ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಕಾಡಿಗೂ ಇದೆ ಸಂವಿಧಾನ!

ಹಸಿರು ಕಂಗೊಳಿಸುವಂತೆ ಮಾಡುವ ಕಾರ್ಯಯೋಜನೆ ರೂಪುಗೊಳ್ಳಬೇಕಿದೆ
Published 20 ಡಿಸೆಂಬರ್ 2023, 23:30 IST
Last Updated 20 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಅ.ನ.ಯಲ್ಲಪ್ಪ ರೆಡ್ಡಿ

ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಕೆನರಾ ಸರ್ಕಲ್ ಎಂದು ಕರೆಯಲಾಗುತ್ತಿದ್ದ ಉತ್ತರ ಕನ್ನಡ ಜಿಲ್ಲೆಯು ಮುಂಬೈ ಪ್ರೆಸಿಡೆನ್ಸಿಗೆ ಸೇರಿತ್ತು. ಇದು, ಸಹ್ಯಾದ್ರಿ ಅರಣ್ಯಶ್ರೇಣಿಯ ಬಹು ಅಮೂಲ್ಯ ವನ್ಯಸಂಪತ್ತುಳ್ಳ ಭೂಭಾಗ. ಇಲ್ಲಿನ ಕಾಡುಗಳಲ್ಲಿದ್ದ ಮರಗಳನ್ನು ಕಡಿದು ಸಿದ್ಧಪಡಿಸಿದ ಸೌದೆಯನ್ನು ಮುಂಬೈ ಸೇರಿದಂತೆ ಅನೇಕ ನಗರ, ಪಟ್ಟಣಗಳಿಗೆ ರವಾನಿಸಲಾಗುತ್ತಿತ್ತು. ಬ್ರಿಟಿಷರು ಕೆನರಾ ಪ್ರಿವಿಲೇಜಸ್ ಆ್ಯಕ್ಟ್‌ನಡಿ ಈ ಸೌದೆಗೆ ರಿಯಾಯಿತಿ ದರ ನಿಗದಿಪಡಿಸಿ, ಈ ಸಂಬಂಧದ ಖರ್ಚು ಸರಿದೂಗಿಸಲು ಹೊಂದಾಣಿಕೆ ಸೂತ್ರವೊಂದನ್ನು ರೂಪಿಸಿದ್ದರು. ಇದೇ ಕ್ರಮ ಮುಂದುವರಿದು, ಆ ಭಾಗದಲ್ಲಿ ಕೃಷಿ ಮಾಡುವವರಿಗೆ ಸೊಪ್ಪಿನಬೆಟ್ಟವನ್ನು ಬಳಸಿಕೊಳ್ಳುವ ವಿಶೇಷ ಹಕ್ಕೂ ಸಿಕ್ಕಿತು.

ಆದರೆ, ಸೌದೆಗಾಗಿ ಈ ರೀತಿ ಮರಗಳನ್ನು ಕಡಿಯುತ್ತಿದ್ದುದರಿಂದ ಸಹ್ಯಾದ್ರಿ ಪರ್ವತಶ್ರೇಣಿಯ ಲಕ್ಷಾಂತರ ಎಕರೆ ಕಾಡು ಬೆತ್ತಲಾಗುತ್ತಿತ್ತು. ಅಷ್ಟಾದರೂ ಗುತ್ತಿಗೆದಾರರಿಗೆ ಕಾಡು ಬೋಳಿಸುವ ಗುತ್ತಿಗೆಯನ್ನು ಸರ್ಕಾರ ನಿರಂತರವಾಗಿ ಕೊಡುತ್ತಲೇ ಇತ್ತು. 1984ರಲ್ಲಿ ನಾನು ಕೆನರಾ ಸರ್ಕಲ್ಲಿಗೆ ಅರಣ್ಯ ಸಂರಕ್ಷಣಾಧಿ
ಕಾರಿಯಾಗಿ ನಿಯೋಜನೆಗೊಂಡಾಗ, ಈ ಭಾಗದಲ್ಲಿ ಮತ್ತೆ ಹಚ್ಚಹಸಿರು ನಳನಳಿಸುವಂತೆ ಮಾಡಬೇಕೆಂಬ ಸಂಕಲ್ಪ ತೊಟ್ಟೆ. ಅದರಂತೆ, ಬೋಳು ಬೆಟ್ಟಗುಡ್ಡಗಳಲ್ಲಿ ವಿವಿಧ ಜಾತಿಯ ಮರಗಳನ್ನು ಬೆಳೆಸುವ ಯೋಜನೆಗೆ (ಮಲ್ಟಿಪಲ್‌ ಸ್ಪೀಷೀಸ್‌ ಪ್ಲ್ಯಾಂಟೇಷನ್‌– ಎಂಎಸ್‌ಪಿ) ಚಾಲನೆ ನೀಡಲಾಯಿತು. ಕೆಲವೇ ವರ್ಷಗಳಲ್ಲಿ ಅಲ್ಲಿ ಮತ್ತೆ ಹಸಿರು ನಳನಳಿಸತೊಡಗಿತು. ಈ ಎಲ್ಲ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ, ಪರಿಸರ ಪ್ರಿಯರೂ ಆಗಿದ್ದ ಸಾಹಿತಿ ಶಿವರಾಮ ಕಾರಂತರು ನನಗೊಂದು ಪತ್ರ ಬರೆದು, ಖುದ್ದು ಸ್ಥಳಕ್ಕೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದರು. ಅದರಂತೆ ಒಂದು ದಿನ ನಾನು ಅವರನ್ನು ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಕಾಡುಗಳಿಗೆ ಕರೆದೊಯ್ದು, ಆಗಿರುವ ಹಾನಿ ಮತ್ತು ಅದನ್ನು ಸರಿಪಡಿಸಲು ಮಾಡಲಾಗಿರುವ ಪ್ರಯತ್ನಗಳನ್ನು ವಿವರಿಸಿದೆ. ಮುಂದೆ ಕಾರಂತರು ಬರೆದ ‘ನಮ್ಮೆಲ್ಲರಿಗೂ ಒಂದೇ ಭವಿಷ್ಯ’ ಎಂಬ ಪುಸ್ತಕದಲ್ಲಿ ಈ ಎಲ್ಲ ಉಲ್ಲೇಖಗಳೂ ಇವೆ.

ಹೀಗೆ ಸಹ್ಯಾದ್ರಿ ಅರಣ್ಯ ಪ್ರದೇಶದಲ್ಲಿ ಹಿಂದೆ ಅವ್ಯಾಹತವಾಗಿ ನಡೆದ ವನನಾಶದಿಂದ, ಆ ಭಾಗದಲ್ಲಿ ಹುಟ್ಟಿ ಹರಿಯುವ ಅನೇಕ ನದಿಗಳ ಮೂಲಗಳಿಗೆ ಹಾನಿಯಾಗಿದೆ. ಸಹ್ಯಾದ್ರಿ ಬೆಟ್ಟ ಸಾಲುಗಳಲ್ಲಿ ಸ್ಥಳೀಯವಾದ ಮತ್ತು ಬೇರೆಲ್ಲೂ ಕಾಣಸಿಗದ ಔಷಧೀಯ ಮಹತ್ವದ, ಪರಿಮಳಯುಕ್ತ ಸಸ್ಯಪ್ರಭೇದಗಳಿವೆ. ಅವುಗಳನ್ನು ಉಳಿಸಿ, ಬೆಳೆಸಿ ಸಂರಕ್ಷಿಸುವ ದಿಸೆಯಲ್ಲಿ ಪರಿಸರ ತಜ್ಞರು ಅನೇಕ ಪ್ರತಿಪಾದನೆಗಳನ್ನು ಮಾಡಿದ್ದಾರೆ. ನಾನು ಅರಣ್ಯ ಇಲಾಖೆಯ ಸಂಶೋಧನಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ, ಫ್ರಾನ್ಸಿಸ್ ಬುಕಾನಿನ್ ಎಂಬಾತ ಕೆನರಾ-ಮಲಬಾರ್ ಪ್ರಾಂತ್ಯಗಳಲ್ಲಿ ಪ್ರಯಾಣಿಸಿ, ಹಲವು ಸಂಗತಿಗಳನ್ನು ಪುಸ್ತಕವೊಂದರಲ್ಲಿ ದಾಖಲಿಸಿದ್ದಾನೆ. ಸಹ್ಯಾದ್ರಿ ಭಾಗದಲ್ಲಿ ಬೆಟ್ಟಗುಡ್ಡಗಳನ್ನು ಬೆತ್ತಲೆ ಮಾಡಿದ್ದರ ಪರಿಣಾಮವೇನು, ಹೇಗೆ ಜಲಮೂಲಗಳು ಬತ್ತಿಹೋದವು, ನೀರಿನ ಹರಿವನ್ನು ತಡೆದಿದ್ದರಿಂದಾದ ದುಷ್ಪರಿಣಾಮಗಳೇನು ಎಂಬುದರ ಜೊತೆಗೆ, ಅದೆಲ್ಲದರ ಪರಿಣಾಮ ಏನಾಗಲಿದೆ ಎಂಬ ಭವಿಷ್ಯವಾಣಿಯನ್ನೂ ಆತ ನುಡಿದಿದ್ದು, ಅದು ಎಚ್ಚರಿಕೆಯ ಕರೆಗಂಟೆಯಂತಿದೆ.

ದಶಕಗಳ ಅವಧಿಯಲ್ಲಿ ಈ ಭಾಗದಲ್ಲಿ ಪ್ರಗತಿಯ ಹೆಸರಿನಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಸಾಲು ಸಾಲು ಅಣೆಕಟ್ಟೆಗಳು ನಿರ್ಮಾಣವಾಗಿವೆ. ಅದಕ್ಕಾಗಿ ಅದೆಷ್ಟೋ ಕಾಡು ನಾಶವಾಗಿದೆ. ಹಠಾತ್ ಪ್ರವಾಹಗಳಿಂದ ಗುಡ್ಡಗಳು ಕುಸಿದು ಎಷ್ಟೋ ಜನ ಮಣ್ಣುಪಾಲಾಗಿದ್ದಾರೆ, ಕೃಷಿ ನಾಶವಾಗಿದೆ, ಜನಜೀವನ ಅಸ್ತವ್ಯಸ್ತವಾಗಿದೆ. ಆದರೆ ಆಗಿರುವ ಹಾನಿಯನ್ನು ಸರಿಪಡಿಸುವುದು ಹೇಗೆ ಎಂಬುದರ ಪರಿಕಲ್ಪನೆ ಮಾತ್ರ ನಮ್ಮಲ್ಲಿನ್ನೂ ಮೂಡಿಲ್ಲ.

ಡೊನಾಲ್ಡ್ ಐಯಾನ್ ಎಂಬ ಪರಿಸರತಜ್ಞ ಪ್ರಸ್ತುತ ಸಹ್ಯಾದ್ರಿಕಾಡು ಮತ್ತು ಕ್ಯಾಲಿಫೋರ್ನಿಯಾದ ಉಷ್ಣವಲಯದ ಕಾಡುಗಳಲ್ಲಿರುವ ಸಾಮ್ಯತೆಯ ಕುರಿತು ಅಧ್ಯಯನ ನಡೆಸುತ್ತಿದ್ದಾರೆ. ನಮ್ಮ ಎಂಎಸ್‌ಪಿ ಪ್ರಯೋಗ ಅವರ ಗಮನಸೆಳೆದಿದೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಈ ಪ್ರಯೋಗವನ್ನು 1.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾಡಲಾಗಿದೆ. ಇದೀಗ ಅದಕ್ಕೆ ಫುಲ್‍ಬ್ರೈಟ್ ಫೌಂಡೇಷನ್‌ನ ಅನುದಾನ ಪಡೆಯುವುದು ಕೂಡ ಸಾಧ್ಯವಾಗಿದೆ. ಈ ದಿಸೆಯಲ್ಲಿ ಸ್ಥಳೀಯ ಅರಣ್ಯಾಧಿಕಾರಿ ಸತೀಶ್ ಹೆಗಡೆ ಅವರ ನೆರವು ಗಮನಾರ್ಹವಾದದ್ದು.

1984ರಿಂದ 2023ರವರೆಗೆ ಕೆನರಾ ಅರಣ್ಯ ವಲಯದಲ್ಲಿ ದಶಕಗಳ ಕಾಲ ನಡೆದ ಎಲ್ಲ ವಿದ್ಯಮಾನಗಳ ಅಧ್ಯಯನ ನಡೆಸಿರುವ ಡೊನಾಲ್ಡ್, ಬೆತ್ತಲಾಗಿರುವ ಬೆಟ್ಟಗುಡ್ಡಗಳಲ್ಲಿ ಅಕೇಶಿಯಾವನ್ನು ಏಕವೃಕ್ಷ ಸಂತತಿಯ ರೂಪದಲ್ಲಿ ನೆಟ್ಟು ಬೆಳೆಸುವುದು ಮತ್ತು ಸ್ಥಳೀಯ ತಳಿಗಳಿಗೆ ಪ್ರಾಶಸ್ತ್ಯ ಕೊಡದಿರುವುದು ಸಮರ್ಪಕವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗಿರುವ ಮಣ್ಣುಸವಕಳಿ, ಮಣ್ಣಿನ ಗುಣಧರ್ಮ
ದಲ್ಲಾದ ಬದಲಾವಣೆ, ಮಳೆಯ ವ್ಯತ್ಯಯದಂತಹ ಅನೇಕ ಸಂಗತಿಗಳನ್ನು ವಿಶ್ಲೇಷಿಸಿದ್ದಾರೆ. ಆರ್ಥಿಕತೆ ಮತ್ತು ಪರಿಸರ ಎರಡನ್ನೂ ಗಮನದಲ್ಲಿಟ್ಟು ಸಂತುಲನೆ ಮಾಡಿ, ಹೇಗೆ ಮುನ್ನಡೆಯಬೇಕು ಎಂಬುದನ್ನು ವಿವರಿಸಿದ್ದಾರೆ. ಈ ರೀತಿ ಬೋಳಾದ ಬೆಟ್ಟಗುಡ್ಡಗಳಲ್ಲಿ ಕಾಡು ಬೆಳೆಸುವುದಕ್ಕೆ ಅರಣ್ಯ ಇಲಾಖೆ ಮೊದಲಿಗೆ ಸರ್ಕಾರದ ಅನುಮೋದನೆ ಯೊಂದಿಗೆ ಕ್ರಿಯಾ ಯೋಜನೆಯೊಂದನ್ನು ಸಿದ್ಧಪಡಿಸಿಕೊಳ್ಳಬೇಕು. ಸುಪ್ರೀಂ ಕೋರ್ಟ್‌ ಕೂಡ ಇದನ್ನೇ ಹೇಳಿದೆ.

ನೈಜವಾದ ಕಾಡು ಎಂದರೆ ಅಲ್ಲಿ ನಂದಿ, ಮತ್ತಿ, ತೇಗದಂತಹ ಗಟ್ಟಿಮುಟ್ಟಾದ ಮರಗಳು ಹೇರಳವಾಗಿರ ಬೇಕು. ಜೊತೆಗೆ ಸೀಗೆಕಾಯಿ, ಅಂಟುವಾಳದಂತಹ ಕಾಡು ಉತ್ಪನ್ನಗಳನ್ನು ಕೊಡುವ ವೃಕ್ಷ-ಸಸ್ಯ ಸಂತತಿಯೂ ಇರಬೇಕು. ಕಾಡಂಚಿನಲ್ಲಿ ವಾಸಿಸುವ ಬುಡಕಟ್ಟು ಸಮುದಾಯದವರಿಗೆ ಅದರಿಂದ ಉದ್ಯೋಗಾವಕಾಶ, ಆರ್ಥಿಕ ಅನುಕೂಲ ಸಿಗಬೇಕು, ಸರ್ಕಾರಕ್ಕೂ ವಿದೇಶಿ ವಿನಿಮಯ ಮೌಲ್ಯ ಸಿಗುವಂತಿರಬೇಕು. ಔಷಧೀಯ ಸಸ್ಯಗಳು, ಪರಿಮಳಯುಕ್ತ ಸಸ್ಯಗಳ ಭಂಡಾರ ಅಲ್ಲಿರಬೇಕು. ಇದೆಲ್ಲವೂ ಸಾಧ್ಯವಾಗುವುದು ಎಂಎಸ್‌ಪಿಯನ್ನು ಅಳವಡಿಸಿಕೊಂಡಾಗ ಮಾತ್ರ. ಸರ್ಕಾರಗಳು ವಿಶೇಷ ಆರ್ಥಿಕ ವಲಯಗಳಿಗೆ (ಎಸ್‌ಇಜಡ್‌) ಆದ್ಯತೆ ಕೊಡುವುದರ ಬದಲು, ಹೀಗೆ ಅರಣ್ಯ ಪ್ರದೇಶವನ್ನೇ ಆರ್ಥಿಕ ವರಮಾನ ತಂದುಕೊಡುವ ವಿಶೇಷ ವಲಯವನ್ನಾಗಿ ಪರಿವರ್ತಿಸುವ, ಕಾಡಿಗೆ ಜೀವ ತುಂಬುವ ಕೆಲಸವನ್ನು ಮಾಡಬೇಕು. ಸ್ಥಳೀಯರ ಜ್ಞಾನವನ್ನು ಸಕ್ರಿಯವಾಗಿ ಬಳಸಿಕೊಳ್ಳುವ ಕಾರ್ಯವೂ ಆಗಬೇಕು.

ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಡೊನಾಲ್ಡ್ ತಮ್ಮ ಸಂಶೋಧನೆಗೆ ಉತ್ತರ ಕನ್ನಡ ಜಿಲ್ಲೆಯ ತೆರಕನಹಳ್ಳಿಯನ್ನು ಆರಿಸಿಕೊಂಡಿದ್ದಾರೆ. ವಿಶೇಷತಃ ಹಳಿಯಾಳ, ಯಲ್ಲಾಪುರ, ಸಿದ್ಧಾಪುರ, ಶಿರಸಿ, ಕಾರವಾರ, ಭಟ್ಕಳ ಭಾಗದಲ್ಲಿ ಕಾಡಿದೆ. ಭೌಗೋಳಿಕವಾಗಿ ಬಹಳಷ್ಟು ಸಾಮ್ಯತೆಯೂ ಇದೆ. ಆದರೆ ಡೊನಾಲ್ಡ್ ಅವರು ಶಿರಸಿ ತಾಲ್ಲೂಕನ್ನೇ ಅಧ್ಯಯನಕ್ಕೆ ಆಯ್ದುಕೊಂಡದ್ದಕ್ಕೆ ಕಾರಣ, ಅಲ್ಲಿನ ಭೂಗುಣ. ಈ ಭಾಗದ ಮಣ್ಣು ಅತ್ಯಂತ ಫಲವತ್ತಾಗಿರುತ್ತದೆ. ಅದರಲ್ಲಿ ಕಬ್ಬಿಣ, ಮ್ಯಾಂಗನೀಸ್, ಕಾಪರ್, ಸತು ಎಲ್ಲವೂ ಇವೆ. ಹಿಂದೆ ಭೂಗರ್ಭಶಾಸ್ತ್ರಜ್ಞರು ಇಲ್ಲಿ ಚಿನ್ನದ ನಿಕ್ಷೇಪ ಇರುವುದನ್ನೂ ಗುರುತಿಸಿದ್ದರು. ಒಂದೊಮ್ಮೆ ಇಲ್ಲಿ ಚಿನ್ನದ ಗಣಿಗಾರಿಕೆ ಏನಾದರೂ ನಡೆದಿದ್ದರೆ, ಉತ್ತರ ಕನ್ನಡ ಜಿಲ್ಲೆ ಕೂಡ ಕೆಜಿಎಫ್‌ನಂತೆ ಬರಡಾಗುತ್ತಿತ್ತು. ಸದ್ಯ ಅದಾಗಿಲ್ಲ.

ಕಾಡು ಎಂಬುದು ಒಂದು ನಿಧಿ ಇದ್ದಂತೆ. ಕಾಡಿನ ಅಭಿವೃದ್ಧಿಗಾಗಿ ಸರ್ಕಾರ ಹೂಡಿಕೆ ಮಾಡಿದರೆ ನಷ್ಟ
ಆಗುವುದಿಲ್ಲ. ಉದ್ಯಮ, ಕಾರ್ಖಾನೆಗಳಲ್ಲಾದರೆ ಪ್ರತಿವರ್ಷ ಯಂತ್ರೋಪಕರಣಗಳ ಸವಕಳಿ ಆಗುತ್ತದೆ ಮತ್ತು ಅವುಗಳ ಮೌಲ್ಯ ಕುಗ್ಗುತ್ತಾ ಹೋಗುತ್ತದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಕಾಡು ವರ್ಷದಿಂದ ವರ್ಷಕ್ಕೆ ಬೆಳೆಯುತ್ತದೆ, ಮರಗಳ ಸುತ್ತಳತೆ ಹೆಚ್ಚುತ್ತಲೇ ಇರುತ್ತದೆ. ಇಲ್ಲಿ ಮೌಲ್ಯವರ್ಧನೆಯಾಗುತ್ತದೆಯೇ ವಿನಾ ಸವಕಳಿಯ ಮಾತೇ ಇಲ್ಲ. ಕಾಡನ್ನು ಉಳಿಸುವ, ಬೆಳೆಸುವ, ಸಂರಕ್ಷಿಸುವ ಹಾದಿಯಲ್ಲಿ ಯಶ ಸಿಗಬೇಕೆಂದಾದರೆ ಕಾಡಿನ ಸಂವಿಧಾನದ ಸೂಕ್ಷ್ಮ ಅರಿವು ಇರಬೇಕಾಗುತ್ತದೆ.

ಇಂದಿನ ಯುವ ಅರಣ್ಯಾಧಿಕಾರಿಗಳಿಗೆ ಇಂತಹ ವಿಷಯಗಳೆಲ್ಲ ಗೊತ್ತಿಲ್ಲವೆಂದಲ್ಲ. ಆದರೆ ಅವರು ಈ ಎಲ್ಲ ಅಂಶಗಳನ್ನು ಕ್ರೋಡೀಕರಿಸಿಕೊಂಡು, ಎಲ್ಲೆಲ್ಲಿ ಅರಣ್ಯ ನಾಶವಾಗಿದೆಯೋ ಅಲ್ಲೆಲ್ಲ ಮತ್ತೆ ಕಾಡು ಸೃಷ್ಟಿಯಾಗುವಂತೆ ಮಾಡಲು ಮುಂದಾಗಬೇಕು. ಕರ್ನಾಟಕದ ವಿಶಿಷ್ಟ ಸಹ್ಯಾದ್ರಿ ಬೆಟ್ಟಸಾಲೂ ಸೇರಿದಂತೆ ಎಲ್ಲೆಡೆ ಹಸಿರು ಕಂಗೊಳಿಸಬೇಕು. ಈ ದಿಸೆಯಲ್ಲಿ ಅವರ ಕಾರ್ಯಯೋಜನೆಗಳು ರೂಪುಗೊಳ್ಳಬೇಕು. ಇದು, ಕಾಡಿನ ಕುರಿತಾದ ಸುದೀರ್ಘ ಅನುಭವದಿಂದ ಅವರಿಗೆ ನಾನು ಹೇಳುವ ಕಿವಿಮಾತು.

ಅ.ನ.ಯಲ್ಲಪ್ಪ ರೆಡ್ಡಿ

ಅ.ನ.ಯಲ್ಲಪ್ಪ ರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT