ಮಂಗಳವಾರ, ಡಿಸೆಂಬರ್ 7, 2021
22 °C
ಕನ್ನಡ ಮತ್ತು ಕನ್ನಡಿಗರಿಗೆ ಬದುಕಿನ ಭದ್ರತೆ ಒದಗಿಸಲು ಭಾಷಿಕ ನೆಲೆಯಲ್ಲಷ್ಟೇ ಚಿಂತಿಸಿದರೆ ಸಾಲದು

ವಿಶ್ಲೇಷಣೆ | ಖಾಸಗೀಕರಣದ ಕಾಲದಲ್ಲಿ ಕನ್ನಡ

ಬರಗೂರು ರಾಮಚಂದ್ರಪ್ಪ Updated:

ಅಕ್ಷರ ಗಾತ್ರ : | |

ಕನ್ನಡವನ್ನು ಉಳಿಸಿ ಬೆಳೆಸುವ ಒತ್ತಾಸೆ ಮತ್ತು ಹಕ್ಕೊತ್ತಾಯಗಳು ನಿರಂತರವಾಗಿ ಪ್ರಕಟಗೊಳ್ಳುತ್ತಲೇ ಇರುವುದು ಕನ್ನಡಾಭಿಮಾನದ ಒಂದು ಮಾದರಿ. ಇದು ಅಗತ್ಯವೂ ಹೌದು. ಆದರೆ ಇದೇ ಸಂದರ್ಭದಲ್ಲಿ ಭಾಷೆಯ ಭವಿಷ್ಯಕ್ಕೂ ಸಾಮಾಜಿಕ ಆರ್ಥಿಕ ನೀತಿ ಮತ್ತು ಸ್ಥಿತಿಗತಿಗಳಿಗೂ ಇರುವ ಸಂಬಂಧವನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ.

ಹಿಂದಿನಿಂದಲೂ ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿಯವರ ಸಹಭಾಗಿತ್ವವಿದೆ. ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವ ಸಲುವಾಗಿ ಖಾಸಗಿ ಸಂಸ್ಥೆಗಳು ಶಾಲೆ, ಕಾಲೇಜುಗಳನ್ನು ಸ್ಥಾಪಿಸಲು ಸರ್ಕಾರಗಳು ಅವಕಾಶ ಕೊಟ್ಟಿದ್ದವು. ಅಂದಿನ ಮಿಶ್ರ ಆರ್ಥಿಕ ಪದ್ಧತಿಯ ಪರಿವಲಯದಲ್ಲೇ ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಯುತ್ತಿದ್ದವು. ಸರ್ಕಾರದ ಉದ್ಯೋಗ ನೀತಿಯನ್ನು ಒಪ್ಪಿಕೊಂಡು ಅನುದಾನಕ್ಕೂ ಒಳಪಡುತ್ತಿದ್ದವು. ಉತ್ತಮ ಶೈಕ್ಷಣಿಕ ಸೇವೆ ಮಾಡುತ್ತಿದ್ದವು. ಆದರೆ ಈಗ ಅನುದಾನವೂ ಬೇಡ, ಸರ್ಕಾರದ ಉದ್ಯೋಗ ಸಂಹಿತೆಯೂ ಬೇಡ ಎನ್ನುವ ದಾಷ್ಟ್ಯವನ್ನು ಕೆಲವು ಪ್ರತಿಷ್ಠಿತ ಖಾಸಗಿ ಸಂಸ್ಥೆಗಳು ತೋರುತ್ತಿವೆ. ಇದು ರಾಷ್ಟ್ರ ಮಟ್ಟದಲ್ಲಿ ಜಾರಿಗೆ ಬಂದ ಆರ್ಥಿಕ ಖಾಸಗೀಕರಣದ ಫಲ.

ಮುಂದುವರೆದಂತೆ, ಸ್ವಾಯತ್ತ ಕಾಲೇಜುಗಳ ಕಲ್ಪನೆ ಬಂತು. ಈ ಕಾಲೇಜುಗಳು ಸರ್ಕಾರ ನಿಗದಿಪಡಿಸಿದ ಪಠ್ಯಕ್ರಮದಲ್ಲೂ ಒಂದಷ್ಟು ಬದಲಾವಣೆ ಮಾಡಿಕೊಳ್ಳುವ ‘ಅಧಿಕಾರ’ ಪಡೆದಿರುವುದರಿಂದ ಕನ್ನಡಕ್ಕೆ ಪೂರ್ಣನ್ಯಾಯ ಒದಗುವುದಿಲ್ಲ. ಡೀಮ್ಡ್ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಇದಕ್ಕಿಂತ ಘೋರಸ್ಥಿತಿಯನ್ನು ಕನ್ನಡ ಭಾಷೆ ಎದುರಿಸಬೇಕಾಗಿದೆ. ಯಾಕೆಂದರೆ ಅವುಗಳಿಗೆ ಅಪರಿಮಿತ ‘ಅಧಿಕಾರ’ವಿದೆ. ಈ ಸಂಸ್ಥೆಗಳಲ್ಲಿ ಕನ್ನಡ ಪಠ್ಯಕ್ಕೆ ನಿಗದಿಪಡಿಸಿರುವ ಬೋಧನಾ ಅವಧಿಗೂ ಸರ್ಕಾರಿ ಕಾಲೇಜುಗಳ ಬೋಧನಾ ಅವಧಿಗೂ ಬಹಳಷ್ಟು ವ್ಯತ್ಯಾಸವಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯ 10.4ನೇ ಪರಿಚ್ಛೇದವು ಉನ್ನತ ಶಿಕ್ಷಣವನ್ನು ‘ಹಂತಹಂತವಾಗಿ ಸ್ವಾಯತ್ತಗೊಳಿಸುವುದು’ ಎಂದು ಹೇಳುತ್ತದೆ. ಅಂದರೆ ಪೂರ್ಣಪ್ರಮಾಣದ ಖಾಸಗೀಕರಣಕ್ಕೆ ರಾಷ್ಟ್ರೀಯ ಹೆದ್ದಾರಿಯನ್ನು ಸಿದ್ಧಪಡಿಸಲಾಗಿದೆ. ಇನ್ನು ಕರ್ನಾಟಕ ಸರ್ಕಾರವು 2021ರ ಆಗಸ್ಟ್ 7ರಂದು ಹೊರಡಿಸಿರುವ ಆದೇಶದ ಪ್ರಕಾರ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ವ್ಯಾಪ್ತಿಗೆ ಸರ್ಕಾರಿ ವಿಶ್ವವಿದ್ಯಾಲಯಗಳು ಮತ್ತು ಸಂಯೋಜಿತ ಕಾಲೇಜುಗಳು ಮಾತ್ರ ಬರುತ್ತವೆ. ಡೀಮ್ಡ್, ಖಾಸಗಿ ವಿಶ್ವವಿದ್ಯಾಲಯಗಳು ಈ ವ್ಯಾಪ್ತಿಗೆ ಬರುವುದಿಲ್ಲ. ಇದು ಆರ್ಥಿಕ ಖಾಸಗೀಕರಣದ ನೀತಿಯ ಶೈಕ್ಷಣಿಕ ವಿಸ್ತರಣೆ. ಇದರ ಫಲವಾಗಿ ಪಠ್ಯಕ್ರಮ ಮತ್ತು ಉದ್ಯೋಗ ನೇಮಕಾತಿಯಲ್ಲಿ ಸರ್ಕಾರದ ಪಾತ್ರ ಇರುವುದಿಲ್ಲ.

ಹೊಸ ಶಿಕ್ಷಣ ನೀತಿಯನ್ನು ಪದವಿ ಹಂತದಲ್ಲಿ ಜಾರಿಗೆ ತರಲು ಮುಂದಾದ ರಾಜ್ಯ ಸರ್ಕಾರವು ಕನ್ನಡವನ್ನೂ ಒಳಗೊಂಡಂತೆ ಭಾಷಾ ವಿಷಯಗಳನ್ನು ಕೇವಲ ಎರಡು ಸೆಮಿಸ್ಟರ್‌ಗೆ ಸೀಮಿತಗೊಳಿಸಿದ್ದರಲ್ಲೂ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳ ಮಾದರಿಯಿದೆ. ಪ್ರಬಲ ಪ್ರತಿರೋಧ ಬಂದಾಗ ನಾಲ್ಕು ಸೆಮಿಸ್ಟರ್‌ಗಳಿಗೆ ವಿಸ್ತರಿಸಿದ್ದಲ್ಲದೆ ಕನ್ನಡವನ್ನು ಕಡ್ಡಾಯ ಮಾಡಿದ್ದು ಸ್ವಾಗತಾರ್ಹ. ಆದರೆ ಗೋಕಾಕ್ ವರದಿಗೆ ಅನುಗುಣವಾಗಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷೆಯೊಂದನ್ನೇ ಕಡ್ಡಾಯ ಮಾಡಿ 1982ರ ಜೂನ್ 20ರಂದು ರಾಜ್ಯ ಸರ್ಕಾರವು ಹೊರಡಿಸಿದ್ದ ಆದೇಶವನ್ನು ರಾಜ್ಯ ಹೈಕೋರ್ಟು ರದ್ದುಗೊಳಿಸಿದ್ದನ್ನು ನಾನು ನೆನಪಿಸಿ, ಕಾನೂನು ತೊಡಕುಗಳನ್ನು ನಿವಾರಿಸಿಕೊಳ್ಳಬೇಕೆಂದು ಉನ್ನತ ಶಿಕ್ಷಣ ಸಚಿವರಿಗೆ ಆಗಲೇ ಪತ್ರ ಬರೆದಿದ್ದೆ.

ಸಂವಿಧಾನದ 14, 29(1) ಮತ್ತು 39(1)ನೇ ವಿಧಿ ಪ್ರಕಾರ ಅಂದಿನ ಆದೇಶವನ್ನು ರದ್ದು ಮಾಡಿದ್ದು, ಈ ವಿಧಿಗಳು ಸಮಾನತೆ ಮತ್ತು ಭಾಷಿಕ ಅಲ್ಪಸಂಖ್ಯಾತರ ಹಕ್ಕುಗಳಿಗೆ ಸಂಬಂಧಿಸಿವೆ. ನನ್ನ ತಿಳಿವಳಿಕೆಯಂತೆ, ಭಾಷಿಕ ಅಲ್ಪಸಂಖ್ಯಾತರ ಬದಲು ಬೇರೆ ಖಾಸಗಿ ಸಂಸ್ಥೆಯವರು ಕನ್ನಡ ಕಡ್ಡಾಯವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಸರ್ಕಾರವು ಯಾವುದೇ ಭಾಷಾ ಬೋಧನೆಗೆ ಧಕ್ಕೆಯಾಗದಂತೆ ಕನ್ನಡವನ್ನು ಕಡ್ಡಾಯ ಮಾಡುವ ಕಾನೂನಾತ್ಮಕ ಮಾರ್ಗೋಪಾಯವನ್ನು ಚಿಂತಿಸಬೇಕು; ತಜ್ಞರ ಜೊತೆ ಚರ್ಚಿಸಬೇಕು.

ಖಾಸಗೀಕರಣದ ಪರವಾದ ನೀತಿಗಳು ದೃಷ್ಟಿಕೋನವನ್ನು ಹೇಗೆ ಬದಲಾಯಿಸುತ್ತವೆ ಎಂಬುದಕ್ಕೆ ರಾಜ್ಯ ಸರ್ಕಾರವು 1989 ಮತ್ತು 1994ರಲ್ಲಿ ಹೊರಡಿಸಿದ ಆದೇಶಗಳ ಬಗ್ಗೆ ಬಂದ ತೀರ್ಪುಗಳ ಸಾರವನ್ನು ಗಮನಿಸಬೇಕು. 1989ರ ಆದೇಶವನ್ನು ಪ್ರಶ್ನಿಸಿದ ಅರ್ಜಿಗಳನ್ನು ಇತ್ಯರ್ಥ ಮಾಡಿದ ಸುಪ್ರೀಂ ಕೋರ್ಟು 1993ರಲ್ಲಿ ‘ಭಾಷಾ ನೀತಿಯನ್ನು ಹೇಗೆ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ರಾಜ್ಯಕ್ಕೆ ತಿಳಿದಿದೆ. ಈ ವಿಚಾರದಲ್ಲಿ ನ್ಯಾಯಾಲಯವು ಹಸ್ತಕ್ಷೇಪ ಮಾಡುವುದು ಸರಿಯಲ್ಲ’ ಎಂದು ಹೇಳಿತ್ತು. 1994ರ ಆದೇಶ ಪ್ರಶ್ನಿಸಿದ್ದ ಅರ್ಜಿಗಳ ಸಂಬಂಧವಾಗಿ ಸುಪ್ರೀಂ ಕೋರ್ಟು 1999ರಲ್ಲಿ ‘ಈ ಪ್ರಕರಣವೇ ನಿರರ್ಥಕ’ ಎಂದಿತ್ತು. ಆದರೆ 2014ರಲ್ಲಿ ಹಿಂದಿನ ತೀರ್ಪುಗಳನ್ನು ಮೀರಿ ಇದೇ ಸುಪ್ರೀಂ ಕೋರ್ಟು ರಾಜ್ಯ ಸರ್ಕಾರದ ಶಿಕ್ಷಣ ಮಾಧ್ಯಮ ಭಾಷಾ ನೀತಿಗೆ ವಿರುದ್ಧವಾಗಿ ತೀರ್ಪು ನೀಡಿ ಪೋಷಕರ ಆಯ್ಕೆಯೇ ಅಂತಿಮ ಎಂದಿತು. ಇದು ಖಾಸಗೀಕರಣದ ಫಲವಾಗಿ ಮೂಡಿದ ದೃಷ್ಟಿಕೋನವಲ್ಲವೇ?

ವಸ್ತುಸ್ಥಿತಿ ಹೀಗಿರುವಾಗ, ರಾಷ್ಟ್ರೀಯ ಶಿಕ್ಷಣ ನೀತಿಯ 4.11ನೇ ಪರಿಚ್ಛೇದದಲ್ಲಿ 5ನೇ ತರಗತಿಯವರೆಗೆ ಮಾತೃಭಾಷೆ ಅಥವಾ ರಾಜ್ಯಭಾಷೆ ಮಾಧ್ಯಮದಲ್ಲಿ ಬೋಧಿಸುವ, ಸಾಧ್ಯವಾದರೆ 8ನೇ ತರಗತಿಯವರೆಗೆ ವಿಸ್ತರಿಸುವ ಅಂಶವಿರುವುದು ಕೇವಲ ಆಶಯವಷ್ಟೇ ಆಗುತ್ತದೆ. ಸಂವಿಧಾನದ ತಿದ್ದುಪಡಿಯಿಲ್ಲದೆ ಜಾರಿಯಾಗುವುದಿಲ್ಲ.

ಶಿಕ್ಷಣ ಮಾಧ್ಯಮದ ವಿಷಯ ಹೀಗಿದ್ದರೆ, ಒಂದು ಭಾಷೆಯಾಗಿ ಕನ್ನಡವನ್ನು ಕಡ್ಡಾಯ ಮಾಡುವುದನ್ನು ಕೂಡ ಪ್ರಶ್ನಿಸಲಾಗುತ್ತಿದೆ. 2015ರಲ್ಲಿ ಪ್ರೌಢಶಾಲೆಯವರೆಗೆ ಕರ್ನಾಟಕ ಸರ್ಕಾರವು ಕೇಂದ್ರೀಯ ಶಾಲೆಗಳನ್ನೂ ಒಳಗೊಂಡಂತೆ ಹತ್ತನೇ ತರಗತಿಯವರೆಗೆ ಒಂದು ಭಾಷಾ ವಿಷಯವಾಗಿ ಕನ್ನಡವನ್ನು ಕಡ್ಡಾಯಗೊಳಿಸಿ ಕಾಯ್ದೆ ಮಾಡಿದ್ದನ್ನು ಕೇಂದ್ರೀಯ ಶಾಲೆಯ ವಿದ್ಯಾರ್ಥಿ- ಪೋಷಕರ ಮೂಲಕ ಹೈಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ. ಇದೇ ಮಾದರಿಯ ಕಾಯ್ದೆಯನ್ನು 2006ರಲ್ಲಿ ತಮಿಳುನಾಡು, 2020ರಲ್ಲಿ ಮಹಾರಾಷ್ಟ್ರ ಸರ್ಕಾರಗಳು ರೂಪಿಸಿ ಜಾರಿಗೊಳಿಸಿರುವುದನ್ನು ಇಲ್ಲಿ ನೆನೆಯಬಹುದು.

ಇದು ಜಾಗತೀಕರಣದ ಕಾಲ. ಜಾಗತೀಕರಣವೆಂದರೆ ಆರ್ಥಿಕ ಖಾಸಗೀಕರಣ. ಆರ್ಥಿಕ ಖಾಸಗೀಕರಣವು ರಾಷ್ಟ್ರೀಯ ನೀತಿಯಾಗಿರುವುದರಿಂದ ಸ್ಥಳೀಯ ಅರ್ಹ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕೆಂದು, ಬಹುರಾಷ್ಟ್ರೀಯ ಬೃಹತ್ ಖಾಸಗಿ ಉದ್ಯಮಗಳನ್ನು ಕಾನೂನಾತ್ಮಕವಾಗಿ ಕೇಳುವ ಸ್ಥಿತಿಯಲ್ಲಿ ರಾಜ್ಯ ಸರ್ಕಾರಗಳು ಇಲ್ಲ. ಷರತ್ತುಗಳನ್ನು ಹಾಕಿದರೆ ಅವನ್ನು ಲೆಕ್ಕಿಸದೆ ಬೇರೆ ರಾಜ್ಯಗಳಿಗೆ ಹೋಗುವ ಸೂಚನೆ ಕೊಟ್ಟ ಖಾಸಗಿ ಬೃಹತ್ ಉದ್ಯಮ ಸಂಸ್ಥೆಗಳೂ ಇವೆ. ಆದ್ದರಿಂದ ಸ್ಥಳೀಯ ಅರ್ಹ ಅಭ್ಯರ್ಥಿಗಳಿಗೆ ಬೃಹತ್ ಉದ್ಯಮ ಸಂಸ್ಥೆಗಳು ಆದ್ಯತೆಯ ಮೇಲೆ ಉದ್ಯೋಗಾವಕಾಶ ನೀಡಬೇಕು ಎಂಬುದು ರಾಷ್ಟ್ರೀಯ ನೀತಿಯಾಗಬೇಕು. ಜೊತೆಗೆ ಸಂವಿಧಾನಾತ್ಮಕ ಮೀಸಲಾತಿಗೂ ಅವಕಾಶ ಕಲ್ಪಿಸಬೇಕು.

ಸರ್ಕಾರಿ ಉದ್ಯಮ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತ ಪೂರ್ಣ ಖಾಸಗೀಕರಣಕ್ಕೆ ಪಣ ತೊಟ್ಟಂತಿರುವ ಕೇಂದ್ರ ಸರ್ಕಾರದಿಂದ ಇದನ್ನು ನಿರೀಕ್ಷಿಸಲು ಸಾಧ್ಯವೇ? 1991-92ರಲ್ಲಿ ಖಾಸಗೀಕರಣದ ಬೀಜ ಬಿತ್ತಿದ ಕಾಂಗ್ರೆಸ್ ಪಕ್ಷಕ್ಕೆ ಈ ಹಕ್ಕೊತ್ತಾಯವನ್ನು ಮಂಡಿಸುವ ತಾತ್ವಿಕ ನೆಲೆ ಇದೆಯೇ? ಒಟ್ಟಿನಲ್ಲಿ ಖಾಸಗೀಕರಣದ ವ್ಯಾಪ್ತಿ ವಿಸ್ತರಿಸುತ್ತಿರುವಾಗ ಕನ್ನಡಿಗರಿಗೆ ಉದ್ಯೋಗವೆಂಬುದು ಅಲ್ಪಪ್ರಮಾಣದ ಸರ್ಕಾರಿ ವಲಯಕ್ಕೆ ಸೀಮಿತವಾಗುತ್ತದೆ.

ವಸ್ತುಸ್ಥಿತಿ ಹೀಗಿರುವಾಗ, ಕನ್ನಡ ಮತ್ತು ಕನ್ನಡಿಗರಿಗೆ ಬದುಕಿನ ಭದ್ರತೆ ಒದಗಿಸಲು ಭಾಷಿಕ ನೆಲೆಯಲ್ಲಷ್ಟೇ ಚಿಂತಿಸದೆ, ಪೂರ್ಣಪ್ರಮಾಣದ ಆರ್ಥಿಕ ಖಾಸಗೀಕರಣಕ್ಕೆ ಪ್ರತಿರೋಧ ಒಡ್ಡುತ್ತ ಹೊಸ ಸಾಧ್ಯತೆಗಳ ಪ್ರಜಾಸತ್ತಾತ್ಮಕ ಹೋರಾಟ ಮತ್ತು ಪರಿಹಾರ ಮಾರ್ಗಗಳಿಗೆ ಮುಂದಾಗಬೇಕಾಗುತ್ತದೆ.

ಹೋರಾಟ ಮತ್ತು ಪರಿಹಾರ ಮಾರ್ಗಗಳನ್ನು ಕುರಿತು ಕ್ರಿಯಾಶೀಲರಾಗುವಾಗ ಈಗಾಗಲೇ ಅನುಷ್ಠಾನಗೊಂಡಿರುವ ಮುಕ್ತ ಆರ್ಥಿಕ ಪದ್ಧತಿಯ ಫಲವಾಗಿ ಪ್ರಜಾಸತ್ತಾತ್ಮಕ ಸರ್ಕಾರಗಳನ್ನೇ ನಿಯಂತ್ರಿಸುವಷ್ಟು ಶಕ್ತಿಯುತವಾಗಿರುವ ಖಾಸಗಿ ಬಂಡವಾಳಶಾಹಿಯ ಹಿಡಿತವನ್ನು ಪ್ರತಿರೋಧಿಸಬೇಕು. ಕನ್ನಡವಷ್ಟೇ ಅಲ್ಲ, ಎಲ್ಲ ರಾಜ್ಯಗಳ ಭಾಷೆಗಳೂ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಟು ವಾಸ್ತವದ ಹಿನ್ನೆಲೆಯಲ್ಲಿ ರಾಜ್ಯ ಭಾಷೆಗಳನ್ನೂ ರಾಷ್ಟ್ರೀಯ ಭಾಷೆಗಳೆಂದು ಪರಿಗಣಿಸುವಂತೆ ಒತ್ತಾಯಿಸಬೇಕು. ಈ ನೆಲೆಯ ರಾಷ್ಟ್ರೀಯ ಭಾಷಾ ನೀತಿ ಮತ್ತು ಅದರ ಆಧಾರಿತ ಉದ್ಯೋಗ ನೀತಿ ರೂಪುಗೊಳ್ಳಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು