ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಬೋರ್ಡ್‌ ಪರೀಕ್ಷೆ ಮತ್ತು ಕಲಿಕೆ

ಫೇಲ್‌ ಆಗಿರುವುದು ನಮ್ಮ ಶಿಕ್ಷಣ ವ್ಯವಸ್ಥೆಯೇ ವಿನಾ ಮುಗ್ಧ ಮಕ್ಕಳಲ್ಲ!
Published 7 ಮಾರ್ಚ್ 2024, 23:46 IST
Last Updated 7 ಮಾರ್ಚ್ 2024, 23:46 IST
ಅಕ್ಷರ ಗಾತ್ರ

ಸೂರಿಲ್ಲದ ಕಟ್ಟಡ, ಕಟ್ಟಡ ಕುಸಿದು ವಿದ್ಯಾರ್ಥಿ ಸಾವು, ಶೂನ್ಯ ಶಿಕ್ಷಕರ ಶಾಲೆಗಳು ನೂರಾರು, ಮಕ್ಕಳಿಗೆ ಕೂರಲು ಕನಿಷ್ಠ ಮಣೆಯೂ ಇಲ್ಲ, ಹಲವು ಶಾಲೆಗಳಲ್ಲಿ ಕುಡಿಯುವ ನೀರಿಲ್ಲ, 1ರಿಂದ 5ನೇ ತರಗತಿಯವರೆಗೆ ಒಬ್ಬನೇ ಶಿಕ್ಷಕ, ಶಿಕ್ಷಕರಿಗೆ ಚುನಾವಣಾ ಕೆಲಸ: ಕಲಿಕೆಗೆ ಕೊಕ್‌!, ಕೆಪಿಎಸ್‌ ಶಾಲೆಯಲ್ಲಿ ಕಲಿಸಲು ಶಿಕ್ಷಕರೇ ಇಲ್ಲ, ಅನಧಿಕೃತ ಶಾಲೆಗಳ ಹಾವಳಿ, ಶುಲ್ಕ ಪಾವತಿಸದ ಖಾಸಗಿ ಶಾಲಾ ಮಕ್ಕಳಿಗೆ ಪರೀಕ್ಷೆಗೆ ಕೂರಲು ಅವಕಾಶ ನಿರಾಕರಣೆ, ಪರೀಕ್ಷೆಯಲ್ಲಿ ಫೇಲಾದ 8ನೇ ತರಗತಿಯ ಮಗು ನೇಣಿಗೆ ಶರಣು... ದಿನಪತ್ರಿಕೆಗಳಲ್ಲಿ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ನಾವು ಓದಿರುವಂತಹ ಮತ್ತು ವಸ್ತುಸ್ಥಿತಿಯನ್ನು ತೆರೆದಿಡುವ ಸುದ್ದಿಗಳ ತಲೆಬರಹದ ತುಣುಕುಗಳಿವು.

ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆ, ಕಾಲೇಜು ಗಳಲ್ಲಿ ಕಲಿಯುತ್ತಿರುವ 5, 8, 9 ಹಾಗೂ 11ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯನ್ನು ಬೋರ್ಡ್‌ ಮೂಲಕ ನಡೆಸಲು (ಪಬ್ಲಿಕ್‌ ಪರೀಕ್ಷೆ ಎಂದೇ ಜನಜನಿತ) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ಸಂಬಂಧಿಸಿದಂತೆ ನಡೆದಿರುವ ಬೆಳವಣಿಗೆಗಳು ಮತ್ತು ಪಬ್ಲಿಕ್‌ ಪರೀಕ್ಷೆ ನಡೆಸಲೇಬೇಕು ಎಂಬ ಸರ್ಕಾರದ ಮೊಂಡಾಟವನ್ನು ಈ ಸುದ್ದಿಗಳ ನೆಲೆಯಲ್ಲಿ ನಾವು ವಸ್ತು ನಿಷ್ಠವಾಗಿ ಮತ್ತು ಪ್ರಾಮಾಣಿಕವಾಗಿ ವಿಶ್ಲೇಷಿಸಬೇಕಿದೆ.

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವು ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸುವ ಸಂವಿಧಾನದ ಆಶಯವನ್ನು ಜಾರಿಗೊಳಿಸಲು ಶಿಕ್ಷಣ ಹಕ್ಕು ಮಸೂದೆಯನ್ನು 2009ರಲ್ಲಿ ರೂಪಿಸಿ, ಕಾಯ್ದೆ ಯನ್ನು 2010ರಲ್ಲಿ ಜಾರಿಗೊಳಿಸಿತು. ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದಾಗ ‘ಎಲ್ಲಾ ಮಕ್ಕಳಿಗೆ ಲಿಂಗ ಮತ್ತು ಸಾಮಾಜಿಕ ತಾರತಮ್ಯರಹಿತ ಶಿಕ್ಷಣವನ್ನು ಖಚಿತಪಡಿ ಸಲು ನಾವು ಬದ್ಧರಾಗಿದ್ದೇವೆ. ಮಕ್ಕಳು ಭಾರತದ ಜವಾಬ್ದಾರಿಯುತ ಮತ್ತು ಸಕ್ರಿಯ ನಾಗರಿಕರಾಗಲು ಅಗತ್ಯವಾದ ಕೌಶಲ, ಜ್ಞಾನ, ಮೌಲ್ಯಗಳು ಮತ್ತು ಮನೋಧರ್ಮವನ್ನು ಪಡೆದುಕೊಳ್ಳಲು ಶಿಕ್ಷಣ ಅನುವು ಮಾಡಿಕೊಡಬೇಕಿದೆ’ ಎಂದು ಹೇಳಿದ್ದರು. ಇದು, ಈ ಕಾಯ್ದೆಯ ಮಹತ್ವವನ್ನು ಸಾರುವಂತಹದು.

ಈ ಕಾಯ್ದೆಯಲ್ಲಿನ ಒಂದು ಮಹತ್ವದ ಅಂಶವೆಂದರೆ, ಶಾಲೆಗೆ ಪ್ರವೇಶ ಪಡೆದ ಯಾವುದೇ ಮಗುವನ್ನು ಎಲಿಮೆಂಟರಿ ಶಿಕ್ಷಣ ಮುಗಿಯುವವರೆಗೆ ಯಾವುದೇ ತರಗತಿಯಲ್ಲಿ ನಪಾಸು ಮಾಡುವುದು ಅಥವಾ ಪ್ರಾಥಮಿಕ ಶಿಕ್ಷಣವು ಪೂರ್ಣಗೊಳ್ಳುವವರೆಗೆ ಮಗುವನ್ನು ಶಾಲೆಯಿಂದ ಹೊರಹಾಕುವುದು ಕಾನೂನುಬದ್ಧ
ವಾಗಿ ನಿಷೇಧ. ಕಾರಣ, ಶಾಲೆಗೆ ಸೇರಿದ ಪ್ರತಿ ಮಗುವೂ ಕೊನೇಪಕ್ಷ ಎಂಟು ವರ್ಷಗಳು ಗುಣಮಟ್ಟದ ಶಾಲಾ ಶಿಕ್ಷಣ ಪಡೆಯಬೇಕು ಎಂಬುದು ಇದರ ಹಿಂದಿರುವ ಮಹದಾಶಯ. ಕಾಯ್ದೆಯಲ್ಲಿನ ಪ್ರತಿ ಮಹತ್ವದ ಅಂಶದ ಹಿಂದಿರುವ ಸಕಾರಣ ಮತ್ತು ತರ್ಕವನ್ನು ದಾಖಲೆಗಳಲ್ಲಿ ವಿವರಿಸಲಾಗಿದೆ. ಪಾಸು–ನಪಾಸಿನ ಬಗ್ಗೆ ಶಿಕ್ಷಕರಿಗೆ, ಶೈಕ್ಷಣಿಕ ಆಡಳಿತಗಾರರಿಗೆ ಮತ್ತು ಕಾರ್ಯಾಂಗದ ಪ್ರತಿನಿಧಿ ಗಳಿಗಿರುವ ತಪ್ಪುಕಲ್ಪನೆಯನ್ನು ತೊಡೆದುಹಾಕಲು ತಾತ್ವಿಕ ವಿವರಣೆಯನ್ನು ನೀಡಲಾಗಿದೆ.

ನಿರ್ದಿಷ್ಟ ಅಂಕಗಳನ್ನು ಪಡೆಯದ ಮಕ್ಕಳನ್ನು ‘ಫೇಲ್‌’ ಎಂದು ಘೋಷಿಸಿ, ಶೈಕ್ಷಣಿಕ ವ್ಯವಸ್ಥೆಯಿಂದ ಅವರನ್ನು ಹೊರದೂಡಲು ನಾವು ಪಬ್ಲಿಕ್‌ ಪರೀಕ್ಷೆಗಳನ್ನು ಆಯುಧವನ್ನಾಗಿ ಬಳಸುತ್ತಿದ್ದೇವೆ. ಪರೀಕ್ಷೆ
ಗಳನ್ನು ನಡೆಸಲು ನಾವು ತೋರುವ ಅಪರಿಮಿತ ಉತ್ಸಾಹ ಅಥವಾ ಕಟ್ಟುನಿಟ್ಟಿನ ಕ್ರಮಗಳನ್ನು ಕಲಿಸುವ ವಿಷಯದಲ್ಲಿ ಏಕೆ ತೋರುವುದಿಲ್ಲ ಎಂಬ ಪ್ರಶ್ನೆಗೆ ನಮ್ಮ ಪರಿಕ್ಷಾ ಕಲಿಗಳು ಉತ್ತರಿಸುವುದಿಲ್ಲ. ಕಾರಣ, ಪರೀಕ್ಷೆ ನಡೆಸುವುದು ಸುಲಭದ ಕೆಲಸ. ಕಲಿಸುವುದು, ಕಲಿಕೆಗೆ ಅಗತ್ಯ ಭೂಮಿಕೆ ಸಿದ್ಧಪಡಿಸುವುದು ಮತ್ತು ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸುವುದು ಅತ್ಯಂತ ಕಷ್ಟದ ಮತ್ತು ಸಂಪನ್ಮೂಲ ಬೇಡುವ ಕೆಲಸ.

ಒಂದು ನಿರ್ದಿಷ್ಟ ತರಗತಿಯಲ್ಲಿ ಮಕ್ಕಳು ಒಂದು ಪೂರ್ಣ ವರ್ಷ ಕಳೆದರೂ ಅವರು ಆಯಾ ತರಗತಿಯಲ್ಲಿ ಕಲಿಯಲೇಬೇಕಾದ ಕನಿಷ್ಠ ಕಲಿಕಾ ಮಟ್ಟವನ್ನು ಮುಟ್ಟಲು ಆಗದಿದ್ದರೆ ಅದಕ್ಕೆ ಹೊಣೆ ಯಾರು, ಸೋತಿದ್ದೆಲ್ಲಿ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಲ್ಲವೇ? ನಮ್ಮ ಶೈಕ್ಷಣಿಕ ವ್ಯವಸ್ಥೆ ಹಾಗೂ ಶಿಕ್ಷಕರು ಮತ್ತು ಹಲವು ಹಂತಗಳಲ್ಲಿ ಕಲಿಕೆಯನ್ನು ನಿರಂತರ ಉಸ್ತುವಾರಿ ಮಾಡುವ ಸಿಆರ್‌ಸಿ, ಬಿಆರ್‌ಸಿ, ಡಯಟ್‌, ಸಿಟಿಇ, ಡಿಎಸ್‌ಇಆರ್‌ಟಿಯಂತಹ ವುಗಳು ಇಂತಹ ಪ್ರಶ್ನೆಗಳಿಗೆ ಉತ್ತರಿಸಬೇಕಾದ ನೈತಿಕ ಜವಾಬ್ದಾರಿಯನ್ನು ಹೊಂದಿವೆಯಲ್ಲವೇ? ಜವಾಬ್ದಾರಿ ಯಿಂದ ಜಾರಿಕೊಂಡು, ಮಕ್ಕಳನ್ನು ಬಲಿಪಶುಗಳನ್ನಾಗಿಸಲು ಪರೀಕ್ಷೆ ಸುಲಭದ ಅಸ್ತ್ರವಾಗಿದೆ. ಇದು, ಮಕ್ಕಳ ಆಸಕ್ತಿ, ಉತ್ಸಾಹವನ್ನು ಕೊಂದು ಕಲಿಕೆಗೆ ಅವರನ್ನು ವಿಮುಖರನ್ನಾಗಿಸುವ ಸಾಧನದಂತಿದೆ.

ಮಕ್ಕಳು ಶಾಲೆಗೆ ಬರುವುದು ಕಲಿಯುವುದಕ್ಕೇ ವಿನಾ ನಪಾಸಾಗಲು ಅಲ್ಲ. ಒಂದು ವರ್ಷದ ನಂತರವೂ ಮಗು ಕಲಿಯಲಿಲ್ಲವೆಂದರೆ, ನಪಾಸಾಗಿದ್ದು ಮಗುವಲ್ಲ, ನಮ್ಮ ವ್ಯವಸ್ಥೆ, ಅದರ ಭಾಗವಾಗಿರುವ ನಾವು ಮತ್ತು ವ್ಯವಸ್ಥೆಯಲ್ಲಿನ ಕಟ್ಟಾಳುಗಳು ಎಂಬ ಸತ್ಯವನ್ನು ನಾವು ಅರಿಯಬೇಕಿದೆ. ಮಗುವನ್ನು ಒಮ್ಮೆ ನಾವು ‘ಫೇಲ್’ ಎಂದು ಘೋಷಿಸಿದರೆ, ಫೇಲ್‌ ಅಥವಾ ಪಾಸ್‌ ಎಂದರೆ ಏನೇನೂ ಅರ್ಥವಾಗದ ಚಿಕ್ಕ ವಯಸ್ಸಿನ ಮಗುವಿನ ಮನಸ್ಸಿನ ಮೇಲೆ ನಾವು ಮಾಡಬಹುದಾದ ಗಾಯದ ಬಗ್ಗೆ ಆಲೋಚಿಸಬೇಕಿದೆ. ‘ನೀನು ಕಲಿಯಲು ಅನರ್ಹ’ ಎಂಬ ಸಂದೇಶವನ್ನು ಮಗುವಿನ ಒಳಮನಸ್ಸಿಗೆ ಸದ್ದಿಲ್ಲದೆ ಮುಟ್ಟಿಸಿರುತ್ತೇವೆ. ಒಳಮನಸ್ಸಿನ ಮೇಲಾಗುವ– ಕಣ್ಣಿಗೆ ಕಾಣದ– ಈ ಗಾಯವು ಸೂಕ್ಷ್ಮಮತಿ ಮಕ್ಕಳು ಶಾಲೆಯನ್ನು ತೊರೆಯುವಂತೆ ಮಾಡುವ ಸಾಧ್ಯತೆ ಇದೆ. ಕಲಿಯಲು ಬಂದ ಮಕ್ಕಳನ್ನು ನಾವು ಅವೈಜ್ಞಾನಿಕ ವಿಧಾನದಿಂದ ‘ನೀವು ಸೋಲಿಗೆ ಯೋಗ್ಯರು’ ಎಂಬ ಹಣೆಪಟ್ಟಿ ಹಚ್ಚಿ ಹೊರಹಾಕುವ ವ್ಯವಸ್ಥೆಯನ್ನು ಶಿಕ್ಷಣ ವ್ಯವಸ್ಥೆ ಎಂದು ಕರೆಯಬೇಕೇ ಎಂಬುದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ.

ಶಿಕ್ಷಣ ಹಕ್ಕು ಕಾಯ್ದೆ ಪ್ರತಿಪಾದಿಸುವ ಫೇಲ್‌ ಇಲ್ಲದ ಕಲಿಕಾ ನೀತಿ ಮತ್ತು ಕಲಿಸುವ ವ್ಯವಸ್ಥೆಯ ಬಗ್ಗೆ ಯೋಚಿಸಬೇಕಿದೆ. ಅನುತ್ತೀರ್ಣಗೊಳಿಸಬಾರದು ಎಂದರೆ, ಕಲಿಸಬಾರದು ಎಂದು ಅರ್ಥವಲ್ಲ ಅಥವಾ ಮಕ್ಕಳ ಕಲಿಕೆಯನ್ನು ಅರಿತುಕೊಳ್ಳುವ ಅಥವಾ ನಿರ್ಣಯಿಸುವ ಕಾರ್ಯವಿಧಾನಗಳನ್ನು ತ್ಯಜಿಸಬೇ
ಕೆಂತಲೂ ಅಲ್ಲ. ಬದಲಿಗೆ, ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಬೋರ್ಡ್‌ ಅಥವಾ ಪಬ್ಲಿಕ್‌ ಪರೀಕ್ಷೆ
ಗಳನ್ನು ನಡೆಸುವ ಬದಲು ಕಲಿಕೆ ಹೇಗೆ ನಿತ್ಯ ನಿರಂತರವೋ ಅದೇ ರೀತಿಯಲ್ಲಿ ಮೌಲ್ಯಮಾಪನವೂ ನಿತ್ಯನಿರಂತರವಾಗಿರಬೇಕು ಎಂಬುದು ಆರ್‌ಟಿಇ ಕಾಯ್ದೆಯ ಆಶಯ. ಅದಕ್ಕಾಗಿಯೇ, ದೇಶದಲ್ಲಿ ಮೊದಲ ಬಾರಿಗೆ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನವನ್ನು (ಸಿಸಿಇ) ಒಂದು ಕಾನೂನುಬದ್ಧ ಅವಕಾಶವನ್ನಾಗಿ ಕಾಯ್ದೆಯಲ್ಲಿ ಕಲ್ಪಿಸಲಾಗಿದೆ.

ಶಿಕ್ಷಣ ಹಕ್ಕು ಕಾಯ್ದೆಯಲ್ಲಿನ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ವಿಧಾನವು ಆತಂಕ, ಭಯ ಮತ್ತು ಒತ್ತಡವಿಲ್ಲದ ವಾತಾವರಣದಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರೇ ಪ್ರೀತಿ– ವಿಶ್ವಾಸದಿಂದ ನಡೆಸುವ ಮೌಲ್ಯಮಾಪನವಾಗಿರುತ್ತದೆ. ಇದು, ಭಯ–ಬೆದರಿಕೆಮುಕ್ತ ಕಾರ್ಯವಿಧಾನವಾಗಿದೆ. ಮಗುವನ್ನು ಭಯ ಮತ್ತು ವೈಫಲ್ಯದ ಆಘಾತದಿಂದ ಬಿಡುಗಡೆ ಮಾಡುತ್ತದೆ. ಮಗುವಿನ ಕಲಿಕೆ ಮತ್ತು ಕಾರ್ಯಕ್ಷಮತೆಯ ಬಗ್ಗೆ ವೈಯಕ್ತಿಕ ಗಮನವನ್ನು ನೀಡಲು ಕಲಿಸಿದ ಶಿಕ್ಷಕರಿಗೆ ಅನುವು ಮಾಡಿಕೊಡುತ್ತದೆ. ಈ ವ್ಯವಸ್ಥೆಯು ಪಾಸು, ನಪಾಸು, ಶಿಕ್ಷೆ, ವೈಫಲ್ಯ, ಭಯ ಮತ್ತು ಯೋಗ್ಯರಲ್ಲ ಎಂಬ ಹಣೆಪಟ್ಟಿಯನ್ನು ಹಚ್ಚುವ ಬದಲು, ನಿರಂತರವಾಗಿ ಗುಣಮಟ್ಟವನ್ನು ಸುಧಾರಿಸುವ ಅತ್ಯುತ್ತಮ ವಿಧಾನವಾಗಿದೆ. ಹಾಗೊಮ್ಮೆ, ಮಗುವಿನ ಕಲಿಕೆಯಲ್ಲಿ ನಿಧಾನಗತಿ ಅಥವಾ ತೊಂದರೆಯಿದ್ದಲ್ಲಿ ಅದು ಯಾವುದೇ ಅಂತರ್ಗತ ನ್ಯೂನತೆ ಯಿಂದಾಗಿ ಅಲ್ಲ. ಬದಲಿಗೆ, ಅಸಮರ್ಪಕ ಕಲಿಕಾ ಪರಿಸರ, ಕನಿಷ್ಠ ಸೌಕರ್ಯಗಳಾದ ಶಿಕ್ಷಕರು, ಪಾಠೋಪಕರಣ ಮತ್ತು ಕಲಿಕೆಗೆ ಪೂರಕವಾದ ಮೂಲ ಸೌಕರ್ಯಗಳ ಕೊರತೆಯಿಂದ ಎಂಬುದನ್ನು ಅರಿಯಬೇಕಿದೆ.  

ಈಗ ಹೇಳಿ, ನಾವು ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿ, ನಿರಂತರ ಕಲಿಸುವ ವೃತ್ತಿ ನೈಪುಣ್ಯವುಳ್ಳ ಶಿಕ್ಷಕರನ್ನು ಒದಗಿಸಿ, ಕಲಿಯುವ ಮಕ್ಕಳ ಕಲಿಕೆಯ ಮಟ್ಟವನ್ನು ನಿರಂತರ ಮೌಲ್ಯಮಾಪನದ ಮೂಲಕ ತಿಳಿದು ಮಕ್ಕಳು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ಕಲಿಯಲು ನಿರಂತರವಾಗಿ ಕೈಹಿಡಿದು ನಡೆಸಬಹುದಾದ ಮಕ್ಕಳಸ್ನೇಹಿ ಶಿಕ್ಷಣ ವ್ಯವಸ್ಥೆ ಯನ್ನು ಕಟ್ಟಿಕೊಳ್ಳಬೇಕೋ ಅಥವಾ ಮಕ್ಕಳನ್ನು ಆತಂಕ, ಭಯ ಮತ್ತು ಕೆಲವೊಮ್ಮೆ ಸಾವಿಗೆ ದೂಡುವ ಬೋರ್ಡ್‌ ಅಥವಾ ಪಬ್ಲಿಕ್‌ ಪರೀಕ್ಷೆ ಆಧಾರಿತ ಕಂಠಪಾಠದ ಮೂಲಕ ಮಕ್ಕಳ ಸೃಜನಶಕ್ತಿಯನ್ನೇ ಹೊಸಕಿಹಾಕುವ ಪರೀಕ್ಷೆ ಆಧಾರಿತ ಶಿಕ್ಷಣ ವ್ಯವಸ್ಥೆ ಬೇಕೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT