ಭಾರತದ ಬಹು ದೊಡ್ಡ ಸಾಂಸ್ಕೃತಿಕ ಸಂಪತ್ತೆಂದರೆ ಭಾಷಾ ವೈವಿಧ್ಯ. 2011ರ ಜನಗಣತಿಯ ಪ್ರಕಾರ, ಭಾರತದ ಭಾಷಾ ಪ್ರಭೇದದಲ್ಲಿ 19,569 ಉಪಭಾಷೆ ಅಥವಾ ನುಡಿಗಟ್ಟುಗಳನ್ನು ದಾಖಲಿಸಲಾಯಿತು. ಈ ಉಪಭಾಷೆಗಳನ್ನು ಪರಿಶೀಲನೆಗೆ ಒಳಪಡಿಸಿದಾಗ, ಇವುಗಳಲ್ಲಿ 1,369 ನ್ನು ತರ್ಕಬದ್ಧ ಮಾತೃಭಾಷೆಗಳೆಂದು ಪರಿಗಣಿಸಲಾಯಿತು. ಇವುಗಳನ್ನು ಲಭ್ಯವಿರುವ ಭಾಷಾ ಮಾಹಿತಿಯ ಆಧಾರದ ಮೇಲೆ ಮತ್ತಷ್ಟು ವರ್ಗೀಕರಿಸಲಾಯಿತು. ಅಂತಿಮವಾಗಿ, 10,000 ಅಥವಾ ಅದಕ್ಕಿಂತ ಹೆಚ್ಚು ಭಾಷಿಕರು ಮಾತನಾಡುವ ಒಟ್ಟು ಮಾತೃಭಾಷೆಗಳ ಸಂಖ್ಯೆ 121 ಎಂದು ಗುರುತಿಸಿ ದಾಖಲಿಸಲಾಯಿತು.

ಈ ಭಾಷೆಗಳನ್ನು ಮೂರು ಭಾಗಗಳಲ್ಲಿ ವಿಂಗಡಿಸಲಾಗಿದೆ. ಮೊದಲನೆಯದು, ಭಾರತದ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ರಾಷ್ಟ್ರೀಯ ಅಧಿಕೃತ ಭಾಷೆಗಳೆಂದು ಗುರುತಿಸಿಸಲಾಗಿರುವ 22 ಭಾಷೆಗಳು. ಎರಡನೆಯದು, ಎಂಟನೇ ಪರಿಚ್ಛೇದದಲ್ಲಿ ಸೇರದ (ಸೇರಬಯಸುವ) 99 ಭಾಷೆಗಳು. ಮೂರನೆಯದು, 10,000ಕ್ಕಿಂತ ಕಡಿಮೆ ಜನ ಮಾತನಾಡುವ ಉಳಿದೆಲ್ಲ ಭಾಷೆಗಳನ್ನು ಇತರ ಭಾಷೆಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ.

ಇಂತಹ ವೈವಿಧ್ಯವಿರುವ ಭಾಷಾ ನಾಡಿನಲ್ಲಿ ಭಾಷಾ ನೀತಿ ಅಥವಾ ಭಾಷಾ ಸೂತ್ರವು ಹಿಂಬಾಗಿಲಿನ ಹೇರಿಕೆಯಾಗಬಾರದು. ಬದಲಿಗೆ ಎಲ್ಲಾ ರಾಜ್ಯಗಳ ಜೊತೆ ಪ್ರಜಾಸತ್ತಾತ್ಮಕವಾದ ಚರ್ಚೆಯ ಮೂಲಕ ಒಮ್ಮತ ಸಾಧಿಸುವ ಪಾರದರ್ಶಕ ಪ್ರಕ್ರಿಯೆಯಾಗಬೇಕು. ಈಗ ವಿವಾದಕ್ಕೆ ಒಳಗಾಗಿರುವ ತ್ರಿಭಾಷಾ ಸೂತ್ರವು ಕೊಠಾರಿ ಆಯೋಗ ಎಂದೂ ಕರೆಯಲಾಗುವ ಶಿಕ್ಷಣ ಆಯೋಗದ ಶಿಫಾರಸಿನ ಭಾಗವಾಗಿ ಹೊರಹೊಮ್ಮಿತು. 1968ರಲ್ಲಿ ಮೊದಲ ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ ಈ ಸೂತ್ರವನ್ನು ಔಪಚಾರಿಕವಾಗಿ ಶಿಕ್ಷಣದಲ್ಲಿ ಅಂಗೀಕರಿಸಿ ಜಾರಿಗೊಳಿಸಿತು.

ಈ ನೀತಿಯ ಅನ್ವಯ, ರಾಜ್ಯ ಸರ್ಕಾರಗಳು ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಂಡು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬೇಕಿತ್ತು. ಈ ಸೂತ್ರ, ಹಿಂದಿ ಮಾತನಾಡುವ ಉತ್ತರ ಭಾರತದ ರಾಜ್ಯಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ಆಧುನಿಕ ಭಾರತೀಯ ಭಾಷೆ, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದ ಭಾಷೆಗಳಲ್ಲಿ ಒಂದನ್ನು ಕಲಿಯುವುದು ಮತ್ತು ದಕ್ಷಿಣದ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆ ಮತ್ತು ಇಂಗ್ಲಿಷ್ ಜೊತೆಗೆ ಹಿಂದಿಯನ್ನು ಕಲಿಯಬೇಕೆಂಬ ಸೂತ್ರವನ್ನು ಹೊಂದಿತ್ತು. ಆದರೆ, ತ್ರಿಭಾಷಾ ಸೂತ್ರದ ಆಶಯವು ದೇಶದಾದ್ಯಂತ ಪ್ರಾಮಾಣಿಕವಾಗಿ ಅನುಷ್ಠಾನವಾಗಲಿಲ್ಲ.

ಸಿಬಿಎಸ್ಇ ಸಂಯೋಜಿತ ಕೇಂದ್ರೀಯ ವಿದ್ಯಾಲಯಗಳು ಮತ್ತು ದಕ್ಷಿಣ ಭಾರತದ ಕೆಲವು ರಾಜ್ಯ ಶಿಕ್ಷಣ ಮಂಡಳಿಗಳು ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದರೆ, ಇನ್ನುಳಿದ ರಾಜ್ಯಗಳು ಸ್ವಾಯತ್ತತೆಯನ್ನು ಚಲಾಯಿಸಿ ದ್ವಿಭಾಷಾ ಸೂತ್ರವನ್ನು ಅಳವಡಿಸಿಕೊಂಡಿವೆ. ಪ್ರಾರಂಭಿಕವಾಗಿ, ದಕ್ಷಿಣ ಭಾರತದ ಹಲವು ರಾಜ್ಯಗಳು ತ್ರಿಭಾಷಾ ಸೂತ್ರದ ಪ್ರಾಮಾಣಿಕ ಜಾರಿಗೆ ಪ್ರಯತ್ನಿಸಿದವಾದರೂ ಉತ್ತರ ಭಾರತದ ರಾಜ್ಯಗಳು ಈ ಸೂತ್ರವನ್ನು ಅಳವಡಿಸಿಕೊಳ್ಳಲು ದಯನೀಯವಾಗಿ ಸೋತವು. ಈ ಕಾರಣದಿಂದ ತ್ರಿಭಾಷಾ ಸೂತ್ರದ ಆಶಯಕ್ಕೆ ಭಂಗವಾಗಿದೆ. ನಿಜ ಹೇಳಬೇಕೆಂದರೆ, ಈ ಸೂತ್ರ ಇಂದು ಪೂರ್ಣವಾಗಿ ವಿಫಲವಾಗಿದೆ ಮತ್ತು ಕಾರ್ಯಸಾಧುವಲ್ಲ ಎಂಬುದು ಅನುಷ್ಠಾನದ ಅನುಭವದಿಂದ ಖಚಿತವಾಗಿದೆ. ಉದಾಹರಣೆಗೆ, ಉತ್ತರ ಭಾರತದ ಹಿಂದಿ ಮಾತನಾಡುವ ರಾಜ್ಯಗಳಲ್ಲಿ, ತ್ರಿಭಾಷಾ ಸೂತ್ರದ ಅನುಷ್ಠಾನವೆಂದರೆ ಹಿಂದಿ, ಇಂಗ್ಲಿಷ್ ಮತ್ತು ಸಂಸ್ಕೃತವನ್ನು ಅಧ್ಯಯನ ಮಾಡುವುದಾಗಿದೆ. ಖಂಡಿತ ಇದು ಆಧುನಿಕ ಭಾರತೀಯ ಭಾಷೆ ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದ ಭಾಷೆಯನ್ನು ಕಲಿಯುವ ಆಶಯವನ್ನು ಪೂರೈಸುವುದಿಲ್ಲ ಎಂಬುದು ವಾಸ್ತವಿಕ ಸತ್ಯ.

ತಮಿಳುನಾಡನ್ನು ಹೊರತುಪಡಿಸಿ, ದಕ್ಷಿಣದ ರಾಜ್ಯಗಳ ಶಿಕ್ಷಣ ಮಂಡಳಿಗಳು ಸಾಮಾನ್ಯವಾಗಿ ಈ ಸೂತ್ರವನ್ನು ಸಮಗ್ರವಾಗಿ ಜಾರಿಗೆ ತಂದಿವೆ. ಈ ರಾಜ್ಯಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರಾದೇಶಿಕ ಭಾಷೆ, ಇಂಗ್ಲಿಷ್ ಮತ್ತು ಹಿಂದಿಯನ್ನು ಕಲಿಯುತ್ತಾರೆ. ಆದರೆ, ಕೇಂದ್ರ ಸರ್ಕಾರದ ಆಡಳಿತ ವ್ಯಾಪ್ತಿಗೆ ಬರುವ ಬಹುತೇಕ ಸಿಬಿಎಸ್ಇ, ಐಸಿಎಸ್ಇ ಮತ್ತು ಐ.ಬಿ. ಶಾಲೆಗಳು ಈ ಸೂತ್ರವನ್ನು ಸಾರಾಸಗಟಾಗಿ ತಿರಸ್ಕರಿಸಿ ಪ್ರಾದೇಶಿಕ ಅಥವಾ ರಾಜ್ಯ ಭಾಷೆಗೆ ಅಪಚಾರ ಎಸಗಿವೆ.

ಹಿಂದಿ ಹೇರಿಕೆಯ ವಿರುದ್ಧ ತಮಿಳುನಾಡಿನ ಪ್ರತಿರೋಧವು ತ್ರಿಭಾಷಾ ಸೂತ್ರ ಜಾರಿಯಾಗುವ ಮೊದಲೇ ಪ್ರಾರಂಭವಾಗಿತ್ತು ಎಂಬುದು ಗಮನಿಸಬೇಕಾದ ಅಂಶ. ತಮಿಳುನಾಡಿನ 1937- 1940, 1960 ಮತ್ತು 1965ರ ಹಿಂದಿ ವಿರೋಧಿ ಆಂದೋಲನಗಳು ರಾಜ್ಯದ ರಾಜಕೀಯದಲ್ಲಿ ಮಹತ್ವದ ತಿರುವುಗಳಾಗಿದ್ದವು ಎಂಬುದು ಗಮನಾರ್ಹ ಸಂಗತಿ. ಹಿಂದಿಯನ್ನು ಏಕೈಕ ಅಧಿಕೃತ ಭಾಷೆಯಾಗಿ ಹೇರುವ ಪ್ರಯತ್ನದ ವಿರುದ್ಧ 1965ರ ಹಿಂಸಾತ್ಮಕ ಪ್ರತಿಭಟನೆಗಳು ಹಾಗೂ ಭಾಷಾಭಿಮಾನದ ಆತ್ಮಾಹುತಿಯು ಬರೀ ಭಾಷಾ ಹೇರಿಕೆಯ ಹೋರಾಟಗಳಾಗದೆ, ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ– ರಾಜ್ಯಗಳ ಸಂಬಂಧ ಮತ್ತು ರಾಜ್ಯ ಸ್ವಾಯತ್ತತೆಯ ಕಾಳಜಿಯ ಪ್ರಶ್ನೆಗಳಾಗಿ ಹುಟ್ಟಿಕೊಂಡವು ಎಂಬುದು ಮುಖ್ಯ. ಈ ಕಾರಣದಿಂದ ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳು ಪ್ರಬಲ ರಾಜಕೀಯ ಶಕ್ತಿಗಳಾಗಿ ಹೊರಹೊಮ್ಮಲು ಕಾರಣವಾಯಿತು ಎಂಬುದು ಮುಖ್ಯವಾದ ಸಂಗತಿ.

ದಕ್ಷಿಣ ಭಾರತದ ರಾಜ್ಯಗಳು, ಅದರಲ್ಲೂ ವಿಶೇಷವಾಗಿ ತಮಿಳುನಾಡು, ಕೇರಳ, ಕರ್ನಾಟಕ ಮತ್ತು ತೆಲಂಗಾಣವು ಹಿಂದಿ ಅಥವಾ ಸಂಸ್ಕೃತ ಭಾಷೆಯ ಹೇರಿಕೆಯನ್ನು ವಿರೋಧಿಸಲು ಬಲವಾದ ಕಾರಣಗಳಿವೆ. ಈ ಎಲ್ಲಾ ಭಾಷೆಗಳು ಅತ್ಯಂತ ಹಳೆಯ ಶಾಸ್ತ್ರೀಯ ಭಾಷೆಗಳಾಗಿವೆ. ಹಿಂದಿ ಹೇರಿಕೆಯು ಈ ಭಾಷೆಗಳ ಸ್ಥಾನಮಾನ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಕುಗ್ಗಿಸುತ್ತದೆ ಎಂಬ ಬಲವಾದ ಭಾವನೆ ಇದೆ. ಈ ಭಾವನೆಯನ್ನು ಪುಷ್ಟೀಕರಿಸುವ ರೀತಿಯಲ್ಲಿ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ. ಸಂವಿಧಾನದ ಎಲ್ಲಾ 22 ರಾಷ್ಟ್ರೀಯ ಭಾಷೆಗಳನ್ನು ಸಮಾನವಾಗಿ ಕಾಣುವ ಭಾಷಾ ಹಕ್ಕುಗಳ ಸಮಾನತೆಯ ತತ್ವ ಅಥವಾ ಕಾಳಜಿಗಳು ಕೇಂದ್ರ ಸರ್ಕಾರದ ಯಾವುದೇ ನೀತಿ, ನಿಯಮ, ಕಾನೂನು ಮತ್ತು ಆಡಳಿತದಲ್ಲಿ ಕಾಣುತ್ತಿಲ್ಲ. ಬದಲಿಗೆ, ಸಂಘರ್ಷ ಮತ್ತು ರಾಜಕೀಯ ಪ್ರತೀಕಾರದ ಮೂಲಕ ಅನುದಾನಗಳನ್ನು ತಡೆಹಿಡಿಯುವ ಅಥವಾ ಅಧಿಕಾರದ ಮೂಲಕ ಬೆದರಿಕೆ ಒಡ್ಡುವ ಪ್ರವೃತ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಈ ಕಾರಣಗಳಿಂದ, ತ್ರಿಭಾಷಾ ಸೂತ್ರವು ಉತ್ತರದ ಹಿಂದಿ ಭಾಷಿಕರಿಗೆ ಬರೀ ಎರಡು ಭಾಷೆಗಳನ್ನು (ಹಿಂದಿ ಮತ್ತು ಇಂಗ್ಲಿಷ್) ಕಲಿಯುವ ಅನುಕೂಲವನ್ನು ಕಲ್ಪಿಸಿದರೆ, ಹಿಂದಿಯೇತರ ಭಾಷಿಕರು ಮೂರು ಭಾಷೆಗಳನ್ನು ಕಲಿಯಬೇಕೆಂದು ನಿರ್ದೇಶಿಸುತ್ತದೆ. ಹೀಗಾಗಿ, ಹಿಂದಿ ಹೇರಿಕೆಯ ಹುನ್ನಾರವು ತ್ರಿಭಾಷಾ ಸೂತ್ರದ ಮೂಲ ಮಂತ್ರವಾಗಿದೆ. ಈ ಇಬ್ಬಗೆಯ ಸೂತ್ರ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಎನ್ನುವಂತಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ, ಸಂವಿಧಾನದ 42ನೇ ತಿದ್ದುಪಡಿಯ ಮೂಲಕ ಶಿಕ್ಷಣವನ್ನು ಸಮವರ್ತಿ ಪಟ್ಟಿಗೆ ಸೇರಿಸಲಾಗಿದೆ. ಇದರ ಅನ್ವಯ, ಶಿಕ್ಷಣದ ವಿಷಯದಲ್ಲಿ ರಾಜ್ಯ ಸರ್ಕಾರಗಳು ರಾಜ್ಯದ ಮಕ್ಕಳ ಹಿತಾಸಕ್ತಿಗೆ ಪೂರಕವಾದ ನೀತಿಗಳನ್ನು ಅನುಸರಿಸಲು ಸ್ವತಂತ್ರವಾಗಿವೆ. ಈ ಕಾರಣದಿಂದ ಭಾಷಾ ನೀತಿಯನ್ನು ರಾಜ್ಯ ವಿಷಯವೆಂದು ತಮಿಳುನಾಡು ಪರಿಗಣಿಸುತ್ತದೆ ಮತ್ತು ಭಾಷೆಯ ಮೇಲಿನ ಕೇಂದ್ರದ ನಿರ್ದೇಶನಗಳನ್ನು ತನ್ನ ಸಾಂವಿಧಾನಿಕ ಹಕ್ಕುಗಳ ಮೇಲಿನ ಅತಿಕ್ರಮಣ ಎಂದು ಭಾವಿಸುತ್ತದೆ. ಇದರ ಪರಿಣಾಮವಾಗಿ, ತಮಿಳುನಾಡು 1960ರ ದಶಕದಿಂದ ತನ್ನ ಶಾಲೆಗಳಲ್ಲಿ ದ್ವಿಭಾಷಾ ನೀತಿಯನ್ನು (ತಮಿಳು ಮತ್ತು ಇಂಗ್ಲಿಷ್) ಉಳಿಸಿಕೊಂಡಿದೆ.

ಕೊನೆಯದಾಗಿ, ಇದು ಬರೀ ತಮಿಳುನಾಡಿನ ಪ್ರಶ್ನೆಯಲ್ಲ. ಇತರ ರಾಜ್ಯಗಳು ಸಹ ಈ ವಿಷಯದಲ್ಲಿ ಕಳವಳ ವ್ಯಕ್ತಪಡಿಸಿವೆ. ಪಶ್ಚಿಮ ಬಂಗಾಳವು ಐತಿಹಾಸಿಕವಾಗಿ ಬಂಗಾಳಿ ಮತ್ತು ಇಂಗ್ಲಿಷ್ಗೆ ಒತ್ತು ನೀಡಿದೆ. ಕರ್ನಾಟಕವು ತ್ರಿಭಾಷಾ ಸೂತ್ರವನ್ನು ಜಾರಿಗೆ ತಂದಿದ್ದರೂ ಸಾಂದರ್ಭಿಕವಾಗಿ ಹಿಂದಿ ಹೇರಿಕೆಯ ಬಗ್ಗೆ ಪ್ರಬಲ ಪ್ರತಿರೋಧ ಒಡ್ಡುತ್ತಿದೆ. ಕೇರಳವು ಈ ಸೂತ್ರವನ್ನು ಜಾರಿಗೆ ತಂದಿದ್ದರೂ ಮಲಯಾಳಂ, ಇಂಗ್ಲಿಷ್ ಮತ್ತು ಹಿಂದಿ ನಡುವಿನ ಸಮತೋಲನದ ಬಗ್ಗೆ ಚರ್ಚಿಸುತ್ತಲೇ ಇದೆ. ಇನ್ನು ಈಶಾನ್ಯ ರಾಜ್ಯಗಳಾದ ಮಿಜೋರಾಂ, ನಾಗಾಲ್ಯಾಂಡ್ ಮತ್ತು ಮಣಿಪುರದಂತಹ ರಾಜ್ಯಗಳು ತಮ್ಮ ವಿಶಿಷ್ಟ ಭಾಷಾ ಸಂಪ್ರದಾಯಗಳನ್ನು ಕಡೆಗಣಿಸುತ್ತಿರುವ ಬಗ್ಗೆ ಪ್ರಾರಂಭದಿಂದಲೂ ಕಳವಳ ವ್ಯಕ್ತಪಡಿಸುತ್ತಲೇ ಇವೆ.

ಈ ಎಲ್ಲಾ ಕಾರಣಗಳಿಂದ, ಕೇಂದ್ರ ಸರ್ಕಾರ ತನ್ನ ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ರಾಜಕೀಯ ಕಾರ್ಯಸೂಚಿಯ ಭಾಗವಾಗಿ ಹಿಂದಿ ಮತ್ತು ಸಂಸ್ಕೃತ ಹೇರಿಕೆಯನ್ನು ಉತ್ತೇಜಿಸುವ ಕಾರ್ಯಸಾಧುವಲ್ಲದ ತ್ರಿಭಾಷಾ ಸೂತ್ರವನ್ನು ಕೈಬಿಟ್ಟು, ರಾಜ್ಯಗಳ ಸ್ವಾಯತ್ತತೆಯನ್ನು ಗೌರವಿಸಬೇಕಿದೆ. ಈ ಮೂಲಕ ದ್ವಿಭಾಷಾ ಅಥವಾ ಬಹುಭಾಷಾ ಸೂತ್ರದ ಮೂಲಕ ಭಾಷಾ ಹಕ್ಕುಗಳನ್ನು ವಿಕಸನಗೊಳಿಸುವ ಹೊಸ ಸೂತ್ರದತ್ತ ಯೋಚಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.