ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ನಾಮಬಲದಿಂದ ಗೆಲ್ಲಬೇಕಾದ ಸವಾಲು

ಹಿಂದಿನ ಎರಡು ಚುನಾವಣೆಗಳಿಗಿಂತ ಈ ಬಾರಿ ವಿಭಿನ್ನ ಸ್ಥಿತಿ ಎದುರಿಸುತ್ತಿದ್ದಾರೆ ಮೋದಿ
Published 3 ಮೇ 2024, 0:46 IST
Last Updated 3 ಮೇ 2024, 0:46 IST
ಅಕ್ಷರ ಗಾತ್ರ

‘ಸಾಹೇಬರು ಹೆದರಿದ್ದಾರೆ’ ಎನ್ನುವುದು ಬರೀ ಚುನಾವಣಾ ಪ್ರಚಾರದ ಜನಪ್ರಿಯ ಹಾಡಿನ ಸಾಲುಗಳೆಂದು ತಳ್ಳಿಹಾಕಬೇಕಾಗಿಲ್ಲ. ‘ಸಾಹೇಬರ’ ಇತ್ತೀಚಿನ ಭಾಷಣಗಳಲ್ಲಿಯೇ ಈ ಹೆದರಿಕೆಯ ಸುಳಿವು ಇದೆ. ‘ಸಾಹೇಬರು’ ಇದ್ದಕ್ಕಿದ್ದಹಾಗೆ ಮೋದಿ ಗ್ಯಾರಂಟಿಯ ‘ವಿಕಾಸ ಪುರುಷ’ನ ಅವತಾರವನ್ನು ಕಳಚಿ ಪಕ್ಕಕ್ಕಿಟ್ಟು, ಕೋಮುವಾದಿ ಅಜೆಂಡಾದ ‘ಹಿಂದೂ ಹೃದಯ ಸಾಮ್ರಾಟ’ನ ಅವತಾರದಲ್ಲಿ ಕಾಣಿಸಿಕೊಂಡಿ
ರುವುದಕ್ಕೆ ಈ ಹೆದರಿಕೆಯೇ ಕಾರಣ. ಹೀಗೆ ಅಂದಮಾತ್ರಕ್ಕೆ ಹೆದರಿರುವ ‘ಸಾಹೇಬರು’ ಖಂಡಿತ ಸೋಲುತ್ತಾರೆ ಎನ್ನುವ ಷರಾವನ್ನು ಈಗಲೇ ಬರೆಯಬೇಕಾಗಿಲ್ಲ.

ಹತ್ತು ವರ್ಷಗಳ ಆಡಳಿತ ವಿರೋಧಿ ಅಲೆಯೊಂದೇ ಈ ಹೆದರಿಕೆಗೆ ಕಾರಣ ಅಲ್ಲ. ಹಿಂದಿನ ಎರಡು ಚುನಾವಣೆಗಳಿಗೆ ಹೋಲಿಸಿದರೆ ಇದೇ ಮೊದಲ ಬಾರಿ ‘ಸಾಹೇಬರು’ ನರೇಂದ್ರ ದಾಮೋದರದಾಸ್ ಮೋದಿ ಎನ್ನುವ ತಮ್ಮ ನಾಮಬಲದಿಂದಲೇ ಚುನಾವಣೆಯನ್ನು ಗೆಲ್ಲಬೇಕಾದ ಸವಾಲನ್ನು ಎದುರಿಸುತ್ತಿದ್ದಾರೆ. 2014 ಮತ್ತು 2019ರಲ್ಲಿ ನಡೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯ ಗೆಲುವಿಗೆ ‘ಮೋದಿ ಮೋಡಿ’, ‘ಮೋದಿ ಮ್ಯಾಜಿಕ್’ ಕಾರಣ ಎಂದು ಅವರ ಪ್ರೊಪಗಾಂಡ ತಂಡ ಬಿಂಬಿಸಿ ಯಶಸ್ಸು ಕಂಡರೂ ಆ ಗೆಲುವಿಗೆ ಮೋದಿ ನಾಮಬಲ ಒಂದೇ ಕಾರಣ ಆಗಿರಲಿಲ್ಲ.

2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರೇ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿದ್ದು ನಿಜವಾದರೂ ಆಗಿನ ಗೆಲುವಿನಲ್ಲಿ ಆ ಚುನಾವಣೆಯ ಪೂರ್ವದಲ್ಲಿ ದೇಶದಾದ್ಯಂತ ಸಂಚಲನವನ್ನು ಉಂಟುಮಾಡಿದ್ದ ಎರಡು ಆಂದೋಲನಗಳ ಪಾತ್ರವೂ ಇತ್ತು. ಮೊದಲನೆಯದು, ಅಣ್ಣಾ ಹಜಾರೆ- ಅರವಿಂದ ಕೇಜ್ರಿವಾಲ್‌ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರುದ್ಧದ ಆಂದೋಲನ. ಎರಡನೆ
ಯದು, ನಿರ್ಭಯಾ ಅತ್ಯಾಚಾರ ವಿರುದ್ಧದ ಆಂದೋಲನ.

ಈ ಎರಡು ಆಂದೋಲನಗಳು ಪಕ್ಷಾತೀತವಾಗಿ ನಡೆದಿದ್ದವು ಎಂದು ಮೇಲ್ನೋಟಕ್ಕೆ ಬಿಂಬಿತವಾಗಿದ್ದರೂ ಇವುಗಳಿಗೆ ಸಂಘ ಪರಿವಾರ ಆರ್ಥಿಕ ಮತ್ತು ಮಾನವ ಸಂಪನ್ಮೂಲವನ್ನು ವ್ಯವಸ್ಥಿತವಾಗಿ ಒದಗಿಸಿದ್ದು ಈಗ ಗುಟ್ಟಾಗಿ ಉಳಿದಿಲ್ಲ. ಈ ಕಾರಣದಿಂದಾಗಿಯೇ ಈ ಆಂದೋಲನಗಳ ಯಶಸ್ಸನ್ನು ಬಹಳ ಸುಲಭವಾಗಿ ರಾಜಕೀಯವಾಗಿ ಬಳಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಯಿತು. ಈ ಬೆಳವಣಿಗೆಗಳಲ್ಲಿ ತನ್ನ ಕನಸನ್ನು ನನಸು ಮಾಡುವ ಅವಕಾಶವನ್ನು ಕಂಡ ನರೇಂದ್ರ ಮೋದಿಯವರಿಗೆ ದೆಹಲಿ ಹಾದಿಯನ್ನು ಸುಗಮ ಮಾಡಿಕೊಟ್ಟದ್ದು ಲಾಲ್ ಕೃಷ್ಣ ಅಡ್ವಾಣಿ ಮತ್ತು ಅವರ ಶಿಷ್ಯರ ತಂಡ. ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು, ಸುಷ್ಮಾ ಸ್ವರಾಜ್ ಮತ್ತು ಅನಂತಕುಮಾರ್ ಅವರನ್ನೊಳಗೊಂಡ ಅಡ್ವಾಣಿ ಶಿಷ್ಯ ಬಳಗವನ್ನು ‘ದೆಹಲಿ–4’ ಎಂದು ಆ ಕಾಲದಲ್ಲಿ ಕರೆಯಲಾಗುತ್ತಿತ್ತು. ತಾನಲ್ಲದಿದ್ದರೆ ತನ್ನ ಶಿಷ್ಯ ಎಂಬ ತೀರ್ಮಾನಕ್ಕೆ ಬಂದಿದ್ದ ಅಡ್ವಾಣಿಯವರ ಬೆನ್ನಿಗೆ ಈ ದೆಹಲಿ–4 ತಂಡ ನಿಂತಿತ್ತು.

ಪಕ್ಷದೊಳಗೆ ಮೋದಿಯವರಿಗೆ ಯಾವುದೇ ವಿರೋಧ ಹುಟ್ಟದಂತೆ ಕಾಪಾಡಿ ಅವರು ಪ್ರಧಾನಿ ಪಟ್ಟದಲ್ಲಿ ಕೂರಲು ಸಹಕರಿಸಿದ್ದ ಅಡ್ವಾಣಿ ಮತ್ತು ಅವರ ಶಿಷ್ಯರ ತಂಡದ ಗತಿ ಏನಾಯಿತು ಎನ್ನುವ ವಿವರ ದೇಶದ ಮುಂದೆ ಇದೆ. ಮೋದಿಯವರು ಅಡ್ವಾಣಿಯವರನ್ನು ವಾನಪ್ರಸ್ಥಾಶ್ರಮಕ್ಕೆ ಕಳಿಸಿದರು, ವೆಂಕಯ್ಯ ನಾಯ್ಡು ಅವರನ್ನು ಉಪರಾಷ್ಟ್ರಪತಿ ಮಾಡಿದರು, ಜೇಟ್ಲಿ, ಸುಷ್ಮಾ ಮತ್ತು ಅನಂತಕುಮಾರ್ ಅವರು ಇಹಲೋಕವನ್ನೇ ತ್ಯಜಿಸಿ ಹೋದರು. ಮೋದಿ ಹಾದಿಯಲ್ಲಿ ಎದುರಾಳಿಗಳೇ ಇಲ್ಲ.

2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಒಂದು ಪ್ರಬಲವಾದ ಆಡಳಿತ ವಿರೋಧಿ ಅಲೆ ಇತ್ತು. ನೋಟು ರದ್ದತಿಯಿಂದ ನೊಂದ ಜನರ ವಿರೋಧವೂ ಇತ್ತು. ಆಗಲೂ ಮೋದಿ ನಾಮಬಲದ ಕುದುರೆ ಓಡುತ್ತಿತ್ತಾದರೂ ಅದರ ಬಲದಿಂದಲೇ ದೆಹಲಿಯಲ್ಲಿ ಗದ್ದುಗೆ ಏರುವ ವಿಶ್ವಾಸ ನರೇಂದ್ರ ಮೋದಿಯವರಿಗೂ ಇರಲಿಲ್ಲ. ಲೋಕಸಭಾ ಚುನಾವಣೆಯ ಮೂರು ತಿಂಗಳ ಮೊದಲು ಪುಲ್ವಾಮದಲ್ಲಿ ಸೈನಿಕರನ್ನು ಕೊಂಡೊಯ್ಯುತ್ತಿದ್ದ ವಾಹನಗಳ ಮೇಲೆ ನಡೆದ ದಾಳಿಯು ದೇಶದ ರಾಜಕೀಯ ಚರ್ಚೆಯ ದಿಕ್ಕನ್ನೇ ಬದಲಾಯಿಸಿಬಿಟ್ಟಿತ್ತು. ಬಿಜೆಪಿಗೆ ಅತಿಪ್ರಿಯವಾದ ‘ಭಾರತ-ಪಾಕಿಸ್ತಾನ’, ‘ದೇಶ ಭಕ್ತಿ-ದೇಶದ್ರೋಹ’ದ ಕಥನಗಳು ಚುನಾವಣಾ ಪ್ರಚಾರದ ಪ್ರಮುಖ ಅಸ್ತ್ರಗಳಾಗಿದ್ದವು. ನಿರೀಕ್ಷಿಸಿದಂತೆ ಬಿಜೆಪಿ ಮುನ್ನೂರರ ಗಡಿ ದಾಟಿತ್ತು.

2024ರ ಲೋಕಸಭಾ ಚುನಾವಣೆಯ ಇಲ್ಲಿಯವರೆಗಿನ ಪ್ರಚಾರವನ್ನು ಗಮನಿಸಿದರೆ, ಮೋದಿಯವರ ನಾಮಬಲದ ಹೊರತಾಗಿ ಬೇರೆ ಯಾವ ಹೊಸ ವಿಷಯಗಳೂ ಬಿಜೆಪಿಯನ್ನು ಮುನ್ನೂರರ ಗಡಿ ಸಮೀಪವೂ ಕೊಂಡೊಯ್ಯುತ್ತಿರುವಂತೆ ಕಾಣುತ್ತಿಲ್ಲ. ಇದರಿಂದಾಗಿ ಇದೇ ಮೊದಲ ಬಾರಿ ಮೋದಿಯವರು ಬರೀ ತಮ್ಮ ನಾಮಬಲದಿಂದಲೇ ಚುನಾವಣೆಯನ್ನು ಗೆಲ್ಲಬೇಕಾದ ಹೊಸ ಸವಾಲನ್ನು ಎದುರಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ರಾಮಮಂದಿರ ನಿರ್ಮಾಣದ ಸಾಧನೆಯೇ ಚುನಾವಣೆಯನ್ನು ಗೆಲ್ಲಿಸಿಕೊಡಲಿದೆ ಎಂಬ ಪ್ರಚಾರವನ್ನು ಬಿಜೆಪಿಯೇ ನಂಬುವ ಸ್ಥಿತಿಯಲ್ಲಿಲ್ಲ.

ಹಿಂದುತ್ವ ಈಗಲೂ ಬಿಜೆಪಿಯ ಪ್ರಮುಖ ಅಸ್ತ್ರವೆನ್ನುವುದು ನಿಜ. ಆದರೆ ಈ ಹಿಂದುತ್ವಕ್ಕೆ ಎರಡು ಮುಖಗಳಿವೆ. ಒಂದು, ತಥಾಕಥಿತ ಹಿಂದೂ ಸಂಸ್ಕೃತಿಯ ರಕ್ಷಣೆ. ಇನ್ನೊಂದು, ಮುಸ್ಲಿಮರ ಬಗೆಗಿನ ದ್ವೇಷ. ಈ ಚುನಾವಣೆಯಲ್ಲಿ ರಾಮಮಂದಿರ ನಿರ್ಮಾಣದ ಸಾಧನೆಯೂ ಸೇರಿದಂತೆ ಹಿಂದೂ ಸಂಸ್ಕೃತಿ ರಕ್ಷಣೆಯ ಹೇಳಿಕೆಗಳ ಬಗ್ಗೆ ಜನ ನಿರಾಸಕ್ತರಾಗಿದ್ದಾರೆ. ಆದರೆ ಮುಸ್ಲಿಂ ದ್ವೇಷದ ಮಾತುಗಳಿಗೆ ಕಿವಿಯಾಗುವ ಮತ್ತು ಅದರಿಂದ ಪ್ರಚೋದನೆಗೆ ಒಳಗಾಗುವವರ ಸಂಖ್ಯೆ ಕಡಿಮೆಯೇನಿಲ್ಲ.

ನರೇಂದ್ರ ಮೋದಿಯವರು ಹತ್ತು ವರ್ಷಗಳ ಆಡಳಿತದಲ್ಲಿ ವಿಫಲರಾಗಿರಬಹುದು. ಆದರೆ ಅವರು ಈಗಲೂ ಮುಸ್ಲಿಮರ ವಿಷಯದಲ್ಲಿ ರಾಜಿಯಾಗದ 56 ಇಂಚಿನ ಎದೆಯ ಹಿಂದೂ ಹೃದಯ ಸಾಮ್ರಾಟ ಎಂದು ನಂಬಿದವರಿದ್ದಾರೆ.

‘ಮೋದಿ ಗ್ಯಾರಂಟಿ’ ಎಂಬ ಅಭಿವೃದ್ಧಿಯ ಅಜೆಂಡಾಕ್ಕೆ ಒತ್ತು ನೀಡಿ ಪ್ರಚಾರ ಶುರು ಮಾಡಿದರೂ ಅದಕ್ಕೆ ನಿರೀಕ್ಷಿತ ಪ್ರತಿಸ್ಪಂದನೆ ಬಾರದಿರುವುದು ಮೋದಿಯವರಿಗೆ ಬಹಳ ಬೇಗ ಅರಿವಾಗಿದೆ. ಕಾರ್ಯತಂತ್ರ ಬದಲಾವಣೆ ಮಾಡುವುದರಲ್ಲಿ ನಿಸ್ಸೀಮರಾಗಿರುವ ಮೋದಿ ಅವರು ದಿಢೀರನೆ ‘ಹಿಂದೂ ಹೃದಯ ಸಾಮ್ರಾಟ’ನ ಅವತಾರ ತಾಳಿದರು. ಅವರ ಇತ್ತೀಚಿನ ಭಾಷಣದಲ್ಲಿ ಪ್ರಸ್ತಾಪವಾದ ಮುಸ್ಲಿಂ ಲೀಗ್ ಪ್ರಣಾಳಿಕೆ, ಮುಸ್ಲಿಂ ಮೀಸಲಾತಿ, ಮಂಗಳಸೂತ್ರ, ಮುಸ್ಲಿಮರಿಗೆ ಹಿಂದೂಗಳ ಆಸ್ತಿ ಹಂಚಿಕೆ ಎಂಬೆಲ್ಲ ವಿಷಯಗಳೆಲ್ಲವೂ ಕೋಮುದ್ವೇಷದ ಸಿಡಿಗುಂಡುಗಳೇ ಆಗಿವೆ.

ಇಂತಹ ಪ್ರಚೋದನಕಾರಿ ಭಾಷಣಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿ ಸುದ್ದಿಯಾದರೂ ಅದರಿಂದಾಗಿ ಹಿಂದಿನ ದಿನಗಳಂತೆ ಹಿಂದುತ್ವದ ಪರವಾದ ಅಲೆ ಏಳದೇ ಇರುವುದು ಮೋದಿಯವರನ್ನು ಚಿಂತೆಗೀಡು ಮಾಡಿದಂತೆ ಕಾಣುತ್ತಿದೆ. ತಳಮಟ್ಟದಲ್ಲಿ ಮೋದಿ ಎಂಬ ಹಿಂದೂ ಹೃದಯ ಸಾಮ್ರಾಟನನ್ನು ಮನೆಮನೆಗೆ ಕೊಂಡೊಯ್ದು ಮೆರೆಸುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರ ನಿರುತ್ಸಾಹವೂ ಇದಕ್ಕೆ ಕಾರಣ. ಸಂಘ ಪರಿವಾರದ ಜಾಲವು ಆಳ-ಅಗಲಕ್ಕೆ ಹರಡಿಕೊಂಡಿರುವ ಕರಾವಳಿಯ ಜಿಲ್ಲೆಗಳಲ್ಲಿಯೇ ಆರ್‌ಎಸ್‌ಎಸ್‌ನ ಗೈರುಹಾಜರಿ ಜನ ಗಮನಿಸುವಷ್ಟು ಸ್ಪಷ್ಟವಾಗಿ ಕಂಡಿದೆ.

ಆರ್‌ಎಸ್‌ಎಸ್ ಇತಿಹಾಸ ತಿಳಿದವರಿಗೆ ಅದರ ಈ ನಡೆ ಅಚ್ಚರಿ ಉಂಟುಮಾಡಲಾರದು. ತನ್ನ ರಾಜಕೀಯ ಮುಖವಾದ ಬಿಜೆಪಿಯ ನಾಯಕರು ಸಂಘವನ್ನು ಮೀರಿ ಬೆಳೆಯುವುದನ್ನು ಆರ್‌ಎಸ್‌ಎಸ್ ಇಷ್ಟಪಡುವುದಿಲ್ಲ. ಆರ್‌ಎಸ್‌ಎಸ್‌ನ ಸರಸಂಘಚಾಲಕರಾಗಿದ್ದ ಕೆ.ಎಸ್.ಸುದರ್ಶನ್  ಅವರು ವಾಜಪೇಯಿ ಮತ್ತು ಅಡ್ವಾಣಿ
ಅವರಂತಹವರಿಗೆ ರಾಜಕೀಯದಿಂದ ನಿವೃತ್ತರಾಗಲು ಬಹಿರಂಗವಾಗಿ ಫರ್ಮಾನು ಹೊರಡಿಸಿದ್ದರು. ನರೇಂದ್ರ ಮೋದಿಯವರು ತಮ್ಮ ಅಂಕೆ ಮೀರಿ ಬೆಳೆಯುತ್ತಿರುವುದನ್ನು ಆರ್‌ಎಸ್‌ಎಸ್ ಗಮನಿಸುತ್ತಲೇ ಬಂದಿದೆ. ಆದರೆ ರಾಮಮಂದಿರ ನಿರ್ಮಾಣದ ಯಶಸ್ಸಿನ ಕಿರೀಟವನ್ನು ಮೋದಿ ತಾವೊಬ್ಬರೇ ಧರಿಸಿ ಮೆರೆದಾಡಲು ಶುರುವಾದ ದಿನಗಳಿಂದ ಆರ್‌ಎಸ್‌ಎಸ್ ಜಾಗೃತವಾಗಿದೆ. ಒಂದೊಮ್ಮೆ ಭಾರಿ ಬಹುಮತದಿಂದ ಪುನರಾಯ್ಕೆಯಾದರೆ ಮೋದಿ ತಮ್ಮ ಕೈಮೀರಿ ಹೋಗುತ್ತಾರೆ, ಆದ್ದರಿಂದ ಅವರನ್ನು ತನ್ನ ಅಂಕೆಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವಷ್ಟು ಸ್ಥಾನಗಳನ್ನು ಬಿಜೆಪಿ ಪಡೆದರೆ ಸಾಕು ಎನ್ನುವ ಅಭಿಪ್ರಾಯ ಆರ್‌ಎಸ್‌ಎಸ್ ನಾಯಕರಲ್ಲಿದೆ ಎಂದು ಹೇಳಲಾಗಿದೆ.

ತನ್ನ ನಾಮಬಲದಿಂದಲೇ ಗೆಲ್ಲಬೇಕಾಗಿರುವ ಸವಾಲನ್ನು ಎದುರಿಸುತ್ತಿರುವ ‘ಸಾಹೇಬರು’ ಆರ್‌ಎಸ್‌ಎಸ್‌ನ ತಣ್ಣನೆಯ ಬಂಡಾಯದಿಂದಾಗಿ ಇನ್ನಷ್ಟು ಹೆದರಿದಂತೆ ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT