ಭಾನುವಾರ, ಜೂನ್ 26, 2022
21 °C

ಸುದ್ದಿ ವಿಶ್ಲೇಷಣೆ: ಸವಾಲು ಕೂಗಿದ ಬಿಎಸ್‌ವೈ!

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

ಬಿ.ಎಸ್‌.ಯಡಿಯೂರಪ್ಪ ಮತ್ತು ಬಿಜೆಪಿ

ಬೆಂಗಳೂರು: ‘ಮುಂದಿನ ಎರಡು ವರ್ಷ ನಾನೇ ಮುಖ್ಯಮಂತ್ರಿ’ ಎಂದು ಕಿಂಚಿತ್ತೂ ಅಳುಕಿಲ್ಲದಂತೆ ಘಂಟಾಘೋಷವಾಗಿ ಮಾರ್ನುಡಿಯುತ್ತಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಏಕಾಏಕಿ ‘ವೈರಾಗ್ಯ’ದ ಮಾತುಗಳನ್ನಾಡಿರುವುದು ಬಿಜೆಪಿಯೊಳಗೆ ಮಾತ್ರವಲ್ಲ, ರಾಜ್ಯದಲ್ಲಿಯೇ ರಾಜಕೀಯ ಕಲ್ಲೋಲ ಸೃಷ್ಟಿಸಿದೆ.

2021ರ ಹೊಸ ವರ್ಷದ ಆರಂಭದ ದಿನ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳ ಜತೆ ಪತ್ರಿಕಾಗೋಷ್ಠಿ ನಡೆಸಿದ್ದ ಯಡಿಯೂರಪ್ಪ, ‘ಇನ್ನು ಎರಡೂವರೆ ವರ್ಷ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆಂದು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟವಾಗಿ ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ ನಾಯಕತ್ವಕ್ಕೆ ಸಂಬಂಧಿಸಿದಂತೆ ಯಾವ ಗೊಂದಲವೂ ಇಲ್ಲ. ಒಂದೆರಡು ಶಾಸಕರು ಅಸಮಾಧಾನ ವ್ಯಕ್ತಪಡಿಸಿರಬಹುದು. ಸಚಿವರು, ಶಾಸಕರು, ಜನರಲ್ಲಿ ಯಾವ ಗೊಂದಲವೂ ಇಲ್ಲ’ ಎಂದು ತುಸು ಏರಿದ ಧ್ವನಿಯಲ್ಲೇ ಹೇಳಿದ್ದರು.

ಅವರ ನಡೆಗಳಲ್ಲಿ ಅಧೈರ್ಯದ ಲವಲೇಶವೂ ಇಣುಕುತ್ತಿರಲಿಲ್ಲ. ಆದರೆ, ಕಳೆದ ಒಂದು ತಿಂಗಳ ವಿದ್ಯಮಾನ ಅವರನ್ನು ಕಂಗೆಡಿಸಿದಂತೆ ಕಾಣುತ್ತಿದೆ.

‘ರಾಜ್ಯದಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಯಡಿಯೂರಪ್ಪ ಅವರಿಗೆ ತುಂಬಾ ಬೇಸರ ಇದ್ದಂತಿದೆ. ಅವರ ಜತೆ ಮಾತನಾಡುವಾಗ ನೋವು ಗೊತ್ತಾಯಿತು’ ಎಂದು ಸಚಿವರಾದ ಬಸವರಾಜ ಬೊಮ್ಮಾಯಿ, ಆರ್. ಅಶೋಕ ಆಡಿರುವ ಮಾತುಗಳು ಇದನ್ನೇ ಋಜುಪಡಿಸುತ್ತವೆ.

ಬಡಿದಾಡಿ ದಕ್ಕಿಸಿಕೊಂಡ ಅಧಿಕಾರವನ್ನು ಸುಖಾಸುಮ್ಮನೆ ಬಿಟ್ಟುಹೋಗುವಷ್ಟು ಔದಾರ್ಯ ಅಥವಾ ದಡ್ಡತನ ಯಡಿಯೂರಪ್ಪ ಅವರಲ್ಲಿ ಇಲ್ಲ. ಅಖಾಡಕ್ಕಿಳಿದ ಜಟ್ಟಿ ಕೊನೆಯವರೆಗೂ ಎದುರಾಳಿಯನ್ನು ಮಣಿಸಲು ಪಟ್ಟು ಹಾಕುವುದು, ಕೈಸೋಲುವ ಸನ್ನಿವೇಶ ಎದುರಾದಾಗ ಅಬ್ಬರಿಸಿ ಬೊಬ್ಬಿರಿದು ಸವಾಲು ಹಣಿಯುವುದು, ಸೋತು ಕುಸಿಯುವ ಹೊತ್ತಿನಲ್ಲೂ, ವೀರಾವೇಶದಿಂದ ಹೋರಾಡಿದ
ಜಗಜಟ್ಟಿಯನ್ನು ಹೇಗೆ ಹೆಡೆಮುರಿ ಕಟ್ಟಿ ನೆಲಕ್ಕೆ ಕುಕ್ಕಲಾಯಿತು ಎಂದು ನೋಡುಗರ ಅನುಕಂಪ ಪಡೆಯುವಷ್ಟರ ಮಟ್ಟಿಗೆ ‘ವೀರಸೋಲು’ ಅನುಭವಿಸುವುದು ಕುಸ್ತಿಯ ಜಾಯಮಾನ.

ಬರ–ನೆರೆ, ಕೋವಿಡ್‌ ವೇಳೆ ಕೇಂದ್ರವು ನೆರವಿಗೆ ಬರದೇ ಇದ್ದಾಗಲೂ, ತಮ್ಮದೇ ಬಿಜೆಪಿ ಸರ್ಕಾರವನ್ನು ಪ್ರಧಾನಿ ನರೇಂದ್ರ ಮೋದಿ ಕಡೆಗಣಿಸಿದಾಗಲೂ ಮೌನವಾಗಿಯೇ ಇದ್ದ ಯಡಿಯೂರಪ್ಪ, ಈಗ ದಿಢೀರ್‌ ಮಾತಿನ ವರಸೆ ಬದಲಿಸಿರುವುದರ ಹಿಂದೆ ಈ ಎಲ್ಲ ಆಯಾಮಗಳೂ ಇದ್ದಂತಿವೆ.

‘ವರಿಷ್ಠರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಅವರು ಎಷ್ಟು ದಿನ ಮುಂದುವರಿಯಿರಿ ಎನ್ನುತ್ತಾರೋ ಅಲ್ಲಿಯವರೆಗೂ ಇರುತ್ತೇನೆ. ರಾಜೀನಾಮೆ ಕೊಡಿ ಎಂದ ದಿನ ಕೊಟ್ಟು ಹೋಗುತ್ತೇನೆ' ಎಂದು ಯಡಿಯೂರಪ್ಪ ಹೇಳಿದ್ದಾರೆ. ಅವರು ಹೀಗೆ ಹೇಳಬೇಕಾದರೆ ‘ನೀವು ಗೌರವಯುತವಾಗಿ ನಿರ್ಗಮಿಸಿ’ ಎಂದು ಬಿಜೆಪಿ ವರಿಷ್ಠರು ಸೂಚನೆ ಕೊಟ್ಟಿರಬೇಕು. ಅದಕ್ಕೆ ಬೇಕಾದ ಮಾನಸಿಕ ಸಿದ್ಧತೆ ಮಾಡಿಕೊಳ್ಳುವ ಸಲುವಾಗಿ ಹೀಗೆ ಹೇಳಿರುವ ಸಾಧ್ಯತೆ ಉಂಟು.

‘ನನಗೆ ಕೊಟ್ಟಿರುವ ಅವಕಾಶವನ್ನು ಶಕ್ತಿ ಮೀರಿ ಬಳಸಿಕೊಂಡು ಅಭಿವೃದ್ಧಿ ಕೆಲಸ ಮಾಡುತ್ತೇನೆ. ಉಳಿದಿದ್ದು ವರಿಷ್ಠರಿಗೆ ಬಿಟ್ಟಿದ್ದು’ ಎಂದು ಅವರು ಹೇಳಿದ್ದಾರೆ. ಹೀಗೆ ಹೇಳುವ ಮೂಲಕ ‘ಕೋವಿಡ್‌ನಂತಹ ಕರುಣಾಜನಕ ಕಾಲದಲ್ಲೂ ವಯಸ್ಸು, ಆರೋಗ್ಯ ಲೆಕ್ಕಿಸದೇ ಕೆಲಸ ಮಾಡುತ್ತಿದ್ದೇನೆ. ಹಾಗಿದ್ದರೂ ನನ್ನನ್ನು ಕುರ್ಚಿಯಿಂದ ಇಳಿಸುವ ಲೆಕ್ಕಾಚಾರವನ್ನು ವರಿಷ್ಠರು ಮಾಡುತ್ತಿದ್ದಾರೆ ಎಂದು ತಮ್ಮ ಅಭಿಮಾನಿಗಳಿಗೆ, ತಮ್ಮ ಭದ್ರ ಮತಬ್ಯಾಂಕ್ ಎಂದು ಅವರು ನಂಬಿಕೊಂಡಿರುವ ವೀರಶೈವ–ಲಿಂಗಾಯತರಿಗೆ ಸಂದೇಶ ರವಾನಿಸಿ, ಅನುಕಂಪ ಗಿಟ್ಟಿಸುವ ಅಂದಾಜು ಇದರ ಹಿಂದೆ ಇದ್ದಂತಿದೆ.

‘ನನ್ನನ್ನು ಇಳಿಸುವುದಾದರೆ ಇಳಿಸಿ; ನಾನೂ ಒಂದು ಕೈ ನೋಡುವೆ’ ಎಂದು ವರಿಷ್ಠರಿಗೆ ಸವಾಲು ಒಡ್ಡುವ ಮತ್ತೊಂದು ಉದ್ದೇಶವೂ ಇದೆ. ‘ಪರ್ಯಾಯ ನಾಯಕರು ಇಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ’ ಎಂದು ಯಡಿಯೂರಪ್ಪ ಹೇಳಿರುವುದು ಸರಳ ಹೇಳಿಕೆಯಲ್ಲ. ‘ನನ್ನ ಬಿಟ್ಟರೆ ಪರ್ಯಾಯ ನಾಯಕ ಇದ್ದರೆ ತಂದು ಕೂರಿಸಿ ನೋಡುವಾ‘ ಎಂದು ವರಿಷ್ಠರಿಗೆ ಪರೋಕ್ಷವಾಗಿ ಸವಾಲು ಒಡ್ಡಲು ಇದನ್ನು ಹೇಳಿದಂತಿದೆ.

ಕಳೆದ ಒಂದು ತಿಂಗಳ ಬೆಳವಣಿಗೆಗಳು, ರಾಜಕೀಯ ವಾತಾವರಣ ಯಡಿಯೂರಪ್ಪ ಪರ ಇಲ್ಲ ಎಂಬುದನ್ನೂ ಸೂಚ್ಯವಾಗಿ ಹೇಳುತ್ತವೆ. ಯಡಿಯೂರಪ್ಪ ಮತ್ತು ಬಿ.ವೈ. ವಿಜಯೇಂದ್ರ ವಿರುದ್ಧ ಸಚಿವ ಸಿ.ಪಿ. ಯೋಗೇಶ್ವರ್ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒಂದೇ ಸಮನೆ ವಾಕ್‌ಪ್ರಹಾರ ನಡೆಸುತ್ತಿದ್ದರೂ ಆ ಪಕ್ಷ ಯಾವುದೇ ಶಿಸ್ತು ಕ್ರಮ ಕೈಗೊಂಡಿಲ್ಲ. ಸಚಿವರೊಬ್ಬರು ತಮ್ಮದೇ ನಾಯಕನ ವಿರುದ್ಧ ಮಾತನಾಡಿದರೂ ಅದನ್ನು ಸಹಿಸಿಕೊಂಡು ಬಿಜೆಪಿ ಸುಮ್ಮನಿದೆ ಎಂದರೆ, ಅವರ ಹಿಂದೆ ವರಿಷ್ಠರು ಇರಬೇಕು. ಇಲ್ಲ, ಪಕ್ಷದ ನಾಯಕತ್ವ ಯೋಗೇಶ್ವರ್‌ಗಿಂತ ದುರ್ಬಲರಾಗಿರಬೇಕು. ಆದರೆ, ಮೋದಿ– ಅಮಿತ್ ಶಾ ದುರ್ಬಲರೇನಲ್ಲ. ಇವೆಲ್ಲವೂ ಯಡಿಯೂರಪ್ಪನವರ ಮೇಲೆ ವರಿಷ್ಠರಿಗೆ ವಿಶ್ವಾಸ ಕುಸಿಯುತ್ತಿರುವುದರ ದ್ಯೋತಕವಾಗಿರುವುದಂತೂ ಹೌದು.

ಯಡಿಯೂರಪ್ಪನವರ ಮಾತುಗಳನ್ನು ಈ ಎಲ್ಲ ಬೆಳವಣಿಗೆಗಳ ಬೆಳಕಿನಲ್ಲಿ ನೋಡಿದರೆ ನಾಯಕತ್ವ ಬದಲಾವಣೆ ಸುಳಿವಂತೂ ಕಾಣಿಸುವುದು ಸ್ಪಷ್ಟ.

ಅಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಬೇಡಿಕೆ?

‘ಯಡಿಯೂರಪ್ಪ ಅವರನ್ನು ಪದಚ್ಯುತಿ ಮಾಡುವುದಾದರೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ತಮಗೆ ಕೊಡಬೇಕು’ ಎಂದು ಹಾಲಿ ಉಪಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಬೇಡಿಕೆ ಇಟ್ಟಿದ್ದಾರೆಯೇ?

ಇಂತಹದೊಂದು ಚರ್ಚೆ ದೆಹಲಿ ಮಟ್ಟದ ನಾಯಕರ ವಲಯದಲ್ಲಿ ಹರಿದಾಡುತ್ತಿದೆ.

ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಇತ್ತೀಚೆಗೆ ದೆಹಲಿಯಲ್ಲಿ ಭೇಟಿಯಾದ ವಿಜಯೇಂದ್ರ, ಈ ಬೇಡಿಕೆಯ ಜತೆಗೆ ಯತ್ನಾಳ ಹಾಗೂ ಯೋಗೇಶ್ವರ್ ಅವರನ್ನು ಉಚ್ಛಾಟಿಸಬೇಕು ಎಂಬ ಅಹವಾಲನ್ನೂ ಸಲ್ಲಿಸಿದ್ದಾರೆ.

‘ಭಿನ್ನಮತೀಯರಿಗೆ ತಕ್ಕ ಶಾಸ್ತಿ ಕಲಿಸುವ ಬಗ್ಗೆ ವರಿಷ್ಠರು ಭರವಸೆ ಕೊಟ್ಟಿದ್ದು, ಸದ್ಯದಲ್ಲೇ ಅವರೆಲ್ಲರ ವಿರುದ್ಧ ಶಿಸ್ತು ಕ್ರಮ ಜರುಗಲಿದೆ ಎಂಬ ಸುದ್ದಿಯನ್ನು ಈ ಬೆಳವಣಿಗೆ ಬೆನ್ನಲ್ಲೇ ಹರಿಬಿಡಲಾಯಿತು. ಪಕ್ಷದ ಅಧ್ಯಕ್ಷ ಸ್ಥಾನದ ಮೇಲೆ ವಿಜಯೇಂದ್ರ ಕಣ್ಣಿಟ್ಟಿರುವ ಕಾರಣಕ್ಕೆ, ಈಗಿನ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ದುರ್ಬಲ ಅಧ್ಯಕ್ಷ ಎಂದು ಬಿಂಬಿಸುವ ಯತ್ನವೂ ನಡೆಯುತ್ತಿದೆ’ ಎಂದೂ ಬಿಜೆಪಿ ಮೂಲಗಳು ಹೇಳುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು