ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ | ಬ್ರಿಟನ್ ಚುನಾವಣೆ ಕಲಿಸುವ ಪಾಠ

ಪಕ್ಷಗಳ ಒಳಗೆ ಪ್ರಜಾತಂತ್ರ ಇಲ್ಲದಿದ್ದರೆ ದೇಶದಲ್ಲಿ ನಿಜವಾದ ಪ್ರಜಾತಂತ್ರ ಇರಲು ಸಾಧ್ಯವೇ?
Published : 12 ಆಗಸ್ಟ್ 2024, 0:23 IST
Last Updated : 12 ಆಗಸ್ಟ್ 2024, 0:23 IST
ಫಾಲೋ ಮಾಡಿ
Comments

ರಿಷಿ ಸುನಕ್ ಅವರು ಬ್ರಿಟನ್ನಿನ ‘ಮಾಜಿ ಪ್ರಧಾನಿ’ಯಾಗಿದ್ದಾರೆ. ಅವರ ಅಧಿಕಾರಾವಧಿಯು ಬಹಳ ಕಿರಿದಾಗಿತ್ತು, ಅದು ಸ್ಫೂರ್ತಿದಾಯಕವೇನೂ ಆಗಿರಲಿಲ್ಲ. ಬ್ರಿಟನ್ನಿನ ಜನ ಕನ್ಸರ್ವೇಟಿವ್ ಪಕ್ಷದ ವಿರುದ್ಧವಾಗಿ ನಿರ್ಣಾಯಕ ತೀರ್ಪು ನೀಡಿದರು. ಈ ಪಕ್ಷವನ್ನು ಸುನಕ್ ಅವರು ಎರಡು ವರ್ಷ ಮುನ್ನಡೆಸಿದ್ದರು. ಸುನಕ್ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ಅರ್ಥ ವ್ಯವಸ್ಥೆಯು ಕುಸಿದಿತ್ತು. ಅವರು ವಿಘಟಿತವಾಗಿದ್ದ ತಮ್ಮ ಪಕ್ಷವನ್ನು ಒಗ್ಗೂಡಿಸಲು ಯತ್ನಿಸಿದರು. ಸುನಕ್ ಅವರಿಗೆ ರಾಜಕೀಯ ಅನುಭವ ಸಾಲದು ಎಂದು ಹಲವರು ಹೇಳಿದ್ದರು.

ಸುನಕ್ ಅವರೇ ವಲಸಿಗರು. ಆದರೆ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅವರು ವಲಸಿಗರ ವಿಚಾರದಲ್ಲಿ ಸ್ಪಂದನಶೀಲರಾಗಿರಲಿಲ್ಲ. ಅಲ್ಲದೆ, ಸುನಕ್ ನೇತೃತ್ವದ ಸರ್ಕಾರವು ವಲಸಿಗರ ವಿಚಾರದಲ್ಲಿ ರೂಪಿಸಿದ ನೀತಿಗಳು ಅನುಕಂಪ ರಹಿತವಾಗಿದ್ದವು. ಅವರ ಪಕ್ಷ ಸೋಲುವುದು ನಿರೀಕ್ಷಿತವೇ ಆಗಿತ್ತು.

ಈ ಬರಹದ ಉದ್ದೇಶವು ಸುನಕ್ ಅವರ ಸಾಧನೆಯ ಬಗ್ಗೆ ಅಭಿಪ್ರಾಯ ದಾಖಲಿಸುವುದಲ್ಲ. ಸೋಲು ಕಂಡ ಸುನಕ್ ತೋರಿದ ಘನತೆಯ ನಡೆ ಹಾಗೂ ಜಯಶಾಲಿಯಾದ ಕಿಯರ್ ಸ್ಟಾರ್ಮರ್ ತೋರಿದ ಹೃದಯ
ವೈಶಾಲ್ಯದ ಬಗ್ಗೆ ಈ ಬರಹ. ಭಾರತದ ಚುನಾವಣಾ ಕಣದಲ್ಲಿ ಕಾಣುವ ಕೋಮುವಾದಿ, ಅಸಭ್ಯ ಮಾತುಗಳ ಬದಲಿಗೆ, ಬ್ರಿಟನ್ನಿನಲ್ಲಿ ಕಂಡ ಸಭ್ಯವಾದ ಚುನಾವಣಾ ಅಭಿಯಾನದ ಬಗ್ಗೆ ಈ ಬರಹ. ಅಲ್ಲಿನ ಚುನಾವಣಾ ಫಲಿತಾಂಶವು ಬ್ರಿಟನ್ನಿನಲ್ಲಿ ಇಂದು ಕಾಣುವ ಬಹು ಸಂಸ್ಕೃತಿಗಳ ಹಾಗೂ ಉಪಾಸನೆಯಲ್ಲಿನ ಬಹುತ್ವದ ವಿಜಯ.

ಅಲ್ಲಿನ ಚುನಾವಣೆಯು ಭಾರತದ ಚುನಾವಣೆಗಳಲ್ಲಿ ಧಾರ್ಮಿಕ, ಜಾತೀಯ, ಜನಾಂಗೀಯ ಮತ್ತು ಪ್ರಾದೇಶಿಕ ನೆಲೆಗಳಲ್ಲಿ ಕಾಣುತ್ತಿರುವ ವಿಭಜನೆಗಳಿಗೆ ತೀರಾ ವಿರುದ್ಧವಾಗಿದೆ. ಭಾರತದಲ್ಲಿನ ವಿಭಜನೆಯು ಸಂಸತ್ತಿಗೆ ಆಯ್ಕೆಯಾಗಿರುವ ಜನಪ್ರತಿನಿಧಿಗಳಲ್ಲಿ, ಕೇಂದ್ರ ಸಂಪುಟದ ರಚನೆಯಲ್ಲಿ ಕಾಣಿಸುತ್ತಿದೆ. ಸಂಪುಟದಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯವೇ ಇಲ್ಲ, ಮಹಿಳೆಯರಿಗೆ ಅವರ ಜನಸಂಖ್ಯಾ ಪ್ರಮಾಣಕ್ಕೆ ಅನುಗುಣವಾಗಿ ಸಂಪುಟದಲ್ಲಿಯಾಗಲಿ, ಸಂಸತ್ತಿನಲ್ಲಾಗಲಿ ಪ್ರಾತಿನಿಧ್ಯ ಇಲ್ಲ. ದೇಶದ ಜನಸಂಖ್ಯೆಯಲ್ಲಿ ಶೇಕಡ 15ರಷ್ಟು ಮುಸ್ಲಿಮರಿದ್ದರೂ, ಪ್ರಮುಖ ಆಡಳಿತಾರೂಢ ಪಕ್ಷದಲ್ಲಿ ಮುಸ್ಲಿಂ ಸಂಸದರೇ ಇಲ್ಲ. ಬಹುತ್ವವು ಭಾರತದ ನಾಗರಿಕತೆಯ ಜೊತೆ ಆಳವಾಗಿ ಬೆಸೆದುಕೊಂಡಿದೆ. ಆದರೆ, ಭಾರತದ ಚುನಾವಣೆಗಳು ಬಹುತ್ವವನ್ನು ಪ್ರತಿನಿಧಿಸುತ್ತಿಲ್ಲ.

ಬ್ರಿಟನ್ನಿನ ಚುನಾವಣೆಯಲ್ಲಿ ಆಯ್ಕೆಯಾದ ಶೇ 13ರಷ್ಟು ಮಂದಿ ಕೃಷ್ಣವರ್ಣೀಯರು, ಏಷ್ಯನ್ ಮೂಲದವರು ಅಥವಾ ಬಿಳಿಯರಲ್ಲದವರು. ಹಿಂದಿನ ಸಂಸತ್ತಿನಲ್ಲಿ ಇವರ ಪ್ರಾತಿನಿಧ್ಯ ಶೇ 10ರಷ್ಟು ಮಾತ್ರ ಇತ್ತು. 29 ಮಂದಿ ಸಂಸದರು ಭಾರತ ಮೂಲದವರು, 15 ಮಂದಿ ಪಾಕಿಸ್ತಾನಿ ಮೂಲದವರು. 12 ಮಂದಿ ಸಿಖ್ಖರು. ಆದರೆ, ಈ ಸಂಖ್ಯೆಗಳನ್ನು ಬ್ರಿಟನ್ನಿನಲ್ಲಿ ಏಷ್ಯನ್ನರ ಪ್ರಮಾಣ ಶೇ 8ರಷ್ಟು, ಕೃಷ್ಣವರ್ಣೀಯರ ಪ್ರಮಾಣ ಶೇ 4ರಷ್ಟು, ಭಾರತೀಯರ ಪ್ರಮಾಣ ಶೇ 3.1ರಷ್ಟು ಹಾಗೂ ಪಾಕಿಸ್ತಾನೀಯರ ಪ್ರಮಾಣ ಶೇ 2.7ರಷ್ಟು ಮಾತ್ರ ಇರುವುದರ ಹಿನ್ನೆಲೆಯಲ್ಲಿ ಗ್ರಹಿಸಬೇಕು. ಅಲ್ಲಿನ ಸಂಪುಟದಲ್ಲಿನ ಪ್ರಾತಿನಿಧ್ಯ ಕೂಡ ಇದೇ ಬಗೆಯಲ್ಲಿದೆ – ಹಿಂದಿನ ಬಾರಿಯೂ, ಈ ಬಾರಿಯೂ. ಅಲ್ಲಿನ ಹಣಕಾಸು ಸಚಿವ, ಗೃಹ ಸಚಿವ, ವಿದೇಶಾಂಗ ವ್ಯವಹಾರಗಳ ಸಚಿವ ಸ್ಥಾನವನ್ನು ಏಷ್ಯನ್, ಕೃಷ್ಣವರ್ಣೀಯ ಹಾಗೂ ಭಿನ್ನ ಉಪಾಸನಾ ಪದ್ಧತಿಗಳನ್ನು ಪಾಲಿಸುವವರಿಗೆ ನೀಡಲಾಗಿದೆ. ಲಂಡನ್ನಿನ ಮೇಯರ್ ಮುಸ್ಲಿಂ. ಅವರು ಪಾಕಿಸ್ತಾನಿ ವಲಸಿಗರೊಬ್ಬರ ಮಗ.

ಸುನಕ್ ಅವರು ಚುನಾವಣೆಯಲ್ಲಿ ಸೋತ ನಂತರ ಮಾಡಿದ ಭಾಷಣದಲ್ಲಿ ಎದ್ದು ಕಂಡಿದ್ದು, ಸರಳತೆ ಹಾಗೂ ಸೋಲಿನ ಹೊಣೆಯನ್ನು ಹೊತ್ತುಕೊಳ್ಳುವ ಗುಣ. ಸೋಲು ಕಂಡಿದ್ದ ತಮ್ಮ ಪಕ್ಷದವರಲ್ಲಿ ಅವರು ಕ್ಷಮೆಯಾಚಿಸಿದರು. ‘ನಿಮ್ಮ ತೀರ್ಮಾನ ಮಾತ್ರವೇ ಪರಿಗಣಿತವಾಗುತ್ತದೆ. ನಿಮ್ಮ ಕೋಪ, ನಿರಾಸೆಗೆ ನಾನು ಕಿವಿಗೊಟ್ಟಿದ್ದೇನೆ. ಈ ಫಲಿತಾಂಶದ ನಂತರ ನಾನು ಪಕ್ಷದ ನಾಯಕನ ಸ್ಥಾನದಿಂದ ಕೆಳಗಿಳಿಯುತ್ತಿದ್ದೇನೆ’ ಎಂದು ವಿನಮ್ರವಾಗಿ ಅವರು ಜನರನ್ನುದ್ದೇಶಿಸಿ ಹೇಳಿದರು. ‘ಸರ್ ಕಿಯರ್ ಸ್ಟಾರ್ಮರ್ ಅವರು ಶೀಘ್ರವೇ ಪ್ರಧಾನಿಯಾಗಲಿದ್ದಾರೆ. ಅವರ ಯಶಸ್ಸು ನಮ್ಮ ಯಶಸ್ಸು ಕೂಡ ಆಗಲಿದೆ’ ಎಂಬ ಮಾತನ್ನೂ ಹೇಳಿದರು.

ಆದರೆ ಅವರ ಮಾತುಗಳಲ್ಲಿ ಅತ್ಯಂತ ಪರಿಣಾಮಕಾರಿ ಆಗಿದ್ದುದು ತಮ್ಮ ವಲಸೆಯ ಹಿನ್ನೆಲೆಯನ್ನು ಅವರು ನೆನಪಿಸಿಕೊಂಡ ಬಗೆ. ‘ಬ್ರಿಟನ್ ಕುರಿತ ಅತ್ಯಂತ ಗುರುತರವಾದ ಒಂದು ಸಂಗತಿಯೆಂದರೆ, ನನ್ನ ಮುತ್ತಜ್ಜಂದಿರು ಕೈಯಲ್ಲಿ ದೊಡ್ಡದೇನೂ ಇಲ್ಲದೆ ಇಲ್ಲಿಗೆ ಬಂದ ಎರಡು ತಲೆಮಾರುಗಳ ನಂತರ ನಾನು ಪ್ರಧಾನಿಯಾಗಲು ಸಾಧ್ಯವಾಯಿತು. ಅಲ್ಲದೆ, ನನ್ನ ಇಬ್ಬರು ಹೆಣ್ಣುಮಕ್ಕಳು ಡೌನಿಂಗ್ ಸ್ಟ್ರೀಟ್‌ನ ಮೆಟ್ಟಿಲುಗಳ ಮೇಲೆ ದೀಪಾವಳಿಯ ದೀಪ ಹಚ್ಚುವುದನ್ನು ನೋಡಲು ನನ್ನಿಂದ ಸಾಧ್ಯವಾಗಿದೆ... ಸಭ್ಯತೆ ಮತ್ತು ಸಹಿಷ್ಣುತೆ ಯಾವತ್ತಿನಿಂದಲೂ ಬ್ರಿಟಿಷರ ಗುಣವಾಗಿದೆ’ ಎಂದರು. ಸುನಕ್ ಅವರು ಘನತೆಯಿಂದಲೇ ಸೋತರು. ಆದರೆ ಅವರು ತಮ್ಮ ಜನರ ಹೃದಯ ಗೆದ್ದರು.

ಸರ್ ಸ್ಟಾರ್ಮರ್ ಅವರು ಸುನಕ್ ಅವರ ಬದ್ಧತೆ ಹಾಗೂ ಶ್ರಮವನ್ನು ಮೆಚ್ಚಿ ಮಾತನಾಡಿದರು. ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಏರಿದ ಏಷ್ಯಾ ಮೂಲದ ಮೊದಲ ವ್ಯಕ್ತಿ ಸುನಕ್ ಎಂದು ಅವರ ಸಾಧನೆಗಳನ್ನು ಗೌರವಿಸಿದರು. ದೇಶದ ಜನರು ಬದಲಾವಣೆಗಾಗಿ ನಿರ್ಣಾಯಕವಾಗಿ ಮತ ಚಲಾಯಿಸಿದ್ದಾರೆ ಎಂದರು. ಬ್ರಿಟನ್ನಿನ ಅರ್ಥ ವ್ಯವಸ್ಥೆಯನ್ನು ಸರಿಪಡಿಸುವ ಹೊಣೆ, ಐರೋಪ್ಯ ಒಕ್ಕೂಟದಿಂದ ಬ್ರಿಟನ್ ದೇಶವನ್ನು ಹೊರತರುವ ಸಂಕೀರ್ಣವಾದ ಬ್ರೆಕ್ಸಿಟ್ ಹೊಣೆ ಸೇರಿದಂತೆ ಹಲವು ಮಹತ್ವದ ಜವಾಬ್ದಾರಿಗಳು ಅವರ ಮೇಲಿವೆ.

ನರೇಂದ್ರ ಮೋದಿ ಅವರು ಸತತ ಮೂರನೆಯ ಬಾರಿಗೆ ಭಾರತದ ಪ್ರಧಾನಿಯಾಗಿ ಆಯ್ಕೆಯಾದರು. ಇದು ಬಹಳ ಗುರುತರ ಸಾಧನೆ. ಆದರೆ ಮೋದಿ ಅವರು ಮುಂದೆ ನಿಂತು ನಡೆಸಿದ ಅವರ ಪಕ್ಷವು ಜನಾದೇಶವನ್ನು ಕಳೆದುಕೊಂಡಿತು. ಜನರು ಅವರ ಪಕ್ಷಕ್ಕೆ ಸರಳ ಬಹುಮತ ನಿರಾಕರಿಸಿದರು. ಹೀಗಾಗಿ ಅದು ಮೈತ್ರಿಪಕ್ಷಗಳನ್ನು ನೆಚ್ಚಿಕೊಳ್ಳಬೇಕಿದೆ. ಕೋಮು ಸೌಹಾರ್ದವನ್ನು ನಿರಂತರವಾಗಿ ಕದಡುತ್ತಿದ್ದ ಆಡಳಿತಾರೂಢ ಪಕ್ಷವು ‘ಲಕ್ಷ್ಮಣ ರೇಖೆ’ಯನ್ನು ದಾಟಿದೆ, ಆ ಪಕ್ಷಕ್ಕೆ ಲಗಾಮು ಹಾಕಬೇಕು ಎಂದು ಜನ ತೀರ್ಮಾನಿಸಿದ್ದರು. ಇಲ್ಲಿ ಮೋದಿ ಅವರಿಗೆ, ಅವರ ಪಕ್ಷಕ್ಕೆ, ರಾಹುಲ್ ಗಾಂಧಿ ಅವರಿಗೆ ಹಾಗೂ ‘ಇಂಡಿಯಾ’ ಮೈತ್ರಿಕೂಟದ ಪಾಲುದಾರರಿಗೆ ಸ್ಪಷ್ಟವಾದ ಸಂದೇಶವಿದೆ. ಕೋಮು ಧ್ರುವೀಕರಣ ನಿಲ್ಲಿಸಬೇಕು, ಅಭಿವೃದ್ಧಿಯ ಮೇಲೆ ಗಮನ ನೀಡಬೇಕು ಎಂಬುದು ಬಿಜೆಪಿಗೆ ನೀಡಿದ ಸಂದೇಶ.

ಸುನಕ್ ಅವರ ಮಾತುಗಳಲ್ಲಿ ‘ಇಂಡಿಯಾ’ ನಾಯಕರಿಗೆ ಒಂದು ಸಂದೇಶವಿದೆ. ಪಕ್ಷದ ನಾಯಕನ ಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ಅವರು ಘೋಷಿಸಿದರು. ಆದರೆ, ಇಲ್ಲಿ ಸೋನಿಯಾ ಗಾಂಧಿ ಅವರು ತೆರೆಯ ಮರೆಯಲ್ಲಿ ಇಂದಿಗೂ ಕಾಂಗ್ರೆಸ್ಸಿನ ರಾಣಿಯಾಗಿ ಮುಂದುವರಿದಿದ್ದಾರೆ, ರಾಹುಲ್ ಅವರು ‘ಕುಟುಂಬದ ಪಕ್ಷದ’ ಪರಮೋಚ್ಚ ನಾಯಕನಂತೆ ಇದ್ದಾರೆ. ‘ಇಂಡಿಯಾ’ ಮೈತ್ರಿಕೂಟದ ಎಲ್ಲ ಪ್ರಾದೇಶಿಕ ಪಕ್ಷಗಳೂ ವಂಶಪಾರಂಪರ್ಯ ರಾಜಕಾರಣದಲ್ಲಿವೆ ಅಥವಾ ಸರ್ವಾಧಿಕಾರಿ ಮನಃಸ್ಥಿತಿಯನ್ನು ಹೊಂದಿವೆ. ಅಥವಾ ಇವೆರಡೂ ಗುಣಗಳನ್ನು ಅವು ಹೊಂದಿವೆ. ಪಕ್ಷಗಳ ಒಳಗೆ ಪ್ರಜಾತಂತ್ರ ಇಲ್ಲದಿದ್ದರೆ ದೇಶದಲ್ಲಿ ನಿಜವಾದ ಪ್ರಜಾತಂತ್ರ ಇರಲು ಸಾಧ್ಯವೇ?

ಬಿಜೆಪಿ ಕಂಡ ಸೋಲಿಗೆ ಯಾರೂ ಹೊಣೆ ಹೊತ್ತುಕೊಳ್ಳಲಿಲ್ಲ. ತಪ್ಪುಗಳಿಂದ ಪಾಠ ಕಲಿಯುವ ಭರವಸೆಯೂ ಅವರಿಂದ ಬರಲಿಲ್ಲ. ವಿರೋಧ ಪಕ್ಷಗಳ ಮಾತಿಗೆ ಕಿವಿಗೊಡುವ, ಸಂವಾದಗಳಿಗೆ ಉತ್ತೇಜನ ನೀಡುವ ‘ಮೋದಿ ಗ್ಯಾರಂಟಿ’ ಬಂದಿದ್ದರೆ ಅದು ಮೋದಿ ಅವರ ಘನತೆಯನ್ನು ಹೆಚ್ಚಿಸುತ್ತಿತ್ತು. ಅದೇ ರೀತಿ, ಮೋದಿ ಅವರನ್ನು ಗುರಿಯಾಗಿಸಿ ಘನತೆಯಿಲ್ಲದ ಮಾತುಗಳನ್ನು ನಿರಂತರವಾಗಿ ಆಡಿದ್ದಕ್ಕೆ ರಾಹುಲ್ ಅವರಿಂದ ಪಶ್ಚಾತ್ತಾಪ, ಇತರರಿಂದ ಕ್ಷಮೆಯಾಚನೆ ಬಂದಿದ್ದರೆ ಒಳ್ಳೆಯದಿತ್ತು. ಹಾಗೆ ಮಾಡಿದ್ದಿದ್ದರೆ ರಾಹುಲ್
ಮುತ್ಸದ್ದಿಯಾಗುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT