ಶನಿವಾರ, ಮೇ 21, 2022
19 °C
ಹಿಮಾಲಯದ ತಪ್ಪಲಿನ ಈ ಪುಟ್ಟ ದೇಶದ ರಾಜಕೀಯ ಭವಿಷ್ಯ ಈಗ ಸಂದಿಗ್ಧಕ್ಕೆ ಸಿಲುಕಿದೆ

ವಿಶ್ಲೇಷಣೆ: ನೇಪಾಳದಲ್ಲಿ ರಾಜಕೀಯ ತಳಮಳ

ಭದ್ರ ಶರ್ಮಾ Updated:

ಅಕ್ಷರ ಗಾತ್ರ : | |

Prajavani

ಭಾರತ-ಚೀನಾ ತಮ್ಮ ನಿಯಂತ್ರಣ ಸಾಧಿಸಲು ಬಹುಕಾಲದಿಂದ ಮೇಲಾಟ ನಡೆಸಿರುವ ಅತಿ ಆಯಕಟ್ಟಿನ ಭೂಪ್ರದೇಶ ನೇಪಾಳದ ರಾಜಕಾರಣ ಅನಿಶ್ಚಿತತೆಗೆ ಬಿದ್ದಿದೆ. ಆಳುವ ಪಕ್ಷದಲ್ಲಿನ ಒಳಜಗಳ ತಾರಕಕ್ಕೆ ಏರಿ ಸಂಸತ್ತಿನ ಕೆಳಮನೆಯನ್ನು ಪ್ರಧಾನಮಂತ್ರಿ ವಿಸರ್ಜಿಸಿದ್ದಾರೆ.

ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಒಲಿ ತಮ್ಮದೇ ನೇಪಾಳ ಕಮ್ಯುನಿಸ್ಟ್ ಪಾರ್ಟಿ ಮತ್ತು ವಿರೋಧ ಪಕ್ಷಗಳ ಪ್ರತಿಭಟನೆಯನ್ನು ಲೆಕ್ಕಿಸದೆ ಇಂತಹ ತೀರ್ಮಾನ ತೆಗೆದುಕೊಂಡಿದ್ದಾರೆ. ಹೀಗಾಗಿ ನೇಪಾಳ ಅವಧಿಗೆ ಮುನ್ನವೇ ಚುನಾವಣೆ ಎದುರಿಸಬೇಕಾಗಿ ಬಂದಿದೆ. ಹಾಲಿ ಅವಧಿಯು 2022ರ ನವೆಂಬರ್‌ಗೆ ಪೂರ್ಣಗೊಳ್ಳುತ್ತಿತ್ತು. ಹೊಸ ಸರ್ಕಾರದ ಆಯ್ಕೆಗೆ ಮುಂಬರುವ ಏಪ್ರಿಲ್–ಮೇ ಹೊತ್ತಿಗೆ ಮತದಾನ ನಡೆಯಬೇಕಿದೆ.

ಪ್ರಧಾನಿಯ ಕಾರ್ಯಕ್ಷಮತೆ ಕುರಿತು ಆಳುವ ಪಕ್ಷದೊಳಗೆ ತೀವ್ರ ಅಸಮಾಧಾನ ಕುದಿಯುತ್ತಿತ್ತು. ಭ್ರಷ್ಟಾಚಾರವನ್ನು ನಿಗ್ರಹಿಸಿ, ಅರ್ಥವ್ಯವಸ್ಥೆಯನ್ನು ಸುಧಾರಿಸುವ ಹಾಗೂ ಚೀನಾದ ಜೊತೆಗಿನ ಸ್ನೇಹ ಸಂಬಂಧವನ್ನು ಬಲಪಡಿಸುವ ಭರವಸೆಗಳ ಹಿನ್ನೆಲೆಯಲ್ಲಿ ನೇಪಾಳದ ಮತದಾರರು ಒಲಿ ಅವರನ್ನು 2017ರಲ್ಲಿ ಎರಡನೆಯ ಬಾರಿಗೆ ಆರಿಸಿದ್ದರು.

ಆದರೆ ಒಲಿಯವರ ಆಡಳಿತವನ್ನು ಭ್ರಷ್ಟಾಚಾರದ ಆರೋಪಗಳು ಮುತ್ತಿ ಕಾಡಿದ್ದವು. ಕೊರೊನಾ ವೈರಸ್ ಮಹಾಮಾರಿಯ ನಿರ್ವಹಣೆಯಲ್ಲಿ ದಕ್ಷತೆ ತೋರಲಿಲ್ಲ ಎಂಬ ಟೀಕೆಗಳನ್ನೂ ಅವರು ಎದುರಿಸಿದ್ದರು. ಪ್ರವಾಸೋದ್ಯಮವನ್ನು ಮತ್ತು ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ನೇಪಾಳಿಗರು ಕಳಿಸುವ ಹಣವನ್ನೇ ಪ್ರಧಾನವಾಗಿ ನೆಚ್ಚಿಕೊಂಡಿರುವ ಅರ್ಥವ್ಯವಸ್ಥೆ ನೇಪಾಳದ್ದು. ಕೋವಿಡ್-19ರ ವಿಪತ್ತಿನಿಂದ ಅದು ಬುಡಮೇಲಾಯಿತು. 2017ರಲ್ಲಿ ಸಣ್ಣ ಎರಡು ಕಮ್ಯುನಿಸ್ಟ್ ಪಕ್ಷಗಳು ಒಂದಾಗಿದ್ದರಿಂದ ಒಲಿ ನೇತೃತ್ವದ ಸರ್ಕಾರ ಅಧಿಕಾರ ಹಿಡಿದಿತ್ತು. ನಂತರ ಈ ಆಳುವ ಒಕ್ಕೂಟದಲ್ಲೇ ಬಿರುಕುಗಳು ಮೂಡಿದವು.

ಸದನವನ್ನು ವಿಸರ್ಜಿಸುವ ಮೂಲಕ ಸಂಭವನೀಯ ವಿಶ್ವಾಸಮತ ಯಾಚನೆಯನ್ನು ಒಲಿ ನೇತೃತ್ವದ ಸರ್ಕಾರ ತಪ್ಪಿಸಿಕೊಂಡಿದೆ. ಆದರೆ ವಿಸರ್ಜಿಸುವ ಅಧಿಕಾರ ಅವರಿಗಿಲ್ಲ ಎನ್ನುತ್ತಾರೆ ತಜ್ಞರು. ಹೀಗಾಗಿ ಅವರು ಪ್ರಯೋಗಿಸಿರುವ ಅಧಿಕಾರವು ನ್ಯಾಯಾಂಗದ ಪರೀಕ್ಷೆಯನ್ನು ಹಾಯಬೇಕಿದೆ. ಹೊಸ ಸರ್ಕಾರವನ್ನು ರಚಿಸಲು ಹಲವು ಆಯ್ಕೆಗಳಿವೆ. ಹೀಗಾಗಿ ಕೆಳಮನೆಯನ್ನು ವಿಸರ್ಜಿಸುವ ಅಧಿಕಾರ ಪ್ರಧಾನಿಗೆ ಇಲ್ಲ. ಇದೊಂದು ‘ಸಂವಿಧಾನಬಾಹಿರ ನಡೆ’ ಎನ್ನುತ್ತಾರೆ ಸಂವಿಧಾನ ತಜ್ಞ ಬಿಪಿನ್ ಅಧಿಕಾರಿ.

ತನ್ನ ಬಲಿಷ್ಠ ನೆರೆಹೊರೆ ದೇಶಗಳಾದ ಚೀನಾ ಮತ್ತು ಭಾರತದ ನಡುವೆ ಉದ್ವಿಗ್ನತೆ ಉಂಟಾಗಿದೆ. ಚೀನಾ ತನ್ನ ಹಿಮಾಲಯದ ಸರಹದ್ದಿನಲ್ಲಿ ವಿವಾದಿತ ನೆಲದ ಮೇಲೆ ಬಲವಾಗಿ ಹಕ್ಕು ಸಾಧಿಸತೊಡಗಿದೆ. ಇಂತಹ ಹೊತ್ತಿನಲ್ಲಿ ನೇಪಾಳದ ರಾಜಕಾರಣವು ಪ್ರಕ್ಷುಬ್ಧಗೊಂಡಿರುವುದು ಆತಂಕಕಾರಿ.

ಭಾರತ- ಚೀನಾ ನಡುವಣ ಉದ್ವಿಗ್ನತೆ ಈ ವರ್ಷದ ಜೂನ್ ತಿಂಗಳಲ್ಲೇ ಕುದಿಬಿಂದು ತಲುಪಿತ್ತು. ಉಭಯ ದೇಶಗಳ ಸೇನೆಯ ನಡುವೆ ನಡೆದ ಘರ್ಷಣೆಗಳಲ್ಲಿ 20 ಮಂದಿ ಭಾರತೀಯ ಯೋಧರು ಮತ್ತು ಚೀನಾದ ಕೆಲವು ಯೋಧರು ಮೃತರಾಗಿದ್ದರು. ತನ್ನ ಯೋಧರ ಮೃತರ ಸಂಖ್ಯೆಯನ್ನು ಚೀನಾ ಬಹಿರಂಗಪಡಿಸಲಿಲ್ಲ. ಉದ್ವಿಗ್ನ ಸ್ಥಿತಿಯನ್ನು ತಗ್ಗಿಸುವ ಇರಾದೆಯನ್ನು ಉಭಯ ದೇಶಗಳು ಪ್ರಕಟಿಸಿವೆ. ಆದರೆ, ಅಮೆರಿಕ ಚುನಾವಣೆಯಲ್ಲಿ ಆಳುವ ಪಕ್ಷ ಸೋತಿದೆ. ಜೋಸೆಫ್ ಆರ್. ಬೈಡನ್ ಅವರು ಭಾರತದೊಂದಿಗಿನ ಸಂಬಂಧವನ್ನು ಬಲಿಷ್ಠಗೊಳಿಸುವ ಮತ್ತು ಈ ಪ್ರದೇಶದಲ್ಲಿ ಅಮೆರಿಕದ ಹಿಡಿತವನ್ನು ಬಿಗಿಯಾಗಿಸುವ ಕ್ರಮವಾಗಿ ಚೀನಾ ದೇಶದ ಅತಿಕ್ರಮಣಕಾರಿ ನಡೆಯನ್ನು ತಡೆಯುವ ಸಾಧ್ಯತೆ ಇದೆ.

ನೇಪಾಳ ಬಹಳ ಕಾಲದಿಂದ ಭಾರತ ಮತ್ತು ಚೀನಾ ನಡುವೆ ತೂಗುಯ್ಯಾಲೆ ಆಡಿದೆ. ಒಮ್ಮೆ ಚೀನಾ ಪರ ನಿಂತರೆ, ಮತ್ತೊಮ್ಮೆ ಭಾರತದ ಜೊತೆಗಿರುವುದಾಗಿ ಹೇಳಿದೆ. ಅದರ ನಾಗರಿಕರು ಭಾರತದಲ್ಲಿ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಗಳಲ್ಲಿದ್ದಾರೆ. ನೇಪಾಳದಂತೆ ಭಾರತ ಕೂಡ ಹಿಂದೂ ಬಹುಸಂಖ್ಯಾತರನ್ನು ಹೊಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸಂಬಂಧ ಹುಳಿಯಾಗಿದೆ.


ಭದ್ರ ಶರ್ಮಾ

ರಕ್ತಸಿಕ್ತ ಮಾವೊವಾದಿ ಬಂಡಾಯದ ನಂತರ 2015ರಲ್ಲಿ ಹೊಸ ಸಂವಿಧಾನವನ್ನು ಅಳವಡಿಸಿಕೊಂಡ ನೇಪಾಳದ ಮೇಲೆ ಭಾರತ ತಿಂಗಳುಗಟ್ಟಲೆ ಅನಧಿಕೃತ ದಿಗ್ಬಂಧನ ವಿಧಿಸಿತು. ಹೊಸ ಸಂವಿಧಾನ ರಚನೆಯಲ್ಲಿ ತನ್ನೊಂದಿಗೆ ಹೆಚ್ಚಿನ ಸಮಾಲೋಚನೆ ನಡೆಸಬೇಕಿತ್ತೆಂಬುದು ಭಾರತದ ಅಸಮಾಧಾನವಾಗಿತ್ತು ಎಂಬ ಅಭಿಪ್ರಾಯ ನೇಪಾಳದಲ್ಲಿದೆ. ಭಾರತ- ನೇಪಾಳದ ಸರಹದ್ದಿನಲ್ಲಿ ಭಾರತ ತಡೆಗೋಡೆಗಳನ್ನು ನಿರ್ಮಿಸಿದ ಕಾರಣವಾಗಿ ನೇಪಾಳ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಬಿಗಡಾಯಿಸಿತು ಎಂದೂ ನೇಪಾಳದ ಕೆಲವರು ದೂರುತ್ತಾರೆ.

ಭಾರತದೊಂದಿಗೆ ನೇಪಾಳದ ಸಂಬಂಧ ಹುಳಿಯಾಗುತ್ತಿದ್ದಂತೆ ಚೀನಾ ರಂಗಪ್ರವೇಶಿಸಿತು. ನೇಪಾಳದ ಅರ್ಥವ್ಯವಸ್ಥೆಗೆ ಹಣದ ಹೊಳೆ ಹರಿಸಿತು. ಈ ಸೀಮೆಯಲ್ಲಿ ತನ್ನ ಪ್ರಭಾವವನ್ನು ಬೆಳೆಸಬೇಕಿದ್ದರೆ ನೇಪಾಳದ ಸಹಕಾರ ಅತಿ ಮುಖ್ಯ ಎಂಬುದು ಚೀನಾದ ಅವಗಾಹನೆ. 2017ರ ನೇಪಾಳ ಚುನಾವಣೆಯಲ್ಲಿ ಕಮ್ಯುನಿಸ್ಟರ ಗೆಲುವು ಚೀನಾದ ನಡೆಗೆ ಮತ್ತಷ್ಟು ಹುಮ್ಮಸ್ಸು ತುಂಬಿತು. ಹಾಲಿ ತಳಮಳವು ಈ ಲಾಭಗಳನ್ನು ಅನಿಶ್ಚಿತತೆಗೆ ನೂಕಿದೆ.

ಒಲಿ ಅವರ ಆಗ್ರಹದ ಮೇರೆಗೆ ನೇಪಾಳದ ರಾಷ್ಟ್ರಪತಿ ವಿದ್ಯಾದೇವಿ ಭಂಡಾರಿ ಅವರು ಜನಪ್ರತಿನಿಧಿಗಳ ಸದನವನ್ನು ವಿಸರ್ಜಿಸಿದ್ದಾರೆ. ಮುಂಬರುವ ಏಪ್ರಿಲ್‌– ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.

ಸದನ ವಿಸರ್ಜನೆಯ ನಡೆಯಿಂದ ತಮ್ಮ ಮಿತ್ರಪಕ್ಷದ ಮುಂದಾಳು ಪುಷ್ಪಕಮಲ್‌ ದಹಾಲ್ ಅವರಿಂದ ತಮ್ಮ ಅಧಿಕಾರಕ್ಕೆ ಬರಬಹುದಿದ್ದ ಸಂಚಕಾರವನ್ನು ಒಲಿ ತಡೆದಿದ್ದಾರೆ. ಪ್ರಚಂಡ ಎಂದೇ ಪ್ರಸಿದ್ಧರಾಗಿರುವ ಪುಷ್ಪಕಮಲ್‌ ಅವರು ನೇಪಾಳದ ಮಾಜಿ ಪ್ರಧಾನಿ. ಅಲ್ಲಿನ ಕಮ್ಯುನಿಸ್ಟ್ ಪಾರ್ಟಿಯ ಅಧ್ಯಕ್ಷ. ಮಿತ್ರಕೂಟವನ್ನು 2017ರ ಚುನಾವಣೆಯಲ್ಲಿ ಬಹುಮತದತ್ತ ಮುನ್ನಡೆಸಿದವರು. ಎರಡೂ ಪಕ್ಷಗಳು ಆನಂತರ ಒಂದರಲ್ಲಿ ಮತ್ತೊಂದು ವಿಲೀನಗೊಂಡವು. ಎರಡು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಒಲಿಯವರು ಪ್ರಧಾನಿ ಹುದ್ದೆಯನ್ನು ಪುಷ್ಪಕಮಲ್‌ ಅವರಿಗೆ ಬಿಟ್ಟುಕೊಡಬೇಕೆಂಬ ಒಪ್ಪಂದವಾಗಿತ್ತು.

ಪುಷ್ಪಕಮಲ್‌‌ ಅವರಿಗೆ ಅಧಿಕಾರ ಹಸ್ತಾಂತರಿಸುವ ಕ್ರಮವಾಗಿ ಒಲಿ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿಯ ಮಂಡನೆಗೆ ತಯಾರಿ ನಡೆದಿತ್ತು. ಇಷ್ಟರಲ್ಲಿ ಈ ನಡೆಯನ್ನು ಪ್ರತಿಭಟಿಸಿ ಒಲಿ ಸಂಪುಟದ 25 ಮಂತ್ರಿಗಳ ಪೈಕಿ ಏಳು ಮಂದಿ ಸದನದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.

ದಕ್ಷಿಣ ಏಷ್ಯಾದ ಅತಿ ಬಡ ದೇಶಗಳಲ್ಲಿ ಒಂದೆನಿಸಿದ ನೇಪಾಳವು ಕೋವಿಡ್- 19ರ ದಾಳಿಗೆ ಸಿಲುಕಿ ತತ್ತರಿಸಿದೆ. ಮಹಾಮಾರಿ ಇನ್ನೂ ನಿಯಂತ್ರಣಕ್ಕೆ ಸಿಕ್ಕಿಲ್ಲ. ಪ್ರವಾಸೋದ್ಯಮ ನೆಲಕಚ್ಚಿದೆ. ಹೊರದೇಶಗಳಲ್ಲಿನ ನೇಪಾಳಿಗರು ಉದ್ಯೋಗ ಕಳೆದುಕೊಂಡಿದ್ದಾರೆ.

ಒಲಿ ಆಡಳಿತವು ಚುನಾವಣಾ ಭರವಸೆಗಳನ್ನು ಈಡೇರಿಸುವಲ್ಲಿ ಹಿಂದೆ ಬಿದ್ದಿದೆ. ಚೀನಾದೊಂದಿಗೆ ರೈಲು ಮಾರ್ಗ ಬೆಸೆಯುವ ಆಶ್ವಾಸನೆ ಈಡೇರಿಲ್ಲ. ಮೂವರು ಮಂತ್ರಿಗಳ ವಿರುದ್ಧ ಭ್ರಷ್ಟಾಚಾರದ ಆಪಾದನೆಗಳು ಭುಗಿಲೆದ್ದಿವೆ. ಕೊರೊನಾ ವೈರಸ್ ನಿಗ್ರಹಕ್ಕೆಂದು ಚೀನಾದಿಂದ ಸಲಕರಣೆಗಳ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಪ್ರತಿಪಕ್ಷದ ನಾಯಕ ರಮೇಶ್ ಪೌದ್ಯಾಲ್ ಆರೋಪಿಸಿದ್ದಾರೆ. ಖರೀದಿ ದರಗಳು ಮಾರುಕಟ್ಟೆ ದರಗಳಿಗಿಂತ ಭಾರಿ ದುಬಾರಿ ಎಂದು ಸ್ಥಳೀಯ ಸಮೂಹ ಮಾಧ್ಯಮಗಳು ಆರೋಪಿಸಿವೆ. ಈ ಆರೋಪಗಳನ್ನು ಸರ್ಕಾರ ತಳ್ಳಿಹಾಕಿದೆ.

ಒಲಿ ಅವರು ಅಧಿಕಾರ ಕಳೆದುಕೊಳ್ಳುವುದು ಚೀನಾಗೆ ಕೆಟ್ಟ ಸುದ್ದಿ. ಅದು ಗೆಳೆಯನೊಬ್ಬನನ್ನು ಕಳೆದುಕೊಳ್ಳಲಿದೆ. ಚೀನಾದ ಮುಖ್ಯಸ್ಥ ಷಿ ಜಿನ್ ಪಿಂಗ್ ಅವರು ಕಳೆದ ವರ್ಷವಷ್ಟೇ ನೇಪಾಳಕ್ಕೆ ಭೇಟಿ ನೀಡಿದ್ದರು.

ಒಲಿ ಪ್ರಧಾನಿಯಾಗಿರುವುದು ಭಾರತಕ್ಕೆ ಸಮ್ಮತವಿರಲಿಲ್ಲ. ಒಲಿಯವರಿಗೆ ಹೋಲಿಸಿದರೆ ನೇಪಾಳದ ಮುಂದಿನ ಪ್ರಧಾನಿಯು ಹೆಚ್ಚು ಭಾರತಸ್ನೇಹಿ ಆಗಿರುವ ಸಂಭವವೇ ಹೆಚ್ಚು ಎನ್ನುತ್ತಾರೆ ಸಂವಿಧಾನ ತಜ್ಞ ಬಿಪಿನ್ ಅಧಿಕಾರಿ.

(ದಿ ನ್ಯೂಯಾರ್ಕ್ ಟೈಮ್ಸ್)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು