ಗುರುವಾರ , ಮೇ 19, 2022
23 °C

ಹಕ್ಕಿ ಇಳಿಯುತಿದೆ ನೋಡಿದಿರಾ?: ದೇಶಭಕ್ತಿ ಎಂಬ ಚಿತ್ತಭ್ರಾಂತಿ

ರಾಮಚಂದ್ರ ಗುಹಾ Updated:

ಅಕ್ಷರ ಗಾತ್ರ : | |

Prajavani

ಭಾರತದಲ್ಲಿ ನಡೆದ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ವಿದೇಶಿ ಸೆಲೆಬ್ರಿಟಿಗಳು ಮಾಡಿದ ಟ್ವೀಟ್‌, ಅದಕ್ಕೆ ಪ್ರತಿಯಾಗಿ ಭಾರತ ಸರ್ಕಾರದ ಕೆಲವು ಸಚಿವರು ಹಾಗೂ ಭಾರತೀಯ ಸೆಲೆಬ್ರಿಟಿಗಳು ಟ್ವೀಟ್‌ ಮೂಲಕವೇ ನೀಡಿದ ಪ್ರತಿಕ್ರಿಯೆ – ಎರಡೂ ವಿವಾದದ ಬಿರುಗಾಳಿಯನ್ನು ಎಬ್ಬಿಸಿವೆ. ವಿವಾದಕ್ಕೆ ಕಾರಣವಾಗಿರುವ ಎರಡು ಭಿನ್ನ ವಾದಗಳು ಇಲ್ಲಿ ಮುಖಾಮುಖಿಯಾಗಿವೆ. ಒಂದು ವಾದ, ಸರ್ಕಾರದ ಪ್ರತಿಕ್ರಿಯೆಯಲ್ಲಿನ ಟೊಳ್ಳುತನವನ್ನು ಬಯಲು ಮಾಡಲು ಹಂಬಲಿಸಿದರೆ, ಮತ್ತೊಂದು ವಾದ, ರೈತ ಚಳವಳಿಯೊಳಗೆ ನುಸುಳಿವೆ ಎನ್ನಲಾದ ದೇಶ ವಿಭಜಕ ಶಕ್ತಿಗಳ ಕುರಿತು ಮಾತನಾಡಿದೆ...

***

ಫೆಬ್ರುವರಿ 2ರ ರಾತ್ರಿ ನಾನು ನಿದ್ರೆಗೆ ಜಾರುವ ಮುನ್ನ, ನನ್ನ ದೇಶ –ನನ್ನ ಮಹಾನ್‌ ಭಾರತ– ಬಲಿಷ್ಠವಾಗಿದೆ, ಸುಭದ್ರವಾಗಿದೆ ಮತ್ತು ಸ್ವಾವಲಂಬಿಯಾಗಿದೆ - ಒಂದೇ ಶಬ್ದದಲ್ಲಿ ಹೇಳಬೇಕೆಂದರೆ ಆತ್ಮನಿರ್ಭರವಾಗಿದೆ ಎಂಬ ಅರಿವನ್ನು ಸಂಪಾದಿಸಿದ್ದೆ. ಮರುದಿನ ಬೆಳಿಗ್ಗೆ ಎದ್ದಾಗ, ವಿದೇಶಿಯೊಬ್ಬರ ಒಂದು ಟ್ವೀಟ್‌ನಿಂದ ನಮ್ಮ ಭದ್ರತೆ ಹಾಗೂ ಸಾರ್ವಭೌಮತ್ವದ ಬುನಾದಿಯೇ ಅಲುಗಾಡುತ್ತಿದೆ ಎಂದು ಗೊತ್ತಾಗಿ ವಿಹ್ವಲಗೊಂಡೆ. ನನ್ನ ಭಯ ಹಾಗೂ ಆತಂಕ ಸಂಜೆಯ ಹೊತ್ತಿಗೆ ಹೇಗೋ ತುಸು ತಹಬಂದಿಗೆ ಬಂತು. ಯಾವಾಗಲೂ ಸತ್ಯವನ್ನೇ ಉಲಿಯುವಂತಹ ವಿದೇಶಾಂಗ ಸಚಿವಾಲಯದಿಂದ ಹೊರಬಿದ್ದ ಒಂದು ಹೇಳಿಕೆ, ಸದಾ ಗೌರವಾನ್ವಿತರಾದ ಗೃಹ ಸಚಿವರು ಮಾಡಿದ ಒಂದು ಟ್ವೀಟ್‌, ಮಹಾನ್‌ ರಾಜಕೀಯ ಚಿಂತಕರಾದ ಅಕ್ಷಯ್‌ ಕುಮಾರ್‌, ಸಚಿನ್‌ ತೆಂಡೂಲ್ಕರ್‌ ಅವರು ಪ್ರತಿಪಾದಿಸಿದ ಗಹನವಾದ ವಿಚಾರಗಳು – ಎಲ್ಲವೂ ಒಟ್ಟಾಗಿ ದೇಶದ ಪ್ರತಿಷ್ಠೆ ಹಾಗೂ ಅದರ ಸ್ವಾವಲಂಬಿ ಶಕ್ತಿ ಅಖಂಡವಾಗಿದೆ ಎಂಬುದನ್ನು ಪುನಃ ಖಚಿತಪಡಿಸಿದವು. ಅದರಿಂದ 3ರ ರಾತ್ರಿಯೂ ನಿಶ್ಚಿಂತೆಯಿಂದ ನಿದ್ರೆಗೆ ಹೋದೆ.

ವಿಡಂಬನೆ ನನ್ನ ಬರವಣಿಗೆಯ ಸಹಜ ಶೈಲಿ ಏನಲ್ಲ. ಆ ಶೈಲಿಯಿಂದ ಈ ಕ್ಷಣವೇ ಹೊರಬಂದು ಬಿಡುವೆ. ಆದರೆ, ರಿಯಾನಾ ಎಂಬ ಹೆಸರಿನ ಹೆಣ್ಣುಮಗಳೊಬ್ಬಳು ಮಾಡಿದ ಪುಟ್ಟ ಟ್ವೀಟ್‌ ಕುರಿತು ಅತಿರೇಕದ ದೇಶಭಕ್ತಿ ಪ್ರದರ್ಶನದ ಸರ್ಕಾರ ಹಾಗೂ ಅದರ ಬಾಲಬಡುಕ ಮೂರ್ಖರು ಪ್ರತಿಕ್ರಿಯಿಸಿದ ರೀತಿಗೆ ಅಪಹಾಸ್ಯ ಅಥವಾ ವಿಡಂಬನೆ ಮಾತ್ರವೇ ನ್ಯಾಯವನ್ನು ಒದಗಿಸಬಲ್ಲದು. ಏಕೆಂದರೆ, ಅವರ ಪ್ರತಿಕ್ರಿಯೆಗಳು ಆಷಾಢಭೂತಿತನ ಹಾಗೂ ಅಪ್ರಾಮಾಣಿಕತೆಯ ಕಡಲಲ್ಲಿ ಮುಳುಗಿಹೋಗಿದ್ದವು ಮತ್ತು ಅಷ್ಟೇ ಅತಿರೇಕದಿಂದಲೂ ಕೂಡಿದ್ದವು. ಸಾಮೂಹಿಕವಾದ ಮತ್ತು ಪರಸ್ಪರ ಸಮನ್ವಯದಿಂದ ಕೂಡಿದ ಆ ‘ಹೆಮ್ಮೆ’ಯ ಅಭಿವ್ಯಕ್ತಿ, ಒಗ್ಗಟ್ಟು, ಖಂಡನೆ ಹಾಗೂ ನಿರ್ಣಯಗಳು ಹೇಗಿದ್ದವೆಂದರೆ, ನಮ್ಮ ರಾಷ್ಟ್ರೀಯತೆ ಈಗ ಎಂತಹ ದುರ್ಬಲ ಅಡಿಪಾಯದ ಮೇಲೆ ನಿಂತಿದೆ ಎಂಬುದನ್ನು ಅವು ಢಾಳಾಗಿ ಎತ್ತಿತೋರುತ್ತಿದ್ದವು.

ಹದಿನೇಳನೆ ಶತಮಾನದ ಫ್ರೆಂಚ್‌ ಬರಹಗಾರ ಲ ರಶ್‌ಫೀಕೊ, ‘ಆಷಾಢಭೂತಿತನ ಎಂದರೆ ದುರ್ಗುಣವು ಸುಗುಣಕ್ಕೆ ತೋರುವ ಗೌರವ’ ಎಂದು ಬಣ್ಣಿಸಿದ್ದ. ಆತನ ಮಾತು ಈ ಪ್ರಕರಣದಲ್ಲಿ ಉಲ್ಟಾ ಆಗಿದೆ. ಏಕೆಂದರೆ, ಬೇರೊಂದು ದೇಶದ ರಾಜಕೀಯ ವ್ಯವಹಾರಗಳಲ್ಲಿ ಸಕ್ರಿಯವಾಗಿ ಮಧ್ಯ ಪ್ರವೇಶಿಸಿದವರು ಪ್ರಧಾನಮಂತ್ರಿ ನರೇಂದ್ರ ಮೋದಿ ಎಂಬುದನ್ನು ಮರೆಯುವಂತೆಯೇ ಇಲ್ಲ.ಅಮೆರಿಕದ 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಪರವಾಗಿ ಮತ ಚಲಾಯಿಸುವಂತೆ ಭಾರತೀಯ ಮೂಲದ ಅಮೆರಿಕನ್ನರನ್ನು ಅವರು ಕೇಳಿದ್ದರು.

ಹಿಂದಿನ ಪ್ರಧಾನಮಂತ್ರಿಗಳು ದಶಕಗಳಿಂದ ಪಾಲಿಸಿಕೊಂಡು ಬಂದಿದ್ದ ಉಭಯಪಕ್ಷಗಳನ್ನೂ ಸಮಾನವಾಗಿ ಗೌರವಿಸುವ ನೀತಿಗೆ ತಿಲಾಂಜಲಿ ಇತ್ತು, ಒಂದು ಪಕ್ಷದ ಪರವಾಗಿ ನಿಂತಿದ್ದು ಕಡು ಮೂರ್ಖತನದ ಕೆಲಸವಾಗಿತ್ತು. ಅಷ್ಟೇ ಅಲ್ಲ, ಅದು ಸಂಬಂಧಗಳ ವಿಷಯವಾಗಿ ತುಂಬಾ ಪ್ರತಿಕೂಲವಾದ ಪರಿಣಾಮವನ್ನು ಆಹ್ವಾನಿಸುವಂತಹ ವರ್ತನೆಯೂ ಆಗಿತ್ತು. ಭಾರತದಲ್ಲಿ ನಡೆದಿರುವ ರೈತರ ಪ್ರತಿಭಟನೆಯ ಕುರಿತ ವಿವರವುಳ್ಳ ಲೇಖನದ ಕಡೆಗೆ ಗಮನಸೆಳೆದ ಬಾರ್ಬಡೋಸ್‌ನ ಹಾಡುಗಾರ್ತಿಯ ನಡೆಗಿಂತ ಅಮೆರಿಕನ್ನರಿಗೆ ತಾವು ಯಾರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಭಾರತೀಯ ಪ್ರಧಾನಿಯು ಸೂಚಿಸಿದ ವರ್ತನೆ ಹೆಚ್ಚು ಅತಿರೇಕದ್ದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ವಾಸ್ತವವಾಗಿ, ಹ್ಯೂಸ್ಟನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೆರಿಕದ ಆಗಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪಕ್ಕದಲ್ಲಿರುವಾಗಲೇ ಮೋದಿ ಅವರು ಹೇಳಿದ ಮಾತು, ನಮ್ಮ ದೇಶದ ಬಗೆಗೆ ವಿದೇಶಿಯರು ಯಾವುದೇ ಪ್ರತಿಕ್ರಿಯೆ ನೀಡಿದರೆ ಅಥವಾ ನಮ್ಮ ವಿರುದ್ಧದ ನಿಲುವು ತಳೆದರೆ ಅದನ್ನು ಗಟ್ಟಿಯಾಗಿ ನಿಂತು ವಿರೋಧಿಸುವ ಇಲ್ಲವೇ ತಕರಾರು ಎತ್ತುವ ಭಾರತ ಸರ್ಕಾರದ ಸಾಮರ್ಥ್ಯವನ್ನೇ ಕಳೆದುಬಿಟ್ಟಿತ್ತು.

ಕೆಳ ಹಂತದಲ್ಲೂ, ಸರ್ಕಾರದ ಪ್ರತಿಕ್ರಿಯೆಯಲ್ಲಿ ಆಷಾಢಭೂತಿತನವೇ ತುಂಬಿರುವುದು ಗೃಹ ಸಚಿವರ ಟ್ವೀಟ್‌ನಲ್ಲಿ ಎದ್ದು ಕಾಣುತ್ತಿತ್ತು. ತಿರುಚುವೀರ (ಗ್ರ್ಯಾಂಡ್‌ ಮಾಸ್ಟರ್‌ ಆಫ್‌ ಸ್ಪಿನ್‌) ಎನಿಸಿರುವ, ಆಡಳಿತ ಪಕ್ಷದ ಐ.ಟಿ ಸೆಲ್‌ನ ಜನಕರೂ ಮೇಲ್ವಿಚಾರಕರೂ ಆಗಿರುವ ಅವರು, ಮತ್ತೊಬ್ಬರ ಮೇಲೆ ‘ಅಪಪ್ರಚಾರ’ದ ಗೂಬೆ ಕೂರಿಸುವಾಗ ನನಗೆ ಇಂಗ್ಲಿಷ್‌ (the pot calling the kettle black; ಮಸಿಗೆ ಇದ್ದಿಲು ಕಪ್ಪು ಎಂದಿತಂತೆ!) ಹಾಗೂ ಹಿಂದಿ (ಉಲ್ಟಾ ಚೋರ್‌ ಕೊತ್ವಾಲ್‌ ಕೊ ಡಾಂಟೆ; ಕಳ್ಳನೇ ಪೊಲೀಸನಿಗೆ ಬೈದ) ನಾಣ್ನುಡಿಗಳು ನೆನಪಿಗೆ ಬಂದವು. ಧರ್ಮ, ಜಾತಿ, ಭಾಷೆ ಮತ್ತು ಪ್ರದೇಶದ ಆಧಾರದಲ್ಲಿ ಸಮಾಜವನ್ನು ವಿಘಟಿಸುವಂತಹ ಬೆಂಕಿಗೆ ತುಪ್ಪ ಸುರಿದು ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದವರು ದೇಶದ ‘ಒಗ್ಗಟ್ಟಿಗಾಗಿ’ ಕರೆ ನೀಡುವುದು ಕ್ಲೀಷೆಯಾಗಿ ತೋರಿತು. ಹೌದು, ಭಾರತದಲ್ಲಿ –ಅದೂ ಇತರ ಎಲ್ಲ ಕಡೆಗಳಿಗಿಂತ ಹೆಚ್ಚಾಗಿ– ಆಷಾಢಭೂತಿತನ ಎನ್ನುವುದು ಸುಗುಣಕ್ಕೆ ದುರ್ಗುಣವು ನೀಡಿದ ಬೆಲೆಯೇ ಆಗಿದೆ.

ಈ ಮಧ್ಯೆ, ವಿದೇಶಾಂಗ ಸಚಿವಾಲಯವು ಹೊರಡಿಸಿದ ಹೇಳಿಕೆಯು ಸುಳ್ಳು ಮಾಹಿತಿಯಿಂದಲೇ ಆರಂಭವಾಗಿತ್ತು. ‘ಕೃಷಿ ಮಸೂದೆಗಳು ಸಮಗ್ರವಾಗಿ ಚರ್ಚೆಗೆ ಒಳಗಾದ ಬಳಿಕವೇ ಸಂಸತ್ತಿನಿಂದ ಅನುಮೋದನೆ ಪಡೆದಿವೆ’ ಎನ್ನುತ್ತಿತ್ತು ಆ ಹೇಳಿಕೆಯ (ನೋಡಿ: https://www.mea.gov.in) ಮೊದಲ ಸಾಲು. ವಾಸ್ತವವಾಗಿ, ಕೃಷಿ ವಲಯದಲ್ಲಿ ತುಂಬಾ ದೂರಗಾಮಿ ಪರಿಣಾಮವನ್ನು ಬೀರಬಲ್ಲ ಇಂತಹ ಮಸೂದೆಗಳ ಕುರಿತು ರಾಜ್ಯಗಳಲ್ಲಿ ವಿಸ್ತೃತವಾಗಿ ಚರ್ಚೆಗಳು ನಡೆಯಬೇಕಿದ್ದವು. ಆದರೆ, ಹಾಗಾಗಲಿಲ್ಲ. ಸಂಸತ್ತಿನ ಸ್ಥಾಯಿ ಸಮಿತಿಯ ಪರಿಶೀಲನೆಗಾದರೂ ಮಸೂದೆಯನ್ನು ಒಪ್ಪಿಸಬೇಕಿತ್ತು. ಅದನ್ನೂ ಮಾಡಲಿಲ್ಲ. ಎಲ್ಲ ಕ್ರಿಯಾವಿಧಾನಗಳನ್ನು ಬದಿಗೊತ್ತಿ, ರಾಜ್ಯಸಭೆಯಲ್ಲಿ ಮತ ವಿಭಜನೆಗೂ ಅವಕಾಶ ನೀಡದೆ ಲಜ್ಜೆಗೇಡಿತನದಿಂದ ಹೆಸರಿಗಷ್ಟೇ ಮತಕ್ಕೆ ಹಾಕಿದಂತೆ ಮಾಡಿ, ಮಸೂದೆಗೆ ಅನುಮೋದನೆ ಪಡೆಯುವ ಪ್ರಕ್ರಿಯೆಯನ್ನು ಮುಗಿಸಿತ್ತು ಮೋದಿ ನೇತೃತ್ವದ ಸರ್ಕಾರ (ನೋಡಿ: https://thewire.in). ಆಗ ಪ್ರತಾಪ್‌ ಭಾನು ಮೆಹ್ತಾ ಅವರು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಬರೆದ ಲೇಖನದಲ್ಲಿ ‘ಇದೊಂದು ಪ್ರಜಾಪ್ರಭುತ್ವಕ್ಕೆ ಬಗೆದ ಅಪಚಾರವೇ ಸರಿ. ಚರ್ಚೆಯ ಅರ್ಹತೆಯಿಂದಲ್ಲ, ಅಧಿಕಾರದ ಬಲದಿಂದ ಒಪ್ಪಿಗೆ ಪಡೆದ ಮಸೂದೆ ಇದಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದರು.

ರೈತರ ಪ್ರತಿಭಟನೆಯನ್ನು ಸರ್ಕಾರವು ನಿರ್ವಹಿಸುತ್ತಿರುವ ರೀತಿಯೇ ‘ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೌಲ್ಯಗಳನ್ನು ಭಾರತ ಗೌರವಿಸುವುದಕ್ಕೆ ಸಾಕ್ಷಿ’ ಎಂದೂ ವಿದೇಶಾಂಗ ಸಚಿವಾಲಯವು ಹೇಳಿದೆ. ನಿಜವಾಗಿ, ಈ ವಿಷಯದಲ್ಲಿ –ಇತರ ಹಲವು ಸಂಗತಿಗಳಲ್ಲಿ ನಡೆದುಕೊಂಡಂತೆ– ಮೋದಿ ನೇತೃತ್ವದ ಸರ್ಕಾರ ಸಂಸತ್ತಿನ ಒಳಗೆ ಮತ್ತು ಹೊರಗೆ ತುಂಬಾ ಕೆಟ್ಟ ರೀತಿಯಿಂದ ವರ್ತಿಸಿದೆ. ಮಸೂದೆಗಳನ್ನು ಅಷ್ಟೊಂದು ರಹಸ್ಯವಾಗಿ, ಕಪಟದಿಂದ ಅಂಗೀಕರಿಸದಿದ್ದಲ್ಲಿ ಪ್ರತಿಭಟನೆಗಳು ಇಷ್ಟೊಂದು ವ್ಯಾಪಕ ಸ್ವರೂಪ ಪಡೆದುಕೊಳ್ಳುತ್ತಿರಲಿಲ್ಲ ಅಥವಾ ಈ ಪ್ರಮಾಣದಲ್ಲಿ ನಡೆಯುತ್ತಿರಲಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಖಲಿಸ್ತಾನಿಗಳೆಂದು ಕರೆದು ವಿಷ ಕಕ್ಕಿದ್ದು, ದೇಶದ ರಾಜಧಾನಿ ಸುತ್ತ ಬೇಲಿಗಳನ್ನು ಹಾಕಿದ್ದು, ರಸ್ತೆಗಳಿಗೆ ಮೊಳೆ ಜಡಿದಿದ್ದು, ಒಂದಾದ ಮೇಲೊಂದರಂತೆ ಹಲವು ಜಿಲ್ಲೆಗಳಲ್ಲಿ ಇಂಟರ್ನೆಟ್‌ ಸಂಪರ್ಕ ಕಡಿತಗೊಳಿಸಿದ್ದು, ಪತ್ರಕರ್ತರ ವಿರುದ್ಧ ಎಫ್‌ಐಆರ್‌ಗಳ ಪ್ರವಾಹವನ್ನು ಹರಿಸಿದ್ದು, ಸರ್ಕಾರದ ಅತಿರೇಕಗಳ ಕುರಿತು ಟೀಕಿಸುವವರ ಟ್ವೀಟರ್‌ ಖಾತೆಗಳನ್ನು ಸ್ಥಗಿತಗೊಳಿಸಲು ಒತ್ತಡ ಹೇರಿದ್ದು –ಎಲ್ಲವೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೋದಿ ಸರ್ಕಾರ ಅರ್ಥಮಾಡಿಕೊಂಡಿದೆ ಅಥವಾ ಎತ್ತಿ ಹಿಡಿಯಲಿದೆ ಎಂಬ ವಿಷಯವಾಗಿಯೇ ಅವಿಶ್ವಾಸ ಮೂಡಿಸಿವೆ.


ರಾಮಚಂದ್ರ ಗುಹಾ

ಫೆಬ್ರುವರಿ 3ಕ್ಕಿಂತ ಮುಂಚೆ ರಿಯಾನಾ ಯಾರೆನ್ನುವುದು ನನಗೆ ಗೊತ್ತೇ ಇರಲಿಲ್ಲ. ಹಾಗೆಯೇ ನಮ್ಮ ಗೃಹ ಸಚಿವರನ್ನಾಗಲೀ ನಮ್ಮ ವಿದೇಶಾಂಗ ಸಚಿವರನ್ನಾಗಲೀ ಸಂಶಯದಿಂದಲೂ ನೋಡಿರಲಿಲ್ಲ. ರಿಯಾನಾಳ ಹತ್ತು ಕೋಟಿ ಟ್ವಿಟರ್‌ ಫಾಲೋವರ್‌ಗಳನ್ನು ಸರಿಗಟ್ಟುವಂತೆ ಇವರೂ ಅಷ್ಟೇ ಸಂಖ್ಯೆಯ ಫಾಲೋವರ್‌ಗಳನ್ನು ಹೊಂದಿದ ಭಾರತೀಯ ಸೆಲೆಬ್ರಿಟಿಗಳನ್ನು ಒಟ್ಟುಗೂಡಿಸಲು ಆರಂಭಿಸಿದರು. ಚಲನಚಿತ್ರ ಹಾಗೂ ಕ್ರೀಡಾ ತಾರೆಗಳು ಸರ್ಕಾರದ ತುತ್ತೂರಿ ಊದಲು ಮುಗಿಬಿದ್ದರು. ಅವರ ಟ್ವೀಟ್‌ಗಳಲ್ಲಿ ಬಳಸಿದ ಅದೇ ಪದಗಳು, ಅದೇ ಹ್ಯಾಶ್‌ಟ್ಯಾಗ್‌ಗಳು ಎಲ್ಲ ಕಥೆಯನ್ನು ಹೇಳುತ್ತಿದ್ದವು.

ವಿದೇಶಿಯೊಬ್ಬರ ಆರು ಪದಗಳ ಒಂದು ಟ್ವೀಟ್‌ಗೆ ಸರ್ಕಾರ ಪ್ರತಿಕ್ರಿಯಿಸಿದ ರೀತಿ ಅಸಹ್ಯಕರವಾಗಿತ್ತು, ಅಪ್ರಾಮಾಣಿಕವಾಗಿತ್ತು ಮತ್ತು ಅತಿರೇಕದಿಂದ ಕೂಡಿತ್ತು. ‘ಭಾರತವನ್ನು ಗುರಿಯಾಗಿಸಿಕೊಂಡ ಯಾವ ಪ್ರಚಾರಾಂದೋಲನಗಳೂ ಯಶಸ್ವಿಯಾಗುವುದಿಲ್ಲ. ನಮಗೀಗ ನಮ್ಮ ಶಕ್ತಿಯ ಮೇಲೆ ನಂಬಿಕೆ ಇದೆ ಮತ್ತು ಎಂತಹ ಸನ್ನಿವೇಶವನ್ನೂ ನಾವು ನಿಭಾಯಿಸಬಲ್ಲೆವು. ಹೊರಗಿನ ಶಕ್ತಿಯನ್ನು ಈ ಭಾರತ ಹಿಂದೆ ತಳ್ಳಲಿದೆ’ ಎಂದು ವಿದೇಶಾಂಗ ಸಚಿವರು ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು. ಅದರಲ್ಲಿ ಬಳಸಿದ ಪದಗಳು ಬಡಾಯಿ ಕೊಚ್ಚಿಕೊಂಡಂತೆ ತೋರಿದ್ದಲ್ಲದೆ ಒಳಗಿನ ಟೊಳ್ಳುತನವನ್ನು ಎತ್ತಿ ತೋರುತ್ತಿದ್ದವು. ತಮ್ಮ ಸಹೋದ್ಯೋಗಿಗಳೊಂದಿಗೆ ವಿದೇಶಾಂಗ ಸಚಿವರು ನಮ್ಮ ರಾಷ್ಟ್ರೀಯ ಪ್ರತಿಷ್ಠೆಯ ದುರ್ಬಲತೆ ಹಾಗೂ ಅಭದ್ರತೆಯನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದರು.

ಆ ಬಾರ್ಬಡೋಸ್‌ ಗಾಯಕಿ ನಿರಂತರವಾಗಿ, ಮುಕ್ತವಾಗಿ ಹಾಗೂ ಸ್ವತಂತ್ರವಾಗಿ ಮಾತನಾಡಿದರೆ, ನಮ್ಮ ಸೆಲೆಬ್ರಿಟಿಗಳು ಸರ್ಕಾರದ ಗಿಳಿಗಳಾದರು. ಸರ್ಕಾರ ಹಾಗೂ ಆಡಳಿತ ಪಕ್ಷ ಪ್ರಣೀತವಾದ ಪ್ರತಿಕ್ರಿಯೆಯು ಸ್ವಾವಲಂಬನೆಯನ್ನು ಅಭಿವ್ಯಕ್ತಿಸಲಿಲ್ಲ. ಬದಲಾಗಿ ಚಿತ್ತಭ್ರಾಂತಿಯನ್ನು ತೋರುತ್ತಿತ್ತು. ವಾಸ್ತವವಾಗಿ ಯಾವುದೇ ಸರ್ಕಾರ ಸಂಪೂರ್ಣ ನಿರ್ಲಕ್ಷಿಸಬೇಕಾದ ಟ್ವೀಟ್‌ ಅದಾಗಿತ್ತು. ಒಬ್ಬ ಕ್ರಿಕೆಟ್‌ ಅಭಿಮಾನಿಯಾಗಿರುವ ನನಗೆ, ಪ್ರಸಿದ್ಧ ಕ್ರಿಕೆಟಿಗರು ವೈಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ಸರ್ಕಾರದ ಮುಂದೆ ತಲೆಬಾಗಿದ ರೀತಿ ಬೇಸರ ತರಿಸಿತು. ಒಬ್ಬ ಕ್ರಿಕೆಟಿಗ ಮಾತ್ರ ಹಾಗೆ ತಲೆ ಬಾಗಿಸದೆ ಎದೆ ಸೆಟೆಸಿ ನಿಂತಿದ್ದರು. ಅವರೇ ಬಿಷನ್‌ ಸಿಂಗ್‌ ಬೇಡಿ. ಅವರ ತೀಕ್ಷ್ಣವಾದ ಟ್ವೀಟ್‌ ಹೀಗಿತ್ತು: ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ಬಾರ್ಬಡೋಸ್‌ ಗಾಯಕಿಯ ಹೇಳಿಕೆ ಪ್ರಕರಣದವರೆಗೆ ದೆಹಲಿ ಗಡಿಯಲ್ಲಿ ಏನು ನಡೆದಿದೆ ಎನ್ನುವುದು ನನಗೆ ಗೊತ್ತೇ ಇರಲಿಲ್ಲ. ಆ ಸಂದರ್ಭದಲ್ಲಿ ಭಾರತೀಯ ಟಿ.ವಿ ಚಾನೆಲ್‌ಗಳು, ಹೇ ಮುದುಕನೇ ನಿದ್ರಾವಸ್ಥೆಯಿಂದ ಎದ್ದು ಸ್ಪಂದಿಸು, ಇಲ್ಲದಿದ್ದರೆ ರಾಷ್ಟ್ರವಿರೋಧಿ ಹಣೆಪಟ್ಟಿ ಹಚ್ಚಿಕೊಳ್ಳಬೇಕಾದೀತು ಎಂದು ಎಚ್ಚರಿಸಿದವು.’

ಈ ಮಧ್ಯೆ, ಗಾಂಧೀಜಿ ಅಧ್ಯಯನಾಸಕ್ತ ವಿದ್ಯಾರ್ಥಿಯಾದ ನನಗೆ, ಇಂದಿನ ಈ ಅತಿರೇಕದ ದೇಶಭಕ್ತಿಯ ಮೆರವಣಿಗೆ ಸಂದರ್ಭದಲ್ಲಿ ಗಾಂಧಿ ಇದ್ದಿದ್ದರೆ ಏನು ಮಾಡುತ್ತಿದ್ದರು,  ಮೋದಿ ಭಾರತದಲ್ಲಿ ದೇಶಭಕ್ತಿಯ ಹೆಗ್ಗಳಿಕೆ ಮತ್ತು ಬಡಿವಾರದ ಕುರಿತು ಅವರು ಏನು ಯೋಚಿಸುತ್ತಿದ್ದರು ಎಂಬ ಚಿಂತೆ ಕಾಡಿತು. 1938ರಲ್ಲಿ ಗಾಂಧಿ ನೀಡಿದ್ದ ಹೇಳಿಕೆಯಲ್ಲಿ ಅವರ ಯೋಚನೆಯ ಕೆಲವು ಸುಳಿವುಗಳಿವೆ: ‘ದೇಶ ದೇಶಗಳ ನಡುವಿನ ಎಲ್ಲೆಗಳು ಅಳಿಸಿಹೋಗಿರುವ ಇಂದಿನ ಈ ಯುಗದಲ್ಲಿ ಯಾರೂ ಬಾವಿಯೊಳಗಿನ ಕಪ್ಪೆಯಾಗಿ ಉಳಿಯಲು ಇಷ್ಟಪಡುವುದಿಲ್ಲ. ಇತರರು ನಮ್ಮನ್ನು ನೋಡುವಂತೆಯೇ, ನಮ್ಮನ್ನು ನಾವು ನೋಡಿಕೊಳ್ಳುವುದೂ ಚೇತೋಹಾರಿಯಾದ ಅನುಭವವನ್ನು ನೀಡುತ್ತದೆ ಎನಿಸುತ್ತದೆ.’

**

ವಾಸ್ತವವಾಗಿ, ಹ್ಯೂಸ್ಟನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೆರಿಕದ ಆಗಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪಕ್ಕದಲ್ಲಿರುವಾಗಲೇ ಮೋದಿ ಅವರು ಹೇಳಿದ ಮಾತು, ನಮ್ಮ ದೇಶದ ಬಗೆಗೆ ವಿದೇಶಿಯರು ಯಾವುದೇ ಪ್ರತಿಕ್ರಿಯೆ ನೀಡಿದರೆ ಅಥವಾ ನಮ್ಮ ವಿರುದ್ಧದ ನಿಲುವು ತಳೆದರೆ ಅದನ್ನು ಗಟ್ಟಿಯಾಗಿ ನಿಂತು ವಿರೋಧಿಸುವ ಇಲ್ಲವೇ ತಕರಾರು ಎತ್ತುವ ಭಾರತ ಸರ್ಕಾರದ ಸಾಮರ್ಥ್ಯವನ್ನೇ ಕಳೆದುಬಿಟ್ಟಿತ್ತು...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು