ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ‘ಸಹ್ಯಾದ್ರಿ’ಕಾಂಡದ ನಿರ್ಣಾಯಕ ಘಟ್ಟ

ಆರ್ಥಿಕ ಪ್ರಗತಿಗೆ ನಿಸರ್ಗದ ರಕ್ಷಣೆ ಅಗತ್ಯವೆಂದು ಅಧಿಕಾರ ರಾಜಕಾರಣ ಒಪ್ಪುವುದು ಯಾವಾಗ?
Last Updated 28 ಜುಲೈ 2022, 19:31 IST
ಅಕ್ಷರ ಗಾತ್ರ

ಕರಾವಳಿಯಲ್ಲಿ ಮತ್ಸ್ಯಕ್ಷಾಮ ತಲೆದೋರುತ್ತಿದೆ. ಮಲೆನಾಡಿನಲ್ಲಿ ಭೂಮಿಯೇ ಕುಸಿಯುತ್ತಿದೆ. ಒಳನಾಡಿ ನಲ್ಲಾದರೋ ಮಳೆಗಾಲದಲ್ಲಿ ನೆರೆ, ಬೇಸಿಗೆಯಲ್ಲಿ ಬರ! ನಾಡಿನಾದ್ಯಂತ, ವಿಭಿನ್ನ ಭೌಗೋಳಿಕ ಪ್ರದೇಶಗಳಲ್ಲಿ ಜರುಗುತ್ತಿರುವ ಈ ವೈವಿಧ್ಯಮಯ ವಿದ್ಯಮಾನಗಳಲ್ಲಿ ಏನಾದರೂ ಸಮಾನ ಅಂಶಗಳಿವೆಯೇ? ಖಂಡಿತಾ ಇವೆ. ಈ ಸಂಕಷ್ಟಗಳ ಮೂಲಕಾರಣವೆಂದರೆ, ನಾಡಿನ ಜೀವನಾಡಿಯಂತಿರುವ ಪಶ್ಚಿಮಘಟ್ಟಗಳ ಕಾಡು- ಗೋಮಾಳ, ಜಲಮೂಲಗಳು, ಪಾರಂಪರಿಕ ಕೃಷಿ ವಿಧಾನ- ಇತ್ಯಾದಿಗಳೆಲ್ಲ ವೇಗವಾಗಿ ನಾಶವಾಗುತ್ತಿರುವುದು. ವೈಜ್ಞಾನಿಕ ಅಧ್ಯಯನಗಳು ಹಾಗೂ ಸರ್ಕಾರಿ ದಾಖಲೆಗಳು ಇದನ್ನು ನಿರೂಪಿಸುತ್ತಲೇ ಇವೆ. ನೈಸರ್ಗಿಕ ಸಂಪತ್ತನ್ನು ಸರಿಯಾಗಿ ನಿಭಾಯಿಸದೆ, ಸುಸ್ಥಿರ ಆರ್ಥಿಕ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅವು ಎಚ್ಚರಿಸುತ್ತಿವೆ ಸಹ. ಆದರೆ, ಸರ್ಕಾರಗಳನ್ನು ಮುನ್ನಡೆಸುವ ಅಧಿಕಾರ ರಾಜಕಾರಣಕ್ಕೆ ಮಾತ್ರ ಇದು ಅರ್ಥವಾಗುತ್ತಲೇ ಇಲ್ಲ!

ಜೀವವೈವಿಧ್ಯ ಹಾಗೂ ಜಲಮೂಲದ ಮೂಲ ಸೆಲೆಯಾದ ಪಶ್ಚಿಮಘಟ್ಟಗಳ ಸಂರಕ್ಷಣೆ ಕುರಿತ ಜಾಗೃತಿ ಆರಂಭವಾಗಿ ನಾಲ್ಕು ದಶಕಗಳೇ ಸಂದಿವೆ. ಸಂಶೋಧನಾ ಆಧಾರಿತಅದೆಷ್ಟೋ ಶಿಫಾರಸುಗಳು ಹಾಗೂ ತಜ್ಞ ವರದಿಗಳು ಸರ್ಕಾರಕ್ಕೆ ಸಲ್ಲಿಕೆಯಾಗಿವೆ. ತಮ್ಮ ನೆಲವನ್ನು ಉಳಿಸಿಕೊಳ್ಳಲು ಇಲ್ಲಿನ ವನವಾಸಿ ಸಮುದಾಯಗಳು ಹಾಗೂ ರೈತರು ಹಕ್ಕೊತ್ತಾಯ ಮಾಡುತ್ತಲೂ ಬಂದಿ ದ್ದಾರೆ. ದೇಶದಾದ್ಯಂತದ ವಿವಿಧ ಕ್ಷೇತ್ರಗಳ ತಜ್ಞರು ಸ್ಥಳೀಯ ಜನಸಮುದಾಯಗಳ ಜೊತೆ ಸೇರಿ ಎಂಬತ್ತರ ದಶಕದ ಕೊನೆಯಲ್ಲಿ ಸಂಘಟಿಸಿದ್ದ ಐತಿಹಾಸಿಕ ‘ಪಶ್ಚಿಮಘಟ್ಟ ಉಳಿಸಿ ಪಾದಯಾತ್ರೆ’ಯಂತೂ ಇದರ ಸಂರಕ್ಷಣೆಯ ಮಹತ್ವವನ್ನು ಎಳೆಎಳೆಯಾಗಿ ಸರ್ಕಾರದ ಮುಂದೆ ಬಿಡಿಸಿಟ್ಟಿತ್ತು. ಈ ಎಲ್ಲ ಬಗೆಯ ವ್ಯಾಪಕ ಅರಿವು- ಒತ್ತಡಗಳ ಪರಿಣಾಮವಾಗಿಯೇ, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯವು 2011ರಲ್ಲಿ ವಿಜ್ಞಾನಿ ಮಾಧವ ಗಾಡ್ಗೀಳ್‌ ನೇತೃತ್ವದಲ್ಲಿ ಉನ್ನತ ಮಟ್ಟದ ತಜ್ಞ ಸಮಿತಿಯನ್ನು ರಚಿಸಿ, ಸೂಕ್ತ ಸಂರಕ್ಷಣಾ ನೀತಿ ರೂಪಿಸುವಂತೆ ಕೋರಿತು. ವ್ಯಾಪಕ ಸಂಶೋಧನೆ ಹಾಗೂ ಸಮಾಲೋಚನೆಗಳನ್ನು ಆಧರಿಸಿ 2012ರಲ್ಲಿ ಅದು ತನ್ನ ವರದಿ ನೀಡಿತು. ಆದರೆ, ಅದರ ಆಶಯಗಳನ್ನೇ ಅರ್ಥೈಸಿಕೊಳ್ಳದ ರಾಜಕೀಯ ನಾಯಕರು ಪಕ್ಷಾತೀತವಾಗಿ ಅದನ್ನು ವಿರೋಧಿಸಿದ್ದರಿಂದ, ಕೇಂದ್ರ ಸರ್ಕಾರ ಅದನ್ನು ಬೀಡಬೇಕಾಯಿತು!

ಗಾಡ್ಗೀಳ್‌ ವರದಿಯನ್ನು ಪರಿಷ್ಕರಿಸಲು ವಿಜ್ಞಾನಿ ಕಸ್ತೂರಿರಂಗನ್ ನೇತೃತ್ವದಲ್ಲಿ 2012ರಲ್ಲಿ ಮತ್ತೊಂದು ಸಮಿತಿ ರಚಿಸಬೇಕಾಯಿತು. ‘ಪರಿಸರ ಸಂರಕ್ಷಣಾ ಕಾನೂನು’ (1986) ಅನ್ವಯ, ಪಶ್ಚಿಮಘಟ್ಟ ಶ್ರೇಣಿಯ ಕನಿಷ್ಠ ಶೇಕಡ 37ರಷ್ಟು ಪ್ರದೇಶವನ್ನಾದರೂ ‘ಪರಿಸರಸೂಕ್ಷ್ಮ ಪ್ರದೇಶ’ಗಳೆಂದು ಗುರುತಿಸಿ ಸಂರಕ್ಷಿಸಲು ಅದು ಸಲಹೆ ಮಾಡಿತ್ತು. ಅದಕ್ಕೂ ವ್ಯಾಪಕ ವಿರೋಧವು ರಾಜಕೀಯ ವರ್ಗದಿಂದಲೇ ಬಂತು! ಒಂದು ದಶಕ ದಿಂದ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯು ಹಲವು ಬಾರಿ ಅದನ್ನು ಪರಿಷ್ಕರಿಸಿ ಪ್ರಕಟಿಸಲು ಪ್ರಯತ್ನಿಸಿ ತಾದರೂ ರಾಜ್ಯ ಸರ್ಕಾರಗಳು ಹಾಗೂ ರಾಜಕೀಯ ನಾಯಕರಿಂದ ಅದಕ್ಕೆ ಅಂಗೀಕಾರ ದೊರೆಯಲೇ ಇಲ್ಲ. ಇತ್ತ, ಪಶ್ಚಿಮಘಟ್ಟವು ನಾಶವಾಗುತ್ತಲೇ ಸಾಗಿದೆ. ಹೀಗಾಗಿಯೇ, ಈ ಕುರಿತು ಶೀಘ್ರ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್‌ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಾಲಯವು ಸರ್ಕಾರಕ್ಕೆ ಆದೇಶಿಸಬೇಕಾಗಿ ಬಂತು. ಈಗ, ಈ ತಿಂಗಳ 6ರಂದು ಪುನಃ ಹೊಸ ಕರಡು ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಇಷ್ಟಕ್ಕೂ ಈ ಅಧಿಸೂಚನೆಯಲ್ಲಿ ಏನಿದೆ? ಇಲ್ಲಿನ ನೆಲ- ಜಲ, ಕಾಡು-ಕಣಿವೆಗಳ ನಿರ್ವಹಣೆಯಲ್ಲಿ ತೋರಬೇಕಾದ ಕನಿಷ್ಠ ಶಿಸ್ತನ್ನಷ್ಟೇ ಅದು ಸೂಚಿಸುತ್ತಿದೆ. ಸ್ಥಳೀಯ ರೈತರು, ವನವಾಸಿಗಳು, ವ್ಯಾಪಾರಸ್ಥರು, ಜಮೀನುರಹಿತ ಕುಶಲಕರ್ಮಿಗಳು- ಇವರೆಲ್ಲರ ಉದ್ಯೋಗ ಅಥವಾ ಜೀವನೋ ಪಾಯಕ್ಕೆ ತೊಂದರೆಯಾಗುವ ಯಾವ ಸಂಗತಿಗಳೂ ಅದರಲ್ಲಿಲ್ಲ. ಜಮೀನು ಕೊಡು-ಕೊಳ್ಳುವುದು,
ಬಡವರಿಗೆ ಸರ್ಕಾರಿ ಜಮೀನು ಪಟ್ಟಾ ನೀಡುವುದು, ಸಣ್ಣ ಕೈಗಾರಿಕೆಗಳ ಸ್ಥಾಪನೆ, ಮನೆ ಕಟ್ಟುವುದು, ರಸ್ತೆಯಂಥ ಸಾರ್ವಜನಿಕ ಕಾಮಗಾರಿ- ಇವನ್ನೆಲ್ಲ ನಿಯಂತ್ರಿಸುವ ಪ್ರಸ್ತಾವವೂ ಅದರಲ್ಲಿಲ್ಲ. ರೈತರು ಅಥವಾ ವನವಾಸಿಗಳನ್ನು ಒಕ್ಕಲೆಬ್ಬಿಸುವ ಇಂಗಿತವೂ ಇಲ್ಲ. ಆದರೆ, ಕೆಲವರು ಉದ್ದೇಶಪೂರ್ವಕವಾಗಿ ಈ ಸತ್ಯಸಂಗತಿಗಳನ್ನೆಲ್ಲ ಮರೆಮಾಚಿ, ಅಧಿಸೂಚನೆ ಕುರಿತು ಜನರಿಗೆ ಹಸಿಸುಳ್ಳು ಹೇಳುತ್ತಿದ್ದಾರೆ. ತಪ್ಪು ಮಾಹಿತಿ ನೀಡುತ್ತಾ ಸರ್ಕಾರವನ್ನೇ ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಇದ ರಿಂದಾಗಿ, ರಾಜ್ಯ ಸರ್ಕಾರವು ಈ ಅಧಿಸೂಚನೆಯನ್ನು ಸಾರಾಸಗಟಾಗಿ ತಿರಸ್ಕರಿಸುವ ಮಾತುಗಳನ್ನು ಆಡುತ್ತಿದೆ! ಇದು ವಿಷಾದದ ಸಂಗತಿ.

ಸೂಕ್ಷ್ಮವೆಂದು ಇದರಲ್ಲಿ ಗುರುತಿಸಿರುವ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ1,572ಗ್ರಾಮಗಳಾದರೂ ಯಾವುವು? ಕಾವೇರಿ, ತುಂಗಭದ್ರಾ, ನೇತ್ರಾವತಿ, ಶರಾವತಿ, ಬೇಡ್ತಿ, ಕಾಳಿ ಸೇರಿದಂತೆ ನಾಡಿನ ಪ್ರಮುಖ ನದಿಗಳಿಗೆ ನೀರುಣಿಸುವ ಜಲಮೂಲ ಹಾಗೂ ಜಲಾನಯನ ಪ್ರದೇಶಗಳವು. ಇತ್ತೀಚೆಗೆ ಹೆಚ್ಚಿರುವ ಮುಂಗಾರಿನ ನೆರೆ ಹಾಗೂ ಬೇಸಿಗೆಯ ನದಿನೀರಿನ ಕೊರತೆಯು ಈ ಪ್ರದೇಶಗಳು ನಾಶವಾಗುತ್ತಿರುವುದ ರಿಂದಲೇ ಘಟಿಸುತ್ತಿರುವುದು. ಇಲ್ಲಿನ ಕಾಡು ಛಿದ್ರವಾಗುತ್ತಿರುವುದರಿಂದಲೇ ವನ್ಯಪ್ರಾಣಿಗಳು ಕೃಷಿಜಮೀನಿಗೆ ದಾಳಿಯಿಡುತ್ತಿರುವುದು. ಅಳಿದುಳಿದ ನೈಸರ್ಗಿಕ ಪ್ರದೇಶ ಗಳನ್ನಾದರೂ ಈಗ ರಕ್ಷಿಸದಿದ್ದರೆ, ನದಿಮೂಲಗಳು ಬತ್ತ ಬಹುದು; ವನ್ಯಪ್ರಾಣಿ-ಮಾನವ ಸಂಘರ್ಷ ಇನ್ನಷ್ಟು ಹೆಚ್ಚಾಗಬಹುದು!

ಒಂದು ದಶಕದಿಂದ ಮಲೆನಾಡಿನಲ್ಲಿ ಭಾರಿ ಭೂಕುಸಿತಗಳಾಗುತ್ತಿವೆ. ಜಿಯಲಾಜಿಕಲ್ ಸರ್ವೇ ಆಫ್ ಇಂಡಿಯಾ ಹಾಗೂ ‘ಇಸ್ರೊ’ದ ಅಧ್ಯಯನಗಳು ನಿರೂ ಪಿಸಿರುವಂತೆ, ಈ ಭಾರಿ ಭೂಕುಸಿತಗಳೆಲ್ಲ ಸಂಭವಿಸು ತ್ತಿರುವುದು ಈಗ ಗುರುತಿಸಿರುವ ಸೂಕ್ಷ್ಮಪ್ರದೇಶ
ಗಳಲ್ಲೇ! ಇವನ್ನು ವ್ಯವಸ್ಥಿತವಾಗಿ ನಿರ್ವಹಿಸದಿದ್ದಲ್ಲಿ, ಭವಿಷ್ಯದಲ್ಲಿ ಭೂಕುಸಿತಗಳು ಇನ್ನಷ್ಟು ಹೆಚ್ಚಬಹುದೆಂದು ಭೂಗರ್ಭಶಾಸ್ತ್ರಜ್ಞರು ಎಚ್ಚರಿಸುತ್ತಿದ್ದಾರೆ.

ಹೀಗಾಗಿ, ಸಹ್ಯಾದ್ರಿಗೆ ಸೂಕ್ತ ನೆಲ- ಜಲ ಬಳಕೆ ನೀತಿ ಹಾಗೂ ಜನಸಹಭಾಗಿತ್ವದ ಸಂರಕ್ಷಣಾ ಸೂತ್ರಗಳ ಜರೂರತ್ತಿದೆ. ಈ ದಿಸೆಯಲ್ಲಿ ಕೆಲವು ವಿಧಿ- ನಿಷೇಧಗಳನ್ನಷ್ಟೇ ಈ ಅಧಿಸೂಚನೆಯಲ್ಲಿ ಸೂಚಿಸಲಾಗಿದೆ. ನಗರೀಕರಣ ಹಾಗೂ ಕೈಗಾರಿಕೆಗಳನ್ನು ಶಿಸ್ತಿಗೆ ಒಳಪಡಿಸುವ ಸಲಹೆಗಳಿವೆ. ಅಪಾಯಕಾರಿಯಾಗಿ ನೀರು ಹಾಗೂ ಮಣ್ಣನ್ನು ಮಾಲಿನ್ಯಗೊಳಿಸುವ ‘ಕೆಂಪು ವರ್ಗ’ದ ಭಾರಿ ಕೈಗಾರಿಕೆಗಳು ಹಾಗೂ ಗಣಿಗಳನ್ನು ಮಾತ್ರ ನಿಷೇಧಿಸುವ ಪ್ರಸ್ತಾವವಿದೆ. ಸಾಮೂಹಿಕ ಭವಿಷ್ಯದ ಹಿತಕ್ಕಾಗಿ ಅಂಥ ಕನಿಷ್ಠ ಶಿಸ್ತನ್ನು ಅನುಸರಿಸಲೇಬೇಕಾದ ಕಾಲಬಂದಿದೆ ತಾನೇ?

ಇಷ್ಟಕ್ಕೂ ಇದು ಕರಡು. ಆಕ್ಷೇಪಗಳಿದ್ದಲ್ಲಿ ಅವನ್ನು ಚರ್ಚಿಸಿ, ಅಂತಿಮ ಅದೇಶದಲ್ಲಿ ಸೂಕ್ತ ಬದಲಾವಣೆ ತರುವ ಅವಕಾಶ ರಾಜ್ಯ ಸರ್ಕಾರಕ್ಕಿದೆ. ಹೀಗಾಗಿ, ಈ ಮಹತ್ವದ ಸಂರಕ್ಷಣಾ ಸೂತ್ರಗಳನ್ನು ತಿರಸ್ಕರಿಸುವ ಆತುರದ ಹಾಗೂ ರಾಜಕೀಯಪ್ರೇರಿತ ನಿರ್ಧಾರವನ್ನು ಸರ್ಕಾರ ಕೈಬಿಡಬೇಕಿದೆ. ಈ ವರದಿಯನ್ನು ಕನ್ನಡಕ್ಕೆ ಭಾಷಾಂತರಿಸಿ ಜನರ ಕೈಗಿಡಬೇಕಿದೆ. ಗ್ರಾಮಮಟ್ಟ
ದಲ್ಲಿ ಎಲ್ಲ ಭಾಗಿದಾರರೊಂದಿಗೆ ಮುಕ್ತ ಸಮಾಲೋಚನೆ ನಡೆಸುವ ಅವಕಾಶಗಳನ್ನೂ ಸರ್ಕಾರ ತೆರೆದಿಡಬೇಕು. ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಈ ಪ್ರಕ್ರಿಯೆಗೆ ತೆರೆದುಕೊಂಡರೆ, ಸಹ್ಯಾದ್ರಿಯನ್ನು ಸಂರಕ್ಷಿಸುತ್ತಲೇ ಅಭಿವೃದ್ಧಿ ಸಾಧಿಸುವ ಮಾರ್ಗಗಳು ತೋಚಬಲ್ಲವು. ಇಲ್ಲಿಯ ವಿಶಿಷ್ಟ ಅರಣ್ಯಕೃಷಿ, ಕೃಷಿ-ತೋಟಗಾರಿಕೆ, ಮೀನುಗಾರಿಕೆ, ಹೈನುಗಾರಿಕೆ, ಜೇನುಸಾಕಣೆ, ಔಷಧಿಮೂಲಿಕೆಗಳ ಮೌಲ್ಯವರ್ಧನೆ- ಇವೆಲ್ಲ, ಸುಸ್ಥಿರ ಆರ್ಥಿಕ ಅಭಿವೃದ್ಧಿಯ ಅವಕಾಶಗಳೆಂಬುದು ಅರಿವಾಗಬಲ್ಲದು.

ನಾಡಿನ ಜೀವನಾಡಿಯಾದ ಸಹ್ಯಾದ್ರಿಯ ಸಂರಕ್ಷಣೆಗಾಗಿ ದೀರ್ಘಕಾಲದಿಂದ ನಡೆಯುತ್ತಿರುವ ಪ್ರಯತ್ನಗಳು ಈಗ ನಿರ್ಣಾಯಕ ಘಟ್ಟ ತಲುಪಿರುವಂತಿದೆ. ಈ ಕರಡು ಅಧಿಸೂಚನೆಯ ಆಶಯಗಳನ್ನು ಸರ್ಕಾರವು ಒಪ್ಪಿದರೆ, ಬಹುಜನರ ಭವಿಷ್ಯವನ್ನು ರಕ್ಷಿಸಿದ ಹಾಗೆ. ಬದಲಾಗಿ, ಕೆಲವೇ ಕೆಲವು ಸ್ವಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಈ ಅಧಿಸೂಚನೆಯನ್ನು ಧಿಕ್ಕರಿಸಿದರೆ, ಮತ್ತಷ್ಟು ನೆರೆ- ಬರ, ಭೂಕುಸಿತ, ಮೇಲ್ಮಣ್ಣು ಸವೆತದಿಂದಾಗಿ ಕೃಷಿ ಉತ್ಪಾದನೆಯ ನಷ್ಟ ಇತ್ಯಾದಿ ದೌರ್ಭಾಗ್ಯಗಳಿಗೆ ಕೋಟೆಬಾಗಿಲು ತೆರೆದಹಾಗೆ!

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT