ಮಂಗಳವಾರ, ಜನವರಿ 31, 2023
18 °C
ಸ್ಟಾರ್ಟಪ್‌-20 ಗ್ರೂಪ್‌:

ಜಿ20 ಅಧ್ಯಕ್ಷತೆಯಲ್ಲಿ ಭಾರತದಿಂದ ನವೋದ್ಯಮಗಳಿಗೆ ಜಾಗತಿಕ ಬೆಂಬಲ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ನವೋದ್ಯಮಗಳು ಅಥವಾ ಸ್ಟಾರ್ಟಪ್‌ಗಳು ಇಂದು  ಪ್ರಗತಿಯ ಎಂಜಿನ್‌ಗಳಾಗಿವೆ. ಸಂಶೋಧನೆಯಿಂದ ಪ್ರೇರಿತಗೊಂಡ ಆರ್ಥಿಕ ಚೇತರಿಕೆಗೆ ಇವು ಪೂರಕ. ಪ್ರತೀ ದೇಶದಲ್ಲಿ ಹೆಚ್ಚುತ್ತಿರುವ ಅವಶ್ಯಕತೆ ಹಾಗೂ ಆ ದೇಶಗಳ ಮೌಲ್ಯ ವ್ಯವಸ್ಥೆಗೆ ಹೊಂದಿಕೊಂಡು ಸಮಗ್ರ ಭವಿಷ್ಯವನ್ನು ನವೋದ್ಯಮಗಳು ನಿರ್ಮಿಸುತ್ತಿವೆ. ವಿಶ್ವದ ಒಟ್ಟು ಆರ್ಥಿಕ ಮೌಲ್ಯ 90 ಟ್ರಿಲಿಯನ್ ಡಾಲರ್‌ನಷ್ಟಿದ್ದರೆ, ಅದರಲ್ಲಿ ಜಾಗತಿಕ ನವೋದ್ಯಮ ಆರ್ಥಿಕತೆಯ ಪಾಲೇ ಸುಮಾರು 3 ಟ್ರಿಲಿಯನ್ ಡಾಲರ್‌ನಷ್ಟಿದೆ. ಜೊತಗೆ ಈ ಮೌಲ್ಯವು ಅಗಾಧ ಪ್ರಮಾಣದ ಬೆಳವಣಿಗೆಗೂ ಸಾಕ್ಷಿಯಾಗುತ್ತಿದೆ.

ವೇಗವಾಗಿ ಬದಲಾಗುತ್ತಿರುವ ಜಾಗತಿಕ ಸನ್ನಿವೇಶಕ್ಕೆ ನವೋದ್ಯಮಗಳು ಕ್ಷಿಪ್ರವಾಗಿ ಸ್ಪಂದಿಸುತ್ತವೆ. ಕೋವಿಡ್‌ ಸಾಂಕ್ರಾಮಿಕದ ಸಮಯದಲ್ಲಿ ಈ ನಿಟ್ಟಿನಲ್ಲಿ ನವೋದ್ಯಮಗಳ ಪಾತ್ರವು ಜಗತ್ತಿಗೆ ಅರಿವಾಗಿದೆ. ನವೋದ್ಯಮಗಳು ಕೇವಲ ಜೀವಗಳನ್ನು ಉಳಿಸುವುದು ಮಾತ್ರವಲ್ಲದೆ, ಆರ್ಥಿಕ ಸದೃಢತೆಯತ್ತ ಮರಳುವ ಮಾರ್ಗವನ್ನು ಸಹ ತೆರೆದಿಟ್ಟಿವೆ. ಹೆಚ್ಚಿನ ಸಂಖ್ಯೆಯ ನವೋದ್ಯಮಗಳು ವಿವಿಧ ದೇಶಗಳ ನಡುವೆ ಸಹಯೋಗ ಮತ್ತು ಸಂಶೋಧನೆಯನ್ನು ಉತ್ತೇಜಿಸಲು ವೇದಿಕೆಗಳನ್ನು ಒದಗಿಸುತ್ತಿವೆ, ಇದಕ್ಕಾಗಿ ಅಗತ್ಯ ಸಾಧನಗಳನ್ನು ಪೂರೈಸುತ್ತಿವೆ. ಜೊತೆಗೆ, ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಆರ್ಥಿಕತೆಗಳಿಗೆ ಸಹಾಯ ಮಾಡುತ್ತಿವೆ. ಹೀಗಾಗಿ,  ಉದ್ಯೋಗ ಸೃಷ್ಟಿ, ತಾಂತ್ರಿಕ ಪ್ರಗತಿ, ದೀರ್ಘಕಾಲೀನ ಬೆಳವಣಿಗೆ ಮತ್ತು ಬಿಕ್ಕಟ್ಟಿನ ನಿರ್ವಹಣೆಯ ವಿಷಯದಲ್ಲಿ ನವೋದ್ಯಮಗಳು ವಿಶ್ವದಾದ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ.

2023ನೇ ಸಾಲಿನ  ಭಾರತದ ʻಜಿ20ʼ ಅಧ್ಯಕ್ಷತೆಯ ಅಡಿಯಲ್ಲಿ ಪ್ರಾರಂಭಿಸಲಾದ ʻಸ್ಟಾರ್ಟಪ್‌-20 ಎಂಗೇಜ್‌ಮೆಂಟ್‌ ಗ್ರೂಪ್ʼ ವೇದಿಕೆಯು ನವೋದ್ಯಮಗಳನ್ನು ಬೆಂಬಲಿಸಲು ಜಾಗತಿಕ ವ್ಯವಸ್ಥೆಯೊಂದನ್ನು ರಚಿಸಲು ಬಯಸುತ್ತದೆ. ನವೋದ್ಯಮಗಳು, ಕಾರ್ಪೊರೇಟ್‌ಗಳು, ಹೂಡಿಕೆದಾರರು, ಸಂಶೋಧನಾ ಸಂಸ್ಥೆಗಳು ಹಾಗೂ ಪರಿಸರ ವ್ಯವಸ್ಥೆಯ ಇತರ ಪ್ರಮುಖ ಮಧ್ಯಸ್ಥಗಾರರ ನಡುವೆ ಹೊಂದಾಣಿಕೆಯನ್ನು ಏರ್ಪಡಿಸುವುದು ಸಹ ಇಂತಹ ವೇದಿಕೆಯ ಉದ್ದೇಶವಾಗಿದೆ. ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯು ಇಂದು ವಿಶ್ವದಲ್ಲೇ ಮೂರನೇ ಅತಿದೊಡ್ಡದೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 107  ಯುನಿಕಾರ್ನ್‌ಗಳು, 83,000ಕ್ಕೂ ಹೆಚ್ಚು ಮಾನ್ಯತೆ ಪಡೆದ ನವೋದ್ಯಮಗಳು ಮತ್ತು ಅವುಗಳನ್ನು ಬೆಂಬಲಿಸಲು ನಿರಂತರವಾಗಿ ವಿಸ್ತರಿಸುತ್ತಿರುವ ಸಂಶೋಧನಾ ಪರಿಸರ ವ್ಯವಸ್ಥೆಯು ಇದರ ಭಾಗವಾಗಿವೆ.                

ಹೊಸದಾಗಿ ಪ್ರಾರಂಭಿಸಲಾದ ʻಸ್ಟಾರ್ಟಪ್‌-20 ಎಂಗೇಜ್‌ಮೆಂಟ್‌ ಗ್ರೂಪ್ʼ ಮೂಲಕ ನವೀನ ನವೋದ್ಯಮಗಳನ್ನು ಬೆಂಬಲಿಸಲು ಸಮಗ್ರ ನಿಯಮಾವಳಿಗಳನ್ನು ರೂಪಿಸಿ,  ಆ ಮೂಲಕ ವಿಶ್ವಕ್ಕೆ ನೆರವಾಗಲು ಭಾರತ ಆಶಿಸುತ್ತಿದೆ. ʻಜಿ20ʼ ರಾಷ್ಟ್ರಗಳ ವ್ಯಾಪ್ತಿಯಲ್ಲಿ ಕಾರ್ಯತಂತ್ರ ಸಂಬಂಧಿತ ಸಹಯೋಗದ ಮೂಲಕ ಇದನ್ನು ಸಾಧಿಸಲು ಭಾರತ ಬಯಸುತ್ತದೆ. ಇಂದು ಪ್ರತಿಯೊಂದು ʻಜಿ20ʼ ರಾಷ್ಟ್ರವೂ ಆಂತರಿಕವಾಗಿ ತನ್ನ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಇಂತಹ ಸಮಯದಲ್ಲಿ ನವೋದ್ಯಮಗಳ ಹಣಕಾಸು ಮಾದರಿಗಳನ್ನು ಸಾಕಾರಗೊಳಿಸಲು ಮತ್ತು ವಿಶೇಷವಾಗಿ ಜಾಗತಿಕ ಪ್ರಾಮುಖ್ಯ ಹೊಂದಿರುವ ವಲಯಗಳಲ್ಲಿ ಸಾಮರಸ್ಯ ಮೂಡಿಸಲು ಈ ʻಸ್ಟಾರ್ಟಪ್‌20 ಎಂಗೇಜ್ಮ್‌ಮೆಂಟ್‌ ಗ್ರೂಪ್‌ʼ ಸಮಗ್ರ ರೀತಿಯಲ್ಲಿ ಕೆಲಸ ಮಾಡುತ್ತದೆ.

ಈ ʻಸ್ಟಾರ್ಟಪ್‌20 ಎಂಗೇಜ್‌ಮೆಂಟ್ ಗ್ರೂಪ್ʼನ ಪ್ರಾರಂಭದ ವರ್ಷದಲ್ಲಿ, ಭಾರತವು ಮೂರು ಸಾಮಾನ್ಯ ಆಧಾರ ಸ್ತಂಭಗಳನ್ನು ಗುರುತಿಸಿದೆ:                    

ಅಡಿಪಾಯ ಮತ್ತು ಮೈತ್ರಿ: ʻಜಿ20ʼ ಆರ್ಥಿಕತೆಗಳ ವ್ಯಾಪ್ತಿಯಲ್ಲಿ ನವೋದ್ಯಮಗಳು ಮತ್ತು ಅವುಗಳ ಕೆಲಸಗಳ ಬಗ್ಗೆ ಅನೇಕ ವ್ಯಾಖ್ಯಾನಗಳಿವೆ. ಭಾರತವು ಗುರುತಿಸಿರುವ ಮೊದಲ ಸ್ತಂಭದ ಭಾಗವಾಗಿ, ʻನವೋದ್ಯಮಗಳಿಗಾಗಿ ಕೈಪಿಡಿʼಯನ್ನು ಸಿದ್ಧಪಡಿಸಲು ಒಮ್ಮತ-ಆಧಾರಿತ ವ್ಯಾಖ್ಯಾನಗಳು ಮತ್ತು ಪರಿಭಾಷೆಯನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಆ ಮೂಲಕ ʻಸ್ಟಾರ್ಟಪ್‌ 20ʼ ಅಡಿಪಾಯವನ್ನು ಗಟ್ಟಿಗೊಳಿಸುವುದು ಇದರ ಉದ್ದೇಶವಾಗಿದೆ. ಇದಲ್ಲದೆ, ನಿಯಮಾವಳಿಗಳನ್ನು ರಚಿಸುವ ಮತ್ತು ಜಿ20 ಆರ್ಥಿಕತೆಗಳಲ್ಲಿನ ನವೋದ್ಯಮ ಪರಿಸರ ವ್ಯವಸ್ಥೆಯ ಮಧ್ಯಸ್ಥಗಾರರಿಗೆ ಜಾಗತಿಕ ಮೈತ್ರಿಗಳನ್ನು ಹೊಂದಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ದೇಶಗಳ ನಡುವೆ ಸಹಯೋಗವನ್ನು ಉತ್ತೇಜಿಸುವ ಗುರಿಯನ್ನು ಸಹ ಈ ಸ್ತಂಭವು ಹೊಂದಿದೆ.
                            
ಹಣಕಾಸು: ಎರಡನೇ ಸ್ತಂಭವು ನವೋದ್ಯಮ ಹಣಕಾಸು ಲಭ್ಯತೆ ಸುಲಭಗೊಳಿಸಲು ನೀತಿಗಳು ಮತ್ತು ನಿಯಮಾವಳಿಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಸಂಪರ್ಕಜಾಲ ಮತ್ತು ಏಳಿಗೆ ಅವಕಾಶಗಳನ್ನು ಒದಗಿಸುವ ಮೂಲಕ ಇದಕ್ಕೆ ಸಹಾಯಕವಾದ ವಾತಾವರಣವನ್ನು ಸೃಷ್ಟಿಸುತ್ತದೆ.

ಒಳಗೊಳ್ಳುವಿಕೆ ಮತ್ತು ಸುಸ್ಥಿರತೆ: ಮೂರನೇ ಸ್ತಂಭವು ನಿರ್ಣಾಯಕ ʻಸುಸ್ಥಿರ ಅಭಿವೃದ್ಧಿ ಗುರಿʼಗಳ ಸಾಧನೆಯಲ್ಲಿರುವ ಅಂತರಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನವೋದ್ಯಮಗಳಿಗೆ ವೇಗ ನೀಡಲು ಬೇಕಾದ ಕಾರ್ಯತಂತ್ರಗಳತ್ತ ಗಮನ ಹರಿಸುತ್ತದೆ. ಜೊತೆಗೆ ಎಲ್ಲಾ ಸದಸ್ಯ ದೇಶಗಳ ಸಮಾನ ಹಿತಾಸಕ್ತಿಯ ಕ್ಷೇತ್ರಗಳಲ್ಲಿ - ಒಳಗೊಳ್ಳುವಿಕೆಯ ಬಗ್ಗೆ ವಿಶೇಷ ಗಮನ ಅಗತ್ಯವಿರುವ ಸಮುದಾಯಗಳನ್ನು (ಉದಾ. ಮಹಿಳಾ ಉದ್ಯಮಿಗಳು, ವಿಶಿಷ್ಟಚೇತನರು) ಇದು ಪ್ರತಿನಿಧಿಸುತ್ತದೆ. 
ʻಸ್ಟಾರ್ಟಪ್‌ 20ʼ ವೇದಿಕೆಯು ʻಜಿ20ʼ ರಾಷ್ಟ್ರಗಳ ವ್ಯಾಪ್ತಿಯಲ್ಲಿ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ತನ್ನ ಗುರಿಯನ್ನು ಸಾಧಿಸಲು ವಿವಿಧ ಕಾರ್ಯಕ್ರಮಗಳು ಮತ್ತು ಸಮಾವೇಶಗಳನ್ನು ಆಯೋಜಿಸುವ ಆಲೋಚನೆ ಹೊಂದಿದೆ. ಈ ಚಟುವಟಿಕೆಗಳು ಆರು ಕಾರ್ಯಕ್ರಮಗಳಾಗಿ ವಿಸ್ತರಿಸಿದ್ದು, 2023ರ ಜನವರಿ 28ರಂದು ಆರಂಭಿಕ ಕಾರ್ಯಕ್ರಮ (ಹೈದರಾಬಾದ್‌ನಲ್ಲಿ) ನಡೆಯಲಿದೆ. 2023ರ ಜುಲೈ 3ರಂದು ಶೃಂಗಸಭೆ (ಗುರುಗ್ರಾಮದಲ್ಲಿ) ನಡೆಯಲಿದೆ. ಭಾರತದ ವಿವಿಧ ಭಾಗಗಳಲ್ಲಿಯೂ ಅನೇಕ ಮಧ್ಯಸ್ಥಿಕೆ ಕಾರ್ಯಕ್ರಮಗಳನ್ನು ನಡೆಸಲು ಯೋಜಿಸಲಾಗಿದೆ. ಇದಲ್ಲದೆ, ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಜಗತ್ತಿಗೆ ಪ್ರದರ್ಶಿಸಲು ದೊಡ್ಡ ನವೋದ್ಯಮ ಪ್ರದರ್ಶನ ಏರ್ಪಡಿಸಲೂ ಯೋಜಿಸಲಾಗಿದೆ.

ʻಜಿ20ʼ ರಾಷ್ಟ್ರಗಳು ಅಂಗೀಕರಿಸಿದ ಸಾಮಾನ್ಯ ಶಿಫಾರಸುಗಳನ್ನು ಒಳಗೊಂಡ ಅಧಿಕೃತ ನೀತಿಯೊಂದನ್ನು ಈ ʻಎಂಗೇಜ್‌ಮೆಂಟ್‌ ಗ್ರೂಪ್ʼ ಮೂಲಕ ಪ್ರಸ್ತುತಪಡಿಸಲಾಗುವುದು. ಇದಲ್ಲದೆ, ಮೇಲಿನ ಸಮಾಲೋಚನೆಗಳಿಂದ ಹೊರಹೊಮ್ಮುವ ಮಾರ್ಗಸೂಚಿಗಳು, ಉತ್ತಮ ಕಾರ್ಯವಿಧಾನಗಳು, ನಿಯಮಗಳು ಮತ್ತು ಕಾರ್ಯತಂತ್ರದ ಶಿಫಾರಸುಗಳ ಬಗ್ಗೆ ಹಲವಾರು ಪ್ರಕಟಣೆಗಳನ್ನು ಸಹ ಹೊರಡಿಸಲಾಗುವುದು. ಇದಿಷ್ಟೇ ಅಲ್ಲದೆ, ಇಂತಹ ಚಟುವಟಿಕೆಗಳು ಮತ್ತು ಈ ತೊಡಗಿಸಿಕೊಳ್ಳುವಿಕೆಯ ಫಲಿತಾಂಶಗಳಿಗೆ ನೆಲೆಯಾಗಬಲ್ಲ 'ಜಾಗತಿಕ ಆವಿಷ್ಕಾರ ಹಬ್' ಅನ್ನು ರಚಿಸಲು ಭಾರತವು ಬಯಸುತ್ತದೆ.                
ʻಜಿ-20ʼ ಅಧ್ಯಕ್ಷತೆಯ ಮೂಲಕ, ʻಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯʼ  ಎಂಬ ಆಶಯವನ್ನು ಜಗತ್ತಿನ ಮುಂದೆ ತರಲು ಭಾರತವು ಯೋಜಿಸಿದೆ. ʻಸ್ಟಾರ್ಟಪ್‌20 ಎಂಗೇಜ್ಮೆಂಟ್ ಗ್ರೂಪ್ʼ ಸಹ ಇದೇ ಆಶಯವನ್ನು ಹೊಂದಿದೆ. ನವೋದ್ಯಮಗಳನ್ನು ಬೆಂಬಲಿಸಲು ಜಾಗತಿಕ ವ್ಯವಸ್ಥೆಯೊಂದನ್ನು ರಚಿಸುವುದು ಮತ್ತು ಬೆಳೆಸುವುದು ಸಹ ಈ ಆಶಯದ ಭಾಗವಾಗಿದೆ. ಜೊತೆಗೆ ಎಲ್ಲರನ್ನೂ ಒಳಗೊಳ್ಳುವ ಹಾಗೂ ವೈವಿಧ್ಯಮಯ ಭಾಗವಹಿಸುವಿಕೆಯ ಮೂಲಕ ನವೋದ್ಯಮಗಳನ್ನು ನಮ್ಮ ಸಮಗ್ರ ಭವಿಷ್ಯದ ಒಂದು ಭಾಗವಾಗಿಸಲು ಈ ʻಸ್ಟಾರ್ಟಪ್‌ 20’ ವೇದಿಕೆಯು ಬಯಸುತ್ತದೆ. 

ಲೇಖಕರು: ಡಾ. ಚಿಂತನ್ ವೈಷ್ಣವ್, ʻಅಟಲ್ ಇನ್ನೋವೇಶನ್ ಮಿಷನ್ʼನ ಯೋಜನಾ ನಿರ್ದೇಶಕರು ಮತ್ತು ʻಸ್ಟಾರ್ಟಪ್‌ 20ʼ ಅಧ್ಯಕ್ಷರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು