ವಿಶ್ಲೇಷಣೆ: ಜಿಯೊಥರ್ಮಲ್ ಸುತ್ತ ಹರಿಯಲಿ ಚಿತ್ತ

ವಾಯುಗುಣ ತುರ್ತುಪರಿಸ್ಥಿತಿಯ ಇಂದಿನ ದಿನಗಳಲ್ಲಿ ಭೂಮಿಯನ್ನು ಈಗಿನ ಸ್ಥಿತಿಯಲ್ಲೇ ಕಾಪಾಡಿಕೊಳ್ಳಲು ಪಳೆಯುಳಿಕೆ (ಫಾಸಿಲ್) ಇಂಧನಗಳಾದ ಮೀಥೇನ್, ಪೆಟ್ರೋಲ್, ಡೀಸೆಲ್, ಕಲ್ಲಿದ್ದಲು ಬಳಕೆಯನ್ನು ಸಂಪೂರ್ಣ ನಿಲ್ಲಿಸಬೇಕು ಎಂದು ತಜ್ಞರು ಹೇಳುತ್ತಿದ್ದಾರೆ. ಲೆಕ್ಕದ ಪ್ರಕಾರ, ನಮ್ಮೆಲ್ಲರ ಚಟುವಟಿಕೆಗಳಿಂದ ವಾರ್ಷಿಕ 5,100 ಕೋಟಿ ಟನ್‌ಗಳಷ್ಟು ಶಾಖವರ್ಧಕ ಅನಿಲಗಳು ವಾತಾವರಣಕ್ಕೆ ಸೇರುತ್ತಿವೆ. ಇದುವರೆಗೂ ಭೂಮಿ ‘ಬೆಚ್ಚಗಾಗುತ್ತಿದೆ’ ಎನ್ನುತ್ತಿದ್ದೆವು, ಈಗ ಬಿಸಿಯಾಗುತ್ತಿದೆ ಎಂದು ಹೇಳಬೇಕಿದೆ.
ವಿಶ್ವದ ಎಲ್ಲ ರಾಷ್ಟ್ರಗಳೂ ಮಾಡಿಕೊಂಡ ಒಪ್ಪಂದ ಮತ್ತು ಆಡಿದ ಮಾತಿನಂತೆ ನಡೆದು ಬಿಸಿಯನ್ನು ಕಡಿಮೆ ಮಾಡಬೇಕಿದೆ. ಅಭಿವೃದ್ಧಿಗಾಗಿ ನಮಗೆ ಬೇಕಾದ ಶಕ್ತಿಯನ್ನು ಕಾರ್ಬನ್‌ಮುಕ್ತ ಮೂಲಗಳಿಂದಲೇ ಪಡೆಯಬೇಕು ಮತ್ತು ಉನ್ನತ ತಂತ್ರಜ್ಞಾನ ಬಳಸಿ ಗುರಿ ತಲುಪಬೇಕು.
ಆದರೆ, ಪ್ರಸ್ತುತ ಜಗತ್ತಿನ ಒಟ್ಟು ಶಕ್ತಿ ಉತ್ಪಾದನೆಯಲ್ಲಿ ಪಳೆಯುಳಿಕೆ ಇಂಧನಗಳ ಪಾಲು ಶೇಕಡ 65ರಷ್ಟಿದೆ. ಕಲ್ಲಿದ್ದಲಿನಿಂದ ಶೇ 36, ನೈಸರ್ಗಿಕ ಅನಿಲದಿಂದ ಶೇ 23, ನೀರಿನಿಂದ ಶೇ 10, ಪರಮಾಣು ಸ್ಥಾವರದಿಂದ ಶೇ 10, ಪೆಟ್ರೋಲ್– ಡೀಸೆಲ್‍ನಿಂದ ಶೇ 3, ಸೂರ್ಯ, ಗಾಳಿ ಮತ್ತು ಬಯೊಮಾಸ್‍ಗಳಿಂದ ಶೇ 11 ಮತ್ತು ಇತರ ಮೂಲಗಳಿಂದ ಶೇ 1ರಷ್ಟು ಶಕ್ತಿ ಉತ್ಪಾದನೆಯಾಗು
ತ್ತಿದೆ. ಉಷ್ಣ ಸ್ಥಾವರಗಳಲ್ಲಿ ಉರಿಸುವ ಕಲ್ಲಿದ್ದಲು ಅಪಾರ ಪ್ರಮಾಣದ ಇಂಗಾಲದ ಡೈ ಆಕ್ಸೈಡ್ ಹೊಮ್ಮಿಸುವುದರಿಂದ ಭೂಮಿಯ ಬಿಸಿ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಈಗ ಅದರ ಬದಲಿಗೆ ಭೂಶಾಖ ಶಕ್ತಿ (Geo Thermal energy) ಸ್ಥಾವರಗಳಿಂದ ಶಕ್ತಿ ಪಡೆಯುವ ಚಿಂತನೆ ಗಟ್ಟಿಯಾಗುತ್ತಿದೆ.
ಭೂಮಿಯ ಒಳಪದರಗಳಲ್ಲಿ ಹರಿಯುವ ಲಾವಾ, ಬಿಸಿನೀರ ಬುಗ್ಗೆಗಳು, ಸೂರ್ಯನಿಂದ ಹೀರಿಕೊಂಡ ಬಿಸಿ, ಶಿಲಾಸ್ತರಗಳಲ್ಲಿರುವ ತಾಪಮಾನ ಮತ್ತು ಭೂಮಿಯಾಳದ ಪೊಟ್ಯಾಶಿಯಂ, ಥೋರಿಯಂ ಮತ್ತು ಯುರೇನಿಯಂ ಕ್ಷಯಿಸುವುದರಿಂದ ಹುಟ್ಟುವ ಶಾಖದಿಂದ ಪಡೆಯುವ ಶಕ್ತಿಯ ಇನ್ನೊಂದು ಹೆಸರು ಜಿಯೊಥರ್ಮಲ್ ಎನರ್ಜಿ.
ನಮಗೆ ಬೇಕೆನಿಸಿದಷ್ಟು ಭೂಶಾಖ ಶಕ್ತಿ ಪಡೆಯಲು ಸುಮಾರು 3,000 ಮೀಟರ್‌ವರೆಗೆ ಭೂಮಿಯ ಆಳಕ್ಕೆ ಕೊರೆಯಬೇಕು. ಲಭ್ಯವಿರುವ ಅತ್ಯಂತ ಮುಂದುವರಿದ ತಂತ್ರಜ್ಞಾನ ಬಳಸಿ ಈಗಾಗಲೇ ಹತ್ತತ್ತಿರ 2,700 ಮೀಟರ್‌ವರೆಗೆ ಕೊರೆದಾಗಿದೆ. 1,500 ಮೀಟರ್‌ವರೆಗೆ ಈಗಾಗಲೇ ಕೊರೆದು ಶೇ 10ರಷ್ಟು ಭೂಶಾಖ ಶಕ್ತಿಯನ್ನು ಪಡೆಯುತ್ತಿದ್ದೇವೆ. ಇಟಲಿಯ ಲಾರ್ಡೆರೆಲ್ಲೊ ಟುಸ್ಕಾನಿಯಲ್ಲಿ ಈಗಾಗಲೇ 1,800 ಮೀಟರ್ ಆಳಕ್ಕೆ ಕೊರೆಯಲಾಗಿದ್ದು, ಅಲ್ಲಿಂದ ವಿಶ್ವದ ಒಟ್ಟು ಭೂಶಾಖ ಶಕ್ತಿಯ ಶೇ 10ರಷ್ಟನ್ನು ವಿದ್ಯುತ್ತನ್ನಾಗಿ ಪರಿವರ್ತಿಸಿ ಬಳಸಲಾಗುತ್ತಿದೆ. ಅಮೆರಿಕದ ಕ್ಯಾಲಿಫೋರ್ನಿಯ ಪ್ರಾಂತ್ಯದ 117 ಚದರ ಕಿ.ಮೀ ವಿಸ್ತೀರ್ಣದ ‘ದ ಗೀಸರ್ಸ್’ ಎಂಬಲ್ಲಿ 22 ಸ್ಥಾವರಗಳನ್ನು ನಿರ್ಮಿಸಿದ್ದು, ವಾರ್ಷಿಕ 1.5 ಗಿಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
1907ರಲ್ಲಿ ಐಸ್‍ಲ್ಯಾಂಡ್‌ನಲ್ಲಿ ಶುರುವಾದ ಸ್ಥಾವರದಿಂದ ದೇಶದ ಶೇ 25ರಷ್ಟು ವಿದ್ಯುತ್ ಬೇಡಿಕೆಯನ್ನು ಪೂರೈಸಲಾಗುತ್ತಿದೆ. ಅಲ್ಲಿರುವ 600 ಬಿಸಿನೀರು ಬುಗ್ಗೆಗಳು ಮತ್ತು 200 ಜ್ವಾಲಾಮುಖಿಗಳಿಂದ ಇದು ಸಾಧ್ಯವಾಗುತ್ತಿದೆ. ವಿಶ್ವದಾದ್ಯಂತ 22 ದೇಶಗಳಲ್ಲಿ 450ಕ್ಕೂ ಹೆಚ್ಚು ಭೂಶಾಖ ಶಕ್ತಿಯ ಸ್ಥಾವರಗಳಿವೆ. 18 ಗಿಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಆರು ಕೋಟಿ ಜನ ಬಳಸುತ್ತಿದ್ದಾರೆ. ಜಗತ್ತಿನ ಒಟ್ಟು ವಿದ್ಯುತ್ ಬೇಡಿಕೆಯ ಶೇ 6.5ರಷ್ಟನ್ನು ಜಿಯೊಥರ್ಮಲ್‍ಗಳಿಂದ ಉತ್ಪಾದಿಸಬಹುದಾದ ಸಾಧ್ಯತೆಗಳಿವೆ.
ಬ್ರಿಟಿಷ್ ಜಿಯಾಲಾಜಿಕಲ್ ಸರ್ವೆ ಪ್ರಕಾರ, ಭೂಶಾಖ ಶಕ್ತಿಯು ಸಂಪೂರ್ಣ ಇಂಗಾಲಮುಕ್ತವಾಗಿದ್ದು ಸುಸ್ಥಿರ ಶಕ್ತಿ ಮೂಲ ಎಂದೇ ಪ್ರಸಿದ್ಧವಾಗಿದೆ. ನೈಸರ್ಗಿಕ ಅನಿಲ ಸ್ಥಾವರ ಹೊಮ್ಮಿಸುವ ಇಂಗಾಲದ ಪ್ರಮಾಣಕ್ಕಿಂತ ಆರು ಪಟ್ಟು ಕಡಿಮೆ ಇಂಗಾಲವು ಭೂಶಾಖ ಶಕ್ತಿ ಸ್ಥಾವರಗಳಿಂದ ಹೊಮ್ಮುವುದರಿಂದ ಇದು ತಜ್ಞರ ಫೇವರಿಟ್ ಎನ್ನಿಸಿದೆ. ಸಂಪನ್ಮೂಲವನ್ನು ಸರಿಯಾಗಿ ಬಳಸಿಕೊಂಡಲ್ಲಿ ಇಡೀ ಜಗತ್ತು ಈಗ ಉತ್ಪಾದಿಸುತ್ತಿರುವ ಒಟ್ಟು ಶಕ್ತಿಯ ಮೂರು ಪಟ್ಟು ಹೆಚ್ಚಿನ ವಿದ್ಯುತ್ತನ್ನು ಭೂಶಾಖ ಶಕ್ತಿ ಸ್ಥಾವರಗಳಿಂದ ಪಡೆಯಬಹುದಾಗಿದೆ.
ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದವರು ಹಿಮಾಲಯ, ಕ್ಯಾಂಬೇ ಕೊಳ್ಳ, ಸೋನ್- ನರ್ಮದ- ತಾಪಿ ನದಿಗಳ ಸಾಲು, ಪಶ್ಚಿಮ ಕರಾವಳಿ, ಗೋದಾವರಿ ಹಾಗೂ ಮಹಾನದಿ ಕೊಳ್ಳಗಳಲ್ಲಿರುವ 340 ಭೂಶಾಖ ಶಕ್ತಿ ಜಾಗಗಳನ್ನು ಗುರುತಿಸಿದ್ದಾರೆ. ಅಲ್ಲಿನ ಉಷ್ಣತೆ 37ರಿಂದ 90 ಡಿಗ್ರಿ ಸೆಂಟಿಗ್ರೇಡ್ ಒಳಗಿರುವುದರಿಂದ ಬಿಸಿಯನ್ನು ನೇರವಾಗಿ ಬಳಸಿಕೊಂಡು ವಸ್ತು, ಮನೆಗಳನ್ನು ಹೀಟ್ ಮಾಡಬಹುದು. ಲೇಹ್- ಲಡಾಕ್‌ನಿಂದ 180 ಕಿ.ಮೀ. ದೂರದಲ್ಲಿರುವ ಪುಗದಲ್ಲಿ ಬಿಸಿನೀರಿನ ಬುಗ್ಗೆಗಳ ತಾಪಮಾನ 30- 80 ಡಿ.ಸೆಂ. ಇದ್ದು, ನಮ್ಮ ಭೂಶಾಖ ಶಕ್ತಿ ಸ್ಥಾವರಗಳಿಂದ 10.6 ಗಿಗಾವಾಟ್ ಶಕ್ತಿ ಉತ್ಪಾದಿಸಲು ಅವಕಾಶವಿದೆ. ಹಿಮಾಚಲದ ಕುಲು ಕಣಿವೆಯಿಂದ ಪೂರ್ವಕ್ಕೆ 50 ಕಿ.ಮೀ. ದೂರ ಮತ್ತು 1,700 ಮೀಟರ್ ಎತ್ತರವಿರುವ ಮಣಿಕರಣ್‌ನಲ್ಲಿ 707 ಮೀಟರ್ ಆಳಕ್ಕೆ 9 ಬಾವಿಗಳನ್ನು ಕೊರೆಯಲಾಗಿದ್ದು 8ರಲ್ಲಿ 45ರಿಂದ 96 ಡಿ.ಸೆಂ. ಬಿಸಿನೀರು ಉಕ್ಕುತ್ತಿದೆ.
ಬಿಹಾರ, ಒಡಿಶಾ, ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಈಶಾನ್ಯ ರಾಜ್ಯಗಳ ಒಟ್ಟು 51 ಜಿಯೊಥರ್ಮಲ್ ಜಾಗಗಳಲ್ಲಿ ಭೂಶಾಖ 35ರಿಂದ 88 ಡಿ.ಸೆಂ.ವರೆಗಿದೆ. ದಕ್ಷಿಣದ ಗೋದಾವರಿ ಕೊಳ್ಳದ ಅಗ್ನಿಗುಂಡಂ ಮತ್ತು ಇರಾಡೆ ಭಾಗಗಳಲ್ಲಿ ಬಿಸಿನೀರು ಚಿಲುಮೆಯ ತಾಪಮಾನ 62 ಡಿ.ಸೆಂ. ಇರುವುದು ಪತ್ತೆಯಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ಭಾಗದ ಟರ‍್ರೆನ್ ಮತ್ತು ನಾರ್‍ಕೊಂಡಂ ದ್ವೀಪಗಳ ಎಳೆಯ ಜ್ವಾಲಾಮುಖಿಗಳಲ್ಲಿನ ಭೂಶಾಖ ಶಕ್ತಿ 100ರಿಂದ 500 ಡಿಗ್ರಿ ಸೆಂಟಿಗ್ರೇಡ್‍ವರೆಗಿದೆ.
ಆದರೆ ಇದರಿಂದ ಹೊಮ್ಮುವ ಗಂಧಕದ ಡೈ ಆಕ್ಸೈಡ್ ಮತ್ತು ಹೈಡ್ರೋಜನ್ ಸಲ್ಫೈಡ್‌ಗಳು ಇಂಗಾಲಕ್ಕಿಂತ ಹೆಚ್ಚು ಅಪಾಯಕಾರಿಯಾಗಿದ್ದು ವಾತಾವರಣದ ಮಾಲಿನ್ಯಕ್ಕೆ ಕಾರಣವಾಗುತ್ತವೆ. 3 ಕಿ.ಮೀ. ಆಳದವರೆಗೆ ಬಾವಿ ಕೊರೆದರೆ ಭೂಕಂಪದ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇನ್ನೂ ಆಳಕ್ಕೆ ಹೋದಾಗ ಭೂಮಿಯ ಚಟುವಟಿಕೆಯಲ್ಲಿ ಏನೆಲ್ಲ ವ್ಯತ್ಯಾಸಗಳಾಗಬಹುದು ಎಂಬುದಕ್ಕೆ ತಜ್ಞರ ಬಳಿ ಸದ್ಯಕ್ಕೆ ಉತ್ತರಗಳಿಲ್ಲ. ಈಗಾಗಲೇ ಕೊರೆದ ಶೇ 40ರಷ್ಟು ಜಾಗಗಳಲ್ಲಿ ಥರ್ಮಲ್ ನಿಕ್ಷೇಪಗಳಿಲ್ಲದಿರುವುದು, ಖರ್ಚು ಮತ್ತು ವಿದ್ಯುತ್ತಿನ ಬಳಕೆ ಅಗಾಧವಾಗಿರುವುದು ಉತ್ಪಾದಕರನ್ನು ನಿರುತ್ಸಾಹಗೊಳಿಸಿದೆ. ಅದಕ್ಕಾಗಿ ಜಿಯೊಥರ್ಮಲ್ ಜಾಗಗಳನ್ನು ಪತ್ತೆಹಚ್ಚುವ ಅತ್ಯಾಧುನಿಕ ಸೆನ್ಸರ್‌ಗಳನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ಜ್ವಾಲಾಮುಖಿಯ ಜಾಗಗಳಲ್ಲಿ ಜಿಯೊಥರ್ಮಲ್ ಸ್ಥಾವರಗಳು ಯಶಸ್ವಿಯಾಗುತ್ತವೆ ಎಂಬುದು ತಜ್ಞರ ಅಭಿಮತ.
ವಿಶ್ವದ ಪ್ರತಿಯೊಂದು ರಾಷ್ಟ್ರವೂ ಶಾಖವರ್ಧಕ ಅನಿಲಗಳ ನಿಯಂತ್ರಣಕ್ಕೆ ಪಣ ತೊಡುತ್ತಲೇ ಇದೆ. ನಮಗಿಂತ ಜಾಸ್ತಿ ಜನಬಾಹುಳ್ಯವಿರುವ ಚೀನಾ 2060ರ ವೇಳೆಗೆ ತನಗೆ ಬೇಕಾದ ಎಲ್ಲ ಶಕ್ತಿಯನ್ನು ಪಡೆಯಲು ಸೌರ ವಿದ್ಯುತ್ ಘಟಕಗಳ ಮೊರೆ ಹೋಗುತ್ತಿದೆ. ಜೋ ಬೈಡೆನ್ ಇನ್ನು ಹತ್ತು ವರ್ಷಗಳಲ್ಲಿ ಅಮೆರಿಕದ ಅರ್ಧದಷ್ಟು ಕಾರುಗಳು ಬ್ಯಾಟರಿಯಿಂದ ಓಡಲಿವೆ ಎಂದಿದ್ದಾರೆ. ಯುರೋಪಿಯನ್ ಸಮುದಾಯವು ಕ್ಲೀನ್ ಎನರ್ಜಿಗಾಗಿ ಕೋಟ್ಯಂತರ ಪೌಂಡ್ ಖರ್ಚು ಮಾಡುತ್ತಿದೆ. ನಾವು ಸಹ ಫಾಸಿಲ್ ಇಂಧನಗಳ ಬಳಕೆಯನ್ನು ಇನ್ನು 30 ವರ್ಷಗಳಲ್ಲಿ ಸಂಪೂರ್ಣ ನಿಲ್ಲಿಸಬಹುದೇ ಎಂದು ಯೋಚಿಸಿ, ಸೂರ್ಯನಿಂದ 100, ಗಾಳಿಯಿಂದ 60, ಬಯೊಮಾಸ್‌ನಿಂದ 10 ಹಾಗೂ ನೀರಿನಿಂದ 5 ಹೀಗೆ ಒಟ್ಟು 175 ಗಿಗಾವಾಟ್‍ಗಳ ಹೆಚ್ಚುವರಿ ವಿದ್ಯುತ್ ಶಕ್ತಿ ಉತ್ಪಾದನೆಯ ಕೆಲಸ ಪ್ರಾರಂಭಿಸಿದ್ದೇವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.