ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಐಪಿಎಲ್‌ ಸಿರಿ: ಇರಲಿ ನಂಬಿಕೆಯ ಗರಿ

ಮೋಸದಾಟ ಹಾಗೂ ಬಾಜಿ ಹಾವಳಿಯಿಂದ ಆಟದ ನಂಬಿಕೆಗೆ ಪೆಟ್ಟು
Last Updated 25 ಮೇ 2022, 10:49 IST
ಅಕ್ಷರ ಗಾತ್ರ

‘ಬಾಲ್ಯದಲ್ಲಿ ನಾನು ಕ್ರಿಕೆಟ್‌ನ ಅಪ್ಪಟ ಅಭಿಮಾನಿಯಾಗಿದ್ದೆ. ಆದರೆ, ಬುದ್ಧಿ ಬೆಳೆದಂತೆ ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳನ್ನು ತಿಳಿದು ಕ್ರಿಕೆಟ್ ಪ್ರೀತಿ ಕಡಿಮೆಯಾಯಿತು. ಬೇರೆ ಕ್ರೀಡೆಗಳತ್ತ ಒಲವು ಬೆಳೆಯಿತು. ನಮ್ಮ ಕೈಯೊಳಗಿನ ಐದು ಬೆರಳುಗಳೂ ಒಂದೇ ತರಹ ಇರಲ್ಲ. ಅದೇ ರೀತಿ ಎಲ್ಲರೂ ಭ್ರಷ್ಟರಲ್ಲ ಅನ್ನೋದು ನಿಜ. ಆದರೆ, ನನ್ನ ತಲೆಯಲ್ಲಿ ಬೇರೂರಿರುವ ಅಪನಂಬಿಕೆಯು ಬಲಿತಿದೆ. ಕ್ರಿಕೆಟ್‌ ನೋಡುವಾಗ ಅನುಮಾನಗಳು ಕಾಡುತ್ತವೆ’–

ಇದು, ಬಾಲಿವುಡ್ ನಟಿ ತಾಪ್ಸಿ ಪನ್ನು ಈಚೆಗೆಸಂದರ್ಶನವೊಂದರಲ್ಲಿ ಹೇಳಿದ ಮಾತು. ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಜೀವನಗಾಥೆ ಆಧಾರಿತ ‘ಶಾಭಾಷ್ ಮೀತು’ ಚಲನಚಿತ್ರದಲ್ಲಿ ಅವರು ನಾಯಕಿಯಾಗಿದ್ದಾರೆ. ಈ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಇದು ತಾಪ್ಸಿ ಅವರೊಬ್ಬರದ್ದೇ ಅಭಿಪ್ರಾಯವಲ್ಲ. ಇವತ್ತು ಕ್ರಿಕೆಟ್‌ ಆಟವನ್ನು ನೋಡುವ ಮತ್ತು ಪ್ರೀತಿಸುವ ಹಲವರು ಹೇಳುವ ಮಾತಿದು. ಅದರಲ್ಲೂ ಇಂಡಿಯನ್ ಪ್ರೀಮಿಯರ್‌ ಲೀಗ್‌ನಂತಹ ಬಹುಕೋಟಿ ಆದಾಯ ತರುವ ಟೂರ್ನಿಯ ಬಗ್ಗೆಯಂತೂ ಇಂತಹ ಅನುಮಾನದ ಮಾತುಗಳು ಹೆಚ್ಚು ಕೇಳಿಬರುತ್ತಿವೆ. ಅದಕ್ಕೆ ಕಾರಣಗಳೂ ಇಲ್ಲದಿಲ್ಲ. 2013ರಲ್ಲಿಯ ಸ್ಪಾಟ್‌ ಫಿಕ್ಸಿಂಗ್‌ನಿಂದಾಗಿ ಬಿಸಿಸಿಐ ಆಡಳಿತವೇ ಬದಲಾಗುವಂತಾಗಿದ್ದು ಇತಿಹಾಸ. ಮಂಡಳಿಯಲ್ಲಿ ಹೊಸ ನಿಯಮಾವಳಿ ಅನುಷ್ಠಾನವಾದ ನಂತರ, ಸುಧಾರಣೆಯಾಗುತ್ತಿದೆ ಎಂಬ ನಂಬಿಕೆಯನ್ನು ಇತ್ತೀಚಿನ ಒಂದು ವರದಿ ಅಲುಗಾಡಿಸಿದೆ.

2019ರ ಐಪಿಎಲ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್ ನಡೆದಿತ್ತು. ಪಾಕಿಸ್ತಾನದಲ್ಲಿರುವ ಮಾಫಿಯಾದಿಂದ ಪಂದ್ಯದ ಫಲಿತಾಂಶಗಳ ಕುರಿತು ಬರುವ ಮಾಹಿತಿಗಳ ಆಧಾರದಲ್ಲಿ ಭಾರತದಲ್ಲಿ ಬೆಟ್ಟಿಂಗ್ ಜಾಲ ಕಾರ್ಯಾಚರಣೆ ಮಾಡುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಿ, ಎರಡು ಎಫ್‌ಐಆರ್‌ಗಳನ್ನು ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ದಾಖಲಿಸಿಕೊಂಡಿದೆ. ಈ ಪ್ರಕರಣದಲ್ಲಿ ಬೆಟ್ಟಿಂಗ್‌ ಮತ್ತು ಮ್ಯಾಚ್‌ ಫಿಕ್ಸಿಂಗ್‌ ಜಾಲಗಳು ಬೆಸೆದುಕೊಂಡು ಕಾರ್ಯನಿರ್ವಹಿಸುತ್ತಿವೆ ಎಂದು ತನಿಖಾ ಸಂಸ್ಥೆ ಹೇಳಿರುವುದು ಆತಂಕ ಮೂಡಿಸಿರುವ ಸಂಗತಿ.

ಈ ಪಿಡುಗು ಮರುಕಳಿಸಲು ಪ್ರಮುಖ ಕಾರಣವೆಂದರೆ, ಹೊಸ ನಿಯಮಾವಳಿಯನ್ನು ಜಾರಿಗೊಳಿಸುವಲ್ಲಿ ಆಗಿರುವ ಲೋಪ. ಲೋಧಾ ಸಮಿತಿಯು ನೀಡಿದ್ದ ಶಿಫಾರಸುಗಳಲ್ಲಿ ‘ಕ್ರಿಕೆಟ್‌ ಬೆಟ್ಟಿಂಗ್‌ ಅನ್ನು ಕಾನೂನು ಬದ್ಧಗೊಳಿಸಬೇಕು. ಬಿಸಿಸಿಐ ಪದಾಧಿಕಾರಿಗಳು, ಆಡಳಿತ ಸಿಬ್ಬಂದಿ, ಆಟಗಾರರು ಇದರಲ್ಲಿ ಭಾಗಿಯಾಗುವಂತಿಲ್ಲ. ಅವರೆಲ್ಲರೂ ತಮ್ಮ ಆಸ್ತಿಪಾಸ್ತಿಯ ವಿವರ ಸಲ್ಲಿಸಬೇಕು. ಮ್ಯಾಚ್‌ ಫಿಕ್ಸಿಂಗ್‌ ಅನ್ನು ಅಪರಾಧವೆಂದು ಪರಿಗಣಿಸಿ ಶಿಕ್ಷೆ ನೀಡುವ ನಿಯಮ ತರಬೇಕು’ ಎಂದು ಹೇಳಲಾಗಿತ್ತು.

ಬೆಟ್ಟಿಂಗ್ ಕಾನೂನುಬದ್ಧವಾದರೆ, ಸರ್ಕಾರದ ನಿಯಂತ್ರಣ ಇರುತ್ತದೆ. ಅಲ್ಲದೆ ಅದರಿಂದ ಬರುವ ಆದಾಯವು ಮಂಡಳಿಗೆ ಮತ್ತು ತೆರಿಗೆಯ ಹಣ ಸರ್ಕಾರಕ್ಕೆ ಸಂದಾಯವಾಗುತ್ತದೆ. ಪ್ರತಿವರ್ಷದ ಐಪಿಎಲ್‌ ಸಂದರ್ಭದಲ್ಲಿ ದೇಶದಾದ್ಯಂತ ನೂರಾರುಕೋಟಿ ರೂಪಾಯಿ ಮೊತ್ತದ ಬೆಟ್ಟಿಂಗ್ ನಡೆಯುತ್ತಿದೆ. ಇದು ಮಾಫಿಯಾ ಕೈ ಸೇರುತ್ತಿದೆ. ಬಾಜಿ ಕಟ್ಟಿ ಕಳೆದುಕೊಂಡವರು ಬೀದಿಪಾಲಾಗುತ್ತಿದ್ದಾರೆ. ಒಂದೊಮ್ಮೆ ಬೆಟ್ಟಿಂಗ್‌ ಅನ್ನು ಕಾನೂನಿನ ಚೌಕಟ್ಟಿನೊಳಗೆ ತಂದರೆ, ಫಿಕ್ಸಿಂಗ್‌ನಂತಹ ಅಪರಾಧಗಳಿಗೆ ಕಡಿವಾಣ ಹಾಕಲು ಸುಲಭವಾಗುತ್ತದೆ.

‘ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳನ್ನು ಗಂಭೀರ ಅಪರಾಧಗಳೆಂದು ಪರಿಗಣಿಸಬೇಕು. ಅವುಗಳನ್ನು ಕಾನೂನಿನ ಅಡಿಯಲ್ಲಿ ತರಬೇಕು. ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಕಾನೂನು ತಜ್ಞರು ಹಲವು ವರ್ಷಗಳಿಂದ ಹೇಳುತ್ತಿದ್ದಾರೆ. ಆದರೆ, ಈ ವಿಷಯದಲ್ಲಿ ಭಾರತದಲ್ಲಿ ಪೊಲೀಸರ ಕೈ ಕಟ್ಟಿಹಾಕಲಾಗಿದೆ’ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಭ್ರಷ್ಟಾಚಾರ ತಡೆ ಘಟಕದ ಸಂಯೋಜಕ ಸ್ಟೀವ್ ರಿಚರ್ಡ್ಸನ್ ಈ ಹಿಂದೆಯೇ ಹೇಳಿದ್ದರು.

1999–2000ದಲ್ಲಿ ಮೊದಲ ಸಲ ಮ್ಯಾಚ್‌ ಫಿಕ್ಸಿಂಗ್ ಪ್ರಕರಣ ಬಯಲಾದ ನಂತರ, ಭಾರತದ ಕ್ರಿಕೆಟಿಗೆ ಮರುಜನ್ಮ ನೀಡಿದ ಶ್ರೇಯ ಸೌರವ್ ಗಂಗೂಲಿ ನಾಯಕತ್ವದ ತಂಡಕ್ಕೆ ಸಲ್ಲುತ್ತದೆ. ಆದರೆ, ಈಗ ಗಂಗೂಲಿಯವರೇ ಬಿಸಿಸಿಐಗೆ ಅಧ್ಯಕ್ಷರಾಗಿರುವ ಕಾಲಘಟ್ಟದಲ್ಲಿಯೇ ಆಟದ ನಂಬಿಕೆಯ ತಳಹದಿ ಅಲುಗಾಡುತ್ತಿರುವುದು ವಿಪರ್ಯಾಸ. ಅವರ ಬಳಗದಲ್ಲಿ ಆಡಿದ್ದಸಚಿನ್ ತೆಂಡೂಲ್ಕರ್, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಜಹೀರ್ ಖಾನ್, ವೀರೇಂದ್ರ ಸೆಹ್ವಾಗ್, ಮಹೇಂದ್ರಸಿಂಗ್ ಧೋನಿ ಅವರ ಯೋಗದಾನವನ್ನು ಕ್ರಿಕೆಟ್ ಲೋಕ ಮರೆಯಲು ಸಾಧ್ಯವಿಲ್ಲ. ಈ ದಿಗ್ಗಜರಲ್ಲಿ ಬಹುತೇಕರು ಈಗ ಪ್ರಮುಖ ಸ್ಥಾನಗಳಲ್ಲಿದ್ದಾರೆ.ಇಷ್ಟಾದರೂ ಯಾರೂ ಈ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪಿಡುಗಿನ ಬಗ್ಗೆ ಧ್ವನಿ ಎತ್ತುತ್ತಿಲ್ಲ.

ದಿನದಿಂದ ದಿನಕ್ಕೆ ಆಕ್ಟೋಪಸ್‌ನಂತೆ ಬೆಳೆಯುತ್ತಿರುವ ಈ ಪಿಡುಗಿನಿಂದಾಗಿ ಕ್ರಿಕೆಟ್‌ ಬಗ್ಗೆ ಜನಸಾಮಾನ್ಯರು ಹಗುರವಾಗಿ ಮಾತಾಡುವಂತಾಗಿದೆ. ಜನರ ಅನುಮಾನಗಳಿಗೆ ಪುಷ್ಟಿ ನೀಡುವಂತಹ ಕೆಲವು ಘಟನೆಗಳೂ ಕ್ರೀಡಾಂಗಣದಲ್ಲಿ ನಡೆದಿವೆ.

ಹೋದ ವರ್ಷದ ಟೂರ್ನಿಯಲ್ಲಿ ಪಂದ್ಯವೊಂದರ ಮುನ್ನಾದಿನವೇ ತಂಡವೊಂದರ ಸ್ಕೋರ್ ಅನ್ನು ಟ್ವೀಟ್ ಮಾಡಿದ್ದ ಮುಂಬೈ ಇಂಡಿಯನ್ಸ್‌, ಸ್ವಲ್ಪ ಹೊತ್ತಿನ ನಂತರ ಸಂದೇಶ ಅಳಿಸಿಹಾಕಿತ್ತು. ಆದರೆ ಟ್ವಿಟರ್‌ನಲ್ಲಿ ಮುಂಬೈ ತಂಡದ ವಿರುದ್ಧ ಟೀಕೆಗಳ ಮಳೆಯೇ ಸುರಿದಿತ್ತು. ಈ ಬಾರಿಯ ಟೂರ್ನಿಯಲ್ಲಿ ಆಡುತ್ತಿರುವ ಎರಡು ಹೊಸ ತಂಡಗಳ ಪೈಕಿ ಒಂದನ್ನು ಖರೀದಿಸಿರುವ ಸಂಸ್ಥೆಯೊಂದರ ಕುರಿತು ಐಪಿಎಲ್‌ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರು ಮಾಡಿದ್ದ ಟ್ವೀಟ್ ಗಮನ ಸೆಳೆದಿತ್ತು.

‘ಐಪಿಎಲ್ ತಂಡವನ್ನು ಈಗ ಬೆಟ್ಟಿಂಗ್ ಕಂಪನಿಗಳೂ ಖರೀದಿಸಬಹುದು ಎಂದು ನನಗನಿಸುತ್ತಿದೆ. ಈಚೆಗೆ ತಂಡವನ್ನು ಬಿಡ್‌ನಲ್ಲಿ ಪಡೆದ ಕಂಪನಿಯು ದೊಡ್ಡ ಬೆಟ್ಟಿಂಗ್ ಕಂಪನಿಯ ಒಡೆತನವನ್ನೂ ಹೊಂದಿದೆ. ಮುಂದೇನು? ಬಿಡ್‌ ನಿರ್ಣಯದ ಕುರಿತು ಬಿಸಿಸಿಐ ಪೂರ್ವಾಭ್ಯಾಸ ಮಾಡಿಲ್ಲವೇ? ಭ್ರಷ್ಟಾಚಾರ ತಡೆ ಘಟಕ ಇಂತಹ ಸಂದರ್ಭದಲ್ಲಿ ಏನು ಮಾಡಿತು?’ ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದರು.

ಇಂತಹ ಘಟನೆಗಳಿಂದಾಗಿ ಅನುಮಾನದ ಹುತ್ತ ಬೆಳೆಯುತ್ತಲೇ ಹೋಗುತ್ತಿದೆ. ಪಂದ್ಯಗಳಲ್ಲಿ ಫೀಲ್ಡರ್‌ಗಳು ಸುಲಭ ಕ್ಯಾಚ್ ಬಿಟ್ಟಾಗ, ಬೌಲರ್‌ಗಳು ಪದೇ ಪದೇ ನೋಬಾಲ್, ವೈಡ್‌ ಬಾಲ್ ಹಾಕಿದಾಗ, ಒಳ್ಳೆಯ ಲಯದಲ್ಲಿರುವ ಬ್ಯಾಟರ್ ದಿಢೀರ್ ಔಟಾದಾಗ ಮತ್ತು ಮಿಸ್‌ಫೀಲ್ಡಿಂಗ್ ಮಾಡಿದಾಗ ಸಂಶಯದ ದೃಷ್ಟಿ ಬಲವಾಗುತ್ತದೆ. ಈ ಬಾರಿಯ ಟೂರ್ನಿಯ 70 ಲೀಗ್ ಪಂದ್ಯಗಳು ಮುಗಿದಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಂದು ಪಂದ್ಯದ ಫಲಿತಾಂಶದ ಕುರಿತು ನಡೆಯುವ ಚರ್ಚೆಯಲ್ಲಿ ಇಂತಹ ಅನುಮಾನಗಳು ಇಣುಕಿರುವುದು ಗಮನಾರ್ಹ. ಇದು, ಇವತ್ತಲ್ಲ ನಾಳೆ ಕ್ರಿಕೆಟ್‌ಗೆ ಮುಳುವಾಗುವುದರಲ್ಲಿ ಅನುಮಾನವೇ ಇಲ್ಲ.

ಯುರೋಪ್, ಅಮೆರಿಕದಲ್ಲಿ ಫುಟ್‌ಬಾಲ್ ಮತ್ತು ಬ್ಯಾಸ್ಕೆಟ್‌ಬಾಲ್‌ ಲೀಗ್‌ಗಳಲ್ಲಿ ಐಪಿಎಲ್‌ಗಿಂತಲೂ ಐದು ಪಟ್ಟು ಹೆಚ್ಚು ಆದಾಯ ಹರಿದುಬರುತ್ತದೆ. ಅಲ್ಲಿಯ ಪಂದ್ಯಗಳ ಮೇಲೂ ‘ಲೀಗಲ್ ಬೆಟ್ಟಿಂಗ್’ ನಡೆಯುತ್ತದೆ. ಅಕ್ರಮ ಬೆಟ್ಟಿಂಗ್‌ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಆದ್ದರಿಂದಲೇ ಆ ಲೀಗ್‌ಗಳ ಕುರಿತು ಜನಾಭಿಪ್ರಾಯ ಕುಂದಿಲ್ಲ. ವರ್ಷದಿಂದ ವರ್ಷಕ್ಕೆ ವರ್ಚಸ್ಸು ಹೆಚ್ಚಿಸಿಕೊಳ್ಳುವುದರ ಜೊತೆಗೆ, ಆಟಗಾರರ ಗಳಿಕೆಯೂ ಮುಗಿಲಮುಖಿಯಾಗಿದೆ.

ಅಲ್ಲಿಯ ಲೀಗ್‌ಗಳಿಂದ ಪ್ರೇರಣೆಗೊಂಡು ಆರಂಭವಾಗಿರುವ ಐಪಿಎಲ್ ಕೂಡ ಅಂತಹ ಗಟ್ಟಿ ನಂಬಿಕೆಯನ್ನು ಉಳಿಸಿಕೊಳ್ಳಬೇಕಾದ ತುರ್ತು ಅಗತ್ಯ ಈಗ ಇದೆ. ಏಕೆಂದರೆ ಐಪಿಎಲ್‌ನಿಂದಾಗಿ ಬಡ ಕುಟುಂಬದ ಪ್ರತಿಭೆಗಳಾದ ಮೊಹಮ್ಮದ್ ಸಿರಾಜ್, ಯಶಸ್ವಿ ಜೈಸ್ವಾಲ್ ಅವರಂತಹವರೂ ಕೋಟ್ಯಧಿಪತಿಗಳಾಗಿದ್ದಾರೆ. ಸಿನಿಮಾ, ಟಿ.ವಿ. ಸೀರಿಯಲ್‌ಗಳಿಂದಾಚೆ ಕುಟುಂಬಸಮೇತ ಆಸ್ವಾದಿಸುವ ಮನರಂಜನೆಯಾಗಿಯೂ ಕ್ರಿಕೆಟ್ ಬೆಳೆದಿದೆ. ಬಿಸಿಸಿಐ ಶ್ರೀಮಂತ ಕ್ರೀಡಾಸಂಸ್ಥೆಗಳಲ್ಲಿ ಒಂದಾಗಿದೆ. ಇದೆಲ್ಲವೂ ಉಳಿಯಬೇಕಾದರೆ ತಾಪ್ಸಿ ಪನ್ನು ಸೇರಿದಂತೆ ಹಲವರ ಮನದಲ್ಲಿರುವ ಅನುಮಾನದ ಬೇರುಗಳನ್ನು ಕಿತ್ತುಹಾಕಿ, ವಿಶ್ವಾಸ ಚಿಗುರಿಸಬೇಕು. ಕ್ರಿಕೆಟ್ ಮತ್ತು ಕ್ರಿಕೆಟಿಗರನ್ನು ತಾರಾಪಟ್ಟಕ್ಕೇರಿಸಿ ಆರಾಧಿಸುವ ಅಭಿಮಾನಿಗಳ ಕಣ್ಣಿಗೆ ಮಣ್ಣೆರಚುವ ಮೋಸದಾಟಕ್ಕೆ ಅಂಕುಶ ಹಾಕಲು ಈಗಲಾದರೂ ಇಚ್ಛಾಶಕ್ತಿ ತೋರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT