ಶುಕ್ರವಾರ, ಸೆಪ್ಟೆಂಬರ್ 24, 2021
21 °C
ಶ್ರಮದ ಅಸಮ ಹಂಚಿಕೆಯನ್ನೇ ಸಮಯದ ಮೌಲ್ಯವಾಗಿಸುವ ನವ ಗುಲಾಮಗಿರಿ

ವಿಶ್ಲೇಷಣೆ | ದಿಕ್ಸೂಚಿಯೇ ಇಲ್ಲದ ತಕ್ಕಡಿ...

ಸಬಿತಾ ಬನ್ನಾಡಿ Updated:

ಅಕ್ಷರ ಗಾತ್ರ : | |

ಮಾನವ ಇತಿಹಾಸದಲ್ಲಿ ಮನುಷ್ಯರನ್ನು ಮನುಷ್ಯರೇ ಗುಲಾಮರನ್ನಾಗಿಸಿ ಆಳುವ ಕಾಲವೊಂದಿತ್ತು. ಅದರಿಂದ ಹೊರಬರಲು ಎಷ್ಟೆಲ್ಲಾ ಕ್ರಾಂತಿಗಳು ಆಗಬೇಕಾಯಿತು. ಇಂದು ನಾವು ಇನ್ನೊಂದು ತಿರುವಿನಲ್ಲಿ ನಿಂತಿದ್ದೇವೆ. 1861ರಲ್ಲಿ ಬಂದ ಲಿಂಡಾ ಬ್ರೆಂಟ್‍ಳ ‘ದ ಇನ್ಸಿಡೆಂಟ್ಸ್ ಇನ್ ದ ಲೈಫ್ ಆಫ್ ಅ ಸ್ಲೇವ್‍ಗರ್ಲ್’ ಮೊತ್ತಮೊದಲ ಮಹಿಳಾ ಆತ್ಮಕಥನ. ಅದರಲ್ಲಿ ಅವಳು ಗುಲಾಮಗಿರಿಯ ಒಳ ಹೊರಗಿನ ಹಿಂಸೆಗಳನ್ನು ಅನಾವರಣ ಮಾಡುತ್ತಾ ಹೋಗುತ್ತಾಳೆ.

ಆರನೇ ವಯಸ್ಸಿಗೇ ಗುಲಾಮಳಾದ ಅವಳು, ಹದಿಹರೆಯದಲ್ಲಿದ್ದಾಗ ತಂದೆಯ ಮರಣವಾರ್ತೆ ಬರುತ್ತದೆ. ಅಲ್ಲೇ ಹತ್ತಿರದಲ್ಲಿದ್ದರೂ ಮೇಲಿಂದ ಮೇಲೆ ಕೆಲಸ ಹೇಳಿ, ಅಲ್ಲಿಗವಳು ತಕ್ಷಣ ಹೋಗದಂತೆ ಮಾಡಲಾಗುತ್ತದೆ. ಆ ಕಾಲಗಳು ಸಂದು ಒಳ್ಳೆಯ ಕಾಲ ಬಂತೆಂಬ ನಿಟ್ಟುಸಿರಿಡುವಾಗಲೇ, ಮನುಷ್ಯನ ವಿರುದ್ಧ ಮನುಷ್ಯನನ್ನು ಸ್ಪರ್ಧಿಯಾಗಿಸಿ ಕಣ್ಣಿಗೆ ಕಾಣದ ಹೊಸ ಗುಲಾಮಗಿರಿಗೆ ತಳ್ಳುತ್ತಿದೆಯೇನೋ ಎಂಬ ಸಂಶಯ ಕಾಡುತ್ತಿದೆ. ಇಂದು 24×7 ಅವಿರತ ದುಡಿಮೆ ಎಂಬ ಪರಿಕಲ್ಪನೆಯಲ್ಲಿಯೂ ಅವಳಿಗಾದಂತೆ ಸ್ವಾತಂತ್ರ್ಯ ಮತ್ತು ವೈಯಕ್ತಿಕತೆಯ ನಾಶವಾಗತೊಡಗಿದೆ.

ಕೈಗಾರಿಕೀಕರಣದ ಜೊತೆ ಜೊತೆಗೇ ಈ ಪರಿಕಲ್ಪನೆ ಹುಟ್ಟಿರಬಹುದಾದರೂ, ಕಂಪ್ಯೂಟರ್ ಜೊತೆಗೆ ಇದೊಂದು ಮೌಲ್ಯವೇ ಆಗಿ ಪರಿವರ್ತನೆಯಾಯಿತು. ಕೈಗಾರಿಕೀಕರಣವು ಹಗಲು– ರಾತ್ರಿ ಪಾಳಿಯನ್ನು ಶುರು ಮಾಡಿತಾದರೂ, ಅದು ಇಬ್ಬರ ನಡುವೆ ಹಂಚಿಕೆಯಾಗಿ ಉದ್ಯೋಗ ಹೆಚ್ಚಿಸಿತು. ಆದರೆ ಮೂಲತಃ ಸೇವಾಕ್ಷೇತ್ರಕ್ಕಾಗಿ ಮಾತ್ರ ಹುಟ್ಟಿಕೊಂಡ 24×7 ಪರಿಕಲ್ಪನೆ ಕ್ರಮೇಣ ಮಾರುಕಟ್ಟೆಯನ್ನು ಆಕ್ರಮಣ ಮಾಡಿಕೊಳ್ಳಲು ದಾಳವಾಗಿಯೂ, ಬರಬರುತ್ತಾ ಉದ್ಯೋಗಿಗಳ ಜುಟ್ಟು ಹಿಡಿದು ದುಪ್ಪಟ್ಟು ಕೆಲಸ ಮಾಡಿಸಿಕೊಳ್ಳುವ ಸಾಧನವಾಗಿಯೂ ಬದಲಾಗಿದೆ.

ಇಂದು ಸರ್ಕಾರಿ, ಖಾಸಗಿ ಎಂಬ ವ್ಯತ್ಯಾಸವಿಲ್ಲದಂತೆ ಕೈಯಲ್ಲಿನ ಮೊಬೈಲ್‍ನಲ್ಲಿ ಇಂಟರ್‌ನೆಟ್ ಸದಾ ಆನ್‍ನಲ್ಲೇ ಇಡಬೇಕು. ಕ್ಷಣ ಕ್ಷಣವೂ ಆದೇಶ, ಮಾಹಿತಿಗೆ ಬೇಡಿಕೆ ಮತ್ತು ಅದೆಲ್ಲವೂ ತಕ್ಷಣವೇ ಸಲ್ಲಿಕೆಯಾಗಬೇಕೆಂಬ ಧಾವಂತ ಅಲ್ಲಿರುತ್ತದೆ. ಸರಿಯಾಗಿ ಗಮನಿಸಿದರೆ, ಅದರಲ್ಲಿ ಎಷ್ಟೋ ಕೆಲಸಗಳ ಅವಶ್ಯಕತೆಯೇ ಇರುವುದಿಲ್ಲ ಅಥವಾ ಇನ್ನೆಷ್ಟೋ ಕೆಲಸಗಳನ್ನು ಅವಸರವಿಲ್ಲದೆ, ಯೋಜಿತವಾಗಿ ಮಾಡುವುದಕ್ಕೂ ಸಾಧ್ಯ ಇರುತ್ತದೆ. ಆದರೆ ಒಂದೋ ನಾವು ಕೆಲಸ ಮಾಡುತ್ತಲೇ ಇದ್ದೇವೆ ಎಂಬ ಹುಸಿ ಸಂತೃಪ್ತಿ, ಇಲ್ಲವೇ ನಾವು ಕೆಲಸ ಮಾಡಿಸುತ್ತಲೇ ಇದ್ದೇವೆ ಎಂಬ ಅಹಂನ ತೃಪ್ತಿ ಇಲ್ಲಿ ಹೆಚ್ಚು ಕಾಣಿಸುತ್ತಿದೆ. ಆದರೆ ಇದು ಮನುಷ್ಯನ ಸಂತಸ ಮತ್ತು ಆರೋಗ್ಯವನ್ನು ನಾಶ ಮಾಡುತ್ತಿರುವುದನ್ನು ನಿರ್ಲಕ್ಷಿಸಲಾಗುತ್ತಿದೆ.

ಅದೊಂದು ಕಾಲ ಇತ್ತು. ರಾತ್ರಿ ಹತ್ತು ಗಂಟೆಗೆ ರೇಡಿಯೊ ಬಂದ್ ಆಗುತ್ತಿತ್ತು. ಮುಂದೆ ಬಂದ ಟಿ.ವಿ ಕೂಡ ಹತ್ತಕ್ಕೋ ಹನ್ನೊಂದಕ್ಕೋ ಆಫ್ ಆಗುತ್ತಿತ್ತು. ಅಂದರೆ ಅಲ್ಲಿಗೆ ದಣಿವಾರಿಸಿಕೊಳ್ಳಲು ಅಣಿಯಾಗಿ ಎಂಬ ಸಂದೇಶ ರವಾನೆಯಾಗುತ್ತಿತ್ತು. ಅಬ್ಬ! ಈಗ ಎಣಿಸಿಕೊಂಡರೆ ಅದು ಎಂತಹ ದೊಡ್ಡ ಶಾಂತಿಯ ಸಾಗರ ಅನ್ನಿಸುತ್ತಿದೆ. ಆಗೆಲ್ಲ, ಸಾರ್ವಜನಿಕ ಕಾರ್ಯಕ್ರಮಗಳೂ ಅತಿ ವಿರಳ. ಅಪರೂಪಕ್ಕೆ ಸಿಗುವ ಮೈಕ್‍ನ ಧ್ವನಿ ಕೇಳಲು ಜನ ಸಂಭ್ರಮ ಪಡುತ್ತಿದ್ದರು. ಇಂದು ಬೆಳಗ್ಗಿನ ಕಸದ ವಾಹನದಿಂದಲೇ ಗದ್ದಲ ಶುರುವಾದರೆ, ಯಾವುದನ್ನು ನೋಡಬೇಕು, ಏನನ್ನು ಕೇಳಬೇಕು, ಯಾವುದರಲ್ಲಿ ತೊಡಗಿಸಿಕೊಳ್ಳಬೇಕು ಎಂಬುದೇ ತಿಳಿಯದ ಅಯೋಮಯ.

ಬಾಲ್ಯದಲ್ಲಿ ಭಾನುವಾರ ಬೆಳಿಗ್ಗೆ ಹತ್ತು ಗಂಟೆಗೆ ಮಾತ್ರ ಪ್ರಸಾರ ಆಗುತ್ತಿದ್ದ ಕೋರಿಕೆಯ ಚಿತ್ರಗೀತೆ ಕೇಳಲು ಎಲ್ಲರೂ ರೇಡಿಯೊ ಸುತ್ತ ಕುಳಿತು ಕಾತರದಿಂದ ಕಾಯುತ್ತಿದ್ದ ಆ ಸುಖವನ್ನಾಗಲೀ, ವರ್ಷದಲ್ಲಿ ಒಂದೋ ಎರಡೋ ಕ್ರಿಕೆಟ್ ಟೆಸ್ಟ್ ಮ್ಯಾಚ್, ರಣಜಿ ಮ್ಯಾಚ್‍ನ ಕಮೆಂಟರಿ ಕೇಳುವಾಗ ಸಿಗುತ್ತಿದ್ದ ವರ್ಣಾತೀತ ಸಂಭ್ರಮವಾಗಲೀ, ನೆಂಟರು ಬಂದಾಗ ಮಾತ್ರ ಸಿಗುತ್ತಿದ್ದ ವಿಶೇಷ ನಾನ್‍ವೆಜ್ ಊಟದ ಬ್ರಹ್ಮಾನಂದವಾಗಲೀ, ಹಬ್ಬದ ದಿನ ಮಾತ್ರ ಸಿಗುತ್ತಿದ್ದ ಹೋಳಿಗೆ ಪಾಯಸದ ರಸಸ್ಪರ್ಶದ ತೃಪ್ತಿಯಾಗಲೀ ಇಂದಿನ ಮಿತಿಯಿಲ್ಲದ ಅತಿಯಲ್ಲಿ, ಒಳಹೊರಗಿನ ಕೆಲಸದ ಒತ್ತಡದಲ್ಲಿ ಮರೆಯಾಗಿ ಹೋಗಿವೆ.

ಇಂದು ಎಲ್ಲವೂ ವ್ಯಸನದಂತೆ ನಮ್ಮನ್ನು ಆವರಿಸಿಕೊಂಡು, ಅಂತರ ಪಿಶಾಚಿಗಳಂತೆ ಬಳಲುವುದಕ್ಕೆ ಪೂರಕವಾಗುವ ವ್ಯವಸ್ಥೆಯನ್ನೇ ಮತ್ತೆ ಮತ್ತೆ ಅಪ್ಪಿ ಕೊಳ್ಳುವ ತಪ್ಪುಗಳನ್ನು ಮಾಡುತ್ತಿದ್ದೇವೆ. 24×7ನ ಮುಖತೊಟ್ಟ ದುಡಿಮೆಯ ಸಂಸ್ಕೃತಿಯು ಖಾಸಗಿ ಕ್ಷಣಗಳನ್ನೇ ಧ್ವಂಸ ಮಾಡಿಹಾಕಿದೆ. ಪ್ರತಿಯೊಂದನ್ನೂ ಲಾಭ ತರುವ ಸರಕಿನಂತೆಯೇ ನೋಡುವ ನಿರ್ಮಾನು ಷತೆಯನ್ನು ಈ ಪ್ರವೃತ್ತಿಯು ಬೆಳೆಸುತ್ತದೆ. ಇದು ತನ್ನ ಮತ್ತು ಸುತ್ತಲಿನ ಬದುಕಿನ ಗುರಿಯೇನು ಎಂಬುದನ್ನು ದಿಕ್ಕೆಡಿಸಿದೆ. ಪ್ರಜಾಪ್ರಭುತ್ವವೊಂದು ತನ್ನೆಲ್ಲಾ ಪ್ರಜೆಗಳ ಸ್ವಸ್ಥ ಬದುಕಿಗೆ ಬೇಕಾದ್ದನ್ನೂ ತನ್ನ ದೇಶದ ಪ್ರಾಕೃತಿಕ ಸಂಪತ್ತನ್ನೂ ಆರ್ಥಿಕತೆಯನ್ನೂ ಕಾಪಾಡುವ ಸಮಸೂತ್ರ ಹೆಣೆದು, ಪ್ರಜೆಗಳ ಒತ್ತಡ ಕಡಿಮೆ ಮಾಡಬೇಕು. ಆದರೆ ಅನವಶ್ಯಕ ಒತ್ತಡ, ಅಸಮಾನತೆಯ ಸೃಷ್ಟಿ ಇಂದಿನ ದುರಂತ.

ಈಚೆಗೆ ಅಮೆಜಾನ್‍ ಪ್ರೈಮ್‍ನಲ್ಲಿ ಬಿಡುಗಡೆಗೊಂಡ ‘ಶೇರ್ನಿ’ ಸಿನಿಮಾ ನಮ್ಮ ಪಾಡಿನ ಬಿಂಬದಂತಿದೆ. ಇದೊಂದು ಹೆಣ್ಣುಹುಲಿಯ ಸುತ್ತ ಕಟ್ಟಿದ ಕತೆಯಾದರೂ, ಸಾಮರ್ಥ್ಯ, ಉತ್ಸಾಹ, ಇಚ್ಛಾಶಕ್ತಿ, ಪ್ರಾಣಿ ಮತ್ತು ಜನರ ಬಗೆಗೆ ಕಾಳಜಿ, ಕೆಲಸದ ಬಗೆಗೆ ಪ್ರೀತಿ ಎಲ್ಲವೂ ಇರುವ ಅಧಿಕಾರಿ ಮತ್ತವಳ ತಂಡಕ್ಕೆ ಕೆಲಸ ಮಾಡಲು ಬಿಡದ ವ್ಯವಸ್ಥೆಯ ಚಕ್ರವ್ಯೂಹವನ್ನೂ, ಹುಲಿ ಮತ್ತು ಅಧಿಕಾರಿಣಿ ಯನ್ನೇ ಖಳರನ್ನಾಗಿಸುವ ವ್ಯಂಗ್ಯವನ್ನೂ, ಸ್ವಯಂಸೇವಾ ಸಂಸ್ಥೆ, ಸರ್ಕಾರಿ ಅಧಿಕಾರಿಗಳು, ಸ್ಥಳೀಯ ಹಾಲಿ, ಮಾಜಿ ರಾಜಕಾರಣದ ಜಿದ್ದಿ, ಗಣಿಗಾರಿಕೆಯ ದಾಹ ಎಲ್ಲವೂ ಸೇರಿ ಹುಲಿ ಮರಿಗಳನ್ನು ಅನಾಥಗೊಳಿಸಿದಂತೆಯೇ ವ್ಯವಸ್ಥೆನ್ನು ಅನಾಥಗೊಳಿಸುವ, ಎಡಬಿಡಂಗಿಗಳಿಗೆ ಮಾತ್ರ ಮಣೆಹಾಕುವ ಮೂರ್ಖಸಾಮ್ರಾಜ್ಯ ಸೃಷ್ಟಿಯ ವಿಷಾದವನ್ನೂ ಎದೆಗಿಳಿಸುತ್ತದೆ.

ಸಿನಿಮಾದ ಅಂತ್ಯವಂತೂ ಈ ಕಾಲದ ಬಹುದೊಡ್ಡ ರೂಪಕವೇ ಆಗಿದೆ. ಜೀವಿ ಸಂಪತ್ತು ಉಳಿಸಬಲ್ಲ ಸಾಮರ್ಥ್ಯ ಇರುವ ಅಧಿಕಾರಿಣಿಯನ್ನು ಸತ್ತ ಪ್ರಾಣಿಗಳ ಮ್ಯೂಜಿಯಂ ಉಸ್ತುವಾರಿಗೆ ಕಳಿಸಲಾಗುತ್ತದೆ. ಅಲ್ಲೂ ಏನು ಮಾಡಬಹುದು ಎಂದು ಅವಳು ನೋಡುವಾಗ, ಕ್ಯಾಮೆರಾ ಒಂದೊಂದೂ ಪ್ರಾಣಿಯ ಮೇಲೆ, ಅದರ ಕಣ್ಣುಗಳ ಮೇಲೆ ಫೋಕಸ್ ಆಗುತ್ತದೆ. ಅವು ಎಷ್ಟು ಕತೆಗಳನ್ನು ಅಡಗಿಸಿಕೊಂಡಿವೆಯೋ, ಏನನ್ನು ಹೇಳುತ್ತಿವೆಯೋ ನಾವು ಕೇಳಿಸಿಕೊಳ್ಳಬಲ್ಲೆವೇ? ಅಥವಾ ನಾವಿಂದು ಮನುಷ್ಯರನ್ನೂ ಹೀಗೇ ನಾಶ ಮಾಡಿ ಮಣಭಾರದ ಅಲಂಕಾರ ಹೊತ್ತು ಓಡಾಡುವ ಜೀವಂತ ಶವಗಳನ್ನಾಗಿ ಪರಿವರ್ತಿಸ ಹೊರಟಿದ್ದೇವೆಯೇ? ಇಡೀ ಭೂಮಿಯನ್ನೇ ಇಂತಹ ಮ್ಯೂಸಿಯಂ ಮಾಡುವುದೇ ನಮ್ಮ ಗುರಿಯಾಗುತ್ತಿದೆಯೇ? ಇದಕ್ಕಾಗಿ ನಾವು 24×7 ಕೆಲಸ ಮಾಡಿ ಆ ಮ್ಯೂಸಿಯಂನ ಪಾತ್ರಧಾರಿಗಳಾಗಬೇಕೇ ಎಂದು ಕೇಳುತ್ತಿರುವಂತಿದೆ.

ಹಗಲಿಡೀ ದುಡಿದ ಸೂರ್ಯನೂ ಕಡಲಿಗೆ ಇಳಿದು ದಣಿವಾರಿಸಿಕೊಂಡು ನಿದ್ದೆಗೆ ಜಾರುತ್ತಾನೆ ಎಂಬುದು ಚೇತೋಹಾರಿಯಾದ ಕಲ್ಪನೆ. ಆದರೆ ಈಚೆಗೆ ಇಪ್ಪತ್ಮೂರು, ಇಪ್ಪತ್ನಾಲ್ಕರ ವಯಸ್ಸಿನ, ಈಗಷ್ಟೇ ಉತ್ಸಾಹದಿಂದ ವೈದ್ಯಕೀಯ ಪದವಿ ಮುಗಿಸಿ ಇಂಟರ್ನ್‌ ಶಿಪ್‍ನಲ್ಲಿರುವ ಯುವಕರು ಅದಾಗಲೇ ಚೈತನ್ಯ ಕಳೆದುಕೊಂಡವರಂತಿದ್ದರು. ದಿನಕ್ಕೆ ಎರಡು–ಮೂರು ತಾಸಿನ ನಿದ್ದೆಯೂ ತಕ್ಕ ಆಹಾರವೂ ಇಲ್ಲದೆ ದಣಿದಿದ್ದರು. ಯಾವುದೋ ಜಂಕ್‌ಫುಡ್ ಆದರೂ ಸರಿ ಹೊಟ್ಟೆಗಿಷ್ಟು ಸಿಕ್ಕಿದರೆ ಸಾಕು ಎಂಬಂತಾಗಿದ್ದರು! ಪೌಷ್ಟಿಕ ಆಹಾರ, ಕಣ್ತುಂಬ ನಿದ್ದೆಯನ್ನು ಪೇಷಂಟ್‍ಗಳಿಗೆ ಹೇಳುವವರೇ ಪಾಲಿಸಲಾಗದ ವ್ಯಂಗ್ಯವಿದು.

ಯಾವ ದೇಶದಲ್ಲಿ ಉದ್ಯೋಗವಿಲ್ಲದೆ ಹೊಟ್ಟೆಗೇನೋ ಸಿಕ್ಕಿದರೆ ಸಾಕು ಎಂಬ ಸ್ಥಿತಿ ಇದೆಯೋ ಅಲ್ಲಿ ಹೀಗೂ ಇದೆ. ಕೆಲಸ ಹಂಚಿಕೊಳ್ಳಲು ಶಕ್ತವಾದ ಕೋಟಿ ಕೋಟಿ ಕೈಗಳಿರುವಾಗ, ಅವರಿಗೆ ಕೆಲಸ ನೀಡದೆ ಯಾವ ದಣಿವನ್ನು ತಣಿಸಲು, ಮತ್ತ್ಯಾರ‍್ಯಾರ ದಣಿವನ್ನು ಹೆಚ್ಚಿಸಲು ಈ ಅಸಮ ಉಸಿರಿನ 24×7 ಖಳ ಬೇಕು?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು