ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಜಲ ದಿನ: ಜಲ ಕಾಯುವ ಜಗದ ಕಾಯಕ

ನೀರಡಿಕೆಯಿಂದ ಬಳಲುತ್ತಿರುವ ನಗರಗಳ ನೀರಿನ ದಾಹ ನಿವಾರಿಸುವುದು ಹೇಗೆ?
Last Updated 21 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ವಿಶ್ವದ ಜನಸಂಖ್ಯೆ 800 ಕೋಟಿ ತಲುಪುತ್ತಿರುವ ಈ ಸಮಯದಲ್ಲಿ ನೀರಿಗಾಗಿ ಹಾಹಾಕಾರ ಕೇಳಿಬರುತ್ತಿರು ವುದು ಸಾಮಾನ್ಯ ವಿಷಯ. ವಿಶ್ವಸ೦ಸ್ಥೆ ಕೈಗೊಂಡ ಅಧ್ಯಯನದ ಪ್ರಕಾರ, 2100ರಲ್ಲಿ ವಿಶ್ವದ ಜನಸಂಖ್ಯೆ 1,100 ಕೋಟಿ ತಲುಪಲಿದ್ದು, ನಾವು ಬೇಗ ಕಾರ್ಯ
ಪ್ರವೃತ್ತರಾಗದಿದ್ದರೆ ಗಂಟಲು ಒಣಗಿದ ಇನ್ನೂ ಲಕ್ಷಾಂತರ ಬಾಯಿಗಳು ನೀರಿಗಾಗಿ ತೆರೆದುಕೊಳ್ಳಲಿವೆ.

ನೀರಿನ ಅಸಮಾನ ಬಳಕೆಯು ಅಸಮಾನತೆಗಳನ್ನು ಘಾತೀಯವಾಗಿ ಹೆಚ್ಚಿಸುತ್ತದೆ. ಕೋವಿಡ್-19 ಸಾಂಕ್ರಾಮಿಕ ನಮಗೆ ಮನಃಪೂರ್ವಕವಾಗಿ ಸಂರಕ್ಷಿಸು, ಉಳಿಸು ಮತ್ತು ಕಾಪಾಡು, ಇಲ್ಲವಾದರೆ ಮುಂಬರುವ ಪರಿಣಾಮಗಳನ್ನು ಎದುರಿಸಲು ಸಿದ್ಧವಾಗು ಎಂಬ ಪಾಠಗಳನ್ನು ಈಗಾಗಲೇ ಕಲಿಸಿದೆ.

ಶುದ್ಧನೀರು ಪ್ರತಿಯೊಬ್ಬರ ಹಕ್ಕು ಮತ್ತು ಅಗತ್ಯ. ಇದು ಪ್ರತಿಯೊಬ್ಬರೂ ಉಚಿತವಾಗಿ ಪಡೆಯಲೇಬೇಕಾದ ಸಂಪನ್ಮೂಲವಾದರೂ ದುಬಾರಿಯಾದ ಸರಕುಗಳ ಪಟ್ಟಿಗೆ ಸೇರ್ಪಡೆಯಾಗುತ್ತಿದೆ. ಜಾಗತಿಕ ವಾಣಿಜ್ಯ ಹಿತಾಸಕ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ನೀರಿನ ಮೇಲೆ ಹೂಡಿಕೆ ಮಾಡುತ್ತಿವೆ, ನೀರಿನ ಸಂಪನ್ಮೂಲಗಳನ್ನು ಖರೀದಿಸುತ್ತಿವೆ. ನೇರವಾಗಿ ನೀರಿನ ಮೂಲಗಳು ಉಪನದಿಗಳಾಗಿ
ರದಿದ್ದರೂ ಪ್ರತಿಯೊಂದು ನೀರಿನ ಮೂಲವೂ ಭೂಅಂತರ್ಜಲಕ್ಕೆ ಸಂಪರ್ಕ ಹೊಂದಿದೆ. ಇದರಿಂದ ನೀರಿನ ಮೂಲದ ಒಂದು ಭಾಗವನ್ನು ಕಲುಷಿತಗೊಳಿಸುವುದು ಇನ್ನೊಂದು ಭಾಗದ ಮೇಲೆ ಪರಿಣಾಮ ಬೀರುತ್ತದೆ.

ನೀರಿನ ಅತಿಯಾದ ಬಳಕೆಯನ್ನು ಸ್ಥಳೀಯವಾಗಿ ಕಡಿಮೆ ಮಾಡುವುದು ಕೇಳಲು ಅಷ್ಟೇನೂ ಹೊಸ ಉಪಾಯವಲ್ಲ ಎಂದೆನಿಸಿದರೂ ಇದೇ ಪರಿಣಾಮಕಾರಿಯಾದ ಮಾರ್ಗ. ಗೃಹಕಾರ್ಯಗಳಿಗೆ ಅವಶ್ಯವಿರುವ ಮತ್ತು ಹಂಚಿಕೆಯಾಗುತ್ತಿರುವ ಜಲಧಾರೆಯ ಮೇಲೆ ನಿಗಾ ಇಟ್ಟು ಅನವಶ್ಯಕ ನೀರಿನ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಇದನ್ನು ಸಾಧಿಸಬಹುದು. ಇದೇ ವಿಚಾರವನ್ನು ಬೆಂಬಲಿಸುತ್ತಾ ‘Why Waste?’ ಎಂಬ ತಂಡ ತಮ್ಮ ವಿಶೇಷ ಆ್ಯಪ್‌ನೊಂದಿಗೆ ಜಲಸಂರಕ್ಷಣೆಗೆ ಮುಂದೆ ಬಂದಿದೆ. ಈ ತಂಡ ಗ್ರಾಹಕರಿಗೆ ಮೋಜಿನ ಸವಾಲುಗಳ ಮೂಲಕ ತಮ್ಮ ನೀರಿನ ಹೆಜ್ಜೆಯ ಗುರುತುಗಳನ್ನು ಲೆಕ್ಕಹಾಕುವುದನ್ನು ಪ್ರೇರೇಪಿಸಿ, ಎಲ್ಲಿ ಮತ್ತು ಹೇಗೆ ಅವರು ನೀರಿನ ಅಪವ್ಯಯ ಮಾಡುತ್ತಾರೆ ಎಂಬುದನ್ನು ತಿಳಿಸುತ್ತಾ ನೀರಿನ ಸದ್ಬಳಕೆಯನ್ನು ಕಲಿಸುತ್ತದೆ.

ಸರಕುಗಳ ತಯಾರಿಕೆಗೆ ಅಗತ್ಯವಾದ, ಆದರೆ ನಮ್ಮ ಅರಿವಿಗೆ ಬಾರದ ನೀರಿನ ಬಗ್ಗೆ ಜನರಿಗೆ ಶಿಕ್ಷಣ ನೀಡುವುದು ಅನಿವಾರ್ಯವಾಗಿದೆ. ಒಂದು ಚೀಸ್ ಬರ್ಗರ್ ತಯಾರಿಸಲು 700 ಲೀಟರ್ ನೀರು, ಒಂದು ಜೋಡಿ ಜೀನ್ಸ್ ತಯಾರಿಸಲು 2,000 ಲೀಟರ್‌ ನೀರು, ಒಂದು ಸೆಡಾನ್‌ ಕಾರು ತಯಾರಿಸಲು 30,000 ಲೀಟರ್‌ ನೀರು ಬೇಕಾಗುತ್ತದೆ. ಮನುಷ್ಯನ ಕೊಳ್ಳುಬಾಕತನವು ಊಹೆಗೆ ನಿಲುಕದ ವೇಗದಲ್ಲಿ ಸಂಪನ್ಮೂಲಗಳನ್ನು ಬರಿದಾಗಿಸುತ್ತಿದೆ. ಕೊಳ್ಳುವಿಕೆಯನ್ನು ಮಿತಗೊಳಿಸಿ ಆರ್ಥಿಕತೆಯನ್ನು ನಿಭಾಯಿಸುವುದು ಅನಿವಾರ್ಯವಾಗಿದೆ. ಇದನ್ನು ಸುಸ್ಥಿರವಾದ ಕನಿಷ್ಠ ಸಂಪನ್ಮೂಲಗಳನ್ನು ಬಳಸಿ ಸ್ಥಳೀಯವಾಗಿ ತಯಾರಿಸಲಾದ ಉತ್ಪನ್ನಗಳು ಮತ್ತು ಸರಕುಗಳನ್ನು ಪ್ರೋತ್ಸಾಹಿಸುವುದರ ಮೂಲಕ ಸಾಧಿಸಬಹುದು.

ಶುದ್ಧ ನೀರನ್ನು ಒದಗಿಸುವ ದಿಸೆಯಲ್ಲಿ ಪ್ರತೀ ಮನೆಗೂ ಕೊಳವೆ ನೀರಿನ ಪೂರೈಕೆ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಈ ಉದ್ದೇಶ ಸಂಪೂರ್ಣವಾಗಿ ಸಾಕಾರಗೊಳ್ಳುವವರೆಗೂ ನವೀನ ರೀತಿಯ ನೀರಿನ ಉದ್ದಿಮೆಗಳು ಈ ಅಂತರವನ್ನು ಬೆಸೆಯುತ್ತಿವೆ. ದೇಶದಾದ್ಯಂತ ಅನೇಕ ರಾಜ್ಯಗಳು ‘ನೀರಿನ ಎಟಿ‌ಎಂ’ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿವೆ. ಸಾಮಾನ್ಯ ನಾಗರಿಕರಿಗೆ, ವಿಶೇಷವಾಗಿ ಆರ್ಥಿಕವಾಗಿ ಹಿ೦ದುಳಿದ ಜನರು ಅತ್ಯಲ್ಪ ಬೆಲೆಯಲ್ಲಿ ಶುದ್ಧ ನೀರನ್ನು ಪಡೆಯುವ ವ್ಯವಸ್ಥೆ ಇದಾಗಿದೆ. ನಮ್ಮ ರಾಜ್ಯದಾದ್ಯ೦ತ ಕೂಡ ಈ ಘಟಕಗಳನ್ನು ಎಲ್ಲೆಡೆ ಕಾಣಬಹುದು.

ದೇಶದಾದ್ಯಂತ ಪುರಸಭೆಗಳ ಸಹಭಾಗಿತ್ವದಲ್ಲಿ ನೀರಿನ ಎಟಿ‌ಎಂಗಳ ಜೊತೆಗೆ ಜಲ ಜ್ಞಾನ ಸಂಪನ್ಮೂಲ ಕೇಂದ್ರಗಳು ಅನೇಕ ನಗರಗಳಲ್ಲಿ ತಲೆಯೆತ್ತಿವೆ. ಇವು ಜ್ಞಾನ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಾ ಸಾರ್ವಜನಿಕ ಆರೋಗ್ಯವನ್ನು, ವಿಶೇಷವಾಗಿ ಸಾಂಕ್ರಾಮಿಕದ ಸಮಯದಲ್ಲಿ ಸುಧಾರಿಸುತ್ತಾ ನೀರು ಮತ್ತು ನೈರ್ಮಲ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಉಂಟುಮಾಡುತ್ತಿವೆ. ಈ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲರೂ, ಅಂದರೆ ನಾಗರಿಕರು, ನೀರು ಸರಬರಾಜು ಅಧಿಕಾರಿಗಳು, ಸ್ವಯ೦ ಸೇವಾ ಸ೦ಸ್ಥೆಗಳು ನೀರಿಗೆ ಸಂಬಂಧಿಸಿದ ತಮ್ಮ ಕುಂದು ಕೊರತೆ ಹಂಚಿಕೊಳ್ಳಲು, ಚರ್ಚಿಸಲು ಮತ್ತುಪರಿಹಾರಗಳನ್ನು ಕಂಡುಕೊಳ್ಳಲು ಒಟ್ಟಾರೆಯಾಗಿ ಕೈ
ಜೋಡಿಸುತ್ತಿದ್ದಾರೆ. ನೀರಿನ ಬಗ್ಗೆ ಸಾರ್ವಜನಿಕ ಪ್ರಜ್ಞೆ ಯನ್ನು ಹೆಚ್ಚಿಸಲು, ಸಮುದಾಯಗಳ ತೊಡಗಿಸಿಕೊಳ್ಳುವಿಕೆ ಮತ್ತು ಮುನ್ನಡೆಸುವಿಕೆಗೆ ಅಭಿಯಾನಗಳ ಅವಶ್ಯಕತೆ ಇದೆ.

ನೀರು ಮರುಬಳಕೆ ಮಾಡಬಹುದಾದ೦ತಹ ಸಂಪನ್ಮೂಲ. ಆದರೆ ಇದರ ಮರುಬಳಕೆ ಪ್ರತಿಯೊಬ್ಬ ಮನುಷ್ಯ ವಿಶೇಷವಾಗಿ, ಸ್ಥಿತಿವಂತರ ಇಚ್ಛಾಶಕ್ತಿಯ ಮೇಲೆ ನಿಂತಿದೆ. ಉದಾಹರಣೆಗೆ, ಬೆಂಗಳೂರಿನ ಕುಡಿಯುವ ನೀರಿನ ಭವಿಷ್ಯ ಚಿಂತಾಜನಕವಾಗಿದೆ. ಆದಾಗ್ಯೂ ಇದನ್ನು ಹೋಗಲಾಡಿಸಲು ಅನೇಕ ಸಕ್ರಿಯ ನಾಗರಿಕ ಸಮುದಾಯಗಳು ದಣಿವರಿಯದೆ ಕೆಲಸ ಮಾಡುತ್ತಿವೆ ಎಂಬುದು ಉಲ್ಲೇಖನೀಯ. ಎಸ್.ವಿಶ್ವನಾಥ್ (ಜೆನ್ ರೈನ್ ಮ್ಯಾನ್) ಅವರಂತಹ ವ್ಯಕ್ತಿಗಳು ಬೆಂಗಳೂರಿನ ನೀರಿನ ಬಿಕ್ಕಟ್ಟನ್ನು ಪರಿಹರಿಸುವ ಪ್ರಯತ್ನಕ್ಕೆ ಉದಾಹರಣೆಯಾಗಿದ್ದಾರೆ. ಅವರ ಮನೆ ಸಂಪೂರ್ಣವಾಗಿ ಮರುಬಳಕೆಯ ಮಳೆನೀರಿನಿಂದ ನಡೆಯುತ್ತದೆ. ಅನೇಕ ವರ್ಷಗಳಿ೦ದ ನೀರಿಗಾಗಿ ಹಣ ಪಾವತಿಸಿಲ್ಲದ ಅವರು ಈ ಸಂಪನ್ಮೂಲವನ್ನು ಜನರಿಗೆ ತಲುಪಿಸಲು, ಅದನ್ನು ಸಂರಕ್ಷಿಸಲು ಅರಿವು ಮೂಡಿಸುತ್ತಿದ್ದಾರೆ.

ಸಾಂಪ್ರದಾಯಿಕ ನೀರಿನ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಬೆಂಗಳೂರಿನಾದ್ಯಂತ ಹಲವಾರು ಅಪಾರ್ಟ್‌ಮೆಂಟ್‌ಗಳು ದೊಡ್ಡ ಪ್ರಮಾಣದಲ್ಲಿ ಮಳೆನೀರು ಸಂಗ್ರಹ ಮತ್ತು ಗ್ರೇ ವಾಟರ್ ಮರುಬಳಕೆಯನ್ನು ಕೈಗೊಳ್ಳಲು ಪ್ರಾರಂಭಿಸಿವೆ. ‘ಹಾಫ್ ಬಕೆಟ್ ಚಾಲೆಂಜ್‌’ನಂತಹ ಉಪಕ್ರಮಗಳು ಜನರ ಮನಸ್ಸು ಮತ್ತು ಅಭ್ಯಾಸಗಳಲ್ಲಿ ಭಾರಿ ಬದಲಾವಣೆಯನ್ನು ತರಲು ಸಹಾಯ ಮಾಡಿವೆ. ರೆಸ್ಟೊರೆಂಟ್‌ಗಳಲ್ಲಿ ನೀರನ್ನು ಸಂರಕ್ಷಿಸುವ ತ್ಯಾಜ್ಯ ಏಕೆ? ತಂಡದ ‘ಗ್ಲಾಸ್ ಹಾಫ್‌ ಫುಲ್’ ಎಂಬ ಕಾರ್ಯಾಚರಣೆ 2019ರಲ್ಲಿ ವೈರಲ್ ಆಗಿದ್ದಲ್ಲದೆ ‘ನ್ಯಾಷನಲ್ ರೆಸ್ಟೊರೆ೦ಟ್ ಅಸೋಸಿಯೇಶನ್ ಆಫ್‌ ಇಂಡಿಯಾ’ದ ಸಹಕಾರದೊಂದಿಗೆ ತನ್ನ ಪ್ರಭಾವವನ್ನು ಮುಂದುವರಿಸಿದೆ. ಕೇವಲ 30 ರೆಸ್ಟೊರೆಂಟ್‌ಗಳೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮ ಇದೀಗ 5 ಲಕ್ಷಕ್ಕೂ ಹೆಚ್ಚು ರೆಸ್ಟೊರೆಂಟ್‌ಗಳನ್ನು ತಲುಪಿದೆ.

ಭಾರತದಲ್ಲಿ ನಿರಂತರವಾಗಿ ಬೋರ್‌ವೆಲ್‌ಗಳನ್ನು ಕೊರೆಯುವ ಮೂಲಕ ಪಟ್ಟುಬಿಡದೆ ಅಂತರ್ಜಲದ ‘ಗಣಿಗಾರಿಕೆ’ ಮಾಡುತ್ತಿದ್ದೇವೆ ಅಂದರೆ ತಪ್ಪಾಗಲಾರದು. ಏಕೆಂದರೆ ಈ ಸಂಪನ್ಮೂಲವನ್ನು ಪುನಃ ತುಂಬಿಸಲು ನಾವು ಏನೂ ಮಾಡುತ್ತಿಲ್ಲ. ವೇಗವಾಗಿ ಕ್ಷೀಣಿಸುತ್ತಿರುವ ಅಂತರ್ಜಲ ಸಂಪನ್ಮೂಲವು ನಮ್ಮ ಕೃಷಿಕೇಂದ್ರಿತ ಆರ್ಥಿಕತೆಗೆ ನಿರ್ಣಾಯಕವಾಗಿದೆ. ನೀರನ್ನು ಉಳಿಸಿಕೊಳ್ಳುವುದರ ಜೊತೆಗೆ ಪುನರ್ಭರ್ತಿ ಮಾಡಬೇಕಾದ ಅವಶ್ಯಕತೆ ಇದೆ. ಅದಕ್ಕೆ ನಗರಗಳು ತಮ್ಮನ್ನು ಸ್ಪಂಜಿನ ನಗರಗಳಾಗಿ ಪರಿವರ್ತಿಸಬಹುದು ಎಂದು ಜರ್ಮನಿಯ ನಗರ ಬರ್ಲಿನ್ ತೋರಿಸಿದೆ. ಆದರೆ ನೀರಿನ ಹಸಿವಿನಿಂದ ಬಳಲುತ್ತಿರುವ ನಗರಗಳನ್ನು ಸ್ಪಂಜಿನ ನಗರಗಳನ್ನಾಗಿ ನಾವು ಹೇಗೆ ಪರಿವರ್ತಿಸಬಹುದು?

ಚೆನ್ನೈ ಮತ್ತು ಶಿಮ್ಲಾದ ನೀರಿನ ಕೊರತೆಯ ಪರಿ ಸ್ಥಿತಿಯ ಚಿತ್ರಗಳು ಮತ್ತು ನೆನಪುಗಳು ಇನ್ನೂ ಮಾಸಿಲ್ಲ. ಪರಿಸ್ಥಿತಿಯನ್ನು ನಿರ್ಲಕ್ಷಿಸಲು, ಎಲ್ಲವೂ ಸರಿಯಾಗಿದೆ ಎನ್ನುವ ಅಸಡ್ಡೆ ಅಥವಾ ಈ ಸಮಸ್ಯೆಯನ್ನು ಇನ್ನೊಬ್ಬರು ಬಗೆಹರಿಸುತ್ತಾರೆ ಎಂದು ಕೈಕಟ್ಟಿ ಕೂಡಲು ಸಾಧ್ಯವಿಲ್ಲ. ಈ ವಿಶ್ವ ಜಲ ದಿನದ೦ದು (ಮಾರ್ಚ್‌ 22) ನಾವು ಒಗ್ಗೂಡಿ ಸಮರೋಪಾದಿಯಲ್ಲಿ ಈ ಸ೦ಪನ್ಮೂಲವನ್ನು ಉಳಿಸಲು ಪಣ ತೊಡಬೇಕಿದೆ, ಕಾರ್ಯಪ್ರವೃತ್ತರಾಗಬೇಕಿದೆ.

ಲೇಖಕರು –ವೆಂಕಿ ರಾಘವೇಂದ್ರ, ಗರ್ವಿತಾ ಗುಲಾಟಿ, ಭಾರತಿ ಮಣೂರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT