೆಲ್ ಕಾರುಗಳನ್ನು ವ್ಯಾಪಕವಾಗಿ ಬಳಕೆಗೆ ತರುವುದು ಸರ್ಕಾರದ ಇನ್ನೊಂದು ಮುಖ್ಯ ಯೋಜನೆ. ಒಂದೇ ವಾಹನ, ಒಂದಕ್ಕಿಂತ ಹೆಚ್ಚಿನ ಇಂಧನದ ಮೇಲೆ ಓಡುವುದೇ ಈ ಎಫ್‍ಎಫ್ ವಾಹನಗಳ ವೈಶಿಷ್ಟ್ಯ. ಉದಾಹರಣೆಗೆ, ಬ್ರೆಜಿಲ್‍ನಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಇಂತಹ ವಾಹನಗಳು ಶುದ್ಧ ಪೆಟ್ರೋಲ್, ವಿವಿಧ ಪ್ರಮಾಣಗಳಲ್ಲಿ ಮಿಶ್ರವಾಗಿರುವ ಎಥನಾಲ್-ಪೆಟ್ರೋಲ್ ಹಾಗೂ ಸಂಪೂರ್ಣವಾಗಿ ಎಥನಾಲ್- ಈ ಮೂರೂ ಇಂಧನಗಳನ್ನು ಬಳಸಬಲ್ಲವು.

ಬ್ರೆಜಿಲ್‍ನ ರಸ್ತೆಗಳಲ್ಲಿ ಸಂಚರಿಸುತ್ತಿರುವ ಸುಮಾರು ನಾಲ್ಕು ಕೋಟಿಗೂ ಹೆಚ್ಚಿನ ಎಫ್‍ಎಫ್ ವಾಹನಗಳಿಗೆ ಮೂರು ರೀತಿಯ ಇಂಧನಗಳನ್ನು ಬಳಸುವ ಆಯ್ಕೆಯಿದೆ. ಕಬ್ಬಿನ ಇಳುವರಿ ಉತ್ತಮವಾಗಿ ಎಥನಾಲ್ ಉತ್ಪಾದನೆ ಹೆಚ್ಚಿ, ಬೆಲೆ ಕಡಿಮೆಯಾದಾಗ ಬಹುತೇಕ ವಾಹನಗಳು ಶುದ್ಧ ಎಥನಾಲನ್ನೇ ಇಂಧನವಾಗಿ ಬಳಸುತ್ತವೆ. ಫ್ಲೆಕ್ಸಿ ಇಂಧನದ ಬೆಲೆ, ಪೆಟ್ರೋಲ್‍ಗಿಂತ ಶೇ 30ರಷ್ಟು ಕಡಿಮೆಯಿದ್ದಾಗ ವಾಹನಗಳು ಶುದ್ಧ ಪೆಟ್ರೋಲನ್ನು ಬಳಸುವುದೇ ಇಲ್ಲ.

ಎಥನಾಲ್‍ನಲ್ಲಿರುವ ಶಕ್ತಿಯ ಪ್ರಮಾಣ ಪೆಟ್ರೋಲ್‍ಗಿಂತ ಶೇ 34ರಷ್ಟು ಕಡಿಮೆ. ಅದನ್ನು ಪೆಟ್ರೋಲ್‍ನೊಂದಿಗೆ ಬೆರೆಸಿದಾಗ ಸಹಜವಾಗಿಯೇ ವಾಹನ ನೀಡುವ ಮೈಲೇಜ್ ಕಡಿಮೆಯಾಗುತ್ತದೆ. ಆದರೆ ಫ್ಲೆಕ್ಸಿ ಇಂಧನದ ಬೆಲೆಯೂ ಪೆಟ್ರೋಲ್‍ಗೆ ಹೋಲಿಸಿದರೆ ಶೇ 35ರಿಂದ 40ರಷ್ಟು ಕಡಿಮೆ. ಈ ಕಾರಣದಿಂದಾಗಿ ಬ್ರೆಜಿಲ್, ಅಮೆರಿಕ, ಕೆನಡಾ, ಯುರೋಪ್ ಮತ್ತು ಸ್ವೀಡನ್‍ಗಳಲ್ಲಿ ಈ ರೀತಿಯ ವಾಹನಗಳಿಗೆ ಉತ್ತಮ ಮಾರುಕಟ್ಟೆಯಿದೆ. ಈ ಮಾದರಿಯನ್ನು ಅನುಸರಿಸಿ, ಅಲ್ಲಿನ ತಂತ್ರಜ್ಞಾನವನ್ನು ಮತ್ತಷ್ಟು ಉತ್ತಮಪಡಿಸಿ, ಫ್ಲೆಕ್ಸಿ ಇಂಧನ ವಾಹನಗಳನ್ನು 2023- 2025ರ ಕಾಲಮಿತಿಯಲ್ಲಿ ಭಾರತದ ಮಾರುಕಟ್ಟೆಗೆ ಪರಿಚಯಿಸಬೇಕೆಂದು ಉದ್ಯಮವನ್ನು ಗಡ್ಕರಿ ಕೋರಿದ್ದಾರೆ. ಈ ದಿಕ್ಕಿನಲ್ಲಿ ಕೆಲಸ ಪ್ರಾರಂಭಿಸಿರುವುದಾಗಿ ಮಾರುತಿ ಸುಜುಕಿ ಹೇಳಿಕೆ ನೀಡಿದೆ. ಉಳಿದ ಅನೇಕ ವಾಹನ ಉತ್ಪಾದಕರು ಸರ್ಕಾರ ಪ್ರಕಟಿಸಲಿರುವ ಮಾರ್ಗದರ್ಶಿ ಸೂಚನೆಗಳನ್ನು ಎದುರು ನೋಡುತ್ತಿದ್ದಾರೆ.

ಎಥನಾಲ್‍ಗೆ ಬೇಡಿಕೆ ಹೆಚ್ಚಾದಂತೆ, ಆಹಾರ ಧಾನ್ಯಗಳು ಬೆಳೆಯುವ ಕೃಷಿಭೂಮಿಯನ್ನು ಕಬ್ಬು
ಮುಂತಾದವುಗಳನ್ನು ಬೆಳೆಯಲು ಬಳಸುವ ಪ್ರವೃತ್ತಿ ಹೆಚ್ಚಾಗಿ, ಆಹಾರ ಸಾಮಗ್ರಿಗಳ ಬೆಲೆ ಏರಬಹುದೆಂಬ ಕಾಳಜಿ, ಟೀಕೆಗಳು ವ್ಯಕ್ತವಾಗಿವೆ. ಆದರೆ ಇತ್ತೀಚೆಗೆ ಅಭಿವೃದ್ಧಿಪಡಿಸಿರುವ ಹಲವಾರು ಜೈವಿಕ ತಂತ್ರಜ್ಞಾನಗಳಿಂದ ಎಲ್ಲ ರೀತಿಯ ಜೈವಿಕ ತ್ಯಾಜ್ಯಗಳಿಂದಲೂ ಎಥನಾಲನ್ನು ಉತ್ಪಾದಿಸಬಹುದಾದ್ದರಿಂದ ಈ ಸಮಸ್ಯೆ ಉದ್ಭವಿಸುವುದಿಲ್ಲ ಎಂಬ ವಾದವೂ ಇದೆ. ಕಚ್ಚಾ ತೈಲದ ಮೇಲಿನ ಅಪಾಯಕಾರಿ ಅವಲಂಬನೆಯನ್ನು ಕಡಿಮೆ ಮಾಡಿ, ಪರಿಸರ ಮಾಲಿನ್ಯವನ್ನು ನಿಯಂತ್ರಿಸಲು ನೆರವಾಗಿ, ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ರೈತರ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿ, ಬಳಕೆದಾರರಿಗೆ ಇಂಧನದ ಆಯ್ಕೆಯ ಅವಕಾಶ ನೀಡಲಿದೆಯೆಂದು ಸರ್ಕಾರ ಹೇಳುತ್ತಿರುವ ಈ ಬದಲಾವಣೆಗಳಿಗೆ ಎಂತಹ ಸ್ವಾಗತ ದೊರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು