- ಚಂದ್ರಕಾಂತ ವಡ್ಡು
ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಅವರು ಸರಿಯಾಗಿಯೇ ವ್ಯಾಖ್ಯಾನಿಸಿದಂತೆ ಬಿಜೆಪಿಯವರು ‘ಎರವಲು ಸೇವೆ’ ಮೇಲೆ ನೇಮಿಸಿಕೊಂಡಿರುವ ‘ವಿಪಕ್ಷ ನಾಯಕ’ ಎಚ್.ಡಿ.ಕುಮಾರಸ್ವಾಮಿ, ಸರ್ಕಾರದ ಮೇಲೆ ಭ್ರಷ್ಟಾಚಾರದ ಮುಂಗಾರು ಮಳೆಯನ್ನೇ ಸುರಿಸುತ್ತಿದ್ದಾರೆ. ಕತ್ತಿಗಿಂತ ಪೆನ್ನು ಹೆಚ್ಚು ಶಕ್ತಿಯುತ ಎಂಬ ಇಂಗ್ಲಿಷ್ ಗಾದೆಯನ್ನು ಪೆನ್ನಿಗಿಂತ ಪೆನ್‌ಡ್ರೈವು ಹೆಚ್ಚು ಬಲಶಾಲಿ ಎಂದು ಬದಲಿಸುವಷ್ಟು ಸಂಚಲನ ಮೂಡಿಸಿದ್ದಾರೆ.
ಎರಡು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿರುವ ಕುಮಾರಸ್ವಾಮಿ ಅವರಿಗೆ, ಸಾಕ್ಷ್ಯ ಮುಚ್ಚಿಡುವುದು ಶಿಕ್ಷಾರ್ಹ ಅಪರಾಧ ಎಂಬುದು ತಿಳಿಯದ ಸಂಗತಿಯೇನಲ್ಲ. ಆದರೆ ಬಿಡುಗಡೆ ಮಾಡಿದ ಪೆನ್‌ಡ್ರೈವ್‌ಗಿಂತ ಜೇಬಿನಲ್ಲಿ ಇರಿಸಿಕೊಂಡಿದ್ದಕ್ಕೇ ಹೆಚ್ಚು ರಾಜಕೀಯ ಮೌಲ್ಯ ಎಂಬ ತಂತ್ರಗಾರಿಕೆಯಲ್ಲಿ ಅವರಿಗೆ ಹೆಚ್ಚು ನಂಬಿಕೆ ಇದ್ದಂತಿದೆ.
ಬಿಜೆಪಿ ನಾಯಕರ, ಶಾಸಕರ ಕೋರಸ್ ಜೊತೆಗೆ ಸರ್ಕಾರದ ಮೇಲೆ ಆಕ್ರಮಣಶೀಲ ನಡೆ ಪ್ರದರ್ಶಿಸುತ್ತಿರುವ ಕುಮಾರಸ್ವಾಮಿ ಅವರು ಕೃಷಿ ಇಲಾಖೆಯ ಅಧಿಕಾರಿಗಳ ವರ್ಗಾವಣೆ ಮತ್ತು ವಿವಿಧ ಯೋಜನೆಗಳಿಗೆ ನಿಗದಿಪಡಿಸಿದ ಕಮಿಷನ್ ಪಟ್ಟಿಯನ್ನು ಸದನದಲ್ಲಿ ಪ್ರದರ್ಶಿಸಿದ್ದಾರೆ. ಎರಡು ಪುಟಗಳ ದರಪಟ್ಟಿಯನ್ನು ಸ್ಪೀಕರ್ ಅವರಿಗೆ ಸಲ್ಲಿಸುವ ಮೂಲಕ ಭ್ರಷ್ಟಾಚಾರ ಆರೋಪವನ್ನು ಮತ್ತೊಂದು ಎತ್ತರಕ್ಕೆ ಆರೋಹಣ ಮಾಡಿಸಿದ್ದಾರೆ ಎನ್ನಬಹುದು. ಕೃಷಿ ಇಲಾಖೆಯೊಂದರಲ್ಲೇ ₹ 111.78 ಕೋಟಿ ಕಮಿಷನ್ ಸಂಗ್ರಹಿಸುವ ಗುರಿ ಬಗೆಗಿನ ಗಂಭೀರ ಆರೋಪವನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ.
ಇದೀಗ, ಸಿದ್ದರಾಮಯ್ಯನವರು, ‘ನನ್ನ ರಾಜಕೀಯ ಜೀವನದಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದಕ್ಕೆ ಒಂದೇ ಒಂದು ಬಾರಿಯೂ ಲಂಚ ತೆಗೆದುಕೊಂಡಿಲ್ಲ. ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ’ ಎಂದು ತಮ್ಮದೇ ಆದ ಶೈಲಿಯಲ್ಲಿ ಸವಾಲು ಎಸೆದಿದ್ದಾರೆ. ‘ಒಂದು ವೇಳೆ ಯಾರಾದರೂ ನನ್ನ ಗಮನಕ್ಕೆ ಬಾರದೆ ಆ ರೀತಿ ಮಾಡಿದ್ದರೆ ಅದು ನನಗೆ ಗೊತ್ತಿಲ್ಲ. ಭ್ರಷ್ಟಾಚಾರವೇ ಇಲ್ಲ ಎನ್ನುವುದಿಲ್ಲ…’ ಎಂಬ ಅವರ ಧಾಟಿಯಲ್ಲಿ ತಮ್ಮ ಸಹೋದ್ಯೋಗಿ ಸಚಿವರ ಕುರಿತಂತೆ ಎಚ್ಚರಿಕೆಯ ನಡೆ ಸ್ಪಷ್ಟವಾಗಿದೆ.
ಕುಮಾರಸ್ವಾಮಿ ಅವರ ಮಾಯಾವಿ ಪೆನ್‌ಡ್ರೈವ್, ಜೇಬಿನಲ್ಲಿ ಕುಳಿತೇ ಸದ್ದು ಮಾಡಿದಾಗ ಸಿದ್ದರಾಮಯ್ಯನವರು ಕೆಲವು ಸಚಿವರೊಂದಿಗೆ ಚರ್ಚಿಸಿ ಹುಷಾರಾಗಿರಲು ಸೂಚಿಸಿದ್ದರು ಕೂಡ. ಕುಮಾರಸ್ವಾಮಿ ಅವರು ಸಾಚಾತನದಲ್ಲಿ ತಾವೇನೂ ಕಡಿಮೆಯಿಲ್ಲ ಎಂಬಂತೆ, ‘ಮೈತ್ರಿ ಸರ್ಕಾರದ 14 ತಿಂಗಳ ಅವಧಿಯಲ್ಲಿ ವರ್ಗಾವಣೆಗೆ ಹಣ ಪಡೆದ ಒಂದು ಪ್ರಕರಣ ತೋರಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಘೋಷಿಸಿದ್ದಾರೆ.
ಆದರೆ, ಇಂತಹ ರಾಜಕೀಯ ನಿವೃತ್ತಿಯ ಸವಾಲುಗಳು, ಘೋಷಣೆಗಳಿಗೆ ಸಾಂದರ್ಭಿಕ ಪ್ರತಿಕ್ರಿಯೆಗೆ ಹೊರತಾದ ಯಾವುದೇ ಮಹತ್ವ ಇರುವುದಿಲ್ಲ. ಈ ಬಗೆಯ ಹೇಳಿಕೆಗಳಲ್ಲಿ ಒಂದೇ ಒಂದು ಪಾಲನೆಯಾದ ಕುರುಹು ರಾಜಕೀಯ ಇತಿಹಾಸದಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ.
ಭ್ರಷ್ಟಾಚಾರದ ಯಾವುದೇ ಆರೋಪಗಳು ಹೊರಹೊಮ್ಮಿದಾಗ ತಕ್ಷಣ ಮತ್ತೊಂದು ಬದಿಯಿಂದ ಚಿಮ್ಮುವ ಪ್ರಶ್ನೆ: ‘ದಾಖಲೆ ಇದೆಯಾ?’ ಇದಕ್ಕೆ ಈ ಕಡೆಯ ಉತ್ತರವೂ ಸಿದ್ಧವಿರುತ್ತದೆ: ‘ನೀವು ಆರೋಪ ಮಾಡಿದಾಗ ಸಾಕ್ಷ್ಯ ಕೊಟ್ಟಿದ್ದಿರಾ?’ ಬಹುಪಾಲು ಭ್ರಷ್ಟಾಚಾರಗಳು ಆಚರಣೆಗೆ ಬರುವುದು ಕೊಡುವ ಮತ್ತು ಪಡೆಯುವ ಎರಡೂ ಕಡೆಯವರ ಒಡಂಬಡಿಕೆಯಿಂದ ಎಂಬ ವಸ್ತುಸ್ಥಿತಿ ಎಲ್ಲರಿಗೂ ಗೊತ್ತಿರುವುದೇ. ಆದಾಗ್ಯೂ ಇಂತಹ ಹೇಳಿಕೆ, ಪ್ರತಿಹೇಳಿಕೆಗಳನ್ನು ಸಹಿಸಿಕೊಳ್ಳಬೇಕಾದ ದುಃಸ್ಥಿತಿ ಜನತೆಯದು!
ಸಿದ್ದರಾಮಯ್ಯ, ಯಡಿಯೂರಪ್ಪ, ದೇವೇಗೌಡ ಅವರಂತಹ ರಾಜಕಾರಣಿಗಳ ಹಿನ್ನೆಲೆಯನ್ನು ಗಮನಿಸಿದರೆ, ಇವರೆಲ್ಲಾ ರಾಜಕಾರಣಕ್ಕೆ ‘ವ್ಯಾಪಾರ’ ಮಾಡಲೆಂದೇ ಬಂದವರೆಂದು ಖಂಡಿತವಾಗಿ ಅನ್ನಿಸುವುದಿಲ್ಲ. ಆದರೆ ರಾಜಕಾರಣದ ದೈನಂದಿನ ಹಾಗೂ ದೀರ್ಘಕಾಲೀನ ಬೇಡಿಕೆಗಳನ್ನು ಪರಿಗಣಿಸಿ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳುವ ಅನಿವಾರ್ಯಕ್ಕೆ ಅನೇಕರು ‘ತುತ್ತು’ ಆಗಬೇಕಾಗಿರುವುದು ವ್ಯವಸ್ಥೆಯ ದಾರುಣ ವ್ಯಂಗ್ಯ. ಲಾಭ ಗಳಿಕೆಗಾಗಿಯೇ ರಾಜಕಾರಣದಲ್ಲಿ ಹೂಡಿಕೆ ಮಾಡುವ ಕ್ಯಾಪಿಟೇಷನ್ ಕುಳಗಳು, ಗಣಿ ಮಾಲೀಕರು, ರಿಯಲ್ ಎಸ್ಟೇಟ್ ಕೂಟ, ಉದ್ಯಮಪತಿಗಳಿಂದ ಕೊಳ್ಳೆ ಹೊರತಾಗಿ ಬೇರೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಪ್ರಾಮಾಣಿಕವಾಗಿ ಸಮಾಜಕ್ಕೆ ಒಂದಿಷ್ಟು ಕೊಡುಗೆ ಕೊಡಲೆಂದು ರಾಜಕೀಯ ಪ್ರವೇಶಿಸುವವರಿಗೆ ಉಳಿಗಾಲವೇ ಇಲ್ಲವೆಂಬ ಪರಿಸ್ಥಿತಿಯನ್ನು ಆಮೂಲಾಗ್ರವಾಗಿ ಅವಲೋಕಿಸುವುದು ಬಹಳ ಮುಖ್ಯ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಎಂಬ ಸ್ವತಂತ್ರ ಸಂಸ್ಥೆಯ ಅಧ್ಯಯನ ವರದಿಯ ಪ್ರಕಾರ, ಈ ಬಾರಿ ವಿಧಾನಸಭೆಗೆ ಚುನಾಯಿತರಾದ ಶಾಸಕರ ಸರಾಸರಿ ಆಸ್ತಿ ಮೊತ್ತ ₹ 64.39 ಕೋಟಿ. ಇವರಲ್ಲಿ ಶೇಕಡ 97ರಷ್ಟು ಶಾಸಕರು ಕೋಟ್ಯಧಿಪತಿಗಳು, ₹ 5 ಕೋಟಿಗಿಂತ ಹೆಚ್ಚು ಆಸ್ತಿ ಇರುವವರ ಪ್ರಮಾಣ ಶೇಕಡ 81. ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಅಂತಸ್ತಿನ ಪ್ರಮಾಣ ಹೀಗಿದೆ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಸರಾಸರಿ ಆಸ್ತಿ ಮೌಲ್ಯ ₹ 67.13 ಕೋಟಿಯಾದರೆ, ಬಿಜೆಪಿ ಅಭ್ಯರ್ಥಿಗಳು ₹ 44.36 ಕೋಟಿ ಹಾಗೂ ಜೆಡಿಎಸ್ ₹ 46.01 ಕೋಟಿ ಸರಾಸರಿ ಸಂಪತ್ತು ಹೊಂದಿದ್ದಾರೆ.
ಭ್ರಷ್ಟಾಚಾರವನ್ನು ಒಂದೇ ಘಟಕವಾಗಿ ಪರಿಗಣಿಸುವುದರಲ್ಲೇ ಎಡವಟ್ಟಾಗುತ್ತಿದೆ. ಸ್ಥೂಲವಾಗಿ ವಿಂಗಡಿಸಿದಾಗ ರಾಜಕಾರಣಿಗಳ ಮಾದರಿಯ ಭ್ರಷ್ಟಾಚಾರ ಮತ್ತು ಆಡಳಿತಶಾಹಿ ಲಂಚಾವತಾರ ಪ್ರತ್ಯೇಕವಾಗಿ ಕಾಣಿಸುತ್ತವೆ. ಇಲ್ಲಿಯೂ ನೇಮಕಾತಿ, ವರ್ಗಾವಣೆ, ವಿವಿಧ ಗುತ್ತಿಗೆ, ಇಲಾಖಾ ಖರೀದಿಯಂತಹ ಕಾರ್ಯಗಳಲ್ಲಿ ತಮ್ಮ ಸ್ವಾರ್ಥ ಸಾಧನೆಗಾಗಿ ಸ್ವತಃ ಮುಂದೊಡ್ಡುವ ಲಂಚಗುಳಿತನ ಒಂದು ಬಗೆಯದಾದರೆ, ಸಹಜವಾಗಿ ಆಗಬೇಕಾದ ಕೆಲಸಕಾರ್ಯಗಳಿಗೆ ತಡೆಯೊಡ್ಡಿ ಲಂಚ ಉತ್ಪಾದಿಸುವುದು ಇನ್ನೊಂದು ರೀತಿಯದು.
ಮೊದಲ ನಮೂನೆಯ ಭ್ರಷ್ಟಾಚಾರವು ಪರಸ್ಪರ ಹೊಂದಾಣಿಕೆಯ ಸ್ವರೂಪ ಹೊಂದಿರುವುದರಿಂದ ಬಹಿರಂಗವಾಗುವ ಸಂಭವ ಕಡಿಮೆ. ಅದರ ಪತ್ತೆಹಚ್ಚುವಿಕೆ, ನಿಯಂತ್ರಣ ಕ್ರಮ ಸುಲಭಸಾಧ್ಯವಲ್ಲ. ಈಗ ಆಡಳಿತ ಮತ್ತು ವಿರೋಧಪಕ್ಷಗಳ ನಡುವೆ ವಾಗ್ವಾದಕ್ಕೆ ಈಡಾಗಿರುವ ಭ್ರಷ್ಟಾಚಾರ ಈ ಬಗೆಯದು. ಇನ್ನು, ಸಂಕಷ್ಟ, ಸಂದರ್ಭ, ಅಸಹಾಯಕತೆ ಬಳಸಿಕೊಂಡು ಹಣ ಕೀಳುವ ಎರಡನೇ ಮಾದರಿಯ ಭ್ರಷ್ಟಾಚಾರದಲ್ಲಿ ನೊಂದವರು ಪ್ರತಿಭಟಿಸಲು, ಸಾಕ್ಷ್ಯ ಒದಗಿಸಲು ಮುಂದಾಗುತ್ತಾರೆ. ಆದರೆ ಅಂತಹವರಿಗೆ ನಿಯಂತ್ರಣ ವ್ಯವಸ್ಥೆ ಮೇಲೆ ಭರವಸೆ ಹುಟ್ಟಿಸುವ ವಾತಾವರಣ ಸೃಷ್ಟಿಯಾಗಬೇಕಾಗುತ್ತದೆ.
ಸರ್ಕಾರದ ವಿವಿಧ ಹಂತಗಳಲ್ಲಿ ಹಾಸುಹೊಕ್ಕಾಗಿರುವ ಭ್ರಷ್ಟಾಚಾರದ ರೂಪಗಳನ್ನು, ಆಯಾಮಗಳನ್ನು, ವೈವಿಧ್ಯವನ್ನು ಬಹುಶಿಸ್ತೀಯ ಅಧ್ಯಯನಕ್ಕೆ ಒಳಪಡಿಸುವ ಜರೂರತ್ತು ಇದೆ. ಆಡಳಿತ ವ್ಯವಸ್ಥೆಯ ಪ್ರತಿಯೊಂದು ಇಲಾಖೆಯೂ ತನ್ನದೇ ಆದ ಭ್ರಷ್ಟಾಚಾರದ ವಿಶಿಷ್ಟ ಶೈಲಿಯನ್ನು ಹೊಂದಿರುವುದರಿಂದ ಇಲಾಖಾವಾರು ಅಧ್ಯಯನ ಆಗಬೇಕಾಗುತ್ತದೆ. ಇದಕ್ಕಾಗಿ ವಿವಿಧ ಕ್ಷೇತ್ರಗಳ ಪರಿಣತರನ್ನು ಒಳಗೊಂಡ ಒಂದು ಶಾಸನಬದ್ಧ ಶಾಶ್ವತ ಸ್ವತಂತ್ರ ‘ಭ್ರಷ್ಟಾಚಾರ ಅಧ್ಯಯನ ಆಯೋಗ’ ರಚನೆಯಾಗಲಿ.
ಆಯೋಗದಿಂದ ಕಾಲಕಾಲಕ್ಕೆ ಲಭ್ಯವಾಗುವ ವರದಿಯನ್ನು, ದತ್ತಾಂಶವನ್ನು, ಸತ್ಯಾಂಶವನ್ನು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿದಾಗ ಪರಿಹಾರದ ಹಾದಿ ತೆರೆದುಕೊಳ್ಳಲು ಸಾಧ್ಯ. ಈವರೆಗೆ ಇಂತಹ ಒಂದು ಅತ್ಯಗತ್ಯ ಪ್ರಯತ್ನ ಸರ್ಕಾರದಿಂದಾಗಲೀ ಸ್ವತಂತ್ರ ಸಂಸ್ಥೆಗಳಿಂದಾಗಲೀ ವ್ಯವಸ್ಥಿತವಾಗಿ, ಸಮಗ್ರವಾಗಿ ನಡೆದ ಬಗ್ಗೆ ಮಾಹಿತಿ ಇಲ್ಲ. ಹೀಗೆ ತಳಪಾಯಿ ಕ್ರಮಕ್ಕೆ ಮುಂದಾಗದೆ ಶಾಸನಸಭೆಯಲ್ಲಿ ಗಂಟೆಗಟ್ಟಲೆ ಕಾಲಹರಣ ಮಾಡಿದರೆ ಪ್ರಯೋಜನವೇನು?
ಎಂದಿಗೂ ಯಾವ ತಾರ್ಕಿಕ ತುದಿಯನ್ನೂ ತಲುಪದ ‘ಶುದ್ಧ ರಾಜಕೀಯ’ ಗದ್ದಲಗಳ ನಡುವೆ ಕೃಷ್ಣ ಬೈರೇಗೌಡ, ಸತೀಶ್ ಜಾರಕಿಹೊಳಿ ಅವರಂತಹ ಒಂದಿಬ್ಬರು ಸಚಿವರು ತಮ್ಮ ಇಲಾಖೆಯಲ್ಲಿ ಸದ್ದಿಲ್ಲದೇ ಅಳವಡಿಸಿಕೊಳ್ಳಲು ಯತ್ನಿಸುತ್ತಿರುವ ಸುಧಾರಣೆ ಕ್ರಮಗಳು ಮರೆಯಾಗದಿರಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.