ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇ‍ಷಣೆ: ಈಗ ವಿಶ್ವ ಮಣ್ಣಿನ ಪಾಲುದಾರಿಕೆ

ಮಣ್ಣಿನ ಮಾಲಿನ್ಯ ಸಮಸ್ಯೆ ಎದುರಿಸುತ್ತಿರುವವರಲ್ಲಿ ಜಗತ್ತಿನ ಎಲ್ಲರೂ ಪಾಲುದಾರರು
Last Updated 1 ಜೂನ್ 2021, 20:15 IST
ಅಕ್ಷರ ಗಾತ್ರ

ದೊಡ್ಡ ಉದ್ಯಮಗಳಲ್ಲಿ ದೇಶ ದೇಶಗಳ ನಡುವೆ ಪಾಲುದಾರಿಕೆ ಮಾಡಿಕೊಳ್ಳುವುದು ಜಾಗತೀಕರಣದ ಹಿನ್ನೆಲೆಯಲ್ಲಿ ಹೊಸತೇನಲ್ಲ. ಇಲ್ಲಿ ಪಾಲುದಾರಿಕೆ ಎಂದರೆ ನೇರ ಹಣಹೂಡಿಕೆ, ಅಷ್ಟೇ. ವಿಶ್ವ ಮಣ್ಣಿನ ಪಾಲುದಾರಿಕೆ ಎಂದಾಗ, ಫಲವತ್ತಾದ ಮಣ್ಣು ಯಾವ ದೇಶದಲ್ಲೇ ಇರಲಿ ಅದನ್ನು ಹಂಚಿಕೊಳ್ಳಲು ವಿದೇಶಿ ಬಂಡವಾಳ ಹರಿದು ಬರುತ್ತದೆಂಬ ಅನುಮಾನ ಮೂಡುವ ಸಾಧ್ಯತೆ ಇದೆ. ಇಲ್ಲಿ ಹಣದ ವಹಿವಾಟಿಲ್ಲ, ಬಂಡವಾಳವೆಂದರೆ ಅದು ಜ್ಞಾನದ ಬಂಡವಾಳವನ್ನು ಹೂಡುವುದು.

ಈ ಪರಿಕಲ್ಪನೆಯನ್ನು 2012ರಲ್ಲಿ ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಆಹಾರ ಮತ್ತು ಕೃಷಿ ವಿಭಾಗ ಹುಟ್ಟುಹಾಕಿದಾಗ ಬಂಡವಾಳದ ಪ್ರಶ್ನೆ ಎದ್ದಿರಲಿಲ್ಲ; ಈಗಲೂ ಇಲ್ಲ. ಮುಖ್ಯವಾಗಿ ಜಾಗತಿಕ ಮಟ್ಟದಲ್ಲಿ ಮಣ್ಣಿನ ಫಲವತ್ತತೆಯ ಸ್ಥಿತಿ ಅರಿಯುವುದು, ಅದನ್ನು ನಿಭಾಯಿಸುವ ಪರಿ ಕುರಿತು ಎಲ್ಲ ರಾಷ್ಟ್ರಗಳೂ ಒಂದಾಗಬೇಕು ಎಂಬುದು ಆಶಯ.

ಒಂದೆಡೆ ಜನಸಂಖ್ಯಾ ಒತ್ತಡ, ಆಹಾರದ ಬೇಡಿಕೆಯಲ್ಲಿ ಅನೂಹ್ಯ ಪ್ರಮಾಣದ ಏರಿಕೆ, ಜೊತೆಗೆ ನೆಲಬಳಕೆಯ ಪ್ರವೃತ್ತಿಯಲ್ಲಿ ಆಸೆಬುರುಕತನ ಇವೆಲ್ಲವೂ ಮಣ್ಣಿನ ಫಲವತ್ತತೆಗೆ ದೊಡ್ಡ ಪ್ರಮಾಣದಲ್ಲಿ ಕಂಟಕ ತರುತ್ತವೆ ಎಂಬುದು ಸಮೀಕ್ಷೆ ಮಾಡಿದಾಗ ಹೊರಬಂತು. ಈ ಸಮೀಕ್ಷೆಯ ಫಲವಾಗಿಯೇ ತಿಳಿದುಬಂದ ಕಳವಳದ ಅಂಶವೆಂದರೆ, ಈಗಾಗಲೇ ಜಗತ್ತಿನ ಮಣ್ಣಿನ ಶೇ 33ರಷ್ಟು ಭಾಗ ಅವನತಿ ಹೊಂದಿರುವುದು- ಅಂದರೆ ಫಲವತ್ತತೆಯನ್ನು ಕಳೆದುಕೊಂಡಿರುವುದು. ಫಲವತ್ತಾದ ಮಣ್ಣು, ಅದಕ್ಕೆ ತಕ್ಕ ನೀರಿನ ಪೂರೈಕೆಯು ಆಹಾರೋತ್ಪಾದನೆಯ ಮೇಲೆ ನೇರ ಪರಿಣಾಮ ಬೀರುತ್ತವೆಂಬುದು ಜಗತ್ತಿನ ಎಲ್ಲ ರೈತರಿಗೂ ಗೊತ್ತು. ಆದರೆ ಮಣ್ಣು ಅದರ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತಿರುವ ವಸ್ತುಸ್ಥಿತಿ ಢಾಳಾಗಿ ಗೋಚರಿಸುತ್ತಿದೆ. ಈ ಅಪಾಯ ಎಂದಿಗಿಂತ ಇಂದು ಹೆಚ್ಚು ತೀವ್ರವಾಗಿದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯವೂ ಹೌದು.

ವಿಶ್ವ ಮಣ್ಣಿನ ಪಾಲುದಾರಿಕೆ ಎಂದರೆ ಆಯಾ ದೇಶಗಳಲ್ಲಿ ಮಣ್ಣಿನ ಸವಕಳಿ ಯಾವ ಪ್ರಮಾಣದಲ್ಲಿ ಆಗುತ್ತಿದೆ, ಉಪ್ಪು ಮತ್ತು ಚೌಳು ಮಣ್ಣು ಎಷ್ಟು ನೆಲವನ್ನು ತಿಂದಿವೆ, ಇಳುವರಿಗೆ ಅವು ಹೇಗೆ ಅಡ್ಡ ಬರುತ್ತವೆ ಎಂಬುದನ್ನು ತಜ್ಞರು ರೈತರಿಗೆ ಮನದಟ್ಟು ಮಾಡಿಕೊಡುವುದು, ವಿಜ್ಞಾನದ ಅನ್ವೇಷಣೆಗಳು ಆಹಾರೋತ್ಪಾದನೆಗೆ ಹೇಗೆ ಪೂರಕವಾಗುತ್ತವೆ ಎನ್ನುವುದನ್ನು ರೈತನ ಸಮ್ಮುಖದಲ್ಲೇ ಚರ್ಚಿಸುವುದು.

ಮಣ್ಣಿನ ಫಲವತ್ತತೆ ಪ್ರಧಾನವಾಗಿ ಎರಡು ಅಂಶಗಳ ಮೇಲೆ ನಿರ್ಧಾರವಾಗುತ್ತದೆ. ಯಾವ ಶಿಲೆಯಿಂದ ಮಣ್ಣು ಉತ್ಪನ್ನವಾಗುತ್ತದೆ ಎಂಬುದು ಒಂದಂಶವಾದರೆ, ಅಲ್ಲಿರುವ ಹವಾಗುಣ ಹೇಗೆ ಮಣ್ಣಿನ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಇನ್ನೊಂದು. ಭಾರತದಲ್ಲೇ ಗಮನಿಸಿದರೆ, ಹಿಮಾಚಲ ಪ್ರದೇಶದಲ್ಲಿರುವ ಹವಾಗುಣ ಮತ್ತು ಮಣ್ಣೇ ಬೇರೆ. ಹತ್ತಿ ಬೆಳೆಯುವ ರಾಯಚೂರಿನ ಕಪ್ಪು ಮಣ್ಣಿನ ಗುಣಲಕ್ಷಣಗಳೇ ಬೇರೆ, ವಾತಾವರಣವೇ ಬೇರೆ.

ಜಾಗತಿಕ ಮಟ್ಟದಲ್ಲಿ ವಿಶ್ವಸಂಸ್ಥೆ ಇದನ್ನು ಗಂಭೀರ ವಾಗಿ ಪರಿಗಣಿಸಿ, ವಿಶಾಲ ತಳಹದಿಯ ಮೇಲೆ ಚರ್ಚೆಗೆ ವೇದಿಕೆಯನ್ನು ನಿರ್ಮಿಸುತ್ತಿದೆ. ಸರ್ಕಾರಿ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು, ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ವಿಜ್ಞಾನಿಗಳು, ರೈತ ಸಂಸ್ಥೆಗಳು ಇವೆಲ್ಲವೂ ಒಟ್ಟು ಗೂಡಿಯೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.

ದೊಡ್ಡ ದೊಡ್ಡ ವೈಜ್ಞಾನಿಕ ಪರಿಕಲ್ಪನೆಗಳ ಕುರಿತು ರೈತರ ಮಟ್ಟಕ್ಕೆ ಇಳಿದು ಅವರಿಗೆ ಅರ್ಥವಾಗುವ ಭಾಷೆ ಯಲ್ಲಿ ಹೇಳುವ ಜವಾಬ್ದಾರಿ ತಜ್ಞರಿಗಿದೆ. ಉಪ್ಪುಮಣ್ಣು, ಚೌಳುಮಣ್ಣು ಎಂದೊಡನೆ ರೈತರಿಗೆ ಎಲ್ಲವೂ ಸ್ಪಷ್ಟವಾಗುತ್ತವೆ. ಜಾಗತಿಕ ಹವಾಗುಣ ಬದಲಾವಣೆಯು ಮಣ್ಣಿನ ಸಾರದ ಮೇಲೆ ಅತೀವ ಪ್ರಭಾವ ಬೀರಿರುವುದು ಸ್ಪಷ್ಟ. ನೀರು ಇಂಗುವುದರಿಂದ ತೊಡಗಿ, ಪೌಷ್ಟಿಕಾಂಶ ಗಳು ಕೊಚ್ಚಿ ಹೋಗುತ್ತಿರುವುದರವರೆಗೆ ಎಲ್ಲವೂ ಕಣ್ಣಿಗೆ ಕಾಣುತ್ತಿವೆ. ಒಂದೆಡೆ, ರೈತರು ಅಧಿಕ ಇಳುವರಿ ಪಡೆಯಲು ಅತಿಯಾಗಿ ಯೂರಿಯ ಬಳಸಿ ಅದೇ ಮುಂದೆ ಫಸಲಿಗೆ ಕಂಟಕವಾಗುವ ಸಂಗತಿಯೂ ಹೊಸತೇನಲ್ಲ. ಇನ್ನೊಂದೆಡೆ, ರಸಗೊಬ್ಬರಗಳ ಬಗ್ಗೆ ರೈತರಿಗೆ ತಿಳಿದಿರುವಷ್ಟು ಮಣ್ಣಿನ ಜೈವಿಕ ವೈವಿಧ್ಯದ ಬಗ್ಗೆ ತಿಳಿಯದು.

ಮಣ್ಣಿನ ಜೀವಿವೈವಿಧ್ಯದ ಬಗ್ಗೆ ಕಳೆದ ಏಪ್ರಿಲ್ 19ರಿಂದ 22ರವರೆಗೆ ರೋಮ್‍ನಲ್ಲಿ ವಿಶ್ವಸಂಸ್ಥೆಯ ನೆರವಿನೊಂದಿಗೆ ನಡೆದ ಜಾಲಗೋಷ್ಠಿಯಲ್ಲಿ 161 ದೇಶಗಳ 5,000 ಮಂದಿ ಭಾಗವಹಿಸಿದ್ದರೆಂಬುದು ಮೆಚ್ಚಬೇಕಾದ ವಿಚಾರ ಎನ್ನುವ ಬದಲು, ಸಮಸ್ಯೆಯ ಸ್ವರೂಪ ಎಷ್ಟು ತೀವ್ರವಾದದ್ದು ಎಂಬುದರ ಸೂಚಕ ಎನ್ನಬಹುದು. ಅಲ್ಲಿನ ಚರ್ಚೆಗಳು ಕೋಟ್ಯಂತರ ರೈತರು ಮತ್ತು ತಜ್ಞರನ್ನು ಮುಟ್ಟಿದವು. ಇದಕ್ಕೆ ಕಾರಣವೂ ಇದೆ. ಮಣ್ಣು ಹಿಂದೆಂದಿಗಿಂತ ಅತಿ ಹೆಚ್ಚು ಮಾಲಿನ್ಯಕ್ಕೆ ಒಳಗಾಗಿದೆ. ಬೆಳೆಯ ಇಳುವರಿಗೆ ಇದು ಅಡ್ಡಬರುತ್ತಿದೆ. ಅತ್ತ ಇಥಿಯೋಪಿಯಾದಿಂದ ತೊಡಗಿ, ಇತ್ತ ಸ್ವಿಟ್ಜರ್‌ಲ್ಯಾಂಡ್‍ವರೆಗೂ ಅದೇ ಸ್ಥಿತಿ. ಒಂದೇ ಜಗತ್ತು, ಒಂದೇ ದೊಡ್ಡ ಸಮಸ್ಯೆ, ಅಂದರೆ ಜಗತ್ತಿನ ಎಲ್ಲರೂ ಪಾಲುದಾರರೇ.

ಇದೇ ಸಂದರ್ಭದಲ್ಲಿ ಮಾಸ್ಕೊದ ಜಗತ್ಪ್ರಸಿದ್ಧ ಮಣ್ಣಿನ ಮ್ಯೂಸಿಯಮ್ಮನ್ನು ಕೂಡ ವೆಬಿನಾರ್ ಮೂಲಕವೇ ದರ್ಶನ ಮಾಡಿಸಲಾಯಿತು. ವಿಶೇಷವೆಂದರೆ, ಉತ್ತರ ಧ್ರುವ ಭಾಗದಿಂದ ತೊಡಗಿ, ಇತ್ತ ಉಷ್ಣ ವಲಯದವರೆಗೆ ಸಂಗ್ರಹಿಸಿದ್ದ 2,500 ಬಗೆಯ ಮಣ್ಣನ್ನು ಪ್ರದರ್ಶಿಸಲಾಗಿತ್ತು. ಮಣ್ಣಿನ ಬಗ್ಗೆ ನಮಗಿರುವ ಜ್ಞಾನ ಎಷ್ಟೆಂಬುದರ ಪರೀಕ್ಷೆ ಇದಾಗಿತ್ತು. ಹಾಗಾದರೆ ಆಯಾ ದೇಶದ ಕೃಷಿ ಇಲಾಖೆಗಳು ಈ ನಿಟ್ಟಿನಲ್ಲಿ ಯೋಚಿಸಿಲ್ಲವೇ? ಖಂಡಿತ ಯೋಚಿಸಿವೆ. ಆದರೆ ಬದಲಾಗುತ್ತಿರುವ ಹವಾಗುಣವು ಕೃಷಿ ಮೇಲೆ ಬೀರಿರುವ ಪರಿಣಾಮದ ಕುರಿತು ಆಗಬೇಕಾದಷ್ಟು ಚರ್ಚೆ ಆಗಿಲ್ಲ.

ಇದೇ ತಿಂಗಳು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ವಿಭಾಗ ‘ಗ್ಲೋಬಲ್ ಅಸೆಸ್‍ಮೆಂಟ್ ಆಫ್ ಸಾಯಿಲ್ ಪೊಲ್ಯೂಷನ್’ ಎಂಬ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡುತ್ತಿದೆ (ಇದೇ 4ರಂದು). ಇದರಲ್ಲಿ ಆಯಾ ದೇಶ ಗಳ ಮಣ್ಣಿನ ಆರೋಗ್ಯದ ಕುರಿತು ನಿಖರ ಅಂಕಿ ಅಂಶಗಳಿರುತ್ತವೆ.

ಭಾರತ ಸರ್ಕಾರವು ರೈತರಿಗೆ 2014ರಿಂದಲೂ ‘ಹೆಲ್ತ್ ಕಾರ್ಡ್’ ನೀಡುವ ಯೋಜನೆಯನ್ನು ಹಮ್ಮಿಕೊಂಡಿದೆ. ಈ ದಿಸೆಯಲ್ಲಿ ಬಹಳಷ್ಟು ಕೆಲಸಗಳೂ ಆಗಿವೆ. ಇದರಲ್ಲಿ ಮಣ್ಣಿನ ಆರೋಗ್ಯದ ಕುರಿತು ಯಾವ ರಾಸಾಯನಿಕಗಳ ಕೊರತೆ ಇದೆ, ಯಾವ ಪ್ರಮಾಣದಲ್ಲಿ ಪೋಷಕಗಳನ್ನು ಕೊಡಬೇಕು, ಮಣ್ಣಿನ ಗುಣಮಟ್ಟ ಯಾವ ಬಗೆಯದು ಎಂಬೆಲ್ಲ ವಿವರಗಳು ಇರುತ್ತವೆ.

ನಮ್ಮ ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಮಣ್ಣಿನ ಆರೋಗ್ಯ ಕೇಂದ್ರಗಳಿವೆ. ಅವಕ್ಕೆ ಹೊಂದಿಕೊಂಡಂತೆ ಮಣ್ಣಿನ ಪರೀಕ್ಷಾ ಪ್ರಯೋಗಾಲಯಗಳೂ ಇವೆ. ರೈತರು ನಿರೀಕ್ಷಿತ ಮಟ್ಟದಲ್ಲಿ ಪ್ರಯೋಜನ ಪಡೆದುಕೊಳ್ಳುತ್ತಿರುವುದರ ಬಗ್ಗೆ ಅನುಮಾನಗಳಿವೆ. ಇದರ ಜೊತೆಗೆ ಕೆಲವು ತಜ್ಞರು ಸ್ವಯಂಪ್ರೇರಿತರಾಗಿ ರೈತರಿಗೆ ಮಣ್ಣಿನ ಫಲವತ್ತತೆಯ ಬಗ್ಗೆ ಉಪಯುಕ್ತ ಮಾಹಿತಿ ನೀಡುತ್ತಿದ್ದಾರೆ. ಇಂಥವರಲ್ಲಿ ಒಬ್ಬರು ‘ಸಾಯಿಲ್ ವಾಸು’ ಎಂದೇ ನಾಡಿನಾದ್ಯಂತ ಖ್ಯಾತರಾದ ಪಿ.ಶ್ರೀನಿವಾಸ್. ಅವರು ಜಿಲ್ಲಾ ಕೇಂದ್ರಗಳಲ್ಲಿ ಮಾಡುವ ಮಣ್ಣಿನ ಪರೀಕ್ಷೆಯ ಬಗ್ಗೆ ಇನ್ನೊಂದು ಅಂಶವನ್ನು ಸೇರಿಸಬೇಕು ಎನ್ನುತ್ತಾರೆ. ಇಂಥ ಕೇಂದ್ರಗಳಲ್ಲಿ ಮಣ್ಣಿನ ರಾಸಾಯನಿಕ ಧಾತುಗಳ ಕೊರತೆ ಅಥವಾ ಹೆಚ್ಚುವರಿ ಬಗ್ಗೆ ಮಾಹಿತಿ ಸಿಕ್ಕುತ್ತದೆಯೇ ಹೊರತು ಮಣ್ಣಿನ ಬಹುಮುಖ್ಯ ಭೌತಿಕ ಘಟಕದ ಬಗ್ಗೆಯಾಗಲೀ ಅಥವಾ ಜೈವಿಕ ಘಟಕದ ಬಗ್ಗೆಯಾಗಲೀ ಮಾಹಿತಿ ನೀಡುವ ಪರಿಪಾಟ ಅಲ್ಲಿಲ್ಲ ಎನ್ನುತ್ತಾರೆ.

ಒಂದು ಎಕರೆ ಖುಷ್ಕಿಯಲ್ಲಿ 14 ಬಗೆಯ ವಿವಿಧ ಬೆಳೆಗಳನ್ನು ಬೆಳೆದು ರೈತರಿಗೆ ಹೊಸ ಹುರುಪು ತುಂಬಿದ್ದಾರೆ. ಹೊಲಗಳಿಗೆ ಹೋಗಿ ರೈತರ ಸಮ್ಮುಖದಲ್ಲಿ ಮಣ್ಣಿನ ಮಾದರಿ ಸಂಗ್ರಹಿಸಿ ಅದರಲ್ಲಿ ಜೈವಿಕ ಘಟಕ ಯಾವುದು ಎಂಬುದನ್ನು ಪರಿಚಯ ಮಾಡಿಸಿಕೊಡುತ್ತಿದ್ದಾರೆ. ಲಾಭ– ನಷ್ಟ ಯೋಚಿಸದೆ ರೈತರ ಬದುಕನ್ನೇ ಗುರಿ ಮಾಡಿಕೊಂಡ ಇಂಥವರೇ ರೈತಮಿತ್ರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT