ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಇತಿಹಾಸ, ಭ್ರಮೆಯ ನಡುವಿನ ವಾಸ್ತವ

ಹೀಗೂ ಸಿನಿಮಾ ನಿರ್ಮಿಸಬಹುದೇ ಎನ್ನುವಂತಿವೆ ಎರಡು ಮಲಯಾಳಂ ಚಿತ್ರಗಳು
Published 5 ಮಾರ್ಚ್ 2024, 22:29 IST
Last Updated 5 ಮಾರ್ಚ್ 2024, 22:29 IST
ಅಕ್ಷರ ಗಾತ್ರ

ಇತ್ತೀಚೆಗೆ ಬಿಡುಗಡೆಯಾದ ಎರಡು ಮಲಯಾಳಂ ಚಲನಚಿತ್ರಗಳು ಗತವನ್ನು ಕುರಿತು ಆಲೋಚಿಸುವಂತೆ, ಪ್ರೇಕ್ಷಕರ ಕುತೂಹಲ ಕೆರಳುವಂತೆ ಮಾಡುತ್ತಾ, ಕೊನೆಗೆ ಸಿನಿಮಾಗಳನ್ನು ಹೀಗೂ ನಿರ್ಮಿಸಬಹುದೇ ಎನಿಸುವಂತೆ ಇವೆ. ಜನವರಿ ಕೊನೆಯ ಭಾಗದಲ್ಲಿ ಬಿಡುಗಡೆಯಾದದ್ದು ಮೋಹನ್‌ಲಾಲ್ ಅಭಿನಯದ, ಲಿಜೋ ಜೋಸ್ ಪೆಲ್ಲಿಶ್ಶೇರಿ ನಿರ್ದೇಶನದ ‘ಮಲೈಕೋಟ್ಟೈ ವಾಲಿಬನ್’. ಫೆಬ್ರುವರಿ ಮಧ್ಯಭಾಗದಲ್ಲಿ ಬಿಡುಗಡೆಯಾದದ್ದು ಮಮ್ಮುಟ್ಟಿ ಅಭಿನಯದ, ರಾಹುಲ್ ಸದಾಶಿವನ್ ನಿರ್ದೇಶನದ ‘ಭ್ರಮಯುಗಂ’. ಭಾರತದ ಪ್ರಸಿದ್ಧ ಕಲಾವಿದರೆನಿಸಿರುವ ಮೋಹನ್‌ಲಾಲ್ ಮತ್ತು ಮಮ್ಮುಟ್ಟಿ ಅವರ ಸಿನಿಮಾಗಳ ಸೃಷ್ಟಿಯು ಪ್ರೇಕ್ಷಕರು ಸಾಮಾನ್ಯವಾಗಿ ಆಲೋಚಿಸದ ರೀತಿ ಇರುತ್ತದೆ ಮತ್ತು ಬಂಡವಾಳ ವಾಪಸಾತಿಯ ದೃಷ್ಟಿಯಿಂದ ಸೋಲಲಿ, ಗೆಲ್ಲಲಿ ಒಂದು ಹೊಸ ಕ್ರಮದ ಚಿತ್ರವನ್ನು ಮಾಡಿಯೇ ತೀರುತ್ತಾರೆ ಎನ್ನುವಂತೆ ಇರುತ್ತದೆ.

ಮೋಹನ್‌ಲಾಲ್ ದಶಕಗಳ ಹಿಂದೆಯೇ ಸಾಕ್ರೆಟೀಸನ ಪಾತ್ರದಲ್ಲಿ ಅಭಿನಯಿಸಿದ್ದರೆ, ಮಮ್ಮುಟ್ಟಿ ಅವರು ಮಲಯಾಳಂ ಜನಪದ ಕಥೆ ಆಧಾರಿತ ‘ಒರು ವಡಕ್ಕನ್ ವೀರಗಾಥ’ ಚಿತ್ರವನ್ನು ಜನ ನೋಡುವಂತೆ ಮಾಡಿದ್ದರು. ಹೋದ ವರ್ಷವೂ ಮಮ್ಮುಟ್ಟಿ ‘ನನ್‌ ಪಗಲ್ ನೇರತ್ತ್ ಮಯಕ್ಕಮ್’ ಸಿನಿಮಾದಲ್ಲಿ ಬಸ್ ಏಜೆ೦ಟನ ಪಾತ್ರ ಮಾಡಿದ್ದರು. ಇದನ್ನೆಲ್ಲ ಗಮನಿಸಿದಾಗ, ಮಲಯಾಳಂ ಪ್ರೇಕ್ಷಕರು ಇವನ್ನೆಲ್ಲ ನೋಡಿ ಮೆಚ್ಚುವಷ್ಟು ಪ್ರಬುದ್ಧರೇ ಎಂದುಕೊಂಡರೆ, ಅದು ನಿಜವಿರಬಹುದು ಎನಿಸುತ್ತದೆ.

ಇದೀಗ ಈ ಇಬ್ಬರು ಮಹಾನ್ ಕಲಾವಿದರ ಇತ್ತೀಚಿನ ಸಿನಿಮಾಗಳಿಗೆ ಬಂದರೆ, ಮೋಹನ್‌ಲಾಲ್‌ರ ‘ಮಲೈಕೋಟ್ಟೈ ವಾಲಿಬನ್’ ಚಿತ್ರದಲ್ಲಿ ಹುಡುಗರು ಮೆಚ್ಚುವ ಕಳರಿಪಯಟ್ಟು ಹೊಡೆತದ ಮಾದರಿ, ಸುಂದರಿಯರ ಮಾದಕ ನೃತ್ಯ, ಪ್ರಬುದ್ಧರೂ ಮೆಚ್ಚಿ ಆಹಾ ಎಂದುಕೊಳ್ಳುವ ಐತಿಹಾಸಿಕ ದೃಶ್ಯ ಸಂಬಂಧಿತ ಸಂಭಾಷಣೆಗಳ ವರಸೆ ಇದ್ದರೂ ಗಲ್ಲಾಪೆಟ್ಟಿಗೆಯಲ್ಲಿ ಅದು ನಿರೀಕ್ಷಿತ ಮಟ್ಟಿಗೆ ಯಶಸ್ಸು ಗಳಿಸಲಿಲ್ಲ. ಆದರೆ ಚಿತ್ರ ಮಾತ್ರ ಅದ್ಭುತ ರೋಚಕ ದೃಶ್ಯಗಳ ಸರಣಿಯೇ ಆಗಿದೆ. ಇತ್ತ ಮಮ್ಮುಟ್ಟಿಯವರ ‘ಭ್ರಮಯುಗಂ’ನಲ್ಲಿ ಯಥಾವಿಧಿ ಸಿನಿಮಾ ಚೇಷ್ಟೆಗಳಿಲ್ಲದಿದ್ದರೂ ಯಶಸ್ಸು, ಲಾಭ ಗಳಿಸಿದೆ.

ಇದೇನೇ ಇರಲಿ, ಎರಡೂ ಚಿತ್ರಗಳ ಆರಂಭಿಕ ದೃಶ್ಯಗಳೆಂದರೆ, ‘ಭ್ರಮಯುಗಂ’ ಹಸಿರು ಕಾಡಿನ ನಡುವೆ ಒಬ್ಬ ದಿಕ್ಕು ತಪ್ಪಿದ ಆದಿಮಾನವನಂಥವನ ಪ್ರಯಾಣದೊಂದಿಗೆ ಆರಂಭವಾದರೆ, ‘ಮಲೈಕೋಟ್ಟೈ ವಾಲಿಬನ್‌’ ಹಸುರಿನ ಸುಳಿವೇ ಇಲ್ಲದ ಭಣಗುಟ್ಟುವ ಬರಡು ನೆಲದಲ್ಲಿ, ದೇಹ ಪರಾಕ್ರಮಿ ಎನಿಸಿಕೊಳ್ಳುವ ಜಟ್ಟಿಯ ಎತ್ತಿನ ಗಾಡಿಯ ಪ್ರಯಾಣದೊಂದಿಗೆ ಶುರುವಾಗುತ್ತದೆ. ಊರೂರ ಮೇಲೆ ಪ್ರಯಾಣಿಸುವ ಈ ಬಂಟ, ಪೆಟ್ಟಿನಲ್ಲೂ ಪಟ್ಟಿನಲ್ಲೂ ಕೋಟೆಗಳ ಒಳ–ಹೊರಗೆ ಜಟ್ಟಿಗಳೆಂಬುವರಿಗೆ ಮಣ್ಣು ಮುಕ್ಕಿಸಿ ಅಲ್ಲಲ್ಲಿಯ ಆಳರಸರನ್ನು ಬೆಚ್ಚಿ ಬೀಳಿಸುವ ಗಂಡಸು ತಾನೆಂದು ಘೋಷಿಸಿಕೊಳ್ಳುತ್ತಾನೆ. ಇತಿಹಾಸದ ಈ ಬಗೆಯ ಬಹುಪರಾಕುಗಳ ವಿರುದ್ಧ ದಿಕ್ಕಿನ ‘ಭ್ರಮಯುಗಂ’ ಚಿತ್ರದಲ್ಲಿ ಆಗಂತುಕ ದಿಕ್ಕುಗೆಟ್ಟು ಅರಣ್ಯದಲ್ಲಿ ದಾರಿ
ಕಾಣದೆ ಯಾವುದೋ ಪಾಳುಬಿದ್ದ ಗುಡಿಯ ಕಡೆ ಬಂದರೆ, ಅಲ್ಲಿದ್ದ ಒಬ್ಬ ವ್ಯಕ್ತಿ ತನ್ನ ರೂಪು ಕಾಣಿಸದೆ ದನಿ ಮಾತ್ರದಲ್ಲಿ ‘ನೀನು ಯಾರು?’ ಎಂಬ ಸಹಜ ಅಥವಾ ಗಹನ ಪ್ರಶ್ನೆ ಕೇಳುತ್ತಾನೆ. ಆಗಂತುಕನಿಗೆ ತಬ್ಬಿಬ್ಬಾಗುತ್ತದೆ, ಉತ್ತರ ಹೊಳೆಯುವುದಿಲ್ಲ. ಇದಕ್ಕೆ ಉತ್ತರ ಹುಡುಕುವವನಂತೆ ಆ ಅರಣ್ಯದಲ್ಲಿಯೇ ಗತಿ ಕಾಣದೆ ಉಳಿಯಬೇಕಾಗುತ್ತದೆ. ಆಗಂತುಕನಿಗೆ ಪ್ರತಿನಿತ್ಯ ಗುಹೆ ಹೊಕ್ಕಂತೆ, ಸೆರೆ ಸಿಕ್ಕಂತೆ, ಗುಡಿ ಸೇರಿದಂತೆ ಭಾಸವಾಗುತ್ತದೆ.

ಒಂದು ಹಂತದಲ್ಲಿ, ಅದೇ ಗುಹೆಯಲ್ಲಿದ್ದ ಇನ್ನೊಬ್ಬ ಒಂಟಿ ಹಿರಿಯ (ಮಮ್ಮುಟ್ಟಿ) ಆಗಂತುಕನೊಂದಿಗೆ ಮಾತನಾಡುತ್ತಾ ಹೋಗುವಲ್ಲಿ, ‘ದೇವರು ನಮಗೆ ಕೊಟ್ಟಿರುವ ವರ ಯಾವುದು?’ ಎನ್ನುತ್ತಾನೆ. ಇದಕ್ಕೆ ಉತ್ತರಿಸಬೇಕಾದವರು ಪ್ರೇಕ್ಷಕರೋ ಅಥವಾ ಆ ಆಗಂತುಕನೋ ಎಂದು ಒಂದು ಕ್ಷಣ ಯೋಚಿಸುವಂತಾಗುತ್ತದೆ. ದೇವರು ಕೊಟ್ಟ ವರ ನಮ್ಮ ಸುತ್ತಿನ ಪ್ರಕೃತಿಯೇ, ನಾವು ನಿರ್ಮಿಸಿಕೊಂಡ ಅರಮನೆಯೇ, ಗಳಿಸಿದ ಐಶ್ವರ್ಯವೇ ಎಂದರೆ ಇವೇನೂ ಅಲ್ಲ! ಆ ಹಿರಿಯನೇ ಆಗಂತುಕನಿಗೆ ತಿಳಿಸಿಕೊಡುವ ಉತ್ತರ ‘ಅದು ಸಮಯ’ ಎನ್ನುವುದು. ಕಾಲ ಮುಂದೆ ಚಲಿಸಿದರೆ ಹಿಂದೆ ಬರುವುದೇ ಇಲ್ಲವಲ್ಲ! ಅರಣ್ಯವಾಸಿ ಹಿರಿಯನು ಅರೆಬೆಂದ ಮಾಂಸವನ್ನು ಅಗಿದಗಿದು ನುಂಗಿದರೆ, ಎದುರಿನ ಆಗಂತುಕ ಮಡಕೆಯ ಗಂಜಿಯನ್ನು ಶತಮಾನಗಳ ಹಸಿವಿನವನಂತೆ ಬಾಯಿಗಿಟ್ಟು ಸುರಿಯುತ್ತಾನೆ. ಮನುಷ್ಯನಿಗೆ ದೇವರು ಕೊಟ್ಟಿರುವುದು ಎರಡೇ, ಅದು ಅನ್ನ ಮತ್ತು ಸಮಯ.

ಹೀಗೆ ‘ಭ್ರಮಯುಗಂ’ ಬರೀ ಮೂರೋ ನಾಲ್ಕೋ ಪಾತ್ರಗಳೊಡನೆ ಮನುಷ್ಯನ ಒಂಟಿತನ, ಏಕಾಂತ, ಸಮಸ್ಯೆಗಳಲ್ಲದವಕ್ಕೆ ಅನಗತ್ಯವಾಗಿ ಸಿಕ್ಕಿಹಾಕಿಕೊಳ್ಳುವುದು, ಸಂದಿಗೊಂದಿಯಲ್ಲಿ ಸಿಲುಕಿ ತಪ್ಪಿಸಿಕೊಳ್ಳುವುದನ್ನು ಹೇಳುತ್ತಾ ಹೊರಟರೆ, ‘ಮಲೈಕೋಟ್ಟೈ ವಾಲಿಬನ್’ ಈಗಾಗಲೇ ಸೂಚಿಸಿದಂತೆ, ಒಣಬಯಲಿನಲ್ಲಿ ಮೈಯ್ಯ ನೆಣ ಏರಿಸಿಕೊಂಡು ಹೋರಾಡುತ್ತ ನೆಲಕ್ಕೆ ರಕ್ತ ಚೆಲ್ಲುವ ಇತಿಹಾಸ ಸಂಬಂಧಿ ದೀರ್ಘ ಪ್ರಯಾಣದ ಚಿತ್ರವಾಗಿ ಕಾಣುತ್ತದೆ. ಇಲ್ಲಿಯ ವ್ಯಂಗ್ಯವೆಂದರೆ, ಸಾಮಾನ್ಯರು ಒಂದು ಹೊತ್ತಿನ ಅನ್ನಕ್ಕೆ ಬಡಿದಾಡಿದರೆ, ಪರಾಕ್ರಮಿಗಳು ಹೊತ್ತಿ ಉರಿಯುವ ಪಂಜುಗಳ ನಡುವೆ ಕುಸ್ತಿ ಆಡುತ್ತಾರೆ. ಇಲ್ಲಿ ಕೇರಳದ ಕಳರಿಪಯಟ್ಟು ರೋಚಕರೂಪದಲ್ಲಿ ತಿರುತಿರುಗಿ ಕಾಣಿಸಿಕೊಳ್ಳುತ್ತದೆ. ಇದರ ವಿರುದ್ಧ ದಿಕ್ಕಿನ ರೂಪಕವೋ ಎಂಬಂತೆ, ಒಂದು ಊರಿನ ಜಟ್ಟಿ ಹಾಕಿಸಿದ್ದ ವೀರಗಲ್ಲನ್ನು ವಾಲಿಬನ್ ಕಿತ್ತೆಸೆದರೆ, ಅದು ಒಣ ಬಯಲಿನಲ್ಲಿ ಹಸಿರು ತಡಕಾಡುತ್ತಿದ್ದ ಮೇಕೆಗಳ ಹಿಂಡಿನ ನಡುವೆ ಬೀಳುತ್ತದೆ. ಆಡು ಕಾಯುತ್ತ ಒಣ ರೊಟ್ಟಿ ಕಡಿಯುತ್ತಿದ್ದವನು, ಬಿದ್ದದ್ದು ಏನು ಎಂದು ಎದ್ದು ಹೋಗಿ ನೋಡುವಲ್ಲಿ, ಒಂದು ಆಡು ಇತ್ತ ಬಂದು ರೊಟ್ಟಿಯನ್ನು ಕಚ್ಚಿಕೊಂಡು ಹೋಗುತ್ತದೆ. ಶೂರರ ರಕ್ತರಂಜಿತ ಹೋರಾಟದಲ್ಲಿ ಬಡವರಿಗೆ
ಬಂದ ಭಾಗ್ಯವೇನು ಎಂಬುದೇ ಇಲ್ಲಿಯ ಮುಖ್ಯ ಪ್ರಶ್ನೆ.

ಇದರೊಂದಿಗೆ ಈ ಚಿತ್ರದಲ್ಲಿ ಪುನರಾವರ್ತನೆಯ ಸಂಗತಿ ಎಂದರೆ, ಕಂಡದ್ದೂ ಸತ್ಯವಲ್ಲ, ಕಾಣದ್ದೂ ಸತ್ಯವಲ್ಲ,ಹಾಗಾದರೆ ಅದು ಅಡಗಿರುವುದು ಎಲ್ಲಿ ಎಂಬುದು. ಇದಕ್ಕೆ ಪೂರಕವೆನಿಸುವ ಸನ್ನಿವೇಶಗಳೂ ಇವೆ.

ಸೆರೆಮನೆಯೆಂಬ ಅರಮನೆಯಲ್ಲಿ ಹೆಣ್ಣುಮಕ್ಕಳನ್ನು ಇರಿದು ಕೊಲ್ಲುವ ಭಯಂಕರ ದೃಶ್ಯವೂ ಇದೆ. ಇದಕ್ಕೆ ಸಾಕ್ಷಿ ಎಂದರೆ, ನಾಳೆ ಯುದ್ಧದಲ್ಲಿ ತಾನು ಸೋತು ಸಾಯುವ ಅರಸ ಹಿಂದಿನ ದಿನ ತನ್ನ ರಾಣಿಯರನ್ನು ತಾನೇ ಕೊಂದು ಹೋದ ದಾಖಲೆಗಳು ಇವೆಯಲ್ಲ! ಸೋತ ಅರಸರು, ಗುಲಾಮರ ‘ಮೇಲೆ ಕೋಟೆ ನಿಂತಿದೆ’, ‘ನೆತ್ತರು ಮತ್ತು ಕಣ್ಣೀರು ಬೆರೆತ ಸಮುದ್ರದಿಂದ ಸೂರ್ಯನು ಉದಯಿಸುವನು’ ಎಂಬಂಥ ಸಂಭಾಷಣೆಗಳು ಚಿತ್ರದುದ್ದಕ್ಕೂ ಕೇಳಿಸುತ್ತವೆ. ಇದರ ನಡುವೆ, ರಂಗಪಟ್ಟಣದ ನೃತ್ಯಗಾತಿಯ ಮೈ ಕತ್ತರಿಸಾಡುವ ಕುಣಿತ, ಅದನ್ನು ಹುಚ್ಚೆದ್ದು ನೋಡುವ ಪುರಜನ, ಅದರ ನಡುವೆಯೇ ನಾನಾ ಬಗೆಯ ತುರುಸಿನ ಮನೋಸ್ಪರ್ಧೆಯು ಚಿತ್ರದಲ್ಲಿ ಬಹಿರಂಗಗೊಳ್ಳುತ್ತಾ ಹೋದರೆ, ‘ಭ್ರಮಯುಗಂ’ ಮನುಷ್ಯನ ಅಂತರಂಗವನ್ನು ಬೆದಕುತ್ತಾ ಹೋಗುವ ಚಿತ್ರವಾಗುತ್ತದೆ.

ಈ ಎರಡೂ ಚಿತ್ರಗಳು ಕೊನೆಯಾಗುವುದು ಹಿಂದಿನ ಶತಮಾನಗಳಲ್ಲಿ ಕೇರಳಕ್ಕೆ ಆಗಮಿಸಿದ ಪರಕೀಯರ ದೃಶ್ಯದಿಂದ. ಚಿತ್ರದ ಅಂತ್ಯದಲ್ಲಿ ಸ್ಪ್ಯಾನಿಷ್ ದೊರೆಗಳೊಡನೆ ವಾಲಿಬನ್‌ ಹೋರಾಡಬೇಕಾಗಿ ಬಂದರೆ, ‘ಭ್ರಮಯುಗಂ’ ನಲ್ಲಿಯೂ ಡಚ್ಚರ ಸೈನ್ಯವು ಹೊಳೆ ದಾಟಿ ಬರುವ ದೃಶ್ಯ ಕಾಣಿಸಿಕೊಳ್ಳುತ್ತದೆ. ಹೊಳೆಯಲ್ಲಿ ತೇಲಿಹೋಗುವ ಹೆಣದ ದೃಶ್ಯವೂ ಇದೆ. ಇದು ದೇಶದ ಅಂತರಂಗ, ಬಹಿರಂಗ ಚರಿತ್ರೆ. ಹೀಗಾಗಿ, ಎರಡೂ ಚಿತ್ರಗಳ ವಸ್ತು, ದೃಶ್ಯಕ್ರಮ ಒಂದಾಗುತ್ತ, ಬೇರೆಯಾಗುತ್ತ, ಅರ್ಥಪೂರ್ಣ ಸಂಭಾಷಣೆಗಳಲ್ಲಿ, ಚರ್ಚೆಗಳಲ್ಲಿ ಶತಮಾನಗಳ ಕಥೆಗಳನ್ನು ಬಿತ್ತರಿಸುತ್ತವೆ. ಚಿತ್ರಗಳು ಕಡೆಕಡೆಗೆ ಬರುವಲ್ಲಿ ನಿರ್ದೇಶಕರು ದೃಶ್ಯಗಳನ್ನು ಇನ್ನಿಷ್ಟು ಎಳೆದಂತೆ ತೋರುತ್ತದೆ.

ಇಷ್ಟಾದರೂ ಕೇರಳದ ಈ ಇಬ್ಬರು ಸೃಜನಶಕ್ತಿಯ ಪ್ರತಿಭಾನ್ವಿತ ಕಲಾವಿದರ ಚಿತ್ರಗಳು, ಹಿಂದೆಂದಿಗಿಂತಲೂ ಹೊರತಾದ ಯಾವ ಬಗೆಯ ಸಂಗತಿಯನ್ನು ಆರಿಸಿಕೊಂಡರೂ ಅವು ವರ್ತಮಾನೀಯವೇ ಆಗಿರುತ್ತವೆ ಎಂಬುದನ್ನೂ ಗಮನಿಸಬೇಕು. ಜತೆಗೆ ಪ್ರೇಕ್ಷಕರ ಚಿತ್ರ ವೀಕ್ಷಣೆಯ ಎತ್ತರ ಮತ್ತು ಚಿಂತನೆಯನ್ನೂ ಬೆಳೆಸುವಂತೆ ಇರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT